Thursday, August 29, 2013

ಅಶ್ವತ್ಠ (ಕಥೆ)





ಇನ್ನೊಂದು ಸೃಷ್ಟಿಗೋ ಸೃಷ್ಟಿಗೋ ಲಯಕ್ಕೋ ಸಂಕಲ್ಪ ತೊಟ್ಟಂತೆ ಮಳೆ, ಕಳೆದ ಮೂರು ದಿನಗಳಿಂದ ನಿರಂತರ ಸುರಿಯುತ್ತಲೇ ಇತ್ತು. ನದಿಗೂ, ತೊರೆಗೂ, ತಗ್ಗಿನ ಜಾಗೆಗಳಿಗೂ ಯಾವ ವ್ಯತ್ಯಾಸವೂ ತೋರದಂತೆ ನೀರು ತುಂಬಿ ನಿಂತು ಎರಡೆರಡು ದಿನ ಕಳೆದುಹೋಗಿದೆ. ತುಂಗೆ ತನ್ನಿಂದ ಭರಿಸಲಾರದಷ್ಟು ಹರಿವಿನೊಂದಿಗೆ ಶೃಂಗೇರಿಯಂಚಿನಲ್ಲಿ ಗಂಭೀರೆಯಂತೆ ಪ್ರವಹಿಸುತ್ತಿದ್ದಾಳೆ. ಅವಳು ಅಷ್ಟೊಂದು ಗಂಭೀರೆಯಾದದ್ದು ಹಿಂದೆಂದೂ ಇಲ್ಲ. ಅಲ್ಲಿಯ ಪಾವಟಿಗೆಗಳಿಗೆ ನೆರಳು ಸುರಿಯುವ ಅಶ್ವತ್ಥದಂಥ ಗಾಂಭೀರ್ಯ ಆಕೆಯಲ್ಲಿ ಎಂದಿಗೂ ಕಂಡಿರಲಿಲ್ಲ. ಎಷ್ಟೋ ಬೆಳದಿಂಗಳುಗಳಲ್ಲಿ ನೀರವತೆಯಲ್ಲಿ ತುಂಗೆ ಮತ್ತು ಅಶ್ವತ್ಥಗಳು ಅನಿರ್ವಚನೀಯ ಭಾಷೆಯಲ್ಲಿ ಆಪ್ತವಾಗಿ ಮಾತಾಡುತ್ತಿರುವಂತೆ ತೋರುವುದಿದೆ. ಅಲ್ಲಿಯೂ ತುಂಗೆ ಲಲಿತೆ, ಅಶ್ವತ್ಥ ರುದ. ಹಾಗೆ ಬಿಗುಮಾನ ಮುರಿಯದ ಅಶ್ವತ್ಥದೆದುರು ತುಂಗೆ, ಯಾಕಷ್ಟೊಂದು ನಯವಾಗಿ, ಲಲಿತವಾಗಿ ನಡೆದುಕೊಳ್ಳುವಳೋ ತಿಳಿಯುತ್ತಿರಲಿಲ್ಲ. ಇವು ಅಂಥ ಸಂಭಾಷಣೆಗೆ ಸಾಕ್ಷಿಯಾಗುವ ಬೆಳದಿಂಗಳು ಸುರಿಯುವಂಥ ದಿನಗಳೇನೂ ಅಲ್ಲ. ಹಾಗೆ ನೋಡಿದರೆ, ಚಂದ್ರ ಹೋಗಲಿ, ಸೂರ್ಯನೂ ಅಪರೂಪವಾದಂಥ ಅಷಾಢ ಮಾಸ ಇದು. ತುಂಗೆಯ ನಿರ್ಮಲ ಹರಿವು ಅಶ್ವತ್ಥದ ತಂಪು  ನೆರಳಲ್ಲಿ ತೋಯಲು ವಿಶಾಲ ಪಾವಟಿಗೆಗಗಳು ಮತ್ತು ವಸಂತದ ಬೆಳದಿಂಗಳುಗಳೆಲ್ಲ ಅಷಾಢದ ಬೆನ್ನಿಗಂಟಿಕೊಂಡ ನೆನಪುಗಳು. ಬೆಳದಿಂಗಳು ಮತ್ತು ತುಂಗೆಯ ಸುಕೋಮಲತೆಗಳ ನಡುವೆಯೂ, ಒಂದು ದಿನವಾದರೂ ಅಶ್ವತ್ಥ, ತುಂಗೆಯ ಅಲೆಗಳನ್ನು ಅಪ್ಯಾಯತೆಯಿಂದ ನೇವರಿಸಿದ್ದಿಲ್ಲ. ಅದೊಂಥರಾ ಬಿಗುಮಾನದ ಮೊv. ಸುಳಿವ  ಗಾಳಿಗೆ ಮೈಯೊಡ್ಡಿದರೂ ಎಲೆ ಅಲುಗುವುದನ್ನೂ ಸಹಿಸುತ್ತಿರಲಿಲ್ಲವೇನೋ ಎಂಬಂಥ ಗಾಂಭಿರ್ಯ. ಇಷ್ಟೆಲ್ಲ ಈಗ ಧುತ್ತನೇ ನೆನಪಿಗೆ ಬರುತ್ತಿದೆ. ಈಗೆಲ್ಲಿ, ಎಲ್ಲಿ, ಅಶ್ವತ್ಥ? ಅಶ್ವತ್ಥ ಮತ್ತು ಅದರ ಬಿಗುಮಾನವನೆಲ್ಲ ತುಂಗೆಯೆಂಬಾಕೆ ತನ್ನೊಡಲ ಹರಿವಿನೊಂದಿಗೆ, ಇಳಿಸಿಕೊಂಡುಬಿಟ್ಟಳಾ? ಲಲಿತೆಯಾಗಿದ್ದ ತುಂಗೆ, ಪರಿಯ ಗಾಂಭೀರ್ಯ ತೋರುತ್ತ್ತಿರುವುದು ಅದಕ್ಕ್ಕೇ ಇದ್ದೀತು.
ಅಶ್ವತ್ಥವಿತ್ತಲ್ಲ! ಎಲ್ಲಿ ಹೋಯ್ತು, ಕಡಿದುಬಿಟ್ಟರಾ? ಶೃಂಗೇರಿಯನ್ನು ಹಿಂದೆಯೂ ಕಂಡಿದ್ದ ಯಾರೋ ಪ್ರವಾಸಿಗರು, ಹಾಗೆ ನಿಜಕ್ಕೂ ಕಳಿಕಳಿಗೋ ಕೇಳಿದ ಪ್ರಶ್ನೆ, ಮಂದ ಬೆಳಕಿನ ರಾತ್ರಿಯ ನೀರವತೆಯಲ್ಲಿ ವಿಷಾದದ ಬೇನಾಮಿ ರಾಗದಂತೆ ಗಾಳಿಯಲ್ಲಿ ಒಂದಾಗುತ್ತಿತ್ತು. ಕಳೆದ ಮಳೆಗಾಲದಲ್ಲಿ ತುಂಗೆಗೆ ಭಾರಿ ನೆರೆ ಬಂದಿತ್ತಲ್ಲ ಮಾರಾಯರೆ ಆಗ ಅಶ್ವತ್ಥ ಬುಡಮೇಲಾಗಿ ಹೋಯ್ತು ಇನ್ನೊಂದ್ದಾವುದೋ ಮಂಗಳೂರು ಧ್ವನಿ, ಪ್ರಶ್ನೆಗೆ ಅಷ್ಟೇ ನಿರ್ಭಾವುಕವಾಗಿ ಉತ್ತರಿಸುತ್ತಿತ್ತು. ಅಗೋ ಅಲ್ಲಿ ಮರದ ಅವಶೇಷ .. ತುಂಬ ಸರಳವಾಗಿ ಒಂದು ಅವನತಿ ಹಾಗೆ ವ್ಯಾಖ್ಯಾನಿಸಲ್ಪಟ್ಟಿತ್ತು. ಸೇತುವೆಯ ಆಚೆ ಕೊಂಚವೇ ದೂರದಲ್ಲಿ ತುಂಗೆಯ ಹರಿವಿನಲ್ಲಿ ಅನಾಯಾಸ ಬಿದ್ದುಕೊಂಡ ಅಶ್ವತ್ಥ ವೃಕ್ಷ, ಮಡಿದು ಬಿದ್ದ ವೈಭವದ ತುಣುಕು, ಆಕಾಶಕ್ಕೆ ಚಾಚಿದ ಕೈಗಳಂತೆ ಬೋಳು ಕೊಂಬೆಗಳ ಧ್ವನಿಯಿರದ ಆರ್ತತೆ. ದಿವಸ ಅಷ್ಟೆಲ್ಲ ರುದ್ರವಾಗಿ ಹವಣಿಸಿ ಹರಿದು ಅಶ್ವತ್ಥವನ್ನು ತನ್ನೊಡಲಿಗೆ ಸೆಳೆದ ಇದೇ ತುಂಗೆ, ಇವತ್ತು ತನ್ನ ಮಡಿಲಲ್ಲಿ ಅಂಗಾತ ಮಡಿದು ಬಿದ್ದ ಅಶ್ವತ್ಥದ ಸುತ್ತ ಅಮಾಯಕಿಯಂತೆ ತಂದೆಯ ಸಾವಿನ ಸುತ್ತ ಸುತ್ತುವ ಪುಟ್ಟ ಹುಡುಗಿಯಂತೆ, ಸುಳಿಸುಳಿದು ಹರಿಯುತ್ತಿರುವುದು ನೋಡಿದರೆ. ಇದೆಂಥ ನಾಟಕ ರಂಗವೋ ಎನ್ನಿಸದಿರದು. ಅಷ್ಟು ದಿವಸ ಅಶ್ವತ್ಥ ಮರ ನಿಂತಿದ್ದ ನೆಲದಲ್ಲಿ ಒಂದೆಂಟು ಅಡಿ ಆಳದ ನಿರ್ಭಾವುಕ ಹೊಂಡವಷ್ಟೇ ಉಳಿದದ್ದು, ಅದು ಬಿಟ್ಟರೆ ಮರದ ಬುಡದಲ್ಲಿ ನೆಟ್ಟಿದ್ದ ಒಂದಷ್ಟು ನಾಗರ ಕಲ್ಲುಗಳು ಮನೆ  ಕಳೆದುಕೊಂಡ ನಿರಾಶ್ರಿತರಂತೆ ಒಟ್ಟಾರೆ ರಾಶಿಯಾಗಿ ಬಿದ್ದಿದ್ದುವು. ನಿಜವೆಂದರೆ ಅಲ್ಲಿರುವ ಜೀವಗಳೆಲ್ಲ. ಅಂಗಾತ ಬಿದ್ದು ಆಕಾಶಕ್ಕೆ ಕೈ ಚಾಚಿದಂತಿರುವ ಅಶ್ವತ್ಥದೊಂದಿಗೆ ನಿರ್ಜೀವವಾಗಿದ್ದುವ                
            ****
ಅಧ್ಯಾತ್ಮದಷ್ಟು ಆಪ್ಯಾಯಮಾನವಾದ ನೆರಳನ್ನು ಕಳೆದುಕೊಂಡ ಇಡೀ ಶೃಂಗೇರಿಯೇ ಒಂಥರಾ ಬೋಳು ಎನ್ನಿಸುತಿದ್ದುದ್ದೂ ಖರೆಯೇ, ಅಂಥ ನೆರಳು ಮತ್ತೆ ಸುರಿಯಬೇಕಾದರೆ ಇನ್ನೆಷ್ಟು ಸಂವತ್ಸರಗಳು ತುಂಗೆಯೊಂದಿಗೇ ಹರಿದು ಹೋಗಬೇಕಿದೆಯೋ, ಹಿಂದಿನಂತೆ  ಬೆಳದಿಂಗಳ ಮಬ್ಬು ಬೆಳಕಿನಲ್ಲಿ, ನದಿಯ ಏಕಾಂತದೊಂದಿಗೆ ಮನಸು ಬೆರೆಸಿ ಧ್ಯಾನಕ್ಕೆ ಕೂರಬಹುದೆಂಬ ಸಾಧ್ಯತೆಯೇ ಸುಳ್ಳಾಗಿ ತೋರುತ್ತಿದೆ. ಈಗ ಬಹುಶಃ ಅಂಥ ತನ್ಮಯತೆಗೆ, ಮತ್ತೀ ಜನ್ಮಕ್ಕೆ ನೆರಳು ಒದಗುವುದಿಲ್ಲ. ತುಂಗೆಯೆದುರು ಅಶ್ವತ್ಥ ಎಷ್ಟೆಲ್ಲ ಬಿಗುಮಾನದ ಮೊತ್ತ ಎನಿಸುತ್ತಿದ್ದರೂ ಅದೊಂದು ಬಗೆಯ ಹಿಮಾಲಯದಂಥ ಅಪ್ಯಾಯ ಗಾಂಭೀರ್ಯವಾಗಿತ್ತು. ಧ್ಯಾನದ ವಿಷಯ ಬದಿಗಿರಲಿ. ಮರದ ಕೊಂಬೆಗಳ ಮಧ್ಯೆ ಬದುಕು ಕಟ್ಟಿಕೊಂಡಿದ್ದ ಮುಷ್ಟಿಯಷ್ಟು ಜೀವದ ಹಕ್ಕಿಗಳ ಬದುಕು ಎಲ್ಲಿ ಹಾರಿ ಹೋಯ್ತು? ಸಂಜೆಯ ವೇಳೆಗೆ ನದಿ ತೀರಕ್ಕೆ ಬರುವ ಪ್ರವಾಸಿಗರು ಮೀನುಗಳಿಗೆಂದು ಚೆಲ್ಲುತ್ತಿದ್ದ ಪುರಿಗಡಲೆಯಲ್ಲಿಯೇ ತಮ್ಮ ಪಾಲನ್ನು ಕಂಡುಕೊಳ್ಳುತ್ತಿದ್ದ ಹಕ್ಕಿಗಳ ಬಗ್ಗೆ ಎಷ್ಟೋ ಸಲ ಕನಿಕರ ಮೂಡಿದ್ದಿದೆ. ಅಥವಾ ಖಾಲಿ ಮಾಡಿ ಒಗೆದಿದ್ದ ಪುರಿಗಡಲೆಯ ಪೊಟ್ಟಣದೊಳಗೆ ಅಸೆ ಕಂಗಳಿಂದ ಕೊಕ್ಕು ತೂರಿಸಿ ನಿರಾಶವಾದಂತೆ ತೋರುತ್ತಿದ್ದ ಅವುಗಳ ಭಾವವು ಎಷ್ಟೋ ಸಂಜೆಗಳಲ್ಲಿ ಮನ ತಾಕಿದ್ದಿದೆ.  ಮೀನುಗಳಿಗೂ, ಹಕ್ಕಿಗಳಿಗೂ ಒಂಚೂರಾದರೂ ನಮ್ಮವರ ರಾಜಕೀಯ ಬುದ್ಧಿ ಇದ್ದಿದ್ದರೆ........  ಅನ್ನಿಸುತ್ತೆ ಒಮ್ಮೊಮ್ಮೆ.

ಅದೊಂದು ಧ್ಯಾನದ ರಾತ್ರಿ , ಉತ್ತರ ಭಾರತದ ಸಂತನೊಂದಿಗೆ  ಸಂವಾದ ನಡೆದಿದ್ದು ಇದೇ ಅಶ್ವತ್ಥ ನೆರಳಿನಲ್ಲಿಯೇ ಅಲ್ಲವಾ!? ಸಮಯದ ಪರಿವಿರದೆ ನಡೆದ ಅಶ್ವತ್ಥದ ನೆರಳಿನ ತತ್ವಶಾಸ್ತ್ರದ ಜಿಜ್ಞಾಸೆ ಅದು. ಅಶ್ವತ್ಥದತ್ತ ಬೆರಳು ತೋರಿಸುತ್ತ ಸಂತ ಹೀಗಂದಿದ್ದ ಜೋ ಕಲ್ ತಕ ನಹೀ ರಹೇಗಾ ವೋ ಅಶ್ವತ್ಥ ಹೈ. ಹೌದು ಇವತ್ತಿಗದು ಉಳಿದಿಲ್ಲ. ಸಂತನ ಕೈ ಬೆರಳ ತುದಿಯ ಆಜ್ಞೆಗೆ ಶಿರಬಾಗಿತ ವೃಕ್ಷ? ಯಾರೋ ಅಂದರು, ಮರಕ್ಕೆ ನೂರಿಪ್ಪತ್ತು ವಯಸ್ಸು ದಾಟಿತ್ತು. ನೂರಿಪ್ಪತ್ತು ವರ್ಷಗಳಿಂದಲೂ ಮರದ ಪಾಲಿಗೆ ನಾಳೆಯ ಬಗ್ಗೆ ಅಂಥ ಭರವಸೆಗಳೇನೂ ಇದ್ದಿರಲಿಲ್ಲವೇನೋ, ಸಂಸಾರ ತೋ, ತುಂಗಾ ಕೀ ಲಹರೋ ಕೇ ತರಫ್ ಹೈ ಅದೇ ಸಂತನ ತೋರು ಬೆರಳು ತುದಿಯ ಮಾತುಗಳು ಸತ್ಯವಿರಬೇಕು.
