Thursday, January 20, 2011

ವೇದಗಣಿತ ಋಷಿ - ಪ.ಪೂ. ಭಾರತೀಕೃಷ್ಣತೀರ್ಥರು


ಸನಾತನ ಕಾಲದಿಂದಲೂ ಭರತ ಭೂಮಿ ಜ್ಞಾನ ವಿಜ್ಞಾನಗಳ ನೆಲೆವೀಡು. ಭಾರತೀಯರು ಒಂದೆಡೆ ಆಧ್ಯಾತ್ಮ ಸಾಧನೆಯ ಮೂಲಕ ಪಾರಮಾರ್ಥಿಕ ಸುಜ್ಞಾನದ ಗೌರೀಶಂಕರವನ್ನೇರಿ ಮೆರೆಯುತ್ತಿದ್ದರೆ ಇನ್ನೊಂದೆಡೆ ಐಹಿಕ ಸುಖೋಪಭೋಗವನ್ನು ನೀಡುವ ವಿಜ್ಞಾನದ ಮೇರುಶಿಖರದ ಮೇಲೆಯೂ ವಿಜೃಂಭಿಸುತ್ತಿದ್ದಾರೆ. ಹೊರ ನೋಟಕ್ಕೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಪ್ರವಹಿಸುತ್ತಿರುವಂತೆ ತೋರುವ ಆಧ್ಯಾತ್ಮ ಮತ್ತು ವಿಜ್ಞಾನ ಪ್ರವಾಹಗಳು ಅಂತಿಮವಾಗಿ ಪರಮಾನಂದ ಸಾಗರವನ್ನೇ ಸೇರುತ್ತವೆ ಎಂಬುದು ಭಾರತೀಯ ಸಂಸ್ಕೃತಿಯ ವಿಶೇಷತೆ. ಅಂತೆಯೇ ಸನಾತನ ಕಾಲದಿಂದಲೂ ಆಧ್ಯಾತ್ಮ ಸಾಧನೆಗೈಯುತ್ತಲೇ ಲೌಕಿಕ ವಿಚಾರದಲ್ಲಿಯೂ ಕೃತಪರಿಶ್ರಮರಾದ ಋಷಿ ಪರಂಪರೆ ನಮ್ಮೀ ನಾಡಿನಲ್ಲಿ ಪ್ರವಹಿಸುತ್ತದೆ. ಅಂತಹ ಪರಂಪರೆಯಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಅವತರಿಸಿದವರು ಪ್ರಾಚೀನ ಅರ್ವಾಚೀನ ಜ್ಞಾನಸೇತುವಾಗಿ ಸುಜ್ಞಾನ - ವಿಜ್ಞಾನಗಳ ಸಂಗಮ ಮೂರ್ತಿಯಾಗಿ ಕಂಗೊಳಿಸಿದ ಶ್ರೀಮಚ್ಛಂಕರಾಚಾರ್ಯ ಶ್ರೀ ಭಾರತೀ ಕೃಷ್ಣ ತೀರ್ಥ ಸ್ವಾಮಿಗಳವರು . ಇವರು ಭಾರತದಲ್ಲಿ ಆಧ್ಯಾತ್ಮ ಜಾಗೃತಿ ಮೂಡಿಸಿದ ’ನವಯುಗ ಶಂಕರರು!’ ವಿದೇಶಗಳಲ್ಲಿ ಭಾರತೀಯ ಆಧ್ಯಾತ್ಮ ಸಂಸ್ಕೃತಿಯನ್ನು ಪಸರಿಸಿದ ದ್ವಿತೀಯ ವಿವೇಕಾನಂದರು.!!’ ವೈದಿಕಪದ್ದತಿಯಲ್ಲಿ ಗಣಿತವನ್ನು ಪುನರುಜ್ಜೀವನಗೊಳಿಸಿದ ’ಅಭಿನವ ಭಾಸ್ಕರಾಚಾರ್ಯರು!!!’
ತಮ್ಮ ಅತ್ಯಮೋಘ ಕಾರ್ಯಗಳಿಂದ ಭಾರತೀಯ ವಿದ್ವದ್ರತ್ನಗಳ ಸಾಲಿನಲ್ಲಿ ಶಾಶ್ವತ ಸ್ಥಾನಗಳಿಸಿದ ಪರಮಪೂಜ್ಯ ಭಾರತೀ ಕೃಷ್ಣ ತೀರ್ಥರ ಜೀವನ ವೃತ್ತಾಂತ ಒಂದು ರೋಮಾಂಚನಕಾರೀ ಕಥೆ. ಕ್ರಿ. ಶ. ೧೮೮೪ ಮಾರ್ಚ ೧೪ ಫಾಲ್ಗುಣ ಕೃಷ್ಣ ತೃತೀಯಾದಂದು ತಮಿಳುನಾಡಿನ ತಿನ್ನವೇಲಿ ಎಂಬ ಗ್ರಾಮದಲ್ಲಿ ಇವರ ಜನನವಾಯಿತು. ತಂದೆ ಪಿ. ನರಸಿಂಹ ಶಾಸ್ತ್ರಿಗಳು ತಿನ್ನವೇಲಿಯ ತಹಸೀಲ್ದಾರರಾಗಿದ್ದು ನಂತರ ತಿರುಚನಾಪಳ್ಳಿಯ ಡೆಪ್ಯುಟಿ ಕಲೆಕ್ಟರ್ ಆಗಿ ನಿವೃತ್ತರಾದರು. ಹತ್ತು ತಿಂಗಳಿರುವಾಗಲೇ ತನ್ನ ತಾಯಿಯನ್ನು ಕಳೆದುಕೊಂಡರು. ಇವರ ಬಾಲ್ಯ ನಾಮ ವೆಂಕಟರಮಣ. ತಂದೆ ನರಸಿಂಹ ಶಾಸ್ತ್ರಿಗಳು. ತಾಯಿಯ ಅಣ್ಣ ನ್ಯಾಯಮೂರ್ತಿ ರಂಗನಾಥ ಶಾಸ್ತ್ರಿಗಳು. ಇಬ್ಬರೂ ಸಂಸ್ಕೃತಜ್ಞರು. ಎರಡೂ ಮನೆಯ ಆಧ್ಯಾತ್ಮಿಕ ಪರಿಸರದಲ್ಲಿ ಅವರ ಮನೋಕುಸುಮದ ವಿಕಾಸವಾಯಿತು. ವಿಜ್ಞಾನವಿಷಯದಲ್ಲಿ ಆಸಕ್ತಿ ಬೆಳೆಸಿ ಕೊಳ್ಳುವುದರೊಂದಿಗೆ ಸಂಪ್ರದಾಯಬದ್ಧ ಸಂಸ್ಕೃತಾಭ್ಯಾಸವನ್ನೂ ಮಾಡಿದರು. ಶಾಲಾ ವಿಧ್ಯಾಭ್ಯಾಸದಲ್ಲಂತೂ ಅವರು ಯಾವಾಗಲೂ ಮೊದಲಿಗರು. ಕಿ.ಶ. ೧೮೯೯ ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಪ್ರಥಮ ಸ್ಥಾನದೊಂದಿಗೆ ಮೆಟ್ರಿಕ್ಯುಲೇಶನ್ ಪರೀಕ್ಷೆಯನ್ನು ಪಾಸು ಮಾಡಿದರು. ಅದೇ ವರ್ಷ ಅಂದರೆ ತಮ್ಮ ಹದಿನೈದನೆಯ ವಯಸ್ಸಿನಲ್ಲಿಯೇ ಪ್ರಗಲ್ಭ ಸಂಸ್ಕೃತ ಪಂಡಿತರಿಗೆ ’ಮದರಾಸು ಸಂಸ್ಕೃತ ಸಂಘ ’ ನೀಡುವ ’ಸರಸ್ವತಿ’ ಎಂಬ ಅಭಿದಾನಕ್ಕೆ ಅವರು ಪಾತ್ರರಾದರು. ತಿರುಚನಾಪಳ್ಳಿಯ ’ನ್ಯಾಶನಲ್ ಕಾಲೇಜ್ ’, ಚರ್ಚ್ ಮಿಶನರಿ ಸೊಸೈಟಿ ಕಾಲೇಜ್ ಹಾಗೂ ತಿನ್ನವೇಲಿಯ ಹಿಂದು ಕಾಲೇಜ್ ಗಳಲ್ಲಿ ಅಧ್ಯಯನ ನಡೆಸಿದ ಇವರು ಬಿ.