Thursday, August 29, 2013

ಬೇಂದ್ರೆ ಮತ್ತು ಬಾಕಿಬಾಬಾ



ಕೊಂಕಣಿಯ ಮಹಾ ಕವಿ ದಿ. ಶ್ರೀ.ಬಾ..ಬೋರಕರಬಾಕಿಬಾಬ ನಿಕಟ ದರ್ಶನ (ಪರಿಚಯ) ನನಗಾಗಿದ್ದು ನಮ್ಮ ಅಚ್ಚುಮೆಚ್ಚಿನ ವರಕವಿ ಬೆಂದ್ರೆಯವರಿಂದ. ಗೋವಾ-ಮಡಗಾಂವನ ಸಂಸ್ಕೃತ ಪ್ರಚಾರಿಣಿ ಸಭಾದಿಂದ ಆಯೋಜಿತ-ಸಂಸ್ಕೃತ-ಮರಾಠಿ(ಕೊಂಕಣಿ) ವ್ಯಾಖ್ಯಾನಕ್ಕಾಗಿ ಇವರ ಅಧ್ಯಕ್ಷತೆಯಲ್ಲೆ ಅಭಿಜ್ಞಾನ ಶಾಕುಂತಲ ದೀರ್ಘ ವ್ಯಾಖ್ಯಾನಕ್ಕಾಗಿ ಮತ್ತು ಎರಡನೇ ದಿನ ಬೇಂದ್ರೆಯವರ ಅಧ್ಯಕ್ಷತೆಯಲ್ಲಿ ಗೋವಾ ಶಿಕ್ಷಣ ನಿರ್ದೇಶಕ ಶ್ರೀ..ಹಿ.ಸರದೇಸಾಯಿ ಹಾಗೂ ಗೋವಾ ಯುನಿವರ್ಸಿಟಿಯ ಆಗಿನ ಅತಿರಥ ಮಹಾರಥರೊಡನೆ ಆಗಿನ ಇನ್ನೋರ್ವ ಕೊಂಕಣಿ ಮಹಾಕವಿ ಡಾ. ಮನೋಹರರಾಯ ಸರದೇಸಾಯಿಯರೊಂದಿಗಿನಭಾಷಾ ಶಿಕ್ಷಣದಲ್ಲಿ ಸಂಸ್ಕೃತದ ಸಹಯೋಗಿ ಪಾತ್ರಬಗ್ಗೆ ಪರಿಸಂವಾದದ ಮಹಾಸುಯೋಗ. ಅದರಲ್ಲೆ ಕವಿ ಬೋರಕರರ ಅಧ್ಯಕ್ಷತೆಯ ಮೊದಲ ದಿನ  - ಕಾಳಿದಾಸನ ಮೂರು ನಾಟಕಗಳಲ್ಲಿನ ಮಹತ್ತ್ವಪೂರ್ಣ ಶ್ಲೋಕಗಳ ಪರಿಚಯ  ವಿವರಣೆ ಗಳನ್ನುಬೇಂದ್ರೆಯವರಿಂದ ಮಾಡಿಸುವುದಕ್ಕಾಗಿ. ಎರಡು ದಿನಗಳು ಗೋವೆಯ ವಿದ್ವಾಂಸರೇ ಅಂದು ಹೇಳಿದಂತೆ, ಗೋವೆಯ ರಸಿಕಪಂಡಿತರಿಗೆ ಸಾಹಿತ್ಯ ರಸದೌತಣ.
