Tuesday, November 30, 2010

ಭಾಷಾ ಭಾವೈಕ್ಯ ಸಮಾವೇಶ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಗೋವಾ ಕನ್ನಡ ಸಮಾಜ ಪಣಜಿ ಜಂಟಿಯಾಗಿ ಪಣಜಿಯಲ್ಲಿ ’ಹೊರನಾಡ ಕನ್ನಡಿಗರ ಭವಿಷ್ಯ ಚಿಂತನೆ ಹಾಗೂ ಭಾಷಾ ಭಾವೈಕ್ಯ ಸಮಾವೇಶವನ್ನು ಆಯೋಜಿಸಿದ್ದವು. ಗಾಂಧಿಜಯಂತಿಯಂದು ಮಧ್ಯಾಹ್ನ ೩.೩೦ ಕ್ಕೆ ಆರಂಭವಾದ ಈ ಸಮಾವೇಶ ಗೋವಾ ಕನ್ನಡಿಗರ ಮನಸ್ಸಿನಲ್ಲಿ ಅಳಿಯದ ಛಾಪನ್ನು ಮೂಡಿಸಿತು.
ಕಾರ್ಯಕ್ರಮಕ್ಕೆ ಭರ್ಜರಿ ಆರಂಭವನ್ನು ಒದಗಿಸಿದವರು ಶ್ರೀ ನಾಗರಾಜಮೂರ್ತಿಯವರು. ತಮ್ಮ ವೈವಿಧ್ಯಮಯ ಕಲಾತಂಡಗಳ ಮೂಲಕ ಅತ್ಯದ್ಭುತ ನೃತ್ಯ ಹಾಗೂ ಜಾನಪದ ಕಲಾ ಪ್ರದರ್ಶನವನ್ನು ಪ್ರಸ್ತುತಪಡಿಸಿ ಕರ್ನಾಟಕದ ಭವ್ಯ ಜಾನಪದ ಸಂಸ್ಕೃತಿಯನ್ನು ತೆರೆದಿಟ್ಟರು. ಕಂಸಾಳೆ, ಸುಗ್ಗಿ, ನಂದಿಕೋಲು, ಡೊಳ್ಳು, ಲಂಬಾಣಿ ಕುಣಿತಗಳು ಸಮರ್ಥನಿರ್ದೇಶನದಿಂದಾಗಿ ಜನಮನ ಸೂರೆಗೊಳ್ಳುವಲ್ಲಿ ಸಮರ್ಥವಾದವು. ಯಾವ ಮೋಹನ ಮುರಳಿ ಕರೆಯಿತೊ.. ಮುಂತಾದ ಭಾವಗೀತೆಗಳನ್ನೂ ಮಾತಾಡ್ ಮಾತಾಡ್ ಮಲ್ಲಿಗೆ.. ಇತ್ಯಾದಿ ಜಾನಪದ ಗೀತೆಗಳನ್ನೂ ನೃತ್ಯಕ್ಕೆ ಅಳವಡಿಸಿದ ಪ್ರಯೋಗ ಅತ್ಯಂತ ಯಶಸ್ವಿಯಾಗಿತ್ತು. ಸಾಮಾನ್ಯವಾಗಿ ಪುರುಷರಿಗೇ ಮೀಸಲಾಗಿದ್ದ ಡೊಳ್ಳು ಕುಣಿತವನ್ನು ಮಹಿಳಾ ತಂಡವೂ ಪ್ರದರ್ಶಿಸಿ ಸೈ ಅನಿಸಿಕೊಂಡಿತು. ಇದೇ ಸಂದರ್ಭದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ ೧೦ ವರ್ಷದ ಬಾಲಿಕೆ ವಾಸ್ಕೋ ನಿವಾಸಿ ಕು. ಪ್ರತಿಕ್ಷಾ ಮುಂದೆ ತಾನೊಬ್ಬ ಉತ್ತಮ ನೃತ್ಯಗಾತಿಯಾಗಬಲ್ಲೆನೆಂಬುದನ್ನು ತೋರಿಸಿಕೊಟ್ಟಳು.
ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಉದ್ಘಾಟಿಸಿದರು. ವಿಜಯ ಕರ್ನಾಟಕ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ಮುಖ್ಯ ಅತಿಥಿಗಳಾಗಿದ್ದರು. ಗೋವಾ ಕನ್ನಡ ಸಮಾಜದ ಅಧ್ಯಕ್ಷ ವಿಜಯ ಶೆಟ್ಟಿ ಸ್ವಾಗತಿಸಿದರೆ, ಕಾರ್ಯಕ್ರಮದ ಸಂಚಾಲಕ ವಿಷ್ಣು ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶಾಂತರಾಜು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮ ನಿರೂಪಣೆಯ ಹೊಣೆ ಮಹಾಬಲ ಭಟ್ ಅವರದ್ದಾಗಿತ್ತು.
