Thursday, April 21, 2011

ಮರ್ಕಟ ಲೋಕದಲ್ಲಿ

ದಿನಾಂಕ ೨೧-೦೪-೨೦೧೧ರ ಸಂಯುಕ್ತ ಕರ್ನಾಟಕದ ಚೇತನ ಪುರವಣಿಯಲ್ಲಿ ’ಮರ್ಕಟ ಲೋಕದಲ್ಲಿ’ ಎಂಬ ಶೀರ್ಷಿಕೆಯಡಿ ನನ್ನ ಒಂದು ಲೇಖನ ಪ್ರಕಟವಾಗಿದೆ. ತಾವೂ ಓದಿ ಪ್ರತಿಕ್ರಿಯಿಸಿ. ಪತ್ರಿಕೆ ದೊರೆಯದವರಿಗಾಗಿ ಲೇಖನದ ಯಥಾವತ್ ಪಾಠ ಇಲ್ಲಿದೆ.

ಮಹಾಬಲ ಭಟ್

ಇತ್ತೀಚೆಗೆ ಪಿ.ಯು.ಸಿ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ವಾರ್ತಾ ಪತ್ರಿಕೆಯನ್ನು ಓದುತ್ತಿರುವಾಗ ಆಘಾತವಾಗುತ್ತಿತ್ತು. ಪ್ರಶ್ನಪತ್ರಿಕೆ ಕಠಿಣವಾಗಿತ್ತೆಂದು ಆತ್ಮಹತ್ಯೆ ಮಾಡಿಕೊಂಡವರು, ತಾನು ಚೆನ್ನಾಗಿ ಬರೆದಿಲ್ಲ ಎಂದು ಜೀವ ತೆಗೆದುಕೊಂಡವರು, ಅನುತ್ತೀರ್ಣನಾಗಿ ಬಿಡುತ್ತೀನೇನೊ ಎಂಬ ಹೆದರಿಕೆಯಿಂದಲೇ ಆತ್ಮಹತ್ಯೆಗೆ ಶರಣು ಹೋದವರು ಹೀಗೆ ಯುವ ಜನಾಂಗ ಆತ್ಮಹತ್ಯೆಯತ್ತ ಹೊರಳುತ್ತಿರುವದನ್ನು ನೋಡಿ ವೇದನೆಯಾಗುತ್ತಿತ್ತು. ಪರೀಕ್ಷೆಯ ಪರಿಣಾಮ ಬಂದಾಗ ಫೇಲಾದೆ ಎಂದು ಸಾಯುವುದು ಸಾಮಾನ್ಯವಾಗಿಬಿಟ್ಟಿದೆ. ಈಗ ಇನ್ನೂ ಮುಂದೆ ಹೋಗಿ ಪರೀಕ್ಷೆ ಮುಗಿದ ತಕ್ಷಣವೇ ಫಲಿತಾಂಶವನ್ನು ಊಹಿಸಿಕೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ.
ಆತ್ಮಹತ್ಯೆಗೆ ಕಾರಣ ಆತ್ಮಹೀನತೆಯೇ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಉದ್ವೇಗವನ್ನು ನಿಯಂತ್ರಿಸಲಾರದೇ ಇರುವವರು, ತಮ್ಮ ಮೇಲೆಯೇ ಭರವಸೆಯನ್ನು ಹೊಂದದವರು, ನಿಂದನೆಯನ್ನು ಸಹಿಸಲಾರದವರು.... ಹೀಗೆ ಆತ್ಮಹತ್ಯೆಯತ್ತ ಮುಖ ಮಾಡುವ ವ್ಯಕ್ತಿಗಳ ದೊಡ್ಡ ಪಟ್ಟಿಯೇ ಸಿಗುತ್ತದೆ.
