Friday, April 8, 2011

ಸಂಸ್ಕೃತದಲ್ಲಿ ಹಾಸ್ಯ

- ಮಹಾಬಲ ಭಟ್, ಗೋವಾ.೦೯೮೬೦೦೬೦೩೭೩

ಇದೇನ್ ಸ್ವಾಮಿ ದೇವಭಾಷೆಯಲ್ಲೂ ಹಾಸ್ಯ ಮಾಡಲಿಕ್ ಬರ‍್ತದಾ ಎಂದು ಹುಬ್ಬೇರಿಸಬೇಡಿ. ನವರಸಗಳಲ್ಲಿ ಹಾಸ್ಯವೂ ಒಂದು ತಾನೆ? ಸಂಸ್ಕೃತಭಾಷೆ ನವರಸ ಭರಿತವಾದದ್ದರಿಂದ ಇಲ್ಲಿ ಹಾಸ್ಯವೂ ಇರಲೇಬೇಕು. ಜನಸಾಮಾನ್ಯರಿಗೂ ವಿನೋದವನ್ನು ನೀಡುವ ಈ ರಸವನ್ನು ಹೀರುವುದೆಂದರೆ ಎಲ್ಲರಿಗೂ ಹಿಗ್ಗು. ಸಂಸ್ಕೃತದಲ್ಲಿ ಅನೇಕ ಹಾಸ್ಯ ಶ್ಲೋಕಗಳಿವೆ. ಆದರೆ ಅವುಗಳಲ್ಲಿ ಮೇಲ್ನೋಟಕ್ಕೇ ಹಾಸ್ಯ ಗೋಚರವಾಗುತ್ತದೆಂದಿಲ್ಲ. ಕೆಲವೊಂದು ಶ್ಲೋಕಗಳ ಮರ್ಮ ಭಾಷಾಂತರಕ್ಕೆ ನಿಲುಕಲಾರದು. ಆದರೂ ಕೆಲವನ್ನು ಆರಿಸಿ ಉದಾಹರಿಸಿ, ಭಾಷಾಂತರಿಸಿ, ನಿಮ್ಮ ಮುಂದಿರಿಸುವ ಪ್ರಯತ್ನ ಮಾಡ್ತೇನೆ. ಈ ಶ್ಲೋಕಗಳಲ್ಲಿ ಕೇವಲ ಮನಕ್ಕೆ ಮುದನೀಡುವ ಹಾಸ್ಯ ಒಂದೇ ಅಲ್ಲದೆ ಚಿಂತನೆಯ ಕಿಚ್ಚು ಹಚ್ಚುವ ವಿಡಂಬನೆಯೂ ಸೇರಿದೆ.

ನನ್ನ ಲೇಖನವನ್ನು ಎಲ್ಲರಿಗೂ ಪ್ರಿಯವಾದ ವಿವಾಹದೊಂದಿಗೇ ಆರಂಭಿಸುತ್ತೇನೆ. ಇದು ಮನುಷ್ಯರ ವಿವಾಹದ ಕತೆಯಲ್ಲ, ಒಂಟೆಗಳ ವಿವಾಹದ ಕಥೆ.