ಮರುದಿನ ಮುಂಜಾನೆ ೧೦ ಗಂಟೆಗೆ ಹೊರನಾಡ ಕನ್ನಡಿಗರ ಭವಿಷ್ಯದ ಕುರಿತು ಶ್ರಿ ವ್ಯಾಸ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಚಿಂತನಗೋಷ್ಟಿ ನಡೆಯಿತು. ಗೋವಾದ ಪ್ರಸಿದ್ಧ ಸಾಹಿತಿ ಡಾ.ಅರವಿಂದ ಯಾಳಗಿಯವರು ಹೊರನಾಡ ಕನ್ನಡಿಗರ ಬದುಕು ಬವಣೆಗಳನ್ನು ವಿಶ್ಲೇಷಿಸುತ್ತ ’ಹೊರನಾಡಿನಲ್ಲಿರುವ ಪ್ರತಿಭಾವಂತರಿಗೆ ಸರಕಾರದ ವಿವಿಧ ವಿಭಾಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ’ ಎಂದು ವಿಷಾದಿಸಿದರು. ಖ್ಯಾತ ಚಿತ್ರನಿರ್ದೇಶಕ ಬಿ.ಸುರೇಶ ಅವರು ಕನ್ನಡಿಗರ ವಲಸೆಗೆ ಅನ್ನದ ಪ್ರಶ್ನೆಯ ಪಾತ್ರವೆಷ್ಟು ಎಂಬುದನ್ನು ವಿವರಿಸುತ್ತ, ’ಹೊರನಾಡ ಕನ್ನಡಿಗರು ತಮ್ಮ ಅವಕಾಶಗಳನ್ನು ತಾವೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಅವರು ತಮ್ಮ ಕನ್ನಡತನವನ್ನು ಮರೆಯದಿರುವುದೂ ಅಗತ್ಯ’ ಎಂದು ಅಭಿಪ್ರಾಯಪಟ್ಟರು.ಶ್ರೀ ವ್ಯಾಸ ದೇಶಪಾಂಡೆ ’ಹೊರನಾಡ ಕನ್ನಡಿಗರ ಸಮಸ್ಯೆಗೆ ಸರಕಾರ ಸ್ಪಂದಿಸಬೇಕು’ ಎಂದು ಅಭಿಪ್ರಾಯಪಡುತ್ತ ಸಮಾರೋಪಗೊಳಿಸಿದರು. ಈ ಗೋಷ್ಟಿಯ ನಿರ್ವಹಣೆಯನ್ನು ಸೌ.ಕೋಮಲಾ ಮಾಡಿದರು. ಸಿ.ಕೆ. ಜೋಶಿ ಸ್ವಾಗತಿಸಿದರು, ಕಲ್ಮೇಶ ಪಾಟೀಲ ವಂದಿಸಿದರು.
ಅನಂತರ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿಯವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಟಿ ನಡೆಯಿತು. ಕನ್ನಡ ನಾಡಿನ ಕೆಲವು ಕವಿಗಳ ಜೊತೆಗೆ ಗೋವಾದ ಕನ್ನಡ, ಕೊಂಕಣಿ, ಮರಾಠಿ, ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕೃತ ಕವಿಗಳು ತಮ್ಮ ಕವನ ವಾಚಿಸಿದರು. ಕವನವಾಚನದ ಸಂದರ್ಭದಲ್ಲಿ ಕವಿಯ ಪರಿಚಯ ಹಾಗೂ ಕವನ ಪರದೆಯ ಮೇಲೆ ಮೂಡುವ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಜಯಂತ ಕಾಯ್ಕಿಣಿ ಕವಿಯ ಮನಸ್ಥಿತಿ ಹಾಗೂ ಕಾವ್ಯದ ಉತ್ಪತ್ತಿಯ ರಹಸ್ಯವನ್ನು ವಿಶದವಾಗಿ ವಿಶ್ಲೇಷಿಸಿದರು.
ಭೋಜನೋತ್ತರ ವಾಣಿ ಮರಡೂರ ಅವರ ಗಾಯನ ಗಮನ ಸೆಳೆಯಿತು. ಸ್ಥಳೀಯ ಕಲಾವಿದೆ ಸೌ.ಅಖಿಲಾ ಕುರಂದವಾಡ ಎರಡು ಹಾಡನ್ನು ಪ್ರಸ್ತುತಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ನಂತರ ಸ್ಥಳೀಯ ಕೊಂಕಣಿ ಕಲಾವಿದರಿಂದ ಕೊಂಕಣಿಯಲ್ಲಿ ಗೋವಾದ ಜಾನಪದ ನೃತ್ಯ ಪ್ರದರ್ಶನ ನಡೆಯಿತು. ಅವರ ಅಮೋಘ ದೀಪನೃತ್ಯ ಜನರ ಪ್ರಶಂಸೆಗೆ ಪಾತ್ರವಾಯಿತು.
ತಮ್ಮ ವಿಶಿಷ್ಟ ಮಾತಿನ ಶೈಲಿಯಿಂದ ಪ್ರಸಿದ್ಧರಾಗಿರುವ ಪ್ರೊ.ಕೃಷ್ಣೇಗೌಡರು ನಡೆಸಿಕೊಟ್ಟ ’ಮಾತಿನ ಮಂಟಪ’ ಕಾರ್ಯಕ್ರಮ ಪ್ರೇಕ್ಷಕರಿಗೆ ರಂಜನೆ ನೀಡಿತು. ಅವರ ಬಾಯಿಂದ ಹರಿದು ಬರುತ್ತಿರುವ ಜಾನಪದ ಗೀತೆಗಳು, ಕನ್ನಡ ಸಂಸ್ಕೃತಿಯ ಅತ್ಯಮೂಲ್ಯ ಸಾಹಿತ್ಯ ನುಡಿಝರಿಯಲ್ಲಿ ಮಿಂದ ಪ್ರೇಕ್ಷಕರು ಮಂತ್ರಮುಗ್ಧರಾದರು.
ಸಾಯಂಕಾಲ ನಡೆದ ಸಮಾರೋಪದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಚಂದ್ರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉತ್ತರ ಗೋವಾದ ಸಂಸದ ಶ್ರೀಪಾದ ನಾಯ್ಕ ಆಗಮಿಸಿದ್ದರು. ಡಾ. ನಾ. ಡಿಸೋಜಾ ಸಮಾರೋಪ ಭಾಷಣ ಮಾಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಸೌ. ಅಖಿಲಾ ಕುರಂದವಾಡ ಮಾಡಿದರೆ ಅರುಣಕುಮಾರ ಆಭಾರ ಪ್ರದರ್ಶನವನ್ನು ಮಾಡಿದರು.
ಕೊನೆಯಲ್ಲಿ ನಾಗರಾಜಮೂರ್ತಿಯವ ನಿರ್ದೇಶನದಲ್ಲಿ ’ಕೊಂದವರಾರು?’ ಎಂಬ ನಾಟಕ ಪ್ರದರ್ಶಿತವಾಯಿತು.
ಎರಡು ದಿನಗಳ ಈ ಸಮಾವೇಶಕ್ಕೆ ಆತಿಥ್ಯವನ್ನು ನೀಡಿದ್ದು ಗೋವಾದ ಕನ್ನಡಿಗರ ಧ್ವನಿಯಾಗಿರುವ ಪಣಜಿಯ ಗೋವಾ ಕನ್ನಡ ಸಮಾಜ. ಕಳೆದು ಇಪ್ಪತ್ತೈದು ವರ್ಷಗಳಿಂದ ಗೋವಾದಲ್ಲಿ ಕನ್ನಡ ಚಟುವಟಿಕೆಗಳನ್ನು ನಡೆಸುತ್ತ ಕನ್ನಡತನವನ್ನು ಜೀವಂತವಾಗಿರಿಸಿದ ಈ ಸಂಸ್ಥೆ ಕಳೆದವರ್ಷ ಕನ್ನಡ ಸಂಸ್ಕೃತಿ ಇಲಾಖೆಯವರ ’ಕನ್ನಡ ಸಂಸ್ಕೃತಿ ಉತ್ಸವ’ವನ್ನೂ ಯಶಸ್ವಿಯಾಗಿ ನಡೆಸಿಕೊಟ್ಟಿತ್ತು. ಕಾರ್ಯಕರ್ತರು ಅಪಾರ ಪರಿಶ್ರಮದಿಂದ ಈ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿದರು. ಗೋವಾದ ವಿವಿಧೆಡೆಗಳಿಂದ ಹರಿದುಬಂದ ಅಪಾರ ಜನಸ್ತೋಮ ಕಾರ್ಯಕ್ರಮದ ಯಶಸ್ವಿತೆಗೆ ಸಾಕ್ಷಿಯಾಯಿತು.

1 comment:

  1. ಇಂಥಹ ಪ್ರಯತ್ನಗಳು ನಿರಂತರವಾಗಿರಲಿ. ಗೋವಾದಲ್ಲಿ ಕನ್ನಡ ಕಹಳೆ ಸದಾ ಮೊಳಗುತಿರಲಿ.
    ಕಾರ್ಯಕ್ರಮದ ಒಂದೆರಡು ಛಾಯಾಚಿತ್ರಗಳನ್ನೂ ಪರಕತಿಸಿದ್ದರೆ, ಮಾಹಿತಿ ಮತ್ತಷ್ಟು ಪರಿಪೂರ್ಣವಾಗ್ತಿತ್ತೇನೋ....

    ReplyDelete