Monday, June 14, 2010

ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು
"ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ..." ಹಾಗೊಂದು ಹಾಡು ಲಾಹೋರ್ ನ ಜೈಲಿನ ಗೋಡೆ ಗೋಡೆ ಗಳಲ್ಲಿ ಅನುರಣಿಸುತ್ತಾ, ಕೇಳಿದವರ ಎದೆಯಲ್ಲಿ ಹೊಸತೊಂದು ಭಾವ ಸೃಷ್ಟಿಸುತ್ತಾ ಸೆರೆಮನೆಯ ಎಲ್ಲೆಯನ್ನು ದಾಟಿ ಮಾರ್ದನಿಸುತ್ತಿತ್ತು. ಆ ಹಾಡು ಲಾಹೋರಿನ ಜೈಲಿನಲ್ಲಿ ಖೈದಿಗಳಿಗಾಗಿ ಏರ್ಪಡಿಸಿದ್ದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದ್ದಾಗಲಿ, ಸಂಗೀತ ಗೋಷ್ಠಿಯದ್ದಾಗಲಿ ಆಗಿರಲಿಲ್ಲ. ದೇಶಭಕ್ತಿಯ ಮಹಾಪರಾಧಕ್ಕಾಗಿ ನೇಣಿನ ಶಿಕ್ಷೆಗೆ ಒಳಗಾದ ಮೂವರು ಭಾರತೀಯ ಯುವಕರು ತಮ್ಮ ಬಲಿದಾನದ ಸಮಯ ಹತ್ತಿರವಾಯಿತೆಂದು ಸಂಭ್ರಮದಿಂದ ಆನಂದದಿಂದ ಹೇಳತೊಡಗಿದ್ದ ಹಾಡದು. ಸಾಯಲು ಹೊರಟವರಿಂದ ಸಂಭ್ರಮದ ಹಾಡು!
ತಾಯ ವಿಮೋಚನೆಗಾಗಿ, ಸ್ವಾತಂತ್ರ್ಯದ ಕನಸು ಕಂಡ ಆ ಮೂವರು ಭಾರತೀಯ ಯುವಕರಿಗೆ ಬ್ರಿಟಿಷ್ ಸರ್ಕಾರ ನೀಡಿದ್ದು ಗಲ್ಲು ಶಿಕ್ಷೆಯ ಉಡುಗೊರೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಮರುದಿನ ಗಲ್ಲಿಗೇರಿಸಬೇಕಿತ್ತಾದರೂ ದೇಶಾಭಿಮಾನಿಗಳ ಪ್ರತಿಭಟನೆಗೆ ಹೆದರಿ ಬ್ರಿಟಿಷ್ ಸರ್ಕಾರ ಒಂದು ದಿನ ಮುಂಚೆಯೇ ಅವರನ್ನು ನೇಣಿಗೇರಿಸಲು ನಿರ್ಧರಿಸಿತ್ತು. ಸೆರೆಮನೆಯ ಅಧಿಕಾರಿಗಳು ಆ ಯುವಕರಿಗೆ ಈ ವಿಷಯ ತಿಳಿಸಿದಾಗ ಅವರಿಗೋ ಅತ್ಯಾನಂದ. ಆ ಮೂವರು ಗೆಳೆಯರಲ್ಲೂ ಪೈಪೋಟಿ - ತಮ್ಮಲ್ಲಿ ಮೊದಲು ಗಲ್ಲಿಗೇರುವ ಅವಕಾಶ ಯಾರದಿರಬೇಕು ಎಂಬ ಸಲುವಾಗಿ! ಅವರಿಗದು ಮಾತೃಭೂಮಿಯ ಮುಕ್ತಿಗಾಗಿ ಬಲಿದಾನಗೈಯ್ಯುವ ಭಾಗ್ಯ!
ಪ್ರತ್ಯಕ್ಷ ಸಾವಿನ ಎದುರು ನಿಂತಾಗಲೂ ಅವರಲ್ಲಿ ಭಯದ ಲವಲೇಶವೂ ಇಲ್ಲ. ಗಲ್ಲಿನ ವೇದಿಕೆ ಏರಿದಾಗಲೂ ಮುಖದಲ್ಲಿ ನಗು. ಇನ್ನು ಕೆಲವೇ ಕ್ಷಣಗಳಲ್ಲಿ ತಮ್ಮ ಜೀವ ತೆಗೆವ ನೇಣಿನ ಕುಣಿಕೆಯನ್ನು ಅವರು ಚುಂಬಿಸಿದರು. ಮನದಲ್ಲಿ ಅದೇನನ್ನೋ ಸಾಧಿಸಿದ ತೃಪ್ತಿ. ಮೊಗದಲ್ಲಿ ಚೈತನ್ಯದ ಚಿಲುಮೆ. ಸಾಯಲು ಹೊರಟವರ ಮುಖದಲ್ಲಿ ನಗು. ಬ್ರಿಟಿಷ್ ಅಧಿಕಾರಿಗಳಿಗೆ ಅತ್ಯಾಶ್ಚರ್ಯ. ಅಲ್ಲಿದ್ದವರು ಐದು ಮಂದಿ ಬ್ರಿಟಿಷ್ ಅಧಿಕಾರಿಗಳು. ಒಬ್ಬ ಬ್ರಿಟಿಷ್ ಅಧಿಕಾರಿ ಕೇಳಿದ ’ಯಾಕೆ ನಗುತ್ತಿದ್ದೀರಿ?’ ಬಲಿದಾನಕ್ಕೆ ಸಿದ್ಧನಾದ ಯುವಕರಲ್ಲಿ ಒಬ್ಬ ಹೇಳಿದ "ಸಾರ್ ನೀವು ಅದೃಷ್ಟವಂತರು!" ಬ್ರಿಟಿಷ್ ಅಧಿಕಾರಿಗೆ ಮತ್ತಷ್ಟು ಅಚ್ಚರಿ . ’ಕ್ಷಣದಲ್ಲಿ ಹೆಣವಾಗಿ ಉರುಳುವ ನೀವು ನಮ್ಮ ಅದೃಷ್ಟವನ್ನೇಕೆ ಹೊಗಳ್ತೀರಿ?’ ಆತನ ಪ್ರಶ್ನೆ. ಅದಕ್ಕೆ ಆ ಭಾರತೀಯ ಯುವಕ ನಗುತ್ತಲೇ ಉತ್ತರಿಸುತ್ತಾನೆ. "ತನ್ನ ತಾಯ್ನಾಡಿನ ಮುಕ್ತಿಗಾಗಿ, ಸ್ವಾತಂತ್ರ್ಯದ ಕನಸಿಗಾಗಿ ಈ ನಾಡಿನ ಯುವಕ ಅದೆಷ್ಟು ಆನಂದದಿಂದ, ಸಂತೋಷದಿಂದ, ಸಂಭ್ರಮದಿಂದ ಬಲಿದಾನ ಮಾಡ್ತಾನೆ, ಅದನ್ನು ನೋಡುವ ಅದೃಷ್ಟ ೩೦ ಕೋಟಿ ಭಾರತೀಯರಲ್ಲಿ ನಿಮಗೆ ಐದು ಜನರಿಗೆ ಮಾತ್ರ ಸಿಗ್ತಿರೋದು , ನೀವು ಅದೃಷ್ಟವಂತರು!"