                                ನಿಜಕ್ಕೂ ಅದೊಂದು ನನ್ನ ಜೀವನದ ಅವಿಸ್ಮರಣೀಯ ಅದ್ಭುತ ಘಟನೆ. ಇಬ್ಬರು ಮಹಾ ಕವಿಗಳೊಂದಿಗೆ ಕಾರಿನ ಓಡಾಟದಲ್ಲಿ ಅವರ ಸಂಭಾಷಣೆ ಆಲಿಸುವ ಸುವರ್ಣಯೋಗ. ಆದರೆ ಸದ್ಯಕ್ಕೆ ಎಲ್ಲವೂ ಸರಿಯಾಗಿ ನೆನಪಾಗುತ್ತಿಲ್ಲ! ಈಗ ಶ್ರೀ.ಮಹಾಬಲ ಭಟ್ಟರು ಗೋವಾ ಜನನುಡಿಗೆ ಗೋವಾ ಕನ್ನಡಿಗರಿಗಾಗಿ ಲೇಖನಕ್ಕಾಗಿ ಕೇಳಿದಾಗಲೇ ಒಂದೊಂದು ನೆನಪು ಮರುಕಳಿಸಿದ್ದು. ಎಲ್ಲೋ ತಪ್ಪಿ ಉಳಿದಿದ್ದ ಸಂಸ್ಕೃತ ಕಾರ್ಯಕ್ರಮದ ಕರೆಯೋಲೆ ಕಂಡಾಗ ನೆನಪಿನ ಸುರುಳಿ ಬಿಚ್ಚುತ್ತ ಹೋಯಿತು. ಬೇಂದ್ರೆ ಮತ್ತು ಬಾಕಿಬಾಬ ಬೋರಕರರು ಪರಸ್ಪರ ಗೌರವಿಸುವ ಆತ್ಮೀಯ ಸ್ನೇಹಿತರಾದ್ದರಿಂದ ಆಗ ಬೇಂದ್ರೆ ಹಾಸ್ಯ ಚಟಾಕಿ ನಡೆದೇ ಇದ್ದವು. ಅರ್ಧ ಕೊಂಕಣಿ ಅರ್ಧ ಮರಾಠಿಯಲ್ಲಿ ನಡೆದ ಸಂವಾದ ಇಲ್ಲಿ ಕನ್ನಡದಲ್ಲಿ.
                ಬೇಂದ್ರೆ  ಬಾಕಿಬಾಬರೇ ಇಂಥ ಸಂದರ್ಭದಲ್ಲಿ ಗೋವಾದಲಿರುವ ಎಂಥ ರಸಿಕ ವಿದ್ವಾನರು ಕವಿಗಳಾಗುತ್ತಿರುವಾಗ ನಿಮ್ಮಂಥವರು ಮಹಾಕವಿಗಳಾಗುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಇದಕ್ಕೆ (ನೀವೇನಂತೀರಿ?) ನೀನೆಂತಮಾ? (ಹಿರಿ ಮರೆದು ಆತ್ಮೀಯವಾಗಿ)
                ಬಾಕಿಬಾಬ - ಅದು ದಿಟವಾದರೂಗೋವಾ - ಭಾರತಸ್ವಾತಂತ್ರ್ಯ ಸಮರಗಳೆರಡರಲ್ಲೂ , ಅಲ್ಲದೆ ನಿಮ್ಮೊಡನೆ ಕರ್ನಾಟಕದಲ್ಲಿ ನಾನು ಇದ್ದುದು ಮರೆತು ನೀವು ನನ್ನ ಕಾಲೆಳೆಯುತ್ತಿರುವುದು ಸರಿಯೇ?(ಹಾಸ್ಯ-ನಗೆ)
                ಬೇಂದ್ರೆ-(ಆತ್ಮೀಯವಾಗಿ) ಅಲ್ಲಯ್ಯಾ ಅದೆಲ್ಲಾ ನನಗೆ ಗೊತ್ತಿಲ್ಲವೆ? ಅದಕ್ಕೆ ನಿನ್ನ ಮೆಚ್ಚಿದ್ದು.
