Monday, August 29, 2011

ಭಗವದ್ಗೀತೆ -ಧರ್ಮ


ಲೇಖಕರು:
ಮಹಾಬಲ ಭಟ್, ಸಂಸ್ಕೃತ ಉಪನ್ಯಾಸಕರು, ಗೋವಾ

ಉದಯವಾಣಿಯ ಅಗಸ್ಟ್ ೨೧ರ ಸಂಚಿಕೆಯಲ್ಲಿ ಪ್ರಕಟವಾದ ಎಸ್. ಎನ್. ಬಾಲಗಂಗಾಧರ್ ಅವರ ’ಧರ್ಮದ ನಿಜ ಅರ್ಥವನ್ನು ಹುಡುಕುತ್ತ.’ ಎಂಬ ಲೇಖನ ಸಮತೋಲಿತವಾದ ಬರಹ. ’ಧರ್ಮ’ ಎಂಬ ಪದದ ಅರ್ಥವನ್ನು ಸ್ವಲ್ಪಮಟ್ಟಿಗೆ ವಿಸ್ತರಿಸುವ ಪ್ರಯತ್ನ ನನ್ನದು.

ನಾವು ಯಾವುದೇ ಶಬ್ದವನ್ನು ಭಾಷಾಂತರ ಮಾಡಿದಾಗ ಅದು ಮೂಲ ಶಬ್ದಕ್ಕೆ ಅತ್ಯಂತ ಸಮೀಪವಾದ ಅರ್ಥವನ್ನು ನೀಡುವುದೇ ಹೊರತು ಮೂಲ ಶಬ್ದದ ಎಲ್ಲ ಭಾವಗಳನ್ನೂ ಒಳಗೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಸಂಸ್ಕೃತ ಶಬ್ದಕ್ಕೆ ಅದು ನಿರ್ದೇಶಿಸುವ ವಸ್ತುವಿನ ಹೊರತಾದ ಅರ್ಥವೊಂದಿರುತ್ತದೆ. ಉದಾ: ’ಉದಕಮ್’ ಎಂಬ ಪದವನ್ನು ಕನ್ನಡಕ್ಕೆ ಭಾಷಾಂತರಿಸಿದಾಗ ’ನೀರು’ ಎಂದು ಬರೆಯುತ್ತೇವೆ. ಈ ಭಾಷಾಂತರಪದವು ’ಉದಕಮ್’ ಎಂಬ ಶಬ್ದದಿಂದ ಸೂಚಿಸಲ್ಪಡುವ ವಸ್ತುವನ್ನು ನಿರ್ದೇಶಿಸುತ್ತದೆಯೇ ಹೊರತು ಮೂಲ ಶಬ್ದ ತಿಳಿಸಿಕೊಡುವ ’ಒದ್ದೆ ಮಾಡುವ ಗುಣವುಳ್ಳದ್ದು’ ಎಂಬ ಅರ್ಥವನ್ನು ಹೇಳುವುದಿಲ್ಲ. ಅದೇ ರೀತಿಯಲ್ಲಿ ’ರಿಲಿಜನ್’ ಎಂಬ ಆಂಗ್ಲಪದವನ್ನು ಕನ್ನಡಕ್ಕೆ ಅಥವಾ ಭಾರತೀಯ ಭಾಷೆಗಳಿಗೆ ಭಾಷಾಂತರಿಸುವಾಗ ಬೇರೆ ಬೇರೆಯವರು ಬೇರೆ ಬೇರೆ ಶಬ್ದಗಳನ್ನು ಉಪಯೋಗಿಸುತ್ತಾರೆ. ಕೆಲವರು ’ಮತ’ ಎಂದರು, ಇನ್ನು ಕೆಲವರು ’ಧರ್ಮ’ ಎಂದರು. ’ಮತ’ ಎಂಬ ಶಬ್ದಕ್ಕೆ ’ಜ್ಞಾನ’ ಎಂದರ್ಥ. ’ಅಭಿಪ್ರಾಯ’ ಎಂಬರ್ಥದಲ್ಲಿಯೂ ಇದರ ಬಳಕೆ ಇದೆ. ಹಾಗಾದರೆ ಮುಸ್ಲಿಂ, ಕ್ರಿಶ್ಚಿಯನ್ ಇತ್ಯಾದಿಗಳನ್ನು ಮತಗಳು ಎಂದು ಹೇಳಬಹುದೆ?
’ರಿಲಿಜನ್’ ಎಂಬ ಶಬ್ದಕ್ಕೆ ಧರ್ಮ ಎಂಬ ಶಬ್ದದ ಬಳಕೆಯನ್ನು ಬಹಳ ಮಂದಿ ವಿರೋಧಿಸುತ್ತಾರೆ. ಧರ್ಮ ಪದದ ವ್ಯಾಪ್ತಿ ಅತ್ಯಂತ ವಿಶಾಲವಾದದ್ದು ಎಂಬುದು ಅದಕ್ಕೆ ಕಾರಣ. ’ಧಾರಣಾತ್ ಧರ್ಮ ಇತ್ಯಾಹು:’ ಎಂಬುದು ಧರ್ಮ ಪದಕ್ಕೆ ಪ್ರಾಜ್ಞರು ಕೊಟ್ಟಿರುವ ವ್ಯಾಖ್ಯೆ. ಅಂದರೆ ಧರಿಸಲು ಯೋಗ್ಯವಾಗಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾದದ್ದು ಎಂದರ್ಥ. ಸುಡುವುದು ಬೆಂಕಿಯ ಧರ್ಮ ಎಂಬಲ್ಲಿ ಧರ್ಮ ಶಬ್ದಕ್ಕೆ ’ಸ್ವಭಾವ’ ಎಂದರ್ಥ. ಜ್ಞಾನಾರ್ಜನೆ ವಿದ್ಯಾರ್ಥಿಯ ಧರ್ಮ ಎಂಬಲ್ಲಿ ಈ ಶಬ್ದವೇ ’ಕರ್ತವ್ಯ’ ಎಂಬರ್ಥವನ್ನು ಕೊಡುತ್ತದೆ. ನನ್ನ ಅಭಿಪ್ರಾಯದಲ್ಲಿ ಈ ಎಲ್ಲ ಅರ್ಥಗಳನ್ನು ’ರಿಲಿಜನ್’ ಗೆ ಅನ್ವಯಿಸಬಹುದು. ಯಾವುದೇ ರಿಲಿಜನ್ ಜೀವನದಲ್ಲಿ ಮಾಡಬಾರದ ಕೆಲಸಗಳನ್ನು ಮಾಡಲು ಹೇಳುವುದಿಲ್ಲ. ಮಾನವತೆ, ಸಚ್ಚಾರಿತ್ರ್ಯ ಮುಂತಾದ ಸದ್ಗುಣಗಳನ್ನೇ ಎಲ್ಲ ರಿಲಿಜನ್‌ಗಳೂ ಬೋಧಿಸುತ್ತವೆ. ಹಿಂಸೆಯನ್ನು ಯಾವುದಾದರೂ ರಿಲಿಜನ್ ಬೋಧಿಸುತ್ತದೆ ಎಂದು ಯಾರಾದರೂ ಹೇಳಿದರೆ ಅದು ಅರ್ಥೈಸಿಕೊಳ್ಳುವಿಕೆಯಲ್ಲಿರುವ ದೋಷ. ಅಂದರೆ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಒಳ್ಳೆಯ ಗುಣಗಳನ್ನು ಬೋಧಿಸುವುದೇ ಎಲ್ಲ ರಿಲಿಜನ್‌ಗಳ ಉದ್ದೇಶ. ಇನ್ನೊಂದರ್ಥದಲ್ಲಿ ಎಲ್ಲ ರಿಲಿಜನ್‌ಗಳು ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾದವುಗಳೇ. ಹಾಗಾಗಿ ಅವು ’ಧರ್ಮ’.
’ಸ್ವಭಾವ’ ಶಬ್ದಕ್ಕೆ ಸ್ವ ಭಾವ ಅಂದರೆ ತನ್ನ ಭಾವ ಎಂದರ್ಥ. ನಾನು ಹಾಗೂ ನನ್ನ ಭಾವ ಬೇರ್ಪಡಲು ಸಾಧ್ಯವಿಲ್ಲ. ಹಾಗೆಯೇ ರಿಲಿಜನ್‌ನಲ್ಲಿ ಹೇಳಿರುವ ವಿಚಾರಗಳು ನಮ್ಮ ಜೀವದಲ್ಲಿ ಪ್ರತ್ಯೇಕವಾಗಿ ಇರಬಾರದು ಅದು ನಮ್ಮ ಸ್ವಭಾವವೇ ಆಗಬೇಕು ಹಾಗಾಗಿ ರಿಲಿಜನ್ ಕೂಡ ಧರ್ಮ.
ರಿಲಿಜನ್ ನಮಗೆ ನಮ್ಮ ಕರ್ತವ್ಯವನ್ನು ತಿಳಿಸಿಕೊಡುತ್ತದೆ. ರಿಲಿಜನ್ನಿನಲ್ಲಿರುವ ಆಚರಣೆಗಳು ಐಚ್ಛಿಕ ಅಂತಿದ್ದರೂ ನಿಜವಾಗಿ ಅವು ಅನಿವಾರ್ಯವಾಗಿ ಮಾಡಬೇಕಾದ ಆಚರಣೆಗಳು. ಅವು ನಮ್ಮ ಕರ್ತವ್ಯದ ಒಂದು ಭಾಗ. ಈ ಅರ್ಥದಲ್ಲಿಯೂ ರಿಲಿಜನ್ ಧರ್ಮ.
ಹೀಗೆಂದಾಕ್ಷಣ ’ಧರ್ಮ’ ಎಂಬ ಪದವನ್ನು ’ರಿಲಿಜನ್’ ಎಂದು ಭಾಷಾಂತರಿಸಬಹುದು ಎಂಬುದು ನನ್ನ ಅಭಿಪ್ರಾಯವಲ್ಲ. ಧರ್ಮ ಶಬ್ದದ ವ್ಯಾಪ್ತಿ ’ರಿಲಿಜನ್’ ಎಂಬ ಶಬ್ದದ ವ್ಯಾಪ್ತಿಗಿಂತ ಬಹಳ ವಿಶಾಲವಾದದ್ದು. ಒಂದರ್ಥದಲ್ಲಿ ’ಧರ್ಮ’ ಎಂಬ ಪದವು ಭಾಷಾಂತರಿಸಲು ಸಾಧ್ಯವಿಲ್ಲದ ಪದ. ಆದರೆ ರಿಲಿಜನ್ ಪದವನ್ನು ಧರ್ಮ ಎಂದು ಭಾಷಾಂತರಿಸಲು ಅಡ್ಡಿಯಿಲ್ಲ ಎಂಬುದು ನನ್ನ ಅಭಿಪ್ರಾಯ.
ಇಸ್ಲಾಂ, ಕ್ರಿಶ್ಚಿಯಾನಿಟಿ, ಜೂಡಾಯಿಸಂ ಗಳು ಮಾತ್ರ ರಿಲಿಜನ್ನುಗಳು, ಹಿಂದೂ, ಬೌದ್ಧ ಇವೆಲ್ಲ ರಿಲಿಜನ್ನುಗಳಲ್ಲ ಎಂಬ ವಾದವೂ ಕೂಡ ಚರ್ಚಾಸ್ಪದ. ಯಾಕೆಂದರೆ ಈ ವಾದವನ್ನು ಹೂಡುವವರು ಹಿಂದೂಗಳು ಮಾತ್ರ. ಅದಕ್ಕೆ ಕಾರಣ ಉಳಿದೆಲ್ಲ ರಿಲಿಜನ್ನುಗಳು ಒಬ್ಬ ವ್ಯಕ್ತಿಯಿಂದ ಆರಂಭಿಸಲ್ಪಟ್ಟಂಥವು ಎಂಬುದೆ ಇರಬಹುದು. ವ್ಯತ್ಯಾಸ ಇಷ್ಟೆ ನಾವು ದೇವರಿಂದಲೇ ಧರ್ಮ ಆರಂಭಿಸಲ್ಪಟ್ಟಿತು ಎಂದು ಹೇಳುತ್ತೇವೆ. ಅವರು ಧರ್ಮವನ್ನು ಆರಂಭಿಸಿದವರನ್ನೇ ದೇವರೆಂದು ನಂಬುತ್ತಾರೆ. ಹಿಂದೂ ಎಂಬುದು ಒಂದು ’ಸಂಪ್ರದಾಯ’ ಎಂದು ಹೇಳಿದರೂ ಅದು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ’ಕೊಡಲ್ಪಟ್ಟ’ (ಸಂ-ಪ್ರದಾಯ) ಜೀವನಪದ್ಧತಿ ಎಂಬಷ್ಟೇ ಅರ್ಥವನ್ನು ಕೊಡುತ್ತದೆ. ಆಗ ಭಾಗವತ ಸಂಪ್ರದಾಯ, ಶೈವ ಸಂಪ್ರದಾಯ ಇವೆಲ್ಲ ಸ್ವತಂತ್ರವಾಗಿ ’ಹಿಂದೂ’ ಎಂಬ ಒಂದೇ ಛತ್ರದಡಿ ಬರುವುದಿಲ್ಲ. ಅಷ್ಟೇ ಅಲ್ಲ ಈ ಹಿಂದೂ ಎಂಬ ಪದ ಇತ್ತೀಚಿನದ್ದು. ’ವೈದಿಕ ಧರ್ಮ’ವೇ ಕೆಲವು ಬದಲಾವಣೆಗಳೊಂದಿಗೆ ಹಿಂದೂ ಧರ್ಮವಾಗಿ ಅನುಸರಿಸಲ್ಪಡುತ್ತದೆ. ಭಾರತದಲ್ಲಿರುವ ಎಲ್ಲ ಸಾಮ್ಯತೆ ಇರುವ ಸಂಪ್ರದಾಯಗಳನ್ನು ಒಟ್ಟುಗೂಡಿಸಿ ’ಹಿಂದೂಯಿಸಂ’ ಎಂದು ಕರೆದರೆ ಅದು ತಪ್ಪೇನಲ್ಲ. ಈಗ ಕ್ರಿಶ್ಚಿಯಾನಿಟಿ, ಇಸ್ಲಾಂ ಮುಂತಾದ ರಿಲಿಜನ್ನುಗಳ ಮಧ್ಯೆ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ’ಹಿಂದೂ’ ಜೀವನಪದ್ಧತಿಗೂ ’ರಿಲಿಜನ್’ ರೂಪನೀಡಿ ವ್ಯವಸ್ಥಿತ ಸಂಘಟನೆಯನ್ನಾಗಿ ಮಾಡುವುದು ಆವಶ್ಯಕವೇನೋ ಎನಿಸುತ್ತದೆ.
ಹಿಂದೂಗಳ ಧರ್ಮಗ್ರಂಥ ಭಗವದ್ಗೀತೆ ಎಂದು ಉದ್ಘೋಷಿಸಿದವರಾರೋ ಗೊತ್ತಿಲ್ಲ. ಪ್ರಾಯಶ: ವಿವೇಕಾನಂದರು ಚಿಕಾಗೊ ಸಮ್ಮೇಳನದಲ್ಲಿ ಭಗವದ್ಗೀತೆಯು ಹಿಂದೂಗಳ ಪವಿತ್ರ ಗ್ರಂಥ ಎಂದು ಪ್ರತಿಪಾದಿಸಿರುವುದರಿಂದ ಎಲ್ಲರಲ್ಲಿಯೂ ಆ ಅಭಿಪ್ರಾಯ ಮೂಡಿರಬೇಕು. ಭಗವದ್ಗೀತೆ ಒಂದು ಸ್ವತಂತ್ರ ಗ್ರಂಥವಲ್ಲ ಅದು ಮಹಾಭಾರತದ ಒಂದು ಚಿಕ್ಕ ಭಾಗ ಎಂಬುದನ್ನು ನಾವು ಗಮನಿಸಬೇಕು. ಭಗವದ್ಗೀತೆಯಲ್ಲಿ ಹೇಳಿರುವ ವಿಚಾರಗಳು ವೇದಗಳಲ್ಲೂ ಉಪನಿಷತ್ತುಗಳಲ್ಲೂ, ಬ್ರಹ್ಮಸೂತ್ರಗಳಲ್ಲೂ ಪುರಾಣಾದಿಗ್ರಂಥಗಳಲ್ಲೂ ಕಾಣಸಿಗುತ್ತವೆ. ಅಂತಿರುವಾಗ ಭಗವದ್ಗೀತೆಯೊಂದನ್ನೇ ಅದು ಭಗವಾನ್ ಕೃಷ್ಣನಿಂದಲೇ ಉಪದಿಷ್ಟವಾದದ್ದು ಎಂಬ ಒಂದೇ ಕಾರಣಕ್ಕಾಗಿ ಹಿಂದೂಗಳ ಪವಿತ್ರ ಗ್ರಂಥ ಎಂದು ಹೇಳುವುದು ಸರಿಯಲ್ಲ.
ಭಗವದ್ಗೀತೆಯನ್ನೂ ಕುರಾನನ್ನೂ ಬೈಬಲ್ಲನ್ನೂ ಶಾಲೆಗಳಲ್ಲಿ ಖಂಡಿತವಾಗಿಯೂ ಬೋಧಿಸಬಹುದು. ಮಾನವ ಜೀವನಕ್ಕೆ ಬೇಕಾದ ಎಲ್ಲ ಮೌಲ್ಯಗಳೂ ಈ ಗ್ರಂಥಗಳಲ್ಲಿವೆ. ಆದರೆ ಬೋಧಿಸುವಾಗ ಎಚ್ಚರವಹಿಸುವುದು ಅವಶ್ಯ. ಅಲ್ಲಿರುವ ದೇವರ ಸ್ತುತಿ, ಆಚರಣೆಯ ವಿಧಾನ ಪೂಜೆಯ ಪದ್ಧತಿ ಇತ್ಯಾದಿಗಳನ್ನು ಬೋಧಿಸುವ ಅವಶ್ಯಕತೆಯಿಲ್ಲ. ಯಾವುದನ್ನೇ ಬೋಧಿಸುವಾಗಲೂ ಇದು ಉಳಿದೆಲ್ಲವುದಕ್ಕಿಂತ ಶ್ರೇಷ್ಠ ಉಳಿದವೆಲ್ಲ ಕನಿಷ್ಠ ಎಂಬ ಭಾವ ಬರದಂತೆ ನೋಡಿಕೊಳ್ಳುವುದು ಅನಿವಾರ್ಯ. ಜೀಸಸ್ ಈಸ್ ಗ್ರೇಟ್, ಅಲ್ಲಾ ಹೋ ಅಕ್ಬರ್, ಹರಿಯೇ ಸರ್ವೋತ್ತಮ ಮುಂತಾದ ವಾಕ್ಯಗಳೆಲ್ಲ ಅಲ್ಲಿ ಬರದಂತೆ ನೋಡಿಕೊಳ್ಳಬೇಕು. ಧರ್ಮಗ್ರಂಥಗಳಲ್ಲಿರುವ ಮೌಲ್ಯವನ್ನು ಅನೌಪಚಾರಿಕವಾಗಿ ಆ ಧರ್ಮಕ್ಕೆ, ಧರ್ಮಗ್ರಂಥಕ್ಕೆ ಹೆಚ್ಚು ಒತ್ತು ಕೊಡದೆ ಮತಾಂತರ ಮಾಡುವ ಉದ್ದೇಶ ಇಲ್ಲದೆ ಬೋಧಿಸಬೇಕು. ಅಭಿಯಾನಗಳ ಹಿಂದೆ ಮೌಲ್ಯ ಪ್ರತಿಪಾದನೆಯ ಜೊತೆಗೆ ಇರುವ ಆ ಗ್ರಂಥಕ್ಕೆ ಪ್ರಚಾರ ಒದಗಿಸಬೇಕೆಂಬ ಸಣ್ಣ ಉದ್ದೇಶ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ.
ಭಗವದ್ಗೀತೆ ಅನೇಕ ಮಾರ್ಗಗಳನ್ನು ಒಂದೆಡೆ ತಂದು ಆಯ್ಕೆಯನ್ನು ಸಾಧಕನಿಗೆ ಬಿಡುತ್ತದೆ. ಹಾಗಾಗಿ ಯಾರಾದರೂ ಭಗವದ್ಗೀತೆಯನ್ನು ಅನುಸರಿಸಬಹುದು. ಅದು ’ಹಿಂದುಯಿಸಂ’ನ್ನು ಬೋಧಿಸುವುದಿಲ್ಲ ಎಂಬ ಅಭಿಪ್ರಾಯವನ್ನು ಲೇಖಕರು ವ್ಯಕ್ತಪಡಿಸಿದ್ದಾರೆ. ಆನಂದವನ್ನು ಹೊಂದುವುದೇ ಭಗವದ್ಗೀತೆಯಲ್ಲಿ ಪ್ರತಿಪಾದಿತವಾದ ಮಾರ್ಗಗಳ ಗುರಿಯಾದರೂ ಆನಂದಾನ್ವೇಷಿಗಳಾದ ಕ್ರೈಸ್ತರಾಗಲೀ, ಮುಸ್ಲೀಮರಾಗಲೀ ತಮ್ಮ ಹಾದಿಯನ್ನು ಕಂಡುಕೊಳ್ಳಲು ಭಗವದ್ಗೀತೆಯನ್ನು ಆಶ್ರಯಿಸುವುದಿಲ್ಲ (ಇದಕ್ಕೆ ಅಪವಾದರೂಪವಾಗಿ ಬೆರಣಿಕೆಯಷ್ಟು ಮಂದಿ ಇರಬಹುದು). ಇದಕ್ಕೆ ಕಾರಣ ಅವರಿಗೆ ತಮ್ಮ ಧರ್ಮಗ್ರಂಥಗಳೇ ಮಾರ್ಗದರ್ಶನ ಮಾಡಲು ಸಮರ್ಥವಾಗಿವೆ ಎಂಬ ನಂಬಿಕೆಯಿರುತ್ತದೆ. ಅಷ್ಟೇ ಅಲ್ಲ ಭಗವದ್ಗೀತೆಯ ಹಿನ್ನೆಲೆಯಲ್ಲಿ ಹಿಂದೂಗಳು ಪೂಜಿಸುವ ’ಕೃಷ್ಣ’ ಎಂಬ ದೇವನಿದ್ದಾನೆ. ಅವನು ’ತಾನೇ ಪರಮಾತ್ಮ ಎಲ್ಲ ಧರ್ಮಗಳನ್ನೂ ಪರಿತ್ಯಜಿಸಿ ನನಗೇ ಶರಣು ಬಾ, ನನಗೇ ನಮಸ್ಕಾರ ಮಾಡು, ನಾನು ನಿನ್ನನ್ನು ಉದ್ಧರಿಸುತ್ತೇನೆ.’ ಎಂದೆಲ್ಲ ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದಾನೆ. ಅಂತಿರುವಾಗ ಬೇರೆ ರಿಲಿಜನ್ನಿನವರಿಗೆ ಇದು ಹಿಂದೂಗಳ ಪವಿತ್ರ ಗ್ರಂಥ, ಅದನ್ನು ಅನುಸರಿಸಿದರೆ ನಮ್ಮ ರಿಲಿಜನ್ನಿಗೆ ದ್ರೋಹ ಬಗೆದಂತಾಗುತ್ತದೆ ಎಂದು ಅನಿಸುವುದು ಸಹಜ ತಾನೆ?
ಒಂದು ಕಹಿಯಾದರೂ ಸತ್ಯವಾದ ವಿಚಾರವನ್ನು ಪ್ರತಿಪಾದಿಸಲೇಬೇಕಾಗಿದೆ. ದೇಶಕ್ಕಾಗಿ ಹೋರಾಡುವುದು, ದೇಶಕ್ಕಾಗಿ ಕೆಲಸಮಾಡುವುದು ಇವುಗಳ ಜೊತೆಗೆ ಈ ದೇಶದಲ್ಲಿ ಅನೇಕ ಶತಮಾನಗಳಿಂದ ನಡೆದುಬಂದ ಸಂಸ್ಕೃತಿ ಸಂಪ್ರದಾಯಗಳನ್ನು ತಿಳಿದುಕೊಳ್ಳುವುದು, ಗೌರವಿಸುವುದು, ಪುರಾತನವಾದ ಗ್ರಂಥಗಳ, ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವುದೂ ದೇಶಭಕ್ತಿಯ ಅಂಗ. ರಾಮಾಯಣ ಮಹಾಭಾರತ, ವೇದ ಪುರಾಣಗಳು ಸಂಸ್ಕೃತ ಭಾಷೆ ಇವೆಲ್ಲ ಕೇವಲ ಹಿಂದೂಗಳ ಸ್ವತ್ತಲ್ಲ. ಅದು ಭಾರತೀಯರೆಲ್ಲರ ಆಸ್ತಿ. ಹಿಂದೂಗಳು ಅವುಗಳನ್ನು ಪಠಿಸುತ್ತಿರಬಹುದು ಅಥವಾ ಅವುಗಳನ್ನು ಅನುಸರಿಸುತ್ತಿರಬಹುದು ಹಾಗೆಂದಾಕ್ಷಣ ಭಾರತದಲ್ಲಿ ಹುಟ್ಟಿದ, ತಾನೊಬ್ಬ ಭಾರತೀಯ ಪ್ರಜೆ ಎಂದುಕೊಳ್ಳುತ್ತಿರುವ ಕ್ರೈಸ್ತನಾಗಲೀ, ಮುಸ್ಲೀಮನಾಗಲಿ ಅದನ್ನು ತಾನು ಓದುವ ಗೌರವಿಸುವ ಆವಶ್ಯಕತೆಯಿಲ್ಲ ಎಂದರೆ ಅದು ದೇಶದ್ರೋಹದ ಮಾತೇ ಆದೀತು. ಇನ್ನ್ಯಾವುದೋ ದೇಶದ ಸಂಸ್ಕೃತಿಯನ್ನು, ಮತ್ತ್ಯಾವುದೋ ದೇಶದಲ್ಲಿ ಹುಟ್ಟಿದ ರಿಲಿಜನ್ನನ್ನು ಅನುಸರಿಸಿಸುವುದು ತಪ್ಪಲ್ಲ. ಆದರೆ ಅದು ಅನಿವಾರ್ಯವಲ್ಲ. ಈ ದೇಶದ ಪ್ರಜೆಯಾಗಿ ಈ ದೇಶದ ಸಂಸ್ಕೃತಿಯ ಕನ್ನಡಿಗಳಂತಿರುವ ಗ್ರಂಥಗಳನ್ನೂ ವೈಚಾರಿಕ ಸರಣಿಯನ್ನೂ ಆಚರಿಸದಿದ್ದರೂ ವಿರೋಧಿಸದೆ ಗೌರವಿಸುವುದು ಎಲ್ಲ ರಿಲಿಜನ್ನುಗಳ ಬಂಧುಗಳ ಕರ್ತವ್ಯವೇ ಹೌದು. ಅದಿಲ್ಲದಿದ್ದರೆ ಅದು ಅವರ ಭಾರತೀಯತೆಗೆ ಕುಂದು ತರುವುದು ಕಹಿಯಾದರೂ ಸತ್ಯ.

ಲೇಖಕರು:
ಮಹಾಬಲ ಭಟ್, ಸಂಸ್ಕೃತ ಉಪನ್ಯಾಸಕರು, ಗೋವಾ

Monday, August 15, 2011

ಗಣೇಶ ಚತುರ್ಥಿ ಮತ್ತು ಪರಿಸರ ಪ್ರಜ್ಞೆ

ಮಹಾಬಲ ಭಟ್

ಭಾರತೀಯ ಸಂಸ್ಕೃತಿ ಮತ್ತು ಪ್ರಕೃತಿ ಪರಸ್ಪರ ಬೆಸೆದುಕೊಂಡಿವೆ. ನಮ್ಮ ಜೀವನ ಶೈಲಿ ಪ್ರಕೃತಿಗೆ ಅನುಕೂಲವಾಗಿರಬೇಕೆಂಬುದು ನಮ್ಮ ಪೂರ್ವಜರ ಕಲ್ಪನೆಯಾಗಿತ್ತು. ಅವರ ಜೀವನದ ಪ್ರತಿಯೊಂದು ಹೆಜ್ಜೆಯೂ ಪ್ರಕೃತಿಯ ಆರಾಧನೆಯ ಜೊತೆಗೂಡಿ ಇರುತ್ತಿತ್ತು. ಪ್ರಕೃತಿವಿರುದ್ಧವಾದ ಕೃತಿಯನ್ನೇ ಪಾಪವೆಂದು ಕರೆಯುತ್ತಿದ್ದರು. ಪ್ರಕೃತಿಯ ವಿಕೋಪಗಳಿಗೆ ಹೆದರಿ ಅವನ್ನು ದೇವರೆಂದು ಕರೆದು ಪೂಜಿಸುತ್ತಿದ್ದರು.

ವೈದಿಕ ಕಾಲದ ದೇವತೆಗಳೆಲ್ಲ ಪ್ರಕೃತಿದೇವತೆಗಳು. ಇಂದ್ರ ಮಳೆಯ ದೇವತೆ, ಪರ್ಜನ್ಯ ಮೋಡದ ದೇವತೆ, ವಾಯು ಗಾಳಿಯ ಒಡೆಯ, ಅಗ್ನಿ ಬೆಂಕಿಯ ಅಧಿದೇವತೆ ಹೀಗೆ ಪ್ರಕೃತಿಯ ಒಂದೊಂದು ಶಕ್ತಿಯನ್ನೂ ಒಂದೊಂದು ದೇವತೆಯಂತೆ ಕಂಡು ಸ್ತುತಿಸುವ ಪರಿಪಾಠ ಋಗ್ವೇದ ಕಾಲದಲ್ಲಿಯೇ ಆರಂಭವಾಯಿತು. ಬೆಳಿಗ್ಗೆ ಉಷೆಯ ಸ್ಮರಣೆಯೊಂದಿಗೆ ಆರಂಭವಾಗುತ್ತಿದ್ದ ದಿನಚರಿ ಸೂರ್ಯ, ಚಂದ್ರ, ಗ್ರಹಗಳು ಹೀಗೆ ಎಲ್ಲ ಪ್ರಕೃತಿಶಕ್ತಿಗಳನ್ನು ಆರಾಧಿಸಿ ರಾತ್ರಿಯ ಪೂಜೆಯೊಂದಿಗೆ ಮುಗಿಯುತ್ತಿತ್ತು. ಇದನ್ನೆಲ್ಲ ಕೇವಲ ಹೆದರಿಕೆಯಿಂದ ಮಾಡಿದ್ದಲ್ಲ. ಪ್ರಕೃತಿಯನ್ನು ಪ್ರೀತಿಸುತ್ತಿದ್ದ, ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಸಾಧಿಸಿದ್ದ ಸುಸಂಸ್ಕೃತ ಸಮಾಜದ ಜೀವನಕ್ರಮ ಇದಾಗಿತ್ತು.

ನಮ್ಮ ಹಬ್ಬಗಳೂ ಅಷ್ಟೇ. ಪ್ರಕೃತಿಯೊಡನೆಯ ನಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತಿದ್ದವು. ಸೂರ್ಯನ ಗತಿ ಬದಲಾದರೆ ಸಂಕ್ರಾಂತಿ ಹಬ್ಬ, ವಸಂತನ ಆಗಮನದಿಂದ ಚಿಗುರೆಲೆಗಳೊಡೆದರೆ ಯುಗಾದಿ ಹಬ್ಬ, ಹಾವನ್ನು ಪೂಜಿಸುವ ನಾಗಪಂಚಮಿ, ಮಣ್ಣಿನ ಆನೆಯ ಮೂರ್ತಿಯನ್ನು ಪೂಜಿಸುವ ಗಣೇಶ ಚತುರ್ಥಿ, ತುಲಸಿಯ ಪೂಜೆಗೆ ತುಲಸಿ ವಿವಾಹ, ಅಭ್ಯಂಗಸ್ನಾನಕ್ಕಾಗಿ ನರಕ ಚತುರ್ದಶಿ, ಗೋವುಗಳನ್ನು ಪೂಜಿಸುವ ಗೋಪೂಜೆ... ಒಂದೇ ಎರಡೇ.. ಯಾವ ಹಬ್ಬದಲ್ಲಿಯೂ ಪ್ರಕೃತಿಯ ಪೂಜೆ ಇಲ್ಲವೆಂದಿಲ್ಲ.

ಗಣೇಶ ಚತುರ್ಥಿ ಹತ್ತಿರ ಬರುತ್ತಿದೆ. ನಾವು ಎಂದಾದರೂ ಯೋಚಿಸಿದ್ದೇವಾ ಗಣೇಶ ಚತುರ್ಥಿಯ ಆಚರಣೆ ಹೇಗೆ ಯಾಕೆ ಎಂದು ?

ಗಣಪತಿ ಪ್ರಥ್ವಿಯ ಸೃಷ್ಟಿಗಿಂತ ಮೊದಲೇ ಇದ್ದ ಪರಬ್ರಹ್ಮತತ್ತ್ವ. ಆನೆಯ ಘೀಳಿಡುವಿಕೆಯಂತಹ ಓಂಕಾರ ನಾದ ಹೊರಹೊಮ್ಮುತ್ತಿರುವುದರಿಂದ ಆ ತತ್ತ್ವಕ್ಕೆ ಆನೆಯ ಮುಖದ ಸಾಕಾರರೂಪವನ್ನು ಕೊಡಲಾಯಿತು. ಉಪನಿಷತ್ತಿನಲ್ಲಿ ಗಣಪತಿಯನ್ನು ತ್ವಂ ಭೂಮಿ: ಆಪೋ ಅನಲೋ ಅನಿಲೋ ನಭ: ಎಂದು ಸ್ತುತಿಸಿದ್ದಾರೆ. ಅಂದರೆ ಈ ಪ್ರಪಂಚಕ್ಕೆ ಆಧಾರಭೂತವಾಗಿರುವ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಗಳೆಂಬ ಪಂಚಭೂತಗಳೇ ನೀನು. ಅಂತಹ ವಿನಾಯಕನ ಪೂಜೆಗೆ ಪಂಚಭೂತ ವಿಶಿಷ್ಟವಾದ ವಸ್ತುಗಳೇ ಇರಬೇಕು. ಈ ಜಗತ್ತಿನ ಪ್ರತಿಯೊಂದು ಜೀವಿಯ ಶರೀರವೂ ಪಂಚಭೂತಗಳಿಂದಲೇ ಆಗಿವೆಯಾದರೂ ದೇಹಕ್ಕೆ ಸಾಕಾರ ರೂಪವನ್ನು ಕೊಡುವುದು ಪೃಥ್ವಿ ಅಂದರೆ ಭೂಮಿತತ್ತ್ವ. ಅದು ಜೀವಿ ಸತ್ತ ಮೇಲೂ ಪಾರ್ಥಿವ ಶರೀರದ ರೂಪದಲ್ಲಿ ಉಳಿದುಕೊಂಡಿರುತ್ತದೆ. ಹೀಗೆ ಎಲ್ಲ ಜೀವಿಗಳ ಶರೀರವೂ ಮಣ್ಣಿನ ಅಂಶದಿಂದಲೇ ಆಗಿರುವುದರಿಂದ ನಾವು ಪುಜಿಸುವ ದೇವರ ಮೂರ್ತಿಯನ್ನೂ ಮಣ್ಣಿನಿಂದಲೇ ಮಾಡುವುದು ಸೂಕ್ತ. ಮಳೆಗಾಲದಲ್ಲಿ ಮಣ್ಣಿನ ಜೊತೆ ನೀರು ಸೇರಿಕೊಂಡು ಮಣ್ಣಿಗೆ ವಿಶೇಷ ಶಕ್ತಿ ಬಂದಿರುತ್ತದೆ. ಮಳೆ ನೀರಿನಲ್ಲಿ ಅಡಕವಾಗಿರುವ ಆಕಾಶ, ಗಾಳಿ ಹಾಗೂ ತೇಜಸ್ಸಿನ ಅಂಶಗಳು ಮಣ್ಣಿನಲ್ಲಿ ಪಂಚಭೂತಗಳ ಸಾನ್ನಿಧ್ಯವನ್ನು ಉಂಟುಮಾಡುತ್ತವೆ. ಇಂತಹ ಮಣ್ಣಿನಿಂದ ಮಾಡಿದ ಮೂರ್ತಿಗೆ ವಿಶೇಷಶಕ್ತಿ ಇರದೇ ಇದ್ದೀತೆ? ಬರಿ ಮಣ್ಣನ್ನು ಪೂಜಿಸಿಯೆಂದರೆ ಯಾರೂ ಪೂಜಿಸುತ್ತಿರಲಿಲ್ಲ. ಹಾಗಾಗಿ ಅದನ್ನು ಮೂರ್ತಿಯ ರೂಪದಲ್ಲಿ ಪೂಜಿಸುವ ಸಂಪ್ರದಾಯವನ್ನು ಆರಂಭಿಸಲಾಯಿತು.

ಗಣಪತಿಗೆ ನಾವು ಅರ್ಪಿಸುವುದೇನು? ಗರಿಕೆಯ ಹುಲ್ಲು. ಮಳೆಗಾಲದಲ್ಲಿ ಸೊಂಪಾಗಿ ಬೆಳೆಯುವ ಈ ಹುಲ್ಲು ಔಷಧಿ ಸಸ್ಯವೂ ಹೌದು. ಗೋವಾದಲ್ಲಿ ಮಾಠೊಳ್ಳಿ ಎಂದು ಕರೆಯಲ್ಪಡುವ ಫಲಾವಳಿಯನ್ನು ನಾವು ಗಣಪತಿಯ ಮಂಟಪದಲ್ಲಿ ಕಟ್ಟುತ್ತೇವೆ. ಅಲ್ಲಿ ನಾವು ಕಟ್ಟುವುದು ಎಲ್ಲ ನಿಸರ್ಗದಿಂದ ಆಯ್ದ ವಸ್ತುಗಳೇ. ಈ ಕಾಲದಲ್ಲಿ ಸಿಗುವ ಎಲ್ಲ ಹಣ್ಣು,ಹಂಪಲ, ತರಕಾರಿ, ಬೆಳೆಗಳನ್ನು ಈ ಮಂಟಪದಲ್ಲಿ ಕಟ್ಟುತ್ತೇವೆ. ವಾತಾವರಣವನ್ನು ಶುದ್ಧಗೊಳಿಸುವ ತಳಿರಿನ ತೋರಣ ಕಟ್ಟುತ್ತೇವೆ. ಒಟ್ಟಿನಲ್ಲಿ ಸಂಪೂರ್ಣ ನಿಸರ್ಗವನ್ನೇ ಗಣಪತಿಯ ಸುತ್ತಲೂ ನಿರ್ಮಿಸುತ್ತೇವೆ.

ಗಣೇಶ ಚತುರ್ಥಿಯ ಆಚರಣೆಯನ್ನು ನಾವು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಮಾಡುತ್ತಿದ್ದೇವೆ. ಆದರೆ ಆಚರಿಸುವ ವಿಧಾನ ಮಾತ್ರ ಸಂಪೂರ್ಣ ಬದಲಾಗಿದೆ. ತಳಿರು ತೋರಣದ ಜಾಗದಲ್ಲಿ ಪ್ಲಾಸ್ಟಿಕ್ ತೋರಣಗಳು ಬಂದಿವೆ (ಅವು ಒಂದೇ ವರ್ಷಕ್ಕೆ ಹಾಳಾಗುವುದಿಲ್ಲವಲ್ಲ, ಮುಂದಿನವರ್ಷವೂ ಉಪಯೋಗಕ್ಕೆ ಬರುತ್ತವೆ!). ಹಣ್ಣು ತರಕಾರಿಗಳನ್ನೆಲ್ಲ ತರುವ ಕಷ್ಟ ಯಾರಿಗೆ ಬೇಕು ಹೇಳಿ? ಪ್ಲಾಸ್ಟಿಕ್‌ನಲ್ಲಿ ಏನು ಬೇಕಾದರೂ ಸಿಗುತ್ತದೆ ಈಗ. ಸುಂದರವಾಗಿಯೂ ಕಾಣಿಸುತ್ತದೆ, ಬೆಲೆಯೂ ಕಡಿಮೆ. ಥರ್ಮೋಕಾಲನಿಂದ ಸುಂದರವಾದ ಮಂಟಪವನ್ನು ನಿರ್ಮಿಸಬಹುದು, ಝಗಮಗಿಸುವ ವಿದ್ಯುತ್ ದೀಪಗಳನ್ನು ಹಾಕಿದರೆ ಆಹಾ! ಆ ವೈಭವವನ್ನು ವರ್ಣಿಸಲಾಗದು(?!)

ಇಂತಹ ಕೃತ್ರಿಮತೆಯ ಮಧ್ಯೆ ಕುಳಿತುಕೊಳ್ಳುವ ಗಣಪತಿಯಾದರೂ ಶುದ್ಧನೆ? ಈಗ ಮೊದಲಿನಂತೆ ಮಣ್ಣಿನಿಂದ ಗಣಪತಿಯನ್ನು ತಯಾರಿಸುವ ಕುಶಲ ಕರ್ಮಿಗಳಿಲ್ಲ. ಒಂದೇ ಅಚ್ಚಿನಿಂದ ತಯಾರಿಸಿದ ಸಾವಿರಾರು ಮೂರ್ತಿಗಳು ಮಾರುಕಟ್ಟೆಯಲ್ಲಿ ಸುಲಭ ಬೆಲೆಯಲ್ಲಿ ಲಭ್ಯ. ಅವೆಲ್ಲ ಪ್ಲಾಸ್ಟರ್ ಒಫ್ ಪ್ಯಾರಿಸ್ ಎಂಬ ಮಣ್ಣಿನ ವೈರಿಯಿಂದ ತಯಾರಿಸಿದ್ದು. ಮಣ್ಣಿನ ಗಣಪತಿಯನ್ನು ತಯಾರಿಸುತ್ತಿದ್ದಾಗ ಅದಕ್ಕಾಗಿ ಬೇಕಾಗಿದ್ದ ಬಣ್ಣವನ್ನೂ ಮಣ್ಣಿನಿಂದಲೋ ಇಲ್ಲ ಸಸ್ಯಗಳಿಂದಲೋ ತಯಾರಿಸುತ್ತಿದ್ದರು. ಈಗ ಬಳುಸುವ ರಾಸಾಯನಿಕವರ್ಣಗಳು ನೀರಿನಲ್ಲಿ ಕರಗುವುದಿಲ್ಲ, ಮಣ್ಣಿನಲ್ಲಿ ಒಂದಾಗುವುದಿಲ್ಲ. ಅದೆಲ್ಲ ನಮಗೇಕೆ? ನಾವು ಗಣಪತಿ ಪೂಜೆಯ ಸಂಪ್ರದಾಯವನ್ನು ಮುಂದುವರಿಸುತ್ತಿದ್ದೇವೋ ಇಲ್ಲವೋ? ದೊಡ್ಡ ಹೊಟ್ಟೆಯ ಗಣಪನಿಗೆ ವಿವಿಧ ಭಕ್ಷ್ಯಗಳನ್ನು ಅರ್ಪಿಸುತ್ತೇವೋ ಇಲ್ಲವೋ?! ಪುಣ್ಯಕ್ಕೆ ನೈವೇದ್ಯಕ್ಕೆ ಪ್ಲಾಸ್ಟಿಕ್ ಹಣ್ಣುಗಳನ್ನೂ ಲಡ್ಡುಗಳನ್ನೂ ತರುತ್ತಿಲ್ಲ; ಯಾಕೆಂದರೆ ಅವನ್ನು ನಾವು ಪ್ರಸಾದ ಎಂದು ಮುಕ್ಕಲು ಬರುವುದಿಲ್ಲವಲ್ಲ! ಆದರೆ ಬೇಕರಿ ಸಾಮಾನುಗಳು ಈಗಾಗಲೇ ಪುಜಾಗೃಹವನ್ನೂ ಅಡುಗೆ ಮನೆಯನ್ನೂ ಸೇರುತ್ತಿವೆ!