ಎಂತಹ ತಾಕತ್ತಿನ ಮಾತದು. ಸಾವಿನ ಸಮ್ಮುಖದಲ್ಲೂ ಅಂದು ಹಾಗೆ ದಿಟ್ಟ ವಾಗಿ ಮಾತಾಡಿದವನು ನಮ್ಮೆಲ್ಲರ ಪ್ರೀತಿಯ ಸರ್ದಾರ್ ಭಗತ್ ಸಿಂಗ್. ಜತೆಗಿದ್ದವರು ಅವನಷ್ಟೇ ಉಜ್ವಲ ದೇಶಭಕ್ತಿ, ಸ್ವಾತಂತ್ರ್ಯದ ಕನಸನ್ನು ಎದೆಯೊಳಗಿಟ್ಟುಕೊಂಡಿದ್ದ ಸುಖದೇವ್ ಮತ್ತು ಶಿವರಾಂ ರಾಜಗುರು.
ಅಂದು ೨೩ ಮಾರ್ಚ್ ೧೯೩೧. ಇನ್ನೂ ತಾರುಣ್ಯದ ಹೊಸ್ತಿಲಲ್ಲಿದ್ದ ಭಗತ್ ಸಿಂಗ್, ಸುಖದೇವ್, ರಾಜಗುರು ಈ ನಮ್ಮ ಭಾರತದ ದಾಸ್ಯ ವಿಮೋಚನೆಗಾಗಿ, ತಮ್ಮ ಮಾತೃಭೂಮಿಯ ಅಗಾಧ ಪ್ರೀತಿ, ಉಜ್ವಲ ದೇಶಭಕ್ತಿಯ ಕಾರಣಕ್ಕಾಗಿ ನಗುನಗುತ್ತಲೇ ನೇಣಿಗೇರಿದ ದಿನ. ’ಈ ದೇಶಕಾಗಿ ಸಾಯಲೂ ಸಿದ್ಧ’ ಅನ್ನೋದು ಕೇವಲ ಮಾತಲ್ಲ, ಈ ದೇಶದ ಯುವಕರು ಮಾತೃಭೂಮಿಯ ಒಳಿತಿಗಾಗಿ ಸಾವಿಗೂ ಸವಾಲು ಹಾಕಬಲ್ಲರು ಎಂಬುದನ್ನು ಜಗತ್ತಿಗೇ ನಿರೂಪಿಸಿ ಸಾಧಿಸಿ ತೋರಿಸಿದ ದಿನ. ಅಂದು ಅವರಿಗಿದ್ದದ್ದು ಭಾರತದ ದಾಸ್ಯ ವಿಮೋಚನೆ ಹಾಗೂ ಸ್ವತಂತ್ರ ಭಾರತದ ಕನಸು ಮಾತ್ರ. ನಾವು ಸ್ವತಂತ್ರರಾಗಿ, ದಾಸ್ಯಮುಕ್ತರಾಗಿ ಇರುವ ಇಂದಿನ ಈ ದಿನಗಳಿಗಾಗಿ ಅವರು ತಮ್ಮ ಸುಂದರ ನಾಳೆಗಳನ್ನು ಬಲಿಕೊಟ್ಟಾಗ , ತಾಯ್ನಾಡಿಗಾಗಿ ನಗುನಗುತ್ತಾ ನೇಣಿಗೇರಿದಾಗ ಭಗತ್ ಸಿಂಗ್ ಗೆ ಕೇವಲ ೨೩ ವರ್ಷ, ಸುಖದೇವ್ ಗೆ ೨೭ ವರ್ಷ ಹಾಗೂ ರಾಜಗುರು ಗೆ ೨೫ ವರ್ಷ! ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ಆನಂದ, ದಾಸ್ಯಮುಕ್ತಿಯನ್ನೇ ಜೀವನದ ಧ್ಯೇಯವಾಗಿಸಿ ಕೊಂಡವರು ಅವರು. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲೇ ಅವರದು ಧೀರೋದಾತ್ತ ಅಧ್ಯಾಯ. ಇನ್ನೂ ಶತ ಶತಮಾನಗಳವರೆಗೆ ಭಾರತೀಯ ಯುವಕರಿಗೊಂದು ಆದರ್ಶ, ಅನುಪಮ ಮಾದರಿ, ಉಜ್ವಲ ಮಾರ್ಗದರ್ಶಿ.
