Sunday, January 16, 2011

ಅಮರಕವಿ ಕಾಳಿದಾಸ




ಕಾಳಿದಾಸನ ಹೆಸರನ್ನು ಕೇಳದ ಭಾರತೀಯನಾರು? ಕವಿತ್ವದ ಮೂರ್ತ ಸ್ವರೂಪನೋ ಎಂಬಂತೆ ಕವಿಯೆಂದರೆ ಕಾಳಿದಾಸ ಎಂಬ ಅಜರಾಮರ ಕೀರ್ತಿಭಾಜನ ಕಾಳಿದಾಸ. ಭಾರತದಲ್ಲಷ್ಟೇ ಅಲ್ಲದೇ ಭಾರತದ ಅದರಲ್ಲೂ ಸಂಸ್ಕೃತ ಸಾಹಿತ್ಯದ ಸುಗಂಧವನ್ನು ದಿಗ್ದಗಂತಗಳಲೂ ಹಬ್ಬಿಸಿದ ಅದ್ವಿತೀಯ ಕವಿ ಕಾಳಿದಾಸ.
ಪ್ರಸಿದ್ಧ ವ್ಯಕ್ತಿಗಳ ಸುತ್ತೆಲ್ಲ ದಂತ ಕತೆಗಳ ಬಳ್ಳಿಯೇ ಹಬ್ಬಿಕೊಂಡಿರುತ್ತದೆ ಎಂಬುದಕ್ಕೆ ಕಾಳಿದಾಸನೂ ಅಪವಾದನಲ್ಲ. ಕಾಳಿದಾಸನ ಬಗ್ಗೆ ಇರುವ ಐತಿಹ್ಯಗಳಿಗೆ ಲೆಕ್ಕವಿಲ್ಲ. ಬಾಲ್ಯದಲ್ಲಿ ಕುರುಬನಾಗಿದ್ದವನು ಕಾಳಿಯ ವರಪ್ರಸಾದದಿಂದ ಕವಿತ್ವ ಶಕ್ತಿಯನ್ನು ಪಡೆದುಕೊಂಡು "ಕಾಳಿದಾಸ" ನಾದ ಎಂಬುದುಪ್ರಸಿದ್ಧ ದಂತಕತೆ. ಭೋಜರಾಜನ ಆಸ್ಥಾನ ಪಂಡಿತನಾಗಿದ್ದನೆಂಬುದು ಇನ್ನೊಂದು ದಂತಕತೆ. ಆದರೆ ಇತಿಹಾಸ ಮಾತ್ರ ಇವನು ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದಲ್ಲಿ ನವಮಣಿಗಳಲ್ಲಿ ಶ್ರೇಷ್ಠತಮನಾದ ಪಂಡಿತನಾಗಿದ್ದನೆಂಬುದನ್ನು ಒಪ್ಪುತ್ತದೆ.
ಕಾಳಿದಾಸನ ಅಮರ ಕೃತಿಗಳು ಏಳು. ಇವನ ಎಲ್ಲ ಕೃತಿಗಳಲ್ಲೂ ವಿಶಿಷ್ಟವಾದ ನವನವೋನ್ಮೇಷಶಾಲಿಯಾದ ಪ್ರತಿಭಾ ವಿಲಾಸವನ್ನು ಅನುಭವಿಸಬಹುದು. ಅವನ ಕವಿತಾ ರಸ ಮಾಧುರ್ಯ, ಶಬ್ದ ಸೌಂದರ್ಯ, ಅರ್ಥ ಗಾಂಭೀರ್ಯ, ಅಲಂಕಾರ ಚಾತುರ್ಯಗಳು ಎಂಥವನನ್ನೂ ಬೆರಗುಗೊಳಿಸುವಂಥದ್ದು.
ಅವನ ಅಭಿಜ್ಞಾನ ಶಾಕುಂತಲಮ್ ನಾಟಕವಂತೂ ವಿಶ್ವ ಪ್ರಸಿದ್ಧ. ’ಕಾವ್ಯೇಷು ನಾಟಕಮ್ ರಮ್ಯಂ ತತ್ರ ರಮ್ಯಾ ಶಾಕುಂತಲಾ’ ಎಂಬುದು ಪ್ರಸಿದ್ಧ ನುಡಿ.
ಶಕುಂತಲೆ - ದುಷ್ಯಂತರ ಅಮರ ಪ್ರೇಮ ಕಥೆ ಶೃಂಗಾರ ರಸಪೂರ್ಣವಾಗಿ ಅವರ್ಣನೀಯ ಕಾವ್ಯಾನಂದವನ್ನು ನೀಡುತ್ತದೆ. ಯಾವ ಸನ್ನಿವೇಶವನ್ನಾದರೂ ಹೃದಯ ಸ್ಪರ್ಶಿಯಾಗಿ ಚಿತ್ರಿಸುವುದು ಕಾಳಿದಾಸನ ವೈಶಿಷ್ಟ್ಯ. ತನ್ನ ಸಾಕು ಮಗಳಾದ ಶಾಕುಂತಲೆಯನ್ನು ದುಷ್ಯಂತನೆಡೆಗೆ ಕಳಿಸುವಾಗ ಕಣ್ವರ ಹೃದಯದಲ್ಲಾದ ವೇದನೆಯನ್ನು ಅವನು ಚಿತ್ರಿಸಿದ ಪರಿ ಮನ ಮಿಡಿಯುವಂತದ್ದು. - " ಯಾಸ್ಯತ್ಯದ್ಯ ಶಕುಂತಲೇತಿ ಹೃದಯಂ" (ಶಕುಂತಲೆಯೆಂಬ ಹೃದಯವೇ ಹೋಗುತ್ತಿದೆ) ಎಂಬ ಅವನ ಶಬ್ಧಗಳ ಶಕ್ತಿಗೆ ಅಳತೆಯುಂಟೇ? ಅವನ ಮಾಲವಿಕಾಗ್ನಿಮಿತ್ರಂ ಮತ್ತು ವಿಕ್ರಮೋರ್ವಶೀಯಂ ಗಳು ಸಹ ಶೃಂಗಾರ ರಸಧಾರೆಯನ್ನು ಹರಿಸುವಲ್ಲಿ ಹಿಂದೆ ಬೀಳಲಾರವು.
ಕಾಳಿದಾಸನ ರಘುವಂಶಂ ಮತ್ತು ಕುಮಾರ ಸಂಭವಂ ಎಂಬ ಎರಡು ಮಹಾ ಕಾವ್ಯಗಳು ಸಂಸ್ಕೃತದ ಪಂಚಮಹಾ ಕಾವ್ಯಗಳಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿವೆ. ದಿಲೀಪನಿಂದ ಹಿಡಿದು ಅಗ್ನಿಮಿತ್ರ ನ ವರೆಗೆ ರಘುವಂಶದ ದೊರೆಗಳೆಲ್ಲರ ಚರಿತ್ರೆಯನ್ನು ಕಾವ್ಯ ವೊಂದರಲ್ಲಿ ಸೆರೆ ಹಿಡಿದ ಅವನ ವೈಶಿಷ್ಟ್ಯ ಅದ್ಭುತ! ರಘುವಂಶದ ರಾಜರ ಆದರ್ಶವನ್ನು ಚಿತ್ರಿಸುವಲ್ಲಿ ವಾಲ್ಮೀಕಿ ಮಹರ್ಷಿಗಿಂತ ಒಂದು ಕೈ ಮಿಗಿಲಾಗಿದ್ದಾನೆ ಎಂದರೂ ಅತಿಶಯೋಕ್ತಿಯಲ್ಲ. ಕುಮಾರಸಂಭವದಲ್ಲಿ ವೈರಾಗ್ಯ ಶಿಖಾಮಣಿ ಪರಮೇಶ್ವರ ಹಾಗೂ ಶೃಂಗಾರ ಭಾವಪೂರ್ಣೆ ಪಾರ್ವತಿಯ ನಡುವಿನ ಪ್ರೇಮಸಂಗದ ಕಲ್ಪನಾ ವಿಲಾಸವು ಯಾರನ್ನೂ ಬೆರಗುಗೊಳಿಸುವಂತದ್ದು.
" ಋತು ಸಂಹಾರ" ಎಂಬುದು ಷಟ್ ಋತುಗಳ ಮನೋಜ್ಞ ವರ್ಣನೆಯಿಂದ ಕೂಡಿದ ಸಂಭೋಗ ಶೃಂಗಾರದ ಅನುಪಮ ಖಂಡಕಾವ್ಯ.
ಅವನ ಇನ್ನೊಂದು ಪ್ರಸಿದ್ಧ ಖಂಡಕಾವ್ಯ "ಮೇಘದೂತ" ವಿಪ್ರಲಂಭ ಶೃಂಗಾರದ ಮೇರು ಕೃತಿ. ಕುಬೇರನ ಶಾಪದಿಂದ ಒಂದು ವರ್ಷ ಕಾಲ ಪತ್ನಿಯಿಂದ ದೂರವಿರಬೇಕಾಗಿಬಂದ ಯಕ್ಷನೊಬ್ಬ ಆಷಾಢದ ಒಂದು ದಿನ ಆಕಾಶದಲ್ಲಿ ಸಂಚರಿಸುತ್ತಿದ್ದ ನೀಲಮೇಘವನ್ನೇ ತನ್ನ ಸಂದೇಶ ರವಾನೆಗಾಗಿ ಪತ್ನಿಯತ್ತ ಕಳಿಸಿದ ಕಲ್ಪನೆ ಯಾರ ಮನ ಸೂರೆಗೊಳ್ಳದು? ಅರ್ಥಾಂತರಾನ್ಯಾಸ ಅಲಂಕಾರಭೂಯಿಷ್ಠವಾದ ಈ ಕಾವ್ಯದಲ್ಲಿ ರಾಮಗಿರಿಯಿಂದ ಅಲಕಾ ಪಟ್ಟಣದವರೆಗಿನ ಭೂ ಪ್ರದೇಶಗಳ ವರ್ಣನೆಯೂ ಇರುವುದು ವೈಶಿಷ್ಟ್ಯ. (ಅಖಂಡ ಭಾರತದ ಕಲ್ಪನೆಯನ್ನು ಕೊಟ್ಟವರು ಬ್ರಿಟೀಷರು ಎಂಬ ದುರ್ವಾದಕ್ಕೆ ಪ್ರತ್ಯುತ್ತರ ಕೊಡುವ ಶಕ್ತಿ ಈ ಕಾವ್ಯಕ್ಕಿದೆ.)
ಕಾಳಿದಾಸನ ಪ್ರತಿಭೆಗೆ ಸಮನಾಗಿ ನಿಲ್ಲುವ ಕವಿ ಪ್ರಾಯಶಃ ಹುಟ್ಟಿಲ್ಲ. ಒಮ್ಮೆ ಕಿರುಬೆರಳಿನಿಂದ ಉತ್ತಮ ಕವಿಗಳನ್ನು ಎಣಿಸಲಾರಂಭಿಸಿದ ವಿದ್ವಾಂಸರು ಮೊದಲು ಕಾಳಿದಾಸನ ಹೆಸರನ್ನು ತೆಗೆದುಕೊಂಡರಂತೆ. ಆನಂತರ ಅವನ ಯೋಗ್ಯತೆಯ ಸನಿಹವಾದರೂ ಇರುವ ಕವಿಯನ್ನು ಕಾಣದೇ ಮುಂದಿನ ಬೆರಳಿಗೆ ಅನಾಮಿಕ (ಹೆಸರಿಲ್ಲದ್ದು) ಎಂದು ಹೆಸರಿಟ್ಟರಂತೆ! (ಅನಾಮಿಕಾ ಸಾರ್ಥವತೀ ಬಭೂವ - ಮಧ್ಯ ಬೆರಳು ಮತ್ತು ಕಿರುಬೆರಳಿನ ನಡುವಿನ ಉಂಗುರ ಬೆರಳಿಗೆ ಅನಾಮಿಕ ಎಂದು ಹೆಸರು. )
ಅನೇಕ ಸಮಸ್ಯಾ ಪೂರ್ತಿಯ ಸವಾಲುಗಳನ್ನು ಎದೆಗೊಟ್ಟು ಎದುರಿಸಿ ಚಮತ್ಕಾರ ಪೂರ್ಣವಾದ
ಶ್ಲೋಕ ಗಳನ್ನು ರಚಿಸಿದ್ದಾನೆ. ಕಮಲೇ ಕಮಲೋತ್ಪತ್ತಿಃ (ಕಮಲದಲ್ಲಿ ಕಮಲದ ಜನನ) ಎಂಬ ಸಮಸ್ಯೆಗೆ ’ಬಾಲೇ! ತವ ಮುಖಾಂ ಭೋಜೇ ಕಥಮಿಂದೀವರದ್ವಯಂ’ (ಹೇ ಬಾಲೆಯೇ, ನಿನ್ನ ಮುಖವೆಂಬ ಕಮಲದಲ್ಲಿ ಒಂದಲ್ಲ ಎರಡು ಕೆನ್ನೈದಿಲೆಗಳು ಹೇಗೆ? !) ಎಂದು ಪರಿಹಾರ ಹೇಳಿದ್ದು ಪ್ರಸಿದ್ಧವಾಗಿಯೇ ಇದೆ. ಇಲ್ಲಿ ಕಣ್ಣುಗಳಿಗೆ ಇಂದೀವರ (ಕಪ್ಪು ಕಮಲ) ಎಂದು ರೂಪಿಸಿದ ಅವನ ನೈಪುಣ್ಯತೆಗೆ ಎಣೆಯುಂಟೇ?
ರಘುವಂಶದಲ್ಲಿ ಅಪ್ರತಿಮ ಸುಂದರಿ ಇಂದುಮತಿಯನ್ನು ದೀಪಶಿಖೆ ( ಬೆಳಗುವ ಪಂಜು ) ಎಂದು ಉಪಮಿಸಿದ್ದುಂಟು. ನೂರಾರು ಪುಟಗಳ ವಿವರಣೆಯೂ ಆ ಒಂದು ಶ್ಲೋಕದ ಸೊಬಗನ್ನೂ ಚಮತ್ಕಾರವನ್ನೂ ಕೊಡಲಾರದು. ದೀಪಶಿಖೆಯಂತ ಇಂದುಮತಿಯು ಸ್ವಯಂವರಕ್ಕಾಗಿ ಕಾದಿರುವ ರಾಜಕುವರರ ಮುಂದೆ ಹಾಯ್ದು ಹೋಗುತ್ತಿರುವಂತೆ ಎದುರಿಗಿರುವವರ ಮುಖ ಬೆಳಗಿದರೆ ಹಿಂದುಳಿದ ರಾಜರ ಮುಖ ಕಪ್ಪಿಟ್ಟಿತಂತೆ. ರಾತ್ರಿ ಪಂಜು ಮುಂದೆ ಹೋದರೆ ಹಿಂದಿನ ಮಹಲುಗಳೆಲ್ಲ ಕಪ್ಪಾಗುವಂತೆ.! ಈ ಉಪಮೆಯಿಂದಾಗಿ ಕಾಳಿದಾಸ ಸಂಸ್ಕೃತ ಸಾಹಿತ್ಯೇತಿಹಾಸದ ತುಂಬೆಲ್ಲಾ ’ದೀಪಶಿಖಾ’ ಕಾಳಿದಾಸ ಎಂದೇ ಪ್ರಸಿದ್ಧನಾಗಿದ್ದಾನೆ.
ಇಂತಹ ಪ್ರತಿಭಾ ಶಾಲಿ ಕವಿಯೂ ತುಂಬಾ ವಿನಯಶೀಲನಾಗಿದ್ದ. ರಘುವಂಶವನ್ನು ಆರಂಭಿಸುವಾಗ ’ಸೂರ್ಯನಿಂದ ಹುಟ್ಟಿದ ವಂಶವೆಲ್ಲಿ ನನ್ನಂಥ ಅಲ್ಪಮತಿಯೆಲ್ಲಿ? ಕವಿಯೆಂಬ ಕೀರ್ತಿಯ ಆಶೆಯಿಂದಾಗಿ ಉಪಹಾಸಕ್ಕೀಡಾಗುತ್ತೀನೇನೋ’ ಎಂದು ವಿನಮ್ರತೆಯನ್ನು ತೋರ್ಪಡಿಸಿದ್ದಾನೆ.ಹಾಗೆಂದು ಅವನಿಗೆ ಸ್ವಾಭಿಮಾನ ಇರಲಿಲ್ಲವೆಂದಲ್ಲ. ಮಾಲವಿಕಾಗ್ನಿಮಿತ್ರದಲ್ಲಿ ಭಾಸಾದಿ ಕವಿಗ ನಾಟಕಗಳ ಮಧ್ಯೆ ಆಧುನಿಕ ಕವಿಯಾದ ಕಾಳಿದಾಸನ ಕಾವ್ಯವನ್ನಾರು ಮೆಚ್ಚುವರು? ಎಂಬ ಪ್ರಶ್ನೆಗೆ - ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಂ ( ಹಳೆಯದೆಂಬ ಮಾತ್ರಕ್ಕೆ ಎಲ್ಲವೂ ಒಳ್ಳೆಯದಲ್ಲ. ಹೊಸಕಾವ್ಯಗಳೆಲ್ಲ ತಿರಸ್ಕಾರ ಯೋಗ್ಯವಲ್ಲ) ಎಂದು ದಿಟ್ಟ ಉತ್ತರ ನೀಡಿದ್ದಾನೆ.
ಇಂತಹ ಅಪ್ರತಿಮ ಕವಿಯ ವರ್ಣನೆಗೆ ಯಾವ ಲೇಖಕನ ಶಬ್ಧಗಳು ಶಕ್ತವಾದಾವು? ನಮಃ ಕವಯೇ ಕಾಳಿದಾಸಾಯ...

ಮಹಾಬಲ ಭಟ್

No comments:

Post a Comment