Tuesday, November 30, 2010

ಭಾಷಾ ಭಾವೈಕ್ಯ ಸಮಾವೇಶ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಗೋವಾ ಕನ್ನಡ ಸಮಾಜ ಪಣಜಿ ಜಂಟಿಯಾಗಿ ಪಣಜಿಯಲ್ಲಿ ’ಹೊರನಾಡ ಕನ್ನಡಿಗರ ಭವಿಷ್ಯ ಚಿಂತನೆ ಹಾಗೂ ಭಾಷಾ ಭಾವೈಕ್ಯ ಸಮಾವೇಶವನ್ನು ಆಯೋಜಿಸಿದ್ದವು. ಗಾಂಧಿಜಯಂತಿಯಂದು ಮಧ್ಯಾಹ್ನ ೩.೩೦ ಕ್ಕೆ ಆರಂಭವಾದ ಈ ಸಮಾವೇಶ ಗೋವಾ ಕನ್ನಡಿಗರ ಮನಸ್ಸಿನಲ್ಲಿ ಅಳಿಯದ ಛಾಪನ್ನು ಮೂಡಿಸಿತು.
ಕಾರ್ಯಕ್ರಮಕ್ಕೆ ಭರ್ಜರಿ ಆರಂಭವನ್ನು ಒದಗಿಸಿದವರು ಶ್ರೀ ನಾಗರಾಜಮೂರ್ತಿಯವರು. ತಮ್ಮ ವೈವಿಧ್ಯಮಯ ಕಲಾತಂಡಗಳ ಮೂಲಕ ಅತ್ಯದ್ಭುತ ನೃತ್ಯ ಹಾಗೂ ಜಾನಪದ ಕಲಾ ಪ್ರದರ್ಶನವನ್ನು ಪ್ರಸ್ತುತಪಡಿಸಿ ಕರ್ನಾಟಕದ ಭವ್ಯ ಜಾನಪದ ಸಂಸ್ಕೃತಿಯನ್ನು ತೆರೆದಿಟ್ಟರು. ಕಂಸಾಳೆ, ಸುಗ್ಗಿ, ನಂದಿಕೋಲು, ಡೊಳ್ಳು, ಲಂಬಾಣಿ ಕುಣಿತಗಳು ಸಮರ್ಥನಿರ್ದೇಶನದಿಂದಾಗಿ ಜನಮನ ಸೂರೆಗೊಳ್ಳುವಲ್ಲಿ ಸಮರ್ಥವಾದವು. ಯಾವ ಮೋಹನ ಮುರಳಿ ಕರೆಯಿತೊ.. ಮುಂತಾದ ಭಾವಗೀತೆಗಳನ್ನೂ ಮಾತಾಡ್ ಮಾತಾಡ್ ಮಲ್ಲಿಗೆ.. ಇತ್ಯಾದಿ ಜಾನಪದ ಗೀತೆಗಳನ್ನೂ ನೃತ್ಯಕ್ಕೆ ಅಳವಡಿಸಿದ ಪ್ರಯೋಗ ಅತ್ಯಂತ ಯಶಸ್ವಿಯಾಗಿತ್ತು. ಸಾಮಾನ್ಯವಾಗಿ ಪುರುಷರಿಗೇ ಮೀಸಲಾಗಿದ್ದ ಡೊಳ್ಳು ಕುಣಿತವನ್ನು ಮಹಿಳಾ ತಂಡವೂ ಪ್ರದರ್ಶಿಸಿ ಸೈ ಅನಿಸಿಕೊಂಡಿತು. ಇದೇ ಸಂದರ್ಭದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ ೧೦ ವರ್ಷದ ಬಾಲಿಕೆ ವಾಸ್ಕೋ ನಿವಾಸಿ ಕು. ಪ್ರತಿಕ್ಷಾ ಮುಂದೆ ತಾನೊಬ್ಬ ಉತ್ತಮ ನೃತ್ಯಗಾತಿಯಾಗಬಲ್ಲೆನೆಂಬುದನ್ನು ತೋರಿಸಿಕೊಟ್ಟಳು.
ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಉದ್ಘಾಟಿಸಿದರು. ವಿಜಯ ಕರ್ನಾಟಕ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ಮುಖ್ಯ ಅತಿಥಿಗಳಾಗಿದ್ದರು. ಗೋವಾ ಕನ್ನಡ ಸಮಾಜದ ಅಧ್ಯಕ್ಷ ವಿಜಯ ಶೆಟ್ಟಿ ಸ್ವಾಗತಿಸಿದರೆ, ಕಾರ್ಯಕ್ರಮದ ಸಂಚಾಲಕ ವಿಷ್ಣು ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶಾಂತರಾಜು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮ ನಿರೂಪಣೆಯ ಹೊಣೆ ಮಹಾಬಲ ಭಟ್ ಅವರದ್ದಾಗಿತ್ತು.
ಮರುದಿನ ಮುಂಜಾನೆ ೧೦ ಗಂಟೆಗೆ ಹೊರನಾಡ ಕನ್ನಡಿಗರ ಭವಿಷ್ಯದ ಕುರಿತು ಶ್ರಿ ವ್ಯಾಸ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಚಿಂತನಗೋಷ್ಟಿ ನಡೆಯಿತು. ಗೋವಾದ ಪ್ರಸಿದ್ಧ ಸಾಹಿತಿ ಡಾ.ಅರವಿಂದ ಯಾಳಗಿಯವರು ಹೊರನಾಡ ಕನ್ನಡಿಗರ ಬದುಕು ಬವಣೆಗಳನ್ನು ವಿಶ್ಲೇಷಿಸುತ್ತ ’ಹೊರನಾಡಿನಲ್ಲಿರುವ ಪ್ರತಿಭಾವಂತರಿಗೆ ಸರಕಾರದ ವಿವಿಧ ವಿಭಾಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ’ ಎಂದು ವಿಷಾದಿಸಿದರು. ಖ್ಯಾತ ಚಿತ್ರನಿರ್ದೇಶಕ ಬಿ.ಸುರೇಶ ಅವರು ಕನ್ನಡಿಗರ ವಲಸೆಗೆ ಅನ್ನದ ಪ್ರಶ್ನೆಯ ಪಾತ್ರವೆಷ್ಟು ಎಂಬುದನ್ನು ವಿವರಿಸುತ್ತ, ’ಹೊರನಾಡ ಕನ್ನಡಿಗರು ತಮ್ಮ ಅವಕಾಶಗಳನ್ನು ತಾವೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಅವರು ತಮ್ಮ ಕನ್ನಡತನವನ್ನು ಮರೆಯದಿರುವುದೂ ಅಗತ್ಯ’ ಎಂದು ಅಭಿಪ್ರಾಯಪಟ್ಟರು.ಶ್ರೀ ವ್ಯಾಸ ದೇಶಪಾಂಡೆ ’ಹೊರನಾಡ ಕನ್ನಡಿಗರ ಸಮಸ್ಯೆಗೆ ಸರಕಾರ ಸ್ಪಂದಿಸಬೇಕು’ ಎಂದು ಅಭಿಪ್ರಾಯಪಡುತ್ತ ಸಮಾರೋಪಗೊಳಿಸಿದರು. ಈ ಗೋಷ್ಟಿಯ ನಿರ್ವಹಣೆಯನ್ನು ಸೌ.ಕೋಮಲಾ ಮಾಡಿದರು. ಸಿ.ಕೆ. ಜೋಶಿ ಸ್ವಾಗತಿಸಿದರು, ಕಲ್ಮೇಶ ಪಾಟೀಲ ವಂದಿಸಿದರು.
