Tuesday, November 30, 2010

ಅವಿಸ್ಮರಣೀಯ ನಮ್ಮ ಬಾಲ್ಯ
-ಶರ್ವಾಣಿ ಭಟ್
ಬಾಲ್ಯ ಎಂದಾಕ್ಷಣ ಯಾರಿಗಾದರೂ ಒಮ್ಮೆ ಕಿವಿ ಚುರುಕಾಗುತ್ತದೆ; ಮನಸ್ಸು ಮಗುವಾಗುತ್ತದೆ. ಬಾಲ್ಯದ ಸವಿನೆನಪಿನಲ್ಲಿ ನಿಂತುಕೊಳ್ಳುವುದು ಎಂದರೆ ಅದೇನೋ ಸಂಭ್ರಮ-ಸಡಗರ. ಮೊಗೆಮೊಗೆದಷ್ಟೂ ಮುಗಿಲೆತ್ತರಕ್ಕೆ ಚಿಮ್ಮುವುದು ಈ ಬಾಲ್ಯದ ನೆನಪುಗಳ ಬುಗ್ಗೆ. ಈ ಬಾಲ್ಯಜೀವನದ ನೆನಪು ಮುಂದೊಮ್ಮೆ ಮುದನೀಡುವ ಸಿಹಿಬುತ್ತಿಯಾದೀತೆಂಬ ಕಲ್ಪನೆಯೂ ಬಾರದೇ ಕಳೆದುಹೋಗುತ್ತದೆ. ಈ ನೆನಪುಗಳಿಗಿರುವ ಮಾಧುರ್ಯ ಬಾಲ್ಯದ ಆ ಕ್ಷಣಗಳಿಗೆ ಇರುವುದಿಲ್ಲ. ಏನೇನೋ ತಿಳಿದದ್ದು, ತಿಳಿಯದ್ದು, ತಿಳಿಯದಂತೆ ತೋಚಿದ್ದನ್ನೆಲ್ಲ ಮಾಡುವುದೇ ಬಾಲ್ಯ.
ಹಿರಿಯರು ವಿಧಿಸಿದ ಬಂಧನಗಳಿಂದ ಒಂದಿಷ್ಟು ಸ್ವಾತಂತ್ರ್ಯವನ್ನು ಕಸಿದುಕೊಂಡು ಅನುಭವಿಸುವಂಥದ್ದು ಅಂದಿನ ಬಾಲ್ಯ. ಅಲ್ಲಿ ಹೋಗಬೇಡ, ಅದನ್ನು ಕೇಳಬೇಡ, ಹೇಳಿದಂತೆ ಮಾಡು ಇತ್ಯಾದಿ ಕಟ್ಟಳೆಗಳ ನಡುವೆಯೇ ಮನಸ್ಸಿಗೆ ತೋಚಿದ ಕೆಲಸವನ್ನು ಮಾಡುವುದು, ಅದಕ್ಕೆ ಬೈಸಿಕೊಳ್ಳುವುದು, ಕಿಲಾಡಿತನ ಹೆಚ್ಚಾದರೆ ’ಛಡಿ ಛಂ ಛಂ’. ಸಾಕಷ್ಟು ಅತ್ತು ಸುಸ್ತಾದ ಮೇಲೆ ಮಲಗಿದರಾಯಿತು. ಇಷ್ಟಾದರೂ ಮರುದಿನ ಮತ್ತೆ ನಮ್ಮ ವರಸೆ ತೋರುವುದೇ.