ಉಷ್ಟ್ರಾಣಾಂ ಚ ವಿವಾಹೇಷು ಗೀತಂ ಗಾಯಂತಿ ಗರ್ದಭಾ:|
ಪರಸ್ಪರಂ ಪ್ರಶಂಸಂತಿ ಅಹೋರೂಪಮಹೋ ಧ್ವನಿ:||

ಒಂಟೆಗಳ ಮದುವೆಯಲ್ಲಿ ಕತ್ತೆಗಳ ಹಾಡಂತೆ. ಕತ್ತೆ ಒಂಟೆಯ ನೋಡಿ ಹಾಡಿತು- ’ಹಾ ಎಂಥಾರೂಪ!’ ಕತ್ತೆಯ ಧ್ವನಿ ಕೇಳಿ ಒಂಟೆ ಹೇಳಿತು, ’ಆಹಾ! ಎಂಥ(ಸುಮಧುರ) ಧ್ವನಿ !!’ ಹೇಗಿದೆ ಪರಸ್ಪರ ಪ್ರಶಂಸೆ?. ಮದುವೆ ವಿಷಯ ಬಂದಾಗ ಅಳಿಯನ ವಿಷ್ಯಾನೂ ಮಾತಾಡ್ಲೇ ಬೇಕು. ಅಳಿಯನ್ನ ಹತ್ತನೇ ಗ್ರಹ ಅಂತ ಕರೀತಾರೆ ಅಂತ ನಿಮಗೆಲ್ಲ ಗೊತ್ತು. ಆದರೆ ಈ ಗ್ರಹದ ವೈಶಿಷ್ಟ್ಯ ಗೊತ್ತೆ?

ಸದಾ ದುಷ್ಟ: ಸದಾ ರುಷ್ಟ: ಸದಾ ಪೂಜಾಮಪೇಕ್ಷತೇ|
ಕನ್ಯಾರಾಶಿ ಸ್ಥಿತೋ ನಿತ್ಯಂ ಜಾಮಾತಾ ದಶಮೋ ಗ್ರಹಃ||

ನವಗ್ರಹಗಳಲ್ಲಿ ಎಲ್ಲವೂ ಯಾವಾಗಲೂ ದುಷ್ಟವಲ. ಆದರೆ ಇವನು ಮಾತ್ರ ಸದಾ ದುಷ್ಟ. ಉಳಿದ ಗ್ರಹಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ಸಿಟ್ಟಾದರೆ ಇವನು ಮಾತ್ರ ಯಾವಾಗ ಕೋಪಿಷ್ಟ. ಉಳಿದ ಗ್ರಹಗಳು ಯಾವಾಗಲೂ ಪೂಜೆಯನ್ನು ಅಪೇಕ್ಷಿಸುವುದಿಲ್ಲ. ಆದರೆ ಇವನಿಗೆ ಮಾತ್ರ ಸದಾ ಪೂಜೆ ಬೇಕು. ಬಾಕಿ ಗ್ರಹಗಳು ರಾಶಿಯಿಂದ ರಾಶಿಗೆ ಚಲಿಸಿದರೆ ಈ ಗ್ರಹಮಾತ್ರ ’ಕನ್ಯಾ’ ರಾಶಿಯಲ್ಲೇ ನಿಶ್ಚಲ. ’ಅಳಿಯ ಮನೆ ತೊಳೆಯ’ ಅಲ್ಲವೆ?.

ಮುಖ ತೊಳೆದ ಮೇಲೆ ನಾವು ದೇವರಿಗೆ ಕೈ ಮುಗೀತೇವೆ. ನಾನಂತೂ ಗಣಪತಿಗೆ ಕೈ ಮುಗೀತೇನೆ. ಅಲ್ಲ ಮಾರಾಯ್ರೇ ಈ ದೇವರು ಗಣೇಶ ಬೆಕ್ಕಿಗೆ ಕೈ ಮುಗೀತಾನಂತೆ ಯಾಕೆ ಗೊತ್ತಾ?