ಅನಂತರ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿಯವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಟಿ ನಡೆಯಿತು. ಕನ್ನಡ ನಾಡಿನ ಕೆಲವು ಕವಿಗಳ ಜೊತೆಗೆ ಗೋವಾದ ಕನ್ನಡ, ಕೊಂಕಣಿ, ಮರಾಠಿ, ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕೃತ ಕವಿಗಳು ತಮ್ಮ ಕವನ ವಾಚಿಸಿದರು. ಕವನವಾಚನದ ಸಂದರ್ಭದಲ್ಲಿ ಕವಿಯ ಪರಿಚಯ ಹಾಗೂ ಕವನ ಪರದೆಯ ಮೇಲೆ ಮೂಡುವ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಜಯಂತ ಕಾಯ್ಕಿಣಿ ಕವಿಯ ಮನಸ್ಥಿತಿ ಹಾಗೂ ಕಾವ್ಯದ ಉತ್ಪತ್ತಿಯ ರಹಸ್ಯವನ್ನು ವಿಶದವಾಗಿ ವಿಶ್ಲೇಷಿಸಿದರು.
ಭೋಜನೋತ್ತರ ವಾಣಿ ಮರಡೂರ ಅವರ ಗಾಯನ ಗಮನ ಸೆಳೆಯಿತು. ಸ್ಥಳೀಯ ಕಲಾವಿದೆ ಸೌ.ಅಖಿಲಾ ಕುರಂದವಾಡ ಎರಡು ಹಾಡನ್ನು ಪ್ರಸ್ತುತಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ನಂತರ ಸ್ಥಳೀಯ ಕೊಂಕಣಿ ಕಲಾವಿದರಿಂದ ಕೊಂಕಣಿಯಲ್ಲಿ ಗೋವಾದ ಜಾನಪದ ನೃತ್ಯ ಪ್ರದರ್ಶನ ನಡೆಯಿತು. ಅವರ ಅಮೋಘ ದೀಪನೃತ್ಯ ಜನರ ಪ್ರಶಂಸೆಗೆ ಪಾತ್ರವಾಯಿತು.
ತಮ್ಮ ವಿಶಿಷ್ಟ ಮಾತಿನ ಶೈಲಿಯಿಂದ ಪ್ರಸಿದ್ಧರಾಗಿರುವ ಪ್ರೊ.ಕೃಷ್ಣೇಗೌಡರು ನಡೆಸಿಕೊಟ್ಟ ’ಮಾತಿನ ಮಂಟಪ’ ಕಾರ್ಯಕ್ರಮ ಪ್ರೇಕ್ಷಕರಿಗೆ ರಂಜನೆ ನೀಡಿತು. ಅವರ ಬಾಯಿಂದ ಹರಿದು ಬರುತ್ತಿರುವ ಜಾನಪದ ಗೀತೆಗಳು, ಕನ್ನಡ ಸಂಸ್ಕೃತಿಯ ಅತ್ಯಮೂಲ್ಯ ಸಾಹಿತ್ಯ ನುಡಿಝರಿಯಲ್ಲಿ ಮಿಂದ ಪ್ರೇಕ್ಷಕರು ಮಂತ್ರಮುಗ್ಧರಾದರು.
ಸಾಯಂಕಾಲ ನಡೆದ ಸಮಾರೋಪದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಚಂದ್ರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉತ್ತರ ಗೋವಾದ ಸಂಸದ ಶ್ರೀಪಾದ ನಾಯ್ಕ ಆಗಮಿಸಿದ್ದರು. ಡಾ. ನಾ. ಡಿಸೋಜಾ ಸಮಾರೋಪ ಭಾಷಣ ಮಾಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಸೌ. ಅಖಿಲಾ ಕುರಂದವಾಡ ಮಾಡಿದರೆ ಅರುಣಕುಮಾರ ಆಭಾರ ಪ್ರದರ್ಶನವನ್ನು ಮಾಡಿದರು.
ಕೊನೆಯಲ್ಲಿ ನಾಗರಾಜಮೂರ್ತಿಯವ ನಿರ್ದೇಶನದಲ್ಲಿ ’ಕೊಂದವರಾರು?’ ಎಂಬ ನಾಟಕ ಪ್ರದರ್ಶಿತವಾಯಿತು.
ಎರಡು ದಿನಗಳ ಈ ಸಮಾವೇಶಕ್ಕೆ ಆತಿಥ್ಯವನ್ನು ನೀಡಿದ್ದು ಗೋವಾದ ಕನ್ನಡಿಗರ ಧ್ವನಿಯಾಗಿರುವ ಪಣಜಿಯ ಗೋವಾ ಕನ್ನಡ ಸಮಾಜ. ಕಳೆದು ಇಪ್ಪತ್ತೈದು ವರ್ಷಗಳಿಂದ ಗೋವಾದಲ್ಲಿ ಕನ್ನಡ ಚಟುವಟಿಕೆಗಳನ್ನು ನಡೆಸುತ್ತ ಕನ್ನಡತನವನ್ನು ಜೀವಂತವಾಗಿರಿಸಿದ ಈ ಸಂಸ್ಥೆ ಕಳೆದವರ್ಷ ಕನ್ನಡ ಸಂಸ್ಕೃತಿ ಇಲಾಖೆಯವರ ’ಕನ್ನಡ ಸಂಸ್ಕೃತಿ ಉತ್ಸವ’ವನ್ನೂ ಯಶಸ್ವಿಯಾಗಿ ನಡೆಸಿಕೊಟ್ಟಿತ್ತು. ಕಾರ್ಯಕರ್ತರು ಅಪಾರ ಪರಿಶ್ರಮದಿಂದ ಈ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿದರು. ಗೋವಾದ ವಿವಿಧೆಡೆಗಳಿಂದ ಹರಿದುಬಂದ ಅಪಾರ ಜನಸ್ತೋಮ ಕಾರ್ಯಕ್ರಮದ ಯಶಸ್ವಿತೆಗೆ ಸಾಕ್ಷಿಯಾಯಿತು.
ಒರಿಸ್ಸಾದಲ್ಲಿ ಸರಸೂ ಸರಿದಾಟ
ಸರಸ್ವತಿ ಸರದಾರ
ಬೆಳಿಗ್ಗೆ ೫ಕ್ಕೇ ಜನಸಂದಣಿಯಿರುವ ಜಾಗ ಯಾವುದು? ಎಂಬ ನನ್ನ ಪ್ರಶ್ನೆಗೆ "ಏರ‍್ಪೋರ್ಟ್" ಥಟ್ ಅಂತ ಉತ್ತರಿಸಿದ ೯ ವರ್ಷದ ಹಿತೇಶ್. ಇದನ್ನು ಪ್ರತ್ಯಕ್ಷ ನೋಡಿದ್ದು ಇಂದು. ನಂಗು - ಪಂಗು ವಿದೇಶೀಯರು, ಸರ್ಕಾರಿ ಖರ್ಚಿನಲ್ಲಿ ಸುತ್ತಾಡುವ ಅಧಿಕಾರಿಗಳು, ಖಾಸಗೀ ಕಂಪನಿಯ ಲ್ಯಾಪ್ ಟ್ಯಾಪ್ ಧಾರಿಗಳು. ಬೆಳಿಗ್ಗೆ ಹಾರಿ ಸಂಜೆಗೆ ಹಿಂತಿರುಗುವ ಉದ್ಯೋಗಪತಿಗಳು. ಠಾಕು ಠೀಕಾಗಿ ತಿರುಗಾಡುವ ಬೆಡಗಿಯರು. ಹೀಗೆ ಆಸಕ್ತಿ ಹುಟ್ಟಿಸುವಂತಹ ವಾತಾವರಣದಿಂದ ಮನಕ್ಕೆ ಮುದವುಂಟಾಯಿತು.