ಎ. ಪರೀಕ್ಷೆಯಲ್ಲಿ ಸರ್ವೋಚ್ಚ ಸ್ಥಾನ ಪಡೆದು ನ್ಯೂಯಾರ್ಕಿನ " ಅಮೇರಿಕನ್ ಕಾಲೇಜ್ ಆಫ್ ಸೈನ್ಸ್‌ಸ್" ನ ಮುಂಬಯಿ ಕೇಂದ್ರದಲ್ಲಿ ಎಮ್. ಎ. ಅಧ್ಯಯನ ಮಾಡಿದರು. ೧೯೦೪ ರಲ್ಲಿ ಏಕಕಾಲದಲ್ಲಿ ಆರು ವಿಷಯಗಳಲ್ಲಿ ಸರ್ವೋಚ್ಛ ಅಂಕದೊಂದಿಗೆ ಎಮ್. ಎ. ಪದವಿಗಳನ್ನು ಪಡೆದ ದಾಖಲೆ ಇಂದಿಗೂ ಅಚ್ಚಳಿಯದೇ ನಿಂತಿದೆ. ಅಂದು ಅವರು ಆರಿಸಿಕೊಂಡ ವಿಷಯಗಳು ಸಂಸ್ಕೃತ, ತತ್ವಶಾಸ್ತ್ರ ಇಂಗ್ಲೀಷ್, ಗಣಿತ, ಇತಿಹಾಸ ಮತ್ತು ವಿಜ್ಞಾನ. ಅವರು ವಿದ್ಯಾಭ್ಯಾಸವನ್ನು ಮುಗಿಸಿದ ತಕ್ಷಣ ಬರೋಡಾ ಕಾಲೇಜಿನಲ್ಲಿ ಗಣಿತ ಹಾಗೂ ವಿಜ್ಞಾನ ಉಪನ್ಯಾಸಕ ಪದವಿ ಅವರನ್ನು ಕೈಬೀಸಿ ಕರೆಯಿತು. ಅದರಿಂದಾಗಿ ಅವರಿಗೆ ಅಲ್ಲಿಯೇ ಉಪನ್ಯಾಸಕರಾಗಿದ್ದ ಶ್ರೀ ಅರಬಿಂದೋ ಅವರ ಸಾಹಚರ್ಯ ದೊರೆಯಿತು. ಜೊತೆಗೆ ಗೋಪಾಲಕೃಷ್ಣ ಗೋಖಲೆ ಅಂತವರ ಪರಿಚಯ, ಕೆಚ್ಚೆದೆಯ ತರುಣರಾಗಿದ್ದ ವೆಂಕಟರಮಣರನ್ನು ಸ್ವಾತಂತ್ರ್ಯ ಹೋರಾಟದಲ್ಲಿಭಾಗವಹಿಸುವಂತೆ ಪ್ರೇರೇಪಿಸಿತು.
೧೯೦೫ ರ ರಾಷ್ಟ್ರೀಯ ಶಿಕ್ಷಣ ಆಂದೋಲನ ಹಾಗೂ ಬಂಗಾಳ ವಿಭಜನೆಯ ವಿರೋಧೀ ಚಳುವಳಿಯಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಪತ್ರಿಕೆಗಳಿಗೆ ಸಾಮಾಜಿಕ- ರಾಜಕೀಯ- ಆಧ್ಯಾತ್ಮ ಪರಿವರ್ತನೆಯ ಕುರಿತಾಗಿ ಲೇಖನಗಳನ್ನು ಬರೆಯುತ್ತಿದ್ದರು. ೧೯೦೯ರಲ್ಲಿ ನ್ಯಾಶನಲ್ ಕಾಲೇಜಿನ ಪ್ರಾಚಾರ್ಯರಾಗಿ ನಿಯುಕ್ತರಾದರು.
ಮಾನವ ಕುಲಕೋಟಿಯನ್ನು ಉದ್ಧರಿಸಬೇಕೆಂಬ ಅವರ ತುಡಿತ ಅವರನ್ನು ಬಲವಾದ ಆಧ್ಯಾತ್ಮಿಕ ಸೆಳೆತಕ್ಕೆ ಸಿಲುಕಿಸಿತ್ತು. ಆ ಆಕರ್ಷಣೆಯೇ ಅವgನ್ನು ಶೃಂಗೇರಿಯ ಶಂಕರಾಚಾರ್ಯ ಶ್ರೀ ಶ್ರೀ ಸಚ್ಛಿದಾನಂದ ಶಿವಾಭಿನವನೃಸಿಂಹ ಸರಸ್ವತಿಯವರ ಸನ್ನಿಧಾನದೊಡನೆ ಸೆಳೆದೊಯ್ದಿತು. ಮಧ್ಯೆ ಅವರ ಆಜ್ಞೆಯಂತೆಯೇ ರಾಜಮಂಡ್ರಿಯ ಕಾಲೇಜೊಂದರ ಪ್ರಾಂಶುಪಾಲರಾಗಿ ಕಾರ್ಯವನ್ನಾರಂಭಿಸಿದರೂ ಆಧ್ಯಾತ್ಮಜ್ಞಾನದ ಹಸಿವೆಯನ್ನು ತಡೆಯಲಾಗದೇ ಶೃಂಗೇರಿಗೆ ಮರಳಿ ಬಂದರು. ಶ್ರೀ ಶಾರದಾಂಬೆ ಪದತಲದಲ್ಲಿ ಕುಳಿತು ತೀವ್ರ ಅಧ್ಯಯನ ಸಾಧನೆಯಲ್ಲಿ ತೊಡಗಿದರು. ಅದು ಅವರ ಜೀವನದ ದಿಕ್ಕನ್ನೇ ಬದಲಿಸಿತು. ಶೃಂಗೇರಿಯ ಕಿಗ್ಗದ ಕಾಡಿನಲ್ಲಿ ಧ್ಯಾನಾಸಕ್ತರಾಗಿರುವಾಗಲೇ ಅವರಿಗೆ ವೇದಗಣಿತಗಳ ಸ್ಫುರಣೆಯಾದುದು. ಅದೇ ಮುಂದೆ ವೇದಗಣಿತ’ ಪದ್ಧತಿಯ ಆವಿಷ್ಕಾರಕ್ಕೆ ಕಾರಣೀಭೂತವಾಯಿತು. ಅನೇಕ ಸಂಘ ಸಂಸ್ಥೆಗಳು ಅವರ ಉಪನ್ಯಾಸ ಗಳನ್ನೇರ್ಪಡಿಸಿದವು. ಎಲ್ಲ ಕಡೆ ಆಧ್ಯಾತ್ಮ -ವಿಜ್ಞಾನಗಳನ್ನು ಸಮನ್ವಯಗೊಳಿಸಿ ಅವರು ಉಪನ್ಯಾಸ ನೀಡುತ್ತಿದ್ದರು. ನಂತರ ಸಂನ್ಯಾಸವೇ ಆತ್ಮಸಾಕ್ಷಾತ್ಕಾರಕ್ಕೆ ಉತ್ತಮ ಮಾರ್ಗವೆಂದು ಅರಿತ ವೆಂಕಟರಮಣ ಸರಸ್ವತಿಯವರು ಸಂನ್ಯಾಸ ದೀಕ್ಷೆ ಪಡೆಯಲು ತೀರ್ಮಾನಿಸಿದರು. ೧೯೧೯ರಲ್ಲಿ ಬನಾರಸ್ಸಿನಲ್ಲಿ ಶ್ರೀ ಶ್ರೀ ತ್ರಿವಿಕ್ರಮ ತೀರ್ಥರಿಂದ ಸಂನ್ಯಾಸ ದೀಕ್ಷೆ ಸ್ವೀಕರಿಸಿ ’ಭಾರತೀ ಕೃಷ್ಣ ತೀರ್ಥ’ರಾದರು.
ಭಾರತೀಕೃಷ್ಣ ತೀರ್ಥ ರ ವೈರಾಗ್ಯ ಸಂನ್ಯಾಸಗಳು ಮಾನವ ಜನಾಂಗದ ಸೇವೆಗೆ ಪೂರಕವಾಯಿತೇ ಹೊರತು ಬಾಧಕವಾಗಲಿಲ್ಲ. ಧರ್ಮಗಳಲ್ಲಿ ರಾಜಧರ್ಮವೂ ಒಂದು ಎಂದು ನಂಬಿದ್ದ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ೧೯೨೧ ಇವರು ದ್ವಾರಕಾ ಪೀಠದ ಅಧಿಪತಿಗಳಾಗಿ ನೇಮಕಗೊಂಡರೂ ಗೊಡ್ಡು ಸಂಪ್ರದಾಯಗಳನ್ನು ತಿರಸ್ಕರಿಸಿ ತಮ್ಮ ಹೋರಾಟಕಾರ್ಯವನ್ನು ಮುಂದುವರಿಸಿದರು. ಬ್ರಿಟಿಷರನ್ನು ಎದುರಿಸಲು ಹಿಂದೂ ಮುಸ್ಲಿಮರು ಒಂದಾಗಬೇಕು ಎಂಬ ಸತ್ಯವನ್ನು ಕಂಡುಕೊಂಡಿದ್ದ ಅವರು ಮುಸ್ಲಿಮ್ ಲೀಗ್ ನ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಖಿಲಾಪತ್ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಅಲಿ ಸಹೋದರರೊಂದಿಗೆ ಒಂದು ವರ್ಷಕಾಲ ಸೆರೆಮನೆ ವಾಸವನ್ನು ಅನುಭವಿಸಿದರು. ಸೆರೆಮನೆ ವಾಸವನ್ನು ಅನುಭವಿಸಿದ ಪ್ರಪ್ರಥಮ ಧಾರ್ಮಿಕ ಮುಖಂಡ ಎಂಬ ಹೆಗ್ಗಳಿಕೆ ಅವರದ್ದು. ಆ ಸಮದರ್ಭದಲ್ಲಿ ಅವರಿಗೆ ಸ್ಥಾನಮಾನವನ್ನು ನೀಡದೇ ಅವಮಾನಿಸಿದ್ದಕ್ಕಾಗಿ ರೊಚ್ಚಿಗೆದ್ದು ಬ್ರಿಟೀಷ್ ಮ್ಯಾಜಿಸ್ಟ್ರೇಟರ ಮುಂದೆ ಅವರಾಡಿದ ಬಿರುನುಡಿಗಳು ಅವರ ಧೀರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ ಚರಿತ್ರೆಯ ಪುಟಗಳಲ್ಲಿ ದಾಖಲೆಯಾಗಿದೆ.
ಕ್ರಿ. ಶ. ೧೯೨೫ ರಲ್ಲಿ ಪೂರ್ವಾಮ್ನಾಯ ಪೀಠ ಜಗನ್ನಾಥ ಪುರಿಯ ಗೋವರ್ಧನ ಪೀಠದ ಶಂಕರಾಚಾರ್ಯ ಶ್ರೀ. ಶ್ರೀ.ಮಧುಸೂದನ ತೀರ್ಥರ ಉತ್ತರಾಧಿಕಾರಿಯಾಗಿ ಇವರು ನಿಯುಕ್ತರಾದರು. ರಾಜಕೀಯ ದಾಸ್ಯದಿಂದ ವಿಮುಕ್ತರಾಗುವುದರ ಜೊತೆಗೆ ಬೌದ್ಧಿಕ ಗುಲಾಮಗಿರಿಯಿಂದಲೂ ಜನರನ್ನು ಬಿಡುಗಡೆಗೊಳಿಸುವುದು ಅಗತ್ಯವೆಂದು ಮನಗೊಂಡ ಅವರು ದೇಶಾದ್ಯಂತ ಸಂಚರಿಸಿತ್ತು ವಿವಿಧ ವರ್ಗದ ಜನರೊಡನೆ ಬೆರೆತು ಅವರ ಕಷ್ಟ ಸುಖಗಳಲ್ಲಿ ಪಾಲ್ಗೊಂಡು, ಅವರಿಗೆ ಭಾರತದ ಪರಂಪರೆಯ ಹಿರಿಮೆಯನ್ನು ಮನಗಾಣಿಸಿಕೊಡಲಾರಂಭಿಸಿದರು. ಸ್ವಾತಂತ್ರ್ಯ ದೊರೆತ ಮೇಲೂ ಅವರ ಈ ಪರಿಕ್ರಮ ಮುಂದುವರೆಯಿತು. ೧೯೫೩ ರಲ್ಲಿ ನಾಗಪುರದಲ್ಲಿ "ವಿಶ್ವ ಪುನರ್ ನಿರ್ಮಾಣ ಸಂಘ" ವನ್ನು ಸ್ಥಾಪಿಸಿ ತಮ್ಮ ಸಮಾಜ ಸೇವೆಗೊಂದು ಹೊಸ ಆಯಾಮವನ್ನಿತ್ತರು.