                ಬಾಕಿಬಾಬ- ಅಲ್ಲಣ್ಣಾ! ನನ್ನ ಬಗ್ಗೆ ನಿನಗೆ ಗೊತ್ತಿಲ್ಲದ್ದು ಏನಿದೆ? ಇನ್ನೊಂದೆರಡು ಚಿಕ್ಕಪುಟ್ಟ ಸಂಗತಿಗಳು ನಿನಗೆ ಗೊತ್ತಿರಲಿಕ್ಕಿಲ್ಲ. ನಾನು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಪೂಜ್ಯ ಗಾಂಧಿಯವರನ್ನು ಭೆಟ್ಟಿಯಾಗಿದ್ದೆ, ಗೋವಾ  ಮೊದಲಿನಿಂದ ಭಾರತದ ಅಂಗವಾಗಿದ್ದುನೀವು ಗೋವಾಕ್ಕಿಂತ ಮುನ್ನ ಭಾರತ ಸ್ವಾತಂತ್ರ್ಯ ವಿಚಾರ ಮಾಡಿದರೆ ಗೋವ ವಿಮೋಚನೆ ತಾನೆ ಆಗುವ ಸಂದರ್ಭ ಬಂದೆ ಬರುತ್ತದೆ ಅಲ್ಲವೇ?’ ಎಂದು ಬಾಪುಜಿ ಪ್ರೇರಣೆಯಿತ್ತು . ’ನಿಮ್ಮಂಥ (ಆಗಿನ) ಯುವಕ ಕ್ರಾಂತಿಕಾರಿಗಳು ಹೋರಾಟಕ್ಕೆ ಬಂದರೆ ಎಂಥ ಅಸಾಧ್ಯವೂ ಸಾಧ್ಯವಾದೀತು.’ ಎಂದಾಗಲೇ ನಾನು ಅತ್ತು ಬಿಟ್ಟಿದ್ದೆ. ಅಲ್ಲಣ್ಣಾ ಪುಣೆಯಲ್ಲಿದ್ದು ನಾನು ಮರಾಠಿ (ಕವಿಯಾಗಿ) ಸಾಹಿತಿಯಾಗಿ ಅವರೆಲ್ಲರ ಮೆಚ್ಚುಗೆ, ಪ್ರೋತ್ಸಾಹ ಪಡೆದದ್ದೆ ನನಗೆ ಬಲ ಬಂತು. ಇಂಥದರಲ್ಲಿ ನೀನೇ ಕಾಲೆಳೆಯುವುದೇ?(ಕಿತೆ ಫಕಾಣ್ ಕೊರತ್)
                ಬೇಂದ್ರೆ-(ನಗುತ್ತಾ) ಅಲ್ಲಯ್ಯಾ! ವಿದ್ವಾಂಸರನ್ನು ಕೆಣಕಿದಾಗಲೇ ಅವರ ಜ್ಞಾನ ಸಂಪತ್ತು ಹೊರ ಬೀಳುವುದು, ಅಂದ ಮೇಲೆ ಸುಮ್ಮನೆ ನೀನು ಬಾಯಿ ಬಿಡುವವನೆ? ನಾನು ಸಿಟ್ಟು ಬಂದಾಗಲೇ ಸತ್ಯ ಸಂಗತಿಗಳನ್ನು ಹೊರ ಹಾಕಿದ್ದೆ! ಕವಿಗಳು ತಾವು ತೀವ್ರ ಸ್ಪಂದಿಸುವವರಾದರೂ  ತಮ್ಮ ದೊಡ್ಡ ಸಾಹಸವನ್ನು ತಾವೇ ಎಂದೂ ಹೇಳಿಕೊಳ್ಳುವುದಿಲ್ಲ. ಅದಕ್ಕೆ ಹೀಗೆ ಸಂದರ್ಭ ತರಬೇಕಾಯ್ತು. (ಮತ್ತೆ ಎಲ್ಲರು ನಗು)
                ಬಾಕಿಬಾಬ-ಅಣ್ಣಾ! ಮಹಾ ಚತುರನು  ನೀನು. ನನ್ನ ಬಾಯಿಯಿಂದಲೇ ನನ್ನ ಹೇಳಲಾರದ ಸಂಗತಿಗಳನ್ನು (ಆತ್ಮ ಪ್ರಶಂಸೆ) ಹೊರಡಿಸುತ್ತೀಯಾ? ನೀನು ನಿನ್ನ ಬಗ್ಗೆ ಹೇಗೆ ಹೇಳಿಕೊಳ್ಳುವುದಿಲ್ಲವೋ ಹಾಗೇ (ನಸುಗೋಪದಿಂದ) ನನಗೂ. ನಿನ್ನ ಮಾನಸ ತಮ್ಮನಾಗಿ ನಿನ್ನ  ಆದರ್ಶ ನಂಬಿದವನಿಗೆ ಸರಿಯಾದಿತೇ?