         ***********
ನಾಗರ ಕಲ್ಲುಗಳಿಗೆಲ್ಲ ಎಂಥ ಗತಿ ಬಂದೋಯ್ತಲ್ಲ!?  ಅಶ್ವತ್ಥ ಉರುಳಿದ್ದು ಊರಿಗೆಲ್ಲ ತಿಳಿದ ದಿವಸ ಬೆಳ್ಳಂಬೆಳಗು ಜನಿವಾರ ನೀವಿಕೊಳ್ಳುತ್ತ ಹಾಳುಗದ್ದೆಯ ಜೋಯಿಸರು ಹಲುಬಿದ್ದು ಹಾಗೆ. ಅವರಿಗೆ ದೇವರುಗಳೆಂದರೆ, ಮಕ್ಕಳ ಮೇಲಿರುವಷ್ಟೇ ಕಾಳಜಿಯಂತೆ, ಹಾಗೆಂದು ಸ್ವಯಂ ಹೇಳಿಕೊಂಡು ತಮ್ಮನ್ನು ಪರಮಾತ್ಮನ ಆಪ್ತ ಸೇವಕನಂತೆ ಚಿತ್ರಿಸುವ ಸಕಲ ಪ್ರಯತ್ನವೂ ಅವರದಿದೆ. ಎಲ್ಲ ನಾಗರ ಮೂರ್ತಿಗಳನ್ನು ಮತ್ತೆ ಸರಿಯಾಗಿ ನೆಟ್ಟು ಒಂದಾದರೂ ಗುಡಿ ಕಟ್ಟದಿದ್ದರೆ ಸ್ವಾಮಿ ಸುಬ್ರಮಣ್ಯ ಸುಮ್ಮನುಳಿದಾನೆಯೇ? ಇದು ಜೋಯಿಸರ ಸಾತ್ವಿಕ ತರ್ಕ ಅಥವಾ ಈವರೆಗೆ ಅಶ್ವತ್ಥವಿದ್ದಲ್ಲಿಯೇ ಹೊಸ ಗುಡಿ ಕಟ್ಟುವ ರಚನಾತ್ಮಕ(!) ಅಲೋಚ. ಒಂದು ವಿನಾಶದ ಬೆನ್ನಿಗೇ ಇನ್ನೊಂದು ಸೃಷ್ಟಿಯೂ ಆಗಬೇಕೆಂಬುದು ಶ್ರೀ ಕೃಷ್ಣ ನಿಯಮಿಸಿದ ನಿಯಮ ಎಂಬ ಮಾತಿಗೆ ಶ್ರೀ ಕೃಷ್ಣ ತತ್ವದ ಬಲಿ. ಒಟ್ಟಾರೆ ಜೋಯಿಸರ ತಲೆಯಲ್ಲಿ ಒಂದೇ ವಿಚಾರ, ಹೇಗಾದರೂ ಸರಿ ಸುಬ್ರಮಣ್ಯ ಸ್ವರೂಪಿ ನಾಗರ ಕಲ್ಲುಗಳಿಗೆ ಒಮದು ನೆಲೆಯಾಗಲೆ ಬೇಕು. ಹಾಗೇ ಮೂರು ವರ್ಷಗಳ ಆಚೆ, ಹೊಳೆಯ  ದಡದಲ್ಲಿದ್ದ ಜಟಗೇಶ್ವರನ ಮರ ಮುರಿದು ಬಿದ್ದಾಗ ಕೂಡ, ತಕ್ಷಣ ಜಟಗೇಶ್ವರನಿಗೆ ಪಂಪ್ ಹೌಸಿನಷ್ಟೇ ದೊಡ್ಡದಾದೊಂದು ಗುಡಿ ಕಟ್ಟಿಸುವಲ್ಲಿ ಶಾಸ್ತ್ರೀಯ ಒತ್ತಡ ತಂದವರು ಜೋಯಿಸರೇ. ಅವರು ಒಂದು ಬಗೆಯಲ್ಲಿ ದೇವರುಗಳಿಗೆಲ್ಲ ousiಟಿg boಚಿಡಿಜ iಡಿeಛಿಣoಡಿ ಇದ್ದಂತೆ!.
