Monday, August 29, 2011

ಭಗವದ್ಗೀತೆ -ಧರ್ಮ


ಲೇಖಕರು:
ಮಹಾಬಲ ಭಟ್, ಸಂಸ್ಕೃತ ಉಪನ್ಯಾಸಕರು, ಗೋವಾ

ಉದಯವಾಣಿಯ ಅಗಸ್ಟ್ ೨೧ರ ಸಂಚಿಕೆಯಲ್ಲಿ ಪ್ರಕಟವಾದ ಎಸ್. ಎನ್. ಬಾಲಗಂಗಾಧರ್ ಅವರ ’ಧರ್ಮದ ನಿಜ ಅರ್ಥವನ್ನು ಹುಡುಕುತ್ತ.’ ಎಂಬ ಲೇಖನ ಸಮತೋಲಿತವಾದ ಬರಹ. ’ಧರ್ಮ’ ಎಂಬ ಪದದ ಅರ್ಥವನ್ನು ಸ್ವಲ್ಪಮಟ್ಟಿಗೆ ವಿಸ್ತರಿಸುವ ಪ್ರಯತ್ನ ನನ್ನದು.

ನಾವು ಯಾವುದೇ ಶಬ್ದವನ್ನು ಭಾಷಾಂತರ ಮಾಡಿದಾಗ ಅದು ಮೂಲ ಶಬ್ದಕ್ಕೆ ಅತ್ಯಂತ ಸಮೀಪವಾದ ಅರ್ಥವನ್ನು ನೀಡುವುದೇ ಹೊರತು ಮೂಲ ಶಬ್ದದ ಎಲ್ಲ ಭಾವಗಳನ್ನೂ ಒಳಗೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಸಂಸ್ಕೃತ ಶಬ್ದಕ್ಕೆ ಅದು ನಿರ್ದೇಶಿಸುವ ವಸ್ತುವಿನ ಹೊರತಾದ ಅರ್ಥವೊಂದಿರುತ್ತದೆ. ಉದಾ: ’ಉದಕಮ್’ ಎಂಬ ಪದವನ್ನು ಕನ್ನಡಕ್ಕೆ ಭಾಷಾಂತರಿಸಿದಾಗ ’ನೀರು’ ಎಂದು ಬರೆಯುತ್ತೇವೆ. ಈ ಭಾಷಾಂತರಪದವು ’ಉದಕಮ್’ ಎಂಬ ಶಬ್ದದಿಂದ ಸೂಚಿಸಲ್ಪಡುವ ವಸ್ತುವನ್ನು ನಿರ್ದೇಶಿಸುತ್ತದೆಯೇ ಹೊರತು ಮೂಲ ಶಬ್ದ ತಿಳಿಸಿಕೊಡುವ ’ಒದ್ದೆ ಮಾಡುವ ಗುಣವುಳ್ಳದ್ದು’ ಎಂಬ ಅರ್ಥವನ್ನು ಹೇಳುವುದಿಲ್ಲ. ಅದೇ ರೀತಿಯಲ್ಲಿ ’ರಿಲಿಜನ್’ ಎಂಬ ಆಂಗ್ಲಪದವನ್ನು ಕನ್ನಡಕ್ಕೆ ಅಥವಾ ಭಾರತೀಯ ಭಾಷೆಗಳಿಗೆ ಭಾಷಾಂತರಿಸುವಾಗ ಬೇರೆ ಬೇರೆಯವರು ಬೇರೆ ಬೇರೆ ಶಬ್ದಗಳನ್ನು ಉಪಯೋಗಿಸುತ್ತಾರೆ. ಕೆಲವರು ’ಮತ’ ಎಂದರು, ಇನ್ನು ಕೆಲವರು ’ಧರ್ಮ’ ಎಂದರು. ’ಮತ’ ಎಂಬ ಶಬ್ದಕ್ಕೆ ’ಜ್ಞಾನ’ ಎಂದರ್ಥ. ’ಅಭಿಪ್ರಾಯ’ ಎಂಬರ್ಥದಲ್ಲಿಯೂ ಇದರ ಬಳಕೆ ಇದೆ. ಹಾಗಾದರೆ ಮುಸ್ಲಿಂ, ಕ್ರಿಶ್ಚಿಯನ್ ಇತ್ಯಾದಿಗಳನ್ನು ಮತಗಳು ಎಂದು ಹೇಳಬಹುದೆ?
