Monday, June 14, 2010

ಜೀವನದಲಂಕಾರ ಮನಸಿನುದ್ಧಾರ
ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ‘ಧರ್ಮ’ ಎಂಬುದಿರುತ್ತದೆ. ‘ಧರ್ಮ’ ಎಂದಾಕ್ಷಣ ’ಖeಟigioಟಿ’ಎಂದು ಅರ್ಥೈಸಿ ಇದೇನು ಜಡ ವಸ್ತುವಿಗೂ ಧರ್ಮವೇ? ಇಂದು ಹುಬ್ಬೇರಿಸದಿರಿ. ನಾನು ‘ಧರ್ಮ’ ಪದವನ್ನು ಬಳಸಿದ್ದು ‘ಸ್ವಭಾವ’, ‘ಕರ್ತವ್ಯ’ ಎಂಬರ್ಥದಲ್ಲಿ. ಸುಡುವುದು ಬೆಂಕಿಯ ಧರ್ಮ, ಬೀಸುವುದು ಗಾಳಿಯ ಧರ್ಮ, ಕಲಿಸುವುದು ಶಿಕ್ಷಕನ ಧರ್ಮ, ಪ್ರಜೆಗಳನ್ನು ರಕ್ಷಿಸುವುದು ರಾಜಧರ್ಮ ಇತ್ಯಾದಿಯಾಗಿ ‘ಧರ್ಮ’ ಶಬ್ದವನ್ನು ನಾವು ಪ್ರಯೋಗಿಸುತ್ತೇವೆ. ಹಾಗಾದರೆ ಖeಟigioಟಿ ಎಂಬ ಪದಕ್ಕೆ ಪರ್ಯಾಯವಾಗಿ ಧರ್ಮ ಪದವನ್ನು ಬಳಸುವುದು ಶುದ್ಧ ತಪ್ಪೇ?. ಈ ಪ್ರಶ್ನೆಗೆ ಉತ್ತರಿಸಬೇಕಾದರೆ ‘ಧರ್ಮ’ ಪದದ ಅರ್ಥದ ಆಳಕ್ಕೆ ಇಳಿಯಬೇಕು. ಯತೋಽ ಭ್ಯುದಯನಿಃಶ್ರೇಯಸಸಿದ್ಧಿಃ ಸ ಧರ್ಮಃ ಎಂದಿದ್ದಾರೆ ಪ್ರಾಜ್ಞರು. ‘ಯಾವುದರಿಂದ ಇಹಲೋಕದಲ್ಲಿ ಅಭ್ಯುದಯವೂ, ಪರಲೋಕದಲ್ಲಿ ಮೋಕ್ಷವೂ ದೊರಕುವುದೋ ಅದೇ ‘ಧರ್ಮ’ ಅಂದರೆ ನಮ್ಮ ಯಾವ ವ್ಯವಹಾರದಿಂದ ನಮಗೆ ಶ್ರೇಯಸ್ಸುಂಟಾಗುತ್ತದೋ ಆ ಆಚರಣೆ ನಮ್ಮ ಧರ್ಮ. "ಧಾರಣಾತ್ ಧರ್ಮ ಇತ್ಯಾಹುಃ ಧರ್ಮೋ ಧಾರಯತಿ ಪ್ರಜಾಃ" ಎಂಬುದು ಇನ್ನೊಂದು ವ್ಯಾಖ್ಯೆ. ಯಾವುದು ನಮ್ಮನ್ನೆಲ್ಲ ಧರಿಸುತ್ತದೋ, ಅಥವಾ ಯಾವುದನ್ನು ನಾವು ಅವಿನಾಭಾವದಿಂದ ಧರಿಸುತ್ತೇವೋ ಅದೇ ಧರ್ಮ. ಹಿಂದೆ ತೆಗೆದುಕೊಂಡ ಉದಾಹರಣೆಯನ್ನೇ ಗಮನಿಸಿ. ಸುಡುವ ಸ್ವಭಾವ ಹಾಗೂ ಬೆಂಕಿ ಅವಿನಾಭಾವದಿಂದ ಬೆಸೆದುಕೊಂಡಿದೆ. ಹಾಗಾಗಿ ಸುಡುವುದು ಬೆಂಕಿಯ ಧರ್ಮವೆನ್ನುತ್ತೇವೆ. ಅದರಂತೆ ಯಾವ ಸ್ವಭಾವ-ಆಚರಣೆ-ವ್ಯವಹಾರಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಇರಬೇಕೋ ಅದೇ ‘ಧರ್ಮ’. ಹಾಗಾಗಿ ಧರ್ಮಾಚರಣೆ ಐಚ್ಛಿಕವಲ್ಲ ಅನಿವಾರ್ಯ.
ರಿಲಿಜನ್ ಎಂಬರ್ಥದಲ್ಲಿ ‘ಧರ್ಮ’ ಪದವನ್ನು ತೆಗೆದುಕೊಂಡರೂ ಮೇಲಿನ ವ್ಯಾಖ್ಯೆಯೊಂದಿಗೆ ಸಮನ್ವಯಿಸಬಹುದು. ಯಾವುದೇ ಸಾಮಾಜಿಕ ವ್ಯವಸ್ಥೆಯಲ್ಲಿ ಅದರಲ್ಲಿಯೂ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ‘ಮತ’ ಕ್ಕೊಂದು ವಿಶಿಷ್ಟ ಮಹತ್ವವಿದೆ. ವ್ಯಕ್ತಿಯೊಬ್ಬ ಯಾವುದಾದರೊಂದು ‘ಮತ’ಕ್ಕೇ ಸೇರಿರಲೇ ಬೇಕು. ತಾನು ಇಂತಹ ಮತಕ್ಕೆ ಸೇರಿದವನೆಂದು ಹೇಳಿಕೊಳ್ಳಲು ಇಷ್ಟಪಡದವರು ಕೆಲವೇ ಮಂದಿ. (ಬೇರೆ ಬೇರೆ ಕಾರಣಗಳಿಂದ ಹೊgಗಡೆ ಇಷ್ಟವಿಲ್ಲದಂತೆ ತೋರಿಕೊಂಡರೂ ಒಳಗಡೆ ಆ ಪ್ರಜ್ಞೆ ಇದ್ದೇ ಇರುತ್ತದೆ) ಕೆಲವರು ತಮ್ಮನ್ನು ಯಾವುದೇ ಮತದೊಂದಿಗೆ ಗುರುತಿಸಿಕೊಳ್ಳದಿದ್ದರೂ ಯಾವುದಾದ ರೊಂದು ಮತವನ್ನು ಮೆಚ್ಚಬಹುದು. ಇಂದು ಒಂದು ಮತದಲ್ಲಿ ಅತೃಪ್ತರಾದವರು ತಟಸ್ಥರಾಗಿರದೆ ಮತಾಂತರ ಹೊಂದು ತ್ತಿರುವುದೇ ಈ ವಾದವನ್ನು ಪುಷ್ಟಿಗೊಳಿಸುತ್ತದೆ. ಹಾಗಾಗಿ ೯೦% ಮಂದಿ ಒಂದಲ್ಲ ಒಂದು ರೀತಿಯಲ್ಲಿ ಧರ್ಮಾಚರಣೆಯನ್ನು ಮಾಡುತ್ತಾರೆ. ರಿಲಿಜನ್‌ನಲ್ಲಿರುವ ಉಪದೇಶಗಳು ನಮ್ಮ ಅಭ್ಯುದಯ - ನಿಃಶ್ರೇಯಸಗಳಿಗೆ ಕಾರಣಗಳಾಗುವುದರಿಂದ ಅವೂ ಕೂಡ ‘ಧರ್ಮ’ವೇ. ಕೆಲವು ಚಾರ್ವಾಕ ಮತಗಳನ್ನು ಬಿಟ್ಟರೆ ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಇರುವ ಪ್ರಮುಖ ಅಂಶ - ‘ದೇವರು’. ಮಾನವಶಕ್ತಿಯನ್ನು ಮೀರಿದ ಶಿಷ್ಟಶಕ್ತಿಯನ್ನು ದೇವರೆಂದೂ ದುಷ್ಟಶಕ್ತಿಯನ್ನು ದಾನವರೆಂದೂ ಎಲ್ಲ ಧರ್ಮಗಳೂ ಒಪ್ಪಿವೆ. ಈ ದೇವರ ಕಲ್ಪನೆ (ಇದು ಕಲ್ಪನೆಯೋ ವಾಸ್ತವವೋ ಎಂಬ ಚರ್ಚೆ ಈ ಲೇಖನದ ವ್ಯಾಪ್ತಿಗೆ ಮೀರಿದ್ದು) ನಮ್ಮ ಜೀವನದಲ್ಲಿ ಅನೇಕ ಚಟುವಟಿಕೆಗಳನ್ನು ತಂದಿತ್ತಿದೆ. ಪೂಜೆ-ಪುನಸ್ಕಾರ-ಪ್ರಾರ್ಥನೆ ಇವೆಲ್ಲ ಧರ್ಮಾಚರಣೆಯ ಅಂಗಗಳಾಗಿವೆ. ಇವೆಲ್ಲ ಜೀವನದಲ್ಲಿ ಯಾಕೆ ಬೇಕು ಎಂಬುದಕ್ಕೆ ಡಿವಿಜಿ ಉತ್ತರಿಸುತ್ತಾರೆ
ದೇವ ಮಂದಿರ ಭಜನೆ ಪೂಜೆಪ್ರಸಾದಗಳು
ಜೀವನದಲಂಕಾರ ಮನಸಿನುದ್ಧಾರ |
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು
ದಾವುದಾದೊಡಮೊಳಿತು - ಮಂಕುತಿಮ್ಮ ||
ಎಲ್ಲ ಧರ್ಮಗಳಲ್ಲಿಯೂ ಹೇಳಿರುವ ಅಂತಿಮ ಪುರುಷಾರ್ಥ ಮೋಕ್ಷವೇ. ಈ ಮೋಕ್ಷದ ಕಲ್ಪನೆ ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆಯಾಗಿರಬಹುದು. ಧರ್ಮಾಚರಣೆ, ಅರ್ಥಸಂಗ್ರಹ, ಕಾಮಸಂತೃಪ್ತಿ ಇವೆಲ್ಲ ಮೋಕ್ಷಕ್ಕೆ ಮಾರ್ಗಗಳೆಂದು ವೇದಗಳು ಸಾರುತ್ತವೆ. ಧರ್ಮ ರಹಿತ ಅರ್ಥಸಂಗ್ರಹ, ಕಾಮಾಚರಣೆಗಳು ನಿಷಿದ್ಧ ಹಾಗೂ ಪಾಪಕ್ಕೆ ಮೂಲ. ಜೀವನದ ಪ್ರತಿಯೊಂದು ಹೆಜ್ಜೆಯೂ ಧರ್ಮದೊಡಗೂಡಿ ಇರುವುದು ಮುಖ್ಯ. ಧರ್ಮಾಚರಣೆ ಎಂದಾಕ್ಷಣ ಉಪವಾಸ ವ್ರತ-ಭಜನೆಗಳೇ ಅಲ್ಲ. ಅವೆಲ್ಲ ಜೀವನಕ್ಕೊಂದು ಅಲಂಕಾರ ಹಾಗೂ ನಮ್ಮ ಮನಸ್ಸನ್ನು ಕ್ಷುಲ್ಲಕ ವಿಚಾರಗಳಿಂದ ದೂರೊಯ್ವ ಸಾಧನUಳಷ್ಟೆ. ಮಂಕುತಿಮ್ಮನೆಂದಂತೆ
- ‘ವೇದಗಳು ಶಾಸ್ತ್ರಗಳು ಲೋಕ ನೀತಿಗಳೆಲ್ಲ ಹಾದಿತೋರಲು ನಿಶಿಯೊಳುರಿವ ಪಂಜುಗಳು’. ಮಾನವೀಯತೆಯ ನಭಕ್ಕೇರಿದವನು ತಾನೆಂಬ ವಿಶ್ವಾಸ ವಿರುವವನಿಗೆ ಆ ಪಂಜುಗಳ ಅವಶ್ಯಕತೆಯಿಲ್ಲ. ಆದರೆ ವಿಚಾರವಾದಿ ಯೆಂದು ಸೋಗು ಹಾಕಿ ಧರ್ಮಾಚರಣೆ ಮೌಢ್ಯದ ಸಂಕೇತವೆಂದು ಅಬ್ಬರಿಸುವವರು ಮೂರ್ಖರಲ್ಲದೆ ಇನ್ನಾರು? ನೈಜವಾದ ಧರ್ಮಾಚರಣೆಯೊಂದಿಗೆ ಕಾಲಾಂತರದಲ್ಲಿ ಮೌಢ್ಯವೂ ಸೇರಿಕೊಂಡಿದೆ ಎಂಬುದು ನಿಜ. ಕೆಲವು ದಿನಗಳ ಹಿಂದೆ ಹಿಂದೂ ಧರ್ಮದ ಹುಳುಕನ್ನು ಹುಡುಕುವುದರಲ್ಲಿಯೇ ಆಸಕ್ತರಾಗಿರುವ ನನ್ನ ಮಿತ್ರರೊಬ್ಬರು ಅಪ್ಪಣೆ ಮಾಡಿದರು - ‘ದೇವದಾಸಿ ಪದ್ಧತಿ ನಮ್ಮ ಸಂಸ್ಕೃತಿಯಲ್ಲೇ ಇದೆ. ಇದು ಧಾರ್ಮಿಕವಾಗಿ ಅಂಗೀಕೃತವಾದ ಪದ್ಧತಿ’ ಎಂಬುದಾಗಿ. ಅವರ ಇತಿಹಾಸಜ್ಞಾನ ನೋಡಿ ಮನ ಮರುಗಿತು. ಹೌದು, ದೇವದಾಸಿಯಂತಹ ಅನೇಕ ಅನಿಷ್ಟ ಪದ್ಧತಿಗಳು ಧರ್ಮಾಚರಣೆಯ ಒಂದು ಅಂಗ ಎಂದು ಚರ್ಮದ ಕಣ್ಣುಗಳಿಗೆ ಗೋಚರವಾಗುವಂತೆ ಬೆಸೆದುಕೊಂಡು ಬಿಟ್ಟಿವೆ. ಇದು ಪವಿತ್ರ ಗಂಗಾನದಿಗೆ ಕಾಶಿಯ ಕೊಚ್ಚೆಯ ನೀರು ಸೇರಿಕೊಂಡಂತೆ. ಆದರೆ ಇವೆಲ್ಲ ಕಾಲಾಂತರದಲ್ಲಿ ಸ್ವಾರ್ಥಿ ಮನುಷ್ಯರಿಂದ ಸೃಷ್ಟಿಯಾದ ಅನಿಷ್ಟ ಆಚರಣೆಗಳು ಎಂಬ ನೀರಕ್ಷೀರ ವಿಭಾಗ ಜ್ಞಾನ ಈ ವಿಚಾರವಾದಿಗಳಿಗಿಲ್ಲ. ನನ್ನ ಅಭಿಪ್ರಾಯದಂತೆ ಪ್ರತಿಯೊಂದು ಧರ್ಮವೂ ವೈಚಾರಿಕ ಹಾಗೂ ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾಗಿದೆ. ಪ್ರಾಣಿಬಲಿ, ನರಬಲಿ, ಜಿಹಾದ್‌ಗಳನ್ನು ಯಾವ ಧರ್ಮವೂ ಪುರಸ್ಕರಿಸುವುದಿಲ್ಲ. ಇಂದಿನ ’ವೋಟ್‌ಬ್ಯಾಂಕ್’ ರಾಜಕೀಯದಲ್ಲಿ ಕೇಳಿಬರುತ್ತಿರುವ ಒಂದು ಪ್ರಮುಖ ಶಬ್ದ - ’ಧರ್ಮ ನಿರಪೇಕ್ಷತೆ’. ರಾಜಕೀಯದಲ್ಲಿ ಧರ್ಮ ನುಸುಳಬಾರದು ಎಂಬುದರ ಅರ್ಥ ಅಧರ್ಮದ ರಾಜಕೀಯ ಮಾಡಬೇಕೆಂದೆ? ನಿಮಗೆ ಗೊತ್ತೆ. ಸಂಸತ್ತಿನ ಸಭಾಧ್ಯಕ್ಷರ ಪೀಠದ ಮೇಲ್ಗಡೆ ಬರೆದಿರುವ ಸಂಸತ್ತಿನ ಧ್ಯೇಯವಾಕ್ಯ ‘ಧರ್ಮಚಕ್ರ ಪ್ರವರ್ತನಾಯ!’. ಅಲ್ಲಿಯೇ ಕುಳಿತು ರಾಜಕೀಯ ಮಾಡುವವರು ’ಧರ್ಮ ನಿರಪೇಕ್ಷತೆ’ಯ ಮಾತನಾಡುವುದು ಹಾಸ್ಯಾಸ್ಪದವಲ್ಲವೆ? ನಮಗಿಂದು ಬೇಕಾಗಿರುವುದು ಧರ್ಮನಿರಪೇಕ್ಷತೆಯಲ್ಲ, ಪರಧರ್ಮಸಹಿಷ್ಣುತೆ ಅಷ್ಟೆ.
ಇಡೀ ಭಗವದ್ಗೀತೆಯ ತಿರುಳು - ‘ಅರ್ಜುನ! ನಿನ್ನ ಕ್ಷತ್ರಿಯ ಧರ್ಮವನ್ನು ಪಾಲಿಸು’ ಎಂಬುದು. ಇದು ಸಾಲದೆ ನಮಗೆ ಧರ್ಮಮಾರ್ಗದಲ್ಲಿ ನಡೆಯಲು? ಎಡಗೆನ್ನೆಗೆ ಹೊಡೆದಾಗ ಬಲಗೆನ್ನೆಯನ್ನು ತೋರುವುದು ಮಾತ್ರ ಧರ್ಮವಲ್ಲ. ಅನ್ಯಾಯವಾದಾಗ ಎದುರಿಸುವುದೂ ಧರ್ಮವೇ. ಧರ್ಮಾಚರಣೆಗಳೆಲ್ಲ ಮೌಢ್ಯಗಳು ಎಂದು ಮೂಗು ಮುರಿಯದೆ ಮಣ್ಣನ್ನು ಸರಿಸಿ ಚಿನ್ನವನ್ನು ಪಡೆಯುವಂತೆ ಮೂಢನಂಬಿಕೆಗಳನ್ನು ನಿವಾರಿಸಿ ಶುದ್ಧ ಧರ್ಮಾಚರಣೆಯಲ್ಲಿನಮ್ಮನ್ನು ತೊಡಗಿಸಿಕೊಳ್ಳೋಣ. || ಧರ್ಮೋ ರಕ್ಷತಿ ರಕ್ಷಿತಃ ||
-ಮಹಾಬಲ ಭಟ್

No comments:

Post a Comment