ಎಲ್ಲಿಂದಲೋ, ಒಂದೇ ಒಂದು ಅಶ್ವತ್ಥದ ಬೀಜ, ಗಾಳಿಯಲ್ಲಿ ತೇಲಿಕೊಂಡು ಬಂದು, ಮರ ಬಿದ್ದುದರಿಂದ ತೆರೆದುಕೊಂಡ ಕುಣಿಯಲ್ಲಿ ಕೂತು ಬಿಡಲಾರದಾ, ಎಂಟೇ ದಿನಕ್ಕೆ ಆಳೆತ್ತರಕ್ಕೆ ಬೆಳೆದು ನಿಂತು ಬಿಡಬಾರದಾ ಎಂದು ನಡುವೆ ಮನಸೆಷ್ಟೋ ಸಲ ವಿಲಪಿಸಿದ್ದಿದೆ. ಆದರೆ ಜೋಯಿಸರ ಶಾಸ್ತ್ರೀಯ ಒತ್ತಡಕ್ಕೆ ವಿರೋಧವಾಗಿ ಯಾವ ಅಶ್ವತ್ಥದ ಬೀಜವೂ ಹಾಗೆ ಬಂದಿಳಿಯಲಿಲ್ಲ. ತುಂಗೆ ದಡದ ಸಂಜೆಗಳಲ್ಲಿ ಗಾಳಿಯ ಲಾಸ್ಯಕ್ಕೆ ಮುನಿಯುತ್ತಿದ್ದ ಅಶ್ವತ್ಥದ ಸಂತಾನವನ್ನೇ ಮತ್ತು ಮುಂದುವರೆಸುವುದಕ್ಕೆ ಜೋಯಿಸರು ಬಿಡುವಂತೆಯೂ ತೋರಲಿಲ್ಲ.  ಜೀವವೊಂದು ಮುಗಿದು ಹೋದರೆ ಮತ್ತೆ ಅಂಥದೇ ಹಸಿರು ಜೀವವನ್ನು ಅಲ್ಲಿಯೇ ತಂದು ನೆಡುವುಡು ಮಹತ್ವದ ಕಾರ್ಯ ಎಂದೆಲ್ಲ ವಿವರಿಸಿದರೆ ಜೊಯಿಸರ ಅರೆಬರೆ ಧರ್ಮಜ್ಞಾನದ ಬೆಂಕಿಗೆ ತುಪ್ಪ ಸುರಿದಂತೆಯೇ ಸರಿ. ಅವರು ಕಾಶಿಯಿಂದ ಬರುವಾಗ ತಂದಿದ್ದ ಶುದ್ಧ ಕಂಚಿನ ಗಂಟೆಯನ್ನು ಅಲ್ಲಿ ಕಟ್ಟಲ್ಪಡುವ ಗುಡಿಯ ಮುಂಭಾಗಕ್ಕೆ ತೂಗಿ ಬಿಡುವ ಉದಾರ ದಾನದ ಯೋಜನೆಯನ್ನೀಗಾಗಲೇ ತಯಾರಿಸಿಟ್ಟಿದ್ದಾರೆ. ಗಂಟೆಯೇ ತೂತಾಗುವಷ್ಟು ಆಳಕ್ಕೆ ಹೆಸರು ಕೊರೆಯಿಸುವ ಯೋಜನೆಯೂ ಇಲ್ಲದಿಲ್ಲ. ಅಂತೂ ಜೋಯಿಸರ ಸಂಕಲ್ಪ ಬಲವೋ, ಕಾಂಕ್ರೀಟು ರೂಮಿನೊಳಗೆ ಕುಳಿತುಕೊಳ್ಳುವ ನಾಗರ ಕಲ್ಲುಗಳ ಯೋಗವೋ,........ ಕೆಲವೇ ದಿನಗಳಲ್ಲಿ ಸಿಮೆಂಟು, ಇಟ್ಟಿಗೆ ಮತ್ತು ಕಬ್ಬಿಣದ ಸರಳುಗಳು ಸ್ಥಳದ ಬಣ್ಣವನ್ನೇ ಬದಲಿಸಿದವು.