ಸ್ವಾಮೀಜಿಯವರ ಪ್ರವಚನ - ವ್ಯಕ್ತಿತ್ವಗಳಿಂದ ಪ್ರಭಾವಿತರಾದ ಅನೇಕ ವಿದೇಶೀಯರು ಅವರನ್ನು ತಮ್ಮ ದೇಶಕ್ಕೆ ಆಹ್ವಾನಿಸತೊಡಗಿದರು. ೧೯೫೮ ರಲ್ಲಿ ಲಾಸ್ ಏಂಜಲೀಸ್ ನ ಶ್ರೀಮತಿ ದಯಾಮಾತಾ ರವರು ಸ್ವಾಮೀಜಿಯವರ ಅಮೇರಿಕಾ ಯಾತ್ರೆಯನ್ನು ಏರ್ಪಡಿಸಿದರು. ಹೀಗೆ ವಿದೇಶ ಪ್ರಯಾಣ ಮಾಡಿದ ದ್ವಿತೀಯ ಸಂನ್ಯಾಸಿ ಹಾಗೂ ಪ್ರಥಮ ಶಂಕರಾಚಾರ್ಯರು ಇವರು. ಅಮೇರಿಕಾದ ಅನೇಕ ವಿಶ್ವವಿದ್ಯಾಲಯ- ಮಹಾ ವಿದ್ಯಾಲಯಗಳಲ್ಲಿಯೂ ವೇದಾಂತ ಸೊಸೈಟಿ ಮೊದಲಾದ ಸಂಘಗಳ ಆಶ್ರಯದಲ್ಲಿಯೂ ಸ್ವಾಮೀಜಿಯವರು ಉಪನ್ಯಾಸ ನೀಡಿದರು. ಮತ್ತೊಮ್ಮೆ ಅಮೇರಿಕಾ ದಲ್ಲಿ ಭಾರತೀಯ ತತ್ವಶಾಸ್ತ್ರ ಸಂಸ್ಕೃತಿಗಳ ಕಹಳೆ ಮೊಳಗಿತು. ಆಧ್ಯಾತ್ಮಿಕ ಕ್ಷೇತ್ರದಲ್ಲಷ್ಟೇ ಅಲ್ಲದೇ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲೂ ತಾವೇನೂ ನಿಮಗಿಂತ
ಕಮ್ಮಿಯಿಲ್ಲ ಎಂಬುದನ್ನು ವಿದೇಶೀಯರಿಗೆ ಮನವರಿಕೆ ಮಾಡಿಕೊಟ್ಟರು. ಇಂಗ್ಲೀಷ್ ಮತ್ತು ಸಂಸ್ಕೃತಗಳಲ್ಲಿ ಅಗಾಧ ಪಾಂಡಿತ್ಯ ಗಳಿಸಿದ್ದ ಅವರ ಅಸ್ಖಲಿತ ಧೀರವಾಣಿ ಅಮೇರಿಕಾದ್ಯಂತ ಜಯಭೇರಿ ಬಾರಿಸಿತು. ಅವರ "ವೇದಗಣಿತ" ಅಮೇರಿಕನ್ನರನ್ನು ವಿಶೇಷವಾಗಿ ಆಕರ್ಷಿಸಿತು.
ಶ್ರೀ ಭಾರತೀ ಕೃಷ್ಣ ತೀರ್ಥರು ಎಲ್ಲ ಕ್ಷೇತ್ರಗಳಲ್ಲೂ ಪರಿಣಿತಿ ಸಾಧಿಸಿದವರು. ವಿಜ್ಞಾನ-ಗಣಿತ, ರಾಜಕೀಯ, ಆಧ್ಯಾತ್ಮ ಮುಂತಾದ ಎಲ್ಲ ಕ್ಷೇತ್ರಗಳಿಗೂ ತಮ್ಮ ಅಮೂಲ್ಯ ಕೊಡುಗೆ ನೀಡಿದವರು. ಅವರು ಸನಾತನ ಧರ್ಮ, ಸ್ತೋತ್ರಭಾರತೀ ಕಂಠಹಾರ, ವೇದಿಕ್ ಮೆಟಾಫಿಸಿಕ್ಸ್, ಮುಂತಾದ ಅನೇಕ ಗ್ರಂಥಗಳನ್ನು ಇಂಗ್ಲೀಷಿನಲ್ಲೂ ಸಂಸ್ಕೃತದಲ್ಲೂ ಬರೆದಿದ್ದಾರೆ. ಅವರ ಗ್ರಂಥಗಳ ಸಾಲಿನಲ್ಲಿ ಅದ್ವಿತೀಯವೂ ಅಮೂಲ್ಯವೂ ಆದ ಗ್ರಂಥ "ವೇದಗಣಿತ". ಶೃಂಗೇರಿಯಲ್ಲಿ ತಪೋನಿರತರಾಗಿದ್ದಾಗ ಸ್ಫುರಿಸಿದ ಅಲ್ಪಾಕ್ಷರವೂ ಅಸಂದಿಗ್ಧವೂ ಆಗಿರುವ ಹದಿನಾರು ಮುಖ್ಯ ಸೂತ್ರ ಹಾಗೂ ಹದಿಮೂರು ಉಪಸೂತ್ರಗಳನ್ನೂ ಆಧರಿಸಿ ಕ್ಲಿಷ್ಟಗಣಿತ ಸಮಸ್ಯೆಗಳನ್ನು ಕ್ಷಿಪ್ರಗತಿಯಲ್ಲಿ ಬಿಡಿಸುವ ವಿಧಾನವನ್ನು ಈ ಕೃತಿಯು ವಿವರಿಸುತ್ತದೆ.
ನಿರಂತರ ಪ್ರವಾಸ ಸ್ವಾಮೀಜಿಯವರನ್ನು ಅನಾರೋಗ್ಯಕ್ಕೆ ಒಳಪಡಿಸಿತ್ತು. ಉತ್ತರಾಯಣ ಮಾಘ ಶುದ್ಧ ಪಂಚಮಿ ಅಂದರೆ ವಸಂತ ಪಂಚಮಿಯ ಪುಣ್ಯಕಾಲ (ದಿನಾಂಕ ೨ ಫೆಭ್ರವರಿ ೧೯೬೦) ಮುಂಬಯಿಯಲ್ಲಿ ಅವರು ದೇಹವನ್ನು ತ್ಯಜಿಸಿ ಪರಂಜ್ಯೋತಿಯಲ್ಲಿ ಲೀನವಾದರು. ಭರತಭೂಮಿಯಲ್ಲಿ ಅವತಾರವೆತ್ತಿದ ಋಷಿಕಲ್ಪ ಧೀಮಂತರ ಸಾಲಿನಲ್ಲಿ ಅಚ್ಚಳಿಯದ ಕೀರ್ತಿಯನ್ನು ಸ್ಥಾಪಿಸಿ ಭೌತಿಕವಾಗಿ ಕಣ್ಮರೆಯಾದರು. ಪ್ರಪಂಚದಾದ್ಯಂತ ಭಾರತೀಯ ತತ್ವಶಾಸ್ತ್ರದ ಕಂಪನ್ನು ಪಸರಿಸಿ ’ಜಗದ್ಗುರು’ ಪದವನ್ನು ಅನ್ವರ್ಥಗೊಳಿಸಿದ ಮಹಾಮಹಿಮರು ಸ್ವಾಮೀಜಿಯವರು. ಅವರು ಲೋಕಕ್ಕೆ ನೀಡಿದ ಕಾಣಿಕೆ ಸಾರ್ವಕಾಲಿಕ ಮಾರ್ಗದರ್ಶಕಗಳು. ಅಂತಹ ದಿವ್ಯಜ್ಯೋತಿಗಿದೋ ನುಡಿನಮನ!

೧. ಏಕಾಧಿಕೇನ ಪೂರ್ವೇಣ
೨. ನಿಖಿಲಂ ನವತ: ಚರಮಂ ದಶತ:
೩. ಊರ್ಧ್ವತಿರ್ಯಗ್ಭ್ಯಾಮ್
೪. ಪರಾವರ್ತ್ಯ ಯೋಜಯೇತ್
೫. ಶೂನ್ಯಂ ಸಾಮ್ಯ ಸಮುಚ್ಚಯೇ
೬. ಶೂನ್ಯಮನ್ಯತ್
೭. ಸಂಕಲನವ್ಯವಕಲನಾಭ್ಯಾಮ್
೮. ಪೂರಣಾಪೂರಣಾಭ್ಯಾಮ್
೯. ಚಲನಕಲನಾಭ್ಯಾಮ್
೧೦. ಯಾವದೂನಮ್
೧೧. ವ್ಯಷ್ಟಿಸಮಷ್ಟಿ:
೧೨. ಶೇಷಾಣ್ಯಂಕೇನ ಚರಮೇಣ
೧೩. ಸೋಪಾಂತ್ಯದ್ವಯಮಂತ್ಯಮ್
೧೪. ಏಕನ್ಯೂನೇನ ಪೂರ್ವೇಣ
೧೫. ಗುಣಿತಸಮುಚ್ಚಯ:
೧೬. ಗುಣಕಸಮುಚ್ಚಯ:

ಏಕಾಧಿಕೇನ ಪೂರ್ವೇಣ
ಈ ಸೂತ್ರವನ್ನು ಅನೇಕ ಸಂದರ್ಭಗಳಲ್ಲಿ ಉಪಯೋಗಿಸಬಹುದು. ೫ ರಿಂದ ಕೊನೆಗೊಳ್ಳುವ ಸಂಖ್ಯೆಗಳ ವರ್ಗವನ್ನು ಕಂಡುಹಿಡಿಯಲು ಈ ಸೂತ್ರ ಉಪಯುಕ್ತವಾಗಿದೆ.