ಹೀಗೆ ಸಂಪೂರ್ಣ ನೈಸರ್ಗಿಕವಾಗಿದ್ದ ಪೂಜೆಯನ್ನು ಪ್ರಕೃತಿವಿರುದ್ಧವಾಗಿಯೇ ಮಾಡಿದರೆ ಏನು ಪ್ರಯೋಜನ? ರಾಸಾಯನಿಕಯುಕ್ತ ಗಣಪತಿ ಮೂರ್ತಿಗಳು ಭೂಮಿ-ನೀರುಗಳನ್ನು ಕೆಡಿಸುತ್ತಿದ್ದರೆ ವಿದ್ಯುತ್ ದೀಪಗಳು ಅಗ್ನಿತತ್ತ್ವವನ್ನು ಕೆಡಿಸುತ್ತಿವೆ. ಪಟಾಕಿಗಳು ಗಾಳಿಯನ್ನೂ ಧ್ವನಿವರ್ಧಕಗಳಿಂದಾಗುತ್ತಿರುವ ಶಬ್ದಮಾಲಿನ್ಯ ಆಕಾಶತತ್ತ್ವವನ್ನೂ ಕೆಡಿಸುತ್ತಿವೆ. ಪಂಚಭೂತಾತ್ಮಕವಾದ ಗಣಪತಿಯ ಪೂಜೆಯನ್ನು ಪಂಚಭೂತಗಳನ್ನು ಕೆಡಿಸುವ ಮೂಲಕ ಮಾಡುತ್ತಿದ್ದೇವೆ. ಇದು ಯಾವ ಪುರುಷಾರ್ಥಕ್ಕೆ?

ಇಂದು ಸಾರ್ವಜನಿಕ ಗಣೇಶೋತ್ಸವ ತುಂಬಾ ಜನಪ್ರಿಯವಾಗುತ್ತಿದೆ. ಅಲ್ಲಿಯೂ ಶೋಕಿಗೇ ಹೆಚ್ಚು ಪ್ರಾಧಾನ್ಯತೆ. ಸ್ವಾತಂತ್ರ್ಯಾಂದೋಲನಕಾಲದಲ್ಲಿ ಜನರ ಸಂಘಟನೆಗಾಗಿ ಲೋಕಮಾನ್ಯ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ತನ್ನತನವನ್ನು ಕಳೆದುಕೊಳ್ಳುತ್ತಿದೆ ಎಂದೆನಿಸುತ್ತದೆ. ಆದರೂ ಕೆಲವೆಡೆ ಈ ಉತ್ಸವ ಸಾಂಸ್ಕೃತಿಕ ವೈಭವವನ್ನು ಮೆರೆಯುವ ಕಾರ್ಯಕ್ರಮವಾಗಿ ಹೊರಹೊಮ್ಮುತ್ತಿರುವುದು ಸಮಾಧಾನದ ಸಂಗತಿ. ಗೋವಾದಲ್ಲಿಯೂ ಗಣೇಶೋತ್ಸವ ಸಮಿತಿಗಳು ಭಜನಾ ಸ್ಪರ್ಧೆ, ನಾಟಕ ಸ್ಪರ್ಧೆ ಮುಂತಾದ ಸಂಸ್ಕೃತಿಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತವೆ. ಇದು ಸ್ತುತ್ಯರ್ಹ.

ನಾವು ಯಾವುದೇ ಹಬ್ಬ ಹರಿದಿನಗಳನ್ನು ಅವುಗಳ ಅರ್ಥವನ್ನು ತಿಳಿದು ಮಾಡೋಣ. ನಮ್ಮ ಮೋಜಿಗಾಗಿ ಪ್ರಕೃತಿವಿರುದ್ಧವಾದ ಉತ್ಸವಗಳನ್ನು ಆಚರಿಸದಿರೋಣ. ಇದರಿಂದ ದೇವರೂ ಸಂಪ್ರೀತನಾಗುತ್ತಾನೆ, ಪ್ರಕೃತಿದೇವಿಯೂ ಮುನಿಸಿಕೊಳ್ಳುವುದಿಲ್ಲ. ಶ್ರೀ ಗಣೇಶನು ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ.

ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡದ ಕಹಳೆ

ವಿಘ್ನೇಶ್ವರ, ಶಿವಮೊಗ್ಗ

ಸ್ವಾತಂತ್ರ್ಯ ಹೋರಾಟದಲ್ಲಿ ಇತರ ಎಲ್ಲಾ ಭಾಷೆಗಳಂತೆ ಕನ್ನಡದ ಪಾತ್ರವೂ ಅತ್ಯಂತ ಗಣನೀಯವಾದುದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಇಲ್ಲವೇ ದೇಶಭಕ್ತಿಪರ ಸಾಹಿತ್ಯ ರಚಿಸಿದ ಅನೇಕರು ಮುಂದೆ ಗಣ್ಯ ಸಾಹಿತಿಗಳೆನಿಕೊಂಡರು. ಆಲೂರು ವೆಂಕಟರಾಯರು, ದರಾ.ಬೇಂದ್ರೆ, ಎಸ್.ಕೆ.ಕರೀಂ ಖಾನ್, ಮುದವೀಡು ಕೃಷ್ಣರಾವ್, ಬಸವರಾಜ್ ಕಟ್ಟಿಮನಿ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಭಾರತೀಸುತ, ತರಾಸು, ಸಿದ್ಧವನಹಳ್ಳಿ ಕೃಷ್ಣಶರ್ಮ, ರಂಗನಾಥ ದಿವಾಕರ, ಜಯತೀರ್ಥ ರಾಜಪುರೋಹಿತ ಮುಂತಾದ ಕನ್ನಡದ ಮೇರು ಸಾಹಿತಿಗಲು ತಮ್ಮ ಸಾಹಿತ್ಯದ ಮೂಲಕ ಜನರಿಗೆ ಪ್ರೇರಣೆ ನೀಡಿದ್ದಲ್ಲದೆ, ಸ್ವತ: ಚಳುವಳಿಯಲ್ಲಿ ಭಾಗವಹಿಸಿ ಜೈಲು ಕಂಡರು. ಆಗ ಸರಕಾರಿ ಹುದ್ದೆಯಲ್ಲಿದ್ದ ಕನ್ನಡದ ವರಕವಿ ಬೇಂದ್ರೆಯವರು ತಮ್ಮ ನರಬಲಿ ಎಂಬ ರಾಷ್ಟ್ರ ಜಾಗೃತಿಯ ಕವನಕ್ಕಾಗಿ ಕೆಲಸ ಕಳೆದುಕೊಂಡಿದ್ದೇ ಅಲ್ಲದೆ ಜೈಲುವಾಸವನ್ನೂ ಅನುಭವಿಸಿದ್ದರು. ಮತ್ತೊಬ್ಬ ಮೇರುಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತರು ಗಾಂಧೀಜಿಯವರ ಅಸಹಕಾರ ಕರೆಯಂತೆ ಕಾಲೇಜು ತ್ಯಜಿಸಿ ಸೇವಾದಳದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಚಳುವಳಿಯ ಪ್ರಭಾವ ಕಾರಮ್ತರ ಮುಂದಿನ ಸಾಹಿತ್ಯ ಕೃತಿಗಳಲ್ಲಿ ದಟ್ಟವಾಗಿ ವ್ಯಾಪಿಸಿರುವುದನ್ನು ಕಾಣಬಹುದು. ಕಾರಂತರ ಔದಾರ್ಯದ ಉರುಳಲ್ಲಿ ಕಾದಂಬರಿಯು ದಕ್ಷಿಣ ಕನ್ನಡದ ಸ್ವಾತಂತ್ರ್ಯ ಯೋಧರೊಬ್ಬರ ಜೀವನದ ಛಾಯೆಯನ್ನು ಒಳಗೊಂಡಿದ್ದರೆ, ಅವರ ಚೋಮನ ದುಡಿ ಯ ಸೃಷ್ಟಿಯಲ್ಲೂ ಚಳುವಳಿಯ ಪ್ರಭಾವವಿದೆ. ಕುವೆಂಪು, ವಿ.ಕೃ.ಗೋಕಾಕ, ಜಿ.ಪಿ. ರಾಜರತ್ನಂ, ವಿ.ಸೀತಾರಮಯ್ಯ ಮುಂತಾದ ಹಿರಿಯರ ಬರಹಗಳು ಸ್ವಾತಂತ್ರ್ಯ ಯೋಧರಿಗೆ ನೀಡಿದ ಸ್ಫೂರ್ತಿ-ಪ್ರೇರಣೆ ಅನಿರ್ವಚನೀಯ. ಜಿ.ಪಿ. ರಾಜರತ್ನಂ ಅವರ ಗಂಡುಕೊಡಲಿ ನಾಟಕ, ತಿರುಮಲೆ ರಾಜಮ್ಮನವರ ಜೈ ಭಾರತಭುವಿಗೆ, ಮಾತೆಗೆ ಜೈ, ಸನ್ಮಂಗಳವಾಗಲಿ ಸತತಮ್ ಗೀತೆ, ಬಿ.ವೆಂಕಟಾಚಾರ್ಯರು ಬಂಗಾಳಿಯಿಂದ ಕನ್ನಡಕ್ಕೆ ಅನುವಾದ ಮಾಡಿದ ಬಂಕಿಮಚಂದ್ರರ ಆನಂದಮಠ ದೇವಿ ಚೌಧುರಾಣಿ ಕೃತಿಗಳು, ಶ್ರೀ ಗಳಗನಾಥರ ಕಾದಂಬರಿಗಳು ಜನಸಾಮಾನ್ಯರಲ್ಲಿ ಸ್ವಾತಂತ್ರ್ಯದ ಬಯಕೆಯನ್ನು ಬಡಿದೆಬ್ಬಿಸಿ ಹೋರಾಟಕ್ಕೆ ಎಳೆತಂದವು.
ಸ್ವಾತಂತ್ರ್ಯಾಂದೋಲನ ಕಾಲದಲ್ಲಿ ರಚಿತವಾದ ರಾಷ್ಟ್ರೀಯ ಸಾಹಿತ್ಯವನ್ನು ಅದರಲ್ಲೂ ವಿಶೇಷವಾಗಿ ಕಾವ್ಯವನ್ನು ನಾವು ಆರಾಧನಾ ಪ್ರಧಾನ ಮತ್ತು ಬೋಧನಾಪ್ರಧಾನವೆಂದು ವಿಂಗಡಿಸಬಹುದು. ಒಂದುಕಡೆ ದೇಶವನ್ನೇ ತಾಯಿಯೆಂದು, ದೇವರೆಂದು ಆರಾಧಿಸುವ ಸಾಹಿತ್ಯಗಳು ರಚನೆಯಾದರೆ, ಇನ್ನೊಂದೆಡೆ ಜನರಲ್ಲಿ ಬ್ರಿಟೀಷರ ವಿರುದ್ಧ ಆಕ್ರೋಶವನ್ನು ನಿರ್ಮಾಣ ಮಾಡುವ, ಜನರನ್ನು ದೀರ್ಘಕಾಲೀನ ನಿದ್ದೆಯಿಂದ ಬಡಿದೆಬ್ಬಿಸುವ ಸಾಹಿತ್ಯಗಳು ರಚನೆಗೊಂಡವು. ವಿಶೇಷವೆಂದರೆ ಈ ಎರಡೂ ಪ್ರಕಾರಗಳನ್ನು ಒಳಗೊಂಡ ಆನಂದಮಠ ದಂತಹ ಕಾದಂಬರಿಯೂ ಈ ಕಾಲದಲ್ಲಿ ರಚಿತವಾಯಿತು.
ಒಂದು ವಿಶಾಲ ಜನಸಮುದಾಯದ ಮಧ್ಯೆ ಕ್ರಾಂತಿಯ ಹೋರಾಟದ ಭೂಮಿಕೆಯನ್ನು ಸಿದ್ಧಪಡಿಸಬೇಕಾದರೆ ಈ ಎರಡೂ ಪ್ರಕಾರಗಳು ಅತ್ಯಂತ ಮಹತ್ತ್ವದ ಪಾತ್ರವನ್ನು ವಹಿಸುತ್ತವೆ. ಯಾವುದೇ ದೇಶದ ಜನ ಆ ದೇಶವನ್ನು ರಕ್ಷಿಸಿಕೊಳ್ಳಬೇಕು ಎಂತಾದರೆ ಆ ಜನರಿಗೆ ದೇಶದ ಕುರಿತಾಗಿ ಭಾವನಾತ್ಮಕ ಸಂಬಂಧ ಇರಬೇಕು. ಆ ಸಂಬಂಧ ಬರುವುದು ಭಕ್ತಿಯಿಂದ ಇಲ್ಲವೇ ಪ್ರೀತಿಯಿಂದ. ಸಾವಿರಾರು ವರ್ಷಗಳ ಪರಕೀಯರ ಆಕ್ರಮಣ-ಆಡಳಿತದಿಂದಾಗಿ ಭಾರತೀಯರಲ್ಲಿ ಮಸುಕಾಗಿ ಹೋಗಿದ್ದ ದೇಶದ ಕುರಿತಾದ ಭಕ್ತಿ ಪ್ರೀತಿಗಳು ಮತ್ತೆ ಪ್ರಜ್ವಲಿಸುವಂತೆ ಮಾಡಿದ್ದು ಸಾಹಿತ್ಯಗಳೇ. ಬಂಕಿಮರ ವಂದೇ ಮಾತರಮ್ ಅಂತೂ ದೇಶವಾಸಿಗಳಿಗೆ ದಿವ್ಯಮಂತ್ರವೆನಿಸಿತು. ತಾಯಿ ಭಾರತಿಯಲ್ಲಿ ದುರ್ಗೆಯ ದರ್ಶನ ಮಾಡಿಸಿತು. ಭಾವನಾತ್ಮಕವಾಗಿ ಜನರನ್ನು ಮೇಲಕ್ಕೆತ್ತಿದರಷ್ಟೆ ಸಾಲದು ಅವರ ಭಾವನೆಗಳು ಕ್ರಿಯಾತ್ಮಕವಾಗಿ ಹರಿಯಬೇಕು.ಹಾಗಾಗಬೇಕಾದರೆ ಜನರಿಗೆ ಒಂದು ಸ್ಪಷ್ಟ ದೃಷ್ಟಿಕೋನ-ದಿಕ್ಕು ಬೇಕು. ಬೋಧನಾಪ್ರಧಾನ ಸಾಹಿತ್ಯ ಈ ಕೊರತೆಯನ್ನು ನೀಗಿಸಿತು. ತಿಲಕ, ಅರವಿಂದ, ರವೀಂದ್ರ, ಸಾವರ್ಕರರ ಬರಹಗಳು ಜನರನ್ನು ಹೋರಾಟದ ಹಾದಿಗೆ ಎಳೆದು ತಂದವು.
ಸ್ವಾತಂತ್ರ್ಯ ಹೋರಾಟವನ್ನು ವ್ಯಾಪಕಗೊಳಿಸುವ, ಜನರನ್ನು ಹೋರಾಟಕ್ಕೆ ಅಣಿಗೊಳಿಸುವ ಕಾರ್ಯದಲ್ಲಿ ಕನ್ನಡ ಸಾಹಿತಿಗಳೇನೂ ಹಿಂದೆ ಬಿದ್ದಿಲ್ಲ. ಕನ್ನಡದಲ್ಲಿಯೂ ಕೂಡ ಎರಡೂ ರೀತಿಯ ಸಾಹಿತ್ಯ ರಚನೆಯಾಯಿತು.
ಆವಿನದ ನೊರೆಹಾಲನೊಲ್ಲೆನು, ದೇವಲೋಕದ ಸುಧೆಯನೊಲ್ಲೆನು
ಪಾವನಳೆ ನಿನ್ನಂಘ್ರಿಕಮಲದ ಸೇವೆಯದು ದೊರೆತಿಹುದು ತಾಯೆ |
ಶ್ರೀವರನ ಕೃಪೆಯಿಂದ ಬೇರಿನ್ನೇನು ಬೇಡೆನಗೆ ||
ಎಂದು ಹಾಡಿದ ಸಾಲಿ ರಾಮಚಂದ್ರರಾಯರು ತಾಯಿ ಭಾರತಿಯ ಸೇವೆಯ ಅವಕಾಶ ದೊರೆಯುವುದಕ್ಕಿಂತ ಹೆಚ್ಚಿನ ಭಾಗ್ಯ ಬೇರೆ ಇಲ್ಲ ಎಂದರು. ಶಾಲಾ ಶಿಕ್ಷಕರಾಗಿದ್ದ ಅವರು ನೇರವಾಗಿ ಹೋರಾಟದ ಮಾತುಗಳನ್ನಾಡುವಂತಿರಲಿಲ್ಲ. ಅಂದಿನ ಸಮಯದಲ್ಲಿ ದೇಶಸೇವೆಯೆಂದರೆ ತಾಯಿಯ ದಾಸ್ಯಮುಕ್ತಿಗಾಗಿ ಪ್ರಯತ್ನ. ರಾಮಚಂದ್ರರಾಯರೂ ಪರೋಕ್ಷವಾಗಿ ದಾಸ್ಯರಕ್ಕಸನ ವಿರುದ್ಧದ ಹೋರಾಟವೇ ಭಾಗ್ಯವೆಂದರು. ಅದಕ್ಕಾಗಿ ಜನರನ್ನು ಹುರಿದುಂಬಿಸಿದರು.
ಕನ್ನಡದ ಭಗವದ್ಗೀತೆ ಮಂಕುತಿಮ್ಮನ ಕಗ್ಗವನ್ನು ಬರೆದ ಡಿ.ವಿ.ಜಿ. ವಂದೇ ಮಾತರಂ ಅನ್ನು ಅನುಸರಿಸಿ ದೇಶವನ್ನು ವರ್ಣಿಸಿ ಕವನ ಬರೆದರು. ದೇಶಭಕ್ತಪ್ರತಿಜ್ಞೆ ಎಂಬ ಕವನದಲ್ಲಂತೂ
ಎನ್ನಯ ಮಾನಸಭವನದೊಳುನ್ನತ ವೇದಿಯಲಿ
ದೇಶಮಾತೆಯನಿರಿಸುತ್ತೆನ್ನಯ ಸರ್ವಸ್ತಮನಾ |
ಪುಣ್ಯೋರ್ವಿಯಂಘ್ರಿಗರ್ಪಿಸಿ ಮಣಿವೆಂ ||
ಎಂದು ತಾಯಿ ಭಾರತಿಗೆ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡರು. ದೇಶವೇ ತಾಯಿ, ತಾಯಿಗಾಗಿ ಎಲ್ಲವೂ ಎಂಬ ಮಾನಸಿಕತೆಯನ್ನು ತುಂಬಲು ಯತ್ನಿಸಿದರು.
ಸಾಲಿ ರಾಮಚಂದ್ರರಾಯರು ಮತ್ತು ಡಿ.ವಿ.ಜಿ.ಯವರದು ಆರಾಧನಾ ಮಾರ್ಗವಾದರೆ, ಕುವೆಂಪು ಅವರು ಆರಾಧನಾ ಮಾರ್ಗದ ಜೊತೆಗೆ ಬೋಧನಾ ಮಾರ್ಗದಲ್ಲೂ ನಡೆದರು. ಒಂದು ಕಡೆ ದೇಶದ ಬಗ್ಗೆ, ತಾಯಿ ಭಾರತಿಯ ಬಗ್ಗೆ ಭಕ್ತಿ, ಪ್ರೀತಿ, ಅಭಿಮಾನವನ್ನು ಮೂಡಿಸಿದುದರ ಜೊತೆ ಜೊತೆಯಲ್ಲೇ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದು ಬೆನ್ನು ತಟ್ಟಿದರು. ಸ್ವಾತಂತ್ರ್ಯ ಹೋರಾಟದ ರಣಾಂಗಣಕ್ಕೆ ಕಳಿಸಿದರು.
ಭರತಭೂಮಿ ನನ್ನ ತಾಯಿ
ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು
ಎಂದು ಹಾಡಿದ ಕುವೆಂಪು ದೇಶದ ನದಿ ಕಡಲುಗಳನ್ನು ತೀರ್ಥವೆಂದು ಕೊಂಡಾಡಿದರು.
ಸಾತಂತ್ರ್ಯದ ಸ್ವರ್ಗಕೇರೆ
ಪುಣ್ಯದೇಣಿ ಮೆಟ್ಟಿಲು
ಎಂದು ಹೇಳುತ್ತಾ ಸ್ವಾತಂತ್ರ್ಯವೆ ಸ್ವರ್ಗ ಎಂಬ ಕನಸನ್ನು ಮತ್ತು ಅದನ್ನು ನನಸಾಗಿಸುವ ಹಂಬಲವನ್ನು ವ್ಯಕ್ತಪಡಿಸಿದರು. ಇನ್ನೊಂದೆಡೆ
ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ ಎಂದು ಹೇಳುತ್ತಾ ಕುಂದುಕೊರತೆಗಳಿವೆಯೆಂಬ ಅಳಲನ್ನು ಪ್ರಗತಿಯ ಪಥದಲ್ಲಿ ಹಿಂದುಳಿದವಳೆಂಬ ನೋವನ್ನು ನಾ ಬಲ್ಲೆ ಆದರೂ
ಆದರೊಲಿಯೆನು ಅನ್ಯರ, ಚಿನ್ನ ಒಲಿದಿಹ ಧನ್ಯರ
ಕುಂದು ಕೊರತೆಗಳಿರಲಿ ಮಹಿಮಳು ನೀನೆ, ಅನ್ಯರನೊಲ್ಲೆನು.
ಎಂದು ತಾಯಿಯೆಡೆಗಿನ ಅನನ್ಯ ಭಕ್ತಿ, ಪ್ರೀತಿಯನ್ನು ಅಭಿವ್ಯಕ್ತಗೊಳಿಸಿದರು. ಅಂತಿಮವಾಗಿ, ನಿನ್ನ ಸೇವೆಯೊಳಳಿವ ಭಾಗ್ಯಕೆ ಸಕಲ ಭಾಗ್ಯವ ತೊರೆವೆನು ಎಂದು ತಾಯಿಗಾಗಿ, ತಾಯಿಯ ಸೇವೆ ಮಾಡುತ್ತಲೇ ಅಳಿಯುವುದಕ್ಕಿಂತ ಬೇರೆ ಭಾಗ್ಯವಿಲ್ಲವೆಂದು ಹಾಡಿದರು ಕುವೆಂಪು. ಭಾವನಾತ್ಮಕವಾಗಿ ಒಂದೆಡೆ ದೇಶಭಕ್ತಿಯನ್ನು ಜಾಗೃತಗೊಳಿಸಿದ ಕುವೆಂಪು ಅದೇ ಸಮಯದಲ್ಲೇ ಕೆಲ ಬೋಧಪ್ರದ ಕವನಗಳ ಮೂಲಕ ಹೋರಾಟದ ಕಿಚ್ಚು ಹಚ್ಚಿದರು. ರಕ್ತತರ್ಪಣ ಕವನದ ಮೂಲಕ,
ಏಳಿರೈ ಸೋದರರಿರಾ, ನಿಮಗಾಗಿ ಮಡಿದೆಮ್ಮ
ಮರೆಯದಿರಿ ನಿಮ್ಮಣ್ಣ ತಮ್ಮಂದಿರನು
----------------------
ಸ್ವಾತಂತ್ರ್ಯ ಸಾಧನೆಗೆ ಸಂಗ್ರಾಮದೇವತೆಗೆ
ರಕ್ತ ತರ್ಪಣವಿತ್ತು ಎದೆಯ ಹರಿದು
ಹೊರಳಿದೆವು ನೆಲಕೆ, ಓ ಉರುಳಿ ಬಿದ್ದೆವು ನೆಲಕೆ
ಕೈಯ ಕತ್ತಿಯನೆಸೆದು ನಿಮ್ಮ ಕೈಗೆ
ಮತ್ತೆ ಬಾವುಟವೆಸೆದು ನಿಮ್ಮ ರಕ್ಷೆಯ ವಶಕೆ
ಹಿಡಿದೆತ್ತಿ ಮುಂಬರುವಿರೆಂದು ನಂಬಿ!
ಎಂದು ಹೇಳುತ್ತಾ,
ಸತ್ತವರ ಆ ನಂಬುಗೆಗೆ ಎರಡನೆಣಿಸದಿರಿ
ಹಂದೆಯಾಗದೆ ಮುಂದೆ ನುಗ್ಗಿ ಹೋಗಿ
ಎಂದು ಪ್ರಚೋದಿಸಿದರು.
ಹಿಂದಿನವರು ಸತ್ತಿದ್ದು ನಮಗಾಗಿ. ಅವರು ಯಾವ ಗುರಿಯ ಸಾಧನೆಗಾಗಿ ಸತ್ತರೋ ಆಗುರಿ ನಮ್ಮದು. ನಾವದನ್ನು ಮುಟ್ಟಬೇಕು, ಆಗಲೇ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಇಲ್ಲದಿದ್ದರೆ
ನಿಮಗಾಗಿ ಸತ್ತೆಮಗೆ ಸೊಗವಿಲ್ಲ
ಬದುಕಿರುವ ನಿಮಗುಮಾ ಬದುಕೆ ಮಿತ್ತು
ಎಂದು ಹೇಳಿದ ಕವಿ,
ಇಂತು ಸತ್ತವರ ಕರೆ ಓ ಕೂಗುತಿದೆ ಕೇಳು
ಭೂತಕಾಲದ ಗರ್ಭಗೋರಿಯಿಂದ
ಆಲಿಸಿಯೂ ಅದನು ನೀ ಸುಮ್ಮನಿರುವೆಯ ಹೇಳು
ದೇಶಮಾತೆಯು ಹಡೆದ ವೀರಕಂದಾ ?
ಎಂದು ದೇಶವಾಸಿಗಳನ್ನು ಚುಚ್ಚಿದರು.
ಬೀಳಲಿ ಮೈ ನೆತ್ತರು ಕಾರಿ
ಹೋದರೆ ಹೋಗಲಿ ತಲೆಹಾರಿ
ತಾಯ್ನಾಡಿನ ಮೇಲ್ಮೈಗೆ ಹೋರಿ
ಸ್ವಾತಂತ್ರ್ಯದ ಸ್ವರ್ಗಕೆ ಏರಿ!
ಸೋದರ-ಸೋದರಿಯರೆ, ಮೇಲೇಳಿ
ಕರೆಯುತ್ತಿಹಳದೋ ರಣಕಾಳಿ
ದೇಶಪ್ರೇಮಾವೇಶವ ತಾಳಿ
ಖಳವೈರಿಯ ಸೀಳಿ!
ಎಂದು ಯುದ್ಧೋತ್ಸಾಹಿಯಾದ ಕುವೆಂಪು ಕೊನೆಗೆ,
ತ್ಯಾಗದ ಯಾನಕೆ ನುಗ್ಗಿರಿ ಮುಂದೆ
ಭೋಗದ ರೋಗವ ಬಿಡಿ ಹಿಂದೆ
ತಡಮಾಡಿದರಮ್ಮನ ನೀಂ ಕೊಂದೆ!
ಸುಮುಹೂರ್ತವೋ ಇಂದೆ!
ಎಂದು ದೇಶಮುಕ್ತಿಗಾಗಿ ಆತುರಗೊಂಡರು, ದೇಶವಾಸಿಗಳಲ್ಲೂ ಸ್ವಾತಂತ್ರ್ಯಕಾಗಿ ಕಾತರತೆಯನ್ನುಂಟುಮಾಡಿದರು.
ವರಕವಿ ಬೇಂದ್ರೆಯವರು ಕೂಡಾ ತಮ್ಮ ಮಕ್ಕಳಿವರೇನಮ್ಮ ೩೩ ಕೋಟಿ ಕವನದ ಮೂಲಕ ದೇಶಾವಾಸಿಗಳನ್ನು ಹಂಗಿಸಿದರು, ಇಂಥವರನ್ನು ತಾಯಿ ಮಕ್ಕಳನ್ನಾಗಿ ಪಡೆದುದಕ್ಕೆ ವಿಷಾದಿಸಿದರು, ಎಚ್ಚರಿಸಿದರು. ಕೊನೆಗೆ ತಾಯಿಯ ಕರೆಗೆ ಓಗೊಟ್ಟು ಬನ್ನಿ ಎಂದು ಕರೆದರು.
ಇವರೇ ಏನು ೩೩ ಕೋಟಿ ಮಕ್ಕಳು ಎಂದು ತಾಯಿಯಿಂದಲೇ ಕೇಳಿಸಿದ ಬೇಂದ್ರೆ,
ಹಲಕೆಲವು ಹುಳುಗಳೆನ್ನಿ! ಹಲಕೆಲವು ಕುರುಡುಕುನ್ನಿ!
---------------------------------
ಗಂಡಸುತನಕೇನೋ ಸೊನ್ನಿ !
ಲೆಕ್ಕಕ್ಕೆ ಮೂವತ್ತು ಮೂರು ಕೋಟಿ!!
ಎಂದು ಛೇಡಿಸಿದರು.
ಹಂಗಿನರಮನೆಯ ನರಕಾ- ತಂಗುವಿರಿ ಇಹುದೆ ಮರುಕಾ?
ಹಿಡಿಬೆರಳ ಹಿಡಿಯಲ್ಲಿ ಅಡಿಯೆರಡರಡಿಯಲ್ಲಿ ಹೊರಳಿ ಒರಲುವಿರಿ
ಅಕಟಾ! ಅಕಟಕಟಾ
ಎಂದು ಕೋಪಿಸಿಕೊಂಡರು.
ಹಡೆದೊಡಲು ಬಂಜೆಯಾಯ್ತೆ? ಬಾಳ್ಮೊದಲೆ ಸಂಜೆಯಾಯ್ತೆ?
ಎಂದು ಮರುಗಿದರು
ನನ್ನೆದೆಯ ಹಾಲನೆರಸಿ ನನ್ನೊಳಿಹ ಬೆಳಕ ಬೆರೆಸಿ
ವಜ್ರದೇಹಿಗಳೆಂದೆ ಗೊನೆಮಿಂಚೊ ಎನೆಕಂಡೆ
ನನ್ನಳಲು ಕೇಳದೇನೋ?
ಎಂದು ಪ್ರ್ರಲಾಪಿಸುತ್ತಲೇ
ಡಿಂಭಗಳನೊಡೆದು ಬನ್ನಿ! ಕಂಬಗಳನೊಡೆದು ಬನ್ನಿ!
ಮೈಯಲ್ಲಿ ಮಡಗದಿರಿ! ಮನದಲ್ಲಿ ಅಡಗದಿರಿ!
ತಾಯಿ ಇದೋ ಬಂದೆವೆನ್ನಿ!
ಎಂದು ಆಹ್ವಾನಿಸಿದರು.
ಹೇಡಿಯೊಬ್ಬನನ್ನು ಬಡಿದೆಬ್ಬಿಸಿ ಅವನಲ್ಲಿ ಆಕ್ರೋಶವನ್ನುಂಟುಮಾಡಿ ಅನಂತರ ಅವನನ್ನು ಕಾರ್ಯಸಾಧನೆಗೆ ಅಣಿಗೊಳಿಸುವ ಶೈಲಿ ಬೇಂದ್ರೆಯವರದು!
ಕನ್ನಡದ ಮತ್ತೊಬ್ಬ ಶ್ರೇಷ್ಠ ಕವಿ ಗೋಪಾಲಕೃಷ್ಣ ಅಡಿಗರ ನೆನೆನೆನೆ ಆ ದಿನವ, ಓ ಭಾರತಬಾಂಧವ! ನೆನೆನೆನೆ ಆದಿನವ ಎಂಬ ಗೀತೆ ಸುಪ್ರಸಿದ್ಧ. ಅವರ ಇನ್ನೊಂದು ಕವನವೂ ಅರ್ಥಪೂರ್ಣ.
ಎಂಥ ಯುದ್ಧವೊ ಗೆಳೆಯ ಭಾಟರ ಕೈ ಬರಿದು
ಮನದಲ್ಲಿ ಹಗೆತನದ ನಂಜಿಲ್ಲ ನಸುವೂ
ಮೊಗದ ನಸುನಗೆಯೊಂದೆ, ಮನದ ನಿಶ್ಚಯವೊಂದೆ,
ಆತ್ಮಾರ್ಪಣದ ಕಣವೆ ಕಣ್ಣ ಮುಂದೆ!
ಹಾಗೆಯೇ ಕೆಲವು ಪ್ರಸಿದ್ಧರಲ್ಲದ ಸಾಹಿತಿಗಳು ಬರೆದ ಕೃತಿಗಳು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಜಾಗೃತಿಯ ಅಲೆಯನೆಬ್ಬಿಸಿದವು. ಅಂತಹವರಲ್ಲೊಬ್ಬರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ದಿ|| ತಿಪ್ಪಯ್ಯ ಮಾಸ್ತರರು. ಕಡುಬಡತನದ ನಡುವೆಯೂ ಸ್ವಾತಂತ್ರ್ಯ ದೇವಿಗೆ ತಮ್ಮನ್ನು ಅರ್ಪಿಸಿಕೊಂಡವರು. ಅವರ ಜಪಿಸಿರಿ ಸ್ವರಾಜ್ಯ ಮಂತ್ರವನು, ಧರಿಸಿರಿ ಸ್ವದೇಶಿ ವಸ್ತ್ರವನು ಎಂಬ ಹಾಡು ಅಂದು ಜನಪ್ರಿಯವಾಗಿದ್ದ ಗೀತೆ. ೧೯೩೦ರಲ್ಲಿ ಪ್ರಕಟಗೊಂಡ ಅವರ ರಾಷ್ಟ್ರೀಯ ಪದ್ಯಗಳು ಎಂಬ ಕಿರು ಪುಸ್ತಕ ಜನಜಾಗೃತಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿತು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಒಂದು ಲಾವಣಿ ದೇಶಿ ಧುಮಧುಮ್ಮೆ. ಅದನ್ನು ಬರೆದವರು ಬೇಂದ್ರೆಯವರ ಮಿತ್ರರಾಗಿದ್ದ ಶ್ರೀಧರ ಖಾನೋಳ್ಕರ. ಸರಕಾರಿ ನೌಕರನಾಗಿದ್ದೂ ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಂಡಿದ್ದವರು. ಇವರು ಬರೆದ ಈ ದೀರ್ಘ ಲಾವಣಿಯನ್ನು ಸೀತಾತನಯ ಎಂಬ ಅವರ ಕಾವ್ಯನಾಮದಿಂದ ಪ್ರಕಟಿಸಿದ್ದು, ಅದನ್ನು ಮುದ್ರಿಸಿದ ನೆಪದಿಂದ ೧೯೨೩ರಲ್ಲಿ ಸಾಹಿತಿ ರಂಗನಾಥ ದಿವಾಕರ ಅವರಿಗೆ ರಾಜದ್ರೋಹದ ಆಪಾದನೆ ಮೇಲೆ ಜೈಲುಶಿಕ್ಷೆಯಾಯಿತು. ಏಳಿರಿ ಬಿಸಿಬಿಸಿ ರಕ್ತದ ತರುಣರೆ ಇಳಿಯಿರಿ ಸ್ವಾತಂತ್ರ್ಯ ರಣದೊಳಗೆ ಎಂಬ ದಿಟ್ಟ ಕರೆ ನೀಡಿ ಜಾಗೃತಿಯ ಅಲೆಯನ್ನೆಬ್ಬಿಸಿದ ಲಾವಣಿ ಅದು. ಬೆಂಗಳೂರಿನ ಶ್ರೀ ಬಿ. ನೀಲಕಂಠಯ್ಯನವರ ರಾಷ್ಟ್ರ ಚಿಂತನೆಯ ಲಾವಣಿಗಳು ಅಂದು ಕನ್ನಡಿಗರ ಮನೆಮಾತು.
೧೨ ನೇ ಪುಟದಿಂದ......

ನವಯುಗಪದ್ಧತಿ ನವ ಸ್ತ್ರೀ ಪುರುಷರ ನವರಂಗಾಟಗಳ್ಹೆಚ್ಚಾಯ್ತು
ಕನ್ನಡ ನಾಡಿನ ಕನ್ನಡ ಜನರಿಗೆ ಕನ್ನಡ ಭಾಷೆಯೆ ಮರೆತೋಯ್ತು |
ಕನ್ನಡ ಇಂಗ್ಲೀಷ ಬೆರೆತೋಯ್ತು, ಹೊನ್ನಿನ ದೇಶವು ಮಣ್ಣಾಯ್ತು
ತಿನ್ನಲು ಮನೆಯಲಿ ಸೊನ್ನೆಗಳಾದರು, ಉನ್ನತಷೋಕಿಯು ಬಲವಾಯ್ತು ||
ಎಂಬ ಬ್ರಿಟೀಷ ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮವನ್ನು ಹೀಗಳೆಯುವ ಲಾವಣಿ ಮುಂದುವರಿದು ಬ್ರಿಟೀಷ್ ಕುರಿಗಳನೊದ್ದೋಡಿಸಿ ದೇಶದ ಮಾನವ ರಕ್ಷಿಸಿ ಎಂಬ ಸಂದೇಶ ನೀಡಿ ಜನರನ್ನು ಹೋರಾ
ಟದ ಹಾದಿಗೆ ಎಳೆದು ತಂದಿತು.
ಹೀಗೆ ಸ್ವಾತಂತ್ರ್ಯದ ಹೋರಾಟದಲ್ಲಿ ಕನ್ನಡ ಸಾಹಿತಿಗಳೂ ಕೂಡ ಮಹತ್ತ್ವದ ಪಾತ್ರವನ್ನು ವಹಿಸಿದರು. ದೇಶದ ಬಗೆಗೆ ಭಕ್ತಿ-ಪ್ರೀತಿಯನ್ನು ಬೆಳೆಸಿದರು. ರಣರಂಗದಲ್ಲಿ ಸೈನ್ಯ ನಡೆಸುವ ಸೇನಾಪತಿಯಂತೆ ಹೋರಾಟಗಾರರಿಗೆ ಹುರುಪು ತುಂಬಿದರು. ಹೋರಾಟದ ಕಿಚ್ಚು ಮೂಡಿಸಿದರು. ಇದೆಲ್ಲದರ ಫಲವಾಗಿ ಬ್ರಿಟೀಷರ ಎಲ್ಲ ತಂತ್ರ-ಕುತಂತ್ರಗಳ ನಡುವೆಯೂ ಭಾರತೀಯರಲ್ಲಿ ೯೦ ವರ್ಷಗಳಷ್ಟು ಕಾಲ ನಿರಂತರವಾಗಿ ಸ್ವಾತಂತ್ರ್ಯ ದಾಹ ಉಳಿಯಿತು-ಬೆಳೆಯಿತು. ಅಂತಿಮವಾಗಿ ಗುರಿ ತಲುಪಿ, ದೇಶ ಸ್ವತಂತ್ರವಾಗುವ ಮೂಲಕವೇ ತಣ್ಣಗಾಯಿತು.

