Monday, August 15, 2011

ಗಂಗಕ್ಕನ ನೆನಪು

ವೀಣಾ ದೇವ್

ನಮ್ಮ ಕೆಲಸದಾಕೆ """ನಿನ್ನೆ ನಮ್ಮ ಗಂಗೂಬಾಯಿ ಒಬ್ಬಾಕೆ ತೀರ್ಕೊಂಡ್ಲಲ್ಲಪ್ಪ..." ಎನ್ನುತ್ತಲೇ ಪ್ರತ್ಯಕ್ಷಳಾದಳು. ಏನೋ ಎಂದಿನಂತೆ ಅವಳ ಬಳಗದ್ದೋ ಕೇರಿಯದ್ದೋ ಸುದ್ದಿ ಹೇಳುತ್ತಾಳೆ ಎಂದು ಭಾವಿಸುತ್ತಿದ್ದಂತೆಯೇ ಚಕ್ಕನೇ ಡಾ. ಗಂಗೂಬಾಯಿ ಹಾನಗಲ್ ಅವರ ನಿಧನವಾರ್ತೆಯ ನೆನಪಾಯ್ತು. ಅವರ ಬಗ್ಗೆ ಇವಳೇನು ಮಾತನಾಡಬಹುದು ಎಂದೇ ನನ್ನ ಭಾವನೆ. ಆದರೂ ಕೇಳಿಯೇ ಬಿಡೋಣವೆಂದು ಬಾಯ್ತೆರೆಯುವಷ್ಟರಲ್ಲಿಯೇ ಅವಳೇ "ಎಷ್ಟು ಛಂದ ಹಾಡ್ತಿದ್ಲು! ಭಾರಿ ಛಲೋ ಹೆಣ್ಮಗಳು, ದೊಡ್ಡ ಮನಸ್ರೇಪ ಆಕೀದು! ದೇ ಶಪಾಂಡೆ ನಗರದಾಗ ನಾವಿದ್ವಿ, ಗುರ್ತಾ ನೋಡ್ರಿ " ಎಂದಳು. ಇದನ್ನು ಇಲ್ಲಿ ಮುದ್ದಾಂ ಬರೆಯಲಿಕ್ಕೆ ಎರಡು ಕಾರಣಗಳಿವೆ. ಸಂಗೀತ ವಿಶ್ವದಲ್ಲೇ ಪ್ರಸಿದ್ಧಿ ಪಡೆದ ವಿದುಷಿಗೆ ಆ ನಿಟ್ಟಿನಲ್ಲಿ ಯಾವುದೇ ರೀತಿಯ ಶಿಕ್ಷಣ-ತರಬೇತಿ ಇಲ್ಲದ ಸಾಮಾನ್ಯ ಜನರನ್ನೂ ತಮ್ಮ ಸಂಗೀತದಿಂದ ಆಕರ್ಷಿಸುವ ಸಾಮರ್ಥ್ಯವಿತ್ತೆನ್ನುವುದೊಂದು; ಅಂತಹ ಸಾಮಾನ್ಯ ಜನರೂ ಇವರನ್ನು ತಮ್ಮವರು (ನಮ್ಮ ಗಂಗೂಬಾಯಿ ಎಂದಳು ಕೆಲಸದಾಕೆ) ಎಂದು ಅಭಿಮಾನದಿಂದ ಹೇಳಿಕೊಳ್ಳುವಂತೆ ಮಾಡುವ ನಡವಳಿಕೆ ಅವರದಾಗಿತ್ತೆನ್ನುವುದು ಇನ್ನೊಂದು.
ಅವರ ಸರಳ ಜೀವನ ಮತ್ತು ನಡವಳಿಕೆಯ ಪ್ರತ್ಯಕ್ಷ ಅನುಭವ ನನಗೂ ಆಗಿತ್ತು. ಶಿರಸಿಯ ನಮ್ಮ ಮನೆಯ ಎದುರು ನಿವೃತ್ತ ಶಿಕ್ಷಕಿಯೊಬ್ಬರಿದ್ದರು. ಒಂದಿನ ಸಂಜೆ ಅವರ ಮನೆಗೆ ಹೋದಾಗ ನೂಲಿನ ಸಾದಾ ಸೀರೆಯನ್ನುಟ್ಟು ಜಗಲಿಯ ನೆಲದ ಮೇಲೆಯೇ ಕುಳಿತು ಮಾತನಾಡುತ್ತಿದ್ದ ಮಹಿಳೆಯೊಬ್ಬರನ್ನು ಕಂಡೆ. ಅವರೇ ಪದ್ಮಭೂಷಣ ಪ್ರಶಸ್ತಿ ಪಡೆದ ಗಂಗೂಬಾಯಿ ಹಾನಗಲ್ ಎಂದಾಗ ನನಗೆ ನಂಬಿಕೆಯೇ ಆಗಲಿಲ್ಲ. ಅಸಾಮಾನ್ಯರಾದ ಅವರು ಅತೀ ಸಾಮಾನ್ಯಳಾದ ನನ್ನೊಡನೆ ನಡೆದುಕೊಂಡದ್ದೇ ಹಾಗೆ. ಅವರ ಬಾಹ್ಯ ರೂಪದಂತೆಯೇ ಯಾವ ಭೇದಭಾವವನ್ನರಿಯದ ಸಾದಾ-ಸರಳ ಅಂತರಾತ್ಮ ಅವರದಾಗಿತ್ತೆನ್ನುವುದು ಅವರ ಒಡನಾಟ ದೊರೆತ ಅನೇಕರ ಅನುಭವ. ಮನೆಗೆ ಬಂದವರಿಗೆ ಆತಿಥ್ಯ ನೀಡಿ ಸತ್ಕರಿಸುವುದು ಅವರಿಗೆ ಪ್ರಿಯವಾದ ಕೆಲಸವಾಗಿತ್ತಂತೆ.
ದಿ. ಗಂಗೂಬಾಯಿ ಹುಟ್ಟಿದ್ದು ೫ ಮಾರ್ಚ್ ೧೯೧೨. ಹುಟ್ಟೂರು ಧಾರವಾಡ. ಸಂಗೀತ ವಿದ್ಯೆಯ ವಿಷಯದಲ್ಲಿ ಅವರಿಗೆ ಮನೆಯೇ ಮೊದಲ ಪಾಠಶಾಲೆ. ಜನನಿ ತಾನೆ ಮೊದಲ ಗುರುವು. ನಂತರ ದಿ. ಕೃಷ್ಣಾಚಾರ್ಯ ಹುಲಗೂರ ಹಾಗೂ ಸವಾಯಿ ಗಂಧರ್ವ ( ದಿ. ರಾಮಾಭಾಯಿ ಕುಂದಗೋಳಕರ) ರಲ್ಲಿ ಕಲಿಕೆ. ಸವಾಯಿ ಗಂಧರ್ವರ ಶಿಷ್ಯತ್ವ ಸಂಪಾದಿಸುವುದು ಸುಲಭವಾಗಿರಲಿಲ್ಲ. ಆರು ತಿಂಗಳ ಕಾಲ ದಿನವೂ ಹುಬ್ಬಳ್ಳಿಯಿಂದ ಕುಂದಗೋಳಕ್ಕೆ ಓಡಾಡಿದರು. ಆ ಮೇಲೇ ಇವರು ಶ್ರದ್ಧೆಯಿಂದ ಸಂಗೀತ ಸಾಧನೆ ಮಾಡಿಯಾರೆಂಬ ವಿಶ್ವಾಸ ಹುಟ್ಟಿ ಇವರನ್ನು ಶಿಷ್ಯೆಯೆಂದು ಸ್ವೀಕರಿಸಿದರಂತೆ (೧೯೩೨ರಲ್ಲಿ). ಗುರುವಿನಿಂದ ದೊರೆತ ಜ್ಞಾನಭಾಂಡಾರವನ್ನು ಸಂರಕ್ಷಿಸಿ ಬೆಳೆಸುತ್ತ ರಸಿಕರನ್ನು ಸ್ವರಗಂಗೆಯಲ್ಲಿ ತೇಲಿಸಿದರು. ಕಲಾಜೀವನದಲ್ಲಿ ವಿಧಿ ತಂದ ಆಘಾತಗಳು, ಜನನಿಂದೆ, ಮೂದಲಿಕೆ, ಉಪೇಕ್ಷೆ, ಆರ್ಥಿಕ ಏರುಪೇರು ಎಲ್ಲವನ್ನೂ ದಿಟ್ಟತನದಿಂದ ಎದುರಿಸಿ ಸಾಧನೆಯತ್ತ ಲಕ್ಷ್ಯವಿತ್ತರು. ಗಾಯನ-ವಾದನಗಳನ್ನು ಕಲೆಯೆಂದು ಗೌರವದಿಂದ ನೋಡದೆ ಉಪೇಕ್ಷಾಭಾವದಿಂದ ಕಾಣುತ್ತಿದ್ದ ಅಂದಿನ ದಿನಗಳಲ್ಲಿ ಸ್ವಲ್ಪವೂ ವಿಚಲಿತರಾಗದೆ ಸ್ವರಾರಾಧನೆ ಮಾಡಿದರು.
ದಿ.ಗಂಗೂಬಾಯಿಯವರು ಕಥಕ್ ನೃತ್ಯದ ಶಿಕ್ಷಣವನ್ನು ಪಡೆದಿದ್ದರು. ಅವರು ರಂಗಭೂಮಿಯ ನಟಿಯಾಗಿ ಸಮರ್ಥ ಅಭಿನಯ ನೀಡಿದ್ದನ್ನು ಕಂಡವರಿದ್ದಾರೆ. ಮರಾಠಿ ಚಿತ್ರಪಟವೊಂದರಲ್ಲಿ ಗಾಯಕಿಯಾಗಿ ಅಭಿನಯಿಸಿದ್ದರಂತೆ. ಸಂಗೀತವೃತ್ತಿಗೆ ಕಾಲಿಟ್ಟ ಹೊಸದರಲ್ಲಿ ಎಚ್.ಎಮ್.ವಿ. ಅವರು ಗಾಂಧಾರಿ ಹಾನಗಲ್ ಎಂಬ ಹೆಸರಿನಲ್ಲಿ ಮಾಡಿದ್ದ ಅವರ ಹನ್ನೆರಡು ಧ್ವನಿಮುದ್ರಿಕೆಗಳು ಸಾಕಷ್ಟು ಜನಪ್ರಿಯವಾಗಿದ್ದವಂತೆ.
ಪದ್ಮವಿಭೂಷಣ ಗಂಗೂಬಾಯಿ ೧೧ ರ ಎಳೆವಯಸ್ಸಿನಲ್ಲೇ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿ ಮಹಾತ್ಮಾ ಗಾಂಧಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸುಪ್ರಸಿದ್ಧ ಗಾಯಕ ಅಬ್ದುಲ್ ಕರೀಂ ಖಾನರೂ ಈ ಬಾಲಗಾಯಕಿಯನ್ನು ಮೆಚ್ಚಿಕೊಂಡಿದ್ದರು. ಮುಂದೆ ಸವಾಯಿ ಗಂಧರ್ವರ ಶಿಷ್ಯೆಯಾದ ಮೇಲೆ ಎಲ್ಲರ ಗಮನ ಸೆಳೆಯುತ್ತ ಖ್ಯಾತ ಬಾಲ ಗಾಯಕಿ ಎಂದೇ ಗುರುತಿಸಲ್ಪಡತೊಡಗಿದರು. ೧೯೫೦ ರಲ್ಲಿ ಟಾನ್ಸಿಲ್ಸ್ ಶಸ್ತ್ರಚಿಕಿತ್ಸೆಯ ನಂತರ ಧ್ವನಿ ಬದಲಾವಣೆಯಾದಾಗ ಅದನ್ನೇ ದೊಡ್ಡದು ಮಾಡಿ ಇಲ್ಲದ ಗೊಂದಲ ಮಾಡದೆ ದೃಢ ಮನಸ್ಸಿನಿಂದ ಸಂಗೀತ ಸಾಧನೆ ಮಾಡಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಗಿಟ್ಟಿಸಿದರು. ದೇಶ-ವಿದೇಶಗಳಲ್ಲಿ ಅವರ ಕಾರ್ಯಕ್ರಮಗಳಾಗಿವೆ. ಅವರಿಗೆ ೯೫ ವರ್ಷಗಳಾಗಿದ್ದಾಗ ಕೆ.ಎಲ್.ಇ. ಸಂಸ್ಥೆಯ ಕಾರ್ಯಕ್ರಮದಲ್ಲಿ (ಹತ್ತು ವರ್ಷಗಳ ಸುದೀರ್ಘ ವಿರಾಮದ ನಂತರ) ಅರ್ಧ ತಾಸು ಹಾಡಿದ್ದೇ ಅವರ ಕೊನೆಯ ಕಾರ್ಯಕ್ರಮ. ಅವರು ಪದ್ಮಭೂಷಣ, ಪದ್ಮವಿಭೂಷಣ ಮುಂತಾದ ೧೫ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರು. ಸುಮಾರು ನಲವತ್ತು ಡಾಕ್ಟರೇಟ್ ಗಳೂ ಇವರನ್ನರಸಿಕೊಂಡು ಬಂದಿವೆ. ಅವರ ಸ್ವರಾರಾಧನೆ , ಅಗಾಧ ಪಾಂಡಿತ್ಯ, ಶೈಲಿ, ನಿರೂಪಣಾ ಸಾಮರ್ಥ್ಯ, ವೈಶಿಷ್ಟ್ಯಗಳ ಬಗೆಗೆ ಆ ಕ್ಷೇತ್ರದ ದಿಗ್ಗಜರೆಲ್ಲರ ಅನಿಸಿಕೆಗಳು ದೇಶದ ಅನೇಕ ಪ್ರಸಾರ ಮಾಧ್ಯಮಗಳಲ್ಲಿ ಕಂಡು-ಕೇಳಿ ಬರುತ್ತಿವೆ. "ಸಾವಿರ ವರ್ಷಗಳಿಗೊಮ್ಮೆ ಹುಟ್ತುತ್ತಾರೆ ಇಂಥವರು" ಅನ್ನುತ್ತಾರೆ ಹಲವರು.
ತಮ್ಮ ಜ್ಞಾನವನ್ನು ನಿರ್ವಂಚನೆಯಿಂದ ಇತರರಿಗೆ ಬೋಧಿಸುವುದು ಇವರ ಇನ್ನೊಂದು ಹೆಗ್ಗಳಿಕೆ. ಸಮಕಾಲೀನ ಕಲಾಕಾರರ ವಿಷಯದಲ್ಲಿ ಆದರ-ಆತ್ಮೀಯತೆ, ಸಹಾಯಹಸ್ತ ಚಾಚುವುದು ಇವರ ಸ್ವಭಾವವಾಗಿತ್ತು. ಗುರುಗಳ ಅನಾರೋಗ್ಯ ಕಾಲದಲ್ಲಿ ತಮ್ಮಲ್ಲಿಯೇ ಅವರ ವಾಸದ ಏರ್ಪಾತು ಮಾಡಿ ಮಗಳ ಕೃಷ್ಣಾಳ ಕಲಿಕೆಯ ನೆಪದಲ್ಲಿ ಅವರಿಗೆ ಆರ್ಥಿಕ ಸಹಾಯ ಮಾಡಿದರು. ೨೦೦೫ ರಲ್ಲಿ ಹುಬ್ಬಳ್ಳಿಯ ತಮ್ಮ ಮನೆ ಗಂಗಾ ಲಹರಿಯನ್ನು ಸಂಗೀತಕ್ಕೇ ಅರ್ಪಿಸಿದರು. ಸಂಗೀತಪ್ರೇಮೀ ರಸಿಕ ಕಲಾಸಾಧಕರಿಗೆ ಅದೊಂದು ಆದರದ ಸ್ಥಾನವಾಗಿದೆ. ಅವರಿಗೆ ದೊರೆತ ಪುರಸ್ಕಾರಗಳು, ಛಾಯಾಚಿತ್ರಗಳು, ವಾದ್ಯಗಳು, ಸಂಗೀತದ ಮಾಹಿತಿ ಸಾಹಿತ್ಯಗಳ ಸಂಗ್ರಹ ಮುಂತಾದವುಗಳನ್ನು ನೋಡಬಹುದು.
ಕೆಲವರ್ಷಗಳಿಂದ ಕರ್ಕರೋಗದಿಂದ ಬಳಲುತ್ತಿದ್ದ ಅವರು ಜುಲೈ ೨೧ರಂದು ಬೆಳಗಿನ ೭ಗಂಟೆ ೧೫ ನಿಮಿಷಕ್ಕೆ ಅನಂತದಲ್ಲಿ ಲೀನವಾದರು. ಅಪಾರ ಜನರನ್ನು ತಣಿಸಿದ್ದ ಗಾನಗಂಗೆ ಶಿವನ ಪಾದ ಸೇರಿತು.

No comments:

Post a Comment