ಮನೆಯಲ್ಲಿ ಮದುವೆ ಮಾಡುತ್ತೇನೆಂದಾಗ ’ಭಾರತದ ಸ್ವಾತಂತ್ರ್ಯವೇ ನನ್ನ ಮದುವೆ’ ಎಂದು ಪತ್ರ ಬರೆದಿಟ್ಟು ಮನೆಯಿಂದ ಹೊರಬಂದು ಸಂಪೂರ್ಣ ತನ್ನನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡ ಭಗತ್, ದೇಶಾಭಿಮಾನವನ್ನೇ ತಮ್ಮ ರಕ್ತದ ಕಣಕಣ ದಲ್ಲಿ ತುಂಬಿಕೊಂಡು, ದೇಶಭಕ್ತಿಯನ್ನೇ ಉಸಿರಾಡುತ್ತಾ ಬಲಿದಾನದ ಸಮಯ ಬಂದಾಗ ’ನಾನು ಮೊದಲು ನಾನು ಮೊದಲು’ ಎಂದು ಪೈಪೋಟಿಗಿಳಿದು ನಗು ನಗುತ್ತಾ ನೇಣಿ ಗೇರಿದ ಸುಖದೇವ್, ರಾಜಗುರು ... ಎಂತಹ ವೀರ ಪರಂಪರೆಯ ಮಕ್ಕಳು ನಾವು! ಆದರೆ ನಮ್ಮಲ್ಲೇಕಿಂದು ಆತ್ಮ ವಿಸ್ಮೃತಿಯ ಕರಿನೆರಳು? ನಾವಿಂದು ಬಲಿದಾನಗೈಯಬೇಕಿಲ್ಲ. ಮನೆ ಮಠ ಸಂಸಾರ ಬಿಟ್ಟು ಬರಬೇಕಿಲ್ಲ. ಯೌವನ, ಬದುಕನ್ನು ತ್ಯಾಗ ಮಾಡಬೇಕಿಲ್ಲ. ಆದರೆ ಕನಿಷ್ಟ ದೇಶವನ್ನು ಪ್ರೀತಿಸಲಾರೆವಾ? ದೇಶದ ಒಳಿತಿಗೆ ಸ್ಪಂದಿಸಲಾರೆವಾ? ಆ ವೀರ ಬಲಿದಾನಿಗಳ ಬಗ್ಗೆ ನಮ್ಮ ಮಕ್ಕಳಿಗೆ ಹೇಳಲಾರೆವಾ? ನಮ್ಮ ಈ ವೀರ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಲಾರೆವಾ? ಈ ದೇಶದ ರೈತ, ಗಡಿಕಾಯುವ ಸೈನಿಕರ ಕುರಿತು ಕಿಂಚಿತ್ತೂ ಕಾಳಜಿ ಹೊಂದಲಾರೆವಾ? ಅಷ್ಟೂ ಮಾಡಲಾಗದಿದ್ದರೆ ಸುಖಾಸುಮ್ಮನೆ ಈ ದೇಶಕ್ಕೆ ಬೈಯ್ಯೋದು ಬಿಟ್ಟು, ಈ ದೇಶವನ್ನು ಟೀಕಿಸೋದು ಬಿಟ್ಟು, ದೇಶಕ್ಕಾಗಿ ಕೆಲಸ ಮಾಡುತ್ತಿರುವವರ ಕಾಲೆಳೆಯೋದು ಬಿಟ್ಟು ಸುಮ್ಮನಿರಲಾರೆವಾ?
ದೇಶಕ್ಕಾಗಿ ನಾವೇನೂ ಮಾಡಬೇಕಿಲ್ಲ. ನನ್ನ ಹಳ್ಳಿ, ನನ್ನ ಊರು, ನನ್ನ ಜನ, ನನ್ನ ಸುತ್ತಮುತ್ತಲಿನ ಸಮಾಜಕ್ಕಾಗಿ ಸ್ಪಂದಿಸುವುದೇ, ತುಡಿಯುವುದೇ, ಸಮಾಜದ ಒಳಿತಿಗೆ ಶ್ರಮಿಸುವುದೇ ನಾವಿಂದು ಮಾಡಬೇಕಾದ ಕಾರ್ಯ. ಅದೇ ದೇಶ ಕಟ್ಟುವ ಕೆಲಸ.
ರಾಮಚಂದ್ರ ಹೆಗಡೆ ಸಿ. ಎಸ.
ಹೀಗೂ ಉಂಟು ಒಂದು ನಿಘಂಟು!
ಎಷ್ಟೋ ಸಲ ಹಠಾತ್ತಾಗಿ ನೆನಪಾದ ಏನೋ ಒಂದು ಕೆಲಸವನ್ನು ಮಾಡ ಹೋಗುತ್ತೇವೆ-ಅದೂ ಕೈಲಿದ್ದ ಕೆಲಸವನ್ನು ಬಿಟ್ಟು. ಆದರೆ ಅದು ಯಾವ ಕೆಲಸವೆಂಬುದನ್ನೇ ಮರೆಯುತ್ತೇವೆ. ವಸ್ತು, ಸ್ಥಳ, ಜನಗಳ ಹೆಸರು ಬೇಕೆಂದಾಗ ನೆನಪಾಗದೇ ಕೈಕೊಟ್ಟಾಗ ಅಲವತ್ತುಕೊಳ್ಳುವಂತೆ ಆಗುವುದು ಸಾಮಾನ್ಯ ಅನುಭವ.