(ಸ್ವಲ್ಪ ತಡೆದು) ಅದರಲ್ಲೂ ಗೋವಾ- ಕರ್ನಾಟಕ ಎರಡೂ ಸ್ಥಳದ ಉಪ್ಪುಂಡವರಾಗಿದ್ದು, ಮಹಾರಾಷ್ಟ್ರವೂ ನಮ್ಮದೇ.  ವಿಶಾಲಖಂಡ ಭಾರತೀಯತ್ವದ ಸಾಗರದಲ್ಲಿ ಈಸುವ ನಮ್ಮಿಬ್ಬರ ವಿಚಾರ ಒಂದೇ ಅಲ್ಲವೇ?
                ಬೇಂದ್ರೆ-ಅಣ್ಣಾ ನಿನ್ನ ಬಗ್ಗೆ ಗೊತ್ತಿದೆ ಎಂಬುದಕ್ಕೆ ಇಷ್ಟು ಆತ್ಮೀಯರಾಗಿ ನಾವಿಬ್ಬರು ಬೆಳೆದದ್ದು. ಈಗ ಮಹಾ ಕವಿಕಾಳಿದಾ ಬಗ್ಗೆವ್ಯಾಖ್ಯಾನಕೊಡಲು ಎರಡು ತಿಂಗಳ ವರೆಗೆ ದುಡಿಯಲು ಹಚ್ಚಿದ್ದು ನೀನೆ ಅಲ್ಲವೆ? ’ನಮಾಜ ಮಾಡ್ಲಿಕ್ ಹೋದ್ರ ಮಸೀದಿನ ಕೊಳ್ಳಾಗ್ ಬಿತ್ತಂತಅಂದಹಾಂಗ ನಿನಗ ಏನೋ ಕಾಳಿದಾಸನ ಬಗ್ಗೆ ಹೇಳ್ಲಿಕ್ಕ ಹೋದ್ರ ನನಗೆ ವ್ಯಾಖ್ಯಾನಕ ಇಳಿಸಿದಿ. ಮಹಾ ಚಾಣಾಕ್ಷ ನೀನು! ಹೇಗೊ ಮಾಡಿದ್ರಾಯ್ತು ಅಂತ ಒಪ್ಪಿ ಕೊಂಡಮ್ಯಾಲ ವಿಚಾರ ಮಾಡಿದಾಹಾಂಗ ವಿಷಯ ಇಷ್ಟು ಗಹನ ಗಂಭೀರವಾಗಿ ದೊಡ್ಡ ಜವಾಬ್ದಾರಿ ಕೊಳ್ಳಾಗ ಬಿತ್ತು. ಇನ್ನ ಹೂಂ! ಅದ್ಯಾವಾಗ ಪದಾ ಹೇಳಾಕ ಬೇಕ್..ಅಂದ್ಹಾಂಗ..
                ಬಾಕಿಬಾಬ- ಅದ್ರಾಗ ನಂದೇನ ತಪ್ಪು? ’ಸಮುದ್ರದ ಮುಂದ ಗಿಂಡಿ ನೀರ ಕೇಳಿದ್ಹಂಗನಿನ್ನಂಥ ಜ್ಞಾನ ಸಾಗರ, ಕವಿ ಪಂಡಿತಗ ನನ್ನ ಸಲುವಾಗಿ ಇಷ್ಟು ಸಣ್ಣ ಕೆಲಸ ಮಾಡಿ ಕೊಡಲಿಕ ಆಗದೇನು? ನಿನಗೇನ ಮನಸ್ಸು ಮಾಡಿದ್ರ ಎಡಗೈ ಕಿರು ಬೆರಳಿನ ಕೆಲಸ. ಸುಮ್ನೆ ನನ್ ಯಾಕ ದೂರ್ತಿ? ಸಣ್ಣ ತಮ್ಮ ಅಷ್ಟು ಕೇಳಬಾರ್ದ?
