Tuesday, April 5, 2011

ಹೊಸ ಚಿಗುರು ಹಳೆ ಬೇರು............

ಲೇಖನ: ಮಹಾಬಲ ಭಟ್


ಋತು ಚಕ್ರ ತಿರುಗುವುದು ಕಾಲನೆದೆ ಮರುಗುವುದು

ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು

ಕ್ಷಿತಿಗರ್ಭ ಧರಿಸುವಳು ಮತ್ತುದಿಸುವುದು ಜೀವ

ಸತತ ಕೃಷಿಯೊ ಪ್ರಕೃತಿ-ಮಂಕುತಿಮ್ಮ


ಪ್ರತಿವರ್ಷವೂ ಶಿಶಿರವಸಂತಗಳು ಪುನರಾವರ್ತನೆಗೊಳ್ಳುತ್ತವೆ. ಪ್ರಕೃತಿಯಲ್ಲಿ ಬದಲಾವಣೆಗಳಾಗುತ್ತವೆ. ಇದು ನಿರಂತರವಾಗಿ ನಡೆದೇ ಇರುತ್ತದೆ. ಪ್ರಕೃತಿಯು ಕ್ಯಾಲೆಂಡರನ್ನು ಅನುಸರಿಸಿ ಬದಲಾಗುವುದಿಲ್ಲ. ಪ್ರಕೃತಿಯ ಪರಿವರ್ತನೆಗನುಗುಣವಾಗಿ ನಾವು ಕ್ಯಾಲೆಂಡರನ್ನು ಮಾಡಿಕೊಳ್ಳುತ್ತೇವೆ. ಕ್ಯಾಲೆಂಡರನ್ನು ಬದಲಾಯಿಸಿಯೇ ಸಂಭ್ರಮಪಡುವ ನಾವು, ಅಂದು ಪ್ರಕೃತಿಯಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸುವುದಿಲ್ಲ. ಇಂದು ನಾವು ನಮ್ಮ ವ್ಯವಹಾರದಲ್ಲಿ ಅಂತಾರಾಷ್ಟ್ರೀಯ ಪಂಚಾಂಗವನ್ನು ಉಪಯೋಗಿಸುತ್ತೇವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ಧಾರ್ಮಿಕ ಪಂಚಾಂಗವನ್ನು ಉಪಯೋಗಿಸುತ್ತೇವೆ. ಭಾರತೀಯ ಧರ್ಮದ ಆಚರಣೆಗಳು ಭಾರತದ ಪ್ರಕೃತಿಯನ್ನವಲಂಬಿಸಿ ಇವೆ. ವಸಂತನ ಆಗಮನವಾದಾಗ ಪ್ರಕೃತಿಯಲ್ಲಿ ಏನೋ ಹೊಸತನವನ್ನು ಕಾಣುತ್ತೇವೆ. ಹಾಗಾಗಿಯೇ ಅವನನ್ನು ಋತುಗಳ ರಾಜನೆನ್ನುವುದು. ನಮ್ಮ ಬಾಳಿನಲ್ಲಿ ಹೊಸತನಕ್ಕೆ ತುಂಬಾ ಮಹತ್ತ್ವವಿದೆ.


ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು

ರಸವು ನವನವತೆಯಿಂದನುದಿನವು ಹೊಮ್ಮಿ

ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ

ಪಸರುತಿರೆ ಬಾಳ್ ಚೆಲುವು - ಮಂಕುತಿಮ್ಮ


ಈ ಹೊಸತನ ಒಂದೇ ದಿನದಲ್ಲಿ ಬರುವಂಥದ್ದಲ್ಲ. ಹಾಗಾಗಿಯೇ ಸುಮಾರು ಶಿವರಾತ್ರಿಯ ಅನಂತರ ನಾವು ವಸಂತದ ಲಕ್ಷಣಗಳನ್ನು ಕಾಣುತ್ತೇವೆ. ಹಳೆಯದರೊಂದಿಗೆ ಬೆಸೆತುಕೊಂಡೇ ಹೊಸತನ ಕಾಣಿಸುತ್ತದೆ. ಹೊಸ ಚಿಗುರು ಹಳೆಬೇರನ್ನವಲಂಬಿಸಿಯೇ ಬರುವುದು ತಾನೆ?


ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಬಗು

ಹೊಸಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ

ಋಷಿ ವಾಕ್ಯದೊಡನೆ ವಿಜ್ಞಾನ ಮೇಳವಿಸೆ

ಜಸವು ಜೀವನಕದುವೆ-ಮಂಕುತಿಮ್ಮ

ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ನಮ್ಮ ಪೂರ್ವಜರ ಮಾತನ್ನು ಧಿಕ್ಕರಿಸಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಹಳೆಯ ನೆಲೆಗಟ್ಟಿನ ಮೇಲೆ ಹೊಸ ಜೀವನ ಸೌಧವನ್ನು ಕಟ್ಟಿ ಎಂಬುದೇ ಯುಗಾದಿಯ ಸಂದೇಶ. ಸತ್ಯಯುಗದಲ್ಲಿ ಸೃಷ್ಟಿ ಆರಂಭವಾದ ದಿನವೇ ಯುಗಾದಿ ಎಂಬ ನಂಬಿಕೆ ಇದೆ. ಚೈತ್ರಶುದ್ಧ ಪ್ರತಿಪದೆಯಂದು ಚಾಂದ್ರಮಾನ ಯುಗಾದಿ. ಸೂರ್ಯನ ಗತಿಗನುಸಾರವಾಗಿ ಮೇಷ ಮಾಸದ ಪ್ರಥಮದಿನವನ್ನು ಸೌರಮಾನ ಯುಗಾದಿಯೆಂದು ಆಚರಿಸುತ್ತಾರೆ. ಯುಗಾದಿಯ ಆಚರಣೆಗೆ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯಿದೆ. ಆ ದಿನ ಅಭ್ಯಂಗಸ್ನಾನ, ತಳಿರುತೋರಣಗಳಿಂದ ಗೃಹಾಲಂಕರಣ, ದೇವತಾಪೂಜೆ, ವಿಶೇಷ ನೈವೇದ್ಯ- ಪಂಚಾಂಗಶ್ರವಣ ದಾನ ಮುಂತಾದ ಕರ್ಮಗಳನ್ನು ಶಾಸ್ತ್ರವು ವಿಧಿಸಿದೆ. ಅಭ್ಯಂಗವು ನಮ್ಮ ಶರೀರ ಮತ್ತು ಮನಸ್ಸುಗಳ ಪ್ರಸನ್ನತೆಗೆ ಸಹಕಾರಿ ಎಂಬುದನ್ನು ಆಯುರ್ವೇದವು ಸಾರಿ ಹೇಳುತ್ತದೆ. ಮಾವಿ ಚಿಗುರುಗಳು ವಾತಾವರಣವನ್ನು ಶುದ್ಧೀಕರಿಸುತ್ತವೆ ಎಂಬುದು ತೋರಣ ಕಟ್ಟುವುದರ ಹಿನ್ನೆಲೆ. ಅಂದು ಎತ್ತರದಲ್ಲಿ ಧ್ವಜವನ್ನು ಹಾರಿಸುವ ಪದ್ಧತಿಯಿದೆ. ಅದು ಭಗವಂತನು ಮಾಡಿದ ದೈತ್ಯನಿಗ್ರಹವೇ ಮೊದಲಾದ ಮಹತ್ಕಾರ್ಯಗಳನ್ನು ನೆನಪಿಗೆ ತರುವ ಧರ್ಮ ವೈಜಯಂತಿಯಷ್ಟೇ ಅಲ್ಲ, ನಮ್ಮ ವೈಚಾರಿಕ ಔನ್ನತ್ಯಕ್ಕಾಗಿ ಮಾಡಿರುವ ಸಂಕಲ್ಪದ ದ್ಯೋತಕವೂ ಆಗಿರುತ್ತದೆ. ಸೃಷ್ಟಿಕರ್ತನಾದ ಪ್ರಜಾಪತಿಯೂ ಕಾಲಪುರುಷನೂ ಯುಗಾದಿಪರ್ವದ ದೇವತೆಗಳು. ಅವರಿಗೆ ಅಂದು ಅರ್ಪಿಸುವ ವಿಶೇಷ ನೈವೇದ್ಯವು ಚಿಗುರುಬೇವು ಮತ್ತು ಬೆಲ್ಲವನ್ನು ಸೇರಿಸಿ ಕುಟ್ಟಿದ ಕಲ್ಕ. ಬೇವು ಎಲುಬಿಗೆ ಸಂಬಂಧಿಸಿದ ರೋಗವನ್ನು ವಿಷದ ಸೋಂಕನ್ನು ನಿವಾರಿಸುವ ಮಹೌಷಧಿ. ಆದರೂ ಕಹಿಯಾದ ಅದರಲ್ಲಿ ವಾತದೋಷವಿದೆ. (ಕಟುತಿಕ್ತ ಕಷಾಯಾ: :ವಾತಂ ಜನಯಂತಿ - ಚರಕ) ಸಿಹಿಯಾದ ಬೆಲ್ಲದೊಡನೆ ಅದು ಸೇರಿದರೆ ಆ ದೋಷವು ಶಮನ ಹೊಂದುತ್ತದೆ. ಜೀವನದಲ್ಲಿ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ಭಾವನೆಯೂ ಈ ಕ್ರಿಯೆಯ ಹಿಂದಿದೆ. ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಇವು ಪಂಚ ಅಂಗಗಳು (ಪಂಚಾಂಗ) ಇಡೀವರ್ಷದ ಪಂಚಾಂಗವನ್ನು, ಭವಿಷ್ಯವನ್ನು ಯುಗಾದಿಯ ದಿನ ಸಾಯಂಕಾಲ ಕೇಳುವ ಪದ್ಧತಿಯಿದೆ. ಈ ದಿನ ಜಲಪಾತ್ರೆಯನ್ನೂ ವಸ್ತ್ರಭೂಷಣಗಳನ್ನೂ ದಾನ ಮಾಡಬೇಕೆಂದು ಶ್ರುತಿಯು ಸಾರುವುದು. ಗ್ರಾಮೀಣ ಪ್ರದೇಶದಲ್ಲಿ ನೇಗಿಲಿನಿಂದ ಗೆರೆ ತೆಗೆದು ಬೇಸಾಯವನ್ನು ಸಾಂಕೇತಿಕವಾಗಿ ಆರಂಭಿಸುವ ಪದ್ಧತಿಯಿದೆ. ಯುಗಾದಿಯ ದಿನ ಮಂಗಲ ಕಾರ್ಯಗಳಿಗೆ ಪ್ರಶಸ್ತವಾದ (ಸಾಡೆತೀನ್) ಮುಹೂರ್ತಗಳಲ್ಲಿ ಒಂದು. ಆದ್ದರಿಂದ ಈ ದಿನ ಹೊಸ ಕಾರ್ಯಾರಂಭಕ್ಕೆ ಶುಭದಿನ. ಹೊಸ ಚಿಂತನೆ-ಹೊಸ ಉತ್ಸಾಹ, ಹೊಸ ಮನಸ್ಸುಗಳಿಂದ ಹೊಸವರ್ಷದಲ್ಲಿ ಮಾಡುವ ಕಾರ್ಯಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ.