Saturday, December 18, 2010

ಗೋವಾ ಮುಕ್ತಿ ಗಾಥೆ

ಮಿತ್ರರೇ,

ಭಾರತಕ್ಕೆ ಸ್ವಾತಂತ್ರ್ಯ ದೊರೆತು ದಶಕಗಳೇ ಕಳೆದಿದ್ದರೂ ಗೋವಾ ಎಂಬ ಪ್ರಾಚೀನ ಭಾರತದ ಅವಿಭಾಜ್ಯ ಅಂಗವಾಗಿದ್ದ ಪ್ರದೇಶ ಪೋರ್ಚುಗೀಸರ ಕಪಿಮುಷ್ಟಿಯಲ್ಲೇ ಇತ್ತು. ಬ್ರಿಟೀಶರಿಗಿಂತ ಕ್ರೂರವಾದ ಆಡಳಿತ ನಡೆಸಿದ ಪೋರ್ಚುಗೀಸರ ಕಬಂಧಬಾಹುಗಳಿಂದ ೧೯೬೧ ಡಿಸೆಂಬರ್ ೧೯ ರಂದು ಗೋವಾ ಮುಕ್ತಿಯನ್ನು ಪಡೆಯಿತು. ಇದು ಗೋವಾ ವಿಮೋಚನೆಯ ೫೦ ನೇ ಅಂದರೆ ಸುವರ್ಣಮಹೋತ್ಸವ ವರ್ಷ. ಗೋವಾವನ್ನು ಮುಕ್ತಗೊಳಿಸಲು ಕೈಗೊಂಡ ಮುಕ್ತಿ ಸಂಗ್ರಾಮದ ವೀರಗಾಥೆ ಇಲ್ಲಿದೆ. ಇದು ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಕಥೆ. ದಯವಿಟ್ಟು ಓದಿ ಪ್ರತಿಕ್ರಿಯಿಸಿ.
೧೪೯೮ ರಲ್ಲಿ ಗುಡ್‌ಹೋಪ್ ಭೂಶಿರವನ್ನು ಪ್ರದಕ್ಷಿಣೆ ಹಾಕಿ ಕ್ಯಾಲಿಕತ್‌ಗೆ ಬಂದಿಳಿದ ವಾಸ್ಕೋ-ಡಿ-ಗಾಮಾ ಭಾರತದಲ್ಲಿ ಪೋರ್ಚುಗೀಸರ ಶಕೆಯ ಆರಂಭಕರ್ತನಾದ. ೧೫೧೦ ರಲ್ಲಿ ಪೋರ್ಚುಗೀಸ್ ಸೇನಾನಿ ಅಲ್ಬುಕರ್ಕನ ದಾಳಿಯೊಂದಿಗೆ ಗೋವಾದಲ್ಲಿ ಪೋರ್ಚುಗೀಸರ ಪ್ರವೇಶವಾಯಿತು. ಸ್ಥಳೀಯ ಹಿಂದೂ ಮುಖಂಡ ತಿಮ್ಮಯ್ಯನ ಸಹಾಯದೊಂದಿಗೆ ಆದಿಲ್ ಶಾಹಿಯಿಂದ ಗೋವಾವನ್ನು ಕೈವಶ ಮಾಡಿಕೊಂಡ ಅಲ್ಬುಕರ್ಕ ಭರತಖಂಡದ ಮೊದಲ ಯುರೋಪೀಯ ಸಾಮ್ರಾಜ್ಯ ಸ್ಥಾಪಕನಾದ. ಮುಸ್ಲೀಮ ಅರಸರ ಆಡಳಿತದಿಂದ ಬೇಸತ್ತಿದ್ದ ಹಿಂದೂಗಳು ಅವನಿಗೆ ಸಹಾಯ ಮಾಡಿದರು. ತಿಮ್ಮಯ್ಯನಿಗೆ ನಗರಾಧಿಕಾರಿ ಪಟ್ಟ ದೊರೆಯಿತು.
ಸಹಜವಾಗಿಯೇ ಪೋರ್ಚುಗಲ್ ನೊಂದಿಗೆ ವ್ಯಾಪಾರ ಆರಂಭವಾದಾಗ ವಿನಿಮಯದ ಸಮಸ್ಯೆ ಎದುರಾಯಿತು. ಆ ಸಂದರ್ಭವನ್ನು ಬಳಸಿಕೊಂಡು ಪೋರ್ಚುಗೀಸ್ ನಾಣ್ಯದ ಬಳಕೆಯನ್ನು ಜಾರಿಗೆ ತಂದ ಅಲ್ಬುಕರ್ಕ್. ಸುವರ್ಣ, ರಜತ ಹಾಗೂ ಕಂಚಿನ ನಾಣ್ಯಗಳು ಪೋರ್ಚುಗೀಸ್ ರಾಜನ ಮುದ್ರೆಯೊಂದಿಗೆ ಟಂಕಿಸಲ್ಪಟ್ಟು ಚಲಾವಣೆಗೆ ಬಂದವು.
ಕ್ರಮೇಣ ಪೋರ್ಚುಗೀಸರು ವ್ಯಾಪಾರದ ಮೇಲೆ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿದರು. ಮೊದಲು ಸಾಮಾಜಿಕ ವ್ಯವಸ್ಥೆಯ ಪರಿವರ್ತನೆಗೆ ಕೈಹಾಕದಿದ್ದರೂ ಕ್ರಮೇಣ ಮತಾಂತರ ಪ್ರಕ್ರಿಯೆ ಆರಂಭಗೊಂಡಿತ್ತು. ೧೫೮೩ ರಲ್ಲಿ ಕುಂಕೋಳಿಯಲ್ಲಿ ನಡೆಯುತ್ತಿರುವ ಮಿಶನರಿ ಚಟುವಟಿಕೆಗಳು ಸಣ್ಣ ಕಿಡಿಯನ್ನು ಹೊತ್ತಿಸಿದವು. ಅದು ಎಲ್ಲ ಪಾದ್ರಿಗಳ ಕೊಲೆಯಲ್ಲಿ ಪರ್ಯವಸಾನವಾದಾಗ ಪೋರ್ಚುಗೀಸರು ಕ್ರುದ್ಧರಾದರು. ಎಲ್ಲ ಹಳ್ಳಿಯ ಮುಖಂಡರನ್ನು ಮಾತುಕತೆಗೆಂದು ಕರೆದು ಅವರನ್ನೆಲ್ಲ ಕೋಟೆಯೊಳಗಡೆ ಕೊಂದರು. ಹಳ್ಳಿಗರು ತಮ್ಮ ಪರಂಪರಾಗತ ಮುಖಂಡರನ್ನು ಕಳೆದುಕೊಂಡರು. ನಂತರ ಪೋರ್ಚುಗೀಸರು ಸ್ಥಳೀಯರ ಜಮೀನುಗಳನ್ನು ಆಕ್ರಮಿಸಿಕೊಳ್ಳತೊಡಗಿದರು.
ಪೋರ್ಚುಗೀಸರ ದಬ್ಬಾಳಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಕ್ರಮೇಣ ಸ್ವಾತಂತ್ರ್ಯಾಂದೋಲನದ ಗಾಳಿ ಬೀಸಹತ್ತಿತು. ಅನೇಕರು ಈಗಾಗಲೇ ತಮ್ಮ ದೇವರೊಂದಿಗೆ ನೆರೆಯ ರಾಜ್ಯಗಳನ್ನು ಸೇರಿದ್ದರು. ೧೯೧೦ ರಲ್ಲಿ ಪೋರ್ಚುಗಲ್‌ನಲ್ಲಿ ಸಾಮ್ರಾಜ್ಯಶಾಹಿಯ ಅಂತ್ಯವಾದಾಗ ವಸಾಹತುಗಳಿಗೆ ಸ್ವಾತಂತ್ರ್ಯ ದೊರೆಯಬಹುದೆಂಬ ಆಶಾವಾದವಿತ್ತು. ಆದರೆ ಅದು ಹುಸಿಯಾದಾಗ ಪ್ರತಿಭಟನೆ ಆರಂಭವಾಯಿತು. ಶ್ರೀ ಲೂಯಿಸ್ ದೆ ಮೆನೆಜಿಸ್ ಬ್ರಗಾಂಜಾ ಗೋವಾದ ಮೊದಲ ಪೋರ್ಚುಗೀಸ್ ದಿನಪತ್ರಿಕೆ "ಓ ಹೆರಾಲ್ಡೋ" ವನ್ನು ಆರಂಭಿಸಿದರು. ಅದು ಪೋರ್ಚುಗೀಸರ ದುರಾಡಳಿತವನ್ನು ಟೀಕಿಸುತ್ತಿತ್ತು. ೧೯೧೭ ರಲ್ಲಿ ಜಾರಿಗೆ ಬಂದ "ಕಾರ್ತಾ ಒರ್ಗೆನಿಕಾ" ಎಂಬ ಕಾನೂನು ಜನರ ನಾಗರಿಕ ಸ್ವಾತಂತ್ರ್ಯವನ್ನು ಕಡಿಮೆ ಮಾಡಿತ್ತು. ಅದನ್ನು ವಿರೋಧಿಸಿ ಬ್ರಗಾಂಜಾ ಒಂದು ಬೃಹತ್ ಮೆರವಣಿಗೆಯನ್ನು ಮಡಗಾಂವನಲ್ಲಿ ಆಚಿiಜಿಸಿದರು.
೧೯೨೮ರಲ್ಲಿ ಟಿ.ಬಿ.ಕುನ್ಹಾ ಗೋವಾ ರಾಷ್ಟ್ರೀಯ ಕಾಂಗ್ರೆಸ್‌ನ್ನು ಸ್ಥಾಪಿಸಿದರು. ಕಲಕತ್ತಾದಲ್ಲಿ ನಡೆದ ಭಾರತೀಯ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಇದಕ್ಕೆ ಮಾನ್ಯತೆ ದೊರೆಯಿತು. ಪೋರ್ಚುಗೀಸ್ ಸರಕಾರ ಈ ಮಾನ್ಯತೆಯನ್ನು ರದ್ದು ಮಾಡುವಂತೆ ಭಾರತೀಯ ಕಾಂಗ್ರೆಸ್ಸಿ ನ ಮೇಲೆ ಒತ್ತಡ ಹೇರಿದರು. ೧೯೩೮ರಲ್ಲಿ ಮುಂಬಯಿಯಲ್ಲಿ ನೆಲೆಸಿದ್ದ ಗೋವೀಯರು ಹಂಗಾಮಿ ಗೋವಾ ಕಾಂಗ್ರೆಸ್‌ನ್ನು ಸ್ಥಾಪಿಸಿದರು.
ನಲವತ್ತರ ದಶಕದಲ್ಲಿ ದೇಶದ ಸ್ವಾತಂತ್ರ್ಯಾಂದೋಲನ ಸ್ಪಷ್ಟ ರೂಪವನ್ನು ಪಡೆದಿತ್ತು. ೧೯೪೬ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವ ಸೂಚನೆ ನೀಡುತ್ತಿದ್ದಂತೆ ಗೋವಾ ಜನರಲ್ಲೂ ಆಶಾಭಾವ ಮೂಡಿತ್ತು.
೧೯೪೬ರಲ್ಲಿ ಟಿ.ಬಿ.ಕುನ್ಹಾ ಬಂಧಿತರಾಗಿದ್ದರು. ಆಗ ಏ.ಜಿ.ತೆಂಡುಲ್ಕರ್ ಅವರು ಗೋವಾ ಕಾಂಗ್ರೆಸ್‌ನ ನೇತೃತ್ವ ವಹಿಸಿ ಗೋವಾದ ಹೊರವಲಯವಾದ ಲೋಂಡಾದಲ್ಲಿ ಸಮಾವೇಶವನ್ನು ಏರ್ಪಡಿಸಿದ್ದರು.
೧೯೪೬ ಜೂನ್ ೧೮ರಂದು ರಾಮ ಮನೋಹರ್ ಲೋಹಿಯಾ ಅವರು ಮಡಗಾಂವ್‌ನಲ್ಲಿ ದೊಡ್ಡ ಸಮಾವೇಶವನ್ನು ನಡೆಸಿದರು. ಅವರನ್ನು ೧೫೦೦ ಜನರ ಜೊತೆಗೆ ಬಂಧಿಸಲಾಯಿತು. ಗೋವಾದ ಮುಖಂಡರಾದ ಟಿ.ಬಿ.ಕುನ್ಹಾ, ಪುರುಷೋತ್ತಮ ಕಾಕೋಡ್ಕರ್ ಮತ್ತು ಲಕ್ಷ್ಮಿಕಾಂತ ಭೆಂಬ್ರೆ ಅವರನ್ನು ಪೋರ್ಚುಗಲ್‌ಗೆ ರವಾನಿಸಲಾಯಿತು. ಇದೊಂದು ಅವಿಸ್ಮರಣೀಯ ಘಟನೆ. ಇದನ್ನು ಕ್ರಾಂತಿ ದಿನ ಎಂದು ಆಚರಿಸಲಾಗುತ್ತದೆ. ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ಅನೇಕ ಸತ್ಯಾಗ್ರಹಗಳು ನಡೆದವು. ನಾಯಕರೆಲ್ಲ ಬಂಧಿತರಾದಾಗ ಗೋವಾ ಕಾಂಗ್ರೆಸ್ ಮುಂಬಯಿಯಿಂದ ಕಾರ್ಯನಿರ್ವಹಿಸಹತ್ತಿತು.
ಇದೇ ಸಮಯದಲ್ಲಿ ಭಿನ್ನ ಭಿನ್ನ ಲಕ್ಷ್ಯದೊಂದಿಗೆ ಹಲವಾರು ರಾಜಕೀಯ ಪಕ್ಷಗಳು ಸ್ಥಾಪನೆಗೊಂಡವು. ಒಬ್ಬರು ಗೋವಾವನ್ನು ಮಹಾರಾಷ್ಟ್ರದೊಂದಿಗೆ ಸೇರಿಸಬೇಕು ಎಂದರೆ ಇನ್ನೊಬ್ಬರು ದಕ್ಷಿಣರಾಜ್ಯಕ್ಕೆ ಸೇರಿಸಬೇಕೆಂದು ಪ್ರತಿಪಾದಿಸಿದರು. ಕೆಲವರು ಸಂಪೂರ್ಣ ಸ್ವಾತಂತ್ರ್ಯಕ್ಕೆ ಹೋರಾಡಿದರೆ ಕೆಲವರು ಸ್ವಾಯತ್ತತೆ ಸಾಕೆಂದರು. ಇದನ್ನು ಗಮನಿಸಿದ ಗಾಂಧೀಜಿ ಎಲ್ಲರೂ ಒಟ್ಟು ಸೇರಿ ಹೋರಾಡಲು ಕರೆ ನೀಡಿದರು. ೧೯೪೭ರಲ್ಲಿ ಮುಂಬಯಿಯಲ್ಲಿ ಸಭೆ ಸೇರಿದ ಎಲ್ಲ ಪಕ್ಷಗಳ ಮುಖಂಡರು "ಪೋರ್ಚುಗೀಸರೇ ಗೋವಾ ಬಿಟ್ಟು ತೊಲಗಿ" ಆಂದೋಲನಕ್ಕೆ ಚಾಲನೆ ನೀಡಿದರು.
೧೯೪೮ ರಲ್ಲಿ ಗೋವಾವನ್ನು ಭಾರತ ಒಕ್ಕೂಟಕ್ಕೆ ಸೇರಿಸುವ ಸಲುವಾಗಿಮಾತುಕತೆಗೆ ಪೋರ್ಚುಗೀಸರನ್ನು ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಆಹ್ವಾನಿಸಿದರು. ಆದರೆ ಅವರು ಸಿದ್ಧರಿರಲಿಲ್ಲ. ೧೯೫೩ ರಲ್ಲಿ ಪೋರ್ಚುಗಲ್‌ನಲ್ಲಿರುವ ಭಾರತೀಯ ನಿಯೋಗದ ಮೂಲಕ ಮತ್ತೆ ಮಾತುಕತೆ ಪ್ರಯತ್ನ ಆಂಭವಾಯಿತು. ಆದರೆ ಪೋರ್ಚುಗೀಸರು ನೇರ ವರ್ಗಾವಣೆಗೆ ಒಪ್ಪಲಿಲ್ಲ. ಎರಡು ದೇಶಗಳ ನಡುವಿನ ರಾಜಕೀಯ ಸಂಬಂಧ ಹಳಸಿತು. ಜೂನ್ ೧೧ ರಂದು ನೆಹರು ಗೋವಾವನ್ನು ಭಾರತದ ಒಕ್ಕೂಟಕ್ಕೆ ಸೇರಿಸುವುದಾಗಿ ಸಾರ್ವಜನಿಕವಾಗಿ ಉದ್ಘೋಷಿಸಿದರು.

ಕ್ರಾಂತಿಕಾರಿ ಹೋರಾಟ:

ಆಝಾದ್ ಗೋಮಂತಕ ದಳ ಎಂಬ ಗುಂಪು ಕ್ರಾಂತಿಯ ಮೂಲಕ ಸ್ವಾತಂತ್ರ್ಯ ಪಡೆಯಲು ಯತ್ನಿಸಿತು. ಪೋಲಿಸ್ ಠಾಣೆ ಹಾಗೂ ಕಾರ್ಖಾನೆಗಳ ಮೇಲೆ ಈ ದಳ ದಾಳಿ ನಡೆಸಿತು. ಅನೇಕ ಬಾಂಬ್ ದಾಳಿಗಳು ನಡೆದವು. ಪೋರ್ಚುಗೀಸರು ತಮ್ಮ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿದರು. ಶಿವಾಜಿರಾವ್ ಗೋವಿಂದರಾವ್ ದೇಸಾಯಿ ಅವರು ಗೋವಾ ವಿಮೋಚನಾ ಸೇನೆಯನ್ನು ಸ್ಥಾಪಿಸಿದರು.
೧೯೫೩ರಲ್ಲಿ ಟಿ.ಬಿ.ಕುನ್ಹಾ ಗೋವಾ ಕ್ರಿಯಾ ಸಮಿತಿಯನ್ನು ರಚಿಸಿದರು. ೧೯೫೪ ಅಗಸ್ಟ್ ೧೫ರಂದು ಬೃಹತ್ ಸತ್ಯಾಗ್ರಹ ಆರಂಭವಾಯಿತು. ಪಿ.ಡಿ.ಗಾಯತೊಂಡೆ ಬಂಧಿತರಾದರು. ಸತ್ಯಾಗ್ರಹಿಗಳಿಗೆ ಸಹಾಯ ಒದಗಿಸಲು ಗೋವಾ ವಿಮೋಚನ ಸಹಾಯಕ ಸಮಿತಿಯ ರಚನೆಯಾಯಿತು. ಮಹಾರಾಷ್ಟ್ರದ ಪ್ರಜಾ ಸಮಾಜವಾದಿ ಪಕ್ಷ ಸತ್ಯಾಗ್ರಹಿಗಳ ಬೆಂಬಲಕ್ಕೆ ಬಂತು.
ಭಾರತ ಸರಕಾರವು ತನ್ನ ಸಾರ್ವಭೌಮತೆಗೆ ಭಂಗ ತರುತ್ತಿದೆ ಎಂದು ಪೋರ್ಚುಗಲ್ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ದೂರಿತ್ತ ಪರಿಣಾಮ ಸತ್ಯಾಗ್ರಹಿಗಳಿಗೆ ತನ್ನ ಬೆಂಬಲವಿಲ್ಲ ಎಂದು ನೆಹರು ಉದ್ಘೋಷಿಸ ಬೇಕಾಯಿತು. ಇದು ಗೋವಾದ ಸ್ವಾತಂತ್ರ್ಯ ಆಂದೋಲನಕ್ಕೆ ಭಾರಿ ಹೊಡೆತ ಕೊಟ್ಟಿತು. ಕೆಲವರು ತೆರೆಖೋಲ್ ಕೋಟೆಯೊಳಗೆ ನುಗ್ಗಲು ಯತ್ನಿಸಿದರು. ಸರಿಯಾದ ಬೆಂಬಲ ಸಿಗಲಿಲ್ಲ. ೧೯೫೪ರ ಜೂನ್ ೧೮ರಂದು ಭಾರತದ ಸತ್ಯಾಗ್ರಹಿಗಳು ಗೋವಾದಲ್ಲಿ ಭಾರತದ ಧ್ವಜವನ್ನು ಹಾರಿಸಲು ಯತ್ನಿಸಿದರು. ನಾಯಕರು ಹಾಗೂ ಬೆಂಬಲಿಗರು ಬಂಧಿತರಾದರು. ಡಾ. ಗಾಯತೊಂಡೆ ಹಾಗೂ ದೇಶಪಾಂಡೆ ಪೋರ್ಚುಗಲ್‌ಗೆ ರವಾನೆಯಾದರು.