                ಬೇಂದ್ರೆ-ತಮ್ಮಾ, ತಮ್ಮಾ ಅಂದ್ರ ಮಗನ. ಮಗನಕ್ಕಿಂತಾ ಜಾಸ್ತಿ. ನೀ ಹೇಳ್ತಿ ಅಂದಮ್ಯಾಲ ಅಷ್ಟೇ ಯಾಕ, ನಿನಗೆಷ್ಟ ಬೇಕೋ ಅಷ್ಟ ದುಡಿಲಿಕ ಅಣ್ಣ ತೈಯಾರಿದ್ದಾನ. ಆದ್ರ ಇಷ್ಟು ಅವಸರಾ ಮಾಡ್ದೆ ಇನ್ನೂ ಸ್ವಲ್ಪ ತಡೀ ಅಂತ ನಾ ಹೇಳಿದ್ದೆ. ವೈಳ ಸಿಗಲಿಕ್ಕ ಬ್ಯಾಡಾ? ಅದೂ ಸಂಸ್ಕೃತ ಸಾಹಿತ್ಯದಂಥಾ  ವಿಷಯ ಎಷ್ಟು ಆಳಕ್ಕ ಇಳದ್ರೂ ಸಾಲದು. ಸುಮ್ನೆ ಎನೂ ಓದ್ಕೊಳ ಬರ್ತದಂತ ಹೆಳಕೊತ ಹೋದ್ರ ತಿಳಿದವ್ರು ನಾಕಜನಾ ಪಂಡಿತ್ರು ನಗಕಿಲ್ಲಾ?
                ಬಾಕಿಬಾಬ-ಸುಮ್ನೆ ಎನಾರ ಹೇಳಬ್ಯಾಡ, ನಿಂದು ನನಗೆ ಗೊತ್ತಿಲ್ಲ? ಜನ ನಗ್ತಾರಂತ. ನಕ್ರ ಅವ್ರ ಹಲ್ಲ ಕಂಡಾವು. ನೀ ಹೇಳೋದು ಹೇಳಿಬಿಡು. ನನಗ ಖಾತ್ರಿ ಅದಮರೀನ ಮಿಲೆ ಗಹರೆ ಪಾನೀ ಪೈಠ್’ (ಆಳವಾದ ನೀರಿಗೆ ಹೋಗದೆ ಸುಮ್ಮನೆ ಮುತ್ತು ಸಿಕ್ಕೀತೆ ಜ್ಞಾನ ಸಮುದ್ರದಲ್ಲಿ?)
                ಬೇಂದ್ರೆ-ಅಲ್ಲಪ್ಪಾ! ನೀ ನನ್ ಬಗ್ಗೆ ಭಾಳ ಶ್ಯಾಣ್ಯಾ ಅಂತ ತಿಳ್ಕೊಂಡದ್ದು ತಪ್ಪು. ಇಲ್ಲೆ ಬಂದಿರೋದು ಕುತ್ತು.  (ಸ್ವಲ್ಪ ತಡೆದು) ಇನ್ನ ನೀರಿಗ ಬಿದ್ದ ಮ್ಯಾಲ ಈಸಾಕ ಬೇಕ ಇಲ್ದಿದ್ರ ಮುಳ್ಗೋದ ಖಾತ್ರಿ. ಇದೊಂದ ಸಲ ಬಂದೀನಿ ಅಂತ ಎಷ್ಟೆಷ್ಟ ಸಾಧ್ಯ ಅಷ್ಟ ಮಾಡ್ತಿನಿ. ಮುಂದ ಮಾತ್ರ ಇಂಥಾ ಉಸಾಬರಿ ಮಾಡಬ್ಯಾಡ ಮೊದಲೆ ಹೇಳಿರತಿನಿ.
                ಬಾಕಿಬಾಬ-ಮುಂದಿನ ಮಾತ ಮುಂದ ನೋಡೋಣಂತ. ಈಗಂತೂ ಸದ್ಯ ಸಿಟ್ಟು ಬಿಟ್ಟು ಶಾಂತವಾಗಿ ಆದಷ್ಟು ಹೇಳು. ನನಗ ಖಾತ್ರಿ ಅದ ಎಲ್ಲ ಬೆಷ್ಟ ಆಗ್ತದ.
