Sunday, January 16, 2011

ಅಮರಕವಿ ಕಾಳಿದಾಸ




ಕಾಳಿದಾಸನ ಹೆಸರನ್ನು ಕೇಳದ ಭಾರತೀಯನಾರು? ಕವಿತ್ವದ ಮೂರ್ತ ಸ್ವರೂಪನೋ ಎಂಬಂತೆ ಕವಿಯೆಂದರೆ ಕಾಳಿದಾಸ ಎಂಬ ಅಜರಾಮರ ಕೀರ್ತಿಭಾಜನ ಕಾಳಿದಾಸ. ಭಾರತದಲ್ಲಷ್ಟೇ ಅಲ್ಲದೇ ಭಾರತದ ಅದರಲ್ಲೂ ಸಂಸ್ಕೃತ ಸಾಹಿತ್ಯದ ಸುಗಂಧವನ್ನು ದಿಗ್ದಗಂತಗಳಲೂ ಹಬ್ಬಿಸಿದ ಅದ್ವಿತೀಯ ಕವಿ ಕಾಳಿದಾಸ.
ಪ್ರಸಿದ್ಧ ವ್ಯಕ್ತಿಗಳ ಸುತ್ತೆಲ್ಲ ದಂತ ಕತೆಗಳ ಬಳ್ಳಿಯೇ ಹಬ್ಬಿಕೊಂಡಿರುತ್ತದೆ ಎಂಬುದಕ್ಕೆ ಕಾಳಿದಾಸನೂ ಅಪವಾದನಲ್ಲ. ಕಾಳಿದಾಸನ ಬಗ್ಗೆ ಇರುವ ಐತಿಹ್ಯಗಳಿಗೆ ಲೆಕ್ಕವಿಲ್ಲ. ಬಾಲ್ಯದಲ್ಲಿ ಕುರುಬನಾಗಿದ್ದವನು ಕಾಳಿಯ ವರಪ್ರಸಾದದಿಂದ ಕವಿತ್ವ ಶಕ್ತಿಯನ್ನು ಪಡೆದುಕೊಂಡು "ಕಾಳಿದಾಸ" ನಾದ ಎಂಬುದುಪ್ರಸಿದ್ಧ ದಂತಕತೆ. ಭೋಜರಾಜನ ಆಸ್ಥಾನ ಪಂಡಿತನಾಗಿದ್ದನೆಂಬುದು ಇನ್ನೊಂದು ದಂತಕತೆ. ಆದರೆ ಇತಿಹಾಸ ಮಾತ್ರ ಇವನು ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದಲ್ಲಿ ನವಮಣಿಗಳಲ್ಲಿ ಶ್ರೇಷ್ಠತಮನಾದ ಪಂಡಿತನಾಗಿದ್ದನೆಂಬುದನ್ನು ಒಪ್ಪುತ್ತದೆ.
ಕಾಳಿದಾಸನ ಅಮರ ಕೃತಿಗಳು ಏಳು. ಇವನ ಎಲ್ಲ ಕೃತಿಗಳಲ್ಲೂ ವಿಶಿಷ್ಟವಾದ ನವನವೋನ್ಮೇಷಶಾಲಿಯಾದ ಪ್ರತಿಭಾ ವಿಲಾಸವನ್ನು ಅನುಭವಿಸಬಹುದು. ಅವನ ಕವಿತಾ ರಸ ಮಾಧುರ್ಯ, ಶಬ್ದ ಸೌಂದರ್ಯ, ಅರ್ಥ ಗಾಂಭೀರ್ಯ, ಅಲಂಕಾರ ಚಾತುರ್ಯಗಳು ಎಂಥವನನ್ನೂ ಬೆರಗುಗೊಳಿಸುವಂಥದ್ದು.
ಅವನ ಅಭಿಜ್ಞಾನ ಶಾಕುಂತಲಮ್ ನಾಟಕವಂತೂ ವಿಶ್ವ ಪ್ರಸಿದ್ಧ. ’ಕಾವ್ಯೇಷು ನಾಟಕಮ್ ರಮ್ಯಂ ತತ್ರ ರಮ್ಯಾ ಶಾಕುಂತಲಾ’ ಎಂಬುದು ಪ್ರಸಿದ್ಧ ನುಡಿ.
ಶಕುಂತಲೆ - ದುಷ್ಯಂತರ ಅಮರ ಪ್ರೇಮ ಕಥೆ ಶೃಂಗಾರ ರಸಪೂರ್ಣವಾಗಿ ಅವರ್ಣನೀಯ ಕಾವ್ಯಾನಂದವನ್ನು ನೀಡುತ್ತದೆ. ಯಾವ ಸನ್ನಿವೇಶವನ್ನಾದರೂ ಹೃದಯ ಸ್ಪರ್ಶಿಯಾಗಿ ಚಿತ್ರಿಸುವುದು ಕಾಳಿದಾಸನ ವೈಶಿಷ್ಟ್ಯ. ತನ್ನ ಸಾಕು ಮಗಳಾದ ಶಾಕುಂತಲೆಯನ್ನು ದುಷ್ಯಂತನೆಡೆಗೆ ಕಳಿಸುವಾಗ ಕಣ್ವರ ಹೃದಯದಲ್ಲಾದ ವೇದನೆಯನ್ನು ಅವನು ಚಿತ್ರಿಸಿದ ಪರಿ ಮನ ಮಿಡಿಯುವಂತದ್ದು. - " ಯಾಸ್ಯತ್ಯದ್ಯ ಶಕುಂತಲೇತಿ ಹೃದಯಂ" (ಶಕುಂತಲೆಯೆಂಬ ಹೃದಯವೇ ಹೋಗುತ್ತಿದೆ) ಎಂಬ ಅವನ ಶಬ್ಧಗಳ ಶಕ್ತಿಗೆ ಅಳತೆಯುಂಟೇ? ಅವನ ಮಾಲವಿಕಾಗ್ನಿಮಿತ್ರಂ ಮತ್ತು ವಿಕ್ರಮೋರ್ವಶೀಯಂ ಗಳು ಸಹ ಶೃಂಗಾರ ರಸಧಾರೆಯನ್ನು ಹರಿಸುವಲ್ಲಿ ಹಿಂದೆ ಬೀಳಲಾರವು.
ಕಾಳಿದಾಸನ ರಘುವಂಶಂ ಮತ್ತು ಕುಮಾರ ಸಂಭವಂ ಎಂಬ ಎರಡು ಮಹಾ ಕಾವ್ಯಗಳು ಸಂಸ್ಕೃತದ ಪಂಚಮಹಾ ಕಾವ್ಯಗಳಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿವೆ. ದಿಲೀಪನಿಂದ ಹಿಡಿದು ಅಗ್ನಿಮಿತ್ರ ನ ವರೆಗೆ ರಘುವಂಶದ ದೊರೆಗಳೆಲ್ಲರ ಚರಿತ್ರೆಯನ್ನು ಕಾವ್ಯ ವೊಂದರಲ್ಲಿ ಸೆರೆ ಹಿಡಿದ ಅವನ ವೈಶಿಷ್ಟ್ಯ ಅದ್ಭುತ! ರಘುವಂಶದ ರಾಜರ ಆದರ್ಶವನ್ನು ಚಿತ್ರಿಸುವಲ್ಲಿ ವಾಲ್ಮೀಕಿ ಮಹರ್ಷಿಗಿಂತ ಒಂದು ಕೈ ಮಿಗಿಲಾಗಿದ್ದಾನೆ ಎಂದರೂ ಅತಿಶಯೋಕ್ತಿಯಲ್ಲ. ಕುಮಾರಸಂಭವದಲ್ಲಿ ವೈರಾಗ್ಯ ಶಿಖಾಮಣಿ ಪರಮೇಶ್ವರ ಹಾಗೂ ಶೃಂಗಾರ ಭಾವಪೂರ್ಣೆ ಪಾರ್ವತಿಯ ನಡುವಿನ ಪ್ರೇಮಸಂಗದ ಕಲ್ಪನಾ ವಿಲಾಸವು ಯಾರನ್ನೂ ಬೆರಗುಗೊಳಿಸುವಂತದ್ದು.
" ಋತು ಸಂಹಾರ" ಎಂಬುದು ಷಟ್ ಋತುಗಳ ಮನೋಜ್ಞ ವರ್ಣನೆಯಿಂದ ಕೂಡಿದ ಸಂಭೋಗ ಶೃಂಗಾರದ ಅನುಪಮ ಖಂಡಕಾವ್ಯ.
ಅವನ ಇನ್ನೊಂದು ಪ್ರಸಿದ್ಧ ಖಂಡಕಾವ್ಯ "ಮೇಘದೂತ" ವಿಪ್ರಲಂಭ ಶೃಂಗಾರದ ಮೇರು ಕೃತಿ. ಕುಬೇರನ ಶಾಪದಿಂದ ಒಂದು ವರ್ಷ ಕಾಲ ಪತ್ನಿಯಿಂದ ದೂರವಿರಬೇಕಾಗಿಬಂದ ಯಕ್ಷನೊಬ್ಬ ಆಷಾಢದ ಒಂದು ದಿನ ಆಕಾಶದಲ್ಲಿ ಸಂಚರಿಸುತ್ತಿದ್ದ ನೀಲಮೇಘವನ್ನೇ ತನ್ನ ಸಂದೇಶ ರವಾನೆಗಾಗಿ ಪತ್ನಿಯತ್ತ ಕಳಿಸಿದ ಕಲ್ಪನೆ ಯಾರ ಮನ ಸೂರೆಗೊಳ್ಳದು? ಅರ್ಥಾಂತರಾನ್ಯಾಸ ಅಲಂಕಾರಭೂಯಿಷ್ಠವಾದ ಈ ಕಾವ್ಯದಲ್ಲಿ ರಾಮಗಿರಿಯಿಂದ ಅಲಕಾ ಪಟ್ಟಣದವರೆಗಿನ ಭೂ ಪ್ರದೇಶಗಳ ವರ್ಣನೆಯೂ ಇರುವುದು ವೈಶಿಷ್ಟ್ಯ. (ಅಖಂಡ ಭಾರತದ ಕಲ್ಪನೆಯನ್ನು ಕೊಟ್ಟವರು ಬ್ರಿಟೀಷರು ಎಂಬ ದುರ್ವಾದಕ್ಕೆ ಪ್ರತ್ಯುತ್ತರ ಕೊಡುವ ಶಕ್ತಿ ಈ ಕಾವ್ಯಕ್ಕಿದೆ.)
ಕಾಳಿದಾಸನ ಪ್ರತಿಭೆಗೆ ಸಮನಾಗಿ ನಿಲ್ಲುವ ಕವಿ ಪ್ರಾಯಶಃ ಹುಟ್ಟಿಲ್ಲ. ಒಮ್ಮೆ ಕಿರುಬೆರಳಿನಿಂದ ಉತ್ತಮ ಕವಿಗಳನ್ನು ಎಣಿಸಲಾರಂಭಿಸಿದ ವಿದ್ವಾಂಸರು ಮೊದಲು ಕಾಳಿದಾಸನ ಹೆಸರನ್ನು ತೆಗೆದುಕೊಂಡರಂತೆ. ಆನಂತರ ಅವನ ಯೋಗ್ಯತೆಯ ಸನಿಹವಾದರೂ ಇರುವ ಕವಿಯನ್ನು ಕಾಣದೇ ಮುಂದಿನ ಬೆರಳಿಗೆ ಅನಾಮಿಕ (ಹೆಸರಿಲ್ಲದ್ದು) ಎಂದು ಹೆಸರಿಟ್ಟರಂತೆ! (ಅನಾಮಿಕಾ ಸಾರ್ಥವತೀ ಬಭೂವ - ಮಧ್ಯ ಬೆರಳು ಮತ್ತು ಕಿರುಬೆರಳಿನ ನಡುವಿನ ಉಂಗುರ ಬೆರಳಿಗೆ ಅನಾಮಿಕ ಎಂದು ಹೆಸರು. )
ಅನೇಕ ಸಮಸ್ಯಾ ಪೂರ್ತಿಯ ಸವಾಲುಗಳನ್ನು ಎದೆಗೊಟ್ಟು ಎದುರಿಸಿ ಚಮತ್ಕಾರ ಪೂರ್ಣವಾದ
ಶ್ಲೋಕ ಗಳನ್ನು ರಚಿಸಿದ್ದಾನೆ. ಕಮಲೇ ಕಮಲೋತ್ಪತ್ತಿಃ (ಕಮಲದಲ್ಲಿ ಕಮಲದ ಜನನ) ಎಂಬ ಸಮಸ್ಯೆಗೆ ’ಬಾಲೇ! ತವ ಮುಖಾಂ ಭೋಜೇ ಕಥಮಿಂದೀವರದ್ವಯಂ’ (ಹೇ ಬಾಲೆಯೇ, ನಿನ್ನ ಮುಖವೆಂಬ ಕಮಲದಲ್ಲಿ ಒಂದಲ್ಲ ಎರಡು ಕೆನ್ನೈದಿಲೆಗಳು ಹೇಗೆ? !) ಎಂದು ಪರಿಹಾರ ಹೇಳಿದ್ದು ಪ್ರಸಿದ್ಧವಾಗಿಯೇ ಇದೆ. ಇಲ್ಲಿ ಕಣ್ಣುಗಳಿಗೆ ಇಂದೀವರ (ಕಪ್ಪು ಕಮಲ) ಎಂದು ರೂಪಿಸಿದ ಅವನ ನೈಪುಣ್ಯತೆಗೆ ಎಣೆಯುಂಟೇ?
ರಘುವಂಶದಲ್ಲಿ ಅಪ್ರತಿಮ ಸುಂದರಿ ಇಂದುಮತಿಯನ್ನು ದೀಪಶಿಖೆ ( ಬೆಳಗುವ ಪಂಜು ) ಎಂದು ಉಪಮಿಸಿದ್ದುಂಟು. ನೂರಾರು ಪುಟಗಳ ವಿವರಣೆಯೂ ಆ ಒಂದು ಶ್ಲೋಕದ ಸೊಬಗನ್ನೂ ಚಮತ್ಕಾರವನ್ನೂ ಕೊಡಲಾರದು. ದೀಪಶಿಖೆಯಂತ ಇಂದುಮತಿಯು ಸ್ವಯಂವರಕ್ಕಾಗಿ ಕಾದಿರುವ ರಾಜಕುವರರ ಮುಂದೆ ಹಾಯ್ದು ಹೋಗುತ್ತಿರುವಂತೆ ಎದುರಿಗಿರುವವರ ಮುಖ ಬೆಳಗಿದರೆ ಹಿಂದುಳಿದ ರಾಜರ ಮುಖ ಕಪ್ಪಿಟ್ಟಿತಂತೆ. ರಾತ್ರಿ ಪಂಜು ಮುಂದೆ ಹೋದರೆ ಹಿಂದಿನ ಮಹಲುಗಳೆಲ್ಲ ಕಪ್ಪಾಗುವಂತೆ.! ಈ ಉಪಮೆಯಿಂದಾಗಿ ಕಾಳಿದಾಸ ಸಂಸ್ಕೃತ ಸಾಹಿತ್ಯೇತಿಹಾಸದ ತುಂಬೆಲ್ಲಾ ’ದೀಪಶಿಖಾ’ ಕಾಳಿದಾಸ ಎಂದೇ ಪ್ರಸಿದ್ಧನಾಗಿದ್ದಾನೆ.
ಇಂತಹ ಪ್ರತಿಭಾ ಶಾಲಿ ಕವಿಯೂ ತುಂಬಾ ವಿನಯಶೀಲನಾಗಿದ್ದ. ರಘುವಂಶವನ್ನು ಆರಂಭಿಸುವಾಗ ’ಸೂರ್ಯನಿಂದ ಹುಟ್ಟಿದ ವಂಶವೆಲ್ಲಿ ನನ್ನಂಥ ಅಲ್ಪಮತಿಯೆಲ್ಲಿ? ಕವಿಯೆಂಬ ಕೀರ್ತಿಯ ಆಶೆಯಿಂದಾಗಿ ಉಪಹಾಸಕ್ಕೀಡಾಗುತ್ತೀನೇನೋ’ ಎಂದು ವಿನಮ್ರತೆಯನ್ನು ತೋರ್ಪಡಿಸಿದ್ದಾನೆ.ಹಾಗೆಂದು ಅವನಿಗೆ ಸ್ವಾಭಿಮಾನ ಇರಲಿಲ್ಲವೆಂದಲ್ಲ. ಮಾಲವಿಕಾಗ್ನಿಮಿತ್ರದಲ್ಲಿ ಭಾಸಾದಿ ಕವಿಗ ನಾಟಕಗಳ ಮಧ್ಯೆ ಆಧುನಿಕ ಕವಿಯಾದ ಕಾಳಿದಾಸನ ಕಾವ್ಯವನ್ನಾರು ಮೆಚ್ಚುವರು? ಎಂಬ ಪ್ರಶ್ನೆಗೆ - ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಂ ( ಹಳೆಯದೆಂಬ ಮಾತ್ರಕ್ಕೆ ಎಲ್ಲವೂ ಒಳ್ಳೆಯದಲ್ಲ. ಹೊಸಕಾವ್ಯಗಳೆಲ್ಲ ತಿರಸ್ಕಾರ ಯೋಗ್ಯವಲ್ಲ) ಎಂದು ದಿಟ್ಟ ಉತ್ತರ ನೀಡಿದ್ದಾನೆ.
ಇಂತಹ ಅಪ್ರತಿಮ ಕವಿಯ ವರ್ಣನೆಗೆ ಯಾವ ಲೇಖಕನ ಶಬ್ಧಗಳು ಶಕ್ತವಾದಾವು? ನಮಃ ಕವಯೇ ಕಾಳಿದಾಸಾಯ...

ಮಹಾಬಲ ಭಟ್

ಬಸ್ಸೆಂಬ ರಥವನೇರಿ

ಸುಜಾತ ಬಸ್ಸನ್ನೇರಿದ್ದಾಗ್ಗೆ ಗಂಟೆ ೩.೩೦ ಆಗಿತ್ತು. ಗೆಳತಿ ಪ್ರಿಯಾ ಸುಖ ಪ್ರಯಾಣಕ್ಕೆಂದು ಹಾರೈಸಿದಾಗ ಖುಶಿಯಿಂದಲೇ ಇನ್ನೊಂದು ೪ ಗಂಟೆಯಲ್ಲಿ ಊರಲ್ಲಿರುತ್ತೇನೆಂದು ಲೆಕ್ಕ ಹಾಕುತ್ತಾ ಕುಳಿತಳು. ತಾನೊಂದು ಕಿಟಕಿಯ ಬಳಿ ಸೀಟು ಮಗನೊಂದು ಕಿಟಕಿಯಬಳಿ ಸೀಟು ಗಿಟ್ಟಿಸಿಕೊಂಡು ಕುಳಿತಾಗ ಆಹಾ! ನಿಜವಾಗಿ ಇಂದು ನಮ್ಮದು ತುಂಬಾ ಸುಖಕರವಾದ ಪ್ರಯಾಣವೇ ಸರಿ ಎಂದು ಕನಸು ಕಾಣುತ್ತ ಕುಳಿತ ಸುಜಾತಳಿಗೆ ಕಂಡಕ್ಟರನ ಕರೆ ಇಹಲೋಕಕ್ಕೆಳೆಯಿತು. ಬಸ್ಸಾಗಲೇ ಊರಿನ ಮಧ್ಯದಲ್ಲಿ ಬಂದಿತ್ತು. ದುಡ್ಡು ತೆಗೆದು ಟಿಕೇಟು ಕೊಳ್ಳುವಾಗ ಕೇಳಿದ್ದು ’ಬಸ್ಸು ಚೋರ್ಲಾ ಘಾಟ್ ದಾರಿಯಲ್ಲಿ ಹೋಗುತ್ತದೆಂದು. ಆಯಿತಲ್ಲ. ಇನ್ನು ಸ್ವಲ್ಪ ಬೇಗ ಊರು ಮುಟ್ಟಬಹುದಲ್ಲ ಎಂದು. ಹೊಟ್ಟೆ ತುಂಬಾ ಹಸಿದದ್ದರಿಂದ ಸ್ವೀಟ್ ಮಾರ್ಟ ನಲ್ಲಿ ಕಟ್ಟಿಸಿಕೊಂಡ ತಿಂಡಿಯನ್ನು ತೆಗೆದು ತಾಯಿ ಮಗ ತಿನ್ನುತ್ತಾ ಕುಳಿತರು. ಇನ್ನೇನು ಊರು ದಾಟಿ ಬಸ್ಸು ಊರ ಹೊರಗೆ ಬಂದಾಯ್ತಲ್ಲ ಎನ್ನುತ್ತಿದ್ದಂತೆ ಸುರುವಾಯಿತಲ್ಲ. ಹೊಂಡಗಳ ರಸ್ತೆ. ಇದೇನು ಸ್ಡಲ್ಪ ದೂರ ಇರಬಹುದು ಎಂದು ಹೊರಗೆ ನೋಡುತ್ತಾ ದಾರಿ ಸೆವೆಸುತ್ತಿದ್ದಾಗ ಇನ್ನೂ ಬಸ್ಸು ಓಲಾಡತೊಡಗಿತು.
ಏನಪ್ಪಾ ಇದು ಎಂದು ಮುಂದೆ ನೋಡಿದಾಗ ಕಂಡಿದ್ದು ತಗ್ಗುದಿನ್ನೆಗಳ ಡಾಂಬರ್ ಹಾರಿದ್ದ ರಸ್ತೆ. ಹಿಂದಿದ್ದ ಪ್ರಯಾಣಿಕರೊಬ್ಬರು ಉಲಿದರು. ಇನ್ನು ೩೦ ೩೫ ಕಿ. ಮೀ. ರಸ್ಸತೆ ಹೀಗೆ ಇದೆ. ಮುಂದೆ ಇನ್ನೂ ಕೆಟ್ಟಿದೆಯೆಂದಾಗ ಮುಂದಿನ ತನ್ನ ಪರಿಸ್ಥಿತಿ ನೆನೆದು ಸುಖ ಪ್ರಯಾಣದ ಕನಸು ಜರ್ರೆಂದು ಇಳಿದು ಇಹಲೋಕಕ್ಕೆ ಬಂದು ಗಟ್ಟಿಯಾಗಿ ಮುಂದಿನ ಸೀಟಿನ ಪಟ್ಟಿಯನ್ನು ಹಿಡಿದು ಕುಳಿತಳು. ಅಷ್ಟೇ ಅಲ್ಲ ಹಿಂದಿನ ಸೀಟಿನಲ್ಲ್ಲಿದ್ದ ಮಗನಿಗೂ ಹುಶಾರಾಗಿ ಕುಳಿತುಕೊಳ್ಳಲು ಹೇಳಿದಳು. ( ಹೇಗೆ ವಿಮಾನದಲ್ಲಿ ಗಗನಸಖಿ ಬಂದು ಬೆಲ್ಟ್ ಕಟ್ಟಿಕೊಳ್ಳಲು ಹೇಳುತ್ತಾಳೋ ಹಾಗೆ. ) ಏನು ಮಾಡುವುದು ಇಲ್ಲಿ ಬೆಲ್ಟಿನ ಬದಲು ಸೀಟಿನ ಪಟ್ಟಿಯೇ ಗತಿ ಎಂದು! ಕಣ್ಣು ಮುಚ್ಚಿ ಕುಳಿತಳು.
ಸುಜಾತಾ ಮೊನ್ನೆಯ ದಿನ ಹೋಗಿದ್ದು ತನ್ನ ತಂದೆಯ ವರ್ಷದ ಶ್ರಾದ್ಧಕ್ಕಾಗಿ. ಅಲ್ಲಿ ಎಲ್ಲ ಸಾಂಗವಾಗಿ ನೆರವೇರಿಸಿ ಬಸ್ಸಲ್ಲಿ ಸ್ವಲ್ಪ ದೂರ ಸಾಗಿದಾಗ ಅನಿಸಿದ್ದು ’ಅಯ್ಯೋ ಇವತ್ತು ಊರು ಮುಟ್ಟುತ್ತೇನೋ ಇಲ್ಲ ಎಲ್ಲಿ ತಲುಪುತ್ತೇನೋ ಎಂದು ಇದ್ದ ಬಿದ್ದ ದೇವರನ್ನೆಲ್ಲ ನೆನೆಯುತ್ತಾ ಕುಳಿತಾಗ ಕಂಡ ದೇವರೆಂದರೆ ಬಸ್ಸು ಚಾಲಕನೊಬ್ಬನೇ... ಏಕೆಂದರೆ ಸದ್ಯ ನಮ್ಮನ್ನು ಸುರಕ್ಷಿತವಾಗಿ, ಜೀವಂತವಾಗಿ ಊರನ್ನು ತಲುಪಿಸುವ ದೇವರು ಅವನಲ್ಲದೇ ಮತ್ತಾರು? ಏಕೆಂದರೆ ಬಸ್ಸಿನ ಓಲಾಟ ೩೦ ರಿಂದ ೬೦ ಮತ್ತೆ ೯೦ ಡಿಗ್ರಿಯವರೆಗೆ ತಲುಪಿತ್ತು. ಇನ್ನಂತೂ ದೇವರು, ದಿಂಡರು, ಗುರು ಹಿರಿಯರು, ಬಂಧು ಬಳಗದವರನ್ನೆಲ್ಲ ನೆನೆಯುತ್ತ ಗಟ್ಟಿಯಾಗಿ ಮುಚ್ಚಿದ್ದ ಕಣ್ಣು ತೆರೆದದ್ದು ಕಂಡಕ್ಟರನ ಕೂಗಿನಿಂದ. ಅದೂ ಒಂದು ಹೊಟೇಲಿನ ಎದುರಿಗೆ. ಟೀ ಗಾಗಿ ಹತ್ತು ನಿಮಿಷವಿದೆಯೆಂದು ಕಣ್ಣುಬಿಟ್ಟು ಸುತ್ತ ಮುತ್ತ ನೋಡಿದಾಗ ದಟ್ಟ ಕಾಡಿನ ಮಧ್ಯದಲ್ಲಿದ್ದ ಎದುರಿಗೆ ಕಾಣುತ್ತಿದ್ದ ಹೊಟೇಲ್ ಮತ್ತು ಪಕ್ಕದಲ್ಲಿ ಕೆಟ್ಟು ನಿಂತಿದ್ದ ಮತ್ತೊಂದು ಬಸ್ಸಿನ ಪ್ರಯಾಣಿಕರು. ನಮ್ಮ ಬಸ್ಸು ನಿಂತಿದ್ದೇ ತಡ ಸ್ವರ್ಗದಿಂದ ಪುಷ್ಪಕ ವಿಮಾನವೇ ಬಂದಿತೆನ್ನುವಂತೆ ಮುಖವರಳಿಸಿ ಬಂದು ಬುದಬುದನೆ ಬಸ್ಸನ್ನೇರಿದರು.ಪಕ್ಕ ಬಂದು ಕುಳಿತಾಕೆ ಭಾರೀ ಗಾತ್ರದವಳು. ಬುಸಬುಸನೇ ಉಸಿರು ಬಿಡುತ್ತಾ ದೊಪ್ಪೆಂದು ಕುಳಿತಾಗ ಮೊದಲೇ ಮುದ್ದೆಯಾಗಿದ್ದ ಸುಜಾತ ಇನ್ನೂ ಮುದ್ದೆಯಾದಳು. ಪಾಪ! ಅವಳೋ ಬೆಳಿಗ್ಗೆಯಿಂದ ಇದು ಮೂರನೆಯ ಬಸ್ಸು ಬದಲಾಯಿಸಿದ್ದೆಂದಳು. ಮೊದಲು ಏನೆಂದು ಸುಜಾತಳಿಗೆ ತಿಳಿಯಲಿಲ್ಲ. ಏಕೆಂದು ಕೇಳಿದಾಗ ಬಂದ ಉತ್ತರ ಬಂದ ಎರಡೂ ಬಸ್ಸುಗಳೂ ರಸ್ತೆಯಲ್ಲಿ ಕೆಟ್ಟು ಇಲ್ಲಿಯವರೆಗೆ ತಲುಪಲು ತೆಗೆದುಕೊಂಡದ್ದು ೬ ತಾಸು. ಕಾಡಿನ ದಾರಿಯಲ್ಲಿ ಊಟವಿಲ್ಲ ನೀರಿಲ್ಲ. ಇವತ್ತು ಈ ಹೊಟೆಲ್ಲೇ ಅವರ ಅಕ್ಷಯ ಧಾಮವಾಗಿತ್ತು.
ಅಲ್ಲಿಂದ ಬಸ್ಸು ಹೊರಟಾಗ ಆಗಲೇ ಅರ್ಧಗಂಟೆ ತಡವಾಗಿತ್ತು. ಮುಂದಿನ ದಾರಿ ಕೆಟ್ಟದಿದ್ದರೂ ಬಸ್ಸು ಭರ್ತಿಯಿದ್ದುದರಿಂದ ಅಷ್ಟೇನೂ ಕುಲುಕಾಟವಿರಲಿಲ್ಲ. ಈಗ ಇನ್ನೊಂದು ತೊಂದರೆ ಶುರುವಾದದ್ದು ಪಕ್ಕದವಳಿಂದ. ಅವಳುಟ್ಟಿದ್ದ ಆ ಚಮಕ್ ಮತ್ತು ಟಿಕಲಿ ಹಚ್ಚಿದ ಭಾರೀ ಸೀರೆ. ಬಸ್ಸಿನ ಕುಲುಕಾಟ ಅನುಭವಿಸಿ ಸಾಕಾಗಿ ಉಸ್ಸೆಂದಾಗ ಶುರುವಾಗಿದ್ದು ಪಕ್ಕದಲ್ಲಿನ ಸೂಜಿ ಚುಚ್ಚಿದ ಅನುಭವ.ಈ ಸೂಜಿಗಿಂತ ಆ ಮೊದಲಿನ ಅನುಭವವೇ ಸ್ಡಲ್ಪ ಹಿತವಾಗಿತ್ತೇನೋ.!? ಏನೂ ಮಾಡುವ ಹಾಗಿಲ್ಲ. ಹಾ ಹೂ ಅನ್ನುತ್ತ ಅವಳನ್ನು ಸರಿಸುವ ಹರಸಾಹಸ ಮಾಡುವುದನ್ನು ನೋಡಲಾರದೇ ಆ ಧಡೂತಿ ಹೆಂಗಸಿನ ಪತಿ ಅವಳ ತೋಳಿನ ಮೇಲೆ ಟವಲ್ ನ್ನು ಹಾಕಿದಾಗ ಸುಜಾತ ನಿಟ್ಟುಸಿರು ಬಿಟ್ಟಳು.
ಇನ್ನು ಒಳ್ಳೆಯ ರಸ್ತೆ ಶುರುವಾಯಿತಲ್ಲ ಎಂದು ಕೊಳ್ಳುತ್ತಿರುವಾಗಲೇ ಇದೇ ಸಮಯದಲ್ಲಿ ನನ್ನದೂ ಒಂದು ಕೈ ತೋರಿಸಿಯೇ ಬಿಡೋಣವೆಂದು ವರುಣನಿಗೂ ಅನ್ನಿಸಿರಬೇಕು. ತನ್ನ ಕೆಲಸ ತಾನು ಶುರು ಮಾಡಿಯೇ ಬಿಟ್ಟ. ಕಿಟಕಿ ಮುಚ್ಚಲು ಹೋದರೆ ಎಳೆಯಲು ಬರುತ್ತಲೇ ಇರಲಿಲ್ಲ. ಇದ್ದ ಬಿದ್ದ ಶಕ್ತಿ ಪ್ರಯೋಗಿಸಿದರೂ ಅದೂ ಮುಷ್ಕರ ಶುರುಮಾಡಿತು. ಆಯಿತಲ್ಲ ಇನ್ನೇನು ಎಂದು ಬೇರೆಕಡೆ ಎದ್ದು ಹೋಗಲೂ ಜಾಗವಿಲ್ಲ. ಅಷ್ಟೊಂದು ಜನ. ಕೊನೆಗೊಂದು ಉಪಾಯ ಹೊಳೆಯಿತು. ಬ್ಯಾಗಿನಲ್ಲಿದ್ದ ಛತ್ರಿ ತೆಗೆದು ಏರಿಸಿ ಕಿಟಕಿಗಡ್ಡ ಹಿಡಿದು ಕುಳಿತಾಗ ಎಲ್ಲರ ಮುಖದಲ್ಲಿ ನಗೆಯೋ ನಗೆ. ತುಂಬಿದ ಬಸ್ಸಿನಲ್ಲಿ ಛತ್ರಿ ಏರಿಸಿ ಕುಳಿತ ಸುಜಾತಳಿಗೆ ಮುಜುಗರವೋ ಮುಜುಗರ. ಏನು ಮಾಡುವುದು ಉಪಾಯವಿಲ್ಲ. ಕೊನೆಗೆ ವರುಣನಿಗೇ ಬೇಜಾರಾಗಿ ಸುಮ್ಮನಾದಾಗ ಊರಿನ ಹತ್ತಿರ ಹತ್ತಿರ ಬಂದಿದ್ದರು. ಅಷ್ಟುದೂರದಿಂದ ತಮ್ಮೂರಿನ ಸೇತುವೆ ಕಂಡಾಗ ಸುಜಾತಳಿಗೆ ಹುರ್ರೇ ಎನ್ನುವಂತಾಗಿತ್ತು. ಬಸ್ಸಿಳಿಯುವಾಗ ಚಾಲಕನ ಜೊತೆಯಲ್ಲಿ ಮಾತನಾಡಿ ಧನ್ಯವಾದಗಳನ್ನೇಳಿದಾಗ ’ಇದೆಲ್ಲಿಂದ ಬಂತಪ್ಪಾ ಹೊಸ ಪ್ರಾಣಿ?’ ಎನ್ನುವಂತೆ ಅವನು ನೋಡುತ್ತಿದ್ದ. ಅವನಿಗೆ ಕೂಡ ಅದು ಹೊಸ ಅನುಭವವೇ ಸರಿ. ಇಲ್ಲಿಯವರೆಗೆ ಅವನು ನೋಡಿದ್ದು ಊರಿಗೆ ತಲುಪಿದ ಪ್ರಯಾಣಿಕರು ಹೀಗೆ ಹೇಳುವುದಿರಲಿ ತಿರುಗಿಕೂಡ ನೋಡುತ್ತಿದ್ದಿಲ್ಲ. ಇಷ್ಟೆಲ್ಲ ಪ್ರಯಾಣಿಕರ ಜೀವವನ್ನು ಸುರಕ್ಷಿತವಾಗಿ ಮುಟ್ಟಿಸಿದ ಈ ಚಾಲಕ ಸದ್ಯದ ದೇವರು. ಅವಾರ್ಡ ವಿನ್ಹರ್ ತರ ಕಂಡ ಸುಜಾತಳ ಕಣ್ಣಿಗೆ ಈ ದಿನದ ಹೀರೋ ಈ ಚಾಲಕನೇ!

ಅನುರಾಧಾ ಯಾಳಗಿ

ಕನ್ನಡದ ಕಟ್ಟಾಳು ಮುದವೀಡು ಕೃಷ್ಣರಾಯರು


ಕನ್ನಡಕ್ಕಾಗಿ ಕನ್ನಡದ ಉಳಿವಿಗಾಗಿ ಏಳಿಗೆಗಾಗಿ ಅವಿರತ ಶ್ರಮಿಸಿದ ಮಹಾನುಭಾವ ಕನ್ನಡದ ಗಂಡುಗಲಿ ದಿವಂಗತ ಮುದವೀಡು ಕೃಷ್ಣರಾಯರು ಕನ್ನಡಿಗರಿಗೆ ಸಂದೇಶರೂಪವಾಗಿ ನೀಡಿದ ಪದ್ಯ-"ಕೂಗುವೊಂದಾಗೊ ಕರುಳೊಂದಾಗಿ ಹೃದಯದನುರಾಗವೊಂದಾಗಿ ಸಂಘಬಿತ ಬಲಯುತರಾಗಿ ರಾಗ ವಿದ್ವೇಷ ಮತ್ಸರ ಮದಂಗಳ ನೀಗಿ ಸಾಗಲನುವಾಗಿರೈ ಭೋಗ ಬಿಟ್ಟೇಳಿರೈ ಕನ್ನಡಮ್ಮನ ಕುವರರೇ.!"
ಕನ್ನಡದ ಕಟ್ಟಾಭಿಮಾನಿ, ಸ್ವಾತಂತ್ರ್ಯ ಸೇನಾನಿ ಹೆಸರಾಂತ ಸಾಹಿತಿ ಶ್ರೀ ಮುದವೀಡು ಕೃಷ್ಣರಾಯರು ಜನಿಸಿದ್ದು ರಾಣೆಬೆನ್ನೂರಿನಲ್ಲಿ ೨೪-೦೭-೧೮೭೪ರಂದು. ಹುಟ್ಟಿದ್ದು ರಾಣೆ ಬೆನ್ನೂರಿನಲ್ಲಿ ಆದರೂ ಬೆಳೆದದ್ದು ಧಾರವಾಡದಲ್ಲಿ. ಮುಂಬೈ ಕರ್ನಾಟಕದ ಭಾಗವಾಗಿದ್ದ ಧಾರವಾಡದಲ್ಲಿ ಅಡ್ಡ ಹೆಸರಿಗೆ ಕರ ಹಚ್ಚುವುದು ಒಂದು ಪ್ರತಿಷ್ಠೆಯ ವಿಷಯವಾಗಿತ್ತೇನೋ? ಆದರೆ ನಮ್ಮ ಮುದುವೀಡ ಕೃಷ್ಣರಾಯರಿಗೆ ಮಾತ್ರ ’ಮುದುವೀಡಕರ್’ ಎಂದರೆ ಎಲ್ಲಿಲ್ಲದ ಸಿಟ್ಟು, ನಾನು ಕೇವಲ "ಮುದುವೀಡು", "ಮುದುವೀಡಕರ್" ಅಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು.
ಕಲಿಕೆಯ ಆರಂಭದ ಅ, ಆ, ಇ, ಈ.......... ಮರಾಠಿಯಲ್ಲಿ ಆದುದು ಒಂದು ವಿಪರ್ಯಾಸ ಎನ್ನಬಹುದು. ಕಾರವಾರದಿಂದ ಧಾರವಾಡಕ್ಕೆ ಸ್ಥಳಾಂತರಗೊಳ್ಳುವುದರೊಂದಿಗೆ ಕಲಿಕೆಯು ಕೂಡ ಮರಾಠಿಯಿಂದ ಕನ್ನಡಕ್ಕೆ ಬದಲಾಯಿತು. ವಿದ್ಯಾವರ್ಧಕ ಸಂಘದ ಸಂಸ್ಥಾಪಕರಲ್ಲೊಬ್ಬರಲ್ಲಾದ ಶ್ರೀ. ರಾ. ಹ. ದೇಶಪಾಂಡೆಯವರ ಪ್ರಭಾವವೆ ಇದಕ್ಕೆ ಕಾರಣ ಎನ್ನಬಹುದು.
ಶಾಲಾ ಕಾಲೇಜು ದಿನಗಳಲ್ಲಿ ಭಾಷಣದಲ್ಲಿ ಎತ್ತಿದ ಕೈ ಇವರದು. ಕಂಚಿನ ಕಂಠದ ಕೃಷ್ಣರಾಯರು ಭಾಷಣಕ್ಕೆ ನಿಂತರೆ ಸಾಕು ಪ್ರೇಕ್ಷಕರು ಮಂತ್ರಮುಗ್ಧರಾಗಿಬಿಡುತ್ತಿದ್ದರು. ಭಾಷಣ ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಇವರಿಗೆ ಕಟ್ಟಿಟ್ಟ ಬುತ್ತಿ ಯಾವಾಗಲೂ. ಸಾಹಿತ್ಯ ರಾಜಕೀಯ, ಸಾಂಸ್ಕೃತಿಕ ಚಟುವಟಿಕೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸಿದ ಇವರು ಆಡು ಮುಟ್ಟದ ಗಿಡವಿಲ್ಲ, ಕೃಷ್ಣರಾಯರು ಕೈಯಾಡಿಸದ ಕ್ಷೇತ್ರವಿಲ್ಲ ಎಂದು ಪ್ರಸಿದ್ಧರಾಗಿದ್ದರು.
ಯಾವುದೂ ಒಂದು ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕಾದರೆ ಸಾಕುಬೇಕಾಗುವ ಈ ದಿನಗಳಲ್ಲಿ ಇವರು ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತುಂಗಕ್ಕೇರಿದ್ದು ಇವರ ಆದಮನೀಯ ಚೈತನ್ಯಕ್ಕೆ ಸಾಕ್ಷಿ ಎನ್ನಬಹುದು.
ಅದು ಸ್ವಾತಂತ್ರ್ಯ ಸಂಗ್ರಾಮದ ಸಮಯ. ಉತ್ತರದ ಅನೇಕ ಕಾಂಗ್ರೆಸ್ ನಾಯಕರು ಧಾರವಾಡಕ್ಕೆ ಭೇಟಿ ಕೊಡುತ್ತಿದ್ದರು. ಅವರು ಇಂಗ್ಲೀಷ ಅಥವಾ ಹಿಂದಿಯಲ್ಲಿ ಮಾಡುತ್ತಿದ್ದ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುವುದು ಯಾವಾಗಲೂ ಕೃಷ್ಣರಾಯರ ಕೆಲಸವೇ.! ಇವರ ಭಾಷಾಂತರ ಎಷ್ಟೊಂದು ಪ್ರಭಾವ ಬೀರುತ್ತಿತ್ತೆಂದರೆ ಮೂಲ ಭಾಷಣಕ್ಕಿಂತ ಇವರ ಭಾಷಾಂತರಕ್ಕೆ ಚಪ್ಪಾಳೆ ಕೇಕೇ! ಇದರಿಂದ ಭಾಷಣಕಾರರು ಕಕ್ಕಾಬಿಕ್ಕಿಯಾಗುತ್ತಿದ್ದರು. ಕಾಂಗ್ರೆಸ್ಸಿನ ಅಂದಿನ ಹಿರಿಯ ನಾಯಕರಲ್ಲೊಬ್ಬರಾದ ಶ್ರೀ ಪಟ್ಟಾಭಿ ಸೀತಾರಾಮಯ್ಯನವರು ಕೃಷ್ಣರಾಯರ ಅನುವಾದ ಭಾಷಣಕ್ಕೆ ಜನರು ಅಟ್ಟಹಾಸದಿಂದ ನಗುವುದು ಸತತ ಚಪ್ಪಾಳೆ ತಟ್ಟುವುದ ಕಂಡು I am jealous of my translator, because he seems to be more elegant and lively than me.” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು ಕೃಷ್ಣರಾಯರ ಭಾಷಣ ಪ್ರತಿಭೆಗೆ ಸಾಕ್ಷಿ !
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಲಿಖಿತ ಭಾಷಣವನ್ನು ವಾಚಿಸುವುದು ಸಂಪ್ರದಾಯ..ಆದರೆ ಬೆಳಗಾಂವಿಯಲ್ಲಿ ೧೯೩೯ ರಲ್ಲಿ ಜರುಗಿದ ೨೪ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮುದುವೀಡು ಅವರು ಲಿಖಿತ ಭಾಷಣವನ್ನು ಬದಿಗಿರಿಸಿ ಆಡು ಭಾಷೆಯಲ್ಲಿನನ್ನನ್ನು ಈ ವರ್ಷದ ಅಧ್ಯಕ್ಷೀಯ ಖುರ್ಚಿಯ ಮ್ಯಾಲ ಕೂಡಿಸಿ ನಿಮ್ಮ ಕನ್ನಡ ಕಕ್ಕುಲಾತಿಯ ಕದಲಾರ್ತಿ ಬೆಳಗಿದ್ದೀರಿ. ಎಂದು ಆರಂಭಿಸುವುದರೊಂದಿಗೆ ಎಲ್ಲ ಪ್ರೇಕ್ಷಕರ ಹೃದಯ ಮುಟ್ಟಿದರು. ಅಂತ:ಕರಣ ತಟ್ಟಿದರು.
ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಶ್ರೀ ಕೃಷ್ಣರಾಯರದು ಎತ್ತಿದ ಕೈ. ರಾಯರು ಸ್ವತಃ ನಾಟಕಗಳನ್ನು ರಚಿಸಿ ಪ್ರಯೋಗಿಸುತ್ತಿದ್ದರು. ೧೯೦೪ ರಲ್ಲಿಯೇ ’ರಾಮರಾಜ್ಯ ನಿಯೋಗ’ ’ಸೌಭದ್ರ’ ನಾಟಕಗಳನ್ನು ಬರೆದು ರಂಗಮಂಚದ ಮೇಲೆ ಆಡಿಸಿದರು.
೧೮೯೯ ರಲ್ಲಿ ಮದಿಹಾಳದ ’ಕ್ರೀಡಾ ಸಂಘ’ ಎಂಬ ಹವ್ಯಾಸೀ ತಂಡವನ್ನು ’ಭಾರತ ಕಲೋತ್ತೇಜಕ ನಾಟ್ಯಸಭಾ’ ಎಂದು ಬದಲಾಯಿಸಿ ಶೇಷಗಿರಿ ರಾಯರ ’ಕನ್ನಡ ಶಾಕುಂತಲ’ ಮತ್ತು ಎರಡು ನಾಟಕಗಳಾದ ’ರಾಮರಾಜ್ಯ ನಿಯೋಗ’ ಹಾಗೂ ’ಸೌಭದ್ರ’ ಪ್ರಯೋಗಿಸಿದರು. ರಾಯರ ಕರ್ನಾಟಕಸಂಗೀತ ಜ್ಞಾನವೂ ಗಮನಾರ್ಹವಾಗಿತ್ತು.
ಬಹುಮುಖ ಪ್ರತಿಭೆಯ ವರ್ಣರಂಜಿತ ವ್ಯಕ್ತಿತ್ವದ ಕೃಷ್ಣರಾಯರು ಪತ್ರಿಕಾ ಸಂಪಾದನೆಯಲ್ಲೂ ಕೈಯಾಡಿಸಿದವರು. ಕರ್ನಾಟಕ ವೃತ್ತ ಮತ್ತು ಧನಂಜಯ ಎಂಬ ಎರಡು ಪತ್ರಿಕೆಗಳ ಸಂಪಾದಕರಾಗಿದ್ದುದು ಇವರ ಹೆಗ್ಗಳಿಕೆ.
ಸ್ವಾತಂತ್ರ್ಯದ ಸಂಗ್ರಾಮದ ಮಂಚೂಣಿಯಲ್ಲಿ ಇದ್ದ ಇವರು ನನ್ನ ದೇಸ ಸ್ವತಂತ್ರ ವಾದದ್ದನ್ನು ನೋಡಿಯೇ ನಾನು ಸಾಯ್ತೀನಿ ಎಂದು ಗುಡುಗುತ್ತಿದ್ದರು. ಅವರ ಇಚ್ಛಾಶಕ್ತಿ ಎಷ್ಟು ಪ್ರಭಲವಾಗಿತ್ತೆಂದರೆ ನಮ್ಮ ರಾಷ್ಟೃಕ್ಕೆ ಸ್ವಾತಂತ್ರ್ಯ ಬಂದು ಒಂದು ತಿಂಗಳು ಆಗುವ ಮೊದಲೇ ಅವರು ಇಹಲೋಕವನ್ನು ತ್ಯಜಿಸಿದರು. ೧೯೪೭ ಸೆಪ್ಟೆಂಬರ್ ೭ ರಂದು ಅವರು ಕೊನೆಯುಸಿರೆಳೆದರು. ಆದರೆ ತಾವು ನುಡಿದಂತೆ ಸ್ವಾತಂತ್ರ್ಯ ದೊರೆಯುವವರೆಗೆ ಸಾವನ್ನು ತಡೆದು ನಿಲ್ಲಿಸಿದ ಛಲಗಾರ ಇವರು!

ಉದಯಕುಮಾರ ದಾನಿ