ಕೃಪೆ: ಚೈತ್ರರಶ್ಮಿ

ಗಂಗಕ್ಕನ ನೆನಪು

ವೀಣಾ ದೇವ್

ನಮ್ಮ ಕೆಲಸದಾಕೆ """ನಿನ್ನೆ ನಮ್ಮ ಗಂಗೂಬಾಯಿ ಒಬ್ಬಾಕೆ ತೀರ್ಕೊಂಡ್ಲಲ್ಲಪ್ಪ..." ಎನ್ನುತ್ತಲೇ ಪ್ರತ್ಯಕ್ಷಳಾದಳು. ಏನೋ ಎಂದಿನಂತೆ ಅವಳ ಬಳಗದ್ದೋ ಕೇರಿಯದ್ದೋ ಸುದ್ದಿ ಹೇಳುತ್ತಾಳೆ ಎಂದು ಭಾವಿಸುತ್ತಿದ್ದಂತೆಯೇ ಚಕ್ಕನೇ ಡಾ. ಗಂಗೂಬಾಯಿ ಹಾನಗಲ್ ಅವರ ನಿಧನವಾರ್ತೆಯ ನೆನಪಾಯ್ತು. ಅವರ ಬಗ್ಗೆ ಇವಳೇನು ಮಾತನಾಡಬಹುದು ಎಂದೇ ನನ್ನ ಭಾವನೆ. ಆದರೂ ಕೇಳಿಯೇ ಬಿಡೋಣವೆಂದು ಬಾಯ್ತೆರೆಯುವಷ್ಟರಲ್ಲಿಯೇ ಅವಳೇ "ಎಷ್ಟು ಛಂದ ಹಾಡ್ತಿದ್ಲು! ಭಾರಿ ಛಲೋ ಹೆಣ್ಮಗಳು, ದೊಡ್ಡ ಮನಸ್ರೇಪ ಆಕೀದು! ದೇ ಶಪಾಂಡೆ ನಗರದಾಗ ನಾವಿದ್ವಿ, ಗುರ್ತಾ ನೋಡ್ರಿ " ಎಂದಳು. ಇದನ್ನು ಇಲ್ಲಿ ಮುದ್ದಾಂ ಬರೆಯಲಿಕ್ಕೆ ಎರಡು ಕಾರಣಗಳಿವೆ. ಸಂಗೀತ ವಿಶ್ವದಲ್ಲೇ ಪ್ರಸಿದ್ಧಿ ಪಡೆದ ವಿದುಷಿಗೆ ಆ ನಿಟ್ಟಿನಲ್ಲಿ ಯಾವುದೇ ರೀತಿಯ ಶಿಕ್ಷಣ-ತರಬೇತಿ ಇಲ್ಲದ ಸಾಮಾನ್ಯ ಜನರನ್ನೂ ತಮ್ಮ ಸಂಗೀತದಿಂದ ಆಕರ್ಷಿಸುವ ಸಾಮರ್ಥ್ಯವಿತ್ತೆನ್ನುವುದೊಂದು; ಅಂತಹ ಸಾಮಾನ್ಯ ಜನರೂ ಇವರನ್ನು ತಮ್ಮವರು (ನಮ್ಮ ಗಂಗೂಬಾಯಿ ಎಂದಳು ಕೆಲಸದಾಕೆ) ಎಂದು ಅಭಿಮಾನದಿಂದ ಹೇಳಿಕೊಳ್ಳುವಂತೆ ಮಾಡುವ ನಡವಳಿಕೆ ಅವರದಾಗಿತ್ತೆನ್ನುವುದು ಇನ್ನೊಂದು.
ಅವರ ಸರಳ ಜೀವನ ಮತ್ತು ನಡವಳಿಕೆಯ ಪ್ರತ್ಯಕ್ಷ ಅನುಭವ ನನಗೂ ಆಗಿತ್ತು. ಶಿರಸಿಯ ನಮ್ಮ ಮನೆಯ ಎದುರು ನಿವೃತ್ತ ಶಿಕ್ಷಕಿಯೊಬ್ಬರಿದ್ದರು. ಒಂದಿನ ಸಂಜೆ ಅವರ ಮನೆಗೆ ಹೋದಾಗ ನೂಲಿನ ಸಾದಾ ಸೀರೆಯನ್ನುಟ್ಟು ಜಗಲಿಯ ನೆಲದ ಮೇಲೆಯೇ ಕುಳಿತು ಮಾತನಾಡುತ್ತಿದ್ದ ಮಹಿಳೆಯೊಬ್ಬರನ್ನು ಕಂಡೆ. ಅವರೇ ಪದ್ಮಭೂಷಣ ಪ್ರಶಸ್ತಿ ಪಡೆದ ಗಂಗೂಬಾಯಿ ಹಾನಗಲ್ ಎಂದಾಗ ನನಗೆ ನಂಬಿಕೆಯೇ ಆಗಲಿಲ್ಲ. ಅಸಾಮಾನ್ಯರಾದ ಅವರು ಅತೀ ಸಾಮಾನ್ಯಳಾದ ನನ್ನೊಡನೆ ನಡೆದುಕೊಂಡದ್ದೇ ಹಾಗೆ. ಅವರ ಬಾಹ್ಯ ರೂಪದಂತೆಯೇ ಯಾವ ಭೇದಭಾವವನ್ನರಿಯದ ಸಾದಾ-ಸರಳ ಅಂತರಾತ್ಮ ಅವರದಾಗಿತ್ತೆನ್ನುವುದು ಅವರ ಒಡನಾಟ ದೊರೆತ ಅನೇಕರ ಅನುಭವ. ಮನೆಗೆ ಬಂದವರಿಗೆ ಆತಿಥ್ಯ ನೀಡಿ ಸತ್ಕರಿಸುವುದು ಅವರಿಗೆ ಪ್ರಿಯವಾದ ಕೆಲಸವಾಗಿತ್ತಂತೆ.
ದಿ. ಗಂಗೂಬಾಯಿ ಹುಟ್ಟಿದ್ದು ೫ ಮಾರ್ಚ್ ೧೯೧೨. ಹುಟ್ಟೂರು ಧಾರವಾಡ. ಸಂಗೀತ ವಿದ್ಯೆಯ ವಿಷಯದಲ್ಲಿ ಅವರಿಗೆ ಮನೆಯೇ ಮೊದಲ ಪಾಠಶಾಲೆ. ಜನನಿ ತಾನೆ ಮೊದಲ ಗುರುವು. ನಂತರ ದಿ. ಕೃಷ್ಣಾಚಾರ್ಯ ಹುಲಗೂರ ಹಾಗೂ ಸವಾಯಿ ಗಂಧರ್ವ ( ದಿ. ರಾಮಾಭಾಯಿ ಕುಂದಗೋಳಕರ) ರಲ್ಲಿ ಕಲಿಕೆ. ಸವಾಯಿ ಗಂಧರ್ವರ ಶಿಷ್ಯತ್ವ ಸಂಪಾದಿಸುವುದು ಸುಲಭವಾಗಿರಲಿಲ್ಲ. ಆರು ತಿಂಗಳ ಕಾಲ ದಿನವೂ ಹುಬ್ಬಳ್ಳಿಯಿಂದ ಕುಂದಗೋಳಕ್ಕೆ ಓಡಾಡಿದರು. ಆ ಮೇಲೇ ಇವರು ಶ್ರದ್ಧೆಯಿಂದ ಸಂಗೀತ ಸಾಧನೆ ಮಾಡಿಯಾರೆಂಬ ವಿಶ್ವಾಸ ಹುಟ್ಟಿ ಇವರನ್ನು ಶಿಷ್ಯೆಯೆಂದು ಸ್ವೀಕರಿಸಿದರಂತೆ (೧೯೩೨ರಲ್ಲಿ). ಗುರುವಿನಿಂದ ದೊರೆತ ಜ್ಞಾನಭಾಂಡಾರವನ್ನು ಸಂರಕ್ಷಿಸಿ ಬೆಳೆಸುತ್ತ ರಸಿಕರನ್ನು ಸ್ವರಗಂಗೆಯಲ್ಲಿ ತೇಲಿಸಿದರು. ಕಲಾಜೀವನದಲ್ಲಿ ವಿಧಿ ತಂದ ಆಘಾತಗಳು, ಜನನಿಂದೆ, ಮೂದಲಿಕೆ, ಉಪೇಕ್ಷೆ, ಆರ್ಥಿಕ ಏರುಪೇರು ಎಲ್ಲವನ್ನೂ ದಿಟ್ಟತನದಿಂದ ಎದುರಿಸಿ ಸಾಧನೆಯತ್ತ ಲಕ್ಷ್ಯವಿತ್ತರು. ಗಾಯನ-ವಾದನಗಳನ್ನು ಕಲೆಯೆಂದು ಗೌರವದಿಂದ ನೋಡದೆ ಉಪೇಕ್ಷಾಭಾವದಿಂದ ಕಾಣುತ್ತಿದ್ದ ಅಂದಿನ ದಿನಗಳಲ್ಲಿ ಸ್ವಲ್ಪವೂ ವಿಚಲಿತರಾಗದೆ ಸ್ವರಾರಾಧನೆ ಮಾಡಿದರು.
ದಿ.ಗಂಗೂಬಾಯಿಯವರು ಕಥಕ್ ನೃತ್ಯದ ಶಿಕ್ಷಣವನ್ನು ಪಡೆದಿದ್ದರು. ಅವರು ರಂಗಭೂಮಿಯ ನಟಿಯಾಗಿ ಸಮರ್ಥ ಅಭಿನಯ ನೀಡಿದ್ದನ್ನು ಕಂಡವರಿದ್ದಾರೆ. ಮರಾಠಿ ಚಿತ್ರಪಟವೊಂದರಲ್ಲಿ ಗಾಯಕಿಯಾಗಿ ಅಭಿನಯಿಸಿದ್ದರಂತೆ. ಸಂಗೀತವೃತ್ತಿಗೆ ಕಾಲಿಟ್ಟ ಹೊಸದರಲ್ಲಿ ಎಚ್.ಎಮ್.ವಿ. ಅವರು ಗಾಂಧಾರಿ ಹಾನಗಲ್ ಎಂಬ ಹೆಸರಿನಲ್ಲಿ ಮಾಡಿದ್ದ ಅವರ ಹನ್ನೆರಡು ಧ್ವನಿಮುದ್ರಿಕೆಗಳು ಸಾಕಷ್ಟು ಜನಪ್ರಿಯವಾಗಿದ್ದವಂತೆ.
ಪದ್ಮವಿಭೂಷಣ ಗಂಗೂಬಾಯಿ ೧೧ ರ ಎಳೆವಯಸ್ಸಿನಲ್ಲೇ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿ ಮಹಾತ್ಮಾ ಗಾಂಧಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸುಪ್ರಸಿದ್ಧ ಗಾಯಕ ಅಬ್ದುಲ್ ಕರೀಂ ಖಾನರೂ ಈ ಬಾಲಗಾಯಕಿಯನ್ನು ಮೆಚ್ಚಿಕೊಂಡಿದ್ದರು. ಮುಂದೆ ಸವಾಯಿ ಗಂಧರ್ವರ ಶಿಷ್ಯೆಯಾದ ಮೇಲೆ ಎಲ್ಲರ ಗಮನ ಸೆಳೆಯುತ್ತ ಖ್ಯಾತ ಬಾಲ ಗಾಯಕಿ ಎಂದೇ ಗುರುತಿಸಲ್ಪಡತೊಡಗಿದರು. ೧೯೫೦ ರಲ್ಲಿ ಟಾನ್ಸಿಲ್ಸ್ ಶಸ್ತ್ರಚಿಕಿತ್ಸೆಯ ನಂತರ ಧ್ವನಿ ಬದಲಾವಣೆಯಾದಾಗ ಅದನ್ನೇ ದೊಡ್ಡದು ಮಾಡಿ ಇಲ್ಲದ ಗೊಂದಲ ಮಾಡದೆ ದೃಢ ಮನಸ್ಸಿನಿಂದ ಸಂಗೀತ ಸಾಧನೆ ಮಾಡಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಗಿಟ್ಟಿಸಿದರು. ದೇಶ-ವಿದೇಶಗಳಲ್ಲಿ ಅವರ ಕಾರ್ಯಕ್ರಮಗಳಾಗಿವೆ. ಅವರಿಗೆ ೯೫ ವರ್ಷಗಳಾಗಿದ್ದಾಗ ಕೆ.ಎಲ್.ಇ. ಸಂಸ್ಥೆಯ ಕಾರ್ಯಕ್ರಮದಲ್ಲಿ (ಹತ್ತು ವರ್ಷಗಳ ಸುದೀರ್ಘ ವಿರಾಮದ ನಂತರ) ಅರ್ಧ ತಾಸು ಹಾಡಿದ್ದೇ ಅವರ ಕೊನೆಯ ಕಾರ್ಯಕ್ರಮ. ಅವರು ಪದ್ಮಭೂಷಣ, ಪದ್ಮವಿಭೂಷಣ ಮುಂತಾದ ೧೫ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರು. ಸುಮಾರು ನಲವತ್ತು ಡಾಕ್ಟರೇಟ್ ಗಳೂ ಇವರನ್ನರಸಿಕೊಂಡು ಬಂದಿವೆ. ಅವರ ಸ್ವರಾರಾಧನೆ , ಅಗಾಧ ಪಾಂಡಿತ್ಯ, ಶೈಲಿ, ನಿರೂಪಣಾ ಸಾಮರ್ಥ್ಯ, ವೈಶಿಷ್ಟ್ಯಗಳ ಬಗೆಗೆ ಆ ಕ್ಷೇತ್ರದ ದಿಗ್ಗಜರೆಲ್ಲರ ಅನಿಸಿಕೆಗಳು ದೇಶದ ಅನೇಕ ಪ್ರಸಾರ ಮಾಧ್ಯಮಗಳಲ್ಲಿ ಕಂಡು-ಕೇಳಿ ಬರುತ್ತಿವೆ. "ಸಾವಿರ ವರ್ಷಗಳಿಗೊಮ್ಮೆ ಹುಟ್ತುತ್ತಾರೆ ಇಂಥವರು" ಅನ್ನುತ್ತಾರೆ ಹಲವರು.
ತಮ್ಮ ಜ್ಞಾನವನ್ನು ನಿರ್ವಂಚನೆಯಿಂದ ಇತರರಿಗೆ ಬೋಧಿಸುವುದು ಇವರ ಇನ್ನೊಂದು ಹೆಗ್ಗಳಿಕೆ. ಸಮಕಾಲೀನ ಕಲಾಕಾರರ ವಿಷಯದಲ್ಲಿ ಆದರ-ಆತ್ಮೀಯತೆ, ಸಹಾಯಹಸ್ತ ಚಾಚುವುದು ಇವರ ಸ್ವಭಾವವಾಗಿತ್ತು. ಗುರುಗಳ ಅನಾರೋಗ್ಯ ಕಾಲದಲ್ಲಿ ತಮ್ಮಲ್ಲಿಯೇ ಅವರ ವಾಸದ ಏರ್ಪಾತು ಮಾಡಿ ಮಗಳ ಕೃಷ್ಣಾಳ ಕಲಿಕೆಯ ನೆಪದಲ್ಲಿ ಅವರಿಗೆ ಆರ್ಥಿಕ ಸಹಾಯ ಮಾಡಿದರು. ೨೦೦೫ ರಲ್ಲಿ ಹುಬ್ಬಳ್ಳಿಯ ತಮ್ಮ ಮನೆ ಗಂಗಾ ಲಹರಿಯನ್ನು ಸಂಗೀತಕ್ಕೇ ಅರ್ಪಿಸಿದರು. ಸಂಗೀತಪ್ರೇಮೀ ರಸಿಕ ಕಲಾಸಾಧಕರಿಗೆ ಅದೊಂದು ಆದರದ ಸ್ಥಾನವಾಗಿದೆ. ಅವರಿಗೆ ದೊರೆತ ಪುರಸ್ಕಾರಗಳು, ಛಾಯಾಚಿತ್ರಗಳು, ವಾದ್ಯಗಳು, ಸಂಗೀತದ ಮಾಹಿತಿ ಸಾಹಿತ್ಯಗಳ ಸಂಗ್ರಹ ಮುಂತಾದವುಗಳನ್ನು ನೋಡಬಹುದು.
ಕೆಲವರ್ಷಗಳಿಂದ ಕರ್ಕರೋಗದಿಂದ ಬಳಲುತ್ತಿದ್ದ ಅವರು ಜುಲೈ ೨೧ರಂದು ಬೆಳಗಿನ ೭ಗಂಟೆ ೧೫ ನಿಮಿಷಕ್ಕೆ ಅನಂತದಲ್ಲಿ ಲೀನವಾದರು. ಅಪಾರ ಜನರನ್ನು ತಣಿಸಿದ್ದ ಗಾನಗಂಗೆ ಶಿವನ ಪಾದ ಸೇರಿತು.

ವೇದಗಣಿತ ಭಾಗ -೪

ಮಹಾಬಲ ಭಟ್

ಹಿಂದಿನ ಸಂಚಿಕೆಯಲ್ಲಿ ಗುಣಾಕಾರ ಚಿಹ್ನೆಯ ಒಂದು ಬದಿಯಲ್ಲಿ ಕೇವಲ ೯ರಿಂದ ಆದ ಸಂಖ್ಯೆಯಿದ್ದರೆ ಗುಣಾಕಾರ ಮಾಡುವ ವಿಧಾನವನ್ನು ಕಲಿತೆವು. ಕೊನೆಯಲ್ಲಿ ಅಭ್ಯಾಸಕ್ಕಾಗಿ ಕೊಟ್ಟ ಸಂಖ್ಯೆಗಳಲ್ಲಿ ಒಂದು ೬೩x೯೯೯. ಇಲ್ಲಿ ಗುಣ್ಯದಲ್ಲಿ ಎರಡು ಅಂಕೆಗಳು, ಗುಣಕದಲ್ಲಿ ಮೂರು ಅಂಕೆಗಳೂ ಇವೆ. ನಾವು ಹಿಂದೆ ಕೊಟ್ಟ ಉದಾಹರಣೆಗಳಲ್ಲಿ ಎರಡೂ ಕಡೆ ಸಮಾನ ಅಂಕೆಗಳಿದ್ದವು ಇಂತಹ ಸಂದರ್ಭದಲ್ಲಿ ಈ ಕೆಳಗಿನಂತೆ ಸುಲಭವಾಗಿ ಸಮಸ್ಯೆಯನ್ನು ಬಿಡಿಸಬಹುದು.
೬೩x೯೯೯
೬೨ ೯ ೩೭
ಗುಣಕದಲ್ಲಿ ಒಂದು ಒಂಭತ್ತು ಹೆಚ್ಚಿಗೆ ಇರುವುದರಿಂದ ಅದನ್ನು ಮೊದಲನೆಯ ಹಂತದ ನಂತರ ಎರಡನೆಯ ಹಂತದ ಆರಂಭಕ್ಕಿಂತ ಮೊದಲು ಬರೆದು ಹಿಂದಿನ ಕ್ರಮವನ್ನೇ ಅನುಸರಿಸಬೇಕು.
ಇನ್ನೊಂದು ಉದಾಹರಣೆ:
೪೫x೯೯೯೯೯೯= ೪೪ ೯೯೯೯ ೫೪
ಈಗ ಮತ್ತೊಂದು ರೀತಿಯ ಸಮಸ್ಯೆಯನ್ನು ಕೈಗೆತ್ತಿಕೊಳ್ಳೋಣ
೭೩೯೫x೯೯
ಇಲ್ಲಿ ಗುಣಕದಲ್ಲಿ ಕಡಿಮೆ ಅಂಕಗಳಿವೆ. ಈ ಸಮಸ್ಯೆಯನ್ನು ಈ ಕೆಳಗಿನಂತೆ ಬಿಡಿಸಬಹುದು.
೭೩೯೫*೯೯
೭೩ ೯೪
-೭೩
೭೩ ೨೧ ೦೫
ಇನ್ನೊಂದು ಉದಾಹರಣೆ:
೫೬೯೪೯೩೧ x ೯೯೯
೫೬೯೪ ೯೩೦
-೫ ೬೯೪
೫೬೮೯ ೨೩೬ ೦೬೯

ಸ್ಪೂರ್ತಿಯ ಸೆಲೆ

ಅಖಿಲಾ ಕುರಂದವಾಡ

ಬರೆಯಲು ಕುಳಿತೆ ನಾನೊಂದು ಕವಿತೆ
ವಿಚಾರದ ಸುಳಿವಿಲ್ಲ
ಪದಪಂಕ್ತಿಯ ನೆರಳಿಲ್ಲ
ಯೋಚಿಸುತ್ತಲೇ ಕಳೆದೆ ಒಂದೆರಡು ಗಂಟೆ
ಹಿಡಿತವಿಲ್ಲದ ಮನಕೆ
ಹಾಕುವುದೆಂತು ಕಡಿವಾಣ
ಓಡುತಿದೆ ಮರ್ಕಟದಂತೆ
ಕೈಗೆಟುಕದೆ ಎತ್ತಬಂದತ್ತ
ಬರೆಯುವ ಚಪಲ ಒಂದೆಡೆ
ಕರ್ತವ್ಯದ ಸೆಲೆತ ಇನ್ನೊಂದೆಡೆ
ಮನದುಯ್ಯಾಲೆಯಲಿ
ಕುಳಿತೇ ಇದ್ದೆ ಛಲದಂಕ ಮಲ್ಲನಂತೆ
ಸೂರ್ಯ ಕಿರಣಗಳ ನೆರವಿಲ್ಲ
ಚಂದ್ರ-ತಾರೆಗಳ ಆಸರೆ ಇಲ್ಲ
ಹೊಳಪನ್ನು ಅರಸುತ್ತ ಕಳೆದೆ
ಮತ್ತಷ್ಟು ಘಳಿಗೆ
ಮೇಘರಾಜನ ಆರ್ಭಟವು
ಮಿಂಚಂತೆ ಸೇರಿ ಬಡಿದೆಬ್ಬಿಸಿತು
ಸ್ಪೂರ್ತಿಯ ಸೆಲೆಯನ್ನು
ಮನದ ಮಂದಿರದಲ್ಲಿ
ಬರೆಯುವ ಕೈಗಳು
ಸೆಣಸುವ ಮನವು
ಅಣಿಗೊಂಡು ಬರೆಯತೊದಗಿದೆ
ಅಳುಕದೆ ಹಲವು ಸಾಲುಗಳನ್ನು

ಭಾಷೆಯ ಗೊಂದಲ

ಮಹಾಬಲ ಭಟ್

ಮುಕ್ತಿಯ ಸ್ವರ್ಣಜಯಂತಿಯನ್ನು ಆಚರಿಸಿಕೊಳ್ಳುತ್ತಿರುವ ಗೋವಾದಲ್ಲಿ ದೊಡ್ಡ ಗೊಂದಲವೇರ್ಪಟ್ಟಿದೆ. ಅದು ಭಾಷೆಗೆ ಸಂಬಂಧಿಸಿದ್ದು. ತನ್ನ ವಿವಿಧತೆಗೆ ಹೆಸರಾದ ಭಾರತದಲ್ಲಿ ಪ್ರತ್ಯೇಕ ರಾಜ್ಯಕ್ಕೂ ಅದರದೇ ಆದ ಭಾಷೆಯೆಂಬುದಿದೆ. ನಾಡು-ನುಡಿಗಳ ಸಂಬಂಧ ಅವಿನಾಭಾವವಾದದ್ದು ಎಂಬುದನ್ನು ಪ್ರತಿಯೊಂದು ರಾಜ್ಯದ ಪ್ರಜೆಯೂ ಒಪ್ಪುತ್ತಾನೆ. ಅಲ್ಲದೆ ತನ್ನ ನಾಡನ್ನು ಗೌರವಿಸಿದಷ್ಟೇ ನುಡಿಯನ್ನೂ ಗೌರವಿಸುತ್ತಾನೆ. ತನ್ನ ತಾಯಿ, ತಾಯ್ನಾಡು ತಾಯ್ನುಡಿಗಳನ್ನು ಸಮಾನವಾಗಿ ಗೌರವಿಸುತ್ತಾನೆ. ಆದರೆ ಇದು ಗೋವಾದಲ್ಲಿ ಆಗುತ್ತಿಲ್ಲ. ಪರಕೀಯರ ಆಳ್ವಿಕೆಯಿಂದ ಮುಕ್ತಿ ಪಡೆದು ೫೦ ವರ್ಷಗಳು ಉರುಳಿದರೂ ತಮ್ಮ ತಾಯ್ನೆಲದಲ್ಲಿ ತಾಯ್ನುಡಿಗೊಂದು ಗೌರವದ ಸ್ಥಾನವನ್ನು ಕೊಡಲು ಗೋವೀಯರು ವಿಫಲರಾಗಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿ.
ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ದೊರಕಬೇಕು ಎಂಬುದು ಅನೇಕ ಭಾಷಾ ಶಾಸ್ತ್ರಜ್ಞರ ಹಾಗೂ ಮನೋವಿಜ್ಞಾನಿಗಳ ಅಂಬೋಣ. ತಾನು ಮನೆಯಲ್ಲಿ ಆಡುತ್ತಿರುವ ಭಾಷೆಯನ್ನೇ ಶಾಲೆಯಲ್ಲಿಯೂ ಕೇಳಿದಾಗ ಸಹಜವಾಗಿಯೇ ಮಗುವಿನ ಮನಸ್ಸು ಉಲ್ಲಸಿತವಾಗಿ ಕಲಿಕೆಯತ್ತ ವಾಲುತ್ತದೆ ಎಂಬುದು ಯಾರಾದರೂ ಊಹಿಸಬಹುದಾದ ಸಂಗತಿ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಗುವಿನ ಹಕ್ಕೂ ಕೂಡ ಹೌದು. ಪ್ರಾಥಮಿಕ ಸ್ತರದಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಅಧ್ಯಯನ ಮಾಡದಿದ್ದರೆ ಮುಂದೆ ಇಂಗ್ಲೀಷ್ ಭಾಷೆಯ ಮೇಲೆ ಪ್ರಭುತ್ವ ಸಿಗಲಿಕ್ಕಿಲ್ಲ ಎಂಬ ಭ್ರಮೆ ಅನೇಕರದು. ಹಾಗಾಗಿ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಕಳಿಸಲು ಪಾಲಕರು ಮುಗಿ ಬೀಳುತ್ತಾರೆ. ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಕಳಿಸಲು ಇನ್ನೂ ಅನೇಕ ಕಾರಣಗಳಿವೆ.
ಬ್ರಿಟೀಷರು ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿ ಸಾರ್ವಜನಿಕ ಶಿಕ್ಷಣದ ಹೆಸರಿನಲ್ಲಿ ಇಂಗ್ಲೀಷ್ ಶಿಕ್ಷಣವನ್ನು ನೀಡಲು ಅರಂಭಿಸಿದಾಗ ಬುದ್ಧಿಜೀವಿಗಳಿಗೆ ಅದೊಂದು ಪ್ರತಿಷ್ಠೆಯ ವಿಷಯವಾಯಿತು. ಇಂಗ್ಲೀಷ್ ವಿಷಯದಲ್ಲಿ ಪದವಿ ಪಡೆದ ಪ್ರಥಮ ಭಾರತೀಯನನ್ನು ಮೆರವಣಿಗೆ ಮಾಡಿ ಇಂಗ್ಲೀಷ್ ಕಲಿತವರಿಗೆ ಈ ರೀತಿಯ ಗೌರವ ಸಿಗುತ್ತದೆ ಎಂದು ತೋರಿಸಿದರು. ಎಷ್ಟೋ ಆಮಿಷಗಳನ್ನು ಒಡ್ಡಿ ಇಂಗ್ಲೀಷಿನತ್ತ ಜನರನ್ನು ಆಕರ್ಷಿಸಿದರು. ಇಂಗ್ಲೀಷ್ ಕಲಿತವರಿಗೆ ವಿದೇಶಕ್ಕೆ ಹೋಗುವ ಅವಕಾಶ ದೊರೆಯಿತು. ಇಂಗ್ಲೀಷ್ ಕಲಿತವರು ಗೌರವಸ್ಥರಾದರು. ಈ ಮಾನಸಿಕತೆ ನಮಗೆ ಇನ್ನೂ ಹೋಗಿಲ್ಲ. ಗೋವಾದ ಒಬ್ಬ ಪ್ರಜೆ ತನಗೆ ಕೊಂಕಣಿ ಬರದಿದ್ದರೆ ಅದನ್ನು ತಮಾಷೆಯಾಗಿ ಹೇಳುತ್ತಾನೆ. ಅದೇ ಇಂಗ್ಲೀಷ್ ಬರದಿದ್ದರೆ ಅದು ನಾಚಿಕೆಯ ವಿಷಯವೆಂಬಂತೆ ತಲೆತಗ್ಗಿಸಿ ಹೇಳುತ್ತಾನೆ. ಈ ಸ್ಥಿತಿ ಎಲ್ಲ ರಾಜ್ಯಗಳಲ್ಲೂ ಇದೆ.
ಇಂಗ್ಲೀಷ್ ಮಾಧ್ಯಮಶಾಲೆಗೆಳಿಗೆ ಹೋಗುವವರು ಹೆಚ್ಚಾಗಿ ಸಿರಿವಂತರ ಮಕ್ಕಳು ಅಂತಹ ಶಾಲೆಗಳು ಪಾಲಕರಿಂದ ಹಣವನ್ನು ಸ್ವೀಕರಿಸಿ ಉತ್ತಮ ವ್ಯವಸ್ಥೆಯನ್ನು ಮಾಡುತ್ತವೆ. ಮಕ್ಕಳ ಸಲುವಾಗಿ ಹಣ ಖರ್ಚು ಮಾಡಲು ಸಿದ್ಧವಿರುವ ಪಾಲಕರು ಅಲ್ಲಿಗೇ ತಮ್ಮ ಮಕ್ಕಳನ್ನು ಕಳಿಸಲು ಇಷ್ತಪಡುತ್ತಾರೆ. ಮಕ್ಕಳು ಉತ್ತಮ ವಾತಾವರಣದಲ್ಲಿ ಬೆಳೆಯುತ್ತಾರೆ ಎಂಬುದು ಅವರ ಅಂಬೋಣ. ಸರಕಾರಿ ಶಾಲೆಗಳಲ್ಲಿ ಇಂತಹ ವಾತಾವರಣ ಇಲ್ಲದಿರುವುದರಿಂದ, ಅಲ್ಲಿಗೆ ಬರುವವರು ಸ್ಥಿತಿವಂತರಲ್ಲದ ಶ್ರಮಿಕ ವರ್ಗದ ಮಕ್ಕಳಾದುದರಿಂದ, ಅವರೊಂದಿಗೆ ತಮ್ಮ ಮಕ್ಕಳು ಬೆರೆತು ಆಟವಾಡುವುದು ಈ ಪಾಲಕರಿಗೆ ಇಷ್ಟವಿಲ್ಲದುದರಿಂದ ’ಪೊಶ್’ ಎಂದು ಕರೆಸಿಕೊಳ್ಳುವ ಜನ ತಮ್ಮ ಮಕ್ಕಳನ್ನು ಸರಕಾರಿಶಾಲೆಗಳಿಗೆ ಕಳಿಸುವುದಿಲ್ಲ. ಇಲ್ಲಿ ಮಾಧ್ಯಮಕ್ಕಿಂತ ಹೆಚ್ಚಾಗಿ ಶಾಲೆಯ ವಾತಾವರಣ ನಿರ್ಣಾಯಕವಾಗಿರುತ್ತದೆ. ಮರಾಠಿ ಮಾಧ್ಯಮದಲ್ಲಿ ಶಿಕ್ಷಣನೀಡುವ ಅನೇಕ ಖಾಸಗಿ ಶಾಲೆಗಳ ದು:ಸ್ಥಿತಿಯೂ ಇದೇ ರೀತಿಯಾಗಿದೆ. ಮೇಲ್ವರ್ಗದ ಜನರು ಮೆಚ್ಚುವಂತಹ ವಾತಾವರಣಯುಕ್ತ ಸ್ಥಾನೀಯಭಾಷಾ ಮಾಧ್ಯಮದ ವಿದ್ಯಾಲಯಗಳ ಆವಶ್ಯಕತೆ ಇದೆ. ಇಂತಹ ಪಾಲಕರು ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ದೊರೆತರೂ ಅಲ್ಲಿಗೆ ತಮ್ಮ ಮಕ್ಕಳನ್ನು ಕಳಿಸುವುದಿಲ್ಲ.
ಕರ್ನಾಟಕದಂತಹ ರಾಜ್ಯದಲ್ಲೂ ಮಾತೃಭಾಷೆಯಲ್ಲಿ ಶಿಕ್ಷಣಕೊಡುವ ಪ್ರಾಥಮಿಕ ವಿದ್ಯಾಲಯಗಳಿಗೆ ಮಾತ್ರ ಅನುದಾನ ಸಿಗುತ್ತದೆ. ಅಂದಾಕ್ಷಣ ಆಂಗ್ಲ ಮಾಧ್ಯಮಶಾಲೆಗಳೇ ಇಲ್ಲ ಅಂತಿಲ್ಲ. ಖಾಸಗಿಯಾಗಿ ಅಂತಹ ಶಾಲೆಗಳು ನಡೆಯುತ್ತಲೇ ಇವೆ. ಜನರು ತಮ್ಮ ಮಕ್ಕಳನ್ನು ಆ ಶಾಲೆಗಳಿಗೆ ಕಳಿಸುತ್ತಲೇ ಇದ್ದಾರೆ. ಅದಕ್ಕೆ ಸರಕಾರದ ಅನುಮತಿಯೂ ಇದೆ. ಭಾರೀ ಶುಲ್ಕ, ಡೊನೇಶನ್‌ಗಳನ್ನು ನೀಡಲಾರದವರು ನಿರಾಸೆ ಅನುಭವಿಸುತ್ತಾರೆ. ಆಂಗ್ಲ ಮಾಧ್ಯಮಶಾಲೆಗಳಿಗೆ ಅನುದಾನ ನೀಡುವುದರಿಂದ ಬಡಮಕ್ಕಳಿಗೂ ಈ ಭಾಗ್ಯದೊರೆಯುತ್ತದೆ ಎಂಬುದು ಆಂಗ್ಲವಾದಿಗಳ ವಾದ. ತಮ್ಮ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಓದಿಸಬೇಕು ಎಂಬುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಎಲ್ಲ ಪಾಲಕರಿಗೂ ಸಿಗಬೇಕು ಎನ್ನುವುದು ಅವರ ಅಭಿಮತ ಆಂಗ್ಲಮಾಧ್ಯಮಶಾಲೆಗಳಿಗೆ ಅನುದಾನ ದೊರೆತಾಗ ಶುಲ್ಕದ ಕಾರಣದಿಂದ ಆಯ್ಕೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಭಯವಿಲ್ಲ. ಅಷ್ಟಾದರೂ ಮರಾಠಿ/ಕೊಂಕಣಿ ಮಾಧ್ಯಮವನ್ನೇ ಇಷ್ಟಪಡುವವರು ಹಾಗೆ ಮಾಡಲು ಈಗಲೂ ಸ್ವತಂತ್ರರು ಎಂಬುದು ಬಲವಾದ ವಾದ.
ಜೀವನದಲ್ಲಿ ಉನ್ನತಿಯನ್ನು ಸಾಧಿಸಲು ಅಥವಾ ಉತ್ತಮ ಉದ್ಯೋಗ ಸಂಪಾದಿಸಲು ಆಂಗ್ಲಭಾಷೆ ಅತ್ಯವಶ್ಯಕವೆ? ಮೇಲ್ನೋಟಕ್ಕೆ ಇದಕ್ಕೆ ಉತ್ತರ ’ಹೌದು’ ಎಂದೇ ತೋರುತ್ತದೆ. ಇದೇ ಪ್ರಶ್ನೆಯನ್ನು ಒಬ್ಬ ಜಪಾನಿ, ಚೀನೀ ಅಥವಾ ಬ್ರಿಟಿಷೇತರ ಯಾವುದೇ ಯುರೋಪಿಯನ್ನನನ್ನು ಕೇಳಿದರೂ ಉತ್ತರ ’ಇಲ್ಲ’ ಹಾಗಾದರೆ ಭಾರತದಲ್ಲಿ ಈ ಹೌದನ್ನು ಸೃಷ್ಟಿಸಿದವರ್ಯಾರು? ಬ್ರಿಟೀಷರು ಸೃಷ್ಟಿಸಿದ ಈ ಹೌದನ್ನು ನಾವು ಅಭಿಮಾನಶೂನ್ಯರು ಮುಂದುವರಿಸುತ್ತಿದ್ದೇವೆ. ಇಂದು ಅನೇಕ ಭಾರತೀಯರು ಚೀನೀ ಭಾಷೆಯನ್ನು ಕಲಿಯಲು ಮುಂದೆ ಬರುತ್ತಿದ್ದಾರೆ ಅದಕ್ಕೆ ಕಾರಣ ಚೀನಾ ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿರುವುದರಿಂದ. ಜಾಗತೀಕರಣದಲ್ಲಿ ’ನಮ್ಮ ಭಾಷೆ’, ’ಪ್ರಾದೇಶಿಕ ಭಾಷೆ’ ’ಮಾತೃಭಾಷೆ’ ಎಂಬುದೆಲ್ಲ ಅಸಂಬದ್ಧ ಪ್ರಲಾಪ, ನಾವು ಇಂತಹ ಸಂಕುಚಿತಭಾವನೆಯನ್ನು ತೊಡೆದುಹಾಕಬೇಕು ಎಂಬುದು ವಿಚಾರವಾದಿಗಳೆಂದು ತಮ್ಮನ್ನು ತಾವೇ ಕರೆದುಕೊಳ್ಳುವವರ ಹೇಳಿಕೆ. ಆದರೆ ಈ ವಿಚಾರವಾದಿಗಳು ಗಮನಿಸಬೇಕಾದ ಅಂಶವಿದೆ. ಜಾಗತೀಕರಣ ಎಂದಾಕ್ಷಣ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮಾಡುವುದು, ವಿದೇಶೀ ವಸ್ತುಗಳನ್ನು ಆಮದು ಮಾಡಿ ಉಪಯೋಗಿಸುವುದು ಇಷ್ಟೇ ಅಲ್ಲ. ನಮ್ಮ ಸಂಸ್ಕೃತಿಯ ಪ್ರಸಾರ, ನಮ್ಮ ಉದ್ಯಮದ ವಿಸ್ತರಣೆ ಇವು ಕೂಡ ಜಾಗತಿಕರಣದಿಂದ ಸಾಧ್ಯ. ಇಂದು ಚೀನಾ, ಜಪಾನ್ ದೇಶಗಳು ತಮ್ಮ ಭಾಷೆ ಸಂಸ್ಕೃತಿಗಳ ಬಗ್ಗೆ ಅಭಿಮಾನ ಹೊಂದಿರುವುದರಿಂದಲೇ ಅಲ್ಲಿಗೆ ಹೋಗಬೇಕಾದ ನಾವು ಅವನ್ನು ಕಲಿಯಬೇಕು. ಜಗತ್ತಿನ ಇತರ ದೇಶಗಳು ಭಾರತೀಯ ಭಾಷೆಗಳನ್ನು ಅಧ್ಯಯನಮಾಡುವಂತೆ ಮಾಡಬೇಕು ಅಂದಾದರೆ ನಾವು ಮೊದಲು ಅವುಗಳ ಬಗ್ಗೆ ಅಭಿಮಾನ ಹೊಂದಿರಬೇಕು. ನಮ್ಮ ಮೂಲ ಸಂಸ್ಕೃತಿಯನ್ನೆಲ್ಲ ಕಟ್ಟಿಟ್ಟು ಭಾರತ ಸೂಪರ್ ಪವರ್ ಆದರೆ ಅಮೇರಿಕ ಸೂಪರ್ ಪವರ್ ಆಗುವುದಕ್ಕೂ, ಭಾರತ ಆಗುವುದಕ್ಕೂ ಏನೂ ವ್ಯತ್ಯಾಸ ಉಳಿಯುವುದಿಲ್ಲ.
ಭಾಷೆಗೂ ಸಂಸ್ಕೃತಿಗೂ ಸಂಬಂಧವಿದೆಯೆ? ಎಂಬುದು ಒಂದು ಮುಖ್ಯ ಪ್ರಶ್ನೆ. ಆಂಗ್ಲ ಮಾಧ್ಯಮದಲ್ಲಿ ಕಲಿತವರು ಉಳಿದವರಿಗಿಂತ ಚೆನ್ನಾಗಿ ’ಗುಡ್ ಮಾರ್ನಿಂಗ್’ ಹೇಳಬಲ್ಲರು, ಸೀನು ಬಂದರೂ ’ಸಾರಿ’ ಹೇಳುವರು, ಹೇಳಿದ್ದು ಕೇಳಿಸದಿದ್ದರೆ ’ಆಂ’ ಬಾಯಿ ತೆರೆಯುವುದಿಲ್ಲ ’ಐ ಬೆಗ್ ಯುವರ್ ಪಾರ್ಡನ್’ ಎಂದು ವಿನಯ ತೋರಿಸುತ್ತಾರೆ, ಪ್ರಾದೇಶಿಕಭಾಷೆಯಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿತವರಿಗೆ ಈ ಎಲ್ಲ ’ಮ್ಯಾನರ್ಸ್’ ಗೊತ್ತಿರುವುದಿಲ್ಲ. ಅಂತಿರುವಾಗ ಇಂಗ್ಲೀಷಿನಿಂದ ಸಂಸ್ಕೃತಿಯ ನಾಶ ಎಂಬುದು ಸುಳ್ಳಲ್ಲವೆ?
ಸಂಸ್ಕೃತಿ ಎಂದರೇನು? ’ಸಮ್ಯಕ್ ಕೃತಿ’. ಸರಿಯಾದ ನಡತೆ. ಆದರೆ ’ಮ್ಯಾನರ್ಸ್’ ಮಾತ್ರ ಸಂಸ್ಕೃತಿಯಲ್ಲ. ನನ್ನ ದೃಷ್ಟಿಯಲ್ಲಿ ಯಾವ ಸಂಸ್ಕೃತಿಯೂ ಕೆಟ್ಟದಲ್ಲ. ವಿದೇಶಿ ಸಂಸ್ಕೃತಿಯಲ್ಲೂ ಒಳ್ಳೆಯ ಅಂಶಗಳಿವೆ. ನಮ್ಮ ಸಂಸ್ಕೃತಿಯಲ್ಲೂ ಕೆಟ್ಟ ಅಂಶಗಳಿವೆ. ಆದರೆ ನಾವು ವಿದೇಶಿ ಸಂಸ್ಕೃತಿಯಲ್ಲಿರುವ ಒಳ್ಳೆಯ ಅಂಶಗಳನ್ನು ಅವರ ಮುಖಮುಸ್ತುತಿ ಮಾಡುವುದಕ್ಕೆ ಮಾತ್ರ ಹಾಗೂ ಕೆಟ್ಟ ಅಂಶಗಳನ್ನು ಅನುಸರಿಸಲು ಮಾತ್ರ ಉಪಯೋಗಿಸುವುದರಿಂದ ನಮ್ಮ ಸಂಸ್ಕೃತಿಯ ಒಳ್ಳೆಯ ಅಂಶಗಳೂ ಮರೆಯಾಗುತ್ತಿವೆ. ಆಂಗ್ಲ ಸಂಸ್ಕೃತಿ ಅದು ಹುಟ್ಟಿ ಬೆಳೆದ ದೇಶಕ್ಕೆ ಸರಿಯಾದುದೇ ಇರಬಹುದು. ಅದು ಕೆಟ್ಟದೆನ್ನಲು ನಮಗೆ ಅಧಿಕಾರವಿಲ್ಲ. ಆದರೆ ಅದನ್ನು ಅಂಧಾನುಕರಣೆ ಮಾಡಿ ’ಸ್ಕರ್ಟ್-ಕೋಟ್’ ಧರಿಸುವುದು ಒಳ್ಳೆಯದು ’ಸಲ್ವಾರ್’ ಧರಿಸುವುದು ಕೆಲಸದವರು ಮಾತ್ರ ಎಂಬ ಭಾವನೆ ತಳೆದರೆ ಅದರಿಂದ ತುಂಬ ಅಪಾಯವಿದೆ.
ಆಂಗ್ಲಭಾಷೆಯ ಮೂಲಕವೂ ಭಾರತೀಯ ಸಂಸ್ಕೃತಿಯನ್ನು ಕಲಿಸಬಹುದು ಎಂಬುದು ಮರೀಚಿಕೆಯೇ ಸರಿ. ಆಂಗ್ಲ ಮಾಧ್ಯಮ ಪೂರ್ವಪ್ರಾಥಮಿಕ ಶಾಲೆಯೊಂದನ್ನು ಹೊಕ್ಕು ನೋಡಿ. ಅಲ್ಲಿನ ಗೋಡೆಯ ಮೇಲೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಒಂದು ಚಿತ್ರವಾದರೂ ಇದ್ದರೆ ಹೇಳಿ. ಅಲ್ಲಿ ಸಿಂಡ್ರೆಲಾ ಇರುತ್ತಾಳೆ, ಝಾನ್ಸಿ ರಾಣಿಯ ಸುದ್ದಿಯಿಲ್ಲ, ಮಿಕ್ಕಿ ಮೌಸ್ ಇರುತ್ತದೆ, ಭಾರತೀಯ ಇಲಿ ಇಲ್ಲ, ಚಾರ್ಲಿ ಚಾಪ್ಲಿನ್ ಮುಂತಾದವರು ಇರುತ್ತಾರೆ ಶಿವಾಜಿ, ಸಂಭಾಜಿಗಳ ಸುಳಿವಿಲ್ಲ. ಭಾರತೀಯ ಸಂಸ್ಕೃತಿಯನ್ನು ಆಧರಿಸಿದ, ಭಾರತದ ಪರಿಸರವನ್ನು ಪ್ರತಿಬಿಂಬಿಸುವ ಒಂದೇ ಒಂದು ನರ್ಸರಿ ’ರೈಮ್’ ಇದ್ದರೆ ಹೇಳಿ. ನಮ್ಮ ದೇಶದ ರಾಜ ಮಹಾರಾಜರ ಪರಿಚಯವಿಲ್ಲದ ಮುಗ್ಧ ಮನಸ್ಸಿನಲ್ಲಿ ಇಂಗ್ಲೆಂಡ್ ರಾಣಿಯನ್ನು ತಂದು ಕೂಡ್ರಿಸುತ್ತೇವೆ. ಅದೇ ಹಳೆ ’ಪುಸಿ ಕ್ಯಾಟ್’ ಇಂಗ್ಲೆಂಡ್‌ಗೆ ಇಲಿಯನ್ನು ಹುಡುಕಿಕೊಂಡು ಹೋಗಿ ರಾಣಿಯ ಕುರ್ಚಿಯ ಕೆಳಗಿರುವ ಇಲಿಯನ್ನು ಹೆದರಿಸುತ್ತದೆ. ಬ್ರಿಟಿಷರು ನಮ್ಮನ್ನು ಬಿಟ್ಟು ಹೋಗಿ ೬೪ ವರ್ಷಗಳಾದರೂ ನಾವಿನ್ನೂ ಅದೇ ದಾಸ್ಯದ ಹಾಡನ್ನು ನಮ್ಮ ಮಕ್ಕಳಿಗೆ ಕಲಿಸುತ್ತೇವೆ. ಇಂಗ್ಲೀಷ್ ಪಾಠಗಳಲ್ಲಿ ಜಾನ್, ಪೀಟರ್ ಬರುತ್ತಾರೆ, ರಾಮ ಲಕ್ಷ್ಮಣರಿಗೆ ಅಲ್ಲಿ ಅವಕಾಶ ಇಲ್ಲ. ಇಂಗ್ಲೀಷ್ ಹಾಡನ್ನು ಹಿಂದೂಸ್ತಾನಿ ಪದ್ಧತಿಯಲ್ಲೋ ಕರ್ನಾಟಕಿ ಶೈಲಿಯಲ್ಲೋ ಹಾಡಲು ಸಾಧ್ಯವೆ? ಹೀಗಿರುವಾಗ ಇಂಗ್ಲೀಷ್ ಮಾಧ್ಯಮದಿಂದ ಭಾರತೀಯ ಸಂಸ್ಕೃತಿಗೆ ಯಾವುದೇ ಹಾನಿಯಿಲ್ಲ ಎನ್ನುವುದು ಹೇಗೆ?
ಸಂಸ್ಕೃತಿಯ ವಿಚಾರ ಬರುವುದು ಹೊಟ್ಟೆ ತುಂಬಿದ ಮೇಲೆ. ಸಂಸ್ಕೃತಿಯ ಬಗ್ಗೆ ಚಿಂತಿಸುತ್ತಿದ್ದರೆ ಹೊಟ್ಟೆ ತುಂಬುವುದಿಲ್ಲ. ಇಂಗ್ಲೀಷ್ ಮಾಧ್ಯಮ ಉದ್ಯೋಗ ಸಿಗಲು ಸಹಾಯ ಮಾಡುತ್ತದೆ ಎಂಬುದು ಇನ್ನೊಂದು ವಾದ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತವರು ಮಾತ್ರ ನೌಕರಿ ಗಿಟ್ಟಿಸುತ್ತಾರೆ ಎಂಬುದು ವ್ಯರ್ಥ ವಾದವೆಂದು ಅನಿಸುತ್ತದೆ. ಹಳ್ಳಿಯ ಶಾಲೆಗಳಲ್ಲಿ ಮಾತೃಭಾಷಾ ಮಾಧ್ಯಮದಲ್ಲಿ ಓದಿದ ಎಷ್ಟೋ ಮಂದಿ ಇಂದು ನಮ್ಮ ದೇಶದಲ್ಲೂ ಪರದೇಶದಲ್ಲೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂಬುದು ಅಪ್ಪಟ ಸತ್ಯ. ತಮ್ಮ ಮಾತೃಭಾಷೆಯಲ್ಲೇ ಅಧ್ಯಯನ ಮಾಡಿದ ಕನ್ನಡಿಗರು, ತಮಿಳರು ಉನ್ನತ ಹುದ್ದೆಗಳನ್ನು ಗಿಟ್ಟಿಸುತ್ತಾರೆ. ಡಾ. ಅಬ್ದುಲ್ ಕಲಾಮ್, ಡಾ. ರಘುನಾಥ ಮಾಶೆಲ್ಕರ್ ಇವರೆಲ್ಲ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣಪಡೆದವರು. ಹಾಗಾಗಿ ಅವರಿಗೆ ವಿದೇಶಕ್ಕೆ ಹೋಗುವುದಕ್ಕಿಂತ ದೇಶದ ಅಭಿವೃದ್ಧಿಯೇ ಮುಖ್ಯವಾಗಿತ್ತು.
ಇಂದು ಇಂಗ್ಲೀಷಿನ ಜ್ಞಾನವಿಲ್ಲದೆ ನೌಕರಿ ಸಾಧ್ಯವಿಲ್ಲ ಅಂದರೆ ಅದಕ್ಕೆ ನಾವೇ ಹೊಣೆ. ಸ್ವಾಭಿಮಾನದ ಅಭಾವದಿಂದಾಗಿ ಅಂತಹ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಇನ್ನು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವುದು ಹಾಗು ವಿದೇಶದಲ್ಲಿ ಉದ್ಯೋಗ ಗಿಟ್ಟಿಸುವುದೇ ಜೀವನದ ಪರಮ ಸಾರ್ಥಕತೆ ಎಂದು ತಿಳಿದವರಿಗೆ ಆಂಗ್ಲ ವ್ಯಾಮೋಹ ಇರುವುದು ಸಹಜ.
ಮುಕ್ತಿಸಂಗ್ರಾಮದ ಸುವರ್ಣಮಹೋತ್ಸವ ವರ್ಷದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿರುವುದು ನಾಚಿಕೆಯ ಸಂಗತಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳನ್ನು ಅವಮಾನಿಸುತ್ತಿರುವುದು ಇನ್ನೂ ನಾಚಿಕೆಗೇಡು.

Saturday, April 23, 2011

ಅಣ್ಣಾ ಹಜಾರೆಗೆ ಜೈ

ವಸಂತ ಪ್ರಕಾಶ


ಹಳ್ಳಿ ಹಳ್ಳಿಗಳ ಉದ್ದಾರ ಎಂದು
ಭಾಷಣ ಬಿಗಿಯುವ ಜಾಗ ಅದು ದಿಲ್ಲಿ
ಮೂಕ ಪ್ರೇಕ್ಷಕನಾಗಿ ನಿಂತಿರುವುದು ಅದ ಕಂಡು
ಹನಿ ಮಾತ್ರ ತೊಟ್ಟಿಕ್ಕುವ ನಲ್ಲಿ

ಅಂದು ಗಾಂಧಿ ಕಂಡ ಕನಸು
ಹಳ್ಳಿ ಉದ್ದಾರದಿಂದಲೇ ರಾಮ ಆಜ್ಯ
ಕೋಟಿ ಕೋಟಿ ಕೈಯೊಳಗಿದ್ದರೂ ಕಾಸು
ಅಧಿಕಾರದಾಹದವರ ಮುಗಿಯದ ವ್ಯಾಜ್ಯ

ತನ್ನ ಹಿತವ ಮರೆತು ಪರಹಿತವ ಬಯಸಿತು
ಬಾಬುರಾವ್ ಹಜಾರೆಯವರು ಇನ್ನೊಂದು ಗಾಂಧಿ ನಿಜ
ಗಾಂಧಿ ಕನಸನ್ನು ತಲೆ ಮೇಲೆ ಹೊತ್ತು
ರಾಳೆಗಣ ಶಿದ್ದಿಯಿಂದ ಬಿತ್ತಿದರು ಬೀಜ

ಭ್ರಷ್ಟಚಾರ ಓಡಿಸಲು, ಹೆಜ್ಜೆಗೆ ಹೆಜ್ಜೆ ಸೇರಿಸಲು
ಕಟ್ಟಿಕೊಳ್ಳೊಣ ನಾವು ನಮ್ಮ ಕಾಲಿಗೆ ಗೆಜ್ಜೆ
ವಿಶ್ವದುದ್ದಕು ಭಾರತೀಯ ದೀಪ ಪ್ರಜ್ವಲಿಸಲು
ಮಾಡೋಣ ಶಾಂತಿಮಂತ್ರದೀ ಪೂಜೆ

ಹೆಂಡತಿಗೆ ಸಹಾಯ ಮಾಡಲು ಹಿಂಜರಿಕೆ ಏಕೆ?

ಶರ್ವಾಣಿ ಭಟ್

ಉಜ್ಜ್ವಲಾ ತುಂಬ ಸುಸ್ತಾಗಿದ್ದಾಳೆ. ಏಳು ತಿಂಗಳ ಗರ್ಭಿಣಿ. ಆಫೀಸಿನಲ್ಲಿ ನಿಂತು ಮಾಡುವ ಕೆಲಸ. ಕಾಲು ಸೋತು ಹೋಗಿದೆ. ಹೇಗೋ ಮನೆ ಸೇರಿ ಧೊಪ್ಪೆಂದು ಸೋಫಾದ ಮೇಲೆ ಕುಳಿತು ಹಿಂದಕ್ಕೆ ತಲೆಬಾಗಿ ಕಾಲನ್ನು ಚಾಚಿ ಕಣ್ಮುಚ್ಚಿದಳು. ಯಾರೋ ತನ್ನ ಕಾಲನ್ನು ಸ್ಪರ್ಶಿಸಿದಂತಾದಾಗ ಕಣ್ಬಿಟ್ಟಳು. ಮತ್ತಾರೂ ಅಲ್ಲ ಅವಳ ಗಂಡ ಸತೀಶ್ ಅವಳ ಕಾಲನ್ನು ತನ್ನ ತೊಡೆಯಮೇಲಿರಿಸಿಕೊಂಡು ಮೃದುವಾಗಿ ಒತ್ತುತ್ತಿದ್ದಾನೆ. ಅವಳಿಗೆ ಅದು ಅನಿರೀಕ್ಷಿತವಾಗಿತ್ತು. ಬೇಡವೆನ್ನುವ ಮನಸ್ಸಿದ್ದರೂ ಅದು ಕೊಡುತ್ತಿರುವ ಹಿತಾನುಭವ ಅವಳನ್ನು ತಡೆದಿತ್ತು. ಮುಖದಲ್ಲಿ ಕೃತಜ್ಞತಾ ಭಾವ. ಪತ್ನಿಯ ಮೊಗವನ್ನೇ ವೀಕ್ಷಿಸುತ್ತಿದ್ದ ಸತೀಶನ ಮುಖದಲ್ಲೂ ಅದೇನೋ ಸಮಾಧಾನ.

ಸತೀಶನಿಗಿರುವ ಧೈರ್ಯ ಎಷ್ಟು ಜನ ಗಂಡಸರಿಗಿದೆ? ಅಷ್ಟೇ ಅಲ್ಲ ಇಬ್ಬರೇ ಇರುವಾಗ ಈ ಧೈರ್ಯವನ್ನು ತೋರಿದ ಸತೀಶ ತನ್ನ ತಂದೆ ತಾಯಿಯರು ಮನೆಯಲ್ಲಿಯೇ ಇದ್ದರೆ ಅದನ್ನು ತೋರುತ್ತಿದ್ದನೆ? ಹೀಗೆ ನೂರಾರು ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಬಹುದು. ಹೌದು. ಅನೇಕ ಗಂಡಸರಿಗೆ ಪತ್ನಿಯ ಕಷ್ಟವನ್ನು ಹಂಚಿಕೊಳ್ಳಬೇಕು, ಅವಳ ಕಷ್ಟದಲ್ಲಿ ತಾನು ಪಾಲುದಾರನಾಗಬೇಕು, ಅವಳಿಗೆ ತಾನು ಸಹಾಯ ಮಾಡಬೇಕು ಎಂಬ ಮನಸ್ಸಿರುತ್ತದೆ. ಅದರೆ ಹಲವು ಕಾರಣಗಳಿಂದಾಗಿ ಅದು ಹೊರಗೆ ಬರುವುದೇ ಇಲ್ಲ. ಬಂದರೂ ಬೆಡ್ ರೂಮಿನಿಂದಾಚೆಯಂತೂ ಬರುವುದು ತೀರ ಅಪರೂಪ.

ಇದಕ್ಕೆ ಮುಖ್ಯ ಕಾರಣ ನಮ್ಮ ಸಾಮಾಜಿಕ ವ್ಯವಸ್ಥೆ. ಪತಿ ಹೇಳಿದ್ದನ್ನು ಪಾಲಿಸುವ, ಪತಿಯ ಸೇವೆಯೇ ಪರಮ ಕರ್ತವ್ಯ ಎಂದು ಭಾವಿಸುವ ಹೆಣ್ಣನ್ನು ’ಪತಿವ್ರತೆ’ಯೆಂದು ಹೊಗಳಿದರೆ ಹೆಂಡತಿಯ ಮಾತನ್ನು ಕೇಳುವ, ಅವಳಿಗೆ ಕೆಲಸ ಮಾಡಿಕೊಡುವ ಗಂಡನನ್ನು ’ಅಮ್ಮಾವ್ರ ಗಂಡ’ ಎಂದು ಅಪಹಾಸ್ಯ ಮಾಡುತ್ತದೆ. ಗಂಡಸುತನವಿಲ್ಲದ ಪುಕ್ಕಲ ಎಂಬುದಾಗಿ ಅಂತಹ ಗಂಡನನ್ನು ನೋಡಿದರೆ, ಗಂಡನ ತಲೆಯ ಮೇಲೆ ಹತ್ತಿ ಕುಳಿತಿರುವ ಗಂಡುಬೀರಿಯೆಂಬಂತೆ ಹೆಂಡತಿಯನ್ನು ನೋಡುತ್ತಾರೆ. ನಮ್ಮ ಸಿನಿಮಾಗಳನ್ನೇ ನೋಡಿ ಗಂಡನಿಗೆ ವಿಧೇಯಳಾಗಿರುವ ಹೆಂಡತಿಯ ಸಿನಿಮಾ ಆದರೆ ಅದು ’ಭಕ್ತಿಪ್ರಧಾನ ಸಾಂಸಾರಿಕ ಚಿತ್ರ’. ಹೆಂಡತಿಗೆ ಹೆದರುವ ಗಂಡನ ಚಲನಚಿತ್ರಕ್ಕೆ ’ಹಾಸ್ಯ ಪ್ರಧಾನ’ ಎಂಬ ತಲೆಬರಹ ! ನಮ್ಮ ಪುರಾಣ ಕಥೆಗಳೆಲ್ಲ ಸೀತೆ, ಮಂಡೋದರಿ, ಅನಸೂಯಾ, ಸಾವಿತ್ರಿ ಇವರೆಲ್ಲ ಪತಿಸೇವೆಯಿಂದಲೇ ಸಾಯುಜ್ಯ ಹೊಂದಿದರು ಎಂಬುದಾಗಿ ಸಾರುತ್ತ ಪತಿಯಿಂದ ಸೇವೆ ಮಾಡಿಸಿಕೊಳ್ಳುವ ಸ್ತ್ರೀಯರು ನರಕಕ್ಕೆ ಹೋಗುವರು ಎಂಬುದಾಗಿ ಹೇಳುತ್ತವೆ. ಶೇಷಶಾಯಿ ನಾರಾಯಣನ ಕಾಲನ್ನು ಒತ್ತುತ್ತಿರುವ ಲಕ್ಷ್ಮೀದೇವಿಯ ಚಿತ್ರ ಆದರ್ಶರೂಪವಾಗಿ ನಮ್ಮ ಮನೆಯ ಗೋಡೆಯ ಮೇಲೆ ರಾರಾಜಿಸುತ್ತದೆ. ನಮ್ಮ ವಿವಾಹಪದ್ಧತಿ, ಕುಟುಂಬ ಪದ್ಧತಿಗಳೆಲ್ಲ ಇಂತಹ ಭಾವನೆಯ ಮೇಲೇ ಆಧಾರಿತವಾಗಿವೆ. ಹಾಗಾಗಿ ಸಮಾಜ ಹೆಂಡತಿಯ ’ಸೇವೆ’ ಮಾಡುವ ಗಂಡನನ್ನು ಒಪ್ಪಿಕೊಳ್ಳದು. ಇದು ಗಂಡಸರ ಹಿಂಜರಿಕೆಗೆ ಮೊದಲ ಕಾರಣ.

’ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ’ ಎನ್ನುವ ಗಾದೆ ಮಾತನ್ನು ಯಾರೋ ಮಾಡಿಟ್ಟುಬಿಟ್ಟಿದ್ದಾರೆ. ಅದು ಮನುವಿನ ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂಬ ಮಾತನ್ನೇ ಪುಷ್ಟಿಗೊಳಿಸುವಂಥದ್ದು. ಮನೆಯನ್ನು ಮುನ್ನಡೆಸುವ ಶಕ್ತಿ ಹೆಣ್ಣಿಗಿಲ್ಲ ಎಂಬುದಾಗಿ ಇಂದಿಗೂ ಅನೇಕರು ಭಾವಿಸುತ್ತಾರೆ. ಹೆಣ್ಣಿಗೆ ಅಧಿಕಾರ ಕೊಟ್ಟರೆ ಅದರ ದುರುಪಯೋಗವಾಗುತ್ತದೆ ಎಂಬುದಾಗಿ ನಂಬಿದವರಿದ್ದಾರೆ. ಗಂಡಿಗಾದರೆ ತಾನು ಹುಟ್ಟಿದ ಮನೆಯೇ ಕೊನೆತನಕ ಶಾಶ್ವತ. ಹೆಣ್ಣಿಗೆ ತನ್ನ ತವರು ಮನೆಯನ್ನು ತೊರೆದು ಗಂಡನ ಮನೆಯನ್ನು ತನ್ನ ಮನೆಯೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ. ಹೀಗಿರುವಾಗ ತಾನು ಹೆಂಡತಿಯ ಮಾತನ್ನು ಕೇಳಿದರೆ ಅವಳು ತನ್ನ ತವರುಮನೆಯ ಹಿತವನ್ನೇ ಸಾಧಿಸಬಹುದು ಎಂಬ ಅಳುಕು ಕೆಲವು ಗಂಡಸರಿಗಿರುತ್ತದೆ. ತಾನು ಮೃದುವಾದರೆ ಅವಳು ತನ್ನನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ತನ್ನ ತಂದೆ ತಾಯಿಯರಿಗೂ ಅಕ್ಕ ತಂಗಿಯರಿಗೂ ಅನ್ಯಾಯ ಮಾಡಬಹುದು ಎಂಬ ಸಣ್ಣ ಹೆದರಿಕೆ ಹೊಸದಾಗಿ ಮದುವೆಯಾದ ಎಲ್ಲ ಗಂಡಸರಲ್ಲೂ ಇರುತ್ತದೆ. ಅಂತಹ ಸಾಕಷ್ಟು ಘಟನೆಗಳು ನಡೆದೂ ಇವೆ. ’ಮದುವೆಯಾಗಿ ಒಂದು ವರುಷದಾಗ ನನ್ ಮಗಾ ಬೇರೆ ಆದ’ ಎಂಬ ಜಾನಪದ ಗೀತೆಯನ್ನು ನೀವು ಕೇಳಿರಬಹುದು. ಹೆಂಡತಿಯ ಮಾತು ಕೇಳಿ ತಂದೆ ತಾಯಿಯರನ್ನು ಕಡೆಗಣಿಸಿದ ಎಷ್ಟೋ ಮಕ್ಕಳು ಇದ್ದಾರೆ. ಇದಕ್ಕೆ ಅವನು ಹೆಂಡತಿಗೆ ಕೊಟ್ಟ ಸಲುಗೆಯೇ ಕಾರಣ ಎಂದು ಹೇಳುವವರಿದ್ದಾರೆ. ಇಂತಹ ಉದಾಹರಣೆಗಳನ್ನು ತೋರಿಸಿ ಹೆಂಡತಿಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು ಎಂದು ಉಪದೇಶಿಸುವವರಿದ್ದಾರೆ. ಇದು ಗಂಡಸರ ಹಿಂಜರಿಕೆಗೆ ಇನ್ನೊಂದು ಕಾರಣ.

ಇಂದು ಸಣ್ಣ ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುವುದನ್ನು ನೋಡಬಹುದು. ಇದು ಪಟ್ಟಣಕ್ಕೆ ಮಾತ್ರ ಸೀಮಿತವಲ್ಲ. ಹಳ್ಳಿಯಲ್ಲಿ ಬಡ ಕೂಲಿಕಾರರ ವರ್ಗದಲ್ಲಿಯೂ ಇದು ಸಾಮಾನ್ಯ. ಗಂಡನ ಕರ್ತವ್ಯವಾದ ಕುಟುಂಬ ಪೋಷಣೆ ಎಂಬ ಜವಾಬ್ದಾರಿಯನ್ನು ಮಹಿಳೆ ಹಂಚಿಕೊಳ್ಳುತ್ತಿದ್ದಾಳೆ. ಆದರೆ ಮಹಿಳೆಯ ಜವಾಬ್ದಾರಿಯಾದ ಅಡುಗೆಮನೆ ನಿರ್ವಹಣೆ, ಕಸಮುಸುರೆಗಳನ್ನು ಹಂಚಿಕೊಳ್ಳಲು ಗಂಡಸರ ಸ್ವಾಭಿಮಾನ ಅಡ್ಡಬರುತ್ತದೆ. ಅದು ತನಗೆ ಸಂಬಂಧಿಸಿದ್ದೇ ಅಲ್ಲ ಎಂಬ ಧೋರಣೆ. ಗಂಡ ತನ್ನ ಕಾಲೊತ್ತಿ ಸೇವೆ ಮಾಡಲಿ ಎಂದು ಯಾವ ಹೆಂಡತಿಯೂ ಬಯಸುವುದಿಲ್ಲ. (ಗಂಡನ ಮೇಲೆ ಅಂತಹ ಅಧಿಕಾರ ಚಲಾಯಿಸುವ ಪತ್ನಿಯರು ಇದ್ದರೂ ಅದು ಬೆರಳೆಣಿಕೆಯಷ್ಟು ಮಾತ್ರ). ಆದರೆ ತಾನು ಬಟ್ಟೆ ತೊಳೆಯುವಾಗ ತನ್ನ ಗಂಡ ಅದನ್ನು ಹರವಲು ಬಂದರೆ, ಪಾತ್ರೆ ತೊಳೆಯುವಾಗ ಅದನ್ನು ಜೋಡಿಸಿಟ್ಟರೆ, ಅಡುಗೆ ಮಾಡುವಾಗ ತರಕಾರಿ ಹೆಚ್ಚಿಕೊಟ್ಟರೆ, ಕಸಗುಡಿಸುವಾಗ ಹರಡಿ ಬಿದ್ದಿರುವ ಸಾಮಾನುಗಳನ್ನೆಲ್ಲ ಸರಿಯಾಗಿ ಜೋಡಿಸಿಕೊಟ್ಟರೆ ಪತ್ನಿಗಾಗುವ ಆನಂದ ಕಡಿಮೆಯಾದದ್ದೆ? ಇಲ್ಲಿ ಗಂಡ ಸಹಾಯಮಾಡುತ್ತಾನೆ ಎನ್ನುವುದರ ಜೊತೆಗೆ ಮನೆಗೆಲಸದಲ್ಲಿ ಅವನು ನೀಡುತ್ತಿರುವ ಸಾಂಗತ್ಯ ಖುಷಿ ನೀಡುತ್ತದೆ. ಅವಳ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ. ಆಫೀಸಿನಿಂದ ಬಳಲಿ ಬಂದಾಗ ಅವನೇನಾದರೂ ಒಂದು ಕಪ್ ಕಾಫಿ ಮಾಡಿಕೊಟ್ಟರೆ ಅದು ಹೇಳತೀರದ ಸಂತೋಷವನ್ನು ನೀಡುತ್ತದೆ. ತನ್ನ ಬಗ್ಗೆ ಅವನು ತೋರುತ್ತಿರುವ ಕಾಳಜಿಯನ್ನು ಗಮನಿಸಿ ಅವಳ ಪ್ರೀತಿ ಹೆಚ್ಚುತ್ತದೆ.

ಹೆಂಡತಿ ಅನಾರೋಗ್ಯದಿಂದ ಬಳಲುತ್ತಿರುವಾಗ ಗಂಡ ಅವಳ ಆರೈಕೆ ಮಾಡಿದರೆ ಅದಕ್ಕೆ ’ಸೇವೆ’ ಎಂಬ ಹೆಸರನ್ನು ಕೊಡಬೇಕಾಗಿಲ್ಲ. ಆ ಹೆಸರು ಅವರಿಗೆ ಮುಜುಗರವನ್ನುಂಟು ಮಾಡೀತು. ಆರೈಕೆ ಮಾಡಲು ಇನ್ನಾರೂ ಇರದಿರುವಾಗ ಅದು ಅವನ ಕರ್ತವ್ಯವಾಗುತ್ತದೆ. ಹೆಂಡತಿಗೆ ತಲೆನೋವು ಬಂದಾಗ ಝಂಡುಬಾಮ್ ಹಚ್ಚಿಕೊಡಲು, ಬೆನ್ನು ನೋವು ಬಂದರೆ ನೋವು ನಿವಾರಕ ಕ್ರೀಮ್ ಹಚ್ಚಿಕೊಡಲು, ಕಾಲು ನೋಯುತ್ತಿದ್ದರೆ ಮಸಾಜ್ ಮಾಡಲು ಗಂಡಸರಿಗೆ ಪೂರ್ವಾಗ್ರಹ ಯಾಕೆ? ಹಿಂಜರಿಕೆ ಯಾಕೆ? ಪ್ರೀತಿ ಇಬ್ಬರನ್ನೂ ಒಂದಾಗಿ ಬೆಸೆದಿರುವಾಗ, ಪ್ರೇಮ ಉಚ್ಚ ನೀಚ ಭಾವವನ್ನು ಮೀರಿ ನಿಂತಾಗ, ಪರಸ್ಪರ ಸರಿಯಾಗಿ ಅರ್ಥಮಾಡಿಕೊಂಡಿರುವಾಗ ಒಬ್ಬರ ಸೇವೆಯನ್ನು ಇನ್ನೊಬ್ಬರು ಮಾಡಿದರೆ ತಪ್ಪೇನು? ಅದು ಮಾನವೀಯ ಧರ್ಮಕ್ಕೆ ವಿರುದ್ಧವಾದದ್ದಂತೂ ಅಲ್ಲ.

ವೇದಗಣಿತ - ಭಾಗ ೩

ಮಹಾಬಲ ಭಟ್

ಸೂತ್ರ: ಏಕನ್ಯೂನೇನ ಪೂರ್ವೇಣ
ಗುಣ್ಯ ಅಥವಾ ಗುಣಕ ಸ್ಥಾನದಲ್ಲಿ ಕೇವಲ ೯ ಎಂಬ ಅಂಕೆಯಿಂದಾದ ಸಂಖ್ಯೆ ಇದ್ದರೆ ಈ ಸೂತ್ರ ವನ್ನು ಉಪಯೋಗಿಸಬಹುದು.
ಉದಾ: ೧೨೩ x ೯೯೯
ವಿಧಾನ: ಗುಣಾಕಾರ ಚಿಹ್ನೆಯ ಎಡಭಾಗದಲ್ಲಿರುವ ಸಂಖ್ಯೆ ಪೂರ್ವ ಸಂಖ್ಯೆ. ಸೂತ್ರ ಹೇಳುವಂತೆ ಅದರಲ್ಲಿ ಒಂದನ್ನು ಕಳೆಯಬೇಕು. ಉದಾ: ೧೨೩-೧=೧೨೨. ಈಗ ಬಂದ ಉತ್ತರದ ಎಲ್ಲ ಅಂಕೆಗಳನ್ನು ಒಂಭತ್ತರಿಂದ ಕಳೆದು ಈ ಅಂಕೆಗಳ ಮುಂದೆ ಬರೆಯುತ್ತಾ ಹೋದರೆ ಆಯಿತು. ಅಂತಿಮ ಉತ್ತರ ಸಿದ್ಧ.
೧೨೩ x ೯೯೯ = (೧೨೩-೧)/(೯೯೯-೧೨೨)
= ೧೨೨/೮೭೭ = ೧೨೨೮೭೭ ಇದೇ ಅಪೇಕ್ಷಿತ ಉತ್ತರ!!
ಉದಾ:(೨): ೩೪೬೧೯೮೪೦೬೭೨ x ೯೯೯೯೯೯೯೯೯೯೯
(೩೪೬೧೯೮೪೦೬೭೨-೧)/(೯೯೯೯೯೯೯೯೯೯೯-೩೪೬೧೯೮೪೦೬೭೧)
= ೩೪೬೧೯೮೪೦೬೭೧ ೬೫೩೮೦೧೫೯೩೨೮
ಇದು ಕ್ಯಾಲ್ಕುಲೇಟರಿಗಿಂತ ಫಾಸ್ಟ್ ಇಲ್ಲವೆ? ಇದನ್ನು ಗಮನಿಸಿ-
೫೭*೯೯ = ೫೭ x (೧೦೦-೧) = ೫೭೦೦-೫೭ (ವಿಭಾಜಕ ನಿಯಮ)
= ೫೬೪೩. ಇದೇ ನಿಯಮವನ್ನು ಸ್ವಲ್ಪ ಪರಿವರ್ತಿಸಿ ಉಪಯೋಗಿಸಲಾಗಿದೆ ಅಷ್ಟೆ!
ಪ್ರಯತ್ನಿಸಿ: ೭೮೯೪೩೨x೯೯೯೯೯೯; ೬೮೯೬೫೪೭೮೩೦x೯೯೯೯೯೯೯೯೯೯; ೬೩x೯೯೯

ವನಿತೆ

ತನ್ನೆಲ್ಲ
ಆಸೆ ಆಕಾಂಕ್ಷೆಗಳನ್ನು
ಬದಿಗಿಟ್ಟು
ನಂದನವನದ
ಏಳ್ಗೆಗಾಗಿ ಒತ್ತುಕೊಟ್ಟು
ಶ್ರಮಿಸಿದಳಾ ವನಿತೆ
ನಾಲ್ಕಾರು ವರ್ಷಗಳಲ್ಲಿ
ನೂರಾರು ಹೂವರಳಿ
ಒಂದನ್ನೂ ಕಿತ್ತುಕೊಳ್ಳಲಾಗದೆ
ನೋಟದಲ್ಲಿಯೇ
ತೃಪ್ತಿಗೊಂಡಳಾ ಪುನೀತೆ

ಅಖಿಲಾ ಕುರಂದವಾಡ

ಹೆಣ್ಣು ಜಗದ ಕಣ್ಣು

ಶೈಲಜಾ ಕಣವಿ

ಅನಾದಿ ಕಾಲದಿಂದಲೂ ಹೆಣ್ಣು ಪೂಜಿಸಲ್ಪಡುತ್ತ ಬಂದಿದ್ದರೂ ನಿಂದನೆಗೂ ಗುರಿಯಾಗಿದ್ದಾಳೆ. ಹಿಂಸೆ ಸಹಿಸಿ ಬೆಂದಿದ್ದಾಳೆ. ಅತ್ಯಾಚಾರ,ಸತ್ವಪರೀಕ್ಷೆ, ಅಗ್ನಿಪರೀಕ್ಷೆಗಳಿಗೆ ಒಳಗಾಗಿದ್ದಾಳೆ.

ತ್ರೇತಾಯುಗದಲ್ಲಿ ಶ್ರೀರಾಮ ಸೀತಾದೇವಿಯನ್ನು ಅಗ್ನಿಪರೀಕ್ಷೆಗೆ ಗುರಿಮಾಡಿದ. ಅದರಲ್ಲಿ ಸಫಲಳಾಗಿ ಬಂದರೂ ಮುಂದೆ ಅಗಸನೊಬ್ಬನ ಮಾತನ್ನು ಕೇಳಿ ಕಳಂಕ ಹೊರಿಸಿ ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ. ಲವಕುಶರನ್ನು ರಾಮ ತನ್ನ ಮಕ್ಕಳೆಂದು ಒಪ್ಪಿದ ಮೇಲೂ ಅವಳು ಮನೆ ಸೇರಲಿಲ್ಲ. ಭೂಮಿತಾಯನ್ನು ಮರೆಹೊಕ್ಕಾಗ ಭೂಮಿ ಬಾಯ್ಬಿರಿದು ತನ್ನಲ್ಲಿ ತನ್ನ ಮಗಳನ್ನು ಅಡಗಿಸಿಕೊಂಡಿತು. ಆಗಿನ ಕಾಲದಲ್ಲಿ (ವಿಚ್ಛೇದನಾವಕಾಶ ಇರಲಿಲ್ಲ!)

ದ್ವಾಪರಯುಗದಲ್ಲಿ ಅರ್ಜುನ ದ್ರೌಪದಿಯನ್ನು ಗೆದ್ದು ತಂದು ತಾಯಿಯ ಮುಂದೆ ಭಿಕ್ಷೆ ತಂದಿದ್ದೇನೆ ಎಂದಾಗ ಐವರೂ ಸಮಪಾಲು ಮಾಡಿಕೊಳ್ಳಿ ಎಂಬ ಆದೇಶ ಬಂತು. ದ್ರೌಪದಿಯ ಆಶಯವನ್ನು ಕೇಳುವ ಔದಾರ್ಯವನ್ನು ಯಾರೂ ತೋರಲಿಲ್ಲ. ಐವರು ಬಲಶಾಲಿ ಪತಿಯರನ್ನು ಹೊಂದಿದ್ದರೂ ತುಂಬಿದ ಸಭೆಯಲ್ಲಿ ಮಾನಕಳೆದುಕೊಳ್ಳುವ ದುರ್ಭರ ಪ್ರಸಂಗ ಅವಳಿಗೆ ಒದಗಿ ಬಂತು.

ಸತ್ಯವ್ರತ ಪರಿಪಾಲನೆಗೆ ಹೆಸರಾದ ಸತ್ಯ ಹರಿಶ್ಚಂದ್ರ ತನ್ನ ಹೆಂಡತಿ ಮಕ್ಕಳನ್ನು ಮಾರಿದ.

ಮಹಿಳೆ, ಸ್ತ್ರೀ, ಹೆಣ್ಣು ಹೆಂಗಸು ಮುಂತಾದ ಅನೇಕ ಶಬ್ದಗಳಿಂದ ನಿರ್ದೇಶಿಸಲ್ಪಡುವ ಅವಳು ಜಗತ್ತಿಗೆಲ್ಲ ತಾಯಿ. ಮಮತೆಯ ಮೂರ್ತಿ. ಸಹನೆ, ತಾಳ್ಮೆ, ಹೊಂದಾಣಿಕೆ ಲಜ್ಜೆ, ನಾಚಿಕೆಯ ಜೊತೆಗೆ ಸ್ವಾಭಿಮಾನದ ಪ್ರತಿಬಿಂಬ.

ತನ್ನ ಮಗು ಹೆಣ್ಣಾಗಲಿ, ಗಂಡಾಗಲಿ ಸಮಭಾವದಿಂದ ಮುದ್ದಿನಿಂದ ಬೆಳೆಸುವಳು. ತನ್ನೆಲ್ಲ ಮಕ್ಕಳನ್ನೂ ಭೇದಭಾವತೋರಿಸದೆ ಪ್ರೀತಿಯಿಂದ ಕಾಣುವಳು. ಬಳ್ಳಿಯ ಕಾಯಿ ಬಳ್ಳಿಗೆ ಭಾರವೆ? ಎಷ್ಟು ಜನ ಮಕ್ಕಳಿದ್ದರೂ ಅವಳಿಗೆ ಬೇಸರವಿಲ್ಲ. ಅವರ ಲಾಲನೆ, ಪಾಲನೆ ಮಾಡಿ ಅನಾರೋಗ್ಯವಾದಾಗ ಆರೈಕೆ ಮಾಡಿ ಬೆಳೆಸುವಳು. ಬಡವಳಾಗಿದ್ದರೂ ಭಿಕ್ಷೆ ಬೇಡಿ ಸಾಕುವಳು. ತಾನು ರೋಗಿಯಾಗಿದ್ದರೂ, ಅಶಕ್ತಳಾಗಿದ್ದರೂ ಜೀವ ತೇದು ಮಕ್ಕಳನ್ನು ಪೋಷಿಸುವಳು. ವಿಧವೆ ಅಥವಾ ವಿಚ್ಛೇದಿತರ ಪಾಡಂತೂ ಹೇಳತೀರದು. ತಾನೇ ತಂದೆಯಾಗಿ ಮಕ್ಕಳ ಜೀವನ ಉಜ್ಜ್ವಲವಾಗಲು ಶ್ರಮಿಸುವಳು. ಇದಕ್ಕೆ ಅವಳು ಯಾವುದೇ ಫಲವನ್ನು ಬಯಸುವುದಿಲ್ಲ. ಬಯಸಿದರೂ ಸಿಗುತ್ತದೆಂದಿಲ್ಲ. ಹೆಣ್ಣು ಮಕ್ಕಳು ಅತ್ತೆಮನೆಯನ್ನು ಸೇರುತ್ತಾರೆ. ಗಂಡುಮಕ್ಕಳು ಮದುವೆಯಾಗಿ ಬೇರೆ ಮನೆ ಮಾಡುತ್ತಾರೆ. ಎಷ್ಟು ಜನ ಗಂಡುಮಕ್ಕಳಿದ್ದರೂ ಅವರಿಗೆ ತಾಯಿ ಒಂದು ಹೊರೆಯಾಗುತ್ತಾಳೆ. ಸರದಿ ಪ್ರಕಾರ ಕೆಲವು ತಿಂಗಳುಗಳ ಕಾಲ ಇಟ್ಟುಕೊಳ್ಳುವ ಏರ್ಪಾಡು ಮಾಡುತ್ತಾರೆ. ಒಬ್ಬನೇ ಮಗನಾದರೆ ಅನಾಥಾಶ್ರಮ ಸೇರಿಸುತ್ತಾನೆ.

ಹೆಣ್ಣು ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಬೆಳಕಾಗುವಳು. ಅವಳ ಒಳ್ಳೆಯ ನಡೆ ನುಡಿ ವರ್ತನೆಗಳಿಂದ, ಮುಗ್ಧತೆಯಿಂದ ಬೆಳಕು ಚೆಲ್ಲುವಳು. ತಂದೆಯಿಲ್ಲದ ಮಕ್ಕಳನ್ನು ಒಬ್ಬಳು ತಾಯಿ ಸಾಕಬಹುದು. ಆದರೆ ತಾಯಿಯಿಲ್ಲದ ಮಗುವನ್ನು ಸಲಹಲು ಇನ್ನೊಬ್ಬಳು ಹೆಣ್ಣು ಬೇಕು. ಮಲತಾಯಿಯೋ, ಅಜ್ಜಿಯೊ, ದಾದಿಯೊ, ಅಯಾಳೊ, ಚಿಕ್ಕಮ್ಮನೊ, ದೊಡ್ಡಮ್ಮನೊ, ಅತ್ತೆಯೊ ಹೀಗೆ ಯಾವ ಸ್ತ್ರೀರೂಪದಲ್ಲಾದರೂ ಅವಳು ಬೇಕು. ಅವಳು ಮಗುವಿನ ತೊದಲು ನುಡಿಗಳನ್ನು ಕೇಳುತ್ತ, ಕಲಿಸುತ್ತ, ಕಥೆ ಹೇಳುತ್ತ ಬೆಳೆಸುತ್ತಾಳೆ.

’ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು’. ಮನೆಯಿಂದ ಶಾಲೆಯನ್ನು ಸೇರಿದಾಗಲೂ ಮೊದಲ ಪಾಠ ಹೇಳಿಕೊಡುವ ಗುರು ಹೆಣ್ಣೇ. ಮಗುವಿನ ಮುಗ್ಧ ಮನಸ್ಸನ್ನು ಅರಿತುಕೊಂಡು ಕಲಿಯಲು ಸಹಕರಿಸುತ್ತಾರೆ.
ಆಸ್ಪತ್ರೆಗೆ ಹೋದರೆ ದಾದಿಯರು ಸೇವೆ ಮಾಡುತ್ತಾರೆ. ಅವರು ಹೆಣ್ಣು. ರೋಗಿ ಹೆಣ್ಣೊ ಗಂಡೊ ಎಂಬ ಭೇದ ಮಾಡದೆ ಶುಶ್ರೂಷೆ ಮಾಡುತ್ತಾರೆ.
ಹೆಣ್ಣು ಮಗಳಾಗಿ, ಅಕ್ಕ, ತಂಗಿ, ಅತ್ತಿಗೆ, ನಾದಿನಿ ಅತ್ತೆ, ಸೊಸೆ, ಅಜ್ಜಿ ಎಲ್ಲ ಹಂತಗಳನ್ನೂ ನಿಭಾಯಿಸುತ್ತಾಳೆ. ’ಗೃಹಿಣೀ ಗೃಹಮುಚ್ಯತೇ’ ಗೃಹಿಣಿಯಿಂದಲೇ ಮನೆ ಬೆಳಗುವುದು. ’ಒಲಿದರೆ ನಾರಿ ಸ್ವರ್ಗಕ್ಕೆ ದಾರಿ, ಮುನಿದರೆ ಮಾರಿ ನರಕಕ್ಕೆ ದಾರಿ’

ಹೆಣ್ಣು ಬಲು ಬೇಗ ಒಲಿದುಬಿಡುತ್ತಾಳೆ. ಜೊತೆಗೆ ಬೇಗನೆ ಮೋಸಹೋಗುತ್ತಾಳೆ. ಗಂಡಸು ತನ್ನ ಕಾರ್ಯಕ್ಕೆ ಹೆಣ್ಣನ್ನು ಬಳಸಿಕೊಳ್ಳುತ್ತಾನೆ.
ಹೆಣ್ಣಿನ ಕಾರಣದಿಂದಲೇ ಕೆಟ್ಟ ಪುರುಷರು ನಾಶವಾದದ್ದನ್ನು ಪುರಾಣಗಳಿಂದ ತಿಳಿದುಕೊಳ್ಳಬಹುದು. ಮಹೀಷಾಸುರನನ್ನು ಕೊಂದ ದುರ್ಗೆ, ರಾವಣನ ನಾಶಕ್ಕೆ ಕಾರಣಳಾದ ಸೀತೆ, ಕೀಚಕನನ್ನು ಕೊಲ್ಲಿಸಿದ ದ್ರೌಪದಿ, ವಿಶ್ವಾಮಿತ್ರನನ್ನು ಕೆಡಿಸಿದ ಮೇನಕೆ ಇವರೆಲ್ಲ ದುಷ್ಟ ಸಂಹಾರಕ್ಕೆ ಕಾರಣೀಕರ್ತರಾದವರು.

ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು. ಯಾವ ಮಹಾನ್ ಪುರುಷನೇ ಆಗಿರಲಿ ಅವನು ಒಬ್ಬ ತಾಯಿಯ ಮಗ. ರಾಮ, ಕೃಷ್ಣ, ಬುದ್ಧ, ಬಸವ, ಅಲ್ಲಮ, ಏಸುಕ್ರಿಸ್ತ, ಶಂಕರಾಚಾರ್ಯ, ಶಿವಾಜಿ ಹೀಗೆ ಅನೇಕರು ತಮ್ಮ ತಾಯಿಯ ಹೆಸರನ್ನು ಅಜರಾಮರ ವಾಗಿಸಿದ್ದಾರೆ.

ಸಮಾಜದಲ್ಲಿ ನಡೆಯುವ ಎಲ್ಲ ಒಳಿತು ಕೆಡುಕುಗಳಿಗೂ ಹೆಣ್ಣೇ ಕಾರಣ. ಇಂದಿನ ದಿನಗಳಲ್ಲಿ ಮಹಿಳೆ ತನ್ನ ಮಕ್ಕಳನ್ನೇ ತಿದ್ದಲಾಗದೆ ಅವರ ತಪ್ಪುಗಳನ್ನು ಅಲಕ್ಷಿಸಿ ಅವರ ಅವನತಿಗೆ ಕಾರಣಳಾಗುತ್ತಿದ್ದಾಳೆ. ಅತಿಯಾದ ಮುದ್ದಿನಿಂದ ಅವರ ಜೀವನಶೈಲಿಯನ್ನು ಅಲಕ್ಷಿಸಿ ದೊಡ್ಡ ತಪ್ಪನ್ನು ಮಾಡುತ್ತಿದಾಳೆ. ಇಂದಿನ ಮಹಿಳೆಗೆ ತನ್ನ ಸುಖ ಮುಖ್ಯವಾಗಿದೆ. ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅವರಿಗೀ ನಾಡಿನ, ಮನೆಯ ಸಂಸ್ಕೃತಿ, ವೇಷಭೂಷಣಗಳ ಬಗ್ಗೆ ತಿಳಿಸಿಕೊಡಬೇಕು. ಗಂಡು ಮಕ್ಕಳಿದ್ದರೆ ಅವರಿಗೆ ಸ್ತ್ರೀವರ್ಗದ ಬಗ್ಗೆ ಗೌರವಾದರಗಳು ಬರುವಂತೆ ಬೆಳೆಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಅತ್ಯಾಚಾರ ಕಡಿಮೆಯಾಗಬಹುದು.

ಮನೋಗತ (ಸಂಪಾದಕೀಯ)

ಮಹಾಬಲ ಭಟ್
ಮತ್ತೆ ಬಂದು ಹೋಯಿತು ಮಾರ್ಚ್ ೮. ಹೆಮ್ಮಕ್ಕಳ ಎದೆಯಲ್ಲಿ ಏನೋ ಮಿಂಚು. ತಮಗಾಗಿಯೂ ಒಂದು ದಿನವಿದೆಯಲ್ಲ ಎಂಬ ಹೊಳಪು. ನಿಜ. ಇತ್ತೀಚೆಗೆ ಮಹಿಳಾ ದಿನಾಚರಣೆ ರಂಗೇರುತ್ತಿದೆ. ಈ ಸಂಭ್ರಮಾಚರಣೆಗೆ ಇದೀಗ ೧೦೦ ವರುಷ. ನೂರು ವರ್ಷಗಳಲ್ಲಿ ಮಹಿಳೆಯ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಯ ಕುರಿತು ಲೇಖನ, ಚರ್ಚೆಗಳು ನಡೆಯುತ್ತಿವೆ. ಕೆಲವರು ಆಧುನಿಕ ಮಹಿಳೆಯನ್ನು ಉತ್ಪ್ರೇಕ್ಷಿಸಿ ಬರೆದರೆ ಇನ್ನು ಕೆಲವರು ಇಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ ಎಂಬ ಋಣಾತ್ಮಕ ಚಿಂತನೆಯನ್ನೇ ತಮ್ಮ ವಿಚಾರದ ಉಸಿರನ್ನಾಗಿಸಿಕೊಳ್ಳುತ್ತಾರೆ. ಇನ್ನು ಭಾಷಣಗಳಲ್ಲಿ ಹೆಂಡತಿಯನ್ನು ಮಾರಿದ ಹರಿಶ್ಚಂದ್ರ, ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ ರಾಮ, ಪತ್ನಿಯನ್ನು ದ್ಯೂತದಲ್ಲಿ ಪಣವಾಗಿರಿಸಿದ ಯುಧಿಷ್ಠಿರ ಇವರೆಲ್ಲ ಟೀಕೆಗೆ ಪಾತ್ರರಾಗಿ ಇಂದಿನ ಪೀಳಿಗೆ ಅವರ ಸಂತತಿಯೇ ಎಂಬಂತೆ ಸಾರಲಾಗುತ್ತದೆ.

ಕಾಲ ಬದಲಾಗಿದೆ, ವಿಚಾರ ಬದಲಾಗಿದೆ, ಮೌಲ್ಯಗಳು ಬದಲಾಗಿವೆ. ಪಾಶ್ಚಾತ್ಯರ ಚಿಂತನೆಯನ್ನೇ ಮೌಲಿಕವೆಂಬಂತೆ ಬಿಂಬಿಸಲಾಗುತ್ತ್ತಿದೆ. ಅದೆಲ್ಲ ಇರಲಿ, ಇಂದು ಮಹಿಳೆಗೆ ಮೇಲೇರಲು ಸಾಕಷ್ಟು ಅವಕಾಶಗಳಿರುವಾಗ ಮತ್ತೆ ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದ ಮನುವನ್ನು ಬೈಯುತ್ತ ಕುಳಿತುಕೊಳ್ಳುವುದು ಯಾಕೆ? ರಾಜಧರ್ಮಕ್ಕಿಂತ ಕುಟುಂಬ ಧರ್ಮವೇ ಮುಖ್ಯವಾಗಿರುವ ಈ ಪ್ರಜಾಪ್ರಭುತ್ವದಲ್ಲಿ ಮತ್ತೆ ರಾಮನಿಗೆ ಶಾಪ ಹಾಕುವುದ್ಯಾಕೆ? ಗಂಡನಿಗೆ ಬಡತನ ಬಂತೆಂದರೆ ವಿಚ್ಛೇದನ ಸ್ವೀಕರಿಸುವ ಸ್ವಾತಂತ್ರ್ಯ ಮಹಿಳೆಯರಿಗಿರುವಾಗ ಹರಿಶ್ಚಂದ್ರನನ್ನು ಬಯ್ಯುವುದು ಏಕೆ?
ನನಗೆ ಮಹಿಳಾದಿನ ಬಂತೆಂದರೆ ಗಾರ್ಗಿ, ಮೈತ್ರೇಯಿ, ನೆನಪಾಗುತ್ತಾರೆ. ಗಂಧರ್ವ ಕುಮಾರಿ ಮದಾಲಸಾ ಸ್ಮೃತಿಪಥದಲ್ಲಿ ಹಾದು ಹೋಗುತ್ತಾಳೆ. ದುಷ್ಯಂತ ತನ್ನನ್ನು ತಿರಸ್ಕರಿಸಿದಾಗ ಸೆಟೆದು ನಿಂತ ಶಕುಂತಲೆಯ ನೆನಪಾಗುತ್ತದೆ. ಸ್ತ್ರೀಯರಿಗೆ ಗೌರವ ಕೊಡಬೇಕೆಂಬ ವಿಚಾರವನ್ನು ನಾವು ಪಾಶ್ಚಾತ್ಯರಿಂದ ಕಲಿಯಬೇಕಾದ್ದಿಲ್ಲ. ನಮ್ಮ ಪುರಾತನ ಗ್ರಂಥಗಳಲ್ಲಿ, ವೈವಾಹಿಕ ವಿಧಾನದಲ್ಲಿ ಅವನ್ನೆಲ್ಲ ಹೇಳಲಾಗಿದೆ. ಹಾಗಾದರೆ ತಪ್ಪಿರುವುದು ನಮ್ಮ ಸಂಸ್ಕೃತಿಯಲ್ಲಲ್ಲ. ನಮ್ಮ ವಿಚಾರದಲ್ಲಲ್ಲ. ಆದರೆ ಆಚಾರದಲ್ಲಿ. ದೈಹಿಕ ಬಲವನ್ನು ಹೊಂದಿರುವ ಪುರುಷವರ್ಗ ಅದನ್ನೇ ಅಸ್ತ್ರವಾಗಿರಿಸಿಕೊಂಡು ಸ್ತ್ರೀ ಶೋಷಣೆಗೆ ಮುಂದುವರಿದಿರುವುದು ನಮ್ಮ ಆಚಾರದೋಷ.

ಕೆಲವು ದಿನಾಚರಣೆಗಳು ಅರ್ಥಹೀನ ನಿಜ. ಒಂದು ದಿನದ ಪರಿವರ್ತನೆ ಯಾವ ವ್ಯತ್ಯಾಸವನ್ನೂ ಮಾಡಲಾರದು ಎಂಬುದೂ ಸತ್ಯ. ಆದರೆ ಮಹಿಳಾ ದಿನಾಚರಣೆಯು ಇಂದು ಮಾಧ್ಯಮಗಳ ಕಾರಣದಿಂದ ಹೆಚ್ಚು ಅರ್ಥಪೂರ್ಣವಾಗುತ್ತಿದೆ ಎನ್ನಬಹುದು. ಇದು ನಿಜಕ್ಕೂ ಆವಶ್ಯಕವಾಗಿರುವ ದಿನ. ಈ ನೆಪದಿಂದ ಮಹಿಳೆಯರಲ್ಲಿ ಸ್ವಾಭಿಮಾನ ಮೂಡಿಸುವ ಪ್ರಯತ್ನ ನಡೆಯುತ್ತಿರುವುದು ಸ್ವಾಗತಾರ್ಹ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರೂ ಸಕ್ರಿಯ ಪಾತ್ರ ವಹಿಸಬಹುದು ಎಂಬ ಭಾವ ಪ್ರತಿಯೊಬ್ಬರಲ್ಲೂ ಮೂಡಿದರೆ ಅದು ನಿಜಕ್ಕೂ ಅದ್ಭುತ ಪರಿವರ್ತನೆಯನ್ನು ತರಬಹುದು.

Thursday, April 21, 2011

ಮರ್ಕಟ ಲೋಕದಲ್ಲಿ

ದಿನಾಂಕ ೨೧-೦೪-೨೦೧೧ರ ಸಂಯುಕ್ತ ಕರ್ನಾಟಕದ ಚೇತನ ಪುರವಣಿಯಲ್ಲಿ ’ಮರ್ಕಟ ಲೋಕದಲ್ಲಿ’ ಎಂಬ ಶೀರ್ಷಿಕೆಯಡಿ ನನ್ನ ಒಂದು ಲೇಖನ ಪ್ರಕಟವಾಗಿದೆ. ತಾವೂ ಓದಿ ಪ್ರತಿಕ್ರಿಯಿಸಿ. ಪತ್ರಿಕೆ ದೊರೆಯದವರಿಗಾಗಿ ಲೇಖನದ ಯಥಾವತ್ ಪಾಠ ಇಲ್ಲಿದೆ.

ಮಹಾಬಲ ಭಟ್

ಇತ್ತೀಚೆಗೆ ಪಿ.ಯು.ಸಿ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ವಾರ್ತಾ ಪತ್ರಿಕೆಯನ್ನು ಓದುತ್ತಿರುವಾಗ ಆಘಾತವಾಗುತ್ತಿತ್ತು. ಪ್ರಶ್ನಪತ್ರಿಕೆ ಕಠಿಣವಾಗಿತ್ತೆಂದು ಆತ್ಮಹತ್ಯೆ ಮಾಡಿಕೊಂಡವರು, ತಾನು ಚೆನ್ನಾಗಿ ಬರೆದಿಲ್ಲ ಎಂದು ಜೀವ ತೆಗೆದುಕೊಂಡವರು, ಅನುತ್ತೀರ್ಣನಾಗಿ ಬಿಡುತ್ತೀನೇನೊ ಎಂಬ ಹೆದರಿಕೆಯಿಂದಲೇ ಆತ್ಮಹತ್ಯೆಗೆ ಶರಣು ಹೋದವರು ಹೀಗೆ ಯುವ ಜನಾಂಗ ಆತ್ಮಹತ್ಯೆಯತ್ತ ಹೊರಳುತ್ತಿರುವದನ್ನು ನೋಡಿ ವೇದನೆಯಾಗುತ್ತಿತ್ತು. ಪರೀಕ್ಷೆಯ ಪರಿಣಾಮ ಬಂದಾಗ ಫೇಲಾದೆ ಎಂದು ಸಾಯುವುದು ಸಾಮಾನ್ಯವಾಗಿಬಿಟ್ಟಿದೆ. ಈಗ ಇನ್ನೂ ಮುಂದೆ ಹೋಗಿ ಪರೀಕ್ಷೆ ಮುಗಿದ ತಕ್ಷಣವೇ ಫಲಿತಾಂಶವನ್ನು ಊಹಿಸಿಕೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ.
ಆತ್ಮಹತ್ಯೆಗೆ ಕಾರಣ ಆತ್ಮಹೀನತೆಯೇ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಉದ್ವೇಗವನ್ನು ನಿಯಂತ್ರಿಸಲಾರದೇ ಇರುವವರು, ತಮ್ಮ ಮೇಲೆಯೇ ಭರವಸೆಯನ್ನು ಹೊಂದದವರು, ನಿಂದನೆಯನ್ನು ಸಹಿಸಲಾರದವರು.... ಹೀಗೆ ಆತ್ಮಹತ್ಯೆಯತ್ತ ಮುಖ ಮಾಡುವ ವ್ಯಕ್ತಿಗಳ ದೊಡ್ಡ ಪಟ್ಟಿಯೇ ಸಿಗುತ್ತದೆ.
ಇಂತಹ ಪಟ್ಟಿಯಲ್ಲಿ ಹಗಲುಗನಸು ಕಾಣುವವರೂ ಒಬ್ಬರು. ನಮ್ಮ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಮರು "ಸ್ವಪ್ನವನ್ನು ಕಾಣಿರಿ. ಸ್ವಪ್ನ ನೋಡಲಾರದವನು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲಾರ" ಎನ್ನುತ್ತಿದ್ದರು. ಅವರ ಮಾತನ್ನು ಅಕ್ಷರಶ: ಪಾಲಿಸುವ ನಮ್ಮ ಯುವ ಜನತೆ ಇಂದು ಸ್ವಪ್ನ ನೋಡುವುದರಲ್ಲೇ ಕಾಲಕಳೆಯುತ್ತಿದ್ದಾರೆ. ಅದನ್ನು ಸಾಕಾರೀಕರಿಸಲು ಯಾವ ಪ್ರಯತ್ನವೂ ನಡೆಯುವುದಿಲ್ಲ.
ಸ್ವಪ್ನ ಮೂಡುವುದು ನಮ್ಮ ಮನಸ್ಸೆಂಬ ಭಿತ್ತಿಯ ಮೇಲೆ. ರಾತ್ರಿ ಕಣ್ಣು ಮುಚ್ಚಿದ್ದರೂ ಮನಸ್ಸು ಅದನ್ನು ನೋಡುತ್ತದೆ. ಮನಸ್ಸಿನ ಚಿಂತೆ-ಚಿಂತನೆ, ಆಲೋಚನೆ-ವಿಚಾರ, ಸಂಕಲ್ಪ-ವಿಕಲ್ಪ, ದೃಷ್ಟ-ಕಲ್ಪಿತ ಘಟನೆಗಳು, ಭಾವ-ಸ್ವಭಾವ ಇವೇ ಕನಸಿನ ರೂಪದಲ್ಲಿ ಮನೋಭಿತ್ತಿಯಲ್ಲಿ ಮೂಡುತ್ತವೆ ಎಂಬುದು ತತ್ತ್ವಜ್ಞಾನಿಗಳಿಂದ ಹಿಡಿದು ಮನ:ಶಾಸ್ತ್ರಜ್ಞರವರೆಗೆ ಎಲ್ಲರೂ ಒಪ್ಪುವ ವಿಚಾರ. ಮುಂದೊದಗುವ ಶುಭಾಶುಭಗಳನ್ನು ಕನಸುಗಳು ಸೂಚಿಸುತ್ತವೆ ಎಂದು ನಂಬಿದವರೂ ಇದ್ದಾರೆ. ಅದೇನೇ ಇರಲಿ ಇಂತಹ ಕನಸು ಅಪ್ರಯತ್ನವಾಗಿ ಬೀಳುವುದೇ ಹೆಚ್ಚು. ಪ್ರಯತ್ನ ಮಾಡಿ ಅದನ್ನು ಕಾಣಲಾಗದು. ಆದರೆ ಕಲಾಮರು ಹೇಳಿದ್ದು ಈ ರಾತ್ರಿಕನಸಿನ ಬಗ್ಗೆ ಅಲ್ಲ. ನಾನು, ನನ್ನ ಜೀವನ, ನನ್ನ ಸಮಾಜ, ನನ್ನ ದೇಶ ಇವುಗಳ ಬಗ್ಗೆ ಉದಾತ್ತ ಸ್ವಪ್ನ ಕಾಣಿರಿ ಎಂದು. ’ಕನಸು ಎಂದರೆ ನೀವು ನಿದ್ದೆ ಮಾಡುವಾಗ ಕಾಣುವುದಲ್ಲ, ಯಾವುದು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲವೊ ಅದು ನಿಜವಾದ ಕನಸು’. ಕಲಾಮರು ಹೇಳಿದ್ದು ಇದು. ಹೌದು ಇಂತಹ ಸ್ವಪ್ನವನ್ನು ಕಾಣಬೇಕು. ಸ್ವಪ್ನ ಕಾಣದವ ತನ್ನ ಗುರಿಯನ್ನು ನಿರ್ಧರಿಸಲಾರ. ಯಾರೋ ಕೊಟ್ಟ ಸಲಹೆಯನ್ನೇ ತನ್ನ ಗುರಿಯಾಗಿಸಿಕೊಳ್ಳುತ್ತಾನೆ. ಹಾಗಂತ ಆಕಾಶಕ್ಕೆ ಏಣಿ ಹಾಕುವ ಸ್ವಪ್ನವನ್ನು ಕಾಣುವುದೇ?

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್|
ಆಭಾಸಮಂ ಸತ್ಯವೆಂದು ಬೆಮಿಸುವುದುಮ್||
ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ |
ಅಭಿಶಾಪ ನರಕುಲಕೆ-ಮಂಕುತಿಮ್ಮ ||

ಎಂದು ಡಿ.ವಿ.ಜಿ.ಯವರು ಹೇಳಿದಂತೆ ಸಾಧನೆಗೆ ಮಿತಿಯಿಲ್ಲವೆಂದು ಅಮಿತ ಸಾಧನೆಯ ಕನಸು ಕಾಣುವುದೇ? ನಿಜ, ನಮ್ಮ ಕನಸು ಉನ್ನತವಾಗಿದ್ದರೆ ಗುರಿಯೂ ಉನ್ನತವಾಗಿರುತ್ತದೆ. ನಾವು ಗುರಿಯನ್ನು ನಿರ್ಧರಿಸುವುದಕ್ಕಿಂತ ಮೊದಲು ಕನಸನ್ನು ಕಾಣಬೇಕು. ಕಂಡ ಸ್ವಪ್ನದಲ್ಲಿ ತನಗಿಷ್ಟವಾದುದನ್ನಾರಿಸಿಕೊಳ್ಳಬೇಕು. ಅದಾದ ನಂತರ ಆ ಗುರಿಯ ವಿಷಯದಲ್ಲಿ ಮಾತ್ರ ಸ್ವಪ್ನವನ್ನು ಕಾಣಬೇಕು. ಬೇರೆ ವಿಷಯಗಳು ಮನದಿಂದ ದೂರವಾಗಬೇಕು. ಬಹುಷ: ಸ್ವಪ್ನದಲ್ಲಿ ಕಂಡಿದ್ದನ್ನೇ ಗುರಿಯಾಗಿಸಿಕೊಂಡು, ತನ್ನ ಗುರಿಯನ್ನೇ ಸ್ವಪ್ನದಲ್ಲಿ ಕಂಡು ಸ್ವಪ್ನ-ಗುರಿಗಳ ಸಮನ್ವಯ ಸಾಧಿಸಿದ್ದರಿಂದಲೇ ಕಲಾಮರು ರಾಷ್ಟ್ರಪತಿ ಸ್ಥಾನವನ್ನಲಂಕರಿಸಿದ್ದು. ತಮ್ಮ ಗುರಿಯನ್ನು ಬಿಟ್ಟು ಸುಂದರ ಹುಡುಗಿಯ ಕೈ ಹಿಡಿಯಬೇಕು, ಕೆಲವು ಮಕ್ಕಳಿಗೆ ತಂದೆಯಾಗಬೇಕು ಎಂದೆಲ್ಲ ಕನಸು ಕಂಡಿದ್ದರೆ ಪ್ರಾಯ: ಕಲಾಮರು ಭಾರತದ ಲಲಾಮರಾಗದೇ ಸಂಸಾರದ ಗುಲಾಮರಾಗಿಯೇ ಉಳಿಯುತ್ತಿದ್ದರೇನೋ. ಆದರೆ ಎಲ್ಲರು ಕಲಾಮರಂತೆ ಆಗಲು ಸಾಧ್ಯವೇ?
ನಮ್ಮ ಯುವಕ ಯುವತಿಯರೂ ಸ್ವಪ್ನವನ್ನು ನೋಡುತ್ತಾರೆ. ಆದರೆ ಯಾವ ರೀತಿಯ ಸ್ವಪ್ನ? ಮಧುರ ಸ್ವಪ್ನ! ಬಹು ಜನರ ಸ್ವಪ್ನ ತನ್ನ ವೈಯಕ್ತಿಕ ಬದುಕಿಗೇ ಮೀಸಲು. ಪುಸ್ತಕವನ್ನು ಮುಚ್ಚಿಟ್ಟು ಕುರ್ಚಿಗೆ ತಲೆ ಆನಿಸಿ ಆಕಾಶದತ್ತ ದೃಷ್ಟಿ ಹಾಯಿಸಿದರೆ ಕಣ್ತುಂಬಾ, ಮನಸ್ಸು ತುಂಬಾ ಮಧುರ ಸ್ವಪ್ನಗಳು. ಪ್ರಿಯತಮನೊಂದಿಗೋ ಪ್ರಿಯತಮೆಯೊಂದಿಗೋ ಡಾನ್ಸ್ ಮಾಡಿದಂತೆ, ಮರ ಸುತ್ತಿದಂತೆ, ಸ್ವಿಮ್ಮಿಂಗ್ ಪೂಲ್‌ನಲ್ಲಿ ಜಲಕ್ರೀಡೆಯಾಡಿದಂತೆ ಹೀಗೆಲ್ಲ ಸ್ವಪ್ನಗಳು. ಹದಿಹರೆಯದ ಯುವಕ ಯುವತಿಯರಿಗೇಕೆ ಪ್ರಾಥಮಿಕ ಶಾಲಾ ಮಕ್ಕಳಿಗೂ ಅಂತಹುದೇ ಸ್ವಪ್ನ ಬಿದ್ದರೆ ಆಶ್ಚರ್ಯವೇನಲ್ಲ. ಯಾಕೆಂದರೆ ನಮ್ಮ ಪ್ರಸಾರ ಮಾಧ್ಯಮಗಳು ನಮ್ಮ ವಿಚಾರ ಚಿಂತನೆಗಳ ದಿಕ್ಕನ್ನೇ ಬದಲಿಸಿಬಿಟ್ಟಿವೆ. ಇಂತಹ ಸಂದರ್ಭದಲ್ಲಿ ದೇಶದ ಬಗ್ಗೆ ಅತ್ಯುನ್ನತ ಕನಸು ಕಾಣಲು ಸಮಯವೆಲ್ಲಿ? ನಮ್ಮ ಸುತ್ತಲಿನ ವಾತಾವರಣವೂ ಅದಕ್ಕೆ ಸಹಕರಿಸದು. ಗುಂಡುಗಳ ಅಬ್ಬರದಲ್ಲಿಯೇ ದಿನದೂಡುವ ಕಾಶ್ಮೀರದ ಜನತೆ ಉಗ್ರವಾದಿಗಳ ಮುಖವನ್ನು ಬಿಟ್ಟು ಸುಂದರ ಜೀವನದ ಸ್ವಪ್ನ ಕಾಣುವುದು ಸುಲಭದ ಮಾತಲ್ಲ.
ಸ್ವಪ್ನವನ್ನು ಗುರಿಯಾಗಿಸಿಕೊಳ್ಳದಿದ್ದರೆ ಕಂಡ ಸ್ವಪ್ನ ವ್ಯರ್ಥ. ಗುರಿ ಸ್ಪಷ್ಟವಾಗಿರುವಾಗಲೂ ಕನಸು ವ್ಯರ್ಥ. ಸೈನಿಕನೊಬ್ಬ ಸಮರಾಂಗಣಕ್ಕೆ ಹೊರಡುವ ಮುನ್ನ ತಾನು ವೈರಿ ಸೈನಿಕರನ್ನು ಕೊಚ್ಚಿಹಾಕಿದಂತೆ, ಪರಮವೀರಚಕ್ರ ಪ್ರಶಸ್ತಿಯನ್ನು ಪಡೆದಂತೆ ಕನಸನ್ನು ಕಂಡರೆ ತಪ್ಪಲ್ಲ. ಆದರೆ ಅದೇ ಕನಸನ್ನು ಯುದ್ಧರಂಗದಲ್ಲಿ ಶತ್ರು ಸೈನಿಕರು ಎದುರಾಗಿರುವಾಗ ಕಾಣುತ್ತ ನಿಂತರೆ...? ಇಂಜಿನಿಯರ್ ವಿದ್ಯಾರ್ಥಿಯೊಬ್ಬ ವೈದ್ಯಕೀಯಶಾಸ್ತ್ರದಲ್ಲಿ ನೊಬೆಲ್ ಬಹುಮಾನವನ್ನು ಪಡೆದಂತೆ ಕನಸನ್ನು ಕಂಡರೆ...?!
ಇಂತಹ ವ್ಯರ್ಥ ಸ್ವಪ್ನಲೋಕದಲ್ಲಿ ವಿಹಾರಮಾಡುವುದು ಇಂದಿನ ಯುವಜನತೆಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಓದುವ ಸಮಯದಲ್ಲಿ ಸ್ವಪ್ನಲೋಕದಲ್ಲಿ ವಿಹಾರಮಾಡುತ್ತ ಕುಳಿತರೆ ಫಲಿತಾಂಶ ಶೂನ್ಯವಾಗದೆ ಮತ್ತಿನ್ನೇನು ಆಗಲು ಸಾಧ್ಯ? ತಮ್ಮ ಗುರಿ ಹಾಗೂ ಸ್ವಪ್ನಗಳ ಮಧ್ಯೆ ಸಮನ್ವಯ ಸಾಧಿಸುವಲ್ಲಿ ನಮ್ಮ ಯುವಜನತೆ ಯಶಸ್ವಿಯಾಗುತ್ತಿಲ್ಲ. ಅದುವೇ ಆತ್ಮಹತ್ಯೆಗೆ ಕಾರಣ. ತಮ್ಮ ಸ್ವಪ್ನ ಸಾಕರಗೊಳ್ಳದಿರುವಾಗ ತಿರುಕನೋರ್ವನೂರಮುಂದೆ....... ಎಂಬಂತೆ ನಿರಾಶರಾಗಿ ಆತ್ಮಹತ್ಯೆಗೆ ಶರಣು ಹೋಗುತ್ತಾರೆ.
ಅನುತ್ತೀರ್ಣರಾದಾಗ ಅವರು ಸಮಾಜದಲ್ಲಿ ಎದುರಿಸಬೇಕಾದ ಅವಮಾನದ ಕಲ್ಪನೆಯೂ ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದು. ಇಲ್ಲಿ ತಂದೆ ತಾಯಿಯರ ಪಾತ್ರ ಮಹತ್ತ್ವದ್ದು. ಅನುತ್ತೀರ್ಣರಾದ ತಮ್ಮ ಮಕ್ಕಳನ್ನು ಮೂದಲಿಸದೆ ಅವರಲ್ಲಿ ಧೈರ್ಯತುಂಬಿ ಪರೀಕ್ಷೆಯ ಪರಿಣಾಮವೇ ಜೀವನದ ನಿರ್ಧಾರಕ ಅಂಶವಲ್ಲ ಎಂಬುದನ್ನು ಮನವರಿಕೆ ಮಾಡಿ ಕೊಡಬೇಕು. ಆಗ ಅವರಲ್ಲಿ ಆತ್ಮಸ್ಥೈರ್ಯ ಮೂಡಿ ಮುಂದಿನ ಹೆಜ್ಜೆಯನ್ನು ಯಶಸ್ವಿಯಾಗಿ ಇಡಲು ಸಾಧ್ಯ.

Friday, April 8, 2011

ಸಂಸ್ಕೃತದಲ್ಲಿ ಹಾಸ್ಯ

- ಮಹಾಬಲ ಭಟ್, ಗೋವಾ.೦೯೮೬೦೦೬೦೩೭೩

ಇದೇನ್ ಸ್ವಾಮಿ ದೇವಭಾಷೆಯಲ್ಲೂ ಹಾಸ್ಯ ಮಾಡಲಿಕ್ ಬರ‍್ತದಾ ಎಂದು ಹುಬ್ಬೇರಿಸಬೇಡಿ. ನವರಸಗಳಲ್ಲಿ ಹಾಸ್ಯವೂ ಒಂದು ತಾನೆ? ಸಂಸ್ಕೃತಭಾಷೆ ನವರಸ ಭರಿತವಾದದ್ದರಿಂದ ಇಲ್ಲಿ ಹಾಸ್ಯವೂ ಇರಲೇಬೇಕು. ಜನಸಾಮಾನ್ಯರಿಗೂ ವಿನೋದವನ್ನು ನೀಡುವ ಈ ರಸವನ್ನು ಹೀರುವುದೆಂದರೆ ಎಲ್ಲರಿಗೂ ಹಿಗ್ಗು. ಸಂಸ್ಕೃತದಲ್ಲಿ ಅನೇಕ ಹಾಸ್ಯ ಶ್ಲೋಕಗಳಿವೆ. ಆದರೆ ಅವುಗಳಲ್ಲಿ ಮೇಲ್ನೋಟಕ್ಕೇ ಹಾಸ್ಯ ಗೋಚರವಾಗುತ್ತದೆಂದಿಲ್ಲ. ಕೆಲವೊಂದು ಶ್ಲೋಕಗಳ ಮರ್ಮ ಭಾಷಾಂತರಕ್ಕೆ ನಿಲುಕಲಾರದು. ಆದರೂ ಕೆಲವನ್ನು ಆರಿಸಿ ಉದಾಹರಿಸಿ, ಭಾಷಾಂತರಿಸಿ, ನಿಮ್ಮ ಮುಂದಿರಿಸುವ ಪ್ರಯತ್ನ ಮಾಡ್ತೇನೆ. ಈ ಶ್ಲೋಕಗಳಲ್ಲಿ ಕೇವಲ ಮನಕ್ಕೆ ಮುದನೀಡುವ ಹಾಸ್ಯ ಒಂದೇ ಅಲ್ಲದೆ ಚಿಂತನೆಯ ಕಿಚ್ಚು ಹಚ್ಚುವ ವಿಡಂಬನೆಯೂ ಸೇರಿದೆ.

ನನ್ನ ಲೇಖನವನ್ನು ಎಲ್ಲರಿಗೂ ಪ್ರಿಯವಾದ ವಿವಾಹದೊಂದಿಗೇ ಆರಂಭಿಸುತ್ತೇನೆ. ಇದು ಮನುಷ್ಯರ ವಿವಾಹದ ಕತೆಯಲ್ಲ, ಒಂಟೆಗಳ ವಿವಾಹದ ಕಥೆ.

ಉಷ್ಟ್ರಾಣಾಂ ಚ ವಿವಾಹೇಷು ಗೀತಂ ಗಾಯಂತಿ ಗರ್ದಭಾ:|
ಪರಸ್ಪರಂ ಪ್ರಶಂಸಂತಿ ಅಹೋರೂಪಮಹೋ ಧ್ವನಿ:||

ಒಂಟೆಗಳ ಮದುವೆಯಲ್ಲಿ ಕತ್ತೆಗಳ ಹಾಡಂತೆ. ಕತ್ತೆ ಒಂಟೆಯ ನೋಡಿ ಹಾಡಿತು- ’ಹಾ ಎಂಥಾರೂಪ!’ ಕತ್ತೆಯ ಧ್ವನಿ ಕೇಳಿ ಒಂಟೆ ಹೇಳಿತು, ’ಆಹಾ! ಎಂಥ(ಸುಮಧುರ) ಧ್ವನಿ !!’ ಹೇಗಿದೆ ಪರಸ್ಪರ ಪ್ರಶಂಸೆ?. ಮದುವೆ ವಿಷಯ ಬಂದಾಗ ಅಳಿಯನ ವಿಷ್ಯಾನೂ ಮಾತಾಡ್ಲೇ ಬೇಕು. ಅಳಿಯನ್ನ ಹತ್ತನೇ ಗ್ರಹ ಅಂತ ಕರೀತಾರೆ ಅಂತ ನಿಮಗೆಲ್ಲ ಗೊತ್ತು. ಆದರೆ ಈ ಗ್ರಹದ ವೈಶಿಷ್ಟ್ಯ ಗೊತ್ತೆ?

ಸದಾ ದುಷ್ಟ: ಸದಾ ರುಷ್ಟ: ಸದಾ ಪೂಜಾಮಪೇಕ್ಷತೇ|
ಕನ್ಯಾರಾಶಿ ಸ್ಥಿತೋ ನಿತ್ಯಂ ಜಾಮಾತಾ ದಶಮೋ ಗ್ರಹಃ||

ನವಗ್ರಹಗಳಲ್ಲಿ ಎಲ್ಲವೂ ಯಾವಾಗಲೂ ದುಷ್ಟವಲ. ಆದರೆ ಇವನು ಮಾತ್ರ ಸದಾ ದುಷ್ಟ. ಉಳಿದ ಗ್ರಹಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ಸಿಟ್ಟಾದರೆ ಇವನು ಮಾತ್ರ ಯಾವಾಗ ಕೋಪಿಷ್ಟ. ಉಳಿದ ಗ್ರಹಗಳು ಯಾವಾಗಲೂ ಪೂಜೆಯನ್ನು ಅಪೇಕ್ಷಿಸುವುದಿಲ್ಲ. ಆದರೆ ಇವನಿಗೆ ಮಾತ್ರ ಸದಾ ಪೂಜೆ ಬೇಕು. ಬಾಕಿ ಗ್ರಹಗಳು ರಾಶಿಯಿಂದ ರಾಶಿಗೆ ಚಲಿಸಿದರೆ ಈ ಗ್ರಹಮಾತ್ರ ’ಕನ್ಯಾ’ ರಾಶಿಯಲ್ಲೇ ನಿಶ್ಚಲ. ’ಅಳಿಯ ಮನೆ ತೊಳೆಯ’ ಅಲ್ಲವೆ?.

ಮುಖ ತೊಳೆದ ಮೇಲೆ ನಾವು ದೇವರಿಗೆ ಕೈ ಮುಗೀತೇವೆ. ನಾನಂತೂ ಗಣಪತಿಗೆ ಕೈ ಮುಗೀತೇನೆ. ಅಲ್ಲ ಮಾರಾಯ್ರೇ ಈ ದೇವರು ಗಣೇಶ ಬೆಕ್ಕಿಗೆ ಕೈ ಮುಗೀತಾನಂತೆ ಯಾಕೆ ಗೊತ್ತಾ?

ಗಣೇಶ: ಸ್ತೌತಿ ಮಾರ್ಜಾರಂ ಸ್ವವಾಹಸ್ಯಾಭಿರಕ್ಷಣೇ|

ಗೊತ್ತಾಗ್ಲಿಲ್ವಾ? ಅವನ ವಾಹನ ಇಲಿ ಅಲ್ವೇನ್ರಿ! ಅದರ ರಕ್ಷಣೆ ಆಗ ಬೇಕು ಅಂತಾದರೆ ಬೆಕ್ಕಿಗೆ ಶರಣಾಗಬೇಕು ತಾನೆ?. ನಮ್ಮ ಜನ ದೇವ್ರನ್ನೂ ತಗೊಂಡೇ ವಿನೋದ ಮಾಡ್ತಾರೆ ನೋಡಿ. ನೀವು ಲಕ್ಷ್ಮೀದೇವಿ ಚಿತ್ರ ನೋಡಿದ್ದೀರಿ ತಾನೆ?. ಅವಳಿರೋದು ಎಲ್ಲಿ? ಕಮಲದ ಹೂವಿನ ಮೇಲೆ, ಶಿವ ಇರೋದೆಲ್ಲಿ? ಹಿಮದ ಆಲಯದಲಿ, ವಿಷ್ಣು ಮಲಗೋದೆಲ್ಲಿ? ಕ್ಷೀರಸಾಗರದಲಿ. ಇವರೆಲ್ಲ ಯಾಕೆ ನೆಲದ ಮೇಲೆ ಹಾಸಿಗೆ ಹಾಸಿ ಮಲಗೋದಿಲ್ಲ ಗೊತ್ತಾ?.


ಕಮಲೇ ಕಮಲಾ ಶೇತೇ ಹರ: ಶೇತೇ ಹಿಮಾಲಯೇ
ಕ್ಷೀರಾಬ್ದೌ ಚ ಹರಿ: ಶೇತೇ ಮನ್ಯೇ ಮತ್ಕುಣಶಂಕಯಾ|

ಉತ್ತರ ತಿಳೀಲಿಲ್ವಾ? ತಿಗಣೆಗೆ ಹೆದರಿ ಸ್ವಾಮಿ!. ಹೋಗ್ಲಿ ಬಿಡಿ ದೇವರು ಸಿಟ್ಟಾದಾನು. ಸರಕಾರಿ ಕೆಲಸ ದೇವರ ಕೆಲಸ ಅಂತ ಎಲ್ಲೋ ಓದಿದ್ದ ನೆನಪು. ನಾನು ಒಂದಿನ ದೇವಸ್ಥಾನಕ್ಕೆ ಹೋಗೋ ಬದ್ಲು ಸರಕಾರಿ ಕಛೇರಿಗೆ ಹೋಗ್ಬಿಟ್ಟಿದ್ದೆ. ನಾ ಓದಿದ್ದು ಸುಳ್ಳಲ್ಲ ಅನ್ನಿಸ್ತು ನನಗೆ. ಯಾಕೆಂದ್ರೆ ಅಲ್ಲಿರುವವರೆಲ್ಲ ’ಪ್ರಸಾದ’ .ತಿನ್ನೋದರಲ್ಲಿ ಬಹಳಾ ನಿಪುಣರು. ಅದರೊಳಗೊಬ್ಬ ಗುಮಾಸ್ತ ಅಂತೂ ತಿನ್ನೋದ್ರೊಳಗೆ ಬಹಳಾ ಬುದ್ಧಿವಂತ. ಇವನು ತಾಯಿ ಹೊಟ್ಟೇಲಿರುವಾಗ ಅವಳ ಕರುಳನ್ನೇ ಯಾಕೆ ತಿನ್ನಿಲ್ಲ ಅಂತ ಆಶ್ಚರ್ಯ ಆಯ್ತು. ಛೆ! ತಾಯಿಗಿಂತ ದೇವರಿಲ್ಲ ಅಲ್ವೆ? ಅಲ್ಲಲ್ಲ.... ಅದಕ್ಕಾಗಿ ಅಲ್ಲ....

ಕಾಯಸ್ಥೇನೋದರಸ್ಥೇನ ಮಾತುರಾಮಿಷಶಂಕಯಾ |
ಆಂತ್ರಾಣಿ ಯನ್ನ ಭುಕ್ತಾನಿ ತತ್ರ ಹೇತುರದಂತತಾ ||

ಆಗ ಅವನಿಗೆ ಹಲ್ಲೆಲ್ಲಿತ್ತು ಸರ್!. ಸುಲಭವಾಗಿ ಧನಸಂಪಾದನೆ ಮಾಡೋ ಇಂಥಾ ಉದ್ಯೋಗ ಇರಬೇಕು ನೋಡಿ. ನಮ್ಮ ಅದೃಷ್ಟ ಬೆಕ್ಕಿನ ಹಾಗೆ ಇರಬೇಕಂತೆ. ಈ ಶ್ಲೋಕ ಹಾಗೂ ಅದಕ್ಕೆ ಪಾ.ವೆಂ. ಆಚಾರ್ಯರು
ಮಾಡಿದ ಸೊಗಸಾದ ಭಾಷಾಂತರ ನೋಡಿ.

ಉದ್ಯೋಗ: ಖಲು ಕರ್ತವ್ಯ: ಫಲಂ ಮಾರ್ಜಾರವದ್ಭವೇತ್ |
ಜನ್ಮಪ್ರಭೃತಿ ಗೌರ್ನಾಸ್ತಿ ಪಯ: ಪಿಬತಿ ನಿತ್ಯಶಃ ||

ಬಿಡದೆ ಸಾಧನೆ ಮಾಡು ಮಾರ್ಜಾಲವನು ನೋಡು;
ಹಸುವ ಸಾಕಿದೆಯೆ ಅದು ನಿತ್ಯ ಕುಡಿಯದೆ ಹಾಲು?..

ಕನ್ನಡದ ರಸಋಷಿ ಡಿ.ವಿ.ಗುಂಡಪ್ಪನವರು ಕೃಷ್ಣಾಚಾರ್ಯರೆಂಬ ಸಜ್ಜನ ಮಾಧ್ವರನ್ನು ವ್ಯಾಕರಣ ಕಲಿಯುವುದಕ್ಕಾಗಿ ಆಶ್ರಯಿಸಿದ್ದರಂತೆ. ಅವರು ತನಗೆ ವ್ಯಾಕರಣ ವೇದಾಂತಗಳು ತಲೆಗೆ ಹತ್ತಲಿಲ್ಲ, ಆದರೆ ಕೃಷ್ಣಾಚಾರ್ಯರ ಮನೆಯ ಅಡಿಗೆಯ ರುಚಿ ನಾಲಿಗೆಗೆ ಹತ್ತಿತು ಎಂಬುದನ್ನು ಸಂಸ್ಕೃತ-ಕನ್ನಡಮಿಶ್ರಿತ ಶ್ಲೋಕದಲ್ಲಿ ಹೇಳಿದ ಅಂದವನ್ನು ನೋಡಿ.

ನ ವೇದಾಂತೇ ಗಾಢಾ ನ ಚ ಪರಿಚಿತಂ ಶಬ್ದಶಾಸ್ತ್ರಂ
ನ ವಾ ತರ್ಕೇ ವೇದೇ ನ ಚ ಸರಸತಾ ಕಾವ್ಯನಿವಹೇ |
ವಯಂ ಶ್ರೀಮದ್ಬ್ಯಾಳೀಹುಳಿಪಳದ್ಯಕೊಸಂಬ್ರಿತೊವ್ವೀ
ಹಯಗ್ರೀವಾಂಬೋಡೀಕರಿಗಡುಬುಚಿತ್ರಾನ್ನಚತುರಾ: ||

ಸಾಕು ಮುಗಿಸಿ ಮಾರಾಯ್ರೆ ನಿಮ್ಮ ಪುರಾಣ ಅನ್ನೋದಕ್ಕಿಂತ ಮೊದಲೇ ಮುಗಿಸ್ತೇನೆ ಸ್ವಾಮಿ. ಇಷ್ಟೆಲ್ಲ ಓದ್ಕೊಂಡೂ ನಗ್ದಿದ್ರೆ ನಿಮಗೆ ದೊಡ್ಡ ನಮಸ್ಕಾರ.

Tuesday, April 5, 2011

ಹೊಸ ಚಿಗುರು ಹಳೆ ಬೇರು............

ಲೇಖನ: ಮಹಾಬಲ ಭಟ್


ಋತು ಚಕ್ರ ತಿರುಗುವುದು ಕಾಲನೆದೆ ಮರುಗುವುದು

ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು

ಕ್ಷಿತಿಗರ್ಭ ಧರಿಸುವಳು ಮತ್ತುದಿಸುವುದು ಜೀವ

ಸತತ ಕೃಷಿಯೊ ಪ್ರಕೃತಿ-ಮಂಕುತಿಮ್ಮ


ಪ್ರತಿವರ್ಷವೂ ಶಿಶಿರವಸಂತಗಳು ಪುನರಾವರ್ತನೆಗೊಳ್ಳುತ್ತವೆ. ಪ್ರಕೃತಿಯಲ್ಲಿ ಬದಲಾವಣೆಗಳಾಗುತ್ತವೆ. ಇದು ನಿರಂತರವಾಗಿ ನಡೆದೇ ಇರುತ್ತದೆ. ಪ್ರಕೃತಿಯು ಕ್ಯಾಲೆಂಡರನ್ನು ಅನುಸರಿಸಿ ಬದಲಾಗುವುದಿಲ್ಲ. ಪ್ರಕೃತಿಯ ಪರಿವರ್ತನೆಗನುಗುಣವಾಗಿ ನಾವು ಕ್ಯಾಲೆಂಡರನ್ನು ಮಾಡಿಕೊಳ್ಳುತ್ತೇವೆ. ಕ್ಯಾಲೆಂಡರನ್ನು ಬದಲಾಯಿಸಿಯೇ ಸಂಭ್ರಮಪಡುವ ನಾವು, ಅಂದು ಪ್ರಕೃತಿಯಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸುವುದಿಲ್ಲ. ಇಂದು ನಾವು ನಮ್ಮ ವ್ಯವಹಾರದಲ್ಲಿ ಅಂತಾರಾಷ್ಟ್ರೀಯ ಪಂಚಾಂಗವನ್ನು ಉಪಯೋಗಿಸುತ್ತೇವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ಧಾರ್ಮಿಕ ಪಂಚಾಂಗವನ್ನು ಉಪಯೋಗಿಸುತ್ತೇವೆ. ಭಾರತೀಯ ಧರ್ಮದ ಆಚರಣೆಗಳು ಭಾರತದ ಪ್ರಕೃತಿಯನ್ನವಲಂಬಿಸಿ ಇವೆ. ವಸಂತನ ಆಗಮನವಾದಾಗ ಪ್ರಕೃತಿಯಲ್ಲಿ ಏನೋ ಹೊಸತನವನ್ನು ಕಾಣುತ್ತೇವೆ. ಹಾಗಾಗಿಯೇ ಅವನನ್ನು ಋತುಗಳ ರಾಜನೆನ್ನುವುದು. ನಮ್ಮ ಬಾಳಿನಲ್ಲಿ ಹೊಸತನಕ್ಕೆ ತುಂಬಾ ಮಹತ್ತ್ವವಿದೆ.


ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು

ರಸವು ನವನವತೆಯಿಂದನುದಿನವು ಹೊಮ್ಮಿ

ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ

ಪಸರುತಿರೆ ಬಾಳ್ ಚೆಲುವು - ಮಂಕುತಿಮ್ಮ


ಈ ಹೊಸತನ ಒಂದೇ ದಿನದಲ್ಲಿ ಬರುವಂಥದ್ದಲ್ಲ. ಹಾಗಾಗಿಯೇ ಸುಮಾರು ಶಿವರಾತ್ರಿಯ ಅನಂತರ ನಾವು ವಸಂತದ ಲಕ್ಷಣಗಳನ್ನು ಕಾಣುತ್ತೇವೆ. ಹಳೆಯದರೊಂದಿಗೆ ಬೆಸೆತುಕೊಂಡೇ ಹೊಸತನ ಕಾಣಿಸುತ್ತದೆ. ಹೊಸ ಚಿಗುರು ಹಳೆಬೇರನ್ನವಲಂಬಿಸಿಯೇ ಬರುವುದು ತಾನೆ?


ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಬಗು

ಹೊಸಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ

ಋಷಿ ವಾಕ್ಯದೊಡನೆ ವಿಜ್ಞಾನ ಮೇಳವಿಸೆ

ಜಸವು ಜೀವನಕದುವೆ-ಮಂಕುತಿಮ್ಮ

ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ನಮ್ಮ ಪೂರ್ವಜರ ಮಾತನ್ನು ಧಿಕ್ಕರಿಸಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಹಳೆಯ ನೆಲೆಗಟ್ಟಿನ ಮೇಲೆ ಹೊಸ ಜೀವನ ಸೌಧವನ್ನು ಕಟ್ಟಿ ಎಂಬುದೇ ಯುಗಾದಿಯ ಸಂದೇಶ. ಸತ್ಯಯುಗದಲ್ಲಿ ಸೃಷ್ಟಿ ಆರಂಭವಾದ ದಿನವೇ ಯುಗಾದಿ ಎಂಬ ನಂಬಿಕೆ ಇದೆ. ಚೈತ್ರಶುದ್ಧ ಪ್ರತಿಪದೆಯಂದು ಚಾಂದ್ರಮಾನ ಯುಗಾದಿ. ಸೂರ್ಯನ ಗತಿಗನುಸಾರವಾಗಿ ಮೇಷ ಮಾಸದ ಪ್ರಥಮದಿನವನ್ನು ಸೌರಮಾನ ಯುಗಾದಿಯೆಂದು ಆಚರಿಸುತ್ತಾರೆ. ಯುಗಾದಿಯ ಆಚರಣೆಗೆ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯಿದೆ. ಆ ದಿನ ಅಭ್ಯಂಗಸ್ನಾನ, ತಳಿರುತೋರಣಗಳಿಂದ ಗೃಹಾಲಂಕರಣ, ದೇವತಾಪೂಜೆ, ವಿಶೇಷ ನೈವೇದ್ಯ- ಪಂಚಾಂಗಶ್ರವಣ ದಾನ ಮುಂತಾದ ಕರ್ಮಗಳನ್ನು ಶಾಸ್ತ್ರವು ವಿಧಿಸಿದೆ. ಅಭ್ಯಂಗವು ನಮ್ಮ ಶರೀರ ಮತ್ತು ಮನಸ್ಸುಗಳ ಪ್ರಸನ್ನತೆಗೆ ಸಹಕಾರಿ ಎಂಬುದನ್ನು ಆಯುರ್ವೇದವು ಸಾರಿ ಹೇಳುತ್ತದೆ. ಮಾವಿ ಚಿಗುರುಗಳು ವಾತಾವರಣವನ್ನು ಶುದ್ಧೀಕರಿಸುತ್ತವೆ ಎಂಬುದು ತೋರಣ ಕಟ್ಟುವುದರ ಹಿನ್ನೆಲೆ. ಅಂದು ಎತ್ತರದಲ್ಲಿ ಧ್ವಜವನ್ನು ಹಾರಿಸುವ ಪದ್ಧತಿಯಿದೆ. ಅದು ಭಗವಂತನು ಮಾಡಿದ ದೈತ್ಯನಿಗ್ರಹವೇ ಮೊದಲಾದ ಮಹತ್ಕಾರ್ಯಗಳನ್ನು ನೆನಪಿಗೆ ತರುವ ಧರ್ಮ ವೈಜಯಂತಿಯಷ್ಟೇ ಅಲ್ಲ, ನಮ್ಮ ವೈಚಾರಿಕ ಔನ್ನತ್ಯಕ್ಕಾಗಿ ಮಾಡಿರುವ ಸಂಕಲ್ಪದ ದ್ಯೋತಕವೂ ಆಗಿರುತ್ತದೆ. ಸೃಷ್ಟಿಕರ್ತನಾದ ಪ್ರಜಾಪತಿಯೂ ಕಾಲಪುರುಷನೂ ಯುಗಾದಿಪರ್ವದ ದೇವತೆಗಳು. ಅವರಿಗೆ ಅಂದು ಅರ್ಪಿಸುವ ವಿಶೇಷ ನೈವೇದ್ಯವು ಚಿಗುರುಬೇವು ಮತ್ತು ಬೆಲ್ಲವನ್ನು ಸೇರಿಸಿ ಕುಟ್ಟಿದ ಕಲ್ಕ. ಬೇವು ಎಲುಬಿಗೆ ಸಂಬಂಧಿಸಿದ ರೋಗವನ್ನು ವಿಷದ ಸೋಂಕನ್ನು ನಿವಾರಿಸುವ ಮಹೌಷಧಿ. ಆದರೂ ಕಹಿಯಾದ ಅದರಲ್ಲಿ ವಾತದೋಷವಿದೆ. (ಕಟುತಿಕ್ತ ಕಷಾಯಾ: :ವಾತಂ ಜನಯಂತಿ - ಚರಕ) ಸಿಹಿಯಾದ ಬೆಲ್ಲದೊಡನೆ ಅದು ಸೇರಿದರೆ ಆ ದೋಷವು ಶಮನ ಹೊಂದುತ್ತದೆ. ಜೀವನದಲ್ಲಿ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ಭಾವನೆಯೂ ಈ ಕ್ರಿಯೆಯ ಹಿಂದಿದೆ. ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಇವು ಪಂಚ ಅಂಗಗಳು (ಪಂಚಾಂಗ) ಇಡೀವರ್ಷದ ಪಂಚಾಂಗವನ್ನು, ಭವಿಷ್ಯವನ್ನು ಯುಗಾದಿಯ ದಿನ ಸಾಯಂಕಾಲ ಕೇಳುವ ಪದ್ಧತಿಯಿದೆ. ಈ ದಿನ ಜಲಪಾತ್ರೆಯನ್ನೂ ವಸ್ತ್ರಭೂಷಣಗಳನ್ನೂ ದಾನ ಮಾಡಬೇಕೆಂದು ಶ್ರುತಿಯು ಸಾರುವುದು. ಗ್ರಾಮೀಣ ಪ್ರದೇಶದಲ್ಲಿ ನೇಗಿಲಿನಿಂದ ಗೆರೆ ತೆಗೆದು ಬೇಸಾಯವನ್ನು ಸಾಂಕೇತಿಕವಾಗಿ ಆರಂಭಿಸುವ ಪದ್ಧತಿಯಿದೆ. ಯುಗಾದಿಯ ದಿನ ಮಂಗಲ ಕಾರ್ಯಗಳಿಗೆ ಪ್ರಶಸ್ತವಾದ (ಸಾಡೆತೀನ್) ಮುಹೂರ್ತಗಳಲ್ಲಿ ಒಂದು. ಆದ್ದರಿಂದ ಈ ದಿನ ಹೊಸ ಕಾರ್ಯಾರಂಭಕ್ಕೆ ಶುಭದಿನ. ಹೊಸ ಚಿಂತನೆ-ಹೊಸ ಉತ್ಸಾಹ, ಹೊಸ ಮನಸ್ಸುಗಳಿಂದ ಹೊಸವರ್ಷದಲ್ಲಿ ಮಾಡುವ ಕಾರ್ಯಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ.

Saturday, March 26, 2011

ಗೋವಾದ ಶೋಭೆ ಹೆಚ್ಚಿಸುವಲ್ಲಿ ಕನ್ನಡಿಗರ ಪಾತ್ರ ಅಪಾರ - ವಿಕ್ಟೋರಿಯಾ ಡಿಸೋಜಾ
ಗೋವಾದ ಅಭಿವೃದ್ಧಿಯಲ್ಲಿ ಹಾಗೂ ಅದರ ಅಂದ ಹೆಚ್ಚಿಸುವಲ್ಲಿ ಕನ್ನಡಿಗರು ಕೊಡುತ್ತಿರುವ ಕೊಡುಗೆ ಅಪಾರ ಎಂದು ಗೋವಾ ವಿಧಾನಸಭೆಯ ಸಂತಾಕ್ರುಜ಼್ ಕ್ಷೇತ್ರದ ಶಾಸಕಿ ಹಾಗೂ ಮಾಜಿ ಮಂತ್ರಿ ಶ್ರೀಮತಿ ವಿಕ್ಟೋರಿಯಾ ಫರ್ನಾಂಡಿಸ್ ಅಭಿಪ್ರಾಯಪಟ್ಟರು. ಅವರು ಪಣಜಿಯ ಸಿದ್ಧಾರ್ಥ ಬಾಂದೋಡ್ಕರ್ ಸಭಾಭವನದಲ್ಲಿ ಗೋವಾ ಕನ್ನಡ ಸಮಾಜದ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕನ್ನಡಿಗರು ಅತ್ಯಂತ ತಾಳ್ಮೆ, ಕಾಳಜಿ ಹಾಗೂ ಪ್ರಾಮಾಣಿಕತೆಗಳಿಂದ ಕೆಲಸ ಮಾಡುತ್ತಾರೆ. ನಗುಮೊಗದ ಸೇವೆ ಅವರ ಹೆಗ್ಗಳಿಕೆ. ಇಂದು ಗೋವಾದಲ್ಲಿ ಕಾಣುವ ದೊಡ್ಡ ದೊಡ್ಡ ಕಟ್ಟಡಗಳ ಹಿಂದೆ ಕನ್ನಡಿಗರ ಅಪಾರ ಶ್ರಮವಿದೆ. ಇಷ್ಟಾದರೂ ಕನ್ನಡಿಗರನ್ನು ಇಲ್ಲಿನವರು ಹೊರಗಿನವರು ಎಂದು ಮೂದಲಿಸುವುದು ದುರದೃಷ್ಟಕರ ಎಂದು ಅವರು ಹೇಳಿದರು. ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ತನ್ನ ತಂದೆಯ ಜೊತೆಗೆ ಕಾರವಾರದಲ್ಲಿ ವಸತಿ ಮಾಡಿದ ತನ್ನ ಬಾಲ್ಯದ ದಿನಗಳನ್ನು ಸ್ಮರಿಸಿದ ಶಾಸಕಿ, ದಾಂಡೇಲಿ, ಕುಮಟಾ, ಹೊನ್ನಾವರ ಮುಂತಾದ ಪ್ರದೇಶಗಳಲ್ಲಿ ತಾನು ಅಡ್ಡಾಡಿದ್ದನ್ನು ಮೆಲಕು ಹಾಕಿದರು. ತಾನು ಯಾವಾಗಲೂ ನಿಮ್ಮ ಜೊತೆಗೆ ಇರುವೆ ಎಂಬ ಭರವಸೆಯ ಮಾತನ್ನು ಅವರು ಆಡಿದರು. ಮಹಿಳೆಯರು ಇಂದು ಮಾಡುತ್ತಿರುವ ಸಾಧನೆಯ ಕುರಿತು ತೃಪ್ತಿ ವ್ಯಕ್ತಪಡಿಸಿದ ಅವರು ’ಮಹಿಳೆಯರ ಶೋಷಣೆ ಇಂದಿಗೂ ನಿಲ್ಲದಿರುವುದು ವಿಷಾದಕರ’ ಎಂದರು.
ಗೌರವಾತಿಥಿಯಾಗಿ ಪಾಲ್ಗೊಂಡಿದ್ದ ಹೃದ್ರೋಗ ತಜ್ಞೆ ಡಾ. ಜ್ಯೋತಿ ಕುಸನೂರ್ ಅವರು ಪ್ರಕ್ಷೇಪಕದ ಸಹಾಯದಿಂದ ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ ಹೃದಯದ ಕಾಯಿಲೆಗೆ ಸಂಬಂಧಪಟ್ಟ ಅತ್ಯವಶ್ಯಕ ಮಾಹಿತಿಗಳನ್ನು ನೀಡಿದರು. ಮಹಿಳೆಯರು ತಮ್ಮ ಕೆಲಸದ ನಡುವೆಯೂ ಆಹಾರದ ಬಗ್ಗೆ ಕಾಳಜಿವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೃದಯದ ಕಾಯಿಲೆಯಂಥ ಗಂಭೀರ ವಿಷಯವನ್ನು ಕೇಳಿ ಭಾರವಾಗಿದ್ದ ಹೃದಯವನ್ನು ಹಗುರಗೊಳಿಸಿದವರು ಶ್ರೀಮತಿ ಇಂದುಮತಿ ಸಾಲಿಮಠ ಅವರು. ದೂರದರ್ಶನದ ಪ್ರಖ್ಯಾತ ಹರಟೆಗಾರರಾದ ಗುಲ್ಬರ್ಗಾದ ಇಂದುಮತಿಯವರು ತಮ್ಮ ಉತ್ತರಕರ್ನಾಟಕದ ಹಾಸ್ಯ ಶೈಲಿಯ ಮಾತುಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.
ಗೋವಾ ಕನ್ನಡ ಸಮಾಜದ ಅಧ್ಯಕ್ಷ ಶ್ರೀ ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶ್ರೀಮತಿ ಅನುರಾಧಾ ಯಾಳಗಿಯವರು ಅತಿಥಿಗಳನ್ನು ಪರಿಚಯಿಸಿದರು. ಸಹಕಾರ್ಯದರ್ಶಿ ಶ್ರೀಮತಿ ಕಲ್ಪನಾ ಚವ್ಹಾಣ ವಂದನಾರ್ಪಣೆಗೈದರು. ಶ್ರೀಮತಿ ರಂಜನಾ ಜೋಶಿ ಹಾಗೂ ಶ್ರೀಮತಿ ಸುಮಾ ರಾವ್ ಅವರು ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ದಿನಾಚರಣೆ

ಶ್ರೀಮತಿ ವಿಕ್ಟೊರಿಯಾ ಫರ್ನಾಂಡಿಸ್ ಮಾತನಾಡುತ್ತಿರುವುದು.


ದೀಪಪ್ರಜ್ವಲಿಸಿ ಉದ್ಘಾಟನೆ



ಶ್ರೀಮತಿ ಇಂದುಮತಿ ಸಾಲಿಮಠ ಅವರಿಂದ ಹಾಸ್ಯದ ಹೊನಲು


Wednesday, March 16, 2011

ಗೋವಾ ಕನ್ನಡ ಸಮಾಜಕ್ಕೆ ಪ್ರಶಸ್ತಿಯ ಗರಿ


ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನವು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕನ್ನಡ ಭಾಷೆ, ಕಲೆ, ಸಾಹಿತ್ಯ ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆಗಳನ್ನು ವಿವಿಧ ರಾಜ್ಯಗಳಲ್ಲಿ ಹರಡಿರುವ ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ ಕೇರಳ, ಕರ್ನಾಟಕ ಹಾಗೂ ಇತರ ರಾಜ್ಯಗಳಿಂದ ಅಷ್ಟೇ ಅಲ್ಲ ಅನಿವಾಸಿ ಭಾರತೀಯ ಕನ್ನಡಿಗರನ್ನು ಆಮಂತ್ರಿಸಿ ಪ್ರೋತ್ಸಾಹಿಸುವುದಕ್ಕಾಗಿ ಹಾಗೂ ಸಂಸ್ಕೃತಿ ವಿನಿಮಯಕ್ಕಾಗಿ ಕಾಸರಗೋಡಿನ ಲಲಿತಕಲಾ ಸದನದಲ್ಲಿ ಜನವರಿ ೨೯ ಹಾಗೂ ೩೦ರಂದು ಕೇರಳರಾಜ್ಯ ೪ನೇ ಕನ್ನಡ ಸಮ್ಮೇಳನ ಹಾಗೂ ಕೇರಳ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಉತ್ಸವವನ್ನು ಹಮ್ಮಿಕೊಂಡಿತ್ತು.
ಈ ಸಂzರ್ಭದಲ್ಲಿ ಪ್ರತಿಷ್ಠಾನವು ತನ್ನ ೨೦ನೆಯ ವರ್ಷದ ಪ್ರತಿಷ್ಠಿತ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ರಾಷ್ಟ್ರೀಯ ಪ್ರಶಸ್ತಿಯನ್ನು ಗೋವಾ ಕನ್ನಡ ಸಮಾಜಕ್ಕೆ ನೀಡಿ ಗೌರವಿಸಿತು. ಸಮಾಜದ ಪರವಾಗಿ ಉಪಾಧ್ಯಕ್ಷೆ ಸೌ.ಅನುರಾಧಾ ಯಾಳಗಿಯವರು ಈ ಪ್ರಶಸ್ತಿಯನ್ನು ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆನಿಯ ಅಧ್ಯಕ್ಷ ಶ್ರೀ ಟಿ.ಎಸ್.ನಾಗಾಭರಣ ಅವರಿಂದ ಸ್ವೀಕರಿಸಿದರು. ವೇದಿಕೆಯಲ್ಲಿ ಪ್ರಸಿದ್ಧ ಚಲನಚಿತ್ರ ವಸ್ತ್ರವಿನ್ಯಾಸಕಿ ಶ್ರೀಮತಿ ನಾಗಾಭರಣ, ಸಾಹಿತಿ ಮೋಹನ ನಾಗಮ್ಮನವರ್, ಚಲನಚಿತ್ರ ನಟಿ ಕಾವ್ಯಶ್ರೀ ಪಂಡಿತ್, ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಶಿವರಾಮ ಕಾಸರಗೋಡು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಉತ್ಸವದ ಅಂಗವಾಗಿ ನಡೆದ ವಿವಿಧ ಸಾಂಸ್ಕ್ರುತಿಕ ಕಾರ್ಯಕ್ರಮಗಳಲ್ಲಿ ಯಕ್ಷಗಾನ ತೊಗಲು ಗೊಂಬೆಯಾಟ, ಡೊಳ್ಳೂ ಕುಣಿತ, ಸಂಭಾಳ ವಾದನ, ಕರಡಿ ಮಜಲು, ದಾಸವಾಣಿ, ಭರತನಾಟ್ಯ, ಕೂಚಿಪುಡಿ ನೃತ್ಯ, ಕರಗ ನೃತ್ಯ, ಮಯೂರಿ ನೃತ್ಯ, ನಾಗನೃತ್ಯ, ಸ್ಯಾಕ್ಸೊಫೊನ್ ವಾದನ, ನಾಟಕ ಮುಂತಾದವು ಮನ ಸೆಳೆದವು. ಹೊರನಾಡು ಹಾಗೂ ಗಡಿನಾಡ ಕನ್ನಡಿಗರ ಸಮಸ್ಯೆಗಳನ್ನು ಕುರಿತು ಚಿಂತನಾಗೋಷ್ಠಿ, ಕವಿಸಮ್ಮೇಳನ, ಪರಂಪರಾಗತ ಯಕ್ಷಗಾನ ಮುಖವರ್ಣಿಕೆಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮೊದಲಾದವು ಸಮಾರಂಭಕ್ಕೆ ಮೆರಗು ನೀಡಿದ್ದವು.
ಗೋವಾ ಕೇಸರಿಗೆ ಪ್ರಶಸ್ತಿ:
ಇದೇ ಸಂದರ್ಬದಲ್ಲಿ ಗೋವಾದ ಪ್ರತಿಷ್ಠಿತ ಕನ್ನಡ ಪಾಕ್ಷಿಕ ಗೋವಾ ಕೇಸರಿ ಪತ್ರಿಕೆಗೂ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪತ್ರಿಕೆಯ ಪರವಾಗಿ ಶ್ರೀ ಅರುನಕುಮಾರ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ವೇದ ಗಣಿತ - ೨

ಏಕಾಧಿಕೇನ ಪೂರ್ವೇಣ
(ಮುಂದುವರಿದ ಭಾಗ)
ಈ ಸೂತ್ರವನ್ನು ಉಪಯೋಗಿಸಿ ಐದರಿಂದ ಕೊನೆಗೊಳ್ಳುವ ಸಂಖ್ಯೆಗಳ ವರ್ಗವನ್ನು ಕಂಡು ಹಿಡಿಯುವ ವಿಧಾನವನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಈ ಸೂತ್ರವನ್ನು ಭಿನ್ನರಾಶಿಗಳಿಗೂ ವಿಸ್ತರಿಸಬಹುದು.
ಉದಾ: 1½ X 1½
ಇಲ್ಲಿ ಪೂರ್ಣಾಂಕ ಸಮಾನವಾಗಿದ್ದು, ಎರಡೂ ಸಂಖ್ಯೆಯ ಭಿನ್ನರಾಶಿ ಭಾಗಗಳನ್ನು ಕೂಡಿಸಿದರೆ ೧ ಆಗುತ್ತದೆ. ಅಂತಹ ಸಂದರ್ಭದಲ್ಲಿ ಈ ಸೂತ್ರವನ್ನು ಉಪಯೋಗಿಸಬಹುದು.

1X(1+1)/(½X½) = (1X2)/ ¼
= 2/¼= 2¼


ವಿವರಣೆ: ಪೂರ್ಣಾಂಕಕ್ಕೆ ಏಕಾಧಿಕೇನ ಪೂರ್ವೇಣ ಸೂತ್ರದ ಪ್ರಕಾರ ೧ ನ್ನು ಕೂಡಿಸಿ ಬಂದ ಉತ್ತರದಿಂದ ಆ ಪೂರ್ಣಾಂಕವನ್ನು ಗುಣಿಸಿ. ಈಗ ಸಿಗುವ ಉತ್ತರ ನಮ್ಮ ಕೊನೆಯ ಉತ್ತರದ ಪೂರ್ವಭಾಗ. ಎರಡೂ ಸಂಖ್ಯೆಗಳ ಭಿನ್ನರಾಶಿಭಾಗಗಳನ್ನು ಗುಣಿಸಿದರೆ ಅಂತಿಮ ಉತ್ತರದ ಕೊನೆಯ ಭಾಗ ಸಿಗುತ್ತದೆ.
ಇನ್ನೊಂದು ಉದಾಹರಣೆ: 6¼X6¾
= [6X(6+1)]/(¼X¾)]
= (6X7)/ 3/16
= 423/16
ನೀವೇ ಪ್ರಯತ್ನಿಸಿ:
5 1/6X 55/6; 3 5/9X 34/9

ಅಂತ್ಯಯೋರ್ದಶಕೇಪಿ:
ಈ ಸೂತ್ರದ ಸಹಾಯದಿಂದ ಹಿಂದಿನ ಸೂತ್ರವನ್ನು ಇನ್ನೂ ಹಿಗ್ಗಿಸಬಹುದು. ಕೊನೆಯ ಅಂಕೆಗಳ ಮೊತ್ತ ೧೦ ಆಗಿರುವಾಗಲೂ... ಎಂಬುದು ಈ ಸೂತ್ರದ ಅರ್ಥ. ಏಕಾಧಿಕೇನ ಪೂರ್ವೇಣ ಸೂತ್ರವನ್ನು ಉಪಯೋಗಿಸಬೇಕು ಎಂಬುದು ಅಧ್ಯಾಹಾರ.
ಉದಾ:23X 27
ಇಲ್ಲಿ ಎರಡೂ ಸಂಖ್ಯೆಗಳಲ್ಲಿ ದಶಕಸ್ಥಾನದ ಅಂಕೆಗಳು ಸಮಾನವಾಗಿವೆ. ಬಿಡಿ ಸ್ಥಾನದ ಅಂಕೆಗಳ ಮೊತ್ತ=೧೦. ಇಂತಹ ಸಂದರ್ಭದಲ್ಲಿ ಏಕಾಧಿಕೇನ ಪೂರ್ವೇಣ ಸೂತ್ರದ ಉಪಯೋಗ ಶಕ್ಯ.

23X 27= [2X(2+1)]/(3X7) = (2X3)/21 = 621
52X58 = [5X(5+1)]/(2X8) = (5X6)/16 = 3016
71X79 = [7X(7+1)]/(1X9) = (7X8)/09 = 5609


ನಿಮ್ಮ ಅಭ್ಯಾಸಕ್ಕಾಗಿ: 34X36, 102X108, 87X83
-ಮಹಾಬಲ ಭಟ್

ಗಂಧರ್ವಲೋಕ ಸೇರಿದ ಗಾನಗಾರುಡಿಗ

ಭಾರತರತ್ನ ಪ್ರಶಸ್ತಿ ಪುರಸ್ಕೃತ ಪಂ.ಭೀಮಸೇನ ಜೋಶಿ ಅವರ ಸಾಧನೆ ಅಪಾರ. ’ಓಡುವ ನದಿ ಸಮುದ್ರ ಸೇರಲೇ ಬೇಕು ’ ಎಂಬಂತೆ ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಹೆತ್ತ ತಾಯಿ, ಜನ್ಮಭೂಮಿ, ಕರ್ಮಭೂಮಿಗಳಿಗಲ್ಲದೆ ಇಡೀ ದೇಶಕ್ಕೆ ಕೀರ್ತಿಯನ್ನು ತಂದ ಹೆಮ್ಮೆಯ ಪುತ್ರ.
’ ವಿದ್ಯೆ ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ’ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ಭೀಮಸೇನ ಜೋಶಿಯವರು. ಹಾರುತ ಹಾರುತ ಬಲುದೂರ ಸಾಗುವ ಗಾಳಿಪಟದಂತೆ ಸತತ ಪರಿಶ್ರಮದಿಂದ ಗಂಧರ್ವಲೋಕವನ್ನು ಮುಟ್ಟಿದ ಸಾಧಕರಿವರು. ಕೇಳುಗರ ಕಿವಿಗಿಂಪಾಗಿ, ಮನಸ್ಸಿಗೆ ತಂಪಾಗಿ ಭಾಸವಾಗುವ ಇವರ ಸಂಗೀತ, ಮುಖದಲ್ಲಿ ಎದ್ದು ಕಾಣುವ ಮುಗ್ಧತೆ ಸರಳತೆಗಳು ಅವರನ್ನು ಆತ್ಮೀಯರನ್ನಾಗಿಸುತ್ತವೆ. ಅವರ ಬಾಯಿಂದ ಬಂದ ಭಜನೆಗಳು, ಅಭಂಗಗಳು, ಖ್ಯಾಲ್‌ಗಳು ಜನರ ಬಾಯಲ್ಲಿ ನಲಿದಾಡುತ್ತಿವೆ. ಸಂಗೀತಕ್ಕೆ ಭಾಷೆಯ ತೊಡರಿಲ್ಲ. ಮರಾಠಿಯಲ್ಲಿ ಅವರು ಹಾಡಿದ ಅಭಂಗಗಳು ಕನ್ನಡಿಗರ ಹೃದಯವನ್ನೂ ಹೊಕ್ಕಿವೆ. ಸಂಗೀತದ ಗಂಧಗಾಳಿಯ ಅರಿವು ಇಲ್ಲದವರೂ ಇವರ ಹಾಡಿನ ಸಾಲುಗಳನ್ನು ಮೆಲುಕು ಹಾಕುವುದು ಸೋಜಿಗ.
ಸೌ. ಶೈಲಜಾ ಕಣವಿ, ಮಡಗಾಂವ್
ದಾಸರ ಪದಗಳಿಗೆ ಜೀವ ತುಂಬಿದ ಹಾಡುಗಾರ ಅವರು. ’ಪರಗತಿಗಿದು ನಿರ್ಧಾರಾ.. ನೋಡೋ’ ಎಂದು ಅವರು ಹಾಡಿದರೆಂದರೆ ಶ್ರೋತೃಗಳು ಪುರಂದರದಾಸರಂತೆ ತಮ್ಮೆಲ್ಲ ಆಸ್ತಿಯನ್ನು ದಾನಮಾಡಿ ದಾಸರಾಗಬೇಕೆಂಬ ಭಾವದಲ್ಲಿ ತೇಲಾಡುತ್ತಿದ್ದರು.
ಇಂತಹ ಮಹಾನ್ ಸಂಗೀತಗಾರ ಗಂಧರ್ವ ನಗರಿಯನ್ನು ಸೇರಿದ್ದಾರೆ. ಅವರ ನಾದಶರೀರ ಮಾತ್ರ ಎಂದಿಗೂ ಅಳಿಯದಷ್ಟು ಗಟ್ಟಿಯಾಗಿದೆ. ಅವರಿಗೊಂದು ಅಶ್ರುತರ್ಪಣ.

ಒತ್ತಕ್ಷರಗಳೇ ಅಂಕೆಗಳು

ಕನ್ನಡ ವರ್ಣಮಾಲೆಯಲ್ಲಿ ಒತ್ತಕ್ಷರಗಳು ಬಲು ವಿಶಿಷ್ಟ. ಅಕ್ಷರದಿಂದ ಶಬ್ದವಾಗಿ ಶಬ್ದದಿಂದ ನುಡಿಯಾಗಿ, ನುಡಿಯೊಳು ಕಾಣುವ ಒತ್ತಾಸೆಯ ಒತ್ತಕ್ಷರಗಳು ಮುತ್ತಿನಂಥ ಅಂಕೆಗಳೂ ಹೌದು. ಇನ್ನ್ಯಾವ ಭಾಷೆಯ ಅಂಕೆಗೂ ಸಿಗದ ಹಿರಿಮೆ ಕನ್ನಡದ ಒತ್ತಕ್ಷರಗಳಿಗಿವೆ. ಇದು ನಮ್ಮೆಲ್ಲರಿಗೂ ಹರ್ಷದ, ಹೆಮ್ಮೆಯ, ಗೆಲ್ಮೆಯ ವಿಚಾರ.
ಹಾಗಾದರೆ ಏನೀ ಅಂಥ ವೈಶಿಷ್ಟ್ಯ? ಗಮನಿಸಿದ್ದೀರಾ? ೫ ಹಾಗೂ ೭ ನ್ನು ಬಿಟ್ಟು ಉಳಿದೆಲ್ಲ ಅಂಕೆಗಳೂ ಒತ್ತಕ್ಷರಗಳಾಗಿ ವರ್ಣಮಾಲೆಯಲ್ಲಿ ಬಳಕೆಯಲ್ಲಿವೆ. ಈ ಕೆಳಗಿನ ಪಟ್ಟಿ ನೋಡಿ. ನಿಮಗೇ ಅರ್ಥವಾಗುತ್ತೆ.
ಅಕ್ಷರ ಒತ್ತಕ್ಷರ ಅಂಕೆ ಉದಾಹರಣೆ
ಗ ೧ ೧ (೧) ಕಗ್ಗ, ಮೊಗ್ಗು
ತ ೨ ೨ (೨) ಮುತ್ತು, ಅತ್ತೆ, ಮುಕ್ತಾ
ನ ೩ ೩ (೩) ಅನ್ನ, ರನ್ನ, ಪ್ರಶ್ನೆ
ಳ ೪ ೪ (೪) ಕಳ್ಳ, ಮುಳ್ಳು, ಕುಂಬ್ಳೆ
ಮ ೬ ೬ (೬) ಅಮ್ಮ, ಗುಮ್ಮ, ಕಲ್ಮೇಶ
ಐ ೮ ೮ (೮) ಕೈ, ಮೈಸೂರು, ಸೈ
ರ್ ೯ ೯ (೯) ಕರ್ನಾಟಕ, ಮರ್ಮ
ಙ,ಞ,ಣ,ನ,ಮ ೦ ೦ (೦) ಬಂಗಾರ, ಚಂಚು, ಕಂಠ, ಅಂತರ, ಪಂಪ
ವಿಚಿತ್ರ ಅಲ್ಲವೆ?
-ವೆಂಕಟೇಶ್ ಕುಲಕರ್ಣಿ

ಕನ್ನಡಮ್ಮನ ವರ್ಣಮಾಲೆ

ಕನ್ನಡಮ್ಮನ ವರ್ಣಮಾಲೆ
ಅಕ್ಷರದಿ ಗಾರುಡಿ ಲೀಲೆ
ನವ್ಯ ತರಂಗಿಣಿಯ ಸೆಲೆ
ಇದು ಕವಿ ಕಲಿಕಬ್ಬಿಗರ ನೆಲೆ
ಸದಾ ಉರುಳದೇ ಅರಳಿರಲಿ ನಾಳೆ

ಮೊಗ್ಗೊಂದು ಹೂವಾಗಿ
ಹೂವೆರದು ಮುತ್ತಾಗಿ
ಚಿನ್ನ ಕನ್ನಡವು ಮೂರು ಲೋಕದಿ
ಬೆಳಗಲಿ ಬೆಳ್ಳಿ ದೀಪವಾಗಿ

ನಾಕು ವೇದಗಳ ಸಾರ ಹೀರಿ
ಆರು ಋತುಗಳಲಿಯೂ ನಮ್ಮ ಭಾಷೆ
ಪಸರಿಸುತಿರಲಿ ಐಸಿರಿಯು ಎಂಟು ದಿಸೆ
ನವ ಭಾವ ರಸಗಳ ಕರ್ನಾಟಕ ನಾಡು
ದಶ ಶತಕ ಇತಿಹಾಸದಿ ಗುಣಗಾನಿಪ
ಬಂಗಾರದ ಬೀಡು.
-ವೆಂಕಟೇಶ ಕುಲಕರ್ಣಿ

ಜನನುಡಿಗೆ ಶುಭ ಹಾರೈಕೆ

ಗೋವೆಯಲಿ ಕಟ್ಟಿದರು ಕನ್ನಡಿಗರೊಂದು ಗುಡಿ
ಊದಿದರು ಕೊಂಬು ಕಹಳೆ, ಬಾರಿಸಿದರು ದುಡಿ
ಹೊರಡಿಸಿದರು ಹೊನ್ನ ಹೊತ್ತಿಗೆ "ಗೋವಾ ಜನನುಡಿ"
ಹೊರನಾಡಿನಲೂ ಸವಿಯಿರಿ ಕನ್ನಡಿಗರೆ ಈ ಜೇನ್ನುಡಿ
-ನಾ ಹರಿಶ್ಚಂದ್ರ


ತನು ಮನವ ದಣಿಸಿ
ಧನಮದವ ದಹಿಸಿ
ನೀಡಿದೆ ಮರುಜನ್ಮ ದರ್ಪಣಕೆ
ಜ್ಞಾನ ಸಾಗರನ್ನೆ ಹರಿಸಿದೆ
ಪ್ರೀತಿ ವಾತ್ಸಲ್ಯದಿ ಮಿಂದು
ನಾನೆಂತು ನೀಡಲಿ ನಿನಗೆ?

ಗಾತ್ರದಿ ಅಜವು
ಖ್ಯಾತಿಗೆ ಗಜವ
ಚಾಣಕ್ಯ ಛಲ ಹೊತ್ತು
ಜನಕೆ ಸ್ಪಂದನೆಯ ಪಣ ತೊಟ್ಟು
ದಾಪುಗಾಲಿಕ್ಕಿ ನಿಂದೆ
ಎಸೆವ ಹೊಸ್ತಿಲಲಿ ಈ ಎರಡು ವತ್ಸರದಿ

ಚಿಂತನೆಯ ನಡೆಸು ಚಿಂತಿಸಲು ಬೇಡ
ನಲಿವ ನೈದಿಲೆಯ ಮೇಲೆ
ನಡೆವ ಬಾಳು
ನಿನಗಾಗಿ ಕಾದಿದೆ
ಅದಕೆಂದೆ ನಾವಿಂದು ಕೋರುವೆವು
ಸಾವಿರ ಸಾವಿರ ಶುಭಾಶಯ
-ಅಖಿಲಾ ಕುರಂದವಾದ

ಮನೋಗತ

ನಮ್ಮ ನಿಮ್ಮೆಲ್ಲರ ನೆಚ್ಚಿನ ಗೋವಾ ಜನನುಡಿ ಎರಡು ವತ್ಸರಗಳನ್ನು ದಾಟಿ ಮೂರನೆಯ ವರ್ಷಕ್ಕೆ ದಾಪುಗಾಲಿಟ್ಟಿದೆ. ಎರಡನೆಯ ವರ್ಷ ಅನೇಕ ಏಳು ಬೀಳುಗಳನ್ನು ಕಂಡ ಪತ್ರಿಕೆ ಮುಂದೆ ಸಾಗುತ್ತಿರುವುದಂತೂ ನಿಜ. ಒಂದೆರಡು ಸಂಚಿಕೆಗಳು ಸಕಾಲದಲ್ಲಿ ಪ್ರಕಟವಾಗಿಲ್ಲ ಎಂಬುದನ್ನು ಬಿಟ್ಟರೆ ಹೊರಬಂದ ಸಂಚಿಕೆಗಳೆಲ್ಲ ಅರ್ಥಪೂರ್ಣವಾಗಿದ್ದು ನಿಮ್ಮ ಮೆಚ್ಚುಗೆಗೆ ಪಾತ್ರವಾಗಿದೆ ಎಂಬ ಸಮಾಧಾನವಿದೆ.
ಹಿಂದಿನ ವರ್ಷ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಂಗೀತದ ವಿಷಯದಲ್ಲಿ ವಿಶೇಷ ಸಂಚಿಕೆಯೊಂದನ್ನು ಹೊರತಂದಿದ್ದೆವು. ಈ ವರ್ಷ ಬರುವಷ್ಟರಲ್ಲಿ ನಮ್ಮ ನಾಡಿನ ಹೆಮ್ಮೆಯ ಗಾಯಕ ಭಾರತರತ್ನ ಭೀಮಸೇನ ಜೋಷಿ ಗಂಧರ್ವಲೋಕ ಸೇರಿದ್ದಾರೆ. ಅವರಿಗೆ ಗೋವಾ ಜನನುಡಿಯ ಅಶ್ರುತರ್ಪಣ.
ಈ ವರ್ಷ ಗೋವಾದಲ್ಲಿ ನೆಲೆಸಿರುವ ಕನ್ನಡ ಕವಿಗಳ ಕವನ ಸಂಕಲನವೊಂದನ್ನು ಹೊರತರಬೇಕೆಂದು ಕಾರ್ಯಪ್ರವೃತ್ತರಾಗಿದ್ದೇವೆ. ಅದಕ್ಕೆ ಸಾಕಷ್ಟು ಸಮಯ ಬೇಕಾಗಿರುವುದರಿಂದ ವಾರ್ಷಿಕೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ.
ಈ ಸಂಚಿಕೆಯೂ ಎರಡು ಸಂಚಿಕೆಗಳ ಗುಚ್ಛ. ಮುಂದಿನ ಮಾರ್ಚ್ ತಿಂಗಳ ಸಂಚಿಕೆಯು ಮಹಿಳಾ ವಿಶೇಷಾಂಕವಾಗಿ ಹೊರಬರಲಿದೆ.
ಗೋವಾ ರಾಜ್ಯ ವಸ್ತು ಸಂಗ್ರಹಾಲಯದಲ್ಲಿ ನಡೆದ ಗೋವಾ ಜನನುಡಿಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ಎಲ್ಲ ಅಭಿಮಾನಿಗಳಿಗೂ ನಾವು ಕೃತಜ್ಞರು. ನಿಮ್ಮ ಸಹಕಾರ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇವೆ.