                ಬೇಂದ್ರೆ- ಅದೆಲ್ಲಾ ಇರ್ಲಿ. ಶಾಕುಂತಲ ಕಾಳಿದಾಸನ ವಿಷಯ ಒಂದ ಇದ್ರ ಸಾಕಿತ್ತು. ಅದ ಬಿಟ್ಟುಭಾಷಾ ಶಿಕ್ಷಣತ್ ಸಂಸ್ಕೃತ್ ಚೇ ಮದತ್ಇದಕ್ಕಾಗಿ ನನ್ನ ಅಧ್ಯಕ್ಷ ಮಾಡೋ ಜರೂರತನ ಏನಿತ್ತು. ಯಾಕ ನಿಂಗ ಬ್ಯಾರೆ ಯಾರೂ ಸಿಕ್ಕಿಲ್ಲಂತ ನನ್ನ ಹಿಡ್ದಿ ಏನ? (ಮತ್ತೆ ಎಲ್ಲರೂ ನಗೆ)
                ಬಾಕಿಬಾಬ-ಖರೇ ಹೇಳ ಬೇಕಂದ್ರ ವಿಷಯಕ್ಕ ಭಾಳ ಓದ್ಕೋ ಬೇಕೆಂಬಂಥಾ ಶ್ಯಾಣ್ಯಾರು ಯಾರೂ ಮುಂದ ಬರವಲ್ಲರು. ಭಾಳ ಟೈಮ ಕೇಳಿದ್ರು. ಅದಕ್ಕ ನಿನ್ನ ಕಡೆ ಬಂದೆ.
                ಬೇಂದ್ರೆ-(ವ್ಯಂಗ್ಯ) ನಾಳೆ ಎಲ್ಲರೂ ಹೇಳ್ತಾರಂತ ಮುದ್ಕನ್ನ ಹೀರೋ ಮಾಡ್ಲಿಕ ನಾನೇನ್ ದೇವಾನಂದ ಅಲ್ಲ ಬಿಡಪ್ಪಾ. (ನಿಟ್ಟುಸಿರು ಬಿಟ್ಟು) ಆಲೀಮಾ ಭೋಗಾಸಿ ಆಸಾವೇ ಸಾದರ (ಬಂದದ್ದೆಲ್ಲಾ ಬರಲಿ ಮನ ಸಿದ್ದವಾಗಿರಲಿ) ಎಂಬಂತೆ ನಿನ್ನ ಸಂಗತಿ ಕಟ್ಟಿಕೊಂಡ ಮ್ಯಾಲೆ ಬಂದದ್ದು ಭೋಗಿಸಬೇಕಲ್ಲಾ?
                ಬಾಕಿಬಾಬ-(ಜೋರಾಗಿ ಚಪ್ಪಾಳೆ ತಟ್ಟಿ ನಗುತ್ತಾ) ಯೋಗ್ಯ ಇದ್ದ ಶೂರಗ ಆನಿ (ಆನೆ) ರಾಜ್ಯದ ಮಾಲೀ (ಮಾಲೆ) ಹಾಕಿದ್ಹಂಗ ನಿನ್ನಂಥಾ ಅಭ್ಯಾಸೀ ವಿದ್ವಾನ್ ಕವಿಗೆ ಕರೀದ ಮತ್ಯಾರ ದನ ಕಾಯೋವಂಗ ಕರೀತಾರೇನು?
                ಬೇಂದ್ರೆ-(ನಗುತ್ತಾ ಹಣೆ ತಟ್ಟಿಕೊಳ್ಳುತ್ತಾ ಅಯ್ಯೋ ಯಪ್ಪ ಅಲ್ಲೆ ತಪ್ಪಾಗಿದ್ದು. ಅವ ಕಾಳಿದಾಸನ ನೋಡು ದನಾ ಕಾಯೋವನ್ನ ಸೊಕ್ಕಿನ ರಾಜಕುಮಾರಿಯ ರಾಜ್ಯದ ಮಂತ್ರಿ ದನಾಕಾಯೋವಂಗ ರಾಜವೇಶಾ ಹಾಕಿ ಕರ್ಕೊಂದ ಬರ್ಲಿಲ್ಲೇನು?