ಇಂತಹ ಪಟ್ಟಿಯಲ್ಲಿ ಹಗಲುಗನಸು ಕಾಣುವವರೂ ಒಬ್ಬರು. ನಮ್ಮ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಮರು "ಸ್ವಪ್ನವನ್ನು ಕಾಣಿರಿ. ಸ್ವಪ್ನ ನೋಡಲಾರದವನು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲಾರ" ಎನ್ನುತ್ತಿದ್ದರು. ಅವರ ಮಾತನ್ನು ಅಕ್ಷರಶ: ಪಾಲಿಸುವ ನಮ್ಮ ಯುವ ಜನತೆ ಇಂದು ಸ್ವಪ್ನ ನೋಡುವುದರಲ್ಲೇ ಕಾಲಕಳೆಯುತ್ತಿದ್ದಾರೆ. ಅದನ್ನು ಸಾಕಾರೀಕರಿಸಲು ಯಾವ ಪ್ರಯತ್ನವೂ ನಡೆಯುವುದಿಲ್ಲ.
ಸ್ವಪ್ನ ಮೂಡುವುದು ನಮ್ಮ ಮನಸ್ಸೆಂಬ ಭಿತ್ತಿಯ ಮೇಲೆ. ರಾತ್ರಿ ಕಣ್ಣು ಮುಚ್ಚಿದ್ದರೂ ಮನಸ್ಸು ಅದನ್ನು ನೋಡುತ್ತದೆ. ಮನಸ್ಸಿನ ಚಿಂತೆ-ಚಿಂತನೆ, ಆಲೋಚನೆ-ವಿಚಾರ, ಸಂಕಲ್ಪ-ವಿಕಲ್ಪ, ದೃಷ್ಟ-ಕಲ್ಪಿತ ಘಟನೆಗಳು, ಭಾವ-ಸ್ವಭಾವ ಇವೇ ಕನಸಿನ ರೂಪದಲ್ಲಿ ಮನೋಭಿತ್ತಿಯಲ್ಲಿ ಮೂಡುತ್ತವೆ ಎಂಬುದು ತತ್ತ್ವಜ್ಞಾನಿಗಳಿಂದ ಹಿಡಿದು ಮನ:ಶಾಸ್ತ್ರಜ್ಞರವರೆಗೆ ಎಲ್ಲರೂ ಒಪ್ಪುವ ವಿಚಾರ. ಮುಂದೊದಗುವ ಶುಭಾಶುಭಗಳನ್ನು ಕನಸುಗಳು ಸೂಚಿಸುತ್ತವೆ ಎಂದು ನಂಬಿದವರೂ ಇದ್ದಾರೆ. ಅದೇನೇ ಇರಲಿ ಇಂತಹ ಕನಸು ಅಪ್ರಯತ್ನವಾಗಿ ಬೀಳುವುದೇ ಹೆಚ್ಚು. ಪ್ರಯತ್ನ ಮಾಡಿ ಅದನ್ನು ಕಾಣಲಾಗದು. ಆದರೆ ಕಲಾಮರು ಹೇಳಿದ್ದು ಈ ರಾತ್ರಿಕನಸಿನ ಬಗ್ಗೆ ಅಲ್ಲ. ನಾನು, ನನ್ನ ಜೀವನ, ನನ್ನ ಸಮಾಜ, ನನ್ನ ದೇಶ ಇವುಗಳ ಬಗ್ಗೆ ಉದಾತ್ತ ಸ್ವಪ್ನ ಕಾಣಿರಿ ಎಂದು. ’ಕನಸು ಎಂದರೆ ನೀವು ನಿದ್ದೆ ಮಾಡುವಾಗ ಕಾಣುವುದಲ್ಲ, ಯಾವುದು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲವೊ ಅದು ನಿಜವಾದ ಕನಸು’. ಕಲಾಮರು ಹೇಳಿದ್ದು ಇದು. ಹೌದು ಇಂತಹ ಸ್ವಪ್ನವನ್ನು ಕಾಣಬೇಕು. ಸ್ವಪ್ನ ಕಾಣದವ ತನ್ನ ಗುರಿಯನ್ನು ನಿರ್ಧರಿಸಲಾರ. ಯಾರೋ ಕೊಟ್ಟ ಸಲಹೆಯನ್ನೇ ತನ್ನ ಗುರಿಯಾಗಿಸಿಕೊಳ್ಳುತ್ತಾನೆ. ಹಾಗಂತ ಆಕಾಶಕ್ಕೆ ಏಣಿ ಹಾಕುವ ಸ್ವಪ್ನವನ್ನು ಕಾಣುವುದೇ?

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್|
ಆಭಾಸಮಂ ಸತ್ಯವೆಂದು ಬೆಮಿಸುವುದುಮ್||
ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ |
ಅಭಿಶಾಪ ನರಕುಲಕೆ-ಮಂಕುತಿಮ್ಮ ||

ಎಂದು ಡಿ.ವಿ.ಜಿ.ಯವರು ಹೇಳಿದಂತೆ ಸಾಧನೆಗೆ ಮಿತಿಯಿಲ್ಲವೆಂದು ಅಮಿತ ಸಾಧನೆಯ ಕನಸು ಕಾಣುವುದೇ? ನಿಜ, ನಮ್ಮ ಕನಸು ಉನ್ನತವಾಗಿದ್ದರೆ ಗುರಿಯೂ ಉನ್ನತವಾಗಿರುತ್ತದೆ. ನಾವು ಗುರಿಯನ್ನು ನಿರ್ಧರಿಸುವುದಕ್ಕಿಂತ ಮೊದಲು ಕನಸನ್ನು ಕಾಣಬೇಕು. ಕಂಡ ಸ್ವಪ್ನದಲ್ಲಿ ತನಗಿಷ್ಟವಾದುದನ್ನಾರಿಸಿಕೊಳ್ಳಬೇಕು. ಅದಾದ ನಂತರ ಆ ಗುರಿಯ ವಿಷಯದಲ್ಲಿ ಮಾತ್ರ ಸ್ವಪ್ನವನ್ನು ಕಾಣಬೇಕು. ಬೇರೆ ವಿಷಯಗಳು ಮನದಿಂದ ದೂರವಾಗಬೇಕು. ಬಹುಷ: ಸ್ವಪ್ನದಲ್ಲಿ ಕಂಡಿದ್ದನ್ನೇ ಗುರಿಯಾಗಿಸಿಕೊಂಡು, ತನ್ನ ಗುರಿಯನ್ನೇ ಸ್ವಪ್ನದಲ್ಲಿ ಕಂಡು ಸ್ವಪ್ನ-ಗುರಿಗಳ ಸಮನ್ವಯ ಸಾಧಿಸಿದ್ದರಿಂದಲೇ ಕಲಾಮರು ರಾಷ್ಟ್ರಪತಿ ಸ್ಥಾನವನ್ನಲಂಕರಿಸಿದ್ದು. ತಮ್ಮ ಗುರಿಯನ್ನು ಬಿಟ್ಟು ಸುಂದರ ಹುಡುಗಿಯ ಕೈ ಹಿಡಿಯಬೇಕು, ಕೆಲವು ಮಕ್ಕಳಿಗೆ ತಂದೆಯಾಗಬೇಕು ಎಂದೆಲ್ಲ ಕನಸು ಕಂಡಿದ್ದರೆ ಪ್ರಾಯ: ಕಲಾಮರು ಭಾರತದ ಲಲಾಮರಾಗದೇ ಸಂಸಾರದ ಗುಲಾಮರಾಗಿಯೇ ಉಳಿಯುತ್ತಿದ್ದರೇನೋ. ಆದರೆ ಎಲ್ಲರು ಕಲಾಮರಂತೆ ಆಗಲು ಸಾಧ್ಯವೇ?
