Tuesday, January 26, 2010

ಬಂಧನವದೇನಲ್ಲ ಜೀವ ಜೀವ ಪ್ರೇಮ

ಬಂಧನವದೇನಲ್ಲ ಜೀವ ಜೀವ ಪ್ರೇಮ
ಒಂದೆ ನಿಲೆ ಜೀವವರೆ ಬೆರೆತರಲೆ ಪೂರ್ಣ
ದುಂದುಗವನ್ ಅರೆಗಯ್ದು ಸಂತಸವನಿಮ್ಮಡಿಪ
ಬಾಂಧವ್ಯ ದೈವಕೃಪೆ - ಮಂಕುತಿಮ್ಮ

ಮೊನ್ನೆ ನನ್ನ ಮದುವೆಯ ನಿಶ್ಚಿತಾರ್ಥದ ಮರುದಿನ ನನ್ನ ಸಹೋದ್ಯೋಗಿಯೊಬ್ಬರು ಮುಗುಳ್ನಗುತ್ತ ’ಅವರ್ ಡೀಪೆಸ್ಟ್ ಸಿಂಪಥಿಸ್ ಟು ಯು ಎಂದಾಗ ಒಂದರೆಕ್ಷಣ ತಬ್ಬಿಬ್ಬಾದರೂ ಸಾವರಿಸಿಕೊಂಡು ಅದರ ಹಿಂದಿರುವ ಧ್ವನಿಯನ್ನು ಅರ್ಥೈಸಿಕೊಂಡೆ. ಅವಿವಾಹಿತನಾದ ವ್ಯಕ್ತಿಯೊಬ್ಬನ ಮದುವೆ ನಿಶ್ಚಯವಾದಾಗ ನಾವು ಬಿದ್ದಿರುವ ಹಳ್ಳಕ್ಕೆ ಇವನು ಬೀಳುತ್ತಿದ್ದಾನಲ್ಲ ಎಂದು ಇತರ ವಿವಾಹಿತರು ಂಂvಇಂಂ?ಂ\ಡುವುದೂ ಸ್ವಾಭಾವಿಕ. ಬ್ರಹ್ಮಚಾರಿಯ ಸ್ವೇಚ್ಛಾಚಾರರೂಪೀ ಸ್ವಾತಂತ್ರ್ಯಕ್ಕೆ ಇದರಿಂದ ಕಡಿವಾಣ ಬೀಳುವುದರಿಂದ ’ಮದುವೆ’ ಎಂಬ ಮೂರಕ್ಷರದ ಪದದ ಜೊತೆಗೆ ’ಬಂಧನ’ ಎಂಬ ಇನ್ನೂ ಮೂರಕ್ಷರ ಸೇರಿಕೊಂಡಿದೆ

ವ್ಯಕ್ತಿಯೊಬ್ಬ ಅಣ್ಣ-ತಮ್ಮ-ತಂಗಿ-ತಂದೆ-ತಾಯಿ ಮೊದಲಾದ ಅನೇಕ ವಿಧವಾದ ಬಾಂಧವ್ಯದಿಂದ ಇತರ ವ್ಯಕ್ತಿಗಳೊಂದಿಗೂ, ಕುಟುಂಬ ಗಳೊಂದಿಗೂ ಬೆಸೆದುಕೊಂಡಿದ್ದರೂ, ಹೊಸ ಸಂಬಂಧವನ್ನು ಏರ್ಪಡಿಸುವ ’ಮದುವೆ’ ಎಂಬ ಪ್ರಕ್ರಿಯೆ ತುಂಬಾ ವಿಶಿಷ್ಟವಾದದ್ದು . ಒಮ್ಮೆಲೆ ತನ್ನ ಬಾಂಧವರ ಸಂಖ್ಯೆಯನ್ನು ಕನಿಷ್ಠ ೫೦% ನಷ್ಟು ಹೆಚ್ಚಿಸುವ ವಿವಾಹ ಎಂಬ ಬೆಸುಗೆ ಮಾನವ ಜೀವನದ ಒಂದು ವೈಶಿಷ್ಟ್ಯಪೂರ್ಣ ಹಂತ. ಸಾಮಾಜಿಕವಾದ ಒಂದು ಸ್ಥಾನ, ಜೈವಿಕವಾದ ಬಯಕೆಯ ತೃಪ್ತಿಗಾಗಿ ವಿವಾಹವೆನ್ನುವುದು ಬೇಕೇ ಬೇಕು ಎಂದು ಹಲವರು ಅಭಿಪ್ರಾಯಪಡುತ್ತಾರೆ. ಪ್ರಖ್ಯಾತ ಹನಿಗವನಕಾರ ಢುಂಢಿರಾಜ್ ಹೇಳಿದಂತೆ ’ಯೌವನದ ಹುಚ್ಚು ಹೊಳೆಯಾಗಿ ಹರಿಯದಂತೆ ಹಿರಿಯರು ಕಟ್ಟುವ ಬದುವೆ ಈ ಮದುವೆ’. ಸತ್ಸಂತಾನವೊಂದನ್ನು ಪಡೆದಾಗಲೇ ವಂಶಕ್ಕೆ ಕೀರ್ತಿ ಎಂಬ ಭಾವನೆಯಿಂದ ’ಪ್ರಜಾತಂತುಂ ಮಾ ವ್ಯವಚ್ಛೇತ್ಸೀ’ ಎಂಬುದಾಗಿ ವೇದಗಳೇ ಸಾರಿವೆ. ವಿದ್ಯಾಭ್ಯಾಸ ಮುಗಿಸಿ ಸ್ನಾತಕನಾದ ವ್ಯಕ್ತಿಯ ದೀಕ್ಷಾಂತ ಸಮಾರಂಭದಲ್ಲಿ ಸಂಸಾರಿಯಾಗಿ ವಂಶವನ್ನು ಮುಂದುವರಿಸು ಎಂಬ ಉಪದೇಶವೂ ಸೇರಿದೆ. ’ಮಾನುಷ ಸಖನ ಕೋರುವುದು ಬಡಜೀವ’ ಎಂಬಂತೆ ಸುಖದುಃಖಗಳನ್ನು ಹಂಚಿಕೊಳ್ಳಲೂ ಸಂಗಾತಿಯ ಅವಶ್ಯಕತೆಯಿದ್ದೇ ಇರುತ್ತದೆ. ಹಾಗಾಗಿಯೇ ಇದೊಂದು ಬಂಧನವೆನ್ನುವುದು ಗೊತ್ತಿದ್ದರೂ ಹೆಚ್ಚಿನವರು ಅದಕ್ಕೆ ತಮ್ಮ ಕೊರಳನ್ನೊಡ್ಡುವುದು. ಸಂಸಾರವೆನ್ನುವುದು ಮೋಕ್ಷಕ್ಕೆ ಪ್ರತಿಬಂಧಕ ಎಂಬುದನ್ನೂ ನಮ್ಮ ಆಧ್ಯಾತ್ಮ ಹೇಳುತ್ತದೆ. ದುಃಖಕ್ಕೆ ಮೂಲವಾದ ರಾಗ ಹುಟ್ಟುವುದು ನಾವು ಇತರ ವ್ಯಕ್ತಿಗಳನ್ನು ನಮ್ಮ ಸಂಬಂಧಿಕರು ಎಂಬ ’ಮಮ’ ಕಾರದಿಂದ ನೋಡಿದಾಗ ಈ ಐಹಿಕ ಸುಖದ ಚಕ್ರದಿಂದ ಪಾರಾಗಬೇಕೆನ್ನುವವನು ಈ ಮದುವೆಯ ಬಂಧನಕ್ಕೆ ಒಳಗಾಗಬಾರದು ಎಂಬುದಾಗಿ ಪ್ರತಿಪಾದಿಸಲಾಗಿದೆ.ಪಾರಮಾರ್ಥಿಕವಾದ ಮುಕ್ತಿಯನ್ನು ಪಡೆಯಲುಬೇಕಾದ ವೈರಾಗ್ಯ ಈ ವಿವಾಹಿತರಿಗೆ ಸುಲಭವಲ್ಲವಾದ್ದರಿಂದಲೇ ಮದುವೆಗೆ ’ಬಂಧನ’ ಎಂಬ ವಿಶೇಷಣ ಅಂಟಿಕೊಂಡಿರುವುದು. ಸಂಸಾರದಲ್ಲಿದ್ದುಕೊಂಡೇ ಮೋಕ್ಷವನ್ನು ಪಡೆಯಬಹುದೆಂದು ಜನಕನೇ ಮೊದಲಾದ ಅನೇಕ ಮಹನೀಯರು ತೋರಿಸಿಕೊಟ್ಟಿದ್ದಾರೆ. ’ಧರ್ಮಾ ವಿರುದ್ದೋ ಕಾಮೋಸ್ಮಿ’ ಎಂದು ಭಗವಂತನೂ ಒಪ್ಪಿಕೊಂಡಿದ್ದಾನೆ. ಅಂದರೆ ಧರ್ಮಕ್ಕೆ ವಿರುದ್ಧವಲ್ಲದ ಕಾಮಾಚರಣೆಯನ್ನು ಶಾಸ್ತ್ರಗಳೇ ಒಪ್ಪುತ್ತವೆ. ಸೌಂದರ್ಯಶಾಸ್ತ್ರವೂ ಒಂದು ಬಗೆಯ ಆಧ್ಮಾತ್ಮವಿದ್ಯೆಯೇ. ಆಧ್ಯಾತ್ಮಯೋಗಿಯೊಬ್ಬ ಸಂಸಾರದ ರಹಸ್ಯಗಳನ್ನೂ ತಿಳಿದುಕೊಂಡಿರಬೇಕು ಎಂಬುದಾಗಿ ಶ್ರೀ ಶಂಕರಾಚಾರ್ಯ - ಉಭಯಭಾರತೀಯರ ಸಂವಾದವೇ ನಮಗೆ ತಿಳಿಸಿಕೊಡುತ್ತದೆ. ಮೇಲಿನ ಪದ್ಯದಲ್ಲಿ ಡಿ.ವಿ.ಜಿ ಯವರು ಸ್ಪಷ್ಟ ಮಾತುಗಳಲ್ಲಿ ’ಧನ್ಯೋ ಗೃಹಸ್ಥಾಶ್ರಮ’ ಎಂಬ ಮಾತನ್ನು ಪುಷ್ಟಿಗೊಳಿಸಿದ್ದಾರೆ. ವಿವಾಹವೆನ್ನುವುದು ಬಂಧನವೇನಲ್ಲ. ಎರಡು ಹೃದಯಗಳನ್ನು ಕೂಡಿಸುವ ಪ್ರೇಮಬೆಸುಗೆ. ವ್ಯಕ್ತಿ ಒಬ್ಬಂಟಿಯಾಗಿದ್ದಾಗ ಪರಿಪೂರ್ಣನಲ್ಲ. ಬೆರೆತಾಗಲೇ ಪೂರ್ಣ. ಇದಕ್ಕೆ ಅರ್ಧನಾರೀಶ್ವರನೇ ಸಾಕ್ಷಿ. ನಮ್ಮ ಎಲ್ಲ ಸಮಸ್ಯೆಗಳನ್ನು ಅರೆದು ಸಂತೋಷವನ್ನು ಎರಡುಪಟ್ಟು ಮಾಡುವ ಮಾಂತ್ರಿಕತೆ ಈ ಬಾಂಧವ್ಯದಲ್ಲಿದೆ ಎನ್ನುತ್ತಾರೆ ಅವರು. ಹಾಗಾಗಿ ಈ ಬಾಂಧವ್ಯವೆನ್ನುವುದು ಒಂದು ಬಂಧನವಲ್ಲ, ದೈವಕೃಪೆ ಎಂಬುದು ಅವರ ಅಭಿಪ್ರಾಯ.
ಮಹಾಬಲ ಭಟ್ ; ಎಪ್ರಿಲ್ ೨೦೦೭ ನಲ್ಲಿ ಬರೆದಿದ್ದು.