ಬ್ರೆಡ್ - ಜ್ಯಾಮ್ ಹಣ್ಣುಗಳ ನಾಷ್ಟಾ ಮಾಡಿ ಹಳೆಯ ಚಲನಚಿತ್ರವೊಂದನ್ನು ನೋಡುತ್ತಾ ಬಾಲ್ಯದ ದಿನಗಳನ್ನು ನೆನಸಿಕೊಂಡೆ. ಮೊದಲ ಬಾರಿಗೆ ವಿಮಾನದಲ್ಲಿ ಪಯಣಿಸಿದ್ದು ಮಾಮ ಅತ್ತೆಯೊಡನೆ ದಿಲ್ಲಿಗೆ ಹೋದಾಗ. ಆಗ ಬರೀ ಸಿರಿವಂತರೇ ಹಾರಾಡುತ್ತಿದ್ದರು. "ಬಲಗಾಲು ಇಟ್ಟು ವಿಮಾನ ಹತ್ತು." ಎಂದು ಹೇಳುತ್ತಿದ್ದ ಮಾಮ, ಬಾತ್ ರೂಮಿಗೆ ಹೋಗಿ ಬನ್ನಿ ಎಂದು ಕಾಳಜಿ ತೆಗೆದುಕೊಳ್ಳುತ್ತಿದ್ದ ಅತ್ತೆ, ಮನದಲ್ಲಿ ಮೂಡಿದ ಭಯ ಆತಂಕ ಮುಚ್ಚಿಕೊಳ್ಳಲು ಕಿಸಿಕಿಸಿ ನಗುವ ನಾನು ಮತ್ತು ಅನು- ಇಂದು ಟ್ರಾಲಿಯಲ್ಲಿ ಸಾಮಾನು vಳ್ಳಿಕೊಂಡು ಮೊಬೈಲ್ ನಲ್ಲಿ ಮಾತಾಡಿಕೊಂಡು ಅತಿಯಾದ ಸುರಕ್ಷಾ ಚಿಂತೆಗಳಿಂದ ಹೆಜ್ಜೆ ಹೆಜ್ಜೆಗೂ ಚೆಕಿಂಗ್ ಮಾಡಿಸಿಕೊಂಡು ಬ್ಲ್ಯಾಕ್ ಬೆರಿಯಲ್ಲಿ ಈ ಮೇಲ್ ಹಾವಳಿಯಲ್ಲಿ ನಿರತನಾದ ಪತಿಯೊಡನೆ ಪುಸ್ತಕದ ಮೊರೆಹೊಕ್ಕ ನನ್ನ ಪಯಣ ಆರಾಮದಾಯಕ.
ಶ್ರೀಮತಿ ಪಟ್ನಾಯಕರ ಪ್ರೀತಿಪೂರ್ಣ ಸ್ವಾಗತ, ಆದರಾತಿಥ್ಯ, ಮನೆಯಿಂದ ಇಷ್ಟು ದೂರ ಬಂದಿದ್ದೇನೆ ಎಂಬುದನ್ನು ಮರೆಸುವಂತಿತ್ತು. ಪ್ರಶಸ್ತ, ಸ್ವಚ್ಛ ಪ್ರವಾಸೀ ಮಂದಿರ, ರುಚಿ ರುಚಿಯಾಗಿ "ಮ್ ಚಮೀತ್" ಅಡಿಗೆ ಮಾಡಿ ಹಾಕುವ "ದೇಬು" ಎಲ್ಲವೂ ನನಗಾಗಿ ಕಾದಂತಿತ್ತು. ೪೦ ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಎ.ಸಿ. ಇಲ್ಲದೇ ಇರುವುದು ಅಶಕ್ಯವೆನಿಸಿತ್ತು. ನಾನೆಷ್ಟು ವಿಲಾಸ ಪೂರ್ಣ ಜೀವನ ನಡೆಸಿದ್ದೇನೆ ಎನಿಸಿತ್ತು.
ಸಂಜೆ ಉತ್ಸಾಹದ ಚಿಲುಮೆಯಂತಿರುವ ಆಂಟಿ ಸ್ನೇಹಮಯೀ ಶೋಮಾ, ತುಂಟ ಸಿದ್ಧೇಶನೊಡನೆ ಮಾಸೀಮಾ ಮಂದಿರ ನೋಡಲು ಹೋದೆವು. ಹೊರಗಿನಿಂದ ಅತೀ ಸುಂದರ ಅನಿಸಿತು. ದೇವರಿಗೆ ಕೈ ಮುಗಿಯಲು ಒಳಗೆ ಕಾಲಿಟ್ಟರೆ ಶಿವಲಿಂಗದ ಮೇಲೆಲ್ಲಾ ತಿರುಗಾಡುತ್ತಿರುವ ಜಿರಳೆಗಳು.! ಕಿಮಟು ವಾಸನೆ! ದುಡ್ಡು ಕೀಳಲು ಕಾದಿರುವ ಪಾಂಡಾಗಳು.!
ಲಿಂಗರಾಜ ಮಂದಿರದ ಪ್ರಾಂಗಣದಲ್ಲಿ ಒಟ್ಟು ನೂರಾ ಎಂಟು ಚಿಕ್ಕ ದೊಡ್ಡ ಗುಡಿಗಳು. ಹೊರಗಿನಿಂದ ಅಭೂತ ಪೂರ್ವ ಎನಿಸುವ ಕಟ್ಟಡದ ಒಳಗೆ ಭೂಮಿಯಿಂದ ತಾನಾಗಿಯೇ ಉದ್ಭವಿಸಿರುವ ಶಿವಲಿಂಗ. ಹರಿಹರನ ಮಂದಿರವೆನಿಸಿರುವ ಇಲ್ಲಿ ಎಲ್ಲೆಡೆ ಹರಿಯ, ಹರನ, ಚಿಹ್ನೆಗಳು ಕಂಡುಬಂದವು. ದೇವರಿಗೆ ಎಡೆ ಉಣಿಸಲು ಪ್ರತೀ ದೇವಾಲಯದಲ್ಲೂ ಅಡುಗೆ ಮನೆ ವ್ಯವಸ್ಥೆ ಇದೆ. ಇಲ್ಲಿನ ’ಭೋಗ್’ ಎಂದರೆ ’ಪ್ರಸಾದ’ಕ್ಕೆ ನಮ್ಮ ಕಾಣಿಕೆ ಸಲ್ಲಿಸಬಹುದು. ಸಲ್ಲಿಸಲೇಬೇಕು ಎಂಬುದು ಕಳ್ಳ ಪಾಂಡಾಗಳ ಅಭಿಪ್ರಾಯ. ದಿನಕ್ಕೆ ಮೂರು ಹೊತ್ತು ಇಲ್ಲಿನ ಪ್ರಸಾದ ತಿಂದುಂಡು ಆರಾಮಾಗಿ ಕಾಲ ಕಳೆಯುವ ಮೈಗಳ್ಳರ ಸಂಖ್ಯೆಯೇನೂ ಕಡಿಮೆಯಿಲ್ಲ..