’ರಿಲಿಜನ್’ ಎಂಬ ಶಬ್ದಕ್ಕೆ ಧರ್ಮ ಎಂಬ ಶಬ್ದದ ಬಳಕೆಯನ್ನು ಬಹಳ ಮಂದಿ ವಿರೋಧಿಸುತ್ತಾರೆ. ಧರ್ಮ ಪದದ ವ್ಯಾಪ್ತಿ ಅತ್ಯಂತ ವಿಶಾಲವಾದದ್ದು ಎಂಬುದು ಅದಕ್ಕೆ ಕಾರಣ. ’ಧಾರಣಾತ್ ಧರ್ಮ ಇತ್ಯಾಹು:’ ಎಂಬುದು ಧರ್ಮ ಪದಕ್ಕೆ ಪ್ರಾಜ್ಞರು ಕೊಟ್ಟಿರುವ ವ್ಯಾಖ್ಯೆ. ಅಂದರೆ ಧರಿಸಲು ಯೋಗ್ಯವಾಗಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾದದ್ದು ಎಂದರ್ಥ. ಸುಡುವುದು ಬೆಂಕಿಯ ಧರ್ಮ ಎಂಬಲ್ಲಿ ಧರ್ಮ ಶಬ್ದಕ್ಕೆ ’ಸ್ವಭಾವ’ ಎಂದರ್ಥ. ಜ್ಞಾನಾರ್ಜನೆ ವಿದ್ಯಾರ್ಥಿಯ ಧರ್ಮ ಎಂಬಲ್ಲಿ ಈ ಶಬ್ದವೇ ’ಕರ್ತವ್ಯ’ ಎಂಬರ್ಥವನ್ನು ಕೊಡುತ್ತದೆ. ನನ್ನ ಅಭಿಪ್ರಾಯದಲ್ಲಿ ಈ ಎಲ್ಲ ಅರ್ಥಗಳನ್ನು ’ರಿಲಿಜನ್’ ಗೆ ಅನ್ವಯಿಸಬಹುದು. ಯಾವುದೇ ರಿಲಿಜನ್ ಜೀವನದಲ್ಲಿ ಮಾಡಬಾರದ ಕೆಲಸಗಳನ್ನು ಮಾಡಲು ಹೇಳುವುದಿಲ್ಲ. ಮಾನವತೆ, ಸಚ್ಚಾರಿತ್ರ್ಯ ಮುಂತಾದ ಸದ್ಗುಣಗಳನ್ನೇ ಎಲ್ಲ ರಿಲಿಜನ್‌ಗಳೂ ಬೋಧಿಸುತ್ತವೆ. ಹಿಂಸೆಯನ್ನು ಯಾವುದಾದರೂ ರಿಲಿಜನ್ ಬೋಧಿಸುತ್ತದೆ ಎಂದು ಯಾರಾದರೂ ಹೇಳಿದರೆ ಅದು ಅರ್ಥೈಸಿಕೊಳ್ಳುವಿಕೆಯಲ್ಲಿರುವ ದೋಷ. ಅಂದರೆ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಒಳ್ಳೆಯ ಗುಣಗಳನ್ನು ಬೋಧಿಸುವುದೇ ಎಲ್ಲ ರಿಲಿಜನ್‌ಗಳ ಉದ್ದೇಶ. ಇನ್ನೊಂದರ್ಥದಲ್ಲಿ ಎಲ್ಲ ರಿಲಿಜನ್‌ಗಳು ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾದವುಗಳೇ. ಹಾಗಾಗಿ ಅವು ’ಧರ್ಮ’.