ನಮ್ಮ ಯುವಕ ಯುವತಿಯರೂ ಸ್ವಪ್ನವನ್ನು ನೋಡುತ್ತಾರೆ. ಆದರೆ ಯಾವ ರೀತಿಯ ಸ್ವಪ್ನ? ಮಧುರ ಸ್ವಪ್ನ! ಬಹು ಜನರ ಸ್ವಪ್ನ ತನ್ನ ವೈಯಕ್ತಿಕ ಬದುಕಿಗೇ ಮೀಸಲು. ಪುಸ್ತಕವನ್ನು ಮುಚ್ಚಿಟ್ಟು ಕುರ್ಚಿಗೆ ತಲೆ ಆನಿಸಿ ಆಕಾಶದತ್ತ ದೃಷ್ಟಿ ಹಾಯಿಸಿದರೆ ಕಣ್ತುಂಬಾ, ಮನಸ್ಸು ತುಂಬಾ ಮಧುರ ಸ್ವಪ್ನಗಳು. ಪ್ರಿಯತಮನೊಂದಿಗೋ ಪ್ರಿಯತಮೆಯೊಂದಿಗೋ ಡಾನ್ಸ್ ಮಾಡಿದಂತೆ, ಮರ ಸುತ್ತಿದಂತೆ, ಸ್ವಿಮ್ಮಿಂಗ್ ಪೂಲ್‌ನಲ್ಲಿ ಜಲಕ್ರೀಡೆಯಾಡಿದಂತೆ ಹೀಗೆಲ್ಲ ಸ್ವಪ್ನಗಳು. ಹದಿಹರೆಯದ ಯುವಕ ಯುವತಿಯರಿಗೇಕೆ ಪ್ರಾಥಮಿಕ ಶಾಲಾ ಮಕ್ಕಳಿಗೂ ಅಂತಹುದೇ ಸ್ವಪ್ನ ಬಿದ್ದರೆ ಆಶ್ಚರ್ಯವೇನಲ್ಲ. ಯಾಕೆಂದರೆ ನಮ್ಮ ಪ್ರಸಾರ ಮಾಧ್ಯಮಗಳು ನಮ್ಮ ವಿಚಾರ ಚಿಂತನೆಗಳ ದಿಕ್ಕನ್ನೇ ಬದಲಿಸಿಬಿಟ್ಟಿವೆ. ಇಂತಹ ಸಂದರ್ಭದಲ್ಲಿ ದೇಶದ ಬಗ್ಗೆ ಅತ್ಯುನ್ನತ ಕನಸು ಕಾಣಲು ಸಮಯವೆಲ್ಲಿ? ನಮ್ಮ ಸುತ್ತಲಿನ ವಾತಾವರಣವೂ ಅದಕ್ಕೆ ಸಹಕರಿಸದು. ಗುಂಡುಗಳ ಅಬ್ಬರದಲ್ಲಿಯೇ ದಿನದೂಡುವ ಕಾಶ್ಮೀರದ ಜನತೆ ಉಗ್ರವಾದಿಗಳ ಮುಖವನ್ನು ಬಿಟ್ಟು ಸುಂದರ ಜೀವನದ ಸ್ವಪ್ನ ಕಾಣುವುದು ಸುಲಭದ ಮಾತಲ್ಲ.
ಸ್ವಪ್ನವನ್ನು ಗುರಿಯಾಗಿಸಿಕೊಳ್ಳದಿದ್ದರೆ ಕಂಡ ಸ್ವಪ್ನ ವ್ಯರ್ಥ. ಗುರಿ ಸ್ಪಷ್ಟವಾಗಿರುವಾಗಲೂ ಕನಸು ವ್ಯರ್ಥ. ಸೈನಿಕನೊಬ್ಬ ಸಮರಾಂಗಣಕ್ಕೆ ಹೊರಡುವ ಮುನ್ನ ತಾನು ವೈರಿ ಸೈನಿಕರನ್ನು ಕೊಚ್ಚಿಹಾಕಿದಂತೆ, ಪರಮವೀರಚಕ್ರ ಪ್ರಶಸ್ತಿಯನ್ನು ಪಡೆದಂತೆ ಕನಸನ್ನು ಕಂಡರೆ ತಪ್ಪಲ್ಲ. ಆದರೆ ಅದೇ ಕನಸನ್ನು ಯುದ್ಧರಂಗದಲ್ಲಿ ಶತ್ರು ಸೈನಿಕರು ಎದುರಾಗಿರುವಾಗ ಕಾಣುತ್ತ ನಿಂತರೆ...? ಇಂಜಿನಿಯರ್ ವಿದ್ಯಾರ್ಥಿಯೊಬ್ಬ ವೈದ್ಯಕೀಯಶಾಸ್ತ್ರದಲ್ಲಿ ನೊಬೆಲ್ ಬಹುಮಾನವನ್ನು ಪಡೆದಂತೆ ಕನಸನ್ನು ಕಂಡರೆ...?!
ಇಂತಹ ವ್ಯರ್ಥ ಸ್ವಪ್ನಲೋಕದಲ್ಲಿ ವಿಹಾರಮಾಡುವುದು ಇಂದಿನ ಯುವಜನತೆಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಓದುವ ಸಮಯದಲ್ಲಿ ಸ್ವಪ್ನಲೋಕದಲ್ಲಿ ವಿಹಾರಮಾಡುತ್ತ ಕುಳಿತರೆ ಫಲಿತಾಂಶ ಶೂನ್ಯವಾಗದೆ ಮತ್ತಿನ್ನೇನು ಆಗಲು ಸಾಧ್ಯ? ತಮ್ಮ ಗುರಿ ಹಾಗೂ ಸ್ವಪ್ನಗಳ ಮಧ್ಯೆ ಸಮನ್ವಯ ಸಾಧಿಸುವಲ್ಲಿ ನಮ್ಮ ಯುವಜನತೆ ಯಶಸ್ವಿಯಾಗುತ್ತಿಲ್ಲ. ಅದುವೇ ಆತ್ಮಹತ್ಯೆಗೆ ಕಾರಣ. ತಮ್ಮ ಸ್ವಪ್ನ ಸಾಕರಗೊಳ್ಳದಿರುವಾಗ ತಿರುಕನೋರ್ವನೂರಮುಂದೆ....... ಎಂಬಂತೆ ನಿರಾಶರಾಗಿ ಆತ್ಮಹತ್ಯೆಗೆ ಶರಣು ಹೋಗುತ್ತಾರೆ.
ಅನುತ್ತೀರ್ಣರಾದಾಗ ಅವರು ಸಮಾಜದಲ್ಲಿ ಎದುರಿಸಬೇಕಾದ ಅವಮಾನದ ಕಲ್ಪನೆಯೂ ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದು. ಇಲ್ಲಿ ತಂದೆ ತಾಯಿಯರ ಪಾತ್ರ ಮಹತ್ತ್ವದ್ದು. ಅನುತ್ತೀರ್ಣರಾದ ತಮ್ಮ ಮಕ್ಕಳನ್ನು ಮೂದಲಿಸದೆ ಅವರಲ್ಲಿ ಧೈರ್ಯತುಂಬಿ ಪರೀಕ್ಷೆಯ ಪರಿಣಾಮವೇ ಜೀವನದ ನಿರ್ಧಾರಕ ಅಂಶವಲ್ಲ ಎಂಬುದನ್ನು ಮನವರಿಕೆ ಮಾಡಿ ಕೊಡಬೇಕು. ಆಗ ಅವರಲ್ಲಿ ಆತ್ಮಸ್ಥೈರ್ಯ ಮೂಡಿ ಮುಂದಿನ ಹೆಜ್ಜೆಯನ್ನು ಯಶಸ್ವಿಯಾಗಿ ಇಡಲು ಸಾಧ್ಯ.