ಎಲ್ಲಕ್ಕೂ ಹೆಚ್ಚಾಗಿ ಹೇಳ ಬೇಕೆನಿಸಿದ್ದನ್ನು ಹೇಳಲು ಯೋಗ್ಯ ಶಬ್ದ ಸಿಗದಾದಾಗ ನಮ್ಮ ಮನ ಹೇಗೆ ಚಡಪಡಿಸುತ್ತದೆ ನೋಡಿ! ನಾವು ಏನನ್ನೋ ಹೇಳಬಯಸುತ್ತೇವೆ, ಅದನ್ನು ನಿಖರವಾಗಿ ತೋರ್ಪಡಿಸುವ ಹಾಗೂ ವ್ಯಕ್ತಪಡಿಸುವ ಶಬ್ದವೊಂದಿದೆಯೆಂಬುದೂ ನಮಗೆ ಗೊತ್ತಿರುತ್ತದೆ, ಅಷ್ಟೇ ಅಲ್ಲ ಆ ಶಬ್ದ ನಮಗೆ ಪರಿಚಿತವಾದದ್ದೇ ಆಗಿರುತ್ತದೆ. ಆದರೆ ಗಂಟಲಲ್ಲಿರುವ ಆ ಶಬ್ದ ನಾಲಿಗೆಯ ಮೇಲೆ ಆಡಲು ಸಿದ್ಧವಿಲ್ಲ. ಅದನ್ನು ಹೊರತಬೇಕೆಂಬ ನಮ್ಮ ಛಲ ಹೆಚ್ಚಾದಷ್ಟೂ ಅದು ಹಟಮಾರಿಯಂತೆ ಹೊರಬರಲು ಊಂ... ಹೂಂ.... ಎನ್ನುತ್ತದೆ. ನಮಗೆ ಮೈಪರಚಿ ಕೊಳ್ಳುವಂತಾಗುತ್ತದೆ. ನಮ್ಮ ಮುಖಮುದ್ರೆ ಬದಲಾಗುತ್ತದೆ. ನಾವು ಹುಬ್ಬುಗಂಟಿಕ್ಕುತ್ತೇವೆ; ಕೈಕಾಲು ಕೊಡವುತ್ತೇವೆ; ಕುತ್ತಿಗೆ ಅಲ್ಲಾಡಿಸುತ್ತೇವೆ; ಹಣೆ ಒತ್ತಿಕೊಳ್ಳುತ್ತೇವೆ; ಏಕಾಗ್ರತೆ ಬಯಸಿ ಕಣ್ಣು ಮುಚ್ಚಿಕೊಳ್ಳುತ್ತೇವೆ. ಮಕ್ಕಳು ರಚ್ಚೆ ಹಿಡಿಯಲೂ ಬಹುದು. ಒಬ್ಬೊಬ್ಬರದು ಒಂದೊಂದು ತರಹ. ಮನಸ್ಸಿನ ಮೂಲೆ ಮೂಲೆಯನ್ನೂ ಜಾಲಾಡುತ್ತೇವೆ. ಆದರೆ ನಮ್ಮ ಮನದೆದುರೇ ಕುಣಿದಾಡುತ್ತಿರುವ ಆ ಶಬ್ದ ಮಾತ್ರ ಈಗ ಹಿಡಿದೇಬಿಟ್ಟೆವೆಂದುಕೊಳ್ಳು ತ್ತಿರುವಾಗಲೇ ಕೈಗೆಟುಕದ ಚತುರ ಆಟಗಾರನಂತೆ ದೂರ ನಿಂತು ಕೆಣಕುತ್ತದೆ. ನಾವಾವಾಗ ಹತಾಶೆಗೊಳ್ಳುತ್ತೇವೆ. ಮನ:ಶಾಸ್ತ್ರಜ್ಞರು ಈ ಸ್ಥಿತಿಯನ್ನು ಸೀನುವ ಕ್ರಿಯೆಗೆ ಹೋಲಿಸುತ್ತಾರಂತೆ. ಸೀನುವ ಕ್ರಿಯೆಯಲ್ಲಿ ಎಲ್ಲ ದೈಹಿಕ ಸಂವೇದನೆಗಳನ್ನು ಅನುಭವಿಸುತ್ತಿದ್ದೂ ಸೀನಲು ಸಾಧ್ಯವಾಗದೇ ಪಾಡುಪಡುತ್ತಿರುವಾಗ ಚೂರು ನಸ್ಯ ವಹಿಸುವ ಕಾರ್ಯವನ್ನೇ ಈ ವಿರುದ್ಧ ನಿಘಂಟೂ ಮಾಡುತ್ತದೆ. ಈ ನಸ್ಯ ನೀಡುವ ನೆಮ್ಮದಿ ಗಮನಾರ್ಹ ಎನ್ನುತ್ತಾರೆ ಪ್ರಕಾಶಕರು.