’ಸ್ವಭಾವ’ ಶಬ್ದಕ್ಕೆ ಸ್ವ ಭಾವ ಅಂದರೆ ತನ್ನ ಭಾವ ಎಂದರ್ಥ. ನಾನು ಹಾಗೂ ನನ್ನ ಭಾವ ಬೇರ್ಪಡಲು ಸಾಧ್ಯವಿಲ್ಲ. ಹಾಗೆಯೇ ರಿಲಿಜನ್‌ನಲ್ಲಿ ಹೇಳಿರುವ ವಿಚಾರಗಳು ನಮ್ಮ ಜೀವದಲ್ಲಿ ಪ್ರತ್ಯೇಕವಾಗಿ ಇರಬಾರದು ಅದು ನಮ್ಮ ಸ್ವಭಾವವೇ ಆಗಬೇಕು ಹಾಗಾಗಿ ರಿಲಿಜನ್ ಕೂಡ ಧರ್ಮ.
ರಿಲಿಜನ್ ನಮಗೆ ನಮ್ಮ ಕರ್ತವ್ಯವನ್ನು ತಿಳಿಸಿಕೊಡುತ್ತದೆ. ರಿಲಿಜನ್ನಿನಲ್ಲಿರುವ ಆಚರಣೆಗಳು ಐಚ್ಛಿಕ ಅಂತಿದ್ದರೂ ನಿಜವಾಗಿ ಅವು ಅನಿವಾರ್ಯವಾಗಿ ಮಾಡಬೇಕಾದ ಆಚರಣೆಗಳು. ಅವು ನಮ್ಮ ಕರ್ತವ್ಯದ ಒಂದು ಭಾಗ. ಈ ಅರ್ಥದಲ್ಲಿಯೂ ರಿಲಿಜನ್ ಧರ್ಮ.
ಹೀಗೆಂದಾಕ್ಷಣ ’ಧರ್ಮ’ ಎಂಬ ಪದವನ್ನು ’ರಿಲಿಜನ್’ ಎಂದು ಭಾಷಾಂತರಿಸಬಹುದು ಎಂಬುದು ನನ್ನ ಅಭಿಪ್ರಾಯವಲ್ಲ. ಧರ್ಮ ಶಬ್ದದ ವ್ಯಾಪ್ತಿ ’ರಿಲಿಜನ್’ ಎಂಬ ಶಬ್ದದ ವ್ಯಾಪ್ತಿಗಿಂತ ಬಹಳ ವಿಶಾಲವಾದದ್ದು. ಒಂದರ್ಥದಲ್ಲಿ ’ಧರ್ಮ’ ಎಂಬ ಪದವು ಭಾಷಾಂತರಿಸಲು ಸಾಧ್ಯವಿಲ್ಲದ ಪದ. ಆದರೆ ರಿಲಿಜನ್ ಪದವನ್ನು ಧರ್ಮ ಎಂದು ಭಾಷಾಂತರಿಸಲು ಅಡ್ಡಿಯಿಲ್ಲ ಎಂಬುದು ನನ್ನ ಅಭಿಪ್ರಾಯ.
ಇಸ್ಲಾಂ, ಕ್ರಿಶ್ಚಿಯಾನಿಟಿ, ಜೂಡಾಯಿಸಂ ಗಳು ಮಾತ್ರ ರಿಲಿಜನ್ನುಗಳು, ಹಿಂದೂ, ಬೌದ್ಧ ಇವೆಲ್ಲ ರಿಲಿಜನ್ನುಗಳಲ್ಲ ಎಂಬ ವಾದವೂ ಕೂಡ ಚರ್ಚಾಸ್ಪದ. ಯಾಕೆಂದರೆ ಈ ವಾದವನ್ನು ಹೂಡುವವರು ಹಿಂದೂಗಳು ಮಾತ್ರ. ಅದಕ್ಕೆ ಕಾರಣ ಉಳಿದೆಲ್ಲ ರಿಲಿಜನ್ನುಗಳು ಒಬ್ಬ ವ್ಯಕ್ತಿಯಿಂದ ಆರಂಭಿಸಲ್ಪಟ್ಟಂಥವು ಎಂಬುದೆ ಇರಬಹುದು. ವ್ಯತ್ಯಾಸ ಇಷ್ಟೆ ನಾವು ದೇವರಿಂದಲೇ ಧರ್ಮ ಆರಂಭಿಸಲ್ಪಟ್ಟಿತು ಎಂದು ಹೇಳುತ್ತೇವೆ. ಅವರು ಧರ್ಮವನ್ನು ಆರಂಭಿಸಿದವರನ್ನೇ ದೇವರೆಂದು ನಂಬುತ್ತಾರೆ. ಹಿಂದೂ ಎಂಬುದು ಒಂದು ’ಸಂಪ್ರದಾಯ’ ಎಂದು ಹೇಳಿದರೂ ಅದು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ’ಕೊಡಲ್ಪಟ್ಟ’ (ಸಂ-ಪ್ರದಾಯ) ಜೀವನಪದ್ಧತಿ ಎಂಬಷ್ಟೇ ಅರ್ಥವನ್ನು ಕೊಡುತ್ತದೆ. ಆಗ ಭಾಗವತ ಸಂಪ್ರದಾಯ, ಶೈವ ಸಂಪ್ರದಾಯ ಇವೆಲ್ಲ ಸ್ವತಂತ್ರವಾಗಿ ’ಹಿಂದೂ’ ಎಂಬ ಒಂದೇ ಛತ್ರದಡಿ ಬರುವುದಿಲ್ಲ. ಅಷ್ಟೇ ಅಲ್ಲ ಈ ಹಿಂದೂ ಎಂಬ ಪದ ಇತ್ತೀಚಿನದ್ದು. ’ವೈದಿಕ ಧರ್ಮ’ವೇ ಕೆಲವು ಬದಲಾವಣೆಗಳೊಂದಿಗೆ ಹಿಂದೂ ಧರ್ಮವಾಗಿ ಅನುಸರಿಸಲ್ಪಡುತ್ತದೆ. ಭಾರತದಲ್ಲಿರುವ ಎಲ್ಲ ಸಾಮ್ಯತೆ ಇರುವ ಸಂಪ್ರದಾಯಗಳನ್ನು ಒಟ್ಟುಗೂಡಿಸಿ ’ಹಿಂದೂಯಿಸಂ’ ಎಂದು ಕರೆದರೆ ಅದು ತಪ್ಪೇನಲ್ಲ. ಈಗ ಕ್ರಿಶ್ಚಿಯಾನಿಟಿ, ಇಸ್ಲಾಂ ಮುಂತಾದ ರಿಲಿಜನ್ನುಗಳ ಮಧ್ಯೆ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ’ಹಿಂದೂ’ ಜೀವನಪದ್ಧತಿಗೂ ’ರಿಲಿಜನ್’ ರೂಪನೀಡಿ ವ್ಯವಸ್ಥಿತ ಸಂಘಟನೆಯನ್ನಾಗಿ ಮಾಡುವುದು ಆವಶ್ಯಕವೇನೋ ಎನಿಸುತ್ತದೆ.