Monday, February 28, 2011

ಗೋವಾ ಜನನುಡಿ ದ್ವಿತೀಯ ವಾರ್ಷಿಕೋತ್ಸವದ ಚಿತ್ರಗಳು

ಒಂದು ಸ್ವರದ ಸಾವು ನಾಟಕದ ಒಂದು ದೃಶ್ಯ


ಒಂದು ಸ್ವರದ ಸಾವು ನಾಟಕದ ಒಂದು ದೃಶ್ಯ


ಮುಖ್ಯ ಅತಿಥಿ - ಶ್ರೀ ಶಿವಶಂಕರ ಭಾವಿಕಟ್ಟಿ



ಪ್ರೇಕ್ಷಕ ವರ್ಗ


Saturday, January 22, 2011

ಅಗಣಿತ ನೆನಪಿನ ಗಣಿತಶಾಸ್ತ್ರ

ನಿನ್ನ ನೆನಪುಗಳೆಲ್ಲ ಗಣಿತ ಶಾಸ್ತ್ರದ ತಿರುವುಗಳಂತೆ ಗೆಳೆಯಾ..
ಹಗಲಲ್ಲಿ ಸರಳ, ರಾತ್ರಿಯಿಡೀ ವಕ್ರ ರೇಖೆಯ ಠರಾವು
ಮುಗ್ಧತೆಯ ಚೌಕದಲಿ ನಗೆಯ ಚಿಮ್ಮಿದಾಗ
ಮಿಡಿವ ಎದೆ ವೃತ್ತದಲಿ ಸಂತಸದ ಗುಣಾಕಾರ
ಇಲ್ಲಸಲ್ಲದ ಯೋಚನೆಗಳ ನಡುವೆ ನಿಲ್ಲದ ಯೋಜನೆಗಳ
ಸಮಾನಾಂತರ ರೇಖೆಗಳ ಓಲಾಟ
ಕಳೆದ ಸಮೆಯದ ಲೆಕ್ಕ ಮರಳಿ ಬಾರದ ಉತ್ತರಗಳ
ನೆನೆನೆನೆದು ತೊಳಲಾಡುವಾಗ
ಕನಸುಗಳ ಭಾಗಾಕಾರ
ನೋವುಗಳ ಕಳೆವ ಆಸೆಗಳ ಕೂಡುವ
ಅಂಕಿ ಅಂಶಗಳ ಗುದ್ದಾಟದಲಿ
ಚಿತ್ತದ ಭಿತ್ತಿಯಲಿ ಅಸಂಖ್ಯಾತ ಚುಕ್ಕೆಗಳ ಭಿನ್ನರಾಶಿ
ಭಾವಗಳ ಕರಿಮುಗಿಲು ಹೊದಿಸಿ ಚಾದರ
ಕನಸು ಚದುರಿ ಭ್ರಮೆಯು ಕರಗಿ
ಎಲ್ಲವೂ ಎಲ್ಲದರಲಿ ಒಂದಾಗುತ್ತ
ಕೊನೆಗುಳಿದ್ದಿದ್ದು ನಿರ್ಲಿಪ್ತ ಶೂನ್ಯ ಮಾತ್ರ!

ಸ್ನೇಹಾ ಭಾರ್ಗವ್

ಅಜ್ಜಿಯ ನಗು

ಓ ನವ ನಾಗರಿಕರೇ,
ಧsನದಾಯಿ ದರಿದ್ರರೇ
ಗೊತ್ತೇ ನಿಮಗೆ
ಈ ನಗುವಿನ ಬೆಲೆ-ಎಂದು
ಅಣಕಿಸುತ್ತಿರುವೆಯಾ ಅಜ್ಜಿ ||

ಶ್ರಮಿಕಳಾದರೂ ಬಡವಿ ನೀನು |
ಹೃದಯ ಶ್ರೀಮಂತಿಕೆಯ ಕಡಲು ನೀನು|
ನಗದ ಗುಮ್ಮರಿಗೆ ಪಾಠ ನೀನು |
ನಗುವೆಂಬ ಆಭರಣ ತೊಟ್ಟ
ವೈರಾಗ್ಯಮೂರ್ತಿ ನೀನು||

ಪ್ರೀತಿ-ಪ್ರೇಮ ಮರೆತೋಯ್ತು |
ಯಾಂತ್ರಿಕತೆ ಬದುಕಾಯ್ತು |
ನಗುವ ಪ್ರಮೇಯ ಇಲ್ಲವಾಯ್ತು |
ಆತ್ಮ ವಿಮರ್ಶೆ ಮಾಡಿಕೊಂಡರೆ
ನಕ್ಕಿದ್ದು ಶೂನ್ಯವೆಂದು ಗೊತ್ತಾಯ್ತು ||

ಅಜ್ಜಿ ಓ ಅಜ್ಜಿ
ದಯವಿಟ್ಟು ನಿಲ್ಲಿಸು ನಗುವುದನ್ನು |
ಅಸೂಯೆಯಾಗುತಿದೆ ನಮಗೆ ನೋಡಿ
ನಿನ್ನ ವಿಶಾಲ ಹೃದಯವನ್ನು
ಇನ್ನು ಮುಂದಾದರೂ ಕಲಿಯುತ್ತೇವೆ
ಹೃದಯ ತುಂಬಿ ಅಲ್ಲದಿದ್ದರೂ
ಬಾಯಿತುಂಬ ನಗುವುದನ್ನು ||

ಬುದ್ದೆಪ್ಪ

ಬೇಡುವ ಮಕ್ಕಳು

ಬೇಡುವ ಮಕ್ಕಳ
ಬವಣೆಯ ಚಿತ್ರವಿದು
ಬದುಕುವೆಯಾ ನೀನು
ಬೀದಿಬೀದಿ ತಿರುಗಿ.
ಹೊನ್ನ ಹೂವಿನಂತ
ಎಸಳು ಕೈಗೆ
ನಿನ್ನ ಜೀವದ ಪಾತ್ರೆ
ತುಂಬುವ ಶಕ್ತಿ
ಇದೆಯೆಂದರೆ
ನಂಬಬಲ್ಲುದೇ
ಈ ಜಗದ ವಿಧಿ.
ಆಳೆತ್ತರ ಮೈ ಚಾಚಿ ಸಾಗುವ
ಆ ನಿರ್ಜೀವ ಚಕ್ರಗಳಂತೆ
ನಿನ್ನ ಬದುಕು ನಿನ್ನಗಾಲಿಯ
ಬಿಸಿಲು ನೆರಳಿನ ನಡುವೆ
ಸಾಗುವುದೇ?
ಬಿಸಿಲು ನೆಳಲುಗಳು
ವೃಕ್ಷವಿಲ್ಲದ ಹಸಿರು
ಎದೆಯೊಳಗಿನ ನಿಟ್ಟುಸಿರು

ಪ್ರಿಯಾ ಎಂ. ಭಟ್
ಬರಡು ಬಾಳಿನ ಕೆಸರು
ನಿನಗದುವೇ
ಜೀವಶಕ್ತಿ ನೀರು.
ಬಚುಕಿದರೆ ಮಾನವ
ನಿನ್ನಂತೆ ಧರೆಯಲ್ಲಿ
ಶ್ರಮಜೀವಿಗೆ ಅರೆಹೊಟ್ಟೆ
ಇದು ನಮ್ಮ
ಕರ್ಮ.

ಕಥೆ-ಅಸಹಜ

ನಾನು ತುಂಬಾ ಒಳ್ಳೆಯ ಮನುಷ್ಯ.. ಹಾಗಂತ ಎಲ್ಲರೂ ಹೇಳುತ್ತಾರೆ.. ಅದನ್ನು ಕೇಳಲಿಕ್ಕೆ ಬಹಳ ಖುಷಿಯಂತೂ ಹೌದು..... ಹೆಮ್ಮೆಯೂ ಆಗುತ್ತದೆ...
ಆದರೆ ...
ಆತ್ಮಸಾಕ್ಷಿಯಾಗಿ ನಿಜ ಹೇಳುತ್ತೇನೆ...
ಒಳ್ಳೆಯವನಾಗಿರುವುದು ಒಂಥರಾ ಹಿಂಸೆ ಕಣ್ರೀ... ಕೆಲವು ಸಂದರ್ಭ ಯಾಕಾದ್ರೂ ಒಳ್ಳೆಯವನಾದೆ ಅನ್ನಿಸಿ ಬಿಡುತ್ತದೆ..
ಕೆಲವರು ಹಾಗಿರುವದಿಲ್ಲ ನೋಡಿ...
ಬೇರೆಯವರೆಲ್ಲ ಯಾಕೆ ? ನನ್ನ ಪರಮಾಪ್ತ ಗೆಳೆಯನನ್ನೇ ತೆಗೆದು ಕೊಳ್ಳಿ.. ಜೀವನದ ಪ್ರತಿ ಕ್ಷಣವನ್ನೂ ಸಂತೋಷದಿಂದ ಕಳೆಯುತ್ತಿದ್ದಾನೆ..
ಬಹಳ ಹೆಣ್ಣುಮಕ್ಕಳ ಗೆಳೆತನ ಅವನಿಗಿದೆ...
ಅದು ಕೇವಲ ಗೆಳೆತನ ಅಲ್ಲ ಅಂತ ಎಲ್ಲರಿಗೂ ಗೊತ್ತು...
ಕಾಲೇಜಿನಲ್ಲಿ ಪ್ರತಿವರ್ಷ ಒಂದೊಂದು ಹೆಣ್ಣುಮಕ್ಕಳ ಜೊತೆ ಓಡಾಡಿದ.. ಪ್ರೀತಿ, ಪ್ರೇಮ ಅಂತೆಲ್ಲ ಹೇಳಿಕೊಂಡ... ತಾನು ಮದುವೆಯಾಗುವ ಹೆಣ್ಣನ್ನು ನನ್ನಿಂದ ಸಿಲೆಕ್ಟ್ ಮಾಡಿಸಿದ..!
ಆತ ನನ್ನ ಬಳಿ ಹೇಳಿದ್ದು ಇಷ್ಟೆ...
"ನೋಡೊ... ಬದುಕಿನ ಬಗೆಗೆ ಬಹಳ ತಲೆ ಕೆಡಿಸಿಕೊಂಡವನು ನೀನು...ನನ್ನ ಬದುಕಿನ ಬಗೆಗೆ ನನಗಿಂತ ನಿನಗೆ ಹೆಚ್ಚಿನ ಕಾಳಜಿ ಇದೆ.. ನನ್ನ ಸ್ವಭಾವ ಎಲ್ಲದೂ ನಿನಗೆ ಗೊತ್ತು... ನಾನು ಮದುವೆಯಾಗುವ ಹುಡುಗಿಯನ್ನು ನೀನೇ ನಿರ್ಧರಿಸು... ನಾನು ಕಣ್ಮುಚ್ಚಿ ತಾಳಿ ಕಟ್ಟುತ್ತೇನೆ..."
ನನ್ನ ಗೆಳೆಯನ ಹೆಂಡತಿಯನ್ನು ನಾನೇ ಹುಡುಕಿ ನಿಶ್ಚಯ ಮಾಡಿಕೊಟ್ಟೆ... ಅವನ ಮನೆಯವರು ನೋಡಿ "ಸಂಬಂಧ" ಚೆನ್ನಾಗಿದೆ ಅಂತ ನಿರ್ಣಯಿಸಿದ್ದರು..
ನಾನು ಹೋಗಿ.. ಹುಡುಗಿ ನೋಡಿ... ನನ್ನ ಗೆಳೆಯನಿಗೆ " ಯೋಗ್ಯವಾದ " ಹುಡುಗಿ ಅಂತ ಒಪ್ಪಿಗೆ ಕೊಟ್ಟು ಬಂದಿದ್ದೆ...
ಆತ ಕಣ್ಮುಚ್ಚಿ ತಾಳಿಕಟ್ಟಲಿಲ್ಲ..!
ಮದುವೆಗೆ ಮೊದಲು ಅವಳ ಸಂಗಡನೂ.. ಸಿನೇಮಾ.... ಪಾರ್ಕು.. ಲಾಜ್ ಅಂತೆಲ್ಲ ಓಡಾಡಿದ..!
ವಿಷಯ ಏನು ಗೊತ್ತಾ..?
ಮದುವೆಯಾಗಿ ನಾಲ್ಕೈದು ತಿಂಗಳಾಗಿದೆ... ಇದೀಗ ತಾನೆ ಅವನನ್ನು ಏರ್ ಪೋರ್ಟ್ ಗೆ ಬಿಟ್ಟು ಬರುತ್ತಿದ್ದೇನೆ...ನನ್ನ ಜೊತೆ ಅವನ ಮಡದಿಯೂ ಇದ್ದಾಳೆ..
ಅವನು ತುರ್ತಾದ ಕೆಲಸದ ಮೇಲೆ ಜಪಾನ್ ದೇಶಕ್ಕೆ ಹೋಗುವ ಸಂದರ್ಭ ಬಂತು..
"ನೋಡೊ... ನನಗೇನೂ ಚಿಂತೆಯಿಲ್ಲ...
ಒಂದುವಾರ ಅಷ್ಟೆ ವಾಪಸ್ಸು ಬಂದು ಬಿಡ್ತೇನೆ...
ನೀನಿರ್ತಿಯಲ್ಲ.. ಅವಳಿಗೆ ಧೈರ್ಯ ಹೇಳು..."
ನಾನು ಒಳ್ಳೆಯವನಲ್ಲವೇ.. ಇಂಥಹ ಸಂದರ್ಭಗಳನ್ನು ನಿಭಾಯಿಸಲು ಖುಷಿಯಾಗುತ್ತದೆ.. ಒಳ್ಳೇ ತನದ ಬದುಕು ಸಾರ್ಥಕ ಅನ್ನಿಸುವಂಥಹ ಸಂದರ್ಭಗಳು...
ನಾನು ಕಾರ್ ಡ್ರೈವ್ ಮಾಡುತ್ತಿದ್ದೇನೆ...
ಅವಳನ್ನೊಮ್ಮೆ ಗಮನಿಸಿದೆ...
ಮನದಲ್ಲಿ ಕೆಟ್ಟ ಯೋಚನೆ ಬರುತ್ತಿದೆಯಾ...? ಒಂಟಿ ಹೆಣ್ಣು...! ಯಾರೂ ಇಲ್ಲದ ಸಂದರ್ಭ..!
ಇದು ಕೆಟ್ಟದ್ದು ಅನ್ನಿಸಿದರೂ... ಬೇಡ ಅನ್ನಿಸಿದ್ದರೂ...ಹಿತವಾಗಿತ್ತು....
ತುಂಬಾ ಚೆಲುವೆ...!
ಕಣ್ಣು... ಮೂಗು..!.
ಕೆನ್ನೆಯ ಮೇಲೆ ಆಗಾಗ ಇಳಿದು ಬರುವ ಕೂದಲು...! ಹರವಾದ.... ಬಿಳುಪಾದ... ನುಣುಪಾದ ಗಲ್ಲ......!
ವಾಹ್ !!.....
ಛೇ..!! ಹೀಗೆಲ್ಲ ನೋಡ ಬಾರದು.. ವಿಚಾರವನ್ನೂ ಮಾಡಬಾರದು...
"ನಿಮ್ಮ ಗೆಳೆಯ ಕಾಲೇಜುದಿನಗಳಲ್ಲಿ ಹೇಗಿದ್ದ...?’
ಆಕೆ ನನ್ನ ನೋಟವನ್ನೇ ಗಮನಿಸುತ್ತ ಕೇಳಿದಳು...
" ನನ್ನ ಗೆಳೆಯ ತುಂಬಾ ತುಂಟನಾಗಿದ್ದ.. ಯಾವಾಗಲೂ ಗೆಳೆಯರ ಗುಂಪು ಅವನ ಹಿಂದೆ ಇರ್ತಿತ್ತು...."
".. ಹೆಣ್ಣುಮಕ್ಕಳು...?..? "
ಬಹಳ ತೀಕ್ಷ್ಣವಾಗಿತ್ತು ಅವಳ ಪ್ರಶ್ನೆ...
ನಾನು ತಡವರಿಸಿದೆ...
"ನನಗೆ ಗೊತ್ತು... ನನ್ನವರು ಹೆಣ್ಣುಮಕ್ಕಳ ಸಂಗಡ ಓಡಾಡುತ್ತಿದ್ದರು... ಅವರೇ..ನನ್ನ ಬಳಿ ಹೇಳಿಕೊಂಡಿದ್ದಾರೆ..."
"ಹೌದಾ...? !!..
ಅಪಾರ್ಥ ಮಾಡಿಕೊಳ್ಳ ಬೇಡಿ... ಆತನದು ಬರಿ.. ಸ್ನೇಹ ಅಷ್ಟೆ.. ಪ್ರೀತಿ.., ಪ್ರೇಮ ಏನೂ ಇಲ್ಲವಾಗಿತ್ತು...."
"ಆ ವಯಸ್ಸಿನ ಪ್ರೀತಿ, ಪ್ರೇಮಗಳ ಅರ್ಥ ನನಗೆ ಚೆನ್ನಾಗಿ ಗೊತ್ತು..."
ನಾನು ತಲೆ ಕೆರೆದು ಕೊಂಡೆ...
ಈ ಮಾತನ್ನು ಎಲ್ಲಿಯವರೆಗೆ ಅರ್ಥ ಮಾಡಿಕೊಳ್ಳ ಬಹುದು ಅಂತ ...
ಹೆಣ್ಣು ಮಕ್ಕಳನ್ನು ಅರ್ಥ ಮಾಡಿಕೊಳ್ಳುವದೇ.. ಕಷ್ಟ...
ಗೆಳೆಯನಿದ್ದಾಗ ಅವಳು ಈ ಥರಹದ ಮಾತುಗಳನ್ನು ಯಾವತ್ತೂ ಆಡಿಯೇ ಇಲ್ಲ... ಮಾತು ಬಹಳ ಕಡಿಮೆ...
ಒಂದು ಮುಗಳ್ನಗು.. ಚಂದದ ನೋಟದಲ್ಲಿ ಮಾತು ಮುಗಿಸಿ ಬಿಡುತ್ತಿದ್ದಳು...
" ಹೋಗ್ಲಿ ಬಿಡಿ... ಆಗ ಅಂಥಾದ್ದೇನೂ ನಡೆದಿಲ್ಲ..
ಈಗ ಚೆನ್ನಾಗಿದ್ದಾನಲ್ಲ... ನಿಮ್ಮಿಬ್ಬರ ಪ್ರೀತಿ, ಪ್ರೇಮನೋಡಿ ಖುಷಿಯಾಗುತ್ತದೆ..."
" ಥ್ಯಾಂಕ್ಯೂ...... ನೀವು ಯಾಕೆ ಮದುವೆಯಾಗಿಲ್ಲ...?"
" ನಾನು ಬಯಸುವಂಥಹ ಹುಡುಗಿ ಸಿಕ್ಕಿಲ್ಲ..."
"ಅಥವಾ... ನೀವು ಬಯಸಿದ ಹುಡುಗಿ ನಿಮ್ಮನ್ನು ಬಯಸಲಿಲ್ಲ..... ಅಲ್ಲವಾ?"
"ಓಹ್...! ನನ್ನ ಗೆಳೆಯ ಅದನ್ನೂ ನಿಮಗೆ ಹೇಳಿಬಿಟ್ಟಿದ್ದಾನೋ...ಹೋಗ್ಲಿ ಬಿಡಿ..ಅದೆಲ್ಲ ಈಗ ಯಾಕೆ..?"
"ನೀವು ಗಂಡಸರು ....ನಿಮ್ಮ ಆಸೆ.. ಬಯಕೆಗಳ ಬಗೆಗಷ್ಟೇ ವಿಚಾರ ಯಾಕೆ ಮಾಡುತ್ತೀರಿ...? ಪ್ರತಿ ಹೆಣ್ಣಿಗೂ ಬೇಕು ಬೇಡಗಳಿರುತ್ತವೆ. ಅದರ ಬಗೆಗೆ ಯಾಕೆ ವಿಚಾರ ಮಾಡೋದಿಲ್ಲ...?
ನನಗೆ ಆಶ್ಚರ್ಯವಾಯಿತು...
"ಯಾಕೆ...? ನಿಮಗೆ ಏನಾದರೂ... ಬೇರೆ ಬೇಕು ಬೇಡಗಳಿದ್ದವೆ..? "
" ಇದ್ದವೋ... ಇಲ್ಲವೋ...ಈಗ ಹೇಳಿ ಏನು ಪ್ರಯೋಜನ...? ಒಂದು ನೆಲೆ... ಒಂದು ಬದುಕು ಸಿಕ್ಕಿದೆ... ಬಾಳ ಬೇಕಲ್ಲ... ಇಲ್ಲಿಯೇ.. ಖುಷಿ ಕಾಣ ಬೇಕಲ್ಲ..."
ಅಂದರೆ... .. ಇವಳಿಗೆ ಮನಸ್ಸಿಲ್ಲದ ಮದುವೆಯಾ?
ಅಷ್ಟರಲ್ಲಿ ಮನೆ ಬಂತು...
ನಾನು ಅವಳನ್ನು ಬಿಟ್ಟು ಕೊಡಲು ಹಾಲ್ ತನಕ ಬಂದೆ...
"ನೋಡಿ... ಹೇಗಿದ್ದರೂ.. ಪಕ್ಕದ ಮನೆಯಲ್ಲೇ ಇರ್ತಿನಲ್ಲ...ಏನಾದರೂ ಬೇಕಿದ್ದಲ್ಲಿ ಫೋನ್ ಮಾಡಿ... ತಕ್ಷಣ ಬಂದುಬಿಡುತ್ತೇನೆ..."
"ಊಟ ಮಾಡಿ ಹೋಗಿ... ಬೇಗನೇ.. ಊಟಕ್ಕೆ ತಯಾರು ಮಾಡುತ್ತೇನೆ...ಒಬ್ಬಳೆ ಊಟ ಮಾಡುವದು ಬಲು ಬೋರು...
ನನಗೂ ಸರಿಯೆನ್ನಿಸಿತು....

ಹಾಲಿನಲ್ಲಿ ಕುಳಿತೆ... ಆಕೆ ಟಿವಿ ಆನ್ ಮಾಡಿ ರಿಮೋಟ್ ಕೊಟ್ಟಳು...
ಕಣ್ಣು ಟಿವಿ ನೋಡುತ್ತಿದ್ದರೂ ಮನ ಎಲ್ಲೋ ಓಡಾಡುತ್ತಿತ್ತು...ಮನದಲ್ಲಿ ಕೆಟ್ಟ ಆಲೋಚನೆಗಳು...
ಹೇಳಲಾಗದ ದ್ವಂದ್ವಗಳು...
ಈ ಕೆಟ್ಟ ಮನಸ್ಸು,, ಆಲೋಚನೆಗಳು.. ಖುಷಿ ಕೊಡುವದಂತೂ ನಿಜ...
ಆಕೆ ಲಗುಬಗೆಯಿಂದ ಅಡುಗೆ ರೆಡಿ ಮಾಡಿ ಊಟಕ್ಕೆ ಕರೆದಳು...
ಅವಳು ಸೀರೆ ಉಟ್ಟ ರೀತಿ.... ಇಷ್ಟವಾಗ ತೊಡಗಿತು.....
ನಾನು ಡೈನಿಂಗ್ ಟೇಬಲ್ ಮುಂದೆ ಕುಳಿತೆ...

ಇಂಥಹ ಸಂದರ್ಭ ಮತ್ತೆ ಸಿಗಲಿಕ್ಕಿಲ್ಲ...
ಮನದಲ್ಲಿ ಏನೇನೋ ಯೋಚನೆಗಳು...
ಹೊಸ ಅನುಭವಕ್ಕಾಗಿ ಸಂದರ್ಭವೇ ನನ್ನನ್ನು ಹುಡುಕಿ ಬಂದಂತಿತ್ತು...
" ನಿಮ್ಮನ್ನು ಬಹಳ ದಿನಗಳಿಂದ ಒಂದು ಪ್ರಶ್ನೆ ಕೇಳಬೇಕಿತ್ತು..."
ನನ್ನ ಹೃದಯ ಬಡಿತ ಜೋರಾಯಿತು..
" ಕೇಳಿ... "
"ನೀವು ... ನಿಮ್ಮ ಗೆಳೆಯನಿಗಾಗಿ ಹೆಣ್ಣು ನೋಡಲು ಯಾಕೆ ಬಂದದ್ದು...? ಗೆಳೆಯನಿಗೆ ಬರಲಿಕ್ಕೆ ಏನಾಗಿತ್ತು...?"
"ಸ್ನೇಹ... ಪ್ರೀತಿ...ನಮ್ಮಿಬ್ಬರ ಗೆಳೆತನ.. ಇಬ್ಬರಿಗೂ ಒಬ್ಬರಿಗೊಬ್ಬರ ಋಣದ ಬದುಕು.. ನಂಬಿಕೆ... ವಿಶ್ವಾಸ.. ನಮ್ಮ ಗೆಳೆತನವೇ ಹಾಗಿದೆ.."
ಈ ಮಾತುಗಳನ್ನು ಹೇಳಲು ಬಲು ಕಷ್ಟವಾಯಿತು...
ಈ ಸಂದರ್ಭಕ್ಕೆ ಬೇಡ ಎನಿಸುತ್ತಿದ್ದರೂ ನಾಲಿಗೆ ಗೊತ್ತಿಲ್ಲದಂತೆ ಮಾತು ಆಡುತ್ತಿತ್ತು...
"ಇದು ಒಂದು ಥರಹದ ಮೋಸವಲ್ಲವೆ...? "ತಂಗಿಯನ್ನು ತೋರಿಸಿ ಅಕ್ಕನನ್ನು ಮದುವೆ ಮಾಡಿದರು" ಅನ್ನುವ ಗಾದೆಯ ಹಾಗಾಯ್ತು ಅಲ್ಲವೆ?"
ನಾನು ಅವಕ್ಕಾದೆ...!! ಏನಿದರ ಅರ್ಥ..!!.. ??...
"ನಾನು ಮೊದಲೇ ಹೇಳಿ ಬಂದಿದ್ದೆನಲ್ಲ...
ಮದುವೆ ನನಗಲ್ಲ... ನನ್ನ ಗೆಳೆಯನಿಗೆ ಅಂತ..."
" ನೋಡಿ... ನಾನು ಮೊದಲಿನಿಂದಲೂ ಸ್ವಲ್ಪ ಮಾತಲ್ಲಿ ಜೋರು.. ಮದುವೆಯಾದ ಮೇಲೆ ಸ್ವಭಾವ ಬದಲಿಸಿಕೊಳ್ಳ ಬೇಕಲ್ಲ.. ಹಾಗಾಗಿ ಸುಮ್ಮನಿರುವುದು ಅನಿವಾರ್ಯ.. ಸುಮ್ಮನಿರುತ್ತೇನೆ... ಇವತ್ತು ಸಂದರ್ಭ ಕೂಡಿ ಬಂದಿದೆ.. ಕೇಳಿ ಬಿಡುತ್ತೇನೆ..
ನೀವು ನನ್ನ ಸ್ಥಿತಿಯಲ್ಲಿದ್ದು ವಿಚಾರ ಮಾಡಿ.. ನನ್ನ ಭವಿಷ್ಯದ ಪ್ರೀತಿ... ನನ್ನ ಮುಂದಿನ ಬಾಳಿನ ಸಂಗಾತಿ ನನ್ನನ್ನು ನೋಡಲು ಬರುವದಿಲ್ಲ... ನನ್ನ ಅಂದವನ್ನು..ಚಂದವನ್ನು... ಬೇರೊಬ್ಬರು ಬಂದು ನಿರ್ಣಯಿಸುತ್ತಾರೆ... ನನ್ನ ಬದುಕಿನ ಕನಸನ್ನು ಮದುವೆಗೆ ಮೊದಲು.. ಕೊನೆ ಪಕ್ಷ ನೋಡುವಂಥಹ ಸಂದರ್ಭ ಕೂಡ ನನಗಿರುವದಿಲ್ಲ..."
ನನಗೆ ಪಿಚ್ಚೆನಿಸಿತು...ಅವಳ ಮಾತುಗಳ ಸತ್ಯ ನನ್ನನ್ನು ಇರಿಯಿತು...
ಅವಳೇ.. ಮತ್ತೆ ಮಾತನಾಡಿದಳು..
"ನೀವು ... ನಿಮ್ಮ ಗೆಳೆಯನಿಗಾಗಿ ನನ್ನನ್ನು ನೋಡಿದರೂ... ನನ್ನನ್ನು ನೋಡಿದ್ದು ... ನಿಮ್ಮ ಕಣ್ಣು... ನಿಮ್ಮ ಮನಸ್ಸು... ನಿಮಗೆ "ಇಷ್ಟವಾಗಿದ್ದಕ್ಕೆ" ನನ್ನನ್ನು ಗೆಳೆಯನಿಗಾಗಿ ಸಿಲೆಕ್ಟ್ ಮಾಡಿದ್ದೀರಿ ಅಲ್ಲವಾ?"
ನಾನು ತಡವರಿಸಿದೆ...
"ಸ್ಸಾರಿ... ಆ ಸಂದರ್ಭದಲ್ಲಿ ನಮ್ಮ ಗೆಳೆತನ ಬಿಟ್ಟು ಬೇರೆ ಯೋಚನೆ ಬರಲಿಲ್ಲ..."
ಊಟ ಸೊಗಸಾಗಿತ್ತು..
ದಿನಾ ನನ್ನ ಕೈ ಅಡುಗೆಯ ಸಪ್ಪೆ ಊಟ ನೆನಪಾಯಿತು..
ಆದರೆ..
ಆಸ್ವಾದಿಸುವಂಥಹ ಸವಿಯುವಂಥಹ ವಾತಾವರಣ ಅಲ್ಲಿರಲ್ಲಿಲ್ಲ...
ಇಬ್ಬರದೂ ಊಟವಾಯಿತು...
"ಸರಿ ... ನಾನಿನ್ನು ಹೊರಡುವೆ... ಬಾಗಿಲು ಹಾಕಿಕೊಳ್ಳಿ.."
ಪ್ಲೀಸ್.... ನೀವು ಈ ರಾತ್ರಿ ಇಲ್ಲಿಯೇ ಮಲಗಿ..."
"ಬೇಡಾ... ರಿ.."
ನಾನು ತೊದಲಿದೆ...
ಮತ್ತೆ ಹೇಳಲಾಗದ ಆಸೆ ಗರಿಗೆದರಿತು...!!
"ಪ್ಲೀಸ್.. ಪ್ಲೀಸ್... ನನಗೆ ಬಹಳ ಹೆದರಿಕೆ.."
ಅವಳ ಬೊಗಸೆ ಕಣ್ಣುಗಳಿಗೆ ಇಲ್ಲವೆನ್ನಲಾಗಲಿಲ್ಲ....ದೇವರೇ.. ಏನಾದರೂ ಘಟಿಸಲಿ... !! ಏನಾದರೂ.....ಆಗಿ ಹೋಗಲಿ....! ಅನ್ನುತ್ತಿತ್ತು ಒಳ ಮನಸ್ಸು...!
ಮನಸ್ಸು ಬಯಸಿದ್ದು ಅದನ್ನೇ ಆದರೂ... ಬೇಡವೆನ್ನುವ ಮನಸ್ಸಲ್ಲಿ ಒಪ್ಪಿದೆ...
"ನನಗೆ ಹಾಸಿಗೆ ತರಲು ಸಹಾಯ ಮಾಡಿ...
ದಯವಿಟ್ಟು ಬನ್ನಿ..."
ನಾನು ಅವಳನ್ನು ಹಿಂಬಾಲಿಸಿದೆ...
ನಾವು ಇಬ್ಬರೇ.. !! ಈ ರಾತ್ರಿ... ಈ ಮನೆಯಲ್ಲಿ...!
ಒಂಥರಾ... ಪುಳಕ...! ಅಂಜಿಕೆ.. !!
ಮನದ ಹುಚ್ಚು ಆಲೋಚನೆಗಳಿಂದ ಒಂಥರಾ ಥ್ರಿಲ್ಲಾಯಿತು....
ಹತ್ತಿ ಹಾಸಿಗೆ ಭಾರವಿತ್ತು...ನಾನು ಅದನ್ನು ಎತ್ತುವಾಗ ಅವಳು ಸನಿಹ ಬಂದಳು...
ಅವಳ ಮೈಯಿಂದ ಒಂದು ಥರಹದ ಸುವಾಸನೆ...! ಮತ್ತೇರಿಸುವಂತಿತ್ತು...
ಭಾವನೆಗಳು ಕೆರಳ ತೊಡಗಿದವು... ಹಾಲಿಗೆ ಬಂದು ಇಳಿಸಲು ನೋಡಿದೆ...
ಸಹಾಯಕ್ಕೆ ಅವಳೂ ಬಂದಳು..
ಮತ್ತೆ ಹತ್ತಿರ ಬಂದಳು... ಅವಳ ಸ್ಪರ್ಷದಲ್ಲಿ ರೋಮಾಂಚನೆಯಿತ್ತು..
ಅವಳು ಬೆಡ್ ಶೀಟ್ ಹಾಸ ತೊಡಗಿದಳು.....
ಬಗ್ಗುವಾಗ ನನ್ನನ್ನೇ ನೋಡುತ್ತಿದ್ದಳು...!
ಆ ಬೊಗಸೆ ಕಣ್ಣುಗಳಲ್ಲಿ ಆಸೆ ಇದೆಯಾ? ಏನಿದು ನೋಟ...? ಏನಿದರ ಅರ್ಥ...? ನನ್ನನ್ನು ಬಾ ಎನ್ನುತ್ತಿದೆಯಾ...?
ಹೆಣ್ಣಿನ ಈ ಮೌನ ಭಾಷೆ ಅರ್ಥವಾಗುವಂತಿದ್ದರೆ...?
ನನ್ನ ಕಲ್ಪನೆಯಾ ಇದೆಲ್ಲಾ...? ನಾನು ಸ್ವಲ್ಪ ಧೈರ್ಯ ಮಾಡಿ ಬಿಡಲಾ...?
" ನೀವು ಮಲಗಿ... ಟಿವಿ ಆಫ್ ಮಾಡ್ತೀನಿ...
ಮತ್ತೆ ಏನಾದರೂ ಬೇಕಾ...?"
ನಾನು ಸ್ವಲ್ಪ ಮುಂದೆ ಹೋಗಿ ಅವಳ ಕೈ ಹಿಡಿದು ಕೊಳ್ಳ ಬೇಕು ಅಂದುಕೊಂಡೆ....
ಅಥವಾ ತಬ್ಬಿಕೊಂಡು ಬಿಡಲಾ...?
ಅವಳು ಟಿವಿ ಆಫ್ ಮಾಡಿದಳು...
ನನ್ನ ಗಮನ ಟಿವಿ ಕಡೆ ಸರಿಯಿತು...
ಟಿವಿ ಪಕ್ಕದಲ್ಲಿ ನನ್ನ ಗೆಳೆಯನ ಮದುವೆ ಫೋಟೊ...!
ಅವರಿಬ್ಬರ ಹೆಗಲ ಮೇಲೆ ಕೈ ಹಾಕಿ ನಿಂತಿರುವ ನನ್ನ ಫೋಟೊ...!!
ನನಗೆ ಏನನ್ನಿಸಿತೊ ... !
"ನೀವು ... ಬೆಡ್ ರೂಮ್ ಬಾಗಿಲು ಹಾಕಿಕೊಳ್ಳಿ... ಹೆದರಿಕೆ ಬೇಡ... ನಾನಿದ್ದೇನೆ... ಧೈರ್ಯವಾಗಿರಿ..."
ಅವಳು ನನ್ನನ್ನೊಮ್ಮೆ ನೋಡಿ... ಲೈಟ್ ಆಫ್ ಮಾಡಿ ... ಬೆಡ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು...
ಹೇಗೋ ... .. ಬೆಳಗಾಯಿತು.. .. ..
ನಾನು ಏಳುತ್ತಿರುವ ಹಾಗೆ ಅವಳು ಘಮಘಮಿಸುವ ಕಾಫೀ ತಂದಿದ್ದಳು...
" ರಾತ್ರಿ ನಿದ್ದೆ ಬಂತಾ...? "
ನಾನು ತಲೆಯಾಡಿಸಿದೆ...
" ನೀವು ... ತುಂಬಾ ಒಳ್ಳೆಯವರು ಕಣ್ರೀ...! ನನ್ನ ಯಜಮಾನ್ರು ನಿಮ್ಮ ಬಗೆಗೆ ಏನು ಹೇಳಿದ್ರು ಗೊತ್ತಾ ? "
" ನನ್ನ ಬಗೆಗಾ ? ಏನು ಹೇಳಿದ್ದ.. ? "
"ನೋಡು .. ಕೆಲವೊಮ್ಮೆ ನನಗೆ .. ನನ್ನ ಮೇಲೇ ...ನಂಬಿಕೆ ಇರುವದಿಲ್ಲ...
ಆದರೆ ...
ನನ್ನ ಗೆಳೆಯ ಹಾಗಲ್ಲ... ಸ್ಪಟಿಕದಂಥಹ ಮನುಷ್ಯ...!! ಶುದ್ಧ ಹೃದಯದ ಸ್ನೇಹ ಆತನದು...!!
ನಿಆ... ನನ್ನವರು ಹೇಳಿದ ಹಾಗೆ .. " ನೀವು ತುಂಬಾ ಒಳ್ಳೆಯವರು ಕಣ್ರೀ..."
ನಾನು ತಲೆಯಾಡಿಸಿದೆ....
ಇದು " ಕಥೆ "

ಪ್ರಕಾಶ ಹೆಗಡೆ

Thursday, January 20, 2011

ನಗು ನಗುತಾ ನಲೀ ನಲಿ........