       *****************
ಒಮ್ಮೊಮ್ಮೆ ತಿಂಗಳು ಬೆಳಕಿನ ರಾತ್ರಿಯಲ್ಲಿ ತುಂಗೆಯ ಪಾವಟಿಗೆಗಳ ಮೇಲೆ ಕುಳಿತುಕೊಳ್ಳುವಾಗ, ಉದುರಿರುತ್ತಿದ್ದ ಅಶ್ವತ್ಥದ ಹಣ್ಣುಗಳನ್ನು ಮತ್ತು ಹಕ್ಕಿಗಳ ಗಲೀಜನ್ನು ಬದಿಗೆ ಸರಿಸಿಕೊಂಡು ಜಾಗ ಮಾಡಿಕೊಳ್ಳುವಾಗ ಹಕ್ಕಿಗಳ ವಿಷಯದಲ್ಲಿ ಕ್ಷಣಿಕ ಕೋಪ ಬಂದುದಿತ್ತು. ಹಾಗೆಂದು ಅದ್ಯಾವುದೂ ಅಸಹನೀಯವೆಂದೇನೂ ಅನನಿಸಿರಲಿಲ್ಲ. ಇವತ್ತು ಅಶ್ವತ್ಥವಿದ್ದ ಜಾಗದಲ್ಲಿ ರಾಶಿ ಬಿದ್ದಿರುವ ಮರಳು, ಸಿಮೆಂಟು, ಕಬ್ಬಿಣಗಳು ಯಾವ ಧ್ಯಾನಕ್ಕೂ ಯಾರನ್ನೂ ಕರೆಯುತ್ತಿರಲಿಲ್ಲ. ನಾಗರ ಕಲ್ಲುಗಳ ಮುಖದಲ್ಲಿ ಅಂಥ ಯಾವ ಉತ್ಸಾಹವೂ ತೋರುವಂತಿರಲಿಲ್ಲ. ನೋಡ ನೋಡುತ್ತಿದ್ದಂತೆ ಅಶ್ವತ್ಥ ಮರವಿದ್ಧ ಜಾಗವೆಲ್ಲ ಸಮತಟಾಯ್ತು, ಎಷ್ಟೋ ವರ್ಷಗಳ ಹಿಂದೆ ಯಾರೋ ಹಚ್ಚಿ ಗೋಗಿರಬಹುದಾದ ಮಣ್ಣಿನ ಹಣತೆಯ ಚೂರುಗಳು, ಗಾಜಿನ ಬಳೆಗಳ ಒಂದಷ್ಟು ಮೊತ್ತ, ಒಂದಶ್ಟು ವರ್ಷಗಳಿಂದೀಚೆ ಬಳಕೆಗೆ ಬಂದ ಪುಟ್ಟ ಸ್ಟೀಲಿನ ದೀಪದ ಅವಶೇಷಗಳು.. ಹೀಗೆ ಎಂಥವೆಲ್ಲ ಅವಶೇಷಗಳು ಅರ್ಥವಿರದ ತ್ಯಾಜ್ಯ ರಾಶಿಯಂತೆ ಒಂದು ಕಡೆ ಮೂಲೆಗೊತ್ತಲ್ಪಟ್ಟಿದ್ದವು. ಇಡೀ ಊರಿನ ಜನಗಳ ಮನದಲ್ಲಿ ಅಶ್ವತ್ಥದ ಚಿತ್ರವನ್ನು ಪೂರ್ತಿಯಾಗಿ ಒರೆಸಿ ಜಾಗದಲ್ಲಿ ಗುಡಿ ಮತ್ತು ಗಂಟೆಯ ಚಿತ್ರವನ್ನು ಜೋಯಿಸರು ಬರೆದುಬಿಟ್ಟಿದ್ದರು. ತುಂಗೆಯ ಹರಿವಿನ ಮಧ್ಯೆ ನಿರ್ಲಕ್ಷ ಬಿದ್ದುಕೊಂಡ ಅಶ್ವತ್ಥ ಮಾತ್ರ ನಿಃಶಕ್ತವಾಗಿ ಇವನ್ನೆಲ್ಲ ನೋಡುತ್ತಿತ್ತು.  ಆಗೊಮ್ಮೆ ಈಗೊಮ್ಮೆ ಆಕಳಿಕೆ ಬಂದಾಗ, ತಮ್ಮ ಡೊಳ್ಳು ಹೊಟ್ಟೆ ಸವರಿಕೊಳ್ಳುತ್ತ ಜೋಯಿಸರು ನೆನೆಯುತ್ತಿದ್ದುದುಂಟು, ’ಅಶ್ವತ್ಥ ನಾರಾಯಣಾ..’