ಉದಾಹರಣೆಗೆ ೨೫ರ ವರ್ಗವನ್ನು ಕಂಡುಹಿಡಿಯಲು ಈಗಿನ ಪದ್ಧತಿಯ ಪ್ರಕಾರ ೨೫ನ್ನು ೨೫ರಿಂದ ಗುಣಿಸಬೇಕು.
೨೫*೨೫
೧೨೫
೫೦+
೬೨೫
ಇದನ್ನೇ ವೇದಗಣಿತ ಪದ್ಧತಿಯಲ್ಲಿ ಸರಳವಾಗಿ ಮಾಡಬಹುದು.
೨೫೨=೨*(೨+೧) /೨೫
= ೨*೩/೨೫
=೬/೨೫=೬೨೫
೨೫ ಎಂಬ ಸಂಖ್ಯೆಯಲ್ಲಿ ಎರಡು ಅಂಕೆಗಳಿವೆ. ೨ ಎನ್ನುವುದು ಪೂರ್ವ ಅಂಕೆ, ೫ ಎನ್ನುವುದು ಪರ ಅಂಕೆ. ಐದರಿಂದ ಕೊನೆಗೊಳ್ಳುವ ಸಂಖ್ಯೆಯ ವರ್ಗದ ಕೊನೆಯಲ್ಲಿ ೨೫ ಇರುತ್ತದೆ. ಇದು ಸಾಮಾನ್ಯ ನಿಯಮವಾದ್ದರಿಂದ ಸೂತ್ರದ ಆವಶ್ಯಕತೆಯಿಲ್ಲ. ಹಾಗಾಗಿ ನಾವು ಉತ್ತರದಲ್ಲೂ / ಚಿಹ್ನೆಯ ಮೂಲಕ ಎರಡು ಭಾಗಗಳನ್ನು ಮಾಡಿದರೆ ಬಲಭಾಗದಲ್ಲಿ ನೇರವಾಗಿ ೨೫ನ್ನು ಬರೆಯಬಹುದು.
/ ಚಿಹ್ನೆಯ ಎಡಭಾಗದಲ್ಲಿರುವ ಸಂಖ್ಯೆಯನ್ನು ಪಡೆಯಲು ಮೇಲಿನ ಸೂತ್ರವನ್ನು ಉಪಯೋಗಿಸಬೇಕು. ಪೂರ್ವದ ಅಂಕೆಯನ್ನು ಅದಕ್ಕಿಂತ ಒಂದು ಹೆಚ್ಚಿನ ಅಂಕೆಯಿಂದ ಗುಣಿಸಬೇಕು ಎಂಬುದು ಸೂತ್ರದ ಅರ್ಥ.
ಪೂರ್ವದ ಅಂಕೆ ೨. ಅದಕ್ಕಿಂತ ಒಚಿದು ಹೆಚ್ಚು ಅಂದರೆ ೩. ಹಾಗಾಗಿ ೨ಘಿ೩ ಎಂದು ಮಾಡಿದರೆ ೬ ಸಿಗುತ್ತದೆ. ಅದು ಉತ್ತರದ ಎಡಭಾಗ. ಹಾಗಾಗಿ ನಮ್ಮ ಉತ್ತರ ೬೨೫.ಇದೇ ರೀತಿಯಲ್ಲಿ ೩೫*೩೫, ೪೫*೪೫ ೫೫*೫೫, ೧೦೫*೧೦೫ಮುಂತಾದ ಲೆಖ್ಖಗಳನ್ನು ಬಿಡಿಸಿ ನೋಡಿ.

ಮಹಾಬಲ ಭಟ್

No comments:

Post a Comment