ಗಣೇಶ: ಸ್ತೌತಿ ಮಾರ್ಜಾರಂ ಸ್ವವಾಹಸ್ಯಾಭಿರಕ್ಷಣೇ|

ಗೊತ್ತಾಗ್ಲಿಲ್ವಾ? ಅವನ ವಾಹನ ಇಲಿ ಅಲ್ವೇನ್ರಿ! ಅದರ ರಕ್ಷಣೆ ಆಗ ಬೇಕು ಅಂತಾದರೆ ಬೆಕ್ಕಿಗೆ ಶರಣಾಗಬೇಕು ತಾನೆ?. ನಮ್ಮ ಜನ ದೇವ್ರನ್ನೂ ತಗೊಂಡೇ ವಿನೋದ ಮಾಡ್ತಾರೆ ನೋಡಿ. ನೀವು ಲಕ್ಷ್ಮೀದೇವಿ ಚಿತ್ರ ನೋಡಿದ್ದೀರಿ ತಾನೆ?. ಅವಳಿರೋದು ಎಲ್ಲಿ? ಕಮಲದ ಹೂವಿನ ಮೇಲೆ, ಶಿವ ಇರೋದೆಲ್ಲಿ? ಹಿಮದ ಆಲಯದಲಿ, ವಿಷ್ಣು ಮಲಗೋದೆಲ್ಲಿ? ಕ್ಷೀರಸಾಗರದಲಿ. ಇವರೆಲ್ಲ ಯಾಕೆ ನೆಲದ ಮೇಲೆ ಹಾಸಿಗೆ ಹಾಸಿ ಮಲಗೋದಿಲ್ಲ ಗೊತ್ತಾ?.


ಕಮಲೇ ಕಮಲಾ ಶೇತೇ ಹರ: ಶೇತೇ ಹಿಮಾಲಯೇ
ಕ್ಷೀರಾಬ್ದೌ ಚ ಹರಿ: ಶೇತೇ ಮನ್ಯೇ ಮತ್ಕುಣಶಂಕಯಾ|

ಉತ್ತರ ತಿಳೀಲಿಲ್ವಾ? ತಿಗಣೆಗೆ ಹೆದರಿ ಸ್ವಾಮಿ!. ಹೋಗ್ಲಿ ಬಿಡಿ ದೇವರು ಸಿಟ್ಟಾದಾನು. ಸರಕಾರಿ ಕೆಲಸ ದೇವರ ಕೆಲಸ ಅಂತ ಎಲ್ಲೋ ಓದಿದ್ದ ನೆನಪು. ನಾನು ಒಂದಿನ ದೇವಸ್ಥಾನಕ್ಕೆ ಹೋಗೋ ಬದ್ಲು ಸರಕಾರಿ ಕಛೇರಿಗೆ ಹೋಗ್ಬಿಟ್ಟಿದ್ದೆ. ನಾ ಓದಿದ್ದು ಸುಳ್ಳಲ್ಲ ಅನ್ನಿಸ್ತು ನನಗೆ. ಯಾಕೆಂದ್ರೆ ಅಲ್ಲಿರುವವರೆಲ್ಲ ’ಪ್ರಸಾದ’ .ತಿನ್ನೋದರಲ್ಲಿ ಬಹಳಾ ನಿಪುಣರು. ಅದರೊಳಗೊಬ್ಬ ಗುಮಾಸ್ತ ಅಂತೂ ತಿನ್ನೋದ್ರೊಳಗೆ ಬಹಳಾ ಬುದ್ಧಿವಂತ. ಇವನು ತಾಯಿ ಹೊಟ್ಟೇಲಿರುವಾಗ ಅವಳ ಕರುಳನ್ನೇ ಯಾಕೆ ತಿನ್ನಿಲ್ಲ ಅಂತ ಆಶ್ಚರ್ಯ ಆಯ್ತು. ಛೆ! ತಾಯಿಗಿಂತ ದೇವರಿಲ್ಲ ಅಲ್ವೆ? ಅಲ್ಲಲ್ಲ.... ಅದಕ್ಕಾಗಿ ಅಲ್ಲ....