ಇದೊಂಥರಾ ತಣ್ಣನೆಯ ಅನುಭವ... ಕತ್ತಲಲ್ಲಿ ಒಬ್ಬರೇ ಕುಳಿತಾಗ ಕಾಲಿನ ಬುಡಕ್ಕೆ ಹಾವಿನ ಮೈ ತಗುಲಿದರೆ ಅಗುವಂಥಾ ತಣ್ಣನೆಯ ಅನುಭವ. ಹೀಗೊಂದು ಜೀವಂತ ಅಶ್ಚತ್ಥ ಕಾಲವಶಕ್ಕೆ ಬಲಿಯಾದಾಗ, ಮಣ್ಣಿನಲ್ಲಿ ಇನ್ನೊಂದು ತಣ್ಣೆಳಲಿನ ಮರ ಬೆಳೆಸುವುದು ಬಿಟ್ಟು, ಇದೆಂಥವಿದು ಗುಡಿ ಕಟ್ಟುವ ಅಧಿಕ ಪ್ರಸಂಗಿತನ!?. ಅದ್ಯಾರ ನೆರಳಿಗೆ, ಯಾರ ಸೆಗಿನ ಹೆಸರಿಗೆ? ನಾಳೆ ಗುಡಿಯ ಎದುರಿನಲ್ಲಿ ತೂಗಬಹುದಾದ ಗಂಟೆಯ ದನಿಯಲ್ಲಿ ಹಕ್ಕಿಗಳ ಜೀವಂತ ಕಲರವ ಇರಬಹುದೆಂದು ಕನಸುಕಾಣಲಾದೀತಾ? ಯಾಕೋ, ಅಲ್ಲಲ್ಲಿ ಚದುರಿ ಬಿದ್ದಿದ್ದ ಒಣ-ಹಸಿಯ ಅಶ್ವತ್ಥದೆಲೆಗಳು ಮತ್ತು ಕೊಂಬೆಗಳು, ಯುದ್ಧದಲ್ಲಿ ಸೋತ ರಾಜ್ಯವೊಂದರ ಮಡಿದ ಸೈನಿಕರ ನಿಸ್ಸಹಾಯಕ ಶರೀರ ರಾಶಿಯಂತೆ ತೋರಿದುವು.
ಹದಿನೈದೇ ದಿವಸ, ನೋಡ ನೋಡುತ್ತಿದ್ದಂತೆ ಹಿಂದೆ ಅಶ್ವತ್ಥವಿದ್ದದ್ದೇ ಜಾಗದಲ್ಲಿ ಮತ್ತದೇ ಪಂಪ್ ಹೌಸಿನಷ್ಟು ದೊಡ್ಡ ಕಾಂಕ್ರೀಟು ಗುಡಿಯೊಂದು ತಲೆ ಎತ್ತಿತ್ತು. ಅದರೊಳಗೆ ಅಷ್ಟೇ ಜಾಗದಲ್ಲಿ ಪ್ರೈಮರಿ ಸ್ಕೂಲಿನ ಮಕ್ಕಳು ಬೆಳಗಿನ ಪ್ರಾರ್ಥನೆಗೆ ನಿಂತಂತೆ ಸಾಲಾಗಿ ನಿಂತ ನಾಗರ ಕಲ್ಲುಗಳು! ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಗುಡಿಯೆದುರು ಮಿರಮಿರನೆ ಮಿನುಗುತ್ತಿದ್ದ ಜೋಯಿಸರ ಹೆಸರಿನ ಕಾಶೀ ಗಂಟೆ. ದಿನ ಕಳೆದಂತೆ ಇಲ್ಲಿಯೂ ಹಣತೆ ಬೆಳಗುವವರು ಬರಬಹುದು ಮತ್ತು ಹಾಲು ಪಂಚಾಮೃತಗಳ ಅಭೀಷೇಕ ನಡೆಯಬಹುದು. ಆದರೆ .. ಅಲ್ಲಿಗೆ ಹಕ್ಕಿಗಳು ಬರಲಾರವು. ಗಾಳಿಯು ಕಕ್ಕುಲತೆಯಿಂದ ಸುಳಿಯಲಾರದು ಮತ್ತು ತುಂಗೆ ಮಾರ್ದವ ಬಗೆಯಲ್ಲಿ ಬೆಳದಿಂಗಳ ಸಂಭಾಷೆಣೆಗಳಿಯಲಾರಳು. ಐದೂವರೆ ಅಡಿ ಎತ್ತರದ ಕಾಂಕ್ರೀಟು ಗುಡಿಗೆ, ಎಲೆಗಳು ಕೊಂಬೆಗಳು ಇದ್ದಿರಲಿಲ್ಲ ಮತ್ತು ಅದೇ ಕಾರಣಕ್ಕೆ ಮುಶ್ಟಿ ಜೀವದ ಹಕ್ಕಿಗಳು ಬರಲು ಸಾಧ್ಯವಿಲ್ಲ. ಅಲ್ಲಿಗೆ ಕೇವಲ ಭಕ್ತಿ ಹೊತ್ತ ಮನುಷ್ಯರು ತಮ್ಮ ಬೇಡಿಕೆಗಳ ಮೊತ್ತದೊಂದಿಗೆ ಬರುತ್ತಿರುತ್ತಾರಷ್ಟೇ.

ನವೀನ ಭಟ್, ಗಂಗೋತ್ರಿ

1 comment: