Friday, December 17, 2010

ಭಗವದ್ಗೀತೆ-ಯುವಕರ ಚೈತನ್ಯಸ್ರೋತ.

ಭಗವದ್ಗೀತೆಯ ಬಗ್ಗೆ ವಿಚಾರಬಂದಾಗಲೆಲ್ಲ ಸ್ವಾಮಿ ವಿವೇಕಾನಂದರು ನೆನಪಾಗುತ್ತಾರೆ. "ಭಗವದ್ಗೀತೆ ೬೦ನ್ನು ದಾಟಿದವರ ಕಾಲಕ್ಷೇಪಗ್ರಂಥವೆಂದು ತಿಳಿದು ನಿವೃತ್ತಿಯ ನಂತರ ಆ ಗ್ರಂಥವನ್ನು ತೆರೆದರೆ ಮೊದಲೇ ಓದಿದ್ದರೆ ಜೀವನದಲ್ಲಿ ಏನನ್ನಾದರೂ ಮಾಡಬಹುದಿತ್ತಲ್ಲ ಎಂದು ಪಶ್ಚಾತ್ತಾಪವಾಗುತ್ತದೆ." ಹೌದು. ಭಗವದ್ಗೀತೆ ಮುದುಕರು ಓದಬೇಕಾದ ಗೊಡ್ಡು ಗ್ರಂಥವಲ್ಲ. ಅದರಲ್ಲಿ ನಮ್ಮ ಯುವ ಪೀಳಿಗೆ ಓದಿ ಅನುಸರಿಸಬೇಕಾದ ಅದೆಷ್ಟೋ ಅಂಶಗಳಿವೆ. ಮೋಕ್ಷಪ್ರಾಪ್ತಿಯೇ ಭಗವದ್ಗೀತೆಯ ಲಕ್ಷ್ಯವಾದರೂ ಕರ್ಮಯೋಗದ ಉದ್ಗ್ರಂಥ ಅದು.
ಭಗವದ್ಗೀತೆಯ ವಿಷಯದಲ್ಲಿ ನಾವು ಪ್ರಥಮವಾಗಿ ಗಮನಿಸಬೇಕಾದ ಅಂಶ ಅಂದರೆ ಅದನ್ನು ಬೋಧಿಸಿದ್ದು ಯಾವುದೇ ತಪೋಭೂಮಿಯಲ್ಲಲ್ಲ; ಖಾಡಾಖಾಡಿ ಯುದ್ಧ ಮಾಡಬೇಕಾದ ರಣರಂಗವೆಂಬ ಕರ್ಮಭೂಮಿಯಲ್ಲಿ. ಎರಡನೆಯ ಅಂಶ ಇದನ್ನು ಬೋಧಿಸಿದವನು ಯಾವುದೇ ಋಷಿಯಲ್ಲ; ಭಾರತದ ಸಾರ್ವಕಾಲಿಕ ರಾಜಕೀಯ ಮುತ್ಸದ್ಧಿ ಶ್ರೀಕೃಷ್ಣ. ಮೂರನೆಯ ಅಂಶ ಇದನ್ನು ಬೋಧಿಸಿದ್ದು ಸಾವಿನಂಚಿನಲ್ಲಿರುವ ವೃದ್ಧನಿಗೋ, ಮೂಗು ಮುಚ್ಚಿಕೊಂಡು ತಪಸ್ಸನ್ನಾಚರಿಸುವ ತಪಸ್ವಿಗೋ ಅಲ್ಲ; ಅರ್ಜುನ ಎಂಬ ಬಿಸಿರಕ್ತದ ವೀರಯೋಧನಿಗೆ. ಬೋಧನೆಯ ಉದ್ದೇಶ ಮೋಕ್ಷಪ್ರಾಪ್ತಿಯಲ್ಲ; ಕರ್ತವ್ಯವಿಮುಖನಾದವನನ್ನು ಕಾರ್ಯಸಮ್ಮುಖಿಯಾಗಿ ಮಾಡುವುದು. ಇಷ್ಟಿದ್ದೂ ನಾವು ಇಂದಿಗೂ ಭಗವದ್ಗೀತೆಯನ್ನು ವೃದ್ಧರ ಕಾಲಕ್ಷೇಪ ಗ್ರಂಥ ಎಂದು ಭಾವಿಸುತ್ತೇವೆ. ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿಯೆಂದು ಗುರುತಿಸಲ್ಪಟ್ಟ ಆಲ್ಬರ್ಟ್ ಐನ್‌ಸ್ಟೈನ್ ಭಾರತೀಯನೊಬ್ಬನಿಗೆ ಹೀಗೆ ಛೀಮಾರಿ ಹಾಕಿದ್ದರು.
""You hail from India in the name of Hindu philosophy, yet you have not cared to learn Sanskrit. Come along; see my library which treasures classics from Sanskrit, the Geeta and other treasures on Hindu Philosophy. They are the main source of inspirations and guidelines for the purpose of scientific investigations and formulation of theories".

ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಬಂದಿದ್ದು ಧರ್ಮಸಂಕಟ. ಅವನ ಮುಂದೆ ಧರ್ಮ ಹಾಗೂ ಅಧರ್ಮಗಳಲ್ಲಿ ಒಂದನ್ನು ಆರಿಸಿಕೊಳ್ಳುವ ಸಮಸ್ಯೆಯಿರಲಿಲ್ಲ. ಎರಡು ಧರ್ಮಗಳಲ್ಲಿ ಯಾವುದು ಶ್ರೇಷ್ಠ ಎಂಬುದು ಅವನ ಮುಂದಿರುವ ಸಮಸ್ಯೆಯಾಗಿತ್ತು. ಒಂದೆಡೆ ’ಅಹಿಂಸಾ ಪರಮೋ ಧರ್ಮ:’ ಎಂಬ ಆರ್ಷ ವಾಕ್ಯ. ಇನ್ನೊಂದೆಡೆ ’ಕ್ಷತ್ರಿಯಧರ್ಮ’. ಆ ಕಾಲಕ್ಕೆ ಆ ಸ್ಥಳದಲ್ಲಿ ಯಾವ ಧರ್ಮವನ್ನು ಆಶ್ರಯಿಸಬೇಕು ಎಂಬುದು ಆತನ ಸಮಸ್ಯೆಯಾಗಿತ್ತು. ಆತನೇನೂ ನಿರಕ್ಷರಿಯಲ್ಲ. ವೇದ ವೇದಾಂಗಗಳಲ್ಲೂ ಶಸ್ತ್ರವಿದ್ಯೆಯಲ್ಲೂ ಪಾರಂಗತನಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡವ. ಅಂಥವನೇ ಕೌರವಸೇನೆಯ ಮುಂದೆ ದಿಙ್ಮೂಢನಾಗಬೇಕಾಯಿತು. ನಮ್ಮ ಜೀವನದಲ್ಲೂ ನಾವೆಲ್ಲ ಅರ್ಜುನರೇ. ಇಂದು ನಾವು ಅನೇಕ ಪದವಿಗಳನ್ನು ಪಡೆದುಕೊಂಡಿದ್ದರೂ ಅದನ್ನು ಸಂದಿಗ್ಧ ಪರಿಸ್ಥಿತಿಯಲ್ಲಿ ಉಪಯೋಗಿಸಿಕೊಳ್ಳಲಾಗದೆ ಕರ್ತವ್ಯಭ್ರಷ್ಟರಾಗುತ್ತೇವೆ. ಈ ಮನೋವ್ಯಾಧಿ ಬುದ್ಧಿವಂತರೆನಿಸಿಕೊಂಡವರಲ್ಲೇ ಹೆಚ್ಚು. ಇಂದು ದಿನಕ್ಕೊಂದರಂತೆ ತಲೆ ಎತ್ತುತ್ತಿರುವ ಕೌನ್ಸೆಲಿಂಗ್ ಸೆಂಟರ್‌ಗಳೇ ಅದಕ್ಕೆ ಸಾಕ್ಷಿ. "ಯುದ್ಧ ಮಾಡಲಾರೆ; ವನಕ್ಕೆ ಹೋಗಿ ತಪಸ್ಸು ಮಾಡುತ್ತೇನೆ ಎಂದ ಹೇಡಿ ಅರ್ಜುನನಂತೆ ಕಷ್ಟವನ್ನು ಎದುರಿಸಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದೆ ಇಂದಿನ ಯುವ ಸಮಾಜ. "ಕ್ಲೈಬ್ಯಂ ಮಾ ಸ್ಮ ಗಮ: ಪಾರ್ಥ!"(ಅರ್ಜುನ ನಪುಂಸಕನಾಗಬೇಡ!) ಎಂಬ ಚಾವಟಿಯೇಟು ನಮ್ಮ ಬೆನ್ನಿಗೇ ಬಿದ್ದಿದೆಯೆಂದು ತಿಳಿಯಬೇಕು.
ಇಂದು ಜನಪ್ರಿಯವಾಗುತ್ತಿರುವ ಸ್ಟ್ರೆಸ್ ಮೆನೇಜ್‌ಮೆಂಟ್ ಭಗವದ್ಗೀತೆಯ ಕೂಸು. ಒಂದೆಡೆ ಯುದ್ಧ ಮಾಡುವ ಅನಿವಾರ್ಯತೆ, ಇನ್ನೊಂದೆಡೆ ಬಲಿಯ ಸ್ಥಾನದಲ್ಲಿ ನಿಂತಿರುವ ಬಂಧು-ಬಳಗ. ಈ ದ್ವಂದ್ವದಲ್ಲಿ ಸಿಲುಕಿರುವ ಅರ್ಜುನ ನಮ್ಮೆಲ್ಲರ ಪ್ರತಿನಿಧಿ. ತಾಯಿ-ಹೆಂಡತಿ, ಉದ್ಯೋಗ-ವಿದ್ಯಾಭ್ಯಾಸ, ವ್ಯಷ್ಟಿ-ಸಮಷ್ಟಿ, ಕುಟುಂಬ-ರಾಷ್ಟ್ರ ಈ ದ್ವಂದ್ವಗಳಲ್ಲಿ ಸಿಲುಕಿದ ಮಾನವ ತನ್ನ ಸಮೀಪ ಕೃಷ್ಣನಿಲ್ಲದೆ ತೊಳಲಾಡುತ್ತಿದ್ದಾನೆ. ಇಂತಹ ಮನೋವ್ಯಾಧಿಗೆ ಅಮೃತೌಷಧವಾಗಬಲ್ಲದು ಭಗವದ್ಗೀತೆ. ಸಂತೋಷದಲ್ಲಿ ಅತಿಯಾಗಿ ಹಿಗ್ಗಿದರೆ ಮಾತ್ರ ದು:ಖದಲ್ಲಿ ಕುಗ್ಗುಂಟು. ಯಶಸ್ವಿಯಾದಾಗ ಅಹಂಕಾರಿಯಾದರೆ ಮಾತ್ರ ಅಸಫಲನಾದಾಗ ದು:ಖಪಡಬೇಕಾಗುವುದು. ಈ ಸಮಸ್ಯೆಯ ಪರಿಹಾರಕ್ಕೆ ಬೀಜಮಂತ್ರ "ಸಮತ್ವಂ ಯೋಗ ಉಚ್ಯತೇ". ಜೋರಾಗಿ ಗಾಳಿಬೀಸದ ಸ್ಥಳದಲ್ಲಿರುವ ದೀಪದಂತೆ ಮನಸ್ಸು ಸ್ಥಿರವಾಗಿದ್ದರೆ ಬದುಕು ಪ್ರಕಾಶಮಾನವಾಗುತ್ತದೆ ಹೊಯ್ದಾಡುವ ಮನಸ್ಸು ಬದುಕನ್ನು ಅಸ್ಥಿರಗೊಳಿಸುತ್ತದೆ. ಯಾವನು ಜಯ-ಅಪಜಯಗಳಲ್ಲಿ, ಲಾಭ-ನಷ್ಟಗಳಲ್ಲಿ, ಸುಖದು:ಖಗಳಲ್ಲಿ ಒಂದೇ ಮನೋಸ್ಥಿತಿಯನ್ನು ಇಟ್ಟುಕೊಳ್ಳಬಲ್ಲನೋ ಅವನು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ.

ಭಗವದ್ಗೀತೆಯ ಬಗ್ಗೆ ಇಷ್ಟೆಲ್ಲ ತಿಳಿದ ಮೇಲೂ ನೀವು ಭಗವದ್ಗೀತೆ ಇರುವುದು ವೃದ್ದರಿಗಾಗಿ ಎನ್ನುತ್ತೀರಾ? ಕಳೆದ ವರ್ಷ ಅಲಹಾಬಾದ್ ಉಚ್ಚನ್ಯಾಯಲಯ ಭಗವದ್ಗೀತೆಯನ್ನು ರಾಷ್ಟ್ರೀಯ ಧರ್ಮಗ್ರಂಥವೆಂದು ಉದ್ಘೋಷಿಸಬೇಕು ಎಂದು ಸರಕಾರಕ್ಕೆ ಸಲಹೆ ಮಾಡಿತ್ತು. ಸರಕಾರ ಅದನ್ನು ಮಾಡಲಾರದು; ನಾವಾದರೂ ಮಾಡೋಣವೆ?
ಲೇಖಕರು:
ಮಹಾಬಲ ಭಟ್
ಸಂಸ್ಕೃತ ಉಪನ್ಯಾಸಕರು, ಗೋವಾ
mahabalabhat@gmail.com

Address:
St. Xavier’s Higher Secondary School
Mapusa, Bardez, Goa – 403 507
Mob: 09860060373