ಹಿಂದೂಗಳ ಧರ್ಮಗ್ರಂಥ ಭಗವದ್ಗೀತೆ ಎಂದು ಉದ್ಘೋಷಿಸಿದವರಾರೋ ಗೊತ್ತಿಲ್ಲ. ಪ್ರಾಯಶ: ವಿವೇಕಾನಂದರು ಚಿಕಾಗೊ ಸಮ್ಮೇಳನದಲ್ಲಿ ಭಗವದ್ಗೀತೆಯು ಹಿಂದೂಗಳ ಪವಿತ್ರ ಗ್ರಂಥ ಎಂದು ಪ್ರತಿಪಾದಿಸಿರುವುದರಿಂದ ಎಲ್ಲರಲ್ಲಿಯೂ ಆ ಅಭಿಪ್ರಾಯ ಮೂಡಿರಬೇಕು. ಭಗವದ್ಗೀತೆ ಒಂದು ಸ್ವತಂತ್ರ ಗ್ರಂಥವಲ್ಲ ಅದು ಮಹಾಭಾರತದ ಒಂದು ಚಿಕ್ಕ ಭಾಗ ಎಂಬುದನ್ನು ನಾವು ಗಮನಿಸಬೇಕು. ಭಗವದ್ಗೀತೆಯಲ್ಲಿ ಹೇಳಿರುವ ವಿಚಾರಗಳು ವೇದಗಳಲ್ಲೂ ಉಪನಿಷತ್ತುಗಳಲ್ಲೂ, ಬ್ರಹ್ಮಸೂತ್ರಗಳಲ್ಲೂ ಪುರಾಣಾದಿಗ್ರಂಥಗಳಲ್ಲೂ ಕಾಣಸಿಗುತ್ತವೆ. ಅಂತಿರುವಾಗ ಭಗವದ್ಗೀತೆಯೊಂದನ್ನೇ ಅದು ಭಗವಾನ್ ಕೃಷ್ಣನಿಂದಲೇ ಉಪದಿಷ್ಟವಾದದ್ದು ಎಂಬ ಒಂದೇ ಕಾರಣಕ್ಕಾಗಿ ಹಿಂದೂಗಳ ಪವಿತ್ರ ಗ್ರಂಥ ಎಂದು ಹೇಳುವುದು ಸರಿಯಲ್ಲ.
ಭಗವದ್ಗೀತೆಯನ್ನೂ ಕುರಾನನ್ನೂ ಬೈಬಲ್ಲನ್ನೂ ಶಾಲೆಗಳಲ್ಲಿ ಖಂಡಿತವಾಗಿಯೂ ಬೋಧಿಸಬಹುದು. ಮಾನವ ಜೀವನಕ್ಕೆ ಬೇಕಾದ ಎಲ್ಲ ಮೌಲ್ಯಗಳೂ ಈ ಗ್ರಂಥಗಳಲ್ಲಿವೆ. ಆದರೆ ಬೋಧಿಸುವಾಗ ಎಚ್ಚರವಹಿಸುವುದು ಅವಶ್ಯ. ಅಲ್ಲಿರುವ ದೇವರ ಸ್ತುತಿ, ಆಚರಣೆಯ ವಿಧಾನ ಪೂಜೆಯ ಪದ್ಧತಿ ಇತ್ಯಾದಿಗಳನ್ನು ಬೋಧಿಸುವ ಅವಶ್ಯಕತೆಯಿಲ್ಲ. ಯಾವುದನ್ನೇ ಬೋಧಿಸುವಾಗಲೂ ಇದು ಉಳಿದೆಲ್ಲವುದಕ್ಕಿಂತ ಶ್ರೇಷ್ಠ ಉಳಿದವೆಲ್ಲ ಕನಿಷ್ಠ ಎಂಬ ಭಾವ ಬರದಂತೆ ನೋಡಿಕೊಳ್ಳುವುದು ಅನಿವಾರ್ಯ. ಜೀಸಸ್ ಈಸ್ ಗ್ರೇಟ್, ಅಲ್ಲಾ ಹೋ ಅಕ್ಬರ್, ಹರಿಯೇ ಸರ್ವೋತ್ತಮ ಮುಂತಾದ ವಾಕ್ಯಗಳೆಲ್ಲ ಅಲ್ಲಿ ಬರದಂತೆ ನೋಡಿಕೊಳ್ಳಬೇಕು. ಧರ್ಮಗ್ರಂಥಗಳಲ್ಲಿರುವ ಮೌಲ್ಯವನ್ನು ಅನೌಪಚಾರಿಕವಾಗಿ ಆ ಧರ್ಮಕ್ಕೆ, ಧರ್ಮಗ್ರಂಥಕ್ಕೆ ಹೆಚ್ಚು ಒತ್ತು ಕೊಡದೆ ಮತಾಂತರ ಮಾಡುವ ಉದ್ದೇಶ ಇಲ್ಲದೆ ಬೋಧಿಸಬೇಕು. ಅಭಿಯಾನಗಳ ಹಿಂದೆ ಮೌಲ್ಯ ಪ್ರತಿಪಾದನೆಯ ಜೊತೆಗೆ ಇರುವ ಆ ಗ್ರಂಥಕ್ಕೆ ಪ್ರಚಾರ ಒದಗಿಸಬೇಕೆಂಬ ಸಣ್ಣ ಉದ್ದೇಶ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ.