ಏಕಾಂಮ್ರ ಹಾಟ್ ಭುವನೇಶ್ವರದ ಒಂದು ಉದ್ಯಾನದಲ್ಲಿರುವ ಹ್ಯಾಂಡಿಕ್ರಾಪ್ಟ್ ಸೆಂಟರ್. ಅಲ್ಲಿನ ವೇದಿಕೆ ಮೇಲೆ ಉತ್ಕಲ್ ದಿವಸ ರಾಜ್ಯೋತ್ಸವ ಸಮಾರಂಭ ನಡೆದಿತ್ತು. ಎಪ್ರಿಲ್ ೧ ರಂದು ನೆರೆದ ಜನರನ್ನು ರಾಜಕಾರಣಿಗಳು ಫೂಲ್ ಮಾಡುತ್ತಿದ್ದರು. ಎಲ್ಲಾ ದರ ಕೇಳಿ ಏನೂ ಕೊಳ್ಳದೇ ಮನೆಗೆ ಹಿಂತಿರುಗಿದೆವು.
ಮರುದಿನ ಮುಂಜಾನೆ ಕೋನಾರ್ಕಕ್ಕೆ ಹೊರಟೆವು. ಎತ್ತಿನ ಗಾಡಿಗಿಂತ ಸ್ವಲ್ಪ ಹೆಚ್ಚು ವೇಗವಾಗಿ ಕಾರು ನಡೆಸುತ್ತಿದ್ದ ರಬಿ. ಇಲ್ಲಿನ ಜನರೆಲ್ಲಾ ಬಹಳ ಸೌಮ್ಯವಾಗಿ ಮಾತನಾಡುತ್ತಾರೆ. ಕೋನಾರ್ಕದ ಸೂರ್ಯ ಮಂದಿರ ವರ್ಲ್ಡ ಹೆರಿಟೇಜ್ ಮಾನ್ಯುಮೆಂಟ್ ಎಂದು ಕರೆಯಲ್ಪಟ್ಟಿದೆ. ದೊಡ್ಡ ಉದ್ಯಾನವನದ ನಡುವೆ ಇದೆ. ಸುಂದರವಾದ ಕಟ್ಟಡ. ಮೊದಲಿಗೆ ಕಂಡುಬರುವುದು ಮನುಷ್ಯನನ್ನು ತುಳಿದು ನಿಂತಿರುವ ಆನೆಗಳು, ಅದರ ಮೇಲೆ ಸವಾರಿ ಮಾಡುತ್ತಿರುವ ಸೂರ್ಯನ ರಥ. ದೇವಾಲಯದ ಹೊರಗಿನ ಕಟ್ಟಡ, ಕೆತ್ತನೆಯಷ್ಟೇ ನೋಡಬಹುದು. ಶಿಥಿಲಗೊಳ್ಳುತ್ತಿರುವ ದೇಗುಲದ ರಕ್ಷಣೆಗೆ ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಬಾಲ ಸೂರ್ಯ, ಪ್ರೌಢ ಸೂರ್ಯ ಹೀಗೆ ಸೂರ್ಯನ ಮೂರು ವಿಗ್ರಹಗಳನ್ನು ಕಾಣಬಹುದು. ಗರ್ಭಗೃಹದ ಒಳಗೆ ಯಾವ ವಿಗ್ರಹವೂ ಇಲ್ಲ. ಇಲ್ಲಿನ ಸೂರ್ಯನ ವಿಗ್ರಹವನ್ನು ಬಹಳ ಹಿಂದೆಯೇ ಇಲ್ಲಿ ಸ್ಥಳಾಂತರಿಸಲಾಗಿದೆ. ೨೦ ನೇ ಶತಮಾನದ ಆಂಗ್ಲ ಅಧಿಕಾರಿಯೊಬ್ಬನ ಆಜ್ಞೆಯ ಮೇರೆಗೆ ದೇಗುಲದ ಒಳಗೆ ಯಾರೂ ಹೋಗದಂತೆ ಮರಳಿನ ಚೀಲಗಳನ್ನು ತುಂಬಿಸಿದ್ದಾರೆ. ಇಲ್ಲಿನ ಸೂರ್ಯನ ರಥದ ಚಕ್ರ ಅತೀ ಸುಂದರವಾಗಿದೆ. ದಾರಿಯುದ್ದಕ್ಕೂ ಇದೇ ’ಕೋನಾರ್ಕ ವೀಲ್’ ನ ಚಿಕ್ಕ ಪುಟ್ಟ ಪ್ರತಿಗಳನ್ನು ಮಾರಲು ಇಟ್ಟಿದ್ದಾರೆ. ಕಲ್ಲಿನಲ್ಲಿ ಮರದಲ್ಲಿ ಮಾಡಿದ ಈ ಕಲಾಕೃತಿಗಳು ಸುಂದರವಾಗಿವೆ.
ನಂತರ ಜಗನ್ನಾಥ ಮಂದಿರ ನೋಡಲು ಪುರಿಗೆ ಹೋದೆವು. ಕಾರನ್ನು ದೇವಸ್ಥಾನದಿಂದ ಒಂದು ಕಿಲೋಮೀಟರ್ ದೂರದಲ್ಲೇ ನಿಲ್ಲಿಸಿ ಸೈಕಲ್ ರಿಕ್ಷಾದಲ್ಲಿ ದೇಗುಲಕ್ಕೆ ಹೋಗಬೇಕು. ವಿಲಾಸೀ ಜೀವನದಿಂದ ಭಾರವಾದ ನಮ್ಮ ದೇಹಗಳನ್ನು ಈ ಬಡಕಲು ದೇಹದ ರಿಕ್ಷಾವಾಲಾಗಳ ಮೇಲೆ ಹೊರಿಸುವುದು ಹಿಂಸೆ ಉಂಟುಮಾಡಿತ್ತು. ಅವರ ಜೀವನ ಆಧಾರವನ್ನು ಅವರಿಮದ ಕಿತ್ತುಕೊಳ್ಳಬಾರದೆಂಬ ಶೋಮಾಳ ತರ್ಕವೂ ಸರಿ ಎನಿಸಿ, ಸೈಕಲ್ ರಿಕ್ಷಾ ಹತ್ತಿದೆವು. ದೇವಸ್ಥಾನಕ್ಕೆ ಹೋಗುವ ಬೀದಿಯಲ್ಲಿ ಹಲವಾರು ಸತ್ರ ಗಳಿದ್ದವು. ಇಲ್ಲಿ ಬಂದು ಇದ್ದುಬಿಡುವ ಭಕ್ತರಿಗೇನೂ ಕಡಿಮೆಯಿಲ್ಲ. ಇಲ್ಲಿನ ರಥಯಾತ್ರಾದ ಸಮಯದಲ್ಲಿ ಇರುವೆಗಳಿಗೂ ಜಾಗ ಇರುವುದಿಲ್ಲವಂತೆ.! ದೊಡ್ಡ ಪ್ರಾಂಗಣದ ತುಂಬೆಲ್ಲಾ ಭಕ್ತರು - ನಡೆಯಲು ಒದ್ದಾಡುವ ಮುದುಕ ಮುದುಕಿಯರು. ಭಕ್ತಿಯಿಂದ ಮಂತ್ರ ಪಠಿಸುತ್ತಾ ಓಡಾಡುವ ಹೆಂಗಸರು. ಅಪ್ಪ ಅಮ್ಮಂದಿರ ಒತ್ತಾಯಕ್ಕೆ ಬಂದ ಹರೆಯದವರು, ನಮ್ಮ ಆಚಾರ ವಿಚಾರ ಗಳನ್ನು ಕುತೂಹಲದಿಂದ ನೋಡುವ ವಿದೇಶೀಯರು, ಎಲ್ಲಿ ಎಷ್ಟು ಹೊಲಸಿದೆ ಎಂಬುದನ್ನೇ ಗಮನಿಸುವ ನಮ್ಮಂತಹ ಪಡ್ಡೆ ಬುದ್ಧಿಜೀವಿಗಳು. ಹೀಗೆ ಹತ್ತು ಹಲವರಿದ್ದರು. ಇಲ್ಲಿನ ಪದ್ಧತಿಯಂತೆ ತುಪ್ಪದ ಹಣತೆಯೊಂದನ್ನು ಕೊಂಡು ಅದಕ್ಕಾಗಿಯೇ ಮಾಡಿದ ಜಾಗದಲ್ಲಿ ಹಚ್ಚಿಟ್ಟೆವು. ಗೋವಾದ ಚರ್ಚುಗಳಲ್ಲೂ ಮೊಂಬತ್ತಿ ಹಚ್ಚುವ ಸಂಪ್ರದಾಯವಿದೆ. ನಮ್ಮ ಧರ್ಮಗಳು ಬಿನ್ನತೆಯಲ್ಲಿಯೂ ಏಕತೆಯನ್ನು ಹೊಂದಿರುವುದು ಸೋಜಿಗವಲ್ಲವೇ? ಅಲ್ಲಿನ ಬಿಸಿಲಿನಲ್ಲಿ ಮತ್ತೇನೂ ನೋಡುವ ಮನಸಾಗದೇ ಭುವನೇಶ್ವರಕ್ಕೆ ಮರಳಿದೆವು.