೧೯೫೪ರ ಜುಲೈ ೧೯೫೪ ರಂದು ಫ್ರಾನ್ಸಿಸ್ ಮಸ್ಕರೆನ್ಹಾಸ್ ಅವರ ನೇತೃತ್ವದ ಗೋವಾ ಸಂಯುಕ್ತ ರಂಗ ದಾದ್ರವನ್ನು ಪೋರ್ಚುಗೀಸರ ಮುಷ್ಟಿಯಿಂದ ಬಿಡಿಸಿತು. ಜುಲೈ ೨೮ರಂದು ರಾಷ್ಟ್ರೀಯ ವಿಮೋಚನಾ ಆಂದೋಲನ ಸಂಘಟನೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಾಗೂ ಆಜಾದ್ ಗೋಮಂತಕ ದಳಗಳು ಒಟ್ಟು ಸೇರಿ ನಗರ ಹವೇಲಿ ಯ ಮೇಲೆ ದಾಳಿ ಮಾಡಿ ಅಗಸ್ಟ್ ೨ ರಂದು ಅದನ್ನು ಮುಕ್ತಗೊಳಿಸಿದರು.
ಇದು ಗೋವಾದ ಸತ್ಯಾಗ್ರಹಿಗಳ ಉತ್ಸಾಹ ಹೆಚ್ಚಿಸಿತು. ೧೯೫೪ರ ಅಗಸ್ಟ್ ೧೫ರಂದು ಹೊರಗಿನ ಅನೇಕ ಸತ್ಯಾಗ್ರಹಿಗಳು ಭಾರತೀಯ ಸರಕಾರದ ನಿಷೇಧವನ್ನು ಲೆಕ್ಕಿಸದೆ ಗೋವಾ ಪ್ರವೇಶಿಸಿದರು. ಪೋರ್ಚುಗೀಸರು ಅನೇಕರನ್ನು ಕೊಂದರು. ಅನೇಕರು ಗಾಯಗೊಂಡರು.
೧೯೬೧ ರಲ್ಲಿ ಭಾರತ ಸರಕಾರ ಶಕ್ತಿಪ್ರಯೋಗದಿಂದಲಾದರೂ ಗೋವಾವನ್ನು ಮುಕ್ತಗೊಳಿಸುವ ತನ್ನ ಇಂಗಿತವನ್ನು ಪುನರುಚ್ಚರಿಸಿತು. ಅಗಸ್ಟ್ ತಿಂಗಳಲ್ಲಿ ಸೇನೆಯ ಸಿದ್ಧತೆಯ ಆರಂಭವಾಯಿತು. ಡಿಸೆಂಬರ್ ೧ರಂದು ನೆಹರು ಗೋವಾದ ವಿಷಯದಲ್ಲಿ ಸರಕಾರ ಸುಮ್ಮನಿರುವುದಿಲ್ಲವೆಂದು ಉದ್ಘೋಷಿಸಿದರು. ಗೋವಾದ ಸಮೀಪದ ಪ್ರಮುಖ ನಗರಗಳಲ್ಲಿ ಸೈನ್ಯ ಜಮಾವಣೆ ಗೊಂಡಿತು. ನೆಹರು ಬಲವಂತವಾಗಿ ಗೋವಾವನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಸೇನೆಗೆ ಆಜ್ಞಾಪಿಸಿದರು. "ಆಪರೇಶನ್ ವಿಜಯ್" ಆರಂಭವಾಯಿತು.
ಡಿಸೆಂಬರ್ ೧೧ ರ ಹೊತ್ತಿಗೆ ಭಾರತೀಯ ಸೇನೆ ಬೆಳಗಾವಿಯನ್ನು ತಲುಪಿತು. ನವೆಂಬರ್ ೨೮ ರಂದೇ ನೌಕಾಪಡೆಯ ಐ.ಎನ್.ಎಸ್. ರಜಪೂತ್, ಐ.ಎನ್.ಎಸ್. ಕಿರಪನ್, ಐ.ಎನ್.ಎಸ್. ಬಿಟ್ವಾ, ಐ.ಎನ್.ಎಸ್.ಬಿಯಸ್ ಮುಂತಾದ ಯುದ್ಧ ನೌಕೆಗಳು ರಣರಂಗವನ್ನು ಪ್ರವೇಶಿಸಿದ್ದವು. ಐ.ಎನ್.ಎಸ್.ಮೈಸೂರ್, ಐ.ಎನ್.ಎಸ್. ತ್ರಿಶೂಲ್, ಐ.ಎನ್.ಎಸ್.ಕುಠಾರ್, ಐ.ಎನ್.ಎಸ್. ಖುಕ್ರಿ, ಐ.ಎನ್.ಎಸ್. ಕಾರವಾರ, ಐ.ಎನ್.ಎಸ್. ಕಾಕಿನದಾ, ಐ.ಎನ್.ಎಸ್. ಐ.ಎನ್.ಎಸ್. ಕಣ್ಣಾನೂರ್, ಐ.ಎನ್.ಎಸ್. ಬಿಮಲಿಪಟ್ಟಣ್, ಐ.ಎನ್.ಎಸ್. ಧಾರಿಣಿ ಇವನ್ನು ಸೇರಿಕೊಂಡವು.
ಮೊದಲ ಲಕ್ಷ್ಯ ಅಂಜದಿವ್ ದ್ವೀಪ. ಲೆಫ್ಟಿನಂಟ್ ಅರುಣ್ ಅಡಿಟ್ಟೋ ಅವರ ನೇತೃತ್ವದಲ್ಲಿ ದಾಳಿ ಆರಂಭವಾಯಿತು. ಡಿಸೆಂಬರ್ ೧೮ ರ ಮಧ್ಯಾಹ್ನ ೨.೪೫ ರ ಹೊತ್ತಿಗೆ ಅಂಜದೀವ್ ಸ್ವತಂತ್ರವಾಯಿತು. ೭ ನಾವಿಕರು ಈ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದರು. ಅನೇಕರು ಗಾಯಗೊಂಡರು.
ಮರ್ಮಗೋವಾ ಸಾಗರದಲ್ಲಿದ್ದ ಅಲ್ಬುಕರ್ಕ ಹಡಗಿನ ಮೇಲೆ ದಾಳಿ ಆರಂಭವಾಯಿತು. ಡಿಸೆಂಬರ್ ೧೯ರಂದು ದಾಳಿ ಮುಂದುವರಿದು ಅಂದು ಸಾಯಂಕಾಲ ೬ ಗಂಟೆಯ ಹೊತ್ತಿಗೆ ಕಾರ್ಯಾಚರಣೆ ಮುಕ್ತಾಯವಾಯಿತು. ಪೋರ್ಚುಗೀಸರ ಗವರ್ನರ್ ಜನರಲ್ ವಸ್ಸಲೊ ಡಿ ಸಿಲ್ವಾ ಸಂಜೆ ೭.೩೦ಕ್ಕೆ ಶರಣಾಗತಿಪತ್ರಕ್ಕೆ ಸಹಿ ಹಾಕಿದನು.
ಹೀಗೆ ೪೦ ತಾಸುಗಳ ಕಾರ್ಯಾಚರಣೆ ಗೋವಾದ ವಿದೇಶೀ ಸರಕಾರವನ್ನು ಉರುಳಿಸಿತು. "ಆಪರೇಶನ್ ವಿಜಯ್" ಅನ್ವರ್ಥಕವಾಯಿತು.

ಮಹಾಬಲ ಭಟ್, ಗೋವಾ