ನಾವು ಸೂಚಿಸಬಯಸುವ ಹಾಗೂ ನಮ್ಮ ಮನದಲ್ಲಿರುವ ಅರ್ಥವನ್ನು ಕೊಡುವ ಶಬ್ದಗಳ ಸಂಗ್ರಹವೇ ಈ ವಿರುದ್ಧ ನಿಘಂಟು. ರೂಢಿಯಲ್ಲಿರುವ ಸಾಮಾನ್ಯ ನಿಘಂಟುಗಳು ಶಬ್ದಗಳನ್ನು ವಿವರಿಸಿ ತಿಳಿಸುತ್ತಿದ್ದರೆ ವಿರುದ್ಧ ನಿಘಂಟು ನಮ್ಮ ವಿವರಗಳಿಗೆ ಸಮರ್ಪಕ ಶಬ್ದವೊಂದನ್ನು ನೀಡುವುದರಿಂದ ತುಂಬ ಸಹಕಾರಿಯಾಗಿದೆ. ಲೇಖಕರಿಗೆ ಕವಿಗಳಿಗೆ ಅಷ್ಟೇ ಅಲ್ಲದೆ ಮಾತುಗಾರಿಕೆಯೇ ಆಧಾರ ಸ್ತಂಭವಾಗಿರುವ ವೃತ್ತಿಯವರಿಗೆ ಇದರ ಮಹತ್ತ್ವ ಹೇಳತೀರದು. ಜನಸಾಮಾನ್ಯರಿಗೂ ಇದರ ಉಪಯೋಗ ಇಲ್ಲದಿಲ್ಲ. ಇದರ ಅಭ್ಯಾಸದಿಂದ ನಮ್ಮ ವಾಕ್ಚಾತುರ್ಯ ಹೆಚ್ಚುತ್ತದೆ. ಮಾತಿನಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಬರವಣಿಗೆ ಹಾಗೂ ಮಾತಿನ ಶೈಲಿ ಹೆಚ್ಚು ಆಕರ್ಷಕವೂ ಪ್ರಭಾವಶಾಲಿಯೂ ಆಗುತ್ತದೆ. ನಮ್ಮ ಶಬ್ದ ಸಂಗ್ರಹ ವ್ಯಾಪಕವಾಗುತ್ತದೆ. ಒಂದು ಅಥವಾ ಹೆಚ್ಚು ವಾಕ್ಯಗಳಲ್ಲಿ ಹೇಳಬಹುದಾದ ಭಾವವನ್ನು ಒಂದೇ ಶಬ್ದದಲ್ಲಿ ವ್ಯಕ್ತಪಡಿಸಬಹುದು. ಸಾಮಾನ್ಯವಾಗಿ ರೂಢಿಯಲ್ಲಿರದ ಕುತೂಹಲಕಾರೀ ಹೊಸ ಶಬ್ದಗಳಿಂದ ಮನೋರಂಜನೆಯೂ ದೊರಕೀತು.
ಇನ್ನು ಈ ನಿಘಂಟನ್ನು ಉಪಯೋಗಿಸುವ ಬಗೆ ಹೇಗೆ? ಸ್ವಲ್ಪ ನೋಡೋಣ.
Audit ಎನ್ನುವ ಶಬ್ದ ನಮಗೆ ಗೊತ್ತು. "ಅರ್ಹ ವ್ಯಕ್ತಿಗಳಿಂದ ನಡೆಯುವ ಲೆಕ್ಕಪತ್ರಗಳ ಪರಿಶೀಲನೆ, ತಿದ್ದುಪಡಿ, ಸಮರ್ಥನೆ ಮುಂತಾದವುಗಳನ್ನು ಮಾಡುವುದು" ಎನ್ನಲು ಚಿuಜiಣ ಎನ್ನುತ್ತಾರೆನ್ನುವುದು ಚಿಛಿಛಿouಣ ಶಬ್ದದಡಿಯಲ್ಲಿ ದೊರೆಯುತ್ತದೆ. ಅಂತೆಯೇ ಅದಕ್ಕೆ ಸಂಬಂಧಿಸಿದ ಇತರ ಅನೇಕ ಶಬ್ದಗಳೂ ಕೂಡ. ವಿಶಿಷ್ಟ ಶಾಖೆ ಅಥವಾ ವಿಷಯಗಳಿಗಳಿಗೆ ಸಂಬಂಧಿಸಿದ "ಚಾರ್ಟ್"ಗಳಿದ್ದು ಅವುಗಳಡಿಯಲ್ಲೂ ಬೇಕಾದ ಶಬ್ದ ಸಿಕ್ಕೀತು.
ಇದನ್ನು ಉಪಯೋಗಿಸುವುದನ್ನು ರೂಢಿಸಿಕೊಳ್ಳಲು ಸಾಮಾನ್ಯ ನಿಘಂಟಿಗೆ ಬೇಕಾಗುವುದಕ್ಕಿಂತ ಹೆಚ್ಚು ತಾಳ್ಮೆ ಹಾಗೂ ಪರಿಶ್ರಮ ಬೇಕೆನಿಸುತ್ತದೆ. ನಿಜ. ಆದರೆ ಕನ್ನಡದಲ್ಲೂ ಇಂತಹ ಒಂದು ನಿಘಂಟು ಬಂದರೆ ಎಷ್ಟು ಚೆನ್ನ ಅಲ್ಲವೆ?

ಸೌ. ವೀಣಾ ದೇವ್
ಜೀವನದಲಂಕಾರ ಮನಸಿನುದ್ಧಾರ
ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ‘ಧರ್ಮ’ ಎಂಬುದಿರುತ್ತದೆ. ‘ಧರ್ಮ’ ಎಂದಾಕ್ಷಣ ’ಖeಟigioಟಿ’ಎಂದು ಅರ್ಥೈಸಿ ಇದೇನು ಜಡ ವಸ್ತುವಿಗೂ ಧರ್ಮವೇ? ಇಂದು ಹುಬ್ಬೇರಿಸದಿರಿ. ನಾನು ‘ಧರ್ಮ’ ಪದವನ್ನು ಬಳಸಿದ್ದು ‘ಸ್ವಭಾವ’, ‘ಕರ್ತವ್ಯ’ ಎಂಬರ್ಥದಲ್ಲಿ. ಸುಡುವುದು ಬೆಂಕಿಯ ಧರ್ಮ, ಬೀಸುವುದು ಗಾಳಿಯ ಧರ್ಮ, ಕಲಿಸುವುದು ಶಿಕ್ಷಕನ ಧರ್ಮ, ಪ್ರಜೆಗಳನ್ನು ರಕ್ಷಿಸುವುದು ರಾಜಧರ್ಮ ಇತ್ಯಾದಿಯಾಗಿ ‘ಧರ್ಮ’ ಶಬ್ದವನ್ನು ನಾವು ಪ್ರಯೋಗಿಸುತ್ತೇವೆ. ಹಾಗಾದರೆ ಖeಟigioಟಿ ಎಂಬ ಪದಕ್ಕೆ ಪರ್ಯಾಯವಾಗಿ ಧರ್ಮ ಪದವನ್ನು ಬಳಸುವುದು ಶುದ್ಧ ತಪ್ಪೇ?. ಈ ಪ್ರಶ್ನೆಗೆ ಉತ್ತರಿಸಬೇಕಾದರೆ ‘ಧರ್ಮ’ ಪದದ ಅರ್ಥದ ಆಳಕ್ಕೆ ಇಳಿಯಬೇಕು. ಯತೋಽ ಭ್ಯುದಯನಿಃಶ್ರೇಯಸಸಿದ್ಧಿಃ ಸ ಧರ್ಮಃ ಎಂದಿದ್ದಾರೆ ಪ್ರಾಜ್ಞರು. ‘ಯಾವುದರಿಂದ ಇಹಲೋಕದಲ್ಲಿ ಅಭ್ಯುದಯವೂ, ಪರಲೋಕದಲ್ಲಿ ಮೋಕ್ಷವೂ ದೊರಕುವುದೋ ಅದೇ ‘ಧರ್ಮ’ ಅಂದರೆ ನಮ್ಮ ಯಾವ ವ್ಯವಹಾರದಿಂದ ನಮಗೆ ಶ್ರೇಯಸ್ಸುಂಟಾಗುತ್ತದೋ ಆ ಆಚರಣೆ ನಮ್ಮ ಧರ್ಮ. "ಧಾರಣಾತ್ ಧರ್ಮ ಇತ್ಯಾಹುಃ ಧರ್ಮೋ ಧಾರಯತಿ ಪ್ರಜಾಃ" ಎಂಬುದು ಇನ್ನೊಂದು ವ್ಯಾಖ್ಯೆ. ಯಾವುದು ನಮ್ಮನ್ನೆಲ್ಲ ಧರಿಸುತ್ತದೋ, ಅಥವಾ ಯಾವುದನ್ನು ನಾವು ಅವಿನಾಭಾವದಿಂದ ಧರಿಸುತ್ತೇವೋ ಅದೇ ಧರ್ಮ. ಹಿಂದೆ ತೆಗೆದುಕೊಂಡ ಉದಾಹರಣೆಯನ್ನೇ ಗಮನಿಸಿ. ಸುಡುವ ಸ್ವಭಾವ ಹಾಗೂ ಬೆಂಕಿ ಅವಿನಾಭಾವದಿಂದ ಬೆಸೆದುಕೊಂಡಿದೆ. ಹಾಗಾಗಿ ಸುಡುವುದು ಬೆಂಕಿಯ ಧರ್ಮವೆನ್ನುತ್ತೇವೆ. ಅದರಂತೆ ಯಾವ ಸ್ವಭಾವ-ಆಚರಣೆ-ವ್ಯವಹಾರಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಇರಬೇಕೋ ಅದೇ ‘ಧರ್ಮ’. ಹಾಗಾಗಿ ಧರ್ಮಾಚರಣೆ ಐಚ್ಛಿಕವಲ್ಲ ಅನಿವಾರ್ಯ.
ರಿಲಿಜನ್ ಎಂಬರ್ಥದಲ್ಲಿ ‘ಧರ್ಮ’ ಪದವನ್ನು ತೆಗೆದುಕೊಂಡರೂ ಮೇಲಿನ ವ್ಯಾಖ್ಯೆಯೊಂದಿಗೆ ಸಮನ್ವಯಿಸಬಹುದು. ಯಾವುದೇ ಸಾಮಾಜಿಕ ವ್ಯವಸ್ಥೆಯಲ್ಲಿ ಅದರಲ್ಲಿಯೂ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ‘ಮತ’ ಕ್ಕೊಂದು ವಿಶಿಷ್ಟ ಮಹತ್ವವಿದೆ. ವ್ಯಕ್ತಿಯೊಬ್ಬ ಯಾವುದಾದರೊಂದು ‘ಮತ’ಕ್ಕೇ ಸೇರಿರಲೇ ಬೇಕು. ತಾನು ಇಂತಹ ಮತಕ್ಕೆ ಸೇರಿದವನೆಂದು ಹೇಳಿಕೊಳ್ಳಲು ಇಷ್ಟಪಡದವರು ಕೆಲವೇ ಮಂದಿ. (ಬೇರೆ ಬೇರೆ ಕಾರಣಗಳಿಂದ ಹೊgಗಡೆ ಇಷ್ಟವಿಲ್ಲದಂತೆ ತೋರಿಕೊಂಡರೂ ಒಳಗಡೆ ಆ ಪ್ರಜ್ಞೆ ಇದ್ದೇ ಇರುತ್ತದೆ) ಕೆಲವರು ತಮ್ಮನ್ನು ಯಾವುದೇ ಮತದೊಂದಿಗೆ ಗುರುತಿಸಿಕೊಳ್ಳದಿದ್ದರೂ ಯಾವುದಾದ ರೊಂದು ಮತವನ್ನು ಮೆಚ್ಚಬಹುದು. ಇಂದು ಒಂದು ಮತದಲ್ಲಿ ಅತೃಪ್ತರಾದವರು ತಟಸ್ಥರಾಗಿರದೆ ಮತಾಂತರ ಹೊಂದು ತ್ತಿರುವುದೇ ಈ ವಾದವನ್ನು ಪುಷ್ಟಿಗೊಳಿಸುತ್ತದೆ. ಹಾಗಾಗಿ ೯೦% ಮಂದಿ ಒಂದಲ್ಲ ಒಂದು ರೀತಿಯಲ್ಲಿ ಧರ್ಮಾಚರಣೆಯನ್ನು ಮಾಡುತ್ತಾರೆ. ರಿಲಿಜನ್‌ನಲ್ಲಿರುವ ಉಪದೇಶಗಳು ನಮ್ಮ ಅಭ್ಯುದಯ - ನಿಃಶ್ರೇಯಸಗಳಿಗೆ ಕಾರಣಗಳಾಗುವುದರಿಂದ ಅವೂ ಕೂಡ ‘ಧರ್ಮ’ವೇ. ಕೆಲವು ಚಾರ್ವಾಕ ಮತಗಳನ್ನು ಬಿಟ್ಟರೆ ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಇರುವ ಪ್ರಮುಖ ಅಂಶ - ‘ದೇವರು’. ಮಾನವಶಕ್ತಿಯನ್ನು ಮೀರಿದ ಶಿಷ್ಟಶಕ್ತಿಯನ್ನು ದೇವರೆಂದೂ ದುಷ್ಟಶಕ್ತಿಯನ್ನು ದಾನವರೆಂದೂ ಎಲ್ಲ ಧರ್ಮಗಳೂ ಒಪ್ಪಿವೆ. ಈ ದೇವರ ಕಲ್ಪನೆ (ಇದು ಕಲ್ಪನೆಯೋ ವಾಸ್ತವವೋ ಎಂಬ ಚರ್ಚೆ ಈ ಲೇಖನದ ವ್ಯಾಪ್ತಿಗೆ ಮೀರಿದ್ದು) ನಮ್ಮ ಜೀವನದಲ್ಲಿ ಅನೇಕ ಚಟುವಟಿಕೆಗಳನ್ನು ತಂದಿತ್ತಿದೆ. ಪೂಜೆ-ಪುನಸ್ಕಾರ-ಪ್ರಾರ್ಥನೆ ಇವೆಲ್ಲ ಧರ್ಮಾಚರಣೆಯ ಅಂಗಗಳಾಗಿವೆ. ಇವೆಲ್ಲ ಜೀವನದಲ್ಲಿ ಯಾಕೆ ಬೇಕು ಎಂಬುದಕ್ಕೆ ಡಿವಿಜಿ ಉತ್ತರಿಸುತ್ತಾರೆ
ದೇವ ಮಂದಿರ ಭಜನೆ ಪೂಜೆಪ್ರಸಾದಗಳು
ಜೀವನದಲಂಕಾರ ಮನಸಿನುದ್ಧಾರ |
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು
ದಾವುದಾದೊಡಮೊಳಿತು - ಮಂಕುತಿಮ್ಮ ||
ಎಲ್ಲ ಧರ್ಮಗಳಲ್ಲಿಯೂ ಹೇಳಿರುವ ಅಂತಿಮ ಪುರುಷಾರ್ಥ ಮೋಕ್ಷವೇ. ಈ ಮೋಕ್ಷದ ಕಲ್ಪನೆ ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆಯಾಗಿರಬಹುದು. ಧರ್ಮಾಚರಣೆ, ಅರ್ಥಸಂಗ್ರಹ, ಕಾಮಸಂತೃಪ್ತಿ ಇವೆಲ್ಲ ಮೋಕ್ಷಕ್ಕೆ ಮಾರ್ಗಗಳೆಂದು ವೇದಗಳು ಸಾರುತ್ತವೆ. ಧರ್ಮ ರಹಿತ ಅರ್ಥಸಂಗ್ರಹ, ಕಾಮಾಚರಣೆಗಳು ನಿಷಿದ್ಧ ಹಾಗೂ ಪಾಪಕ್ಕೆ ಮೂಲ. ಜೀವನದ ಪ್ರತಿಯೊಂದು ಹೆಜ್ಜೆಯೂ ಧರ್ಮದೊಡಗೂಡಿ ಇರುವುದು ಮುಖ್ಯ. ಧರ್ಮಾಚರಣೆ ಎಂದಾಕ್ಷಣ ಉಪವಾಸ ವ್ರತ-ಭಜನೆಗಳೇ ಅಲ್ಲ. ಅವೆಲ್ಲ ಜೀವನಕ್ಕೊಂದು ಅಲಂಕಾರ ಹಾಗೂ ನಮ್ಮ ಮನಸ್ಸನ್ನು ಕ್ಷುಲ್ಲಕ ವಿಚಾರಗಳಿಂದ ದೂರೊಯ್ವ ಸಾಧನUಳಷ್ಟೆ. ಮಂಕುತಿಮ್ಮನೆಂದಂತೆ
- ‘ವೇದಗಳು ಶಾಸ್ತ್ರಗಳು ಲೋಕ ನೀತಿಗಳೆಲ್ಲ ಹಾದಿತೋರಲು ನಿಶಿಯೊಳುರಿವ ಪಂಜುಗಳು’. ಮಾನವೀಯತೆಯ ನಭಕ್ಕೇರಿದವನು ತಾನೆಂಬ ವಿಶ್ವಾಸ ವಿರುವವನಿಗೆ ಆ ಪಂಜುಗಳ ಅವಶ್ಯಕತೆಯಿಲ್ಲ. ಆದರೆ ವಿಚಾರವಾದಿ ಯೆಂದು ಸೋಗು ಹಾಕಿ ಧರ್ಮಾಚರಣೆ ಮೌಢ್ಯದ ಸಂಕೇತವೆಂದು ಅಬ್ಬರಿಸುವವರು ಮೂರ್ಖರಲ್ಲದೆ ಇನ್ನಾರು? ನೈಜವಾದ ಧರ್ಮಾಚರಣೆಯೊಂದಿಗೆ ಕಾಲಾಂತರದಲ್ಲಿ ಮೌಢ್ಯವೂ ಸೇರಿಕೊಂಡಿದೆ ಎಂಬುದು ನಿಜ. ಕೆಲವು ದಿನಗಳ ಹಿಂದೆ ಹಿಂದೂ ಧರ್ಮದ ಹುಳುಕನ್ನು ಹುಡುಕುವುದರಲ್ಲಿಯೇ ಆಸಕ್ತರಾಗಿರುವ ನನ್ನ ಮಿತ್ರರೊಬ್ಬರು ಅಪ್ಪಣೆ ಮಾಡಿದರು - ‘ದೇವದಾಸಿ ಪದ್ಧತಿ ನಮ್ಮ ಸಂಸ್ಕೃತಿಯಲ್ಲೇ ಇದೆ. ಇದು ಧಾರ್ಮಿಕವಾಗಿ ಅಂಗೀಕೃತವಾದ ಪದ್ಧತಿ’ ಎಂಬುದಾಗಿ. ಅವರ ಇತಿಹಾಸಜ್ಞಾನ ನೋಡಿ ಮನ ಮರುಗಿತು. ಹೌದು, ದೇವದಾಸಿಯಂತಹ ಅನೇಕ ಅನಿಷ್ಟ ಪದ್ಧತಿಗಳು ಧರ್ಮಾಚರಣೆಯ ಒಂದು ಅಂಗ ಎಂದು ಚರ್ಮದ ಕಣ್ಣುಗಳಿಗೆ ಗೋಚರವಾಗುವಂತೆ ಬೆಸೆದುಕೊಂಡು ಬಿಟ್ಟಿವೆ. ಇದು ಪವಿತ್ರ ಗಂಗಾನದಿಗೆ ಕಾಶಿಯ ಕೊಚ್ಚೆಯ ನೀರು ಸೇರಿಕೊಂಡಂತೆ. ಆದರೆ ಇವೆಲ್ಲ ಕಾಲಾಂತರದಲ್ಲಿ ಸ್ವಾರ್ಥಿ ಮನುಷ್ಯರಿಂದ ಸೃಷ್ಟಿಯಾದ ಅನಿಷ್ಟ ಆಚರಣೆಗಳು ಎಂಬ ನೀರಕ್ಷೀರ ವಿಭಾಗ ಜ್ಞಾನ ಈ ವಿಚಾರವಾದಿಗಳಿಗಿಲ್ಲ. ನನ್ನ ಅಭಿಪ್ರಾಯದಂತೆ ಪ್ರತಿಯೊಂದು ಧರ್ಮವೂ ವೈಚಾರಿಕ ಹಾಗೂ ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾಗಿದೆ. ಪ್ರಾಣಿಬಲಿ, ನರಬಲಿ, ಜಿಹಾದ್‌ಗಳನ್ನು ಯಾವ ಧರ್ಮವೂ ಪುರಸ್ಕರಿಸುವುದಿಲ್ಲ. ಇಂದಿನ ’ವೋಟ್‌ಬ್ಯಾಂಕ್’ ರಾಜಕೀಯದಲ್ಲಿ ಕೇಳಿಬರುತ್ತಿರುವ ಒಂದು ಪ್ರಮುಖ ಶಬ್ದ - ’ಧರ್ಮ ನಿರಪೇಕ್ಷತೆ’. ರಾಜಕೀಯದಲ್ಲಿ ಧರ್ಮ ನುಸುಳಬಾರದು ಎಂಬುದರ ಅರ್ಥ ಅಧರ್ಮದ ರಾಜಕೀಯ ಮಾಡಬೇಕೆಂದೆ? ನಿಮಗೆ ಗೊತ್ತೆ. ಸಂಸತ್ತಿನ ಸಭಾಧ್ಯಕ್ಷರ ಪೀಠದ ಮೇಲ್ಗಡೆ ಬರೆದಿರುವ ಸಂಸತ್ತಿನ ಧ್ಯೇಯವಾಕ್ಯ ‘ಧರ್ಮಚಕ್ರ ಪ್ರವರ್ತನಾಯ!’. ಅಲ್ಲಿಯೇ ಕುಳಿತು ರಾಜಕೀಯ ಮಾಡುವವರು ’ಧರ್ಮ ನಿರಪೇಕ್ಷತೆ’ಯ ಮಾತನಾಡುವುದು ಹಾಸ್ಯಾಸ್ಪದವಲ್ಲವೆ? ನಮಗಿಂದು ಬೇಕಾಗಿರುವುದು ಧರ್ಮನಿರಪೇಕ್ಷತೆಯಲ್ಲ, ಪರಧರ್ಮಸಹಿಷ್ಣುತೆ ಅಷ್ಟೆ.
ಇಡೀ ಭಗವದ್ಗೀತೆಯ ತಿರುಳು - ‘ಅರ್ಜುನ! ನಿನ್ನ ಕ್ಷತ್ರಿಯ ಧರ್ಮವನ್ನು ಪಾಲಿಸು’ ಎಂಬುದು. ಇದು ಸಾಲದೆ ನಮಗೆ ಧರ್ಮಮಾರ್ಗದಲ್ಲಿ ನಡೆಯಲು? ಎಡಗೆನ್ನೆಗೆ ಹೊಡೆದಾಗ ಬಲಗೆನ್ನೆಯನ್ನು ತೋರುವುದು ಮಾತ್ರ ಧರ್ಮವಲ್ಲ. ಅನ್ಯಾಯವಾದಾಗ ಎದುರಿಸುವುದೂ ಧರ್ಮವೇ. ಧರ್ಮಾಚರಣೆಗಳೆಲ್ಲ ಮೌಢ್ಯಗಳು ಎಂದು ಮೂಗು ಮುರಿಯದೆ ಮಣ್ಣನ್ನು ಸರಿಸಿ ಚಿನ್ನವನ್ನು ಪಡೆಯುವಂತೆ ಮೂಢನಂಬಿಕೆಗಳನ್ನು ನಿವಾರಿಸಿ ಶುದ್ಧ ಧರ್ಮಾಚರಣೆಯಲ್ಲಿನಮ್ಮನ್ನು ತೊಡಗಿಸಿಕೊಳ್ಳೋಣ. || ಧರ್ಮೋ ರಕ್ಷತಿ ರಕ್ಷಿತಃ ||
-ಮಹಾಬಲ ಭಟ್