                ಬಾಕಿಬಾಬ-(ದೊಡ್ಡದಾಗಿ ಕೇಕೆ ಹಾಕಿ ಚಪ್ಪಾಳೆ ತಟ್ಟುತ್ತಾ) ಭಲೆ! ಭಲೆ! ಅಲ್ಲಣ್ಣಾ ದನಾ ಕಾಯವ್ನ ಗೋಪಾಲ ಕೃಷ್ಣ ಆಗಿದ್ದು. ಆಮ್ಯಾಲ ದನ ಕಾಯೋ ಹುಡುಗ ಕಾಳೀಮಾತಾ ಕೃಪಾದಲ್ಲೇ ಮಹಾ ಕವಿ ಕಾಳಿದಾಸ ಆಗಿದ್ದು ಮರೆತೆ ಏನು?
                ಬೇಂದ್ರೆ- ವ್ಹಾರೆವ್ಹಾ! ಮಗನ ಬಾಕಿ (ಬಾಕಿಬಾಬ) ನೀ ಬಾಂಕೆಲಾಲನ ಆಗಿರಬೇಕು ಯು.ಪಿ ಒಳಗ. ’ಬಾಂಕೇಬಾಬುಅಂದ್ರ ಮಹಾ ಫಟಿಂಗ ಹೀರೋ. ಅವ್ರಂಗ ನೀನೂ ಬೇಂದ್ರೆನ ಮಾತಿನ್ಯಾಗ ಬುಟ್ಟಿಗ ಹಾಕ್ಕೋಂಡ ಬಿಟ್ಟೆ. ಅಲ್ಲ ಬಾಕಿ ಕವಿ ನೀನಾ ಏನೋ ಅಂದುಕೊಂಡಕ್ಕಿಂತ ಶಾಣ್ಯಾ ಪಂಡಿತ ಇದ್ದಿ ನೋಡು.
                ಬಾಕಿಬಾಬ-ಈಗ ಗೊತ್ತಾಯ್ತಲ್ಲ ಮಾರಾಯ. ದಯ ಮಾಡಿ ಶಾಂತ ರೀತಿಯಿಂದ ಬಂದ ಒಪ್ಪಿಕೊಂಡು ಕೆಲ್ಸಾ ಮುಗ್ಸಿಕೊಂಡು ಹೋಗು.
                ಬೇಂದ್ರೆ-ಅಂದ್ರ ಹೋಗು ಅಂತಿಯೇನು? ಗೋವಾದಾಗ ಇರ್ಬಾರ್ದೇನು?
                ಬಾಕಿಬಾಬ- ಅಲ್ಲೋ ಮಾರಾಯ. ನಿನ್ನ ತಮ್ಮ ಆಗಿ ನಿನಗ ಹೋಗ ಅನ್ನೋಕ ನಾನ್ಯಾರು? ನಿಂದ ಮನಿ. ಎಲ್ಲಾ ನಿಂದ. ಬೇಕಾದ್ರ ನನ ಹೋಗ್ತಿನಿ.
                ಬೇಂದ್ರೆ- ಅಯ್ಯೋ ನನ್ನಪ್ಪಾ. ಸುಮ್ನೆ ಮತಿಗ ಬಿದ್ದ ಹೇಳ್ದೆ ಅಷ್ಟೆ. ನೀ ಹೇಳಿದಂಗ ಎಲ್ಲಾ ಆಗ್ಲಿ ನಡಿ. (ಒಟ್ಟಿಗೆ ಕಾರಿನಿಂದ ಸಭೆಗೆ.)
(ಮುಂದೆ ಶಾಕುಂತಲ - ವ್ಯಾಖ್ಯಾನಗಳು ಅದ್ಭುತವಾಗಿ ನಿರೀಕ್ಷೆಗೂ ಮೀರಿ ಸಫಲವಾದದ್ದು ಸರ್ವ ವಿದಿತ)

ನಾನಾ ಕುಲಕರ್ಣಿ

1 comment:

  1. ಇಬ್ಬರು ಹಿರಿಯರ ಸ್ವಾರಸ್ಯಪೂರ್ಣ ಸಂಭಾಷಣೆಯನ್ನು ನೆನಪಿಸಿಕೊಂಡು, ನಮ್ಮೆದುರಿಗೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು.

    ReplyDelete