Monday, June 14, 2010

ಹೀಗೂ ಉಂಟು ಒಂದು ನಿಘಂಟು!
ಎಷ್ಟೋ ಸಲ ಹಠಾತ್ತಾಗಿ ನೆನಪಾದ ಏನೋ ಒಂದು ಕೆಲಸವನ್ನು ಮಾಡ ಹೋಗುತ್ತೇವೆ-ಅದೂ ಕೈಲಿದ್ದ ಕೆಲಸವನ್ನು ಬಿಟ್ಟು. ಆದರೆ ಅದು ಯಾವ ಕೆಲಸವೆಂಬುದನ್ನೇ ಮರೆಯುತ್ತೇವೆ. ವಸ್ತು, ಸ್ಥಳ, ಜನಗಳ ಹೆಸರು ಬೇಕೆಂದಾಗ ನೆನಪಾಗದೇ ಕೈಕೊಟ್ಟಾಗ ಅಲವತ್ತುಕೊಳ್ಳುವಂತೆ ಆಗುವುದು ಸಾಮಾನ್ಯ ಅನುಭವ.
ಎಲ್ಲಕ್ಕೂ ಹೆಚ್ಚಾಗಿ ಹೇಳ ಬೇಕೆನಿಸಿದ್ದನ್ನು ಹೇಳಲು ಯೋಗ್ಯ ಶಬ್ದ ಸಿಗದಾದಾಗ ನಮ್ಮ ಮನ ಹೇಗೆ ಚಡಪಡಿಸುತ್ತದೆ ನೋಡಿ! ನಾವು ಏನನ್ನೋ ಹೇಳಬಯಸುತ್ತೇವೆ, ಅದನ್ನು ನಿಖರವಾಗಿ ತೋರ್ಪಡಿಸುವ ಹಾಗೂ ವ್ಯಕ್ತಪಡಿಸುವ ಶಬ್ದವೊಂದಿದೆಯೆಂಬುದೂ ನಮಗೆ ಗೊತ್ತಿರುತ್ತದೆ, ಅಷ್ಟೇ ಅಲ್ಲ ಆ ಶಬ್ದ ನಮಗೆ ಪರಿಚಿತವಾದದ್ದೇ ಆಗಿರುತ್ತದೆ. ಆದರೆ ಗಂಟಲಲ್ಲಿರುವ ಆ ಶಬ್ದ ನಾಲಿಗೆಯ ಮೇಲೆ ಆಡಲು ಸಿದ್ಧವಿಲ್ಲ. ಅದನ್ನು ಹೊರತಬೇಕೆಂಬ ನಮ್ಮ ಛಲ ಹೆಚ್ಚಾದಷ್ಟೂ ಅದು ಹಟಮಾರಿಯಂತೆ ಹೊರಬರಲು ಊಂ... ಹೂಂ.... ಎನ್ನುತ್ತದೆ. ನಮಗೆ ಮೈಪರಚಿ ಕೊಳ್ಳುವಂತಾಗುತ್ತದೆ. ನಮ್ಮ ಮುಖಮುದ್ರೆ ಬದಲಾಗುತ್ತದೆ. ನಾವು ಹುಬ್ಬುಗಂಟಿಕ್ಕುತ್ತೇವೆ; ಕೈಕಾಲು ಕೊಡವುತ್ತೇವೆ; ಕುತ್ತಿಗೆ ಅಲ್ಲಾಡಿಸುತ್ತೇವೆ; ಹಣೆ ಒತ್ತಿಕೊಳ್ಳುತ್ತೇವೆ; ಏಕಾಗ್ರತೆ ಬಯಸಿ ಕಣ್ಣು ಮುಚ್ಚಿಕೊಳ್ಳುತ್ತೇವೆ. ಮಕ್ಕಳು ರಚ್ಚೆ ಹಿಡಿಯಲೂ ಬಹುದು. ಒಬ್ಬೊಬ್ಬರದು ಒಂದೊಂದು ತರಹ. ಮನಸ್ಸಿನ ಮೂಲೆ ಮೂಲೆಯನ್ನೂ ಜಾಲಾಡುತ್ತೇವೆ. ಆದರೆ ನಮ್ಮ ಮನದೆದುರೇ ಕುಣಿದಾಡುತ್ತಿರುವ ಆ ಶಬ್ದ ಮಾತ್ರ ಈಗ ಹಿಡಿದೇಬಿಟ್ಟೆವೆಂದುಕೊಳ್ಳು ತ್ತಿರುವಾಗಲೇ ಕೈಗೆಟುಕದ ಚತುರ ಆಟಗಾರನಂತೆ ದೂರ ನಿಂತು ಕೆಣಕುತ್ತದೆ. ನಾವಾವಾಗ ಹತಾಶೆಗೊಳ್ಳುತ್ತೇವೆ. ಮನ:ಶಾಸ್ತ್ರಜ್ಞರು ಈ ಸ್ಥಿತಿಯನ್ನು ಸೀನುವ ಕ್ರಿಯೆಗೆ ಹೋಲಿಸುತ್ತಾರಂತೆ. ಸೀನುವ ಕ್ರಿಯೆಯಲ್ಲಿ ಎಲ್ಲ ದೈಹಿಕ ಸಂವೇದನೆಗಳನ್ನು ಅನುಭವಿಸುತ್ತಿದ್ದೂ ಸೀನಲು ಸಾಧ್ಯವಾಗದೇ ಪಾಡುಪಡುತ್ತಿರುವಾಗ ಚೂರು ನಸ್ಯ ವಹಿಸುವ ಕಾರ್ಯವನ್ನೇ ಈ ವಿರುದ್ಧ ನಿಘಂಟೂ ಮಾಡುತ್ತದೆ. ಈ ನಸ್ಯ ನೀಡುವ ನೆಮ್ಮದಿ ಗಮನಾರ್ಹ ಎನ್ನುತ್ತಾರೆ ಪ್ರಕಾಶಕರು.
ನಾವು ಸೂಚಿಸಬಯಸುವ ಹಾಗೂ ನಮ್ಮ ಮನದಲ್ಲಿರುವ ಅರ್ಥವನ್ನು ಕೊಡುವ ಶಬ್ದಗಳ ಸಂಗ್ರಹವೇ ಈ ವಿರುದ್ಧ ನಿಘಂಟು. ರೂಢಿಯಲ್ಲಿರುವ ಸಾಮಾನ್ಯ ನಿಘಂಟುಗಳು ಶಬ್ದಗಳನ್ನು ವಿವರಿಸಿ ತಿಳಿಸುತ್ತಿದ್ದರೆ ವಿರುದ್ಧ ನಿಘಂಟು ನಮ್ಮ ವಿವರಗಳಿಗೆ ಸಮರ್ಪಕ ಶಬ್ದವೊಂದನ್ನು ನೀಡುವುದರಿಂದ ತುಂಬ ಸಹಕಾರಿಯಾಗಿದೆ. ಲೇಖಕರಿಗೆ ಕವಿಗಳಿಗೆ ಅಷ್ಟೇ ಅಲ್ಲದೆ ಮಾತುಗಾರಿಕೆಯೇ ಆಧಾರ ಸ್ತಂಭವಾಗಿರುವ ವೃತ್ತಿಯವರಿಗೆ ಇದರ ಮಹತ್ತ್ವ ಹೇಳತೀರದು. ಜನಸಾಮಾನ್ಯರಿಗೂ ಇದರ ಉಪಯೋಗ ಇಲ್ಲದಿಲ್ಲ. ಇದರ ಅಭ್ಯಾಸದಿಂದ ನಮ್ಮ ವಾಕ್ಚಾತುರ್ಯ ಹೆಚ್ಚುತ್ತದೆ. ಮಾತಿನಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಬರವಣಿಗೆ ಹಾಗೂ ಮಾತಿನ ಶೈಲಿ ಹೆಚ್ಚು ಆಕರ್ಷಕವೂ ಪ್ರಭಾವಶಾಲಿಯೂ ಆಗುತ್ತದೆ. ನಮ್ಮ ಶಬ್ದ ಸಂಗ್ರಹ ವ್ಯಾಪಕವಾಗುತ್ತದೆ. ಒಂದು ಅಥವಾ ಹೆಚ್ಚು ವಾಕ್ಯಗಳಲ್ಲಿ ಹೇಳಬಹುದಾದ ಭಾವವನ್ನು ಒಂದೇ ಶಬ್ದದಲ್ಲಿ ವ್ಯಕ್ತಪಡಿಸಬಹುದು. ಸಾಮಾನ್ಯವಾಗಿ ರೂಢಿಯಲ್ಲಿರದ ಕುತೂಹಲಕಾರೀ ಹೊಸ ಶಬ್ದಗಳಿಂದ ಮನೋರಂಜನೆಯೂ ದೊರಕೀತು.
ಇನ್ನು ಈ ನಿಘಂಟನ್ನು ಉಪಯೋಗಿಸುವ ಬಗೆ ಹೇಗೆ? ಸ್ವಲ್ಪ ನೋಡೋಣ.
Audit ಎನ್ನುವ ಶಬ್ದ ನಮಗೆ ಗೊತ್ತು. "ಅರ್ಹ ವ್ಯಕ್ತಿಗಳಿಂದ ನಡೆಯುವ ಲೆಕ್ಕಪತ್ರಗಳ ಪರಿಶೀಲನೆ, ತಿದ್ದುಪಡಿ, ಸಮರ್ಥನೆ ಮುಂತಾದವುಗಳನ್ನು ಮಾಡುವುದು" ಎನ್ನಲು ಚಿuಜiಣ ಎನ್ನುತ್ತಾರೆನ್ನುವುದು ಚಿಛಿಛಿouಣ ಶಬ್ದದಡಿಯಲ್ಲಿ ದೊರೆಯುತ್ತದೆ. ಅಂತೆಯೇ ಅದಕ್ಕೆ ಸಂಬಂಧಿಸಿದ ಇತರ ಅನೇಕ ಶಬ್ದಗಳೂ ಕೂಡ. ವಿಶಿಷ್ಟ ಶಾಖೆ ಅಥವಾ ವಿಷಯಗಳಿಗಳಿಗೆ ಸಂಬಂಧಿಸಿದ "ಚಾರ್ಟ್"ಗಳಿದ್ದು ಅವುಗಳಡಿಯಲ್ಲೂ ಬೇಕಾದ ಶಬ್ದ ಸಿಕ್ಕೀತು.
ಇದನ್ನು ಉಪಯೋಗಿಸುವುದನ್ನು ರೂಢಿಸಿಕೊಳ್ಳಲು ಸಾಮಾನ್ಯ ನಿಘಂಟಿಗೆ ಬೇಕಾಗುವುದಕ್ಕಿಂತ ಹೆಚ್ಚು ತಾಳ್ಮೆ ಹಾಗೂ ಪರಿಶ್ರಮ ಬೇಕೆನಿಸುತ್ತದೆ. ನಿಜ. ಆದರೆ ಕನ್ನಡದಲ್ಲೂ ಇಂತಹ ಒಂದು ನಿಘಂಟು ಬಂದರೆ ಎಷ್ಟು ಚೆನ್ನ ಅಲ್ಲವೆ?

ಸೌ. ವೀಣಾ ದೇವ್

No comments:

Post a Comment