ಸೌ. ಶೈಲಜಾ ಕಣವಿ
ಮಗು ಕಿಲ ಕಿಲ ನಗು.: ನಗುವುದೇ ಸ್ವರ್ಗ, ಅಳುವುದೇ ನರಕ. ನಗು ಎಲ್ಲರಿಗೂ ಬೇಕು. ನಕ್ಕರೆ ಮುಖದ ಕಾಂತಿ ಹೆಚ್ಚುತ್ತದೆ. ನಗೆ ಅತಿ ಮುಖ್ಯ. ನಾವು ಮತ್ತೊಬ್ಬರನ್ನು ನೋಡಿ ನಗುವುದು ಸರಿಯಲ್ಲ. ಯಾರಾದರೂ ಬಿದ್ದರೆ ನಗುವವರು ಬಹು ಜನ. ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚಾಗುತ್ತದೆ. ನಾಳೆ ನಾವೂ ಬೀಳಬಹುದಲ್ಲವೇ? ಆಗ ಊರೇ ನಗುವುದು. ನಡೆಯುವವನು ಎಡವುವನಲ್ಲದೇ ಕುಳಿತಿರುವವನು ಎಡವುವನೆ? ಕುಳಿತವರ ಮುಂದೆ ಎಡವಿ ಬಿದ್ದರೆ ನಗದೇ ಉಳಿಯುವವರುಂಟೇ?
ಅನೇಕ ವಿಧದ ನಗೆಗಳಿವೆ. ಕಿರುನಗೆ, ತುಂಟನಗೆ, ಮುಗುಳ್ನಗೆ, ಮೆಲುನಗೆ, ವ್ಯಂಗನಗೆ, ಅಟ್ಟಹಾಸದ ರಾಕ್ಷಸ ನಗೆ, ಕುಹಕ ನಗೆ ಮತ್ತು ಮೋಹಕ ನಗೆ. ತುಟಿಯ ಮೇಲೆ ತುಂಟ ಕಿರುನಗೆ, ಕೆನ್ನೆ ತುಂಬಾ ಕೆಂಡ ಸಂಪಿಗೆ ಎನ್ನುವಂತೆ ನಗೆ ಹಿತವಾಗಿದ್ದರೆ ಮುಖದ ಎಲ್ಲ ನರಗಳೂ ಕೆಲಸ ಮಾಡುತ್ತವೆ. ಆಗ ಮನುಷ್ಯರ ವಯಸ್ಸು ಸ್ವಲ್ಪ ಚಿಕ್ಕವರಂತೆ ಕಾಣುತ್ತದೆ. ಒಳಗೆ ಚಿಂತೆಗಳಿದ್ದರೂ ನಗುನಗುತಾ ಇದ್ದರೆ ಆಗ ಸಹಜವಾಗಿ ಕಷ್ಟ ಎದುರಿಸುವ ಧೈರ್ಯ ಬರುತ್ತದೆ.
ನಗುವಾಗ ಎಲ್ಲ ನೆಂಟರು
ಅಳುವಾಗ ಯಾರೂ ಇಲ್ಲ.
ನಮ್ಮ ನಗೆ ಇತರರಿಗೆ ಮಾರಕವಾಗಬಾರದು. ಮತ್ತೊಬ್ಬರನ್ನು ಗೇಲಿ ಮಾಡಿ (ಆಡಿಕೊಂಡು) ನಗುವುದು ಕೆಲವರಿಗೆ ಬಲು ಇಷ್ಟ. ಇಂದಿನ ದಿನಗಳಲ್ಲಿ ಸಾಮಾನ್ಯ ನಗು ಮಾಯವಾಗಿದೆ. ಎಲ್ಲೆಡೆ ಅಟ್ಟಹಾಸದ , ಕುಹಕನಗೆ, ಮತ್ತು ವ್ಯಂಗ್ಯ ನಗೆ ಇವೇ ಹೆಚ್ಚಾಗಿ ಕಾಣಸಿಗುತ್ತದೆ. ಮುಗುಳ್ನಗಲೂ ಸಮಯವಿಲ್ಲ. ಸಂಯಮವೂ ಇಲ್ಲ. ಯಂತ್ರಗಳಂತೆ ದುಡಿದು ಹಣಗಳಿಸುವುದಕ್ಕಾಗಿ ಜನ ತಮ್ಮ ಜೀವನ ಎಂದು ತಿಳಿದಿದ್ದಾರೆ.
ಮನೆಯಲ್ಲಿ ನಗಲು ಸಾಧ್ಯವಿಲ್ಲ ಎಂದು ಹಣ ಕೊಟ್ಟು ಹಾಸ್ಯ ಸಭೆಗಳಿಗೆ ಜನರು ಹೋಗಿ ಅಲ್ಲಿ ನಕ್ಕು ಬರುತ್ತಾರೆ. ಇದಕ್ಕೆ ಕಾರಣ ಮನೆಯಲ್ಲಿ ಎಲ್ಲರೂ ಸೇರಿ ಮಾತನಾಡದೇ ಇರುವುದು. ಈಗ ಎಲ್ಲರೂ ದೂರದರ್ಶನ, ಮೊಬೈಲ್, ದೂರವಾಣಿ ಮತ್ತು ಸಂಪರ್ಕ ಜಾಲಗಳ ಮೋಹಕ್ಕೆ ಒಳಗಾಗಿದ್ದಾರೆ. ಎಲ್ಲರೂ ಒಂದೇ ಮನೆಯಲ್ಲಿದ್ದರೂ ಆ ಮನೆ ಶಾಂತವಾಗಿರುತ್ತದೆ. ಇಲ್ಲವೇ ಮೊಬೈಲ್ ನಲ್ಲಿ ಮಾತನಾಡುತ್ತ ಕೆಲವರು, ಗಣಕಯಂತ್ರದ ಮುಂದೆ ಕೆಲವರು ಕುಳಿತಿರುತ್ತಾರೆ. ಇದಾವುದೂ ಬಾರದ ಮುದುಕರು ದೂರದರ್ಶನ ನೋಡುತ್ತಿರುತ್ತಾರೆ. ಹೀಗಾಗಿ ’ದೂರ ಎನ್ನುವುದು ಹತ್ತಿರ, ಹತ್ತಿರ ಎನ್ನುವುದು ದೂರ’ ಎನ್ನುವಂತಾಗಿದೆ. ಮನೆ ಮಂದಿ ಒಬ್ಬರಿಗೊಬ್ಬರು ಎದುರು ಬದುರು ನಿಂತು ಮಾತನಾಡುವುದು ಕಮ್ಮಿಯಾಗಿದೆ. ಎಲ್ಲೋ ಇರುವವರ ಜೊತೆ ಹರಟುತ್ತಾರೆ. ಎದುರಿಗೆ ಬಂದವರಿಗೆ ಕೈಸನ್ನೆ ತೋರಿಸಿಬಿಡುತ್ತಾರೆ. ಇನ್ನು ನಗುವ ಮಾತೆಲ್ಲಿ!?
ನಗಲು ವಯಸ್ಸಿನ ಮಿತಿಯಿಲ್ಲ. ಜಾತಿಯ ಸೋಂಕಿಲ್ಲ. ಅಕ್ಷರಸ್ಥ ಅನಕ್ಷರಸ್ಥ ಎಂಬ ಭೇದsವಿಲ್ಲ. ಧರ್ಮದ ಅಡೆತಡೆಗಳು, ಗಂಡು ಹೆಣ್ಣೆಂಬ ಭೇದವಿಲ್ಲ. ಆದರೆ ಕೆಲವರು ಸ್ತ್ರೀಯರು ನಕ್ಕರೆ ಕೆಡುತ್ತಾರೆ ಎಂದು ಹೇಳುತ್ತಾರೆ. ಹೆಣ್ಣಿಗೆ ನಗಲು ಹಕ್ಕಿಲ್ಲವೆ? ಸಂದರ್ಭ ಸಿಕ್ಕಾಗ ನಗುವುದು ಸಹಜ. ಕೆಲವೊಮ್ಮೆ ಹಳೆಯ ಘಟನೆಗಳನ್ನು ನೆನಪಿಸಿಕೊಂಡು ನಗುವುದುಂಟು. ಇದಕ್ಕೆ ಗುರು ಬೇಕಿಲ್ಲ. ಸರ್ಕಾರಕ್ಕೆ ಕರ ತೆರಬೇಕಿಲ್ಲ.
ನಕ್ಕರೆ ಮುಪ್ಪು ಸಹ ಮರೆಯುತ್ತದೆ.
ನಮ್ಮಲ್ಲಿ ಏನೂ ಇಲ್ಲ ಎಂದು ಕೊರಗುವ ಬದಲು, ಇದ್ದುದರಲ್ಲಿಯೇ ತೃಪ್ತಿ ಪಟ್ಟುಕೊಳ್ಳುವುದನ್ನು ಕಲಿಯಬೇಕು. ಬೇರೆಯವರ ಏಳಿಗೆ ಕಂಡು ಅಸೂಯೆಪಡಬಾರದು. ಬೇರೆಯವರ ಏಳಿಗೆ ಕಂಡು ಮನದಲ್ಲಿ ಮರುಗುವುದರ ಬದಲು ಇಂದಲ್ಲ ನಾಳೆ ನಾವೂ ಏಳಿಗೆ ಆಗುವೆವು ಎಂದು ತಿಳಿದು ಸಮಚಿತ್ತದಿಂದ ಇರುವುದು ಒಳ್ಳೆಯದು.
ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯು ನೀ ಸೂತ್ರಧಾರಿ
ನಿನ್ನ ಎದುರು ನಾ ಪಾತ್ರಧಾರಿ ಎನ್ನುವಂತೆ ಎಷ್ಟೆಲ್ಲ ಸಂಪತ್ತಿದ್ದರೂ ನಗೆ ಇಲ್ಲದಿದ್ದರೆ ಅದು ಸುಖ ನೀಡದು. ಬಡತನವೇ ಇರಲಿ ಅಲ್ಲಿ ನಗು ತುಂಬಿದ್ದರೆ ಅದೇ ಸಿರಿತನವಾಗುವುದರಲ್ಲಿ ಸಂದೇಹವಿಲ್ಲ.
ನಗುವುದನು ಕಲಿತವನೆ,
ಬಾಳುವುದ ಅರಿತವನು
ನಗೆಯು ಬರುತಿದೆ ಎನಗೆ
ನಗೆಯು ಬರುತಿದೆ. ಜಗದೊಳಿರುವ ಮನುಜರೆಲ್ಲ
ಹಗರಣ ಮಾಡುವುದ ಕಂಡು,......
ಹಗರಣ ಮಾಡದೇ ಹಣಕ್ಕಾಗಿ ಹಪಾಹಪಿ ಮಾಡದೇ ಜೀವನದಲ್ಲಿ ಸಂತೋಷವಾಗಿ ಎಲ್ಲರೊಡನೆ ನಗುನಗುತಾ ಬಾಳಿದರೆ ಸಂತೋಷವಾಗಿ ಎಲ್ಲರೊಡನೆ ನಗುನಗುತಾ ಬಾಳಿದರೆ ಆ ಬಾಳು ಎಷ್ಟುಚೆನ್ನ ಅಲ್ಲವೆ?
ನಗು ನಗುತಾ ನಲಿ ನಲಿ
ಏನೇ ಆಗಲಿ

ಥೈಲ್ಯಾಂಡ್ ಪ್ರವಾಸ

ಸೌ. ವೀಣಾ ದೇವ್
ದೂರದರ್ಶನದ ಮೇಲೆ ಜಾಹೀರಾತು ಸಾಗಿತ್ತು. ಪತಿ ಹೆಂಡತಿಗೆ ಸ್ವತಃ ಮನೆಗೆಲಸ ಮಾಡಿ ಕೆಲಸದವಳಿಗೆ ಕೊಡುವ ಹಣವುಳಿಸಿ ಸಿಂಗಾಪುರಕ್ಕೆ ಹೋಗಬಹುದೆಂಬ ಇಂಗಿತ ವ್ಯಕ್ತ ಪಡಿಸುತ್ತಿರುವ ಸನ್ನಿವೇಶ. ನಮ್ಮ ಕೆಲಸದವಳು ಗೈರುಹಾಜರಾಗಿ ವಾರವೇ ಕಳೆದು ಹೋಗಿತ್ತು. ಗುಡಿಸುತ್ತಿದ್ದ ಪೊರಕೆಯನ್ನು ಎಸೆದು ಅಲ್ಲೇ ಸೋಪಾದ ಮೇಲೆ ಕುಳಿತು ನೋಡುತ್ತಿದ್ದ ನನ್ನವರ ಕೈಗಳನ್ನು ಅದುಮುತ್ತ ನಾನಂದೆ.
’ನೋಡಿ ಆ ಗಂಡನನ್ನ. ಈಗ ನಾನೂ ಹದಿನೈದು ದಿನ ಮನೆಗೆಲಸ ಮಾಡಬೇಕಿದೆ. ಮುಂದಕ್ಕೂ ಇನ್ನೆಷ್ಟು ದಿನ ಮಾಡಿಕೊಳ್ಳಬೇಕಾಗುತ್ತದೋ ಏನೋ.! ನೀವೂ ನನಗೆ ಸಿಂಗಾಪೂರ ತೋರಿಸಬಹುದಲ್ಲ!
ನಮ್ಮವರು ಸರಿ. ಹೋಗೋಣವಂತೆ. ಎಂದರು.
ಕೆಲವರ್ಷಗಳ ಹಿಂದೆ ಪೂರ್ವ ಏಷಿಯಾದ ಕೆಲ ದೇಶಗಳನ್ನು ಸುತ್ತಿ ಬಂದ ಅವರು ಯಾವಾಗಾದರೊಮ್ಮೆ ಹೇಳುತ್ತಿದ್ದಂತೆಯೇ ಈಗಲೂ ಸುಮ್ಮನೇ ಹೇಳುತ್ತಿದ್ದಾರೆಂದುಕೊಂಡೆ. ಆ ವಿಷಯಕ್ಕೆ ಅಷ್ಟೊಂದು ಮಹತ್ವ ಕೊಡಲಿಲ್ಲ. ಮರೆತೂ ಬಿಟ್ಟೆ. ಆದರೆ ಯಾವದೇವತೆಯೋ ತಥಾಸ್ತು ಎಂದಿರಬೇಕು. ನಮ್ಮವರು ಆ ನಿಟ್ಟಿನಲ್ಲಿ ಚಟುವಟಿಕೆ ಪ್ರಾರಂಭಿಸಿಯೇ ಬಿಟ್ಟರು. ಪ್ರವಾಸೀ ಕಂಪನಿಯೊಂದಕ್ಕೆ ಹೆಸರು ನೊಂದಾವಣೆ ಆಯ್ತು. ಕೊನೆಗೆ ಥೈಲೆಂಡ್, ಮಲೇಶೀಯಾ, ಸಿಂಗಪುರ್ ಪ್ರವಾಸದ ಮೊದಲ ಹೆಜ್ಜೆಯಾದ ಗೋವಾ- ಮುಂಬೈ ವಿಮಾನ ಪ್ರವಾಸ ಪ್ರಾರಂಭವೂ ಆಯ್ತು.

ಥೈಲೆಂಡ್ ಪ್ರವಾಸ.
ಬ್ಯಾಂಕಾಕ್ ಗೆ ಮುಂಬೈಯಿಂದ ರಾತ್ರಿ ಹನ್ನೊಂದು ಮೂವತ್ತೈದಕ್ಕೆ ಹೊರಡುವ ವಿಮಾನ ತಡವಾಗಿ ಹೊರಟಿತು. ಅಲ್ಲಿಯ ಸಮಯ ಭಾರತದಲ್ಲಿಯ ಸಮಯಕ್ಕಿಂತ ಒಂದೂವರೆತಾಸು ಮುಂದಿದೆ. ಐದುಗಂಟೆ ಪ್ರಯಾಣಿಸಿ ಅಲ್ಲಿಯ ಸ್ವರ್ಣಭೂಮಿ ವಿಮಾನ ನಿಲ್ದಾಣ ತಲುಪಿದಾಗ ಬೆಳಗಿನ ಆರುಗಂಟೆ. ಜಗತ್ತಿನ ಯಾವ ಸ್ಥಳದಲ್ಲೂ ನಿತ್ಯ ನೂತನವಾಗಿ ಸುಂದರ, ಹಿತಕರ ಅನುಭವ ನೀಡುವ ಕ್ಷಣಗಳೆಂದರೆ ಮುಂಜಾವೆಂದು ನನ್ನ ಭಾವನೆ. ಕಿಟಕಿಗಳಿಂದ ಬಾನನು ವೀಕ್ಷಿಸುತ್ತಿದ್ದಂತೇ ಇಳಿಯುವ ಸಮಯ ಬಂತು. ನಿಲ್ದಾಣದ ವಿಶಾಲ ಕಟ್ಟಡದಲ್ಲಿ ನಡಿಗೆ. ಚಲಿಸುವ ರಸ್ತೆಗಳಲ್ಲಿ ಮುಂದುರಿದೆವು. ಎದುರಲ್ಲಿ ಎತ್ತರದಲ್ಲಿ ಕಂಡದ್ದು ಶ್ರೀ ವಿಷ್ಣುವಿನ ಎದೆಯಮಟ್ಟದ ಸುಂದರ ಮೂರ್ತಿ. ಂನ್ನದ ಮೆರುಗಿನ ಸುಮಾರು ಐದು ಅಡಿಯ ಮೂರು ಮುಖದ ಚತುರ್ಭುಜ ಮೂರ್ತಿ ದೂರದಿಂದಲೇ ಆಕರ್ಷಿಸುತ್ತದೆ. ಮೂರ್ತಿ, ಅದರ ಮಂಟಪ, ಹೂಬಳ್ಳಿಗಳ ಅಲಂಕಾರ, ಎಲ್ಲವೂ ಇಲ್ಲಿಗೆ ಆಗಮಿಸುವ ಪ್ರವಾಸಿಗಳಿಗೆ ಪೂರ್ವ ಏಷಿಯಾದ ವಿಶಿಷ್ಟ ಕಲೆಯನ್ನು ಪರಿಚಯಿಸುತ್ತವೆ.
ಹೊರಬಂದು ನಮಗಾಗಿ ಸಿದ್ಧವಿರುವ ಹವಾನಿಯಂತ್ರಿತ ಬಸ್ ಏರಿದೆವು. ಸ್ಥಳೀಯ ಮಾರ್ಗದರ್ಶಿ ಒಬ್ಬರು ಜತೆಗೂಡಿದ ನಮ್ಮ ಪ್ರಯಾಣ ಪಟ್ಟಾಯಾಗೆ ಸಾಗಿತು. ಮೂರು ನಾಲ್ಕು ಗಂಟೆಗಳ ಆ ಪ್ರಯಾಣದಲ್ಲಿ ದಾರಿಯುದ್ದಕ್ಕೂ ಆ ಮಾರ್ಗದರ್ಶಿ ಥೈಲೆಂಡಿನ ಬಗ್ಗೆ ಮಾಹಿತಿ ನೀಡುತ್ತಿದ್ದ. ಥೈಲೆಂಡ್ ಎಂದರೆ ’ಸ್ವಾತಂತ್ರ್ಯದ ನಾಡು’ ಎಂದರ್ಥವಂತೆ. ಮೊದಲು ಇದು ಸಯಾಮ ಎಂದು ಕರೆಯಲ್ಪಡುತ್ತಿತ್ತು. ಬಹ್ವಂಶ ಜನ ಬೌದ್ಧ ಧರ್ಮಾನುಯಾಯಿಗಳು. ಧರ್ಮಾಚರಣೆ ಭಾರತೀಯ ದೇವರು ಪುರಾಣ, ಹಿಂದೂ ದೇವರುಗಳನ್ನು ಒಳಗೊಂಡಿದೆ. ಬುದ್ಧನಂತೆಯೇ ವಿಷ್ಣು ರಾಮ ಇವರಿಗೆ ಪವಿತ್ರರು. ರಾಜನಿಂದ ಹಿಡಿದು ಪ್ರತಿಯೋರ್ವನಿಗೂ ಒಂದು ಇಂಗ್ಲೀಷ್ ಇನ್ನೊಂದು ಥಾಯ್ ಹೆಸರಿರುತ್ತದೆ. (ನಮ್ಮ ಮಾರ್ಗದರ್ಶಿ ತನ್ನ ಇಂಗ್ಲೀಷ್ ಹೆಸರು ’ಲಿಯೋ’ ಥಾಯ್ ಹೆಸರು ’ಅನುಷಾ’ ಎಂದ) ಅವನ ರಾಜನ ಹೆಸರು ರಾಮ.(ಇಂಗ್ಲೀಷ್) ಈಗಿನವನು ೯ ನೆಯ ರಾಮ. ’ಭೂಮಿಪುತ್ರ’ ಎನ್ನುವುದು ಥಾಯ್ ಹೆಸರು. ರಾಜನಲ್ಲಿ ಪ್ರಜೆಗಳದು ಅಪಾರವಾದ ಶ್ರದ್ಧೆ. ಅವನನ್ನು ತಂದೆ ತಾಯಿ ಎಂದೇ ತಿಳಿಯುತ್ತಾರೆ. ಆತ ಮಳೆ ಬರಿಸಬಲ್ಲ ಎಂದು ಅವರ ನಂಬಿಕೆ. ಆತನಿಂದ ಶಿರ ಮುಟ್ಟಿಸಿಕೊಂಡ ವ್ಯಕ್ತಿ ತಾನು ಅನುಗ್ರಹೀತನೆಂದು ಭಾವಿಸುತ್ತಾನೆ. ನಮ್ಮಲ್ಲಿಯಂತೆ ಮೆಚ್ಚುಗೆಗಾಗಲೀ ಮುದ್ದಿಗಾಗಲೀ ಯಾರೂ ಇತರರು ತಲೆ ಮುಟ್ಟಿದರೆ ಅವರಿಗೆ ಇಷ್ಟವಾಗುವುದಿಲ್ಲವಂತೆ. ರಾಜನ ಬ್ಯಾಂಕಾಕ್ ಅರಮನೆಯ ಆವಾರದಲ್ಲಿ ಬತ್ತದಗದ್ದೆ, ಪಾಮ್ ತೋಟಗಳನ್ನೊಳಗೊಂಡ ಕೃಷೀ ಕ್ಷೇತ್ರವಿದೆ. ಸ್ವತಃ ರಾಜ ಅದರತ್ತ ಲಕ್ಷ್ಯ ವಹಿಸುತ್ತಾನೆ. ಅವುಗಳ ಬಗ್ಗೆ ಅರಿತುಕೊಳ್ಳ ಬಯಸುವವರು ಪರಿಣತಿ ಗಳಿಸಬೇಕೆನ್ನುವವರಿಗೆ ಅಲ್ಲಿ ಸದಾ ಸ್ವಾಗತವಿದೆ.
ಟೊಯೋಟಾ ಮೋಟಾರುಗಳು (ಐವತ್ತು ಚ.ಕೀ. ಮೀ. ವಿಸ್ತೀರ್ಣದ ಔದ್ಯೋಗಿಕ ವಸಾಹತ್ತಿದೆ.) ಜಸ್ಮಿನ್ ಎಂಬ ಸುವಾಸಿತ ಅಕ್ಕಿ, ರಬ್ಬರು, ಲಾಬ್ಸರ್ ಮುಂತಾದವು ಇಲ್ಲಿ ರಪ್ತಾಗುವ ಮುಖ್ಯ ವಸ್ತುಗಳು. ವಾಹನ ಸಂಚಾರಕ್ಕೆ ಸ್ಕೈ ವೇ’ ( ಫ್ಲೈ ಓವರ್) ಸ್ಕೈ ಟ್ರೇನ್’ ಸಬ್ ವೇ’ ಗಳಿವೆ. ಪಟ್ಟಾಯಾದಿಂದ ಬ್ಯಾಂಕಾಕ್ ಗೆ ಹೋಗುವಾಗ ೫೮ ಕಿ.ಮೀ. ಉದ್ದದ ’ಸ್ಕೈ ಬ್ರಿಜ್’ ಇದ್ದು ಕ್ರಮಿಸಲು ಅರ್ಧ ಗಂಟೆಯೂ ಬೇಕಾಗಲಿಲ್ಲ. ವಿಕಾಸ ಕಾರ‍್ಯಗಳಿಗೆ ಜಪಾನಿನ ಧನಸಹಾಯ ಪಡೆದಿದ್ದು ಮರು ಪಾವತಿಗೆಂದು ರಸ್ತೆಯ ಉಪಯೋಗಕ್ಕೆ ಭಾರೀ ಕರ ತೆರಬೇಕಾಗುತ್ತದೆ. ಆಲವಿದ್ಯುತ್ ಶಕ್ತಿ ಹಾಗೂ ಡೀಝೆಲ್ ವಿದ್ಯುತ್ ಶಕ್ತಿಯ ಪೂರೈಕೆ ಇದ್ದು ವಿದ್ಯುತ್ತು ಒಂದು ದಿನವೂ ಕಡಿತವಾಗುವಂತಿಲ್ಲ. ಮುಂಬರುವ ದಿನಗಳಲ್ಲಿ ’ಎಟೋಮಿಕ್’ ಎನರ್ಜಿ ಯಿಂದ ವಿದ್ಯುತ್ ನ್ನು ಉತ್ಪಾದಿಸುವ ಯೋಜನೆ ಇದೆಯಂತೆ.
ಇಲ್ಲಿರುವ ೭ eleven ಎಂಬ ಅಂಗಡಿಗಳು ಇಪ್ಪತ್ನಾಲ್ಕು ಗಂಟೆಗಳ ಕಾಲ ತೆರೆದಿರುತ್ತವೆ. ಎಲ್ಲ ಜೀವನಾವಶ್ಯಕ ವಸ್ತುಗಳೂ ಅಲ್ಲಿ ಲಭ್ಯ. ಪಟ್ಟಾಯಾ ಕ್ಕೆ ತಲ್ಪಿ ’ನೊಂಗ್ ನೂಚ್ ವಿಲೇಜ್’ ಎಂಬಲ್ಲಿ ನೃತ್ಯ, ಮಾರ್ಶಲ್ ಆರ್ಟ, ಹಿಂದಿ ಚಿತ್ರಗೀತೆಗಳನ್ನೂ ಕೂಡ ಒಳಗೊಂಡ ಸಾಂಸ್ಕೃತಿಕ ಕಾರ‍್ಯಕ್ರಮ, ಆನೆಗಳ ಕ್ರೀಡೆ, ಟ್ರಾಫಿಕಲ್ ಗಾರ್ಡನ್, ಪಾಟರೀ ಗಾರ್ಡನ್, ಗಳಲ್ಲಿ ಕಳೆದ ಕ್ಷಣಗಳು ಅವಿಸ್ಮರಣೀಯ. ಪಾಟರೀ ಗಾರ್ಡನ್ ನಲ್ಲಿ ಪುಟ್ಟ ಪುಟ್ಟ ಮಡಿಕೆ ಕುಡಿಕೆ ಗಳಿಂದ ತಯಾರಿಸಲ್ಪಟ್ಟ ವಾಹನಗಳು ಮಂಟಪಗಳು ಚೈನೀಜ್ ಡ್ರ್ಯಾಗನ್, ಗಳು ಪಕ್ಷಿಗಳು, ವೃಕ್ಷಗಳು ಮುಂತಾದವುಗಳ ರಚನೆಗಳಿವೆ. ಹತ್ತು ಎಕರೆ ಜಾಗದಲ್ಲಿದ್ದ ಈ ತೋಟದ ಉಸ್ತುವಾರಿಯನ್ನು ಓರ್ವ ಸ್ತ್ರೀ ನೋಡಿಕೊಳ್ಳುತ್ತಿದ್ದು ಹದಿನೈದು ನೂರು ಕೆಲಸಗಾರರಿದ್ದು ಅವರಿಗೆ ಎಲ್ಲ ರೀತಿಯ ಸೌಕರ‍್ಯಗಳೂ ಇವೆ.
ಪಟ್ಟಾಯಾ ದ ನಯನ ರಮ್ಯ ಆಲ್ಕಾ ಝಾ ಶೋ ಮೈ ಮರೆಯುವಂತೆ ಮಾಡುತ್ತದೆ. ವಿಶಿಷ್ಟ ವೇಷ ಭೂಷಣಗಳಿಂದ ಕೂಡಿದ ವಿಶೇಷ ಪರಿಣತಿ ಹೊಂದಿದ ಅನೇಕ ಕಲಾಕಾರರು ಅಷ್ಟೊಂದು ಸಹಜತೆಯಿಂದ ನರ್ತಿಸುವಾಗ ಕಣ್ಣೆವೆ ಮುಚ್ಚುವುದನ್ನು ಮರೆತುಬಿಡುತ್ತೇವೆ. ಕಾರ್ಯಕ್ರಮ ಹಾಡು, ನೃತ್ಯ, ಪ್ರಕಾಶ ಯೋಜನೆ, ಸ್ಪೆಶಲ್ ಇಫೆಕ್ಟ್, ಗಳಿಂದ ಕೂಡಿ ಮನಸ್ಸಿಗೆ ಮೋಡಿ ಮಾಡಿ ಮಾಯಾನಗರಿಗೆ ತಲುಪಿಸಿಬಿಡುತ್ತವೆ. ಶೋ ಮುಗಿಸಿ ಭಾರತೀಯ ಭೋಜನ ಗೃಹದಲ್ಲಿ ಊಟ ಮಾಡಿ ಪಂಚತಾರಾಂಕಿತ ಹೋಟೇಲಿನಲ್ಲಿ ಮಲಗಿ ನಿದ್ರಿಸುವಾಗಲೂ ಇಡೀ ದಿನದ ಕಾರ‍್ಯಕ್ರಮದ ಉಜಳಣೆ ಸಾಗಿತ್ತು.
ಮರುದಿನ ಸ್ಫೀಡ್ ಬೋಟ್ ನಿಂದ ಕೋರಲ್ ಆಯ್ಲೆಂಡ್ ಗೆ ಪ್ರಯಾಣ. ಪ್ಯಾರಾಸೇಲೀಂಗ್ ಗಾಜಿನ ತಳವಿದ್ದ ಬೋಟ್ ನಲ್ಲಿ ಪ್ರಯಾಣ ಮಾಡುತ್ತಾ ಸಮುದ್ರ ತಳದ ಜೀವಿಗಳ ಹವಳ ಗಿಡ ಮುಂತಾದ ಅದ್ಭುತ ರಚನೆಗಳ ವೈಭವದ ವೀಕ್ಷಣೆ ಆಯ್ತು. ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ನೀರಲ್ಲಿ ಸಮುದ್ರತಳದ ಮೇಲೆ ಓಡಿಯಾಡಿ ಬಂದರು ಕೆಲವರು. ಧೈರ್ಯ ಸಾಲದ ನನ್ನಂತವರು ಅವರ ಅನುಭವ ಕೇಳಿ ಸಂತೋಷಪಟ್ಟೆವು.
ನಂತರ ಮಿನಿ ಸಂಯಾಮ್ ಗೆ ಭೇಟಿ. ಅಲ್ಲಿ ವಿಸ್ತೀರ್ಣವಾದ ಸ್ಥಳದಲ್ಲಿ ಥೈಲೆಂಡ್ ಹಾಗೂ ಯುರೋಪಕ್ಕೆ ಸಂಬಂಧಪಟ್ಟ ಅನೇಕ ಸ್ಥಳಗಳ ಸೂಕ್ಷ್ಮಾಕಾರದ ಪ್ರತಿಕೃತಿಗಳಿವೆ. ಪ್ರವೇಶದ್ವಾರದಲ್ಲೇ ರಾವಣನ ಇಪ್ಪತ್ನಾಲ್ಕು ಇಪ್ಪತ್ತಾರು ಅಡಿ ಎತ್ತರದ ವರ್ಣರಂಜಿತ ಪ್ರತಿಮೆ ಎದುರಾಗುತ್ತದೆ. ಎಮರಾಲ್ಡ್ ಬುದ್ಧನ ದೇವಾಲಯ, ಕ್ವಾಯ್ ನದಿಯ ಮೇಲಿನ ಸೇತುವೆ, ಚಿನ್ನದ ಸ್ತೂಪಗಳು, ಒಂದು ಕಡೆ ಇದ್ದರೆ ಎಫೆಲ್ ಗೋಪುರ, ಅಮೇರಿಕದ ಸ್ವಾತಂತ್ರ್ಯ ದೇವತೆ, ಲಂಡನ್ನಿನ ಟ್ರಾಮ್ ಬ್ರಿಜ್ ಮುಂತಾದವನ್ನು ಇನ್ನೊಂದು ಕಡೆ ನೋಡಬಹುದು.
ನಂತರ ಥಾಯ್ ಮಸಾಜ್ ನಿಂದ ಇಡೀ ದಿನದ ಶ್ರಮ ಪರಿಹಾರವಾಗುತ್ತದೆ.
ಮರುದಿನ ಪಟ್ಟಾಯಾ ದಿಂದ ಬ್ಯಾಂಕಾಕ್ ಗೆ ಹೊರಟೆವು. ಮಾರ‍್ಗದಲ್ಲಿ ಜಗತ್ತಿನಲ್ಲೇ ಅತೀ ದೊಡ್ಡದೆಂದು ಖ್ಯಾತಿ ಪಡೆದ ’ಜೆಮ್ಸ್ ಗ್ಯಾಲರಿ’ಯನ್ನು ನೋಡಿದೆವು. ಗಣಿಗಳಿಂದ ಪಡೆಯುವ ಮೂಲವಸ್ತುವಿನಿಂದ ಹಿಡಿದು ವಜ್ರವೆಂದು ಕಣ್ಣು ಕೋರೈಸುವ ಆಕರ್ಷಕ ರೂಪವನ್ನು ಪಡೆಯುವವರೆಗಿನ ವಿವಿಧ ಹಂತಗಳ ಪರಿಚಯ ಆಯಿತು. ಇಷ್ಟೊಂದು ವಿಶಾಲವಾದ ಮಳಿಗೆ ಇದೆ ಎಂದಮೇಲೆ ಚಿನ್ನ-ಬೆಳ್ಳಿ - ವಜ್ರದ ಬೇಡಿಕೆಯ ಪ್ರಮಾಣ ನೋಡಿ ಆಶ್ಚರ್ಯವಾಯ್ತು. ಸಂಜೆ, ’ಚಾವೋ ಫ್ರಾಯಾ ರಿವರ್ ಕ್ರೂಜ್’ ಸಂಗೀತ ಊಟದ ಜೊತೆಗೆ, ನದಿಯ ಇಕ್ಕೆಲದಲ್ಲೂ ಇರುವ ನದಿಯಲ್ಲಿ ಪ್ರತಿಬಿಂಬಿಸುತ್ತಿರುವ ಜಗಮಗಿಸುವ ದೀಪಾಲಂಕಾರದ ದೇವಾಲಯ, ಭವನ ಮುಂತಾದವನ್ನು ನೋಡುತ್ತ, ವಿರಾಮವಾಗಿ ಕಾಲ ಕಳೆದೆವು.
ಬ್ಯಾಂಕಾಕಿನ ಸಫಾರಿ ವರ್ಲ್ಡ ನಲ್ಲಿ ಸ್ವೇಚ್ಛೆಯಿಂದ ಸಂಚರಿಸುತ್ತಿರುವ ಪಶು ಪಕ್ಷಿಗಳ ನೋಟ ಚೆನ್ನಾಗಿತ್ತು. ಅಲ್ಲಿಯ ಶೌಚಾಲಯಕ್ಕೆ ವಿಶ್ವದ ಅತೀ ಉತ್ಕೃಷ್ಟ ಶೌಚಾಲಯ ಎಂಬ ಸನ್ಮಾನ ದೊರೆತಿದೆಯಂತೆ. ಮರೀನ್ ಪಾರ್ಕ ಓರಾಂಗ- ಓಟಾಂಗ,-ಸೀಲಾಯನ್- ಡಾಲ್ಫಿನ್ ಗಳ ಚಾಕಚಕ್ಯತೆ ತುಂಬಿದ ಕ್ರೀಡಾ ಪ್ರದರ್ಶನ, ಕೌಬಾಯ್ ಶೋ, ಎಲ್ಲ ಮನರಂಜನೆ ನೀಡಿದವು.
ಬ್ಯಾಂಕಾಕ್ ನಲ್ಲಿಯ ದೊಡ್ಡ ಮಾಲ್ ಗಳಲ್ಲಿ ಎಮ್. ಬಿ. ಕೆ . ಎನ್ನುವುದೊಂದು. ಅಲ್ಲಿ ಎಂಟುಸಾವಿರ ಅಂಗಡಿಗಳಿದ್ದು ಹೇರ್‌ಪಿನ್ನಿನಿಂದ ಹಿಡಿದು ಹೆಲಿಕ್ಯಾಪ್ಟರ್ ವರೆಗಿನ ಎಲ್ಲಾ ಸರಕು ಅಲ್ಲಿ ಲಭ್ಯವಿದೆಯಂತೆ.
ನಗರ ದರ್ಶನದಲ್ಲಿ ’ಪ್ರಿನ್ಸಿಪಲ್ ಬುದ್ಧ ಅಯ್ದುವರೆ ಟನ್ನಿನ ೪೬ ಮೀ. ಉದ್ದ, ೧೫ಮೀ. ಎತ್ತರದ ’ರಿಕ್ಲ್ಯಾನಿಂಗ್ ಬುದ್ಧನ’ ದರ್ಶನವೂ ಆಯ್ತು. ಮಕ್ಕಳಾಗದವರು ಸಂತತಿಗಾಗಿ ಮೊರೆಹೋಗುವ ಶಿವಲಿಂಗವೂ ಅಲ್ಲಿದೆ.
ಬ್ಯಾಂಕಾಕ್ನಲ್ಲಿ ಮೂರುಸಾವಿರ ಗಗನಚುಂಬಿ ಕಟ್ಟಡಗಳಿವೆಯಂತೆ. ಸ್ಕ್ಯೆ ಬಯೋಕೆ ಎನ್ನುವ ಅತೀ ಎತ್ತರದ ಕಟ್ಟಡದ ಎಂಬತ್ನಾಲ್ಕನೆಯ ಮಹಡಿಯ ಮೇಲಿನ ಭ್ರಮಣಿಸುವ ಒಬ್ಜರ‍್ವೇಟರ್ ಡೆಕ್ ನಿಂದ ಸಮಗ್ರ ಬ್ಯಾಂಕಾಕ್ನ ವೀಕ್ಷಣೆ ಮಾಡಬಹುದು. ಮೇಲೇರಲು ಎಪ್ಪತ್ತೇಳನೆಯ ಮಹಡಿಯವರೆಗೆ ಒಂದು ಹಾಗೂ ಎಂಬತ್ಮೂರನೆಯ ಮಹಡಿಯವರೆಗೆ ಇನ್ನೊಂದು ಲಿಪ್ಟ್ ಇವೆ.
ಇಂದ್ರ ಸ್ಕ್ವೇರ್ ಎನ್ನುವ ಇನ್ನೊಂದು ಸ್ಥಳವೂ ಪ್ರವಾಸಿಗರು ಖರೀದಿಗೆ ಹೋಗುವ ಜನಪ್ರಿಯ ಸ್ಥಳ. ಪ್ರವಾಸಿಗರು ಥೈಲೆಂಡ್ ನಲ್ಲಿ ಥೈ ಸಿಲ್ಕ್ ಹಾಗೂ ಹತ್ತಿಬಟ್ಟೆ, ಬೆಲೆಬಾಳುವ ಹರಳುಗಳು, ಬಾಟಕ್, ಗೊಂಬೆಗಳು, ಹಾಗೂ ಮುಖವಾಡಗಳನ್ನು ಕೊಂಡುಕೊಳ್ಳುತ್ತಾರೆ. ಇಲ್ಲಿಯ ಚಲಾವಣೆಗೆ ಬಾಹ್ಟ್ ಎನ್ನುತ್ತಾರೆ. ಒಂದು ಬಾಹ್ಟ್ ಗೆ ಒಂದೂವರೆ ರೂ ಆಗುತ್ತದೆ.
ಇಲ್ಲಿ ಸ್ತ್ರೀ ಯರ ಜನಸಂಖ್ಯೆ ಪುರುಷರ ಸಂಖ್ಯೆಯ ಎರಡುಪಟ್ಟು. ಅಂಗಡಿಮುಂಗಟ್ಟು, ಹೊಟೇಲು, ಎಲ್ಲ ಕಡೆ ಸ್ತ್ರೀಯರೇ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಾರೆ. ಔಪಚಾರಿಕ ಸ್ಥಳಗಳಲ್ಲಿ ಸ್ವಾಗತ ಕಕ್ಷೆ, ಮದುವೆ ಮುಂತಾದ ಸಮಾರಂಭದಲ್ಲಿ ವೈಭವಯುತ ಜರತಾರಿ ರೇಶ್ಮೆಯ ಲುಂಗಿಯಂತ ಉಡುಗೆ, ತುಂಬುತೋಳಿನ ಉದ್ದವಾದ ಬ್ಲೌಜನ್ನು ಧರಿಸುತ್ತಾರೆ. ಮಿಕ್ಕಂತೇ ಪಾಶ್ಚಾತ್ಯ ಉಡುಪೇ ಹೆಚ್ಚು. ನನ್ನ ಗಮನಕ್ಕೆ ಬಂದ ಒಂದು ಸಂಗತಿಯೆಂದರೆ ನಮ್ಮಲ್ಲಿಯಂತೆ ಅಲ್ಲಿ ಎಲ್ಲೂ ವೃತ್ತ ಪತ್ರಿಕೆಗಳಾಗಲೀ ಮಾರುವವರಾಗಲೀ ಕಂಡುಬರಲಿಲ್ಲ. ಹೊಟೆಲ್ಲು, ಉಪಹಾರಗೃಹಗಳಲ್ಲಿ ಅವು ಕಂಡುಬರುವುದಿಲ್ಲ. ಬೆಲೆಯೂ ತುಂಬಾ ಜಾಸ್ತಿ. ಇಪ್ಪತ್ತೈದು, ಮುವ್ವತ್ತೈದು ರೂ.
ಪರವೂರು ಪರದೇಶಗಳಿಗೆ ಹೋಗುವವರ ಮನದಲ್ಲಿ ಅಲ್ಲಿ ಊಟ ತಿಂಡಿಗಳ ಬಗ್ಗೆ ಶಂಕೆ ಇದ್ದೇ ಇರುತ್ತದೆ. ಹೋಗಿ ಬಂದ ಅನುಭವ ಹಂಚಿಕೊಳ್ಳುವವರಿಗೆ ಕೇಳುವ ಪ್ರಶ್ನೆಗಳಲ್ಲಿ ಇದು ತಪ್ಪದೇ ಇರುವಂತ ಪ್ರಶ್ನೆ. ಪೂರ್ಣ ಶಾಕಾಹಾರೀ ಭಾರತೀಯ ಭೋಜನಾಲಯಗಳು ಇವೆ. ಇತರೆಡೆಯಲ್ಲೂ ವಿವಿಧ ಬ್ರೆಡ್‌ಗಳು, ಪೂರಿ, ಪಂಜಾಬೀ ಶಾಖಾಹಾರೀ ಪಲ್ಯಗಳು ಹೇರಳ ಹಣ್ಣು ಹಂಪಲುಗಳು, ಹಣ್ಣಿನರಸ, ಹಾಲು, ಮೊಸರು, ಲಭ್ಯ. ಅಲ್ಲಿಯ ವಿಶಿಷ್ಟ ಸಾಮಿಷ ಹಾಗೂ ಸಮುದ್ರಜನ್ಯ ಜೀವಿಗಳ ಪದಾರ್ಥಗಳೂ ಪ್ರವಾಸಿಗರ ಮೆಚ್ಚುಗೆ ಗಳಿಸಿವೆ.
ನಾವು ತಂಗಿದ ಎಲ್ಲ ಹೊಟೇಲ್ಲುಗಳ ಕೋನೆಯಲ್ಲಾಗಲೀ ಸ್ವಾಗತ ಕಕ್ಷದಲ್ಲಾಗಲೀ ಲಾಕರ್ ಗಳು ಇದ್ದದರಿಂದ ಬೆಲೆಬಾಳುವ ವಸ್ತು, ಹೆಚ್ಚಿನ ಹಣ, ಮುಖ್ಯವಾಗಿ ಪಾಸ್ ಪೋರ್ಟ ಗಳನ್ನು ಭದ್ರವಾಗಿಸಿಟ್ಟು ಹಾಯಾಗಿ ತಿರುಗಾಟ ಮಾಡಬಹುದು.
ತಮ್ಮ ಮನೋರಾಜ್ಯದಲ್ಲೇ ನಮ್ಮೊಡನೆ ಎಲ್ಲಡೆಯ ಸಂಚಾರದ ಅನುಭವ ಸವಿಯುತ್ತಲಿದ್ದ (ಹಾಗೆಂದು ನಂಬಿದ್ದೇನೆ) ಓದುಗರಿಗೆ ಒಮ್ಮೇಲೆ ದುರ್ವಾರ್ತೆ ಕೇಳಿದಂತಾಗಬಾರದೆಂದು ಒಂದು ವಿಷಯ ಸ್ವಲ್ಪ ಮರೆಮಾಚಿದ್ದೆ. ಥೈಲೆಂಡಿನ ಮನೋರಂಜನಾ ಕ್ಷೇತ್ರ, ಅತಿಥಿ ಸತ್ಕಾರ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿ (ತರುಣಿಯರು)ಗಳಲ್ಲಿ ಬಹ್ವಂಶ ಹಿಬ್ರಾ ( ಣಡಿಚಿಟಿಛಿe zeಟಿಜeಡಿs) ಗಳೆಂದು ಕೇಳಿ ಮನ ನೊಂದಿತು. (ಅವರನ್ನು ಲೇಡೀ ಬಾಯ್ಸ್) ಎನ್ನುತ್ತಾರೆ. ಸೌಂದರ‍್ಯ ಹಾಗೂ ನೃತ್ಯ ಸಂಗೀತದಂತ ಕಲೆಯನ್ನು ಮುಕ್ತ ಹಸ್ತದಿಂದ ಅವರಿಗೆ ನೀಡಿದ ದೇವರು ಈ ಶಿಕ್ಷೆಯನ್ನೇಕೆ ವಿಧಿಸಿದ ಎಂದು ಮತ್ತೆ ಮತ್ತೆ ಕೇಳಿಕೊಂಡೆ. ಒಂದು ಸಮಾಧಾನ ಎಂದರೆ ಅಲ್ಲಿ ಸಮಾಜ ಅವರನ್ನು ಬೇರೆಯವರೆಂದು ನೋಡುವುದಿಲ್ಲ. ಅವರೂ ಸಹಜತೆಯಿಂದಲೇ ವ್ಯವಹರಿಸುವುದರಿಂದ ಮುಜುಗರ ಎನಿಸುವುದಿಲ್ಲ.
ಥೈಲೆಂಡಿನ ಐದು ದಿನಗಳ ವಾಸ ಮುಗಿಸಿ ಮರುದಿನ ಕೌಲಾಲಾಂಪೂರಿಗೆ ಹೊರಟೆವು..