Thursday, January 13, 2011

ಗೋವಾ ಕ್ರಾಂತಿಯ ರೂವಾರಿ- ರಾಮ ಮನೋಹರ ಲೋಹಿಯಾ


ರಾಮ ಮನೋಹರ ಲೋಹಿಯಾ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸಮಾಜವಾದದ ಪ್ರಮುಖ ಚಿಂತಕ. ರಾಜಕೀಯ ನಾಯಕ. ಇವರು ಮಾರ್ಚ್ ೨೩, ೧೯೧೦ ರಂದು ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯ ’ಅಕ್ಬರ್ ಪುರ’ ಎಂಬ ಹಳ್ಳಿಯಲ್ಲಿ ಜನಿಸಿದರು.
ಜೀವನ
ರಾಮ ಮನೋಹರ ಲೋಹಿಯಾ ಅವರ ತಂದೆ ಹೀರಾ ಲಾಲ್, ತಾಯಿ ಚಂದ್ರಿ. ಅವರು ವೃತ್ತಿಯಿಂದ ಶಿಕ್ಷಕರಾಗಿದ್ದರು ಮತ್ತು ರಾಷ್ಟ್ರೀಯತೆಯ ಕಿಚ್ಚನ್ನು ನಂಬಿದ್ದವರು. ರಾಮ ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೇ ಅವರ ತಾಯಿ ಚಂದ್ರಿ ತೀರಿಕೊಂಡಿದ್ದರು. ಲೋಹಿಯಾ ಅವರನ್ನು ಅವರ ತಂದೆ ಚಿಕ್ಕ ವಯಸ್ಸಿನಲ್ಲೇ ತಾವು ತೆರಳುತ್ತಿದ್ದ ಸ್ವಾತಂತ್ರ್ಯ ಚಳುವಳಿಗಳಿಗೆ ಮತ್ತು ಸಮಾವೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಲೋಕಮಾನ್ಯ ಬಾಲ ಗಂಗಾಧರ ತಿಲಕರು ತೀರಿಕೊಂಡಾಗ, ಲೋಹಿಯಾ ಅವರು ಒಂದು ಪುಟ್ಟ ಪ್ರತಿಭಟನೆಯನ್ನು ಮಾಡುವ ಮೂಲಕ ತಮ್ಮ ಮೊದಲ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು.
ತಂದೆ ಹೀರಾ ಲಾಲ್’ ಅವರು ಮಹಾತ್ಮಾ ಗಾಂಧಿ ಅವರ ಅನುಯಾಯಿ ಯಾಗಿದ್ದರು. ಹೀಗಾಗಿ ಒಮ್ಮೆ ಲೋಹಿಯಾ ಅವರನ್ನು ತಮ್ಮೊಂದಿಗೆ ಗಾಂಧಿ ಅವರನ್ನು ಭೇಟಿ ಮಾಡಲು ಕರೆದುಕೊಂಡು ಹೋದರು. ಈ ಭೇಟಿಯೇ ಲೋಹಿಯಾ ಅವರಲ್ಲಿ ದೇಶಕ್ಕಾಗಿನ ಪ್ರೇಮ, ಬಲಿದಾನ ಮತ್ತು ಸ್ವರಾಜ್ ಚಿಂತನೆಯನ್ನು ಮೈಗೂಡಿಸಿಕೊಳ್ಳಲು ಸಹಾಯ ಮಾಡಿತು. ಲೋಹಿಯಾ ಅವರು ಗಾಂಧಿಯವರಿಂದ ಎಷ್ಟು ಪ್ರಭಾವಿತ ರಾದರೆಂದರೆ, ಮಹಾತ್ಮಾರ ತತ್ವಗಳನ್ನು ಪಾಲಿಸಲು ಪ್ರಾರಂಭಿಸಿದರು. ಲೋಹಿಯಾ ಅವರು ತಮ್ಮ ೧೦ನೇ ವಯಸ್ಸಿನಲ್ಲಿಯೇ ಸತ್ಯಾಗ್ರಹ ಚಳುವಳಿಗೆ ಸೇರ್ಪಡೆಯಾದರು.
ರಾಜಕೀಯದಲ್ಲಿ ಪ್ರವೇಶ
ಲೋಹಿಯಾ ಅವರು ಜವಹರಲಾಲ್ ನೆಹರೂ ಅವರನ್ನು ೧೯೨೧ನೇ ಇಸವಿಯಲ್ಲಿ ಭೇಟಿಯಾದರು. ಕೆಲವೇ ವರ್ಷಗಳಲ್ಲಿ ಇಬ್ಬರೂ ಆಪ್ತ ಸ್ನೇಹಿತರಾದರು. ಇಷ್ಟು ಒಳ್ಳೆಯ ಸ್ನೇಹಿತರಾದರೂ ನೆಹರೂ ಅವರು ತೆಗೆದುಕೊಳ್ಳುತ್ತಿದ್ದ ಕೆಲವು ನಿರ್ಣಯಗಳು ಮತ್ತು ರಾಜಕೀಯ ನಂಬಿಕೆಗಳ ಕುರಿತು ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ೧೯೨೮ರಲ್ಲಿ ಸೈಮನ್ ಕಮೀಷನ್ನಿನ ವಿರುದ್ಧ ವಿದ್ಯಾರ್ಥಿ ಪ್ರತಿಭಟನೆಯನ್ನು ಹಮ್ಮಿಕೊಂಡರು. ಸೈಮನ್ ಕಮೀಷನ್ನು ಭಾರತಕ್ಕೆ ಸ್ವಾಮಿತ್ವ (ಜomiಟಿioಟಿ sಣಚಿಣus) ನೀಡುವ ಕುರಿತು ಭಾರತೀಯ ಜನರ ಅಭಿಲಾಷೆಗಳನ್ನು ಕೇಳದೆ ಮುಂದೆ ಹೊರಟಿತ್ತು.

ವಿದ್ಯಾಭ್ಯಾಸ
ಲೋಹಿಯಾ ಅವರು ಮೆಟ್ರಿಕ್ ನಲ್ಲಿ ತಮ್ಮ ಶಾಲೆಗೇ ಮೊದಲ ಸ್ಥಾನದಲ್ಲಿ ತೇರ್ಗಡೆಯಾಗಿ, ನಂತರ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಇಂಟರ್ ಮೀಡಿಯೇಟ್ ಕೋರ್ಸಿಗೆ ಸೇರಿದರು. ೧೯೨೯ರಲ್ಲಿ ಬಿ.ಎ. ಪದವಿಯನ್ನು ಕೋಲ್ಕತ್ತ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ಇವರು ಬ್ರಿಟೀಷ್ ತತ್ವ ಶಾಸ್ತ್ರವನ್ನು ನಂಬುತ್ತಿರಲಿಲ್ಲ. ಹೀಗಾಗಿ ತಮ್ಮ ಅಭಿಪ್ರಾಯಗಳನ್ನು ಸಮರ್ಪಕವಾಗಿ ಮುಂದಿಡಲು ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಬಹು ಬೇಗನೆ ಜರ್ಮನ್ ಭಾಷೆಯನ್ನು ಕಲಿತು, ತಮ್ಮ ಅಪ್ರತಿಮ ಸಾಧನೆಗಾಗಿ ಹಣ ಸಹಾಯವನ್ನೂ ಪಡೆದರು. ಇಲ್ಲಿನ ಉಪ್ಪಿನ ಸತ್ಯಾಗ್ರಹ ಕುರಿತು ಪ್ರೌಢ ಪ್ರಬಂಧ ಬರೆದು, ಅರ್ಥಶಾಸ್ತ್ರದಲ್ಲಿ ಪಿ.ಎಚ್.ಡಿ ಗಳಿಸಿದರು. ಜರ್ಮನ್ ಭಾಷೆಯಲ್ಲೇ ಮಾರ್ಕ್ಸ್ ಮತ್ತು ಹೆಗೆಲ್‌ರ ಕೃತಿಗಳನ್ನು ಅಭ್ಯಸಿಸಿ ಅವರಿಗಿಂತ ಭಿನ್ನವಾಗಿ ಚರಿತ್ರೆಯನ್ನು ಅರಿಯುವ ಅಗತ್ಯವನ್ನು ಕುರಿತು ಚಿಂತಿಸಿದರು.

ಸ್ವಾತಂತ್ರ್ಯ ಹೋರಾಟಗಾರರಾಗಿ
ಐರೋಪ್ಯ ರಾಷ್ಟ್ರದಲ್ಲಿದ್ದಾಗ, ಲೋಹಿಯಾ ಅವರು ಜಿನೀವಾದಲ್ಲಿ ಜರುಗಿದ ಲೀಗ್ ಆಫ್ ನೇಷನ್ಸ್ ಅಸೆಂಬ್ಲಿ’ಯಲ್ಲಿ ಭಾಗವಹಿಸಿದ್ದರು. ೧೯೩೪ ರಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷದ ಸ್ಥಾಪನೆಗಾಗಿ ದುಡಿದರು. ೧೯೩೬-೩೮ ರ ವರೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ವಿದೇಶಾಂಗ ವ್ಯವಹಾರ ವಿಭಾಗದ ಕಾರ್ಯದರ್ಶಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅನೇಕ ಬಾರಿ ಕಾರಾಗೃಹ ವಾಸವನ್ನು ಅನುಭವಿಸಿದರು. ೧೯೪೨ ರ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಆಂದೋಳನದಲ್ಲಿ ಭೂಗತ ಹೋರಾಟ ಮುಂದುವರೆಸಿದರು. ೧೯೪೬ ರ ಜೂನ್ ೬ ರಂದು ಗೋವಾ ಸ್ವಾತಂತ್ರ್ಯ ಹೋರಾಟದಲ್ಲಿ ಬಂಧನಕ್ಕೊಳಗಾಗಿದ್ದರು. ಗಾಂಧಿಯವರ ಆರಾಧಕರಂತೆ ಅವರ ಟೀಕೆಯನ್ನು ಮಾಡುತ್ತಿದ್ದರು. ಸ್ವಾತಂತ್ರ್ಯೋತ್ತರದ ಭಾರತದ ನೆಹರೂ ಯುಗದ ಕಟು ಟೀಕಾಕಾರರಾಗಿದ್ದರು. ಅಲ್ಲದೆ ಕಾಂಗ್ರೆಸ್ ವಿರೋಧಿವಾದದ ಪ್ರತಿಪಾದಕರಾಗಿದ್ದರು. ೧೯೫೨ ರಲ್ಲಿ ಪ್ರಜಾಸಮಾಜವಾದಿ ಪಕ್ಷದ ಸ್ಥಾಪಕರಾಗಿದ್ದ ಅವರು, ನೆಹರೂ ವಿರುದ್ಧ ಲೋಕಸಭೆಗೆ ಸ್ಪರ್ಧಿಸಿ ಸೋತರು. ೧೯೬೩ ರ ಚುನಾವಣೆಯಲ್ಲಿ ’ಫರೂಕಾಬಾದ್’ ಲೋಕಸಭಾಕ್ಷೇತ್ರದಿಂದ ಆಯ್ಕೆಯಾಗಿಬಂದರು. ೧೯೬೭ ರಲ್ಲಿ ’ಕನೌಜ್’ ಕ್ಷೇತ್ರದಿಂದ ಜಯಗಳಿಸಿದರು.

ಇವರು ಒಳ್ಳೆಯ ಲೇಖಕರು. ಅನೇಕ ನಿಯತಕಾಲಿಕಗಳ ಸಂಪಾದಕರಾಗಿದ್ದರು. ಅವುಗಳಲ್ಲಿ ಮ್ಯಾನ್ ಕೈಂಡ್ (ಇಂಗ್ಲೀಷ್)
ಚೌಕಂಭಾ (ಹಿಂದಿ) ಪ್ರಮುಖವಾದವು
ಇಂಗ್ಲೀಷ್ ಕೃತಿಗಳು:
The Cast system
Marks, Gandhi and Socialism
Guilty men of India's partision
Interval during Politics
Language
Rupees 25,000/- A Day
Note and Comments

ಹಿಂದಿಯಲ್ಲಿ ಬರೆದ ಮುಖ್ಯ-ಕೃತಿಗಳು:
ಸಮಾಜವಾದಿ ಅಂದೊಳನ್ ಕಾ ಇತಿಹಾಸ್
ಹಿಂದು ಮುಸಲ್ಮಾನ್
ಆಝಾದ್ ಹಿಂದೂಸ್ಥಾನ್ ಕ ನಯೀ ರುಜುಹಾನ್
ನಿಧನ: ರಾಮ ಮನೋಹರ ಲೋಹಿಯಾರವರು, ಅವಿವಾಹಿತರಾಗಿದ್ದರು. ೧೯೬೭ ರ ಅಕ್ಟೋಬರ್, ೧೨ ರಂದು ಕಾಲವಶರಾದರು.

ಗೋವಾ ಕ್ರಾಂತಿಯ ಸ್ಪೂರ್ತಿಯ ಸೆಲೆ
ಗೋವಾ ಮುಕ್ತಿ ಸಂಗ್ರಾಮ ಸ್ಪಷ್ಟರೂಪವನ್ನು ಪಡೆದುಕೊಂಡಿದ್ದು ರಾಮಮನೋಹರ ಲೋಹಿಯಾ ಅವರು ದಾರಿ ತೋರಿದ ಮೇಲೆಯೇ. ಕ್ರಾಂತಿಯ ಕೊನೆಯ ಚರಣವನ್ನು ಸತ್ತರಿಯ ರಾಣೆ ಕುಟುಂಬ ಆರಂಭಿಸಿತ್ತು. ಅದೇ ಸಂದರ್ಭದಲ್ಲಿ ೧೯೪೬ ಜೂನ್ ೧೮ರಂದು ರಾಮ ಮನೋಹರ ಲೋಹಿಯಾ ಅವರು ಮಡಗಾಂವ್‌ನಲ್ಲಿ ಪೋಲಿಸ್ ಪಡೆಯ ಕಾವಲನ್ನು ತಪ್ಪಿಸಿ ಪೋರ್ಚುಗೀಸ್ ಸರಕಾರದ ಕಾನೂನನ್ನು ಉಲ್ಲಂಘಿಸಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಡಗಾಂವ್ ನ ಆಡಳಿತಾಧಿಕಾರಿ ಫೊರ್ತುನಟೊ ಮಿರಾಂಡಾರಿಂದ ಬಂಧಿತರಾಗುವ ಮೊದಲು ತಮ್ಮ ಭಾಷಣದ ಮೂಲಕ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದರು. ಈ ನಾಗರಿಕ ಅಸಹಕಾರ ಚಳುವಳಿಯ ಮುಖ್ಯ ಉದ್ದೇಶ ನಾಗರಿಕ ಸ್ವಾತಂತ್ರ್ಯವನ್ನು ಪಡೆಯುವುದು. ಎಂದು ಸ್ಪಷ್ಟಪಡಿಸಿದರು. ನಿಮ್ಮ ಅಗತ್ಯಕ್ಕೆ ದೆಹಲಿ ಅಥವಾ ವಿಶ್ವಸಂಸ್ಥೆಯ ಕಡೆಗೆ ಮುಖ ಮಾಡಬೇಡಿ. ನಿಮ್ಮ ಸ್ವಾತಂತ್ರ್ಯ ನಿಮ್ಮಲ್ಲೇ ಇದೆ. ಎಂದು ಸ್ವಾಭಿಮಾನಿಗಳಾಗುವಂತೆ ಗೋವನ್ನರಿಗೆ ಕರೆ ನೀಡಿದರು. ಗೋವಾ ಭಾರತದ ಅವಿಭಾಜ್ಯ ಅಂಗ; ಅದು ಭಾರತಕ್ಕೇ ಸೇರಬೇಕು ಎಂದು ಉದ್ಘೋಷಿಸಿದ ಪ್ರಥಮ ಭಾರತೀಯ ನಾಯಕ ಇವರು. ಗೋವಾ ಪೋರ್ಚುಗೀಸರಿಂದ ವಿಮುಕ್ತಗೊಳ್ಳಲು ಸಹಾಯ ಮಾಡುವಂತೆ ಭಾರತೀಯರನ್ನು ಪ್ರಚೋದಿಸಿದರು. ಲೋಹಿಯಾರ ಮಾತು ಹಾಗೂ ಕೃತಿಗಳು ಇತರ ಭಾರತೀಯರೂ ಗೋವಾದ ಬಗ್ಗೆ ಯೋಚಿಸುವಂತೆ ಮಾಡಿತು. ಮಹಾತ್ಮಾ ಗಾಂಧಿಯವರು ೩೦ ಜೂನ್ ೧೯೪೬ ರಂದು ತಮ್ಮ ಹರಿಜ ಪತ್ರಿಕೆಯಲ್ಲಿ ಗೋವಾ ಮುಕ್ತಿಗೆ ಲೋಹಿಯಾ ಪಡುತ್ತಿರುವ ಶ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಲೋಹಿಯಾ ಅವರ ಈ ಅಪಾರ ಶ್ರಮದ ಪರಿಣಾಮವಾಗಿ ವರ್ಧಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪೋರ್ಚುಗೀಸರ ದಬ್ಬಾಳಿಕೆಯನ್ನು ವಿರೋಧಿಸುವ ಹಾಗೂ ಗೋವಾದ ಜನತೆಗೆ ಸಂಪೂರ್ಣ ಸಹಕಾರ ನೀಡುವ ನಿರ್ಣಯವನ್ನು ಕೈಗೊಳ್ಳಲಾಯಿತು.

ಗೋವೆಯೆಂಬ ನಾವೆ......

ಗೋವಾ ಮುಕ್ತಿ ದಿನಾಚರಣೆ ಇತ್ತೀಚೆಗಷ್ಟೆ ಮುಗಿದಿದೆ. ಎಂದಿನಂಥಲ್ಲ ಈ ವರ್ಷದ ಆಚರಣೆ. ಗೋವಾ ಮಾತೆಗೆ ಈಗ ೫೦ರ ಹರೆಯ. ಸ್ವರ್ಣಜಯಂತಿಯ ಸಂಭ್ರಮದಲ್ಲಿ ಗೋವಾದ ಜನತೆ ಇದ್ದಾರೆ. ಸರಕಾರವೂ, ಅನೇಕ ಸಂಘ ಸಂಸ್ಥೆಗಳೂ ವರ್ಷಾದ್ಯಂತ ಇದರ ಆಚರಣೆಯನ್ನು ಮಾಡಲಿವೆ.
ಇಂತಹ ಒಂದು ಸಂದರ್ಭ ಮೂಲತ: ಈ ಭೂಮಿಯಲ್ಲೇ ಹುಟ್ಟಿ ಬೆಳೆದವರಿಗೆ ಪುಳಕದ ಕ್ಷಣವಾಗುವುದು ಸಹಜ. ಆದರೆ ಒಮ್ಮೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕರ್ನಾಟಕದ ಜನತೆಗೆ ಸುವರ್ಣ ಕರ್ನಾಟಕ ನೀಡಿದ ಸಂತಸವನ್ನು ಗೋವಾದ ಸ್ವರ್ಣ ಜಯಂತಿ ಗೋವನ್ನರಿಗೆ ನೀಡುತ್ತಿಲ್ಲ ಎಂಬುದು. ಇದಕ್ಕೆ ಕಾರಣ ಗೋವಾದಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಹೊರಗಿನವರು ಎಂಬುದೆ? ಖಂಡಿತ ಅಲ್ಲ. ಗೋವಾದಲ್ಲಿಯೇ ಅನೇಕರಿಗೆ ಈ ಮುಕ್ತಿ ಬೇಡವಾಗಿತ್ತು. ಅವರಿಗೆ ಭಾರತೀಯ ಎನಿಕೊಳ್ಳುವುದಕ್ಕಿಂತ ಪೋರ್ತುಗೀಸ ಎನಿಸಿಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ, ಅಭಿಮಾನ. ಕೊಂಕಣಿ, ಹಿಂದಿಗಳನ್ನು ಮಾತನಾಡಲಾರದವರೂ ಪೋರ್ಚುಗೀಸನ್ನು ಹೆಮ್ಮೆಯಿಂದ ಮಾತನಾಡುತ್ತಾರೆ. ಪೋರ್ಚುಗೀಸರು ಗೋವಾಕ್ಕೆ ಕಾಲಿರಿಸಿದ ದಿನವನ್ನು ಕುಣಿದು ಕುಪ್ಪಳಿಸಿ ಆಚರಿಸುತ್ತಾರೆ. ಈಗಿನ ಪ್ರಜಾಪ್ರಭುತ್ವಕ್ಕಿಂತ ಪೋರ್ಚುಗೀಸರ ದಬ್ಬಾಳಿಕೆಯೇ ಉತ್ತಮವಾಗಿತ್ತೆಂದು ಭಾಷಣ ಬಿಗಿಯುತ್ತಾರೆ. ಅಂತಿರುವಾಗ ವಿಮೋಚನೆಯ ಸ್ವರ್ಣಜಯಂತಿ ಬರಲಿ ಅಥವಾ ಶತಮಾನೋತ್ಸವವೇ ಬರಲಿ ಅದು ಸಂತಸದ ಕ್ಷಣ ಹೇಗಾದೀತು?
ಇಂದು ರಾಷ್ಟ್ರಾಭಿಮಾನ, ಪ್ರಾದೇಶಿಕ ಅಭಿಮಾನಗಳು ಕೆಲವರಿಗಷ್ಟೇ ಸೀಮಿತವಾಗಿವೆ. ವಿಶಾಲ ಮನೋಭಾವದ ಹೆಸರಿನಲ್ಲಿ ವಿದೇಶಗಳನ್ನು ಅಪ್ಪಿಕೊಳ್ಳುವುದು ಹೆಚ್ಚಾಗಿದೆ.
ಇಷ್ಟರಲ್ಲೇ ಕೆಲವು ಸಂಘಟನೆಗಳು ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಸುವರ್ಣ ವರ್ಷವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿವೆ. ಹೊರಗಿನವರು ಎಂದು ಪಟ್ಟಗಟ್ಟಿಸಿಕೊಂಡಿರುವ ಕನ್ನಡಿಗರು ನೇತ್ರದಾನ ಎಂಬ ವಿಶಿಷ್ಟ ತ್ಯಾಗಪೂರ್ಣ ಕಾರ್ಯಕ್ರಮವನ್ನು ನೀಡುವ ಮೂಲಕ ತಮ್ಮ ಕರ್ಮಭೂಮಿ ಗೋಮಂತಕ ಮಾತೆಗೆ ಭಾವ ನಮನ ಸಲ್ಲಿಸಿದ್ದಾರೆ. ನಿಜಕ್ಕೂ ಇದೊಂದು ಶ್ಲಾಘನೀಯ ಕಾರ್ಯ. ನಮಗೆ ನೆರಳು ಕೊಡುವ ಮರಕ್ಕೆ ಒಂದು ಕೊಡ ನೀರನ್ನಾದರೂ ಹಾಕಬೇಕಲ್ಲವೆ?