ಕಾಯಸ್ಥೇನೋದರಸ್ಥೇನ ಮಾತುರಾಮಿಷಶಂಕಯಾ |
ಆಂತ್ರಾಣಿ ಯನ್ನ ಭುಕ್ತಾನಿ ತತ್ರ ಹೇತುರದಂತತಾ ||

ಆಗ ಅವನಿಗೆ ಹಲ್ಲೆಲ್ಲಿತ್ತು ಸರ್!. ಸುಲಭವಾಗಿ ಧನಸಂಪಾದನೆ ಮಾಡೋ ಇಂಥಾ ಉದ್ಯೋಗ ಇರಬೇಕು ನೋಡಿ. ನಮ್ಮ ಅದೃಷ್ಟ ಬೆಕ್ಕಿನ ಹಾಗೆ ಇರಬೇಕಂತೆ. ಈ ಶ್ಲೋಕ ಹಾಗೂ ಅದಕ್ಕೆ ಪಾ.ವೆಂ. ಆಚಾರ್ಯರು
ಮಾಡಿದ ಸೊಗಸಾದ ಭಾಷಾಂತರ ನೋಡಿ.

ಉದ್ಯೋಗ: ಖಲು ಕರ್ತವ್ಯ: ಫಲಂ ಮಾರ್ಜಾರವದ್ಭವೇತ್ |
ಜನ್ಮಪ್ರಭೃತಿ ಗೌರ್ನಾಸ್ತಿ ಪಯ: ಪಿಬತಿ ನಿತ್ಯಶಃ ||

ಬಿಡದೆ ಸಾಧನೆ ಮಾಡು ಮಾರ್ಜಾಲವನು ನೋಡು;
ಹಸುವ ಸಾಕಿದೆಯೆ ಅದು ನಿತ್ಯ ಕುಡಿಯದೆ ಹಾಲು?..

ಕನ್ನಡದ ರಸಋಷಿ ಡಿ.ವಿ.ಗುಂಡಪ್ಪನವರು ಕೃಷ್ಣಾಚಾರ್ಯರೆಂಬ ಸಜ್ಜನ ಮಾಧ್ವರನ್ನು ವ್ಯಾಕರಣ ಕಲಿಯುವುದಕ್ಕಾಗಿ ಆಶ್ರಯಿಸಿದ್ದರಂತೆ. ಅವರು ತನಗೆ ವ್ಯಾಕರಣ ವೇದಾಂತಗಳು ತಲೆಗೆ ಹತ್ತಲಿಲ್ಲ, ಆದರೆ ಕೃಷ್ಣಾಚಾರ್ಯರ ಮನೆಯ ಅಡಿಗೆಯ ರುಚಿ ನಾಲಿಗೆಗೆ ಹತ್ತಿತು ಎಂಬುದನ್ನು ಸಂಸ್ಕೃತ-ಕನ್ನಡಮಿಶ್ರಿತ ಶ್ಲೋಕದಲ್ಲಿ ಹೇಳಿದ ಅಂದವನ್ನು ನೋಡಿ.

ನ ವೇದಾಂತೇ ಗಾಢಾ ನ ಚ ಪರಿಚಿತಂ ಶಬ್ದಶಾಸ್ತ್ರಂ
ನ ವಾ ತರ್ಕೇ ವೇದೇ ನ ಚ ಸರಸತಾ ಕಾವ್ಯನಿವಹೇ |
ವಯಂ ಶ್ರೀಮದ್ಬ್ಯಾಳೀಹುಳಿಪಳದ್ಯಕೊಸಂಬ್ರಿತೊವ್ವೀ
ಹಯಗ್ರೀವಾಂಬೋಡೀಕರಿಗಡುಬುಚಿತ್ರಾನ್ನಚತುರಾ: ||

ಸಾಕು ಮುಗಿಸಿ ಮಾರಾಯ್ರೆ ನಿಮ್ಮ ಪುರಾಣ ಅನ್ನೋದಕ್ಕಿಂತ ಮೊದಲೇ ಮುಗಿಸ್ತೇನೆ ಸ್ವಾಮಿ. ಇಷ್ಟೆಲ್ಲ ಓದ್ಕೊಂಡೂ ನಗ್ದಿದ್ರೆ ನಿಮಗೆ ದೊಡ್ಡ ನಮಸ್ಕಾರ.