ಅದೇ ಸಂಜೆ ಕಟಕ್ ನೋಡಲು ಹೋದೆವು. ಕಟಕ್ ಓರಿಸ್ಸಾದ ಹಳೆಯ ರಾಜಧಾನಿ. ಇಲ್ಲಿನ ಗಜಿಬಿಜಿ ಗಲ್ಲಿಗಳು ಭುವನೇಶ್ವರದ ಸ್ವಚ್ಛ ಪ್ರಶಸ್ತ ರಾಜಬೀದಿಗಳಿಗಿಂತ ಬಹಳ ಬೇರೆ. ಇಲ್ಲಿ ಹರಿಯುವ ಚಂದ್ರಭಾಗಾ ನದಿ ದೊಡ್ಡದು ಅನಿಸಿತು. ಮರುದಿನ ಮುಂಜಾನೆಯೇ ವ್ಯಾಪಾರಕ್ಕಿಳಿದೆ. ಇಲ್ಲಿಮ ಸುಂದರ ಕಾಟನ್ ಸೀರೆಗಳನ್ನು ಕೊಂಡೆ. ಬೆಳ್ಳಿಯ ಫಿಲಿಗ್ರಿ ಮಾಡಿದ ಆಭರಣಗಳು ಇಲ್ಲಿನ ವೈಶಿಷ್ಟ್ಯ ಸೀರೆಗಳು ತುಟ್ಟಿ ಅನಿಸಿದರ ಒಡವೆಗಳು ಪರವಾಗಿಲ್ಲ ಅನಿಸಿದವು. ನಾಲ್ಕು ದಿನಗಳು ಹೇಗೆ ಕಳೆದೆವೆಂದೇ ತಿಳಿಯಲಿಲ್ಲ. ಮರಳಿ ಗೂಡು ಸೇರಿದಾಗ ಗೋವಾದ ಸ್ವಚ್ಛತೆಯ ಬೆಲೆ ತಿಳಿದಿತ್ತು.
ಅವಿಸ್ಮರಣೀಯ ನಮ್ಮ ಬಾಲ್ಯ
-ಶರ್ವಾಣಿ ಭಟ್
ಬಾಲ್ಯ ಎಂದಾಕ್ಷಣ ಯಾರಿಗಾದರೂ ಒಮ್ಮೆ ಕಿವಿ ಚುರುಕಾಗುತ್ತದೆ; ಮನಸ್ಸು ಮಗುವಾಗುತ್ತದೆ. ಬಾಲ್ಯದ ಸವಿನೆನಪಿನಲ್ಲಿ ನಿಂತುಕೊಳ್ಳುವುದು ಎಂದರೆ ಅದೇನೋ ಸಂಭ್ರಮ-ಸಡಗರ. ಮೊಗೆಮೊಗೆದಷ್ಟೂ ಮುಗಿಲೆತ್ತರಕ್ಕೆ ಚಿಮ್ಮುವುದು ಈ ಬಾಲ್ಯದ ನೆನಪುಗಳ ಬುಗ್ಗೆ. ಈ ಬಾಲ್ಯಜೀವನದ ನೆನಪು ಮುಂದೊಮ್ಮೆ ಮುದನೀಡುವ ಸಿಹಿಬುತ್ತಿಯಾದೀತೆಂಬ ಕಲ್ಪನೆಯೂ ಬಾರದೇ ಕಳೆದುಹೋಗುತ್ತದೆ. ಈ ನೆನಪುಗಳಿಗಿರುವ ಮಾಧುರ್ಯ ಬಾಲ್ಯದ ಆ ಕ್ಷಣಗಳಿಗೆ ಇರುವುದಿಲ್ಲ. ಏನೇನೋ ತಿಳಿದದ್ದು, ತಿಳಿಯದ್ದು, ತಿಳಿಯದಂತೆ ತೋಚಿದ್ದನ್ನೆಲ್ಲ ಮಾಡುವುದೇ ಬಾಲ್ಯ.
ಹಿರಿಯರು ವಿಧಿಸಿದ ಬಂಧನಗಳಿಂದ ಒಂದಿಷ್ಟು ಸ್ವಾತಂತ್ರ್ಯವನ್ನು ಕಸಿದುಕೊಂಡು ಅನುಭವಿಸುವಂಥದ್ದು ಅಂದಿನ ಬಾಲ್ಯ. ಅಲ್ಲಿ ಹೋಗಬೇಡ, ಅದನ್ನು ಕೇಳಬೇಡ, ಹೇಳಿದಂತೆ ಮಾಡು ಇತ್ಯಾದಿ ಕಟ್ಟಳೆಗಳ ನಡುವೆಯೇ ಮನಸ್ಸಿಗೆ ತೋಚಿದ ಕೆಲಸವನ್ನು ಮಾಡುವುದು, ಅದಕ್ಕೆ ಬೈಸಿಕೊಳ್ಳುವುದು, ಕಿಲಾಡಿತನ ಹೆಚ್ಚಾದರೆ ’ಛಡಿ ಛಂ ಛಂ’. ಸಾಕಷ್ಟು ಅತ್ತು ಸುಸ್ತಾದ ಮೇಲೆ ಮಲಗಿದರಾಯಿತು. ಇಷ್ಟಾದರೂ ಮರುದಿನ ಮತ್ತೆ ನಮ್ಮ ವರಸೆ ತೋರುವುದೇ.
ನಮ್ಮ ಬಾಲ್ಯದ ಪ್ರಮುಖ ಆಕರ್ಷಣೆ ’ಕಥಾಕಾಲಕ್ಷೇಪ’. ಕಥೆಗಳ ಭಾಂಡಾರವಾಗಿರುವ ಅಜ್ಜ ಅಜ್ಜಿಯರು ಹೇಳುವ ರಾಮಾಯಣ, ಮಹಾಭಾರತದಂತಹ ಪುರಾಣ ಕಥೆಗಳು, ಕಾಕಣ್ಣ ಗುಬ್ಬಣ್ಣನಂತಹ ಕಾಲ್ಪನಿಕ ಕಥೆಗಳು ನಮ್ಮ ಬುದ್ಧಿಯ ಕಲ್ಪನೆಯ ಪರಿಧಿಯನ್ನು ವಿಸ್ತರಿಸುತ್ತಿದ್ದವು ಎಂಬುದರಲ್ಲಿ ಸಂದೇಹವೇ ಇಲ್ಲ. ಹೇಳಿದ್ದೇ ಕಥೆಯನ್ನು ನಾಲ್ಕಾರು ಬಾರಿ ಹೇಳಿದರೂ ಕೇಳಲು ಬೇಸರವಿಲ್ಲ. ಕೊನೆಯಲ್ಲಿ ನೀನು ಹಾಗೆ ಮಾಡಬಾರದು, ಹೀಗೆ ಮಾಡಬಾರದು ಎಂದು ಅಜ್ಜಿ ಹೇಳದಿದ್ದರೂ ನಮಗದು ಅರ್ಥವಾಗಿ ಹೋಗುತ್ತಿತ್ತು. ನೀತಿಗ್ರಹಣ ಸಹಜವಾಗಿ ಆಗಿ ಹೋಗುತ್ತಿತ್ತು. ಇಂದಿನ ಮಕ್ಕಳನ್ನು ನೋಡಿದಾಗ ಅಯ್ಯೋ ಪಾಪ ಅನ್ನಿಸುತ್ತದೆ. ಅಜ್ಜ ಅಜ್ಜಿಯರೊಂದಿಗೆ ಮಕ್ಕಳು ಬೆರೆಯುವುದೇ ಅಪರೂಪ. ಇಂದಿನ ಪುಟ್ಟ ಸಂಸಾರದ ಪದ್ಧತಿಯಲ್ಲಿ ನಮ್ಮ ಮಕ್ಕಳಿಗೆ ಅಜ್ಜಿಯ ಕಥೆ ಎಲ್ಲಿ ಲಭ್ಯವಾಗಬೇಕು? ಪಟ್ಟಣದಲ್ಲಿ ಬೆಳೆಯುತ್ತ ಕಂಗ್ಲೀಷನ್ನೋ, ಹಿಂಗ್ಲೀಷನ್ನೋ ಕಲಿಯುವ ಮಕ್ಕಳಿಗೆ ಅಜ್ಜಿಯ ಶುದ್ಧ ಗ್ರಾಮ್ಯ ಕನ್ನಡ ಅರ್ಥವಾಗುವುದೇ? ಹಾಗಾಗಿ ಟಿ.ವಿ.ಯಂತಹ ಮಾಧ್ಯಮದೆದುರು ಅವರ ಬಾಲ್ಯ ಕಳೆದು ಹೋಗುತ್ತಿದೆ. ಅದರಿಂದ ಅವರು ಕಲಿತಿದ್ದೆಷ್ಟೋ, ಕಳೆದುಕೊಂಡಿದ್ದೆಷ್ಟೋ ದೇವರೇ ಹೇಳಬೇಕು.
ಅಂದು ಬೇಸಿಗೆ ರಜೆ ಬಂತೆಂದರೆ ಸಾಕು ಹಿಗ್ಗೋ ಹಿಗ್ಗೋ. ಅಕ್ಕ, ಅಣ್ಣ, ತಮ್ಮ, ತಂಗಿ, ಅಕ್ಕಪಕ್ಕದ ಗೆಳೆಯರನ್ನೆಲ್ಲ ಸೇರಿಸಿ ಆಟ ಆಡುವುದೇ ಆಡುವುದು. ಅಮ್ಮ ಊಟಕ್ಕೆ ಕರೆದರೂ ಹೋಗುವ ಮನಸ್ಸಿಲ್ಲ. ಲಗೋರಿ, ಚಿಣ್ಣಿದಾಂಡು, ಕುಂಟುಬಿಲ್ಲೆ ಹೀಗೆ ಆಟದ ವಿಧಗಳಿಗಂತೂ ಕೊನೆಯಿಲ್ಲ. ಕತ್ತಲೆಯಾಯಿತೆಂದರೆ ಮನೆಯನ್ನೇನೋ ಸೇರುತ್ತಿದ್ದೆವು. ಆದರೆ ಮನೆಪಾಠದ ಕಾಟವಿಲ್ಲವಲ್ಲ. ಹಾಗಾಗಿ ಅಲ್ಲಿ ನಮ್ಮ ಒಳಾಂಗಣ ಆಟ ಶುರುವಾಗುತ್ತಿತ್ತು. ಚೆನ್ನೆಮಣೆ, ಗದುಗಿನ ಕಾಯಿ, ಕವಡೆ, ಬಳೆ ಚೂರುಗಳ ಆಟ ಆರಂಭ. ಈ ಆಟಗಳಿಗೆ ದುಡ್ಡು ಕೊಟ್ಟು ಯಾವುದೇ ಸಾಮಗ್ರಿ ತರಬೇಕಾಗಿರಲಿಲ್ಲ. ಹುಣಸೇಬೀಜ, ಕಲ್ಲುಹರಳು, ಒಡೆದ ಬಳೆಯ ಚೂರುಗಳು ಇವೆಲ್ಲ ಆಗಿನ ಆಟಿಗೆ ಸಾಮಗ್ರಿಗಳು. ಆದರೆ ಇವುಗಳಿಂದ ಸಿಗುವ ಆನಂದ ಮಾತ್ರ ಅಪರಿಮಿತ. ಇಂದಿನ ಮಕ್ಕಳ ಹಾಗೆ ವರ್ಷವಾಗುವುದರೊಳಗೇ ಬ್ಯಾಟ್, ಬಾಲ್ ಹಿಡಿದವರು ನಾವಲ್ಲ.
ಅಜ್ಜನಮನೆಯ ವಾಸ ಮಕ್ಕಳಿಗೆ ಅತಿ ಪ್ರಿಯವಾದದ್ದು. ಅಜ್ಜ ಅಜ್ಜಿಯರೂ ಮೊಮ್ಮಕ್ಕಳು ಯಾವಾಗ ಬರುತ್ತಾರೆ ಎಂದು ಕಾಯುತ್ತಿರುತ್ತಿದ್ದರು. ಮೊಮ್ಮಕ್ಕಳಿಗೆ ಕೊಡುವ ಸಲುವಾಗಿಯೇ ಏನೇನೋ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಅವರ ಪ್ರೀತಿ ಮಮತೆಯಲ್ಲಿ, ಅಕ್ಕರೆಯ ತೋಳಿನಲ್ಲಿ ಅಂದಿನ ಮಕ್ಕಳು ನಲಿಯುತ್ತಿದ್ದರು. ಆದರೆ ಇಂದಿನ ಮಕ್ಕಳಿಗೆ ಆ ಅಜ್ಜನ ಮನೆಯ ಆನಂದ ಸಿಗುತ್ತಿಲ್ಲ. ಇಂದು ಹಳ್ಳಿಗಳಲ್ಲಿಯೂ ಮಕ್ಕಳ ದಂಡು ಇಲ್ಲ. ಹಾಗಾಗಿ ಸಾಮೂಹಿಕ ಆಟಗಳು ಮರೆಯಾಗುತ್ತಿವೆ. ಇಂದು ಶಾಲೆಗಳೋ ಅಥವಾ ಸ್ವಯಂ ಸೇವಾ ಸಂಸ್ಥೆಗಳೋ ನಡೆಸುವ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಸೇರಿಸುತ್ತಾರೆ. ಯಾಕೆಂದರೆ ರಜೆ ಬಂತೆಂದರೆ ಮಕ್ಕಳಿಗೆ ’ಟೈಂ ಪಾಸ್’ ಸಮಸ್ಯೆ, ಪಾಲಕರಿಗೆ ಅದೇ ಒಂದು ತಲೆನೋವು. ಹಾಗಾಗಿ ಇಂತಹ ಶಿಬಿರಗಳಿಗೆ ಸಾಗಹಾಕುತ್ತಾರೆ. ಆಧುನಿಕ ಯುಗದಲ್ಲಿ ಇಂತಹ ಶಿಬಿರಗಳು ಉತ್ತಮವೇನೋ ಸರಿ ಆದರೆ ಮಕ್ಕಳಿಗೆ ಅಜ್ಜನ ಮನೆಯಲ್ಲಿ ಸಿಗುವ ಆನಂದ ಮಾತ್ರ ಸಿಗಲು ಸಾಧ್ಯವಿಲ್ಲ. ಅಜ್ಜನ ಮನೆಯಂತೆಯೇ ಅತ್ತೆಯ ಮನೆ, ಚಿಕ್ಕಮ್ಮನ ಮನೆ ಇವೆಲ್ಲ ಆಪ್ಯಾಯಮಾನವಾಗಿತ್ತು. ಹೀಗೆ ಸಂಬಂಧಿಗಳ ಮನೆಯಲ್ಲಿ ಉಳಿದು ಮಕ್ಕಳು ಸ್ವಾವಲಂಬನೆಯನ್ನೂ, ಇತರರೊಂದಿಗೆ ಬೆರೆಯುವ ರೂಢಿಯನ್ನೂ ಬೆಳೆಸಿಕೊಳ್ಳುತ್ತಿದ್ದರು. ಇಂದು ಟಿ.ವಿ.ಚಾನೆಲ್‌ಗಳು ಆರಂಭಿಸುವ ವಿಶೇಷ ಕಾರ್ಟೂನ್ ಕಾರ್ಯಕ್ರಮಗಳನ್ನು ನೋಡುತ್ತಲೇ ಬೇಸಿಗೆ ರಜೆ ಕಳೆದುಹೋಗುತ್ತದೆ.
ಮಳೆಗಾಲ ಚಳಿಗಾಲಗಳನ್ನೂ ಕೂಡ ನಾವು ಅನುಭವಿಸಿದಂತೆ ಈಗಿನ ಮಕ್ಕಳು ಅನುಭವಿಸುತ್ತಿಲ್ಲ ಅನಿಸುತ್ತದೆ. ತುಂತುರು ಮಳೆಯಲ್ಲಿಯೇ ಕುಂಟುಬಿಲ್ಲೆ ಕಬಡ್ಡಿಗಳನ್ನು ಆಡುವ ಸೊಗಸು, ಜಡಿಮಳೆಯಲ್ಲಿ ಬೆಚ್ಚನೆಯ ಮನೆಯೊಳಗೆ ಚೆನ್ನೆಮಣೆ ಆಡುವ ಸೊಬಗು ಈಗೆಲ್ಲಿದೆ? ಆಗೆಲ್ಲ ಮಳೆಯಲ್ಲಿ ಶಾಲೆಗೆ ಹೋಗಬೇಕೆಂದರೆ ಪ್ಲಾಸ್ಟಿಕ್‌ನ ’ಕೊಪ್ಪೆ’ಯಲ್ಲಿ ಮೈಯನ್ನು ಅಡಗಿಸಿಕೊಂಡು ಹೋಗಬೇಕು. ಮಲೆನಾಡಿನ ಗಾಳಿ ಮಳೆಗೆ ’ಕೊಡೆ’ ಹಾರಿಹೋಗುತ್ತದೆ ಎಂಬುದು ಪಾಲಕರ ಸಮಜಾಯಿಷಿ. ರೈನ್‌ಕೋಟ್ ಎಂಬ ಮಳೆ ಅಂಗಿ ಆಗಿನ್ನೂ ದುರ್ಲಭವಾಗಿತ್ತು. ಅಡಿಕೆ ಮರದ ’ಹಾಳೆ’ಯಿಂದ ತಯಾರಿಸಿದ ’ಗುರಾಕಿ’ ಸಿಕ್ಕಿದರೆ ಏನೋ ಖುಷಿ. ಶಾಲೆಯಿಂದ ಬರುವಾಗ ರಸ್ತೆಯ ಹೊಂಡದಲ್ಲಿ ಇಳಿದು ನೀರನ್ನು ಹಾರಿಸುತ್ತ ಆಟ ಆಡುತ್ತಲೇ ಬರುವ ಆನಂದ ಏ.ಸಿ. ಕಾರಿನಲ್ಲಿ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಬರುವ ಮಕ್ಕಳಿಗೆ ಸಿಗಲು ಸಾಧ್ಯವೆ? ಬೇಸಿಗೆಯಲ್ಲಿ ಮಾಡಿದ ಹಲಸಿನ ಹಪ್ಪಳ, ಸಂಡಿಗೆಗಳನ್ನು ಮೆಲ್ಲುವ ಆ ಖುಷಿ ಈಗ ಸಿಗುವುದೇ?
ಚಳಿಗಾಲದಲ್ಲಿ ಬಚ್ಚಲ ಒಲೆಯ ಮುಂದೆಯೇ ನಮ್ಮ ಓದು ಬರಹ ಎಲ್ಲ. ಇಲ್ಲವೆ ಮನೆಯ ಮುಂದೆ ಎಲೆಗಳನ್ನು ಒಟ್ಟುಗೂಡಿಸಿ ’ಹೊಡಚಲು’ ಹಾಕಿ ಬೆಂಕಿ ಕಾಯಿಸುವುದು. ಚಳಿಯಿಂದ ತಪ್ಪಿಸಿಕೊಳ್ಳಲು ಸ್ವೆಟರ್ ಇಲ್ಲದೇ ಸಿಕ್ಕಿದ ಕಂಬಳಿಯ ಚೂರನ್ನೇ ಹೊದ್ದುಕೊಂಡು ಬೆಚ್ಚಗೆ ಮಲಗುವ ಆನಂದ ಏ.ಸಿ. ರೂಮಿನಲ್ಲಿ ಮಲಗಿದರೂ ಬರಲಾರದೇನೋ!
ನಮಗೆಲ್ಲ ಮನೆಯೇ ಮೊದಲ ಪಾಠಶಾಲೆ. ಎಲ್ಲ ಊರುಗಳಲ್ಲಿ ಬಾಲವಾಡಿಯೂ ಇರಲಿಲ್ಲ. ಹಾಗಾಗಿ ಆರು ವರ್ಷಗಳವರೆಗೆ ಮನೆಯಲ್ಲೇ ಶಾಲೆ. ಸಂಜೆ ದೇವರಿಗೆ ದೀಪಹಚ್ಚಿ ಭಜನೆ ಮಾಡಿ ಶುರುಮಾಡುವ ’ಬಾಯಿಪಾಠ’ದಲ್ಲಿ ಬಳ್ಳಿ (ವರ್ಣಮಾಲೆ), ಮಗ್ಗಿ, ವಾರದ ದಿನಗಳು, ಮಾಸಗಳು, ತಿಥಿಗಳು, ನಕ್ಷತ್ರಗಳು, ಸಂವತ್ಸರಗಳು ಎಲ್ಲವೂ ಬಾಯಿಪಾಠವಾಗಿ ಬಿಡುತ್ತಿತ್ತು. ಶಾಲೆ ಆರಂಭವಾದಕೂಡಲೇ ಒಂದು ’ಪಾಟಿ’ (ಸ್ಲೇಟ್) ಹಾಗೂ ’ಕಡ್ಡಿ’ಯನ್ನು ಹಿಡಿದುಕೊಂಡು ಶಾಲೆಗೆ ಹೋಗುವುದು. ಮೇಲಿನ ಕ್ಲಾಸಿಗೆ ಹೋದಕೂಡಲೇ ಆ ಪಾಟಿಗೊಂದು ಚೀಲ, ಪಾಟಿ ಚೀಲ ಅಂತಲೇ ಅದಕ್ಕೆ ಹೆಸರು. ಪೆನ್ನು - ಪಟ್ಟಿಯ ಪರಿಚಯವಾಗಿದ್ದು ಐದನೆಯ ಕ್ಲಾಸಿನಲ್ಲಿ. ಅಲ್ಲಿಯವರೆಗೆ ಹೋಮ್ ವರ್ಕ್, ಕ್ಲಾಸ್ ವರ್ಕ್ ಎಲ್ಲವೂ ಪಾಟಿಯಮೇಲೇ. ಬರೆದದ್ದನ್ನು ತಲೆಯಲ್ಲಿ ತುಂಬಿಸಿಕೊಂಡು ಅಳಿಸಿಬಿಡುವುದು. ದೊಡ್ಡವರು ಬೀಸಾಕಿದ ಬಳಸಿದ ಪೆನ್ ಏನಾದರೂ ಸಿಕ್ಕಿದರೆ ಅದಕ್ಕೆ ಬಳಪವನ್ನು ಸಿಕ್ಕಿಸಿಕೊಂಡು ಪೆನ್ನಿನ ಸ್ಟೈಲಿನಲ್ಲಿ ಬರೆಯುವುದೊಂದು ದೊಡ್ಡ ಹೆಮ್ಮೆ. ಇಂದೆಲ್ಲ ಮಕ್ಕಳಿಗೆ ನರ್ಸರಿಯಿಂದಲೇ ಪೆನ್ನು, ನೋಟ್‌ಬುಕ್, ಪೆನ್ಸಿಲ್ ಎಲ್ಲ ದೊರೆಯುತ್ತದೆ. ಅವರ ಆನಂದ ಇರುವುದು ’ಯೂಸ್ ಎಂಡ್ ಥ್ರೋ’ ದಲ್ಲಿ!
ನಮ್ಮ ಬಾಲ್ಯದ ಬಹು ಭಾಗ ಮುಗ್ಧತೆಯಲ್ಲೇ ಕಳೆದುಹೋಗಿತ್ತು. ಕೋಣ ಕರು ಹಾಕಿದೆಯಂತೆ ಎಂದರೂ ’ಹೌದಾ ಎಲ್ಲಿ’ ಎಂಬಷ್ಟು ಮುಗ್ಧತೆ. ಇಂದಿನ ಪೀಳಿಗೆಯ ಮಕ್ಕಳು ಬುದ್ಧಿವಂತರಾಗಿಯೇ ಹುಟ್ಟಿದವರು. ಅವರಿಗೆ ಆಧಾರ ಕೊಟ್ಟಷ್ಟೂ ಕಡಿಮೆಯೇ. ಚಿಕ್ಕವರಿರುವಾಗಲೇ ಸ್ವಾತಂತ್ರ್ಯಹೋರಾಟ ಆರಂಭಿಸಿಬಿಡುತ್ತಾರೆ. ನಾವು ನಮ್ಮ ಅವಶ್ಯಕತೆಯನ್ನು ನಮ್ಮ ಪಾಲಕರಿಗೆ ತಿಳಿಸಲು ಅದೆಷ್ಟು ರಿಹರ್ಸಲ್ ಮಾಡಿಕೊಳ್ಳುತ್ತಿದ್ದೆವು. ಆದರೆ ಈಗಿನ ಮಕ್ಕಳು ತಮ್ಮ ಹಕ್ಕೆಂಬಂತೆ ಎಲ್ಲವನ್ನೂ ’ಡಿಮ್ಯಾಂಡ್’ ಮಾಡುತ್ತಾರೆ.
ನಿಜ, ಬಾಲ್ಯದಲ್ಲಿ ನಮಗೆ ಸ್ವಾತಂತ್ರ್ಯವಿರಲಿಲ್ಲ. ನಾವು ಮಾಡಬೇಕೆಂದಿದ್ದನ್ನೆಲ್ಲ ಮಾಡಲು ಸಾಧ್ಯವಿರಲಿಲ್ಲ ಅಂದು ನಾವು ಯಾವಾಗ ಬೆಳೆದು ದೊಡ್ಡವರಾಗುತ್ತೇವೋ ರೆಕ್ಕೆ ಬಿಚ್ಚಿ ಹಾರುತ್ತೇವೋ ಎಂಬ ಕಾತರ ಇತ್ತು. ಇಂದು ಬೆಳೆದು ದೊಡ್ಡವರಾಗಿದ್ದೇವೆ. ಕೈಯಲ್ಲಿ ಹಣವಿದೆ, ಸ್ವಾತಂತ್ರ್ಯವಿದೆ. ಆದರೂ ನಾವಂದುಕೊಂಡದ್ದನ್ನೆಲ್ಲ ಮಾಡಲು ಸಾಧ್ಯವಿಲ್ಲ! ಹೀಗಿರುವಾಗ ಆ ಬಾಲ್ಯಕಾಲವೇ ಚೆನ್ನ ಅನ್ನಿಸದಿರುವುದೇ?
ಈ ಬಾಲ್ಯಕಾಲದ ವರ್ಣನೆ ಎಷ್ಟು ಮಾಡಿದರೂ ಮುಗಿಯುವಂಥದ್ದಲ್ಲ. ವ್ಯಕ್ತಿ ತನ್ನ ನೋವಿನ ಕ್ಷಣಗಳಲ್ಲಿ ತನ್ನ ಬಾಯಕ್ಕೆ ಮರಳುತ್ತಾನೆ. ವೃದ್ಧಾವಸ್ಥೆಯಲ್ಲಿಯೂ ಬಾಲ್ಯದ ಗೆಳೆಯನೇನಾದರೂ ಸಿಕ್ಕಿದರೆ ಬಾಲ್ಯದ ದಿನಗಳು ಮತ್ತೆ ಮರಳುತ್ತವೆ. ನಮಗೇನೋ ಬಾಲ್ಯದ ಬಗ್ಗೆ ನೆನಪು ಮಾಡಿಕೊಳ್ಳಲು ಎಷ್ಟೊಂದು ವಿಷಯಗಳಿವೆ. ಮುಂದಿನ ಪೀಳಿಗೆಯವರಿಗೆ ಕಾದು ನೋಡೋಣ.