ನಮ್ಮ ಬಾಲ್ಯದ ಪ್ರಮುಖ ಆಕರ್ಷಣೆ ’ಕಥಾಕಾಲಕ್ಷೇಪ’. ಕಥೆಗಳ ಭಾಂಡಾರವಾಗಿರುವ ಅಜ್ಜ ಅಜ್ಜಿಯರು ಹೇಳುವ ರಾಮಾಯಣ, ಮಹಾಭಾರತದಂತಹ ಪುರಾಣ ಕಥೆಗಳು, ಕಾಕಣ್ಣ ಗುಬ್ಬಣ್ಣನಂತಹ ಕಾಲ್ಪನಿಕ ಕಥೆಗಳು ನಮ್ಮ ಬುದ್ಧಿಯ ಕಲ್ಪನೆಯ ಪರಿಧಿಯನ್ನು ವಿಸ್ತರಿಸುತ್ತಿದ್ದವು ಎಂಬುದರಲ್ಲಿ ಸಂದೇಹವೇ ಇಲ್ಲ. ಹೇಳಿದ್ದೇ ಕಥೆಯನ್ನು ನಾಲ್ಕಾರು ಬಾರಿ ಹೇಳಿದರೂ ಕೇಳಲು ಬೇಸರವಿಲ್ಲ. ಕೊನೆಯಲ್ಲಿ ನೀನು ಹಾಗೆ ಮಾಡಬಾರದು, ಹೀಗೆ ಮಾಡಬಾರದು ಎಂದು ಅಜ್ಜಿ ಹೇಳದಿದ್ದರೂ ನಮಗದು ಅರ್ಥವಾಗಿ ಹೋಗುತ್ತಿತ್ತು. ನೀತಿಗ್ರಹಣ ಸಹಜವಾಗಿ ಆಗಿ ಹೋಗುತ್ತಿತ್ತು. ಇಂದಿನ ಮಕ್ಕಳನ್ನು ನೋಡಿದಾಗ ಅಯ್ಯೋ ಪಾಪ ಅನ್ನಿಸುತ್ತದೆ. ಅಜ್ಜ ಅಜ್ಜಿಯರೊಂದಿಗೆ ಮಕ್ಕಳು ಬೆರೆಯುವುದೇ ಅಪರೂಪ. ಇಂದಿನ ಪುಟ್ಟ ಸಂಸಾರದ ಪದ್ಧತಿಯಲ್ಲಿ ನಮ್ಮ ಮಕ್ಕಳಿಗೆ ಅಜ್ಜಿಯ ಕಥೆ ಎಲ್ಲಿ ಲಭ್ಯವಾಗಬೇಕು? ಪಟ್ಟಣದಲ್ಲಿ ಬೆಳೆಯುತ್ತ ಕಂಗ್ಲೀಷನ್ನೋ, ಹಿಂಗ್ಲೀಷನ್ನೋ ಕಲಿಯುವ ಮಕ್ಕಳಿಗೆ ಅಜ್ಜಿಯ ಶುದ್ಧ ಗ್ರಾಮ್ಯ ಕನ್ನಡ ಅರ್ಥವಾಗುವುದೇ? ಹಾಗಾಗಿ ಟಿ.ವಿ.ಯಂತಹ ಮಾಧ್ಯಮದೆದುರು ಅವರ ಬಾಲ್ಯ ಕಳೆದು ಹೋಗುತ್ತಿದೆ. ಅದರಿಂದ ಅವರು ಕಲಿತಿದ್ದೆಷ್ಟೋ, ಕಳೆದುಕೊಂಡಿದ್ದೆಷ್ಟೋ ದೇವರೇ ಹೇಳಬೇಕು.
ಅಂದು ಬೇಸಿಗೆ ರಜೆ ಬಂತೆಂದರೆ ಸಾಕು ಹಿಗ್ಗೋ ಹಿಗ್ಗೋ. ಅಕ್ಕ, ಅಣ್ಣ, ತಮ್ಮ, ತಂಗಿ, ಅಕ್ಕಪಕ್ಕದ ಗೆಳೆಯರನ್ನೆಲ್ಲ ಸೇರಿಸಿ ಆಟ ಆಡುವುದೇ ಆಡುವುದು. ಅಮ್ಮ ಊಟಕ್ಕೆ ಕರೆದರೂ ಹೋಗುವ ಮನಸ್ಸಿಲ್ಲ. ಲಗೋರಿ, ಚಿಣ್ಣಿದಾಂಡು, ಕುಂಟುಬಿಲ್ಲೆ ಹೀಗೆ ಆಟದ ವಿಧಗಳಿಗಂತೂ ಕೊನೆಯಿಲ್ಲ. ಕತ್ತಲೆಯಾಯಿತೆಂದರೆ ಮನೆಯನ್ನೇನೋ ಸೇರುತ್ತಿದ್ದೆವು. ಆದರೆ ಮನೆಪಾಠದ ಕಾಟವಿಲ್ಲವಲ್ಲ. ಹಾಗಾಗಿ ಅಲ್ಲಿ ನಮ್ಮ ಒಳಾಂಗಣ ಆಟ ಶುರುವಾಗುತ್ತಿತ್ತು. ಚೆನ್ನೆಮಣೆ, ಗದುಗಿನ ಕಾಯಿ, ಕವಡೆ, ಬಳೆ ಚೂರುಗಳ ಆಟ ಆರಂಭ. ಈ ಆಟಗಳಿಗೆ ದುಡ್ಡು ಕೊಟ್ಟು ಯಾವುದೇ ಸಾಮಗ್ರಿ ತರಬೇಕಾಗಿರಲಿಲ್ಲ. ಹುಣಸೇಬೀಜ, ಕಲ್ಲುಹರಳು, ಒಡೆದ ಬಳೆಯ ಚೂರುಗಳು ಇವೆಲ್ಲ ಆಗಿನ ಆಟಿಗೆ ಸಾಮಗ್ರಿಗಳು. ಆದರೆ ಇವುಗಳಿಂದ ಸಿಗುವ ಆನಂದ ಮಾತ್ರ ಅಪರಿಮಿತ. ಇಂದಿನ ಮಕ್ಕಳ ಹಾಗೆ ವರ್ಷವಾಗುವುದರೊಳಗೇ ಬ್ಯಾಟ್, ಬಾಲ್ ಹಿಡಿದವರು ನಾವಲ್ಲ.
ಅಜ್ಜನಮನೆಯ ವಾಸ ಮಕ್ಕಳಿಗೆ ಅತಿ ಪ್ರಿಯವಾದದ್ದು. ಅಜ್ಜ ಅಜ್ಜಿಯರೂ ಮೊಮ್ಮಕ್ಕಳು ಯಾವಾಗ ಬರುತ್ತಾರೆ ಎಂದು ಕಾಯುತ್ತಿರುತ್ತಿದ್ದರು. ಮೊಮ್ಮಕ್ಕಳಿಗೆ ಕೊಡುವ ಸಲುವಾಗಿಯೇ ಏನೇನೋ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಅವರ ಪ್ರೀತಿ ಮಮತೆಯಲ್ಲಿ, ಅಕ್ಕರೆಯ ತೋಳಿನಲ್ಲಿ ಅಂದಿನ ಮಕ್ಕಳು ನಲಿಯುತ್ತಿದ್ದರು. ಆದರೆ ಇಂದಿನ ಮಕ್ಕಳಿಗೆ ಆ ಅಜ್ಜನ ಮನೆಯ ಆನಂದ ಸಿಗುತ್ತಿಲ್ಲ. ಇಂದು ಹಳ್ಳಿಗಳಲ್ಲಿಯೂ ಮಕ್ಕಳ ದಂಡು ಇಲ್ಲ. ಹಾಗಾಗಿ ಸಾಮೂಹಿಕ ಆಟಗಳು ಮರೆಯಾಗುತ್ತಿವೆ. ಇಂದು ಶಾಲೆಗಳೋ ಅಥವಾ ಸ್ವಯಂ ಸೇವಾ ಸಂಸ್ಥೆಗಳೋ ನಡೆಸುವ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಸೇರಿಸುತ್ತಾರೆ. ಯಾಕೆಂದರೆ ರಜೆ ಬಂತೆಂದರೆ ಮಕ್ಕಳಿಗೆ ’ಟೈಂ ಪಾಸ್’ ಸಮಸ್ಯೆ, ಪಾಲಕರಿಗೆ ಅದೇ ಒಂದು ತಲೆನೋವು. ಹಾಗಾಗಿ ಇಂತಹ ಶಿಬಿರಗಳಿಗೆ ಸಾಗಹಾಕುತ್ತಾರೆ. ಆಧುನಿಕ ಯುಗದಲ್ಲಿ ಇಂತಹ ಶಿಬಿರಗಳು ಉತ್ತಮವೇನೋ ಸರಿ ಆದರೆ ಮಕ್ಕಳಿಗೆ ಅಜ್ಜನ ಮನೆಯಲ್ಲಿ ಸಿಗುವ ಆನಂದ ಮಾತ್ರ ಸಿಗಲು ಸಾಧ್ಯವಿಲ್ಲ. ಅಜ್ಜನ ಮನೆಯಂತೆಯೇ ಅತ್ತೆಯ ಮನೆ, ಚಿಕ್ಕಮ್ಮನ ಮನೆ ಇವೆಲ್ಲ ಆಪ್ಯಾಯಮಾನವಾಗಿತ್ತು. ಹೀಗೆ ಸಂಬಂಧಿಗಳ ಮನೆಯಲ್ಲಿ ಉಳಿದು ಮಕ್ಕಳು ಸ್ವಾವಲಂಬನೆಯನ್ನೂ, ಇತರರೊಂದಿಗೆ ಬೆರೆಯುವ ರೂಢಿಯನ್ನೂ ಬೆಳೆಸಿಕೊಳ್ಳುತ್ತಿದ್ದರು. ಇಂದು ಟಿ.ವಿ.ಚಾನೆಲ್‌ಗಳು ಆರಂಭಿಸುವ ವಿಶೇಷ ಕಾರ್ಟೂನ್ ಕಾರ್ಯಕ್ರಮಗಳನ್ನು ನೋಡುತ್ತಲೇ ಬೇಸಿಗೆ ರಜೆ ಕಳೆದುಹೋಗುತ್ತದೆ.
ಮಳೆಗಾಲ ಚಳಿಗಾಲಗಳನ್ನೂ ಕೂಡ ನಾವು ಅನುಭವಿಸಿದಂತೆ ಈಗಿನ ಮಕ್ಕಳು ಅನುಭವಿಸುತ್ತಿಲ್ಲ ಅನಿಸುತ್ತದೆ. ತುಂತುರು ಮಳೆಯಲ್ಲಿಯೇ ಕುಂಟುಬಿಲ್ಲೆ ಕಬಡ್ಡಿಗಳನ್ನು ಆಡುವ ಸೊಗಸು, ಜಡಿಮಳೆಯಲ್ಲಿ ಬೆಚ್ಚನೆಯ ಮನೆಯೊಳಗೆ ಚೆನ್ನೆಮಣೆ ಆಡುವ ಸೊಬಗು ಈಗೆಲ್ಲಿದೆ? ಆಗೆಲ್ಲ ಮಳೆಯಲ್ಲಿ ಶಾಲೆಗೆ ಹೋಗಬೇಕೆಂದರೆ ಪ್ಲಾಸ್ಟಿಕ್‌ನ ’ಕೊಪ್ಪೆ’ಯಲ್ಲಿ ಮೈಯನ್ನು ಅಡಗಿಸಿಕೊಂಡು ಹೋಗಬೇಕು. ಮಲೆನಾಡಿನ ಗಾಳಿ ಮಳೆಗೆ ’ಕೊಡೆ’ ಹಾರಿಹೋಗುತ್ತದೆ ಎಂಬುದು ಪಾಲಕರ ಸಮಜಾಯಿಷಿ. ರೈನ್‌ಕೋಟ್ ಎಂಬ ಮಳೆ ಅಂಗಿ ಆಗಿನ್ನೂ ದುರ್ಲಭವಾಗಿತ್ತು. ಅಡಿಕೆ ಮರದ ’ಹಾಳೆ’ಯಿಂದ ತಯಾರಿಸಿದ ’ಗುರಾಕಿ’ ಸಿಕ್ಕಿದರೆ ಏನೋ ಖುಷಿ. ಶಾಲೆಯಿಂದ ಬರುವಾಗ ರಸ್ತೆಯ ಹೊಂಡದಲ್ಲಿ ಇಳಿದು ನೀರನ್ನು ಹಾರಿಸುತ್ತ ಆಟ ಆಡುತ್ತಲೇ ಬರುವ ಆನಂದ ಏ.ಸಿ. ಕಾರಿನಲ್ಲಿ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಬರುವ ಮಕ್ಕಳಿಗೆ ಸಿಗಲು ಸಾಧ್ಯವೆ? ಬೇಸಿಗೆಯಲ್ಲಿ ಮಾಡಿದ ಹಲಸಿನ ಹಪ್ಪಳ, ಸಂಡಿಗೆಗಳನ್ನು ಮೆಲ್ಲುವ ಆ ಖುಷಿ ಈಗ ಸಿಗುವುದೇ?
ಚಳಿಗಾಲದಲ್ಲಿ ಬಚ್ಚಲ ಒಲೆಯ ಮುಂದೆಯೇ ನಮ್ಮ ಓದು ಬರಹ ಎಲ್ಲ. ಇಲ್ಲವೆ ಮನೆಯ ಮುಂದೆ ಎಲೆಗಳನ್ನು ಒಟ್ಟುಗೂಡಿಸಿ ’ಹೊಡಚಲು’ ಹಾಕಿ ಬೆಂಕಿ ಕಾಯಿಸುವುದು. ಚಳಿಯಿಂದ ತಪ್ಪಿಸಿಕೊಳ್ಳಲು ಸ್ವೆಟರ್ ಇಲ್ಲದೇ ಸಿಕ್ಕಿದ ಕಂಬಳಿಯ ಚೂರನ್ನೇ ಹೊದ್ದುಕೊಂಡು ಬೆಚ್ಚಗೆ ಮಲಗುವ ಆನಂದ ಏ.ಸಿ. ರೂಮಿನಲ್ಲಿ ಮಲಗಿದರೂ ಬರಲಾರದೇನೋ!
ನಮಗೆಲ್ಲ ಮನೆಯೇ ಮೊದಲ ಪಾಠಶಾಲೆ. ಎಲ್ಲ ಊರುಗಳಲ್ಲಿ ಬಾಲವಾಡಿಯೂ ಇರಲಿಲ್ಲ. ಹಾಗಾಗಿ ಆರು ವರ್ಷಗಳವರೆಗೆ ಮನೆಯಲ್ಲೇ ಶಾಲೆ. ಸಂಜೆ ದೇವರಿಗೆ ದೀಪಹಚ್ಚಿ ಭಜನೆ ಮಾಡಿ ಶುರುಮಾಡುವ ’ಬಾಯಿಪಾಠ’ದಲ್ಲಿ ಬಳ್ಳಿ (ವರ್ಣಮಾಲೆ), ಮಗ್ಗಿ, ವಾರದ ದಿನಗಳು, ಮಾಸಗಳು, ತಿಥಿಗಳು, ನಕ್ಷತ್ರಗಳು, ಸಂವತ್ಸರಗಳು ಎಲ್ಲವೂ ಬಾಯಿಪಾಠವಾಗಿ ಬಿಡುತ್ತಿತ್ತು. ಶಾಲೆ ಆರಂಭವಾದಕೂಡಲೇ ಒಂದು ’ಪಾಟಿ’ (ಸ್ಲೇಟ್) ಹಾಗೂ ’ಕಡ್ಡಿ’ಯನ್ನು ಹಿಡಿದುಕೊಂಡು ಶಾಲೆಗೆ ಹೋಗುವುದು. ಮೇಲಿನ ಕ್ಲಾಸಿಗೆ ಹೋದಕೂಡಲೇ ಆ ಪಾಟಿಗೊಂದು ಚೀಲ, ಪಾಟಿ ಚೀಲ ಅಂತಲೇ ಅದಕ್ಕೆ ಹೆಸರು. ಪೆನ್ನು - ಪಟ್ಟಿಯ ಪರಿಚಯವಾಗಿದ್ದು ಐದನೆಯ ಕ್ಲಾಸಿನಲ್ಲಿ. ಅಲ್ಲಿಯವರೆಗೆ ಹೋಮ್ ವರ್ಕ್, ಕ್ಲಾಸ್ ವರ್ಕ್ ಎಲ್ಲವೂ ಪಾಟಿಯಮೇಲೇ. ಬರೆದದ್ದನ್ನು ತಲೆಯಲ್ಲಿ ತುಂಬಿಸಿಕೊಂಡು ಅಳಿಸಿಬಿಡುವುದು. ದೊಡ್ಡವರು ಬೀಸಾಕಿದ ಬಳಸಿದ ಪೆನ್ ಏನಾದರೂ ಸಿಕ್ಕಿದರೆ ಅದಕ್ಕೆ ಬಳಪವನ್ನು ಸಿಕ್ಕಿಸಿಕೊಂಡು ಪೆನ್ನಿನ ಸ್ಟೈಲಿನಲ್ಲಿ ಬರೆಯುವುದೊಂದು ದೊಡ್ಡ ಹೆಮ್ಮೆ. ಇಂದೆಲ್ಲ ಮಕ್ಕಳಿಗೆ ನರ್ಸರಿಯಿಂದಲೇ ಪೆನ್ನು, ನೋಟ್‌ಬುಕ್, ಪೆನ್ಸಿಲ್ ಎಲ್ಲ ದೊರೆಯುತ್ತದೆ. ಅವರ ಆನಂದ ಇರುವುದು ’ಯೂಸ್ ಎಂಡ್ ಥ್ರೋ’ ದಲ್ಲಿ!
ನಮ್ಮ ಬಾಲ್ಯದ ಬಹು ಭಾಗ ಮುಗ್ಧತೆಯಲ್ಲೇ ಕಳೆದುಹೋಗಿತ್ತು. ಕೋಣ ಕರು ಹಾಕಿದೆಯಂತೆ ಎಂದರೂ ’ಹೌದಾ ಎಲ್ಲಿ’ ಎಂಬಷ್ಟು ಮುಗ್ಧತೆ. ಇಂದಿನ ಪೀಳಿಗೆಯ ಮಕ್ಕಳು ಬುದ್ಧಿವಂತರಾಗಿಯೇ ಹುಟ್ಟಿದವರು. ಅವರಿಗೆ ಆಧಾರ ಕೊಟ್ಟಷ್ಟೂ ಕಡಿಮೆಯೇ. ಚಿಕ್ಕವರಿರುವಾಗಲೇ ಸ್ವಾತಂತ್ರ್ಯಹೋರಾಟ ಆರಂಭಿಸಿಬಿಡುತ್ತಾರೆ. ನಾವು ನಮ್ಮ ಅವಶ್ಯಕತೆಯನ್ನು ನಮ್ಮ ಪಾಲಕರಿಗೆ ತಿಳಿಸಲು ಅದೆಷ್ಟು ರಿಹರ್ಸಲ್ ಮಾಡಿಕೊಳ್ಳುತ್ತಿದ್ದೆವು. ಆದರೆ ಈಗಿನ ಮಕ್ಕಳು ತಮ್ಮ ಹಕ್ಕೆಂಬಂತೆ ಎಲ್ಲವನ್ನೂ ’ಡಿಮ್ಯಾಂಡ್’ ಮಾಡುತ್ತಾರೆ.
ನಿಜ, ಬಾಲ್ಯದಲ್ಲಿ ನಮಗೆ ಸ್ವಾತಂತ್ರ್ಯವಿರಲಿಲ್ಲ. ನಾವು ಮಾಡಬೇಕೆಂದಿದ್ದನ್ನೆಲ್ಲ ಮಾಡಲು ಸಾಧ್ಯವಿರಲಿಲ್ಲ ಅಂದು ನಾವು ಯಾವಾಗ ಬೆಳೆದು ದೊಡ್ಡವರಾಗುತ್ತೇವೋ ರೆಕ್ಕೆ ಬಿಚ್ಚಿ ಹಾರುತ್ತೇವೋ ಎಂಬ ಕಾತರ ಇತ್ತು. ಇಂದು ಬೆಳೆದು ದೊಡ್ಡವರಾಗಿದ್ದೇವೆ. ಕೈಯಲ್ಲಿ ಹಣವಿದೆ, ಸ್ವಾತಂತ್ರ್ಯವಿದೆ. ಆದರೂ ನಾವಂದುಕೊಂಡದ್ದನ್ನೆಲ್ಲ ಮಾಡಲು ಸಾಧ್ಯವಿಲ್ಲ! ಹೀಗಿರುವಾಗ ಆ ಬಾಲ್ಯಕಾಲವೇ ಚೆನ್ನ ಅನ್ನಿಸದಿರುವುದೇ?
ಈ ಬಾಲ್ಯಕಾಲದ ವರ್ಣನೆ ಎಷ್ಟು ಮಾಡಿದರೂ ಮುಗಿಯುವಂಥದ್ದಲ್ಲ. ವ್ಯಕ್ತಿ ತನ್ನ ನೋವಿನ ಕ್ಷಣಗಳಲ್ಲಿ ತನ್ನ ಬಾಯಕ್ಕೆ ಮರಳುತ್ತಾನೆ. ವೃದ್ಧಾವಸ್ಥೆಯಲ್ಲಿಯೂ ಬಾಲ್ಯದ ಗೆಳೆಯನೇನಾದರೂ ಸಿಕ್ಕಿದರೆ ಬಾಲ್ಯದ ದಿನಗಳು ಮತ್ತೆ ಮರಳುತ್ತವೆ. ನಮಗೇನೋ ಬಾಲ್ಯದ ಬಗ್ಗೆ ನೆನಪು ಮಾಡಿಕೊಳ್ಳಲು ಎಷ್ಟೊಂದು ವಿಷಯಗಳಿವೆ. ಮುಂದಿನ ಪೀಳಿಗೆಯವರಿಗೆ ಕಾದು ನೋಡೋಣ.

No comments:

Post a Comment