ಭಗವದ್ಗೀತೆ ಅನೇಕ ಮಾರ್ಗಗಳನ್ನು ಒಂದೆಡೆ ತಂದು ಆಯ್ಕೆಯನ್ನು ಸಾಧಕನಿಗೆ ಬಿಡುತ್ತದೆ. ಹಾಗಾಗಿ ಯಾರಾದರೂ ಭಗವದ್ಗೀತೆಯನ್ನು ಅನುಸರಿಸಬಹುದು. ಅದು ’ಹಿಂದುಯಿಸಂ’ನ್ನು ಬೋಧಿಸುವುದಿಲ್ಲ ಎಂಬ ಅಭಿಪ್ರಾಯವನ್ನು ಲೇಖಕರು ವ್ಯಕ್ತಪಡಿಸಿದ್ದಾರೆ. ಆನಂದವನ್ನು ಹೊಂದುವುದೇ ಭಗವದ್ಗೀತೆಯಲ್ಲಿ ಪ್ರತಿಪಾದಿತವಾದ ಮಾರ್ಗಗಳ ಗುರಿಯಾದರೂ ಆನಂದಾನ್ವೇಷಿಗಳಾದ ಕ್ರೈಸ್ತರಾಗಲೀ, ಮುಸ್ಲೀಮರಾಗಲೀ ತಮ್ಮ ಹಾದಿಯನ್ನು ಕಂಡುಕೊಳ್ಳಲು ಭಗವದ್ಗೀತೆಯನ್ನು ಆಶ್ರಯಿಸುವುದಿಲ್ಲ (ಇದಕ್ಕೆ ಅಪವಾದರೂಪವಾಗಿ ಬೆರಣಿಕೆಯಷ್ಟು ಮಂದಿ ಇರಬಹುದು). ಇದಕ್ಕೆ ಕಾರಣ ಅವರಿಗೆ ತಮ್ಮ ಧರ್ಮಗ್ರಂಥಗಳೇ ಮಾರ್ಗದರ್ಶನ ಮಾಡಲು ಸಮರ್ಥವಾಗಿವೆ ಎಂಬ ನಂಬಿಕೆಯಿರುತ್ತದೆ. ಅಷ್ಟೇ ಅಲ್ಲ ಭಗವದ್ಗೀತೆಯ ಹಿನ್ನೆಲೆಯಲ್ಲಿ ಹಿಂದೂಗಳು ಪೂಜಿಸುವ ’ಕೃಷ್ಣ’ ಎಂಬ ದೇವನಿದ್ದಾನೆ. ಅವನು ’ತಾನೇ ಪರಮಾತ್ಮ ಎಲ್ಲ ಧರ್ಮಗಳನ್ನೂ ಪರಿತ್ಯಜಿಸಿ ನನಗೇ ಶರಣು ಬಾ, ನನಗೇ ನಮಸ್ಕಾರ ಮಾಡು, ನಾನು ನಿನ್ನನ್ನು ಉದ್ಧರಿಸುತ್ತೇನೆ.’ ಎಂದೆಲ್ಲ ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದಾನೆ. ಅಂತಿರುವಾಗ ಬೇರೆ ರಿಲಿಜನ್ನಿನವರಿಗೆ ಇದು ಹಿಂದೂಗಳ ಪವಿತ್ರ ಗ್ರಂಥ, ಅದನ್ನು ಅನುಸರಿಸಿದರೆ ನಮ್ಮ ರಿಲಿಜನ್ನಿಗೆ ದ್ರೋಹ ಬಗೆದಂತಾಗುತ್ತದೆ ಎಂದು ಅನಿಸುವುದು ಸಹಜ ತಾನೆ?
ಒಂದು ಕಹಿಯಾದರೂ ಸತ್ಯವಾದ ವಿಚಾರವನ್ನು ಪ್ರತಿಪಾದಿಸಲೇಬೇಕಾಗಿದೆ. ದೇಶಕ್ಕಾಗಿ ಹೋರಾಡುವುದು, ದೇಶಕ್ಕಾಗಿ ಕೆಲಸಮಾಡುವುದು ಇವುಗಳ ಜೊತೆಗೆ ಈ ದೇಶದಲ್ಲಿ ಅನೇಕ ಶತಮಾನಗಳಿಂದ ನಡೆದುಬಂದ ಸಂಸ್ಕೃತಿ ಸಂಪ್ರದಾಯಗಳನ್ನು ತಿಳಿದುಕೊಳ್ಳುವುದು, ಗೌರವಿಸುವುದು, ಪುರಾತನವಾದ ಗ್ರಂಥಗಳ, ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವುದೂ ದೇಶಭಕ್ತಿಯ ಅಂಗ. ರಾಮಾಯಣ ಮಹಾಭಾರತ, ವೇದ ಪುರಾಣಗಳು ಸಂಸ್ಕೃತ ಭಾಷೆ ಇವೆಲ್ಲ ಕೇವಲ ಹಿಂದೂಗಳ ಸ್ವತ್ತಲ್ಲ. ಅದು ಭಾರತೀಯರೆಲ್ಲರ ಆಸ್ತಿ. ಹಿಂದೂಗಳು ಅವುಗಳನ್ನು ಪಠಿಸುತ್ತಿರಬಹುದು ಅಥವಾ ಅವುಗಳನ್ನು ಅನುಸರಿಸುತ್ತಿರಬಹುದು ಹಾಗೆಂದಾಕ್ಷಣ ಭಾರತದಲ್ಲಿ ಹುಟ್ಟಿದ, ತಾನೊಬ್ಬ ಭಾರತೀಯ ಪ್ರಜೆ ಎಂದುಕೊಳ್ಳುತ್ತಿರುವ ಕ್ರೈಸ್ತನಾಗಲೀ, ಮುಸ್ಲೀಮನಾಗಲಿ ಅದನ್ನು ತಾನು ಓದುವ ಗೌರವಿಸುವ ಆವಶ್ಯಕತೆಯಿಲ್ಲ ಎಂದರೆ ಅದು ದೇಶದ್ರೋಹದ ಮಾತೇ ಆದೀತು. ಇನ್ನ್ಯಾವುದೋ ದೇಶದ ಸಂಸ್ಕೃತಿಯನ್ನು, ಮತ್ತ್ಯಾವುದೋ ದೇಶದಲ್ಲಿ ಹುಟ್ಟಿದ ರಿಲಿಜನ್ನನ್ನು ಅನುಸರಿಸಿಸುವುದು ತಪ್ಪಲ್ಲ. ಆದರೆ ಅದು ಅನಿವಾರ್ಯವಲ್ಲ. ಈ ದೇಶದ ಪ್ರಜೆಯಾಗಿ ಈ ದೇಶದ ಸಂಸ್ಕೃತಿಯ ಕನ್ನಡಿಗಳಂತಿರುವ ಗ್ರಂಥಗಳನ್ನೂ ವೈಚಾರಿಕ ಸರಣಿಯನ್ನೂ ಆಚರಿಸದಿದ್ದರೂ ವಿರೋಧಿಸದೆ ಗೌರವಿಸುವುದು ಎಲ್ಲ ರಿಲಿಜನ್ನುಗಳ ಬಂಧುಗಳ ಕರ್ತವ್ಯವೇ ಹೌದು. ಅದಿಲ್ಲದಿದ್ದರೆ ಅದು ಅವರ ಭಾರತೀಯತೆಗೆ ಕುಂದು ತರುವುದು ಕಹಿಯಾದರೂ ಸತ್ಯ.

ಲೇಖಕರು:
ಮಹಾಬಲ ಭಟ್, ಸಂಸ್ಕೃತ ಉಪನ್ಯಾಸಕರು, ಗೋವಾ