Thursday, January 13, 2011

ಗೋವೆಯೆಂಬ ನಾವೆ......

ಗೋವಾ ಮುಕ್ತಿ ದಿನಾಚರಣೆ ಇತ್ತೀಚೆಗಷ್ಟೆ ಮುಗಿದಿದೆ. ಎಂದಿನಂಥಲ್ಲ ಈ ವರ್ಷದ ಆಚರಣೆ. ಗೋವಾ ಮಾತೆಗೆ ಈಗ ೫೦ರ ಹರೆಯ. ಸ್ವರ್ಣಜಯಂತಿಯ ಸಂಭ್ರಮದಲ್ಲಿ ಗೋವಾದ ಜನತೆ ಇದ್ದಾರೆ. ಸರಕಾರವೂ, ಅನೇಕ ಸಂಘ ಸಂಸ್ಥೆಗಳೂ ವರ್ಷಾದ್ಯಂತ ಇದರ ಆಚರಣೆಯನ್ನು ಮಾಡಲಿವೆ.
ಇಂತಹ ಒಂದು ಸಂದರ್ಭ ಮೂಲತ: ಈ ಭೂಮಿಯಲ್ಲೇ ಹುಟ್ಟಿ ಬೆಳೆದವರಿಗೆ ಪುಳಕದ ಕ್ಷಣವಾಗುವುದು ಸಹಜ. ಆದರೆ ಒಮ್ಮೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕರ್ನಾಟಕದ ಜನತೆಗೆ ಸುವರ್ಣ ಕರ್ನಾಟಕ ನೀಡಿದ ಸಂತಸವನ್ನು ಗೋವಾದ ಸ್ವರ್ಣ ಜಯಂತಿ ಗೋವನ್ನರಿಗೆ ನೀಡುತ್ತಿಲ್ಲ ಎಂಬುದು. ಇದಕ್ಕೆ ಕಾರಣ ಗೋವಾದಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಹೊರಗಿನವರು ಎಂಬುದೆ? ಖಂಡಿತ ಅಲ್ಲ. ಗೋವಾದಲ್ಲಿಯೇ ಅನೇಕರಿಗೆ ಈ ಮುಕ್ತಿ ಬೇಡವಾಗಿತ್ತು. ಅವರಿಗೆ ಭಾರತೀಯ ಎನಿಕೊಳ್ಳುವುದಕ್ಕಿಂತ ಪೋರ್ತುಗೀಸ ಎನಿಸಿಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ, ಅಭಿಮಾನ. ಕೊಂಕಣಿ, ಹಿಂದಿಗಳನ್ನು ಮಾತನಾಡಲಾರದವರೂ ಪೋರ್ಚುಗೀಸನ್ನು ಹೆಮ್ಮೆಯಿಂದ ಮಾತನಾಡುತ್ತಾರೆ. ಪೋರ್ಚುಗೀಸರು ಗೋವಾಕ್ಕೆ ಕಾಲಿರಿಸಿದ ದಿನವನ್ನು ಕುಣಿದು ಕುಪ್ಪಳಿಸಿ ಆಚರಿಸುತ್ತಾರೆ. ಈಗಿನ ಪ್ರಜಾಪ್ರಭುತ್ವಕ್ಕಿಂತ ಪೋರ್ಚುಗೀಸರ ದಬ್ಬಾಳಿಕೆಯೇ ಉತ್ತಮವಾಗಿತ್ತೆಂದು ಭಾಷಣ ಬಿಗಿಯುತ್ತಾರೆ. ಅಂತಿರುವಾಗ ವಿಮೋಚನೆಯ ಸ್ವರ್ಣಜಯಂತಿ ಬರಲಿ ಅಥವಾ ಶತಮಾನೋತ್ಸವವೇ ಬರಲಿ ಅದು ಸಂತಸದ ಕ್ಷಣ ಹೇಗಾದೀತು?
ಇಂದು ರಾಷ್ಟ್ರಾಭಿಮಾನ, ಪ್ರಾದೇಶಿಕ ಅಭಿಮಾನಗಳು ಕೆಲವರಿಗಷ್ಟೇ ಸೀಮಿತವಾಗಿವೆ. ವಿಶಾಲ ಮನೋಭಾವದ ಹೆಸರಿನಲ್ಲಿ ವಿದೇಶಗಳನ್ನು ಅಪ್ಪಿಕೊಳ್ಳುವುದು ಹೆಚ್ಚಾಗಿದೆ.
ಇಷ್ಟರಲ್ಲೇ ಕೆಲವು ಸಂಘಟನೆಗಳು ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಸುವರ್ಣ ವರ್ಷವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿವೆ. ಹೊರಗಿನವರು ಎಂದು ಪಟ್ಟಗಟ್ಟಿಸಿಕೊಂಡಿರುವ ಕನ್ನಡಿಗರು ನೇತ್ರದಾನ ಎಂಬ ವಿಶಿಷ್ಟ ತ್ಯಾಗಪೂರ್ಣ ಕಾರ್ಯಕ್ರಮವನ್ನು ನೀಡುವ ಮೂಲಕ ತಮ್ಮ ಕರ್ಮಭೂಮಿ ಗೋಮಂತಕ ಮಾತೆಗೆ ಭಾವ ನಮನ ಸಲ್ಲಿಸಿದ್ದಾರೆ. ನಿಜಕ್ಕೂ ಇದೊಂದು ಶ್ಲಾಘನೀಯ ಕಾರ್ಯ. ನಮಗೆ ನೆರಳು ಕೊಡುವ ಮರಕ್ಕೆ ಒಂದು ಕೊಡ ನೀರನ್ನಾದರೂ ಹಾಕಬೇಕಲ್ಲವೆ?

No comments:

Post a Comment