Monday, August 15, 2011

ಭಾಷೆಯ ಗೊಂದಲ

ಮಹಾಬಲ ಭಟ್

ಮುಕ್ತಿಯ ಸ್ವರ್ಣಜಯಂತಿಯನ್ನು ಆಚರಿಸಿಕೊಳ್ಳುತ್ತಿರುವ ಗೋವಾದಲ್ಲಿ ದೊಡ್ಡ ಗೊಂದಲವೇರ್ಪಟ್ಟಿದೆ. ಅದು ಭಾಷೆಗೆ ಸಂಬಂಧಿಸಿದ್ದು. ತನ್ನ ವಿವಿಧತೆಗೆ ಹೆಸರಾದ ಭಾರತದಲ್ಲಿ ಪ್ರತ್ಯೇಕ ರಾಜ್ಯಕ್ಕೂ ಅದರದೇ ಆದ ಭಾಷೆಯೆಂಬುದಿದೆ. ನಾಡು-ನುಡಿಗಳ ಸಂಬಂಧ ಅವಿನಾಭಾವವಾದದ್ದು ಎಂಬುದನ್ನು ಪ್ರತಿಯೊಂದು ರಾಜ್ಯದ ಪ್ರಜೆಯೂ ಒಪ್ಪುತ್ತಾನೆ. ಅಲ್ಲದೆ ತನ್ನ ನಾಡನ್ನು ಗೌರವಿಸಿದಷ್ಟೇ ನುಡಿಯನ್ನೂ ಗೌರವಿಸುತ್ತಾನೆ. ತನ್ನ ತಾಯಿ, ತಾಯ್ನಾಡು ತಾಯ್ನುಡಿಗಳನ್ನು ಸಮಾನವಾಗಿ ಗೌರವಿಸುತ್ತಾನೆ. ಆದರೆ ಇದು ಗೋವಾದಲ್ಲಿ ಆಗುತ್ತಿಲ್ಲ. ಪರಕೀಯರ ಆಳ್ವಿಕೆಯಿಂದ ಮುಕ್ತಿ ಪಡೆದು ೫೦ ವರ್ಷಗಳು ಉರುಳಿದರೂ ತಮ್ಮ ತಾಯ್ನೆಲದಲ್ಲಿ ತಾಯ್ನುಡಿಗೊಂದು ಗೌರವದ ಸ್ಥಾನವನ್ನು ಕೊಡಲು ಗೋವೀಯರು ವಿಫಲರಾಗಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿ.
ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ದೊರಕಬೇಕು ಎಂಬುದು ಅನೇಕ ಭಾಷಾ ಶಾಸ್ತ್ರಜ್ಞರ ಹಾಗೂ ಮನೋವಿಜ್ಞಾನಿಗಳ ಅಂಬೋಣ. ತಾನು ಮನೆಯಲ್ಲಿ ಆಡುತ್ತಿರುವ ಭಾಷೆಯನ್ನೇ ಶಾಲೆಯಲ್ಲಿಯೂ ಕೇಳಿದಾಗ ಸಹಜವಾಗಿಯೇ ಮಗುವಿನ ಮನಸ್ಸು ಉಲ್ಲಸಿತವಾಗಿ ಕಲಿಕೆಯತ್ತ ವಾಲುತ್ತದೆ ಎಂಬುದು ಯಾರಾದರೂ ಊಹಿಸಬಹುದಾದ ಸಂಗತಿ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಗುವಿನ ಹಕ್ಕೂ ಕೂಡ ಹೌದು. ಪ್ರಾಥಮಿಕ ಸ್ತರದಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಅಧ್ಯಯನ ಮಾಡದಿದ್ದರೆ ಮುಂದೆ ಇಂಗ್ಲೀಷ್ ಭಾಷೆಯ ಮೇಲೆ ಪ್ರಭುತ್ವ ಸಿಗಲಿಕ್ಕಿಲ್ಲ ಎಂಬ ಭ್ರಮೆ ಅನೇಕರದು. ಹಾಗಾಗಿ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಕಳಿಸಲು ಪಾಲಕರು ಮುಗಿ ಬೀಳುತ್ತಾರೆ. ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಕಳಿಸಲು ಇನ್ನೂ ಅನೇಕ ಕಾರಣಗಳಿವೆ.
ಬ್ರಿಟೀಷರು ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿ ಸಾರ್ವಜನಿಕ ಶಿಕ್ಷಣದ ಹೆಸರಿನಲ್ಲಿ ಇಂಗ್ಲೀಷ್ ಶಿಕ್ಷಣವನ್ನು ನೀಡಲು ಅರಂಭಿಸಿದಾಗ ಬುದ್ಧಿಜೀವಿಗಳಿಗೆ ಅದೊಂದು ಪ್ರತಿಷ್ಠೆಯ ವಿಷಯವಾಯಿತು. ಇಂಗ್ಲೀಷ್ ವಿಷಯದಲ್ಲಿ ಪದವಿ ಪಡೆದ ಪ್ರಥಮ ಭಾರತೀಯನನ್ನು ಮೆರವಣಿಗೆ ಮಾಡಿ ಇಂಗ್ಲೀಷ್ ಕಲಿತವರಿಗೆ ಈ ರೀತಿಯ ಗೌರವ ಸಿಗುತ್ತದೆ ಎಂದು ತೋರಿಸಿದರು. ಎಷ್ಟೋ ಆಮಿಷಗಳನ್ನು ಒಡ್ಡಿ ಇಂಗ್ಲೀಷಿನತ್ತ ಜನರನ್ನು ಆಕರ್ಷಿಸಿದರು. ಇಂಗ್ಲೀಷ್ ಕಲಿತವರಿಗೆ ವಿದೇಶಕ್ಕೆ ಹೋಗುವ ಅವಕಾಶ ದೊರೆಯಿತು. ಇಂಗ್ಲೀಷ್ ಕಲಿತವರು ಗೌರವಸ್ಥರಾದರು. ಈ ಮಾನಸಿಕತೆ ನಮಗೆ ಇನ್ನೂ ಹೋಗಿಲ್ಲ. ಗೋವಾದ ಒಬ್ಬ ಪ್ರಜೆ ತನಗೆ ಕೊಂಕಣಿ ಬರದಿದ್ದರೆ ಅದನ್ನು ತಮಾಷೆಯಾಗಿ ಹೇಳುತ್ತಾನೆ. ಅದೇ ಇಂಗ್ಲೀಷ್ ಬರದಿದ್ದರೆ ಅದು ನಾಚಿಕೆಯ ವಿಷಯವೆಂಬಂತೆ ತಲೆತಗ್ಗಿಸಿ ಹೇಳುತ್ತಾನೆ. ಈ ಸ್ಥಿತಿ ಎಲ್ಲ ರಾಜ್ಯಗಳಲ್ಲೂ ಇದೆ.
ಇಂಗ್ಲೀಷ್ ಮಾಧ್ಯಮಶಾಲೆಗೆಳಿಗೆ ಹೋಗುವವರು ಹೆಚ್ಚಾಗಿ ಸಿರಿವಂತರ ಮಕ್ಕಳು ಅಂತಹ ಶಾಲೆಗಳು ಪಾಲಕರಿಂದ ಹಣವನ್ನು ಸ್ವೀಕರಿಸಿ ಉತ್ತಮ ವ್ಯವಸ್ಥೆಯನ್ನು ಮಾಡುತ್ತವೆ. ಮಕ್ಕಳ ಸಲುವಾಗಿ ಹಣ ಖರ್ಚು ಮಾಡಲು ಸಿದ್ಧವಿರುವ ಪಾಲಕರು ಅಲ್ಲಿಗೇ ತಮ್ಮ ಮಕ್ಕಳನ್ನು ಕಳಿಸಲು ಇಷ್ತಪಡುತ್ತಾರೆ. ಮಕ್ಕಳು ಉತ್ತಮ ವಾತಾವರಣದಲ್ಲಿ ಬೆಳೆಯುತ್ತಾರೆ ಎಂಬುದು ಅವರ ಅಂಬೋಣ. ಸರಕಾರಿ ಶಾಲೆಗಳಲ್ಲಿ ಇಂತಹ ವಾತಾವರಣ ಇಲ್ಲದಿರುವುದರಿಂದ, ಅಲ್ಲಿಗೆ ಬರುವವರು ಸ್ಥಿತಿವಂತರಲ್ಲದ ಶ್ರಮಿಕ ವರ್ಗದ ಮಕ್ಕಳಾದುದರಿಂದ, ಅವರೊಂದಿಗೆ ತಮ್ಮ ಮಕ್ಕಳು ಬೆರೆತು ಆಟವಾಡುವುದು ಈ ಪಾಲಕರಿಗೆ ಇಷ್ಟವಿಲ್ಲದುದರಿಂದ ’ಪೊಶ್’ ಎಂದು ಕರೆಸಿಕೊಳ್ಳುವ ಜನ ತಮ್ಮ ಮಕ್ಕಳನ್ನು ಸರಕಾರಿಶಾಲೆಗಳಿಗೆ ಕಳಿಸುವುದಿಲ್ಲ. ಇಲ್ಲಿ ಮಾಧ್ಯಮಕ್ಕಿಂತ ಹೆಚ್ಚಾಗಿ ಶಾಲೆಯ ವಾತಾವರಣ ನಿರ್ಣಾಯಕವಾಗಿರುತ್ತದೆ. ಮರಾಠಿ ಮಾಧ್ಯಮದಲ್ಲಿ ಶಿಕ್ಷಣನೀಡುವ ಅನೇಕ ಖಾಸಗಿ ಶಾಲೆಗಳ ದು:ಸ್ಥಿತಿಯೂ ಇದೇ ರೀತಿಯಾಗಿದೆ. ಮೇಲ್ವರ್ಗದ ಜನರು ಮೆಚ್ಚುವಂತಹ ವಾತಾವರಣಯುಕ್ತ ಸ್ಥಾನೀಯಭಾಷಾ ಮಾಧ್ಯಮದ ವಿದ್ಯಾಲಯಗಳ ಆವಶ್ಯಕತೆ ಇದೆ. ಇಂತಹ ಪಾಲಕರು ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ದೊರೆತರೂ ಅಲ್ಲಿಗೆ ತಮ್ಮ ಮಕ್ಕಳನ್ನು ಕಳಿಸುವುದಿಲ್ಲ.
ಕರ್ನಾಟಕದಂತಹ ರಾಜ್ಯದಲ್ಲೂ ಮಾತೃಭಾಷೆಯಲ್ಲಿ ಶಿಕ್ಷಣಕೊಡುವ ಪ್ರಾಥಮಿಕ ವಿದ್ಯಾಲಯಗಳಿಗೆ ಮಾತ್ರ ಅನುದಾನ ಸಿಗುತ್ತದೆ. ಅಂದಾಕ್ಷಣ ಆಂಗ್ಲ ಮಾಧ್ಯಮಶಾಲೆಗಳೇ ಇಲ್ಲ ಅಂತಿಲ್ಲ. ಖಾಸಗಿಯಾಗಿ ಅಂತಹ ಶಾಲೆಗಳು ನಡೆಯುತ್ತಲೇ ಇವೆ. ಜನರು ತಮ್ಮ ಮಕ್ಕಳನ್ನು ಆ ಶಾಲೆಗಳಿಗೆ ಕಳಿಸುತ್ತಲೇ ಇದ್ದಾರೆ. ಅದಕ್ಕೆ ಸರಕಾರದ ಅನುಮತಿಯೂ ಇದೆ. ಭಾರೀ ಶುಲ್ಕ, ಡೊನೇಶನ್‌ಗಳನ್ನು ನೀಡಲಾರದವರು ನಿರಾಸೆ ಅನುಭವಿಸುತ್ತಾರೆ. ಆಂಗ್ಲ ಮಾಧ್ಯಮಶಾಲೆಗಳಿಗೆ ಅನುದಾನ ನೀಡುವುದರಿಂದ ಬಡಮಕ್ಕಳಿಗೂ ಈ ಭಾಗ್ಯದೊರೆಯುತ್ತದೆ ಎಂಬುದು ಆಂಗ್ಲವಾದಿಗಳ ವಾದ. ತಮ್ಮ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಓದಿಸಬೇಕು ಎಂಬುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಎಲ್ಲ ಪಾಲಕರಿಗೂ ಸಿಗಬೇಕು ಎನ್ನುವುದು ಅವರ ಅಭಿಮತ ಆಂಗ್ಲಮಾಧ್ಯಮಶಾಲೆಗಳಿಗೆ ಅನುದಾನ ದೊರೆತಾಗ ಶುಲ್ಕದ ಕಾರಣದಿಂದ ಆಯ್ಕೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಭಯವಿಲ್ಲ. ಅಷ್ಟಾದರೂ ಮರಾಠಿ/ಕೊಂಕಣಿ ಮಾಧ್ಯಮವನ್ನೇ ಇಷ್ಟಪಡುವವರು ಹಾಗೆ ಮಾಡಲು ಈಗಲೂ ಸ್ವತಂತ್ರರು ಎಂಬುದು ಬಲವಾದ ವಾದ.
ಜೀವನದಲ್ಲಿ ಉನ್ನತಿಯನ್ನು ಸಾಧಿಸಲು ಅಥವಾ ಉತ್ತಮ ಉದ್ಯೋಗ ಸಂಪಾದಿಸಲು ಆಂಗ್ಲಭಾಷೆ ಅತ್ಯವಶ್ಯಕವೆ? ಮೇಲ್ನೋಟಕ್ಕೆ ಇದಕ್ಕೆ ಉತ್ತರ ’ಹೌದು’ ಎಂದೇ ತೋರುತ್ತದೆ. ಇದೇ ಪ್ರಶ್ನೆಯನ್ನು ಒಬ್ಬ ಜಪಾನಿ, ಚೀನೀ ಅಥವಾ ಬ್ರಿಟಿಷೇತರ ಯಾವುದೇ ಯುರೋಪಿಯನ್ನನನ್ನು ಕೇಳಿದರೂ ಉತ್ತರ ’ಇಲ್ಲ’ ಹಾಗಾದರೆ ಭಾರತದಲ್ಲಿ ಈ ಹೌದನ್ನು ಸೃಷ್ಟಿಸಿದವರ್ಯಾರು? ಬ್ರಿಟೀಷರು ಸೃಷ್ಟಿಸಿದ ಈ ಹೌದನ್ನು ನಾವು ಅಭಿಮಾನಶೂನ್ಯರು ಮುಂದುವರಿಸುತ್ತಿದ್ದೇವೆ. ಇಂದು ಅನೇಕ ಭಾರತೀಯರು ಚೀನೀ ಭಾಷೆಯನ್ನು ಕಲಿಯಲು ಮುಂದೆ ಬರುತ್ತಿದ್ದಾರೆ ಅದಕ್ಕೆ ಕಾರಣ ಚೀನಾ ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿರುವುದರಿಂದ. ಜಾಗತೀಕರಣದಲ್ಲಿ ’ನಮ್ಮ ಭಾಷೆ’, ’ಪ್ರಾದೇಶಿಕ ಭಾಷೆ’ ’ಮಾತೃಭಾಷೆ’ ಎಂಬುದೆಲ್ಲ ಅಸಂಬದ್ಧ ಪ್ರಲಾಪ, ನಾವು ಇಂತಹ ಸಂಕುಚಿತಭಾವನೆಯನ್ನು ತೊಡೆದುಹಾಕಬೇಕು ಎಂಬುದು ವಿಚಾರವಾದಿಗಳೆಂದು ತಮ್ಮನ್ನು ತಾವೇ ಕರೆದುಕೊಳ್ಳುವವರ ಹೇಳಿಕೆ. ಆದರೆ ಈ ವಿಚಾರವಾದಿಗಳು ಗಮನಿಸಬೇಕಾದ ಅಂಶವಿದೆ. ಜಾಗತೀಕರಣ ಎಂದಾಕ್ಷಣ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮಾಡುವುದು, ವಿದೇಶೀ ವಸ್ತುಗಳನ್ನು ಆಮದು ಮಾಡಿ ಉಪಯೋಗಿಸುವುದು ಇಷ್ಟೇ ಅಲ್ಲ. ನಮ್ಮ ಸಂಸ್ಕೃತಿಯ ಪ್ರಸಾರ, ನಮ್ಮ ಉದ್ಯಮದ ವಿಸ್ತರಣೆ ಇವು ಕೂಡ ಜಾಗತಿಕರಣದಿಂದ ಸಾಧ್ಯ. ಇಂದು ಚೀನಾ, ಜಪಾನ್ ದೇಶಗಳು ತಮ್ಮ ಭಾಷೆ ಸಂಸ್ಕೃತಿಗಳ ಬಗ್ಗೆ ಅಭಿಮಾನ ಹೊಂದಿರುವುದರಿಂದಲೇ ಅಲ್ಲಿಗೆ ಹೋಗಬೇಕಾದ ನಾವು ಅವನ್ನು ಕಲಿಯಬೇಕು. ಜಗತ್ತಿನ ಇತರ ದೇಶಗಳು ಭಾರತೀಯ ಭಾಷೆಗಳನ್ನು ಅಧ್ಯಯನಮಾಡುವಂತೆ ಮಾಡಬೇಕು ಅಂದಾದರೆ ನಾವು ಮೊದಲು ಅವುಗಳ ಬಗ್ಗೆ ಅಭಿಮಾನ ಹೊಂದಿರಬೇಕು. ನಮ್ಮ ಮೂಲ ಸಂಸ್ಕೃತಿಯನ್ನೆಲ್ಲ ಕಟ್ಟಿಟ್ಟು ಭಾರತ ಸೂಪರ್ ಪವರ್ ಆದರೆ ಅಮೇರಿಕ ಸೂಪರ್ ಪವರ್ ಆಗುವುದಕ್ಕೂ, ಭಾರತ ಆಗುವುದಕ್ಕೂ ಏನೂ ವ್ಯತ್ಯಾಸ ಉಳಿಯುವುದಿಲ್ಲ.
ಭಾಷೆಗೂ ಸಂಸ್ಕೃತಿಗೂ ಸಂಬಂಧವಿದೆಯೆ? ಎಂಬುದು ಒಂದು ಮುಖ್ಯ ಪ್ರಶ್ನೆ. ಆಂಗ್ಲ ಮಾಧ್ಯಮದಲ್ಲಿ ಕಲಿತವರು ಉಳಿದವರಿಗಿಂತ ಚೆನ್ನಾಗಿ ’ಗುಡ್ ಮಾರ್ನಿಂಗ್’ ಹೇಳಬಲ್ಲರು, ಸೀನು ಬಂದರೂ ’ಸಾರಿ’ ಹೇಳುವರು, ಹೇಳಿದ್ದು ಕೇಳಿಸದಿದ್ದರೆ ’ಆಂ’ ಬಾಯಿ ತೆರೆಯುವುದಿಲ್ಲ ’ಐ ಬೆಗ್ ಯುವರ್ ಪಾರ್ಡನ್’ ಎಂದು ವಿನಯ ತೋರಿಸುತ್ತಾರೆ, ಪ್ರಾದೇಶಿಕಭಾಷೆಯಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿತವರಿಗೆ ಈ ಎಲ್ಲ ’ಮ್ಯಾನರ್ಸ್’ ಗೊತ್ತಿರುವುದಿಲ್ಲ. ಅಂತಿರುವಾಗ ಇಂಗ್ಲೀಷಿನಿಂದ ಸಂಸ್ಕೃತಿಯ ನಾಶ ಎಂಬುದು ಸುಳ್ಳಲ್ಲವೆ?
ಸಂಸ್ಕೃತಿ ಎಂದರೇನು? ’ಸಮ್ಯಕ್ ಕೃತಿ’. ಸರಿಯಾದ ನಡತೆ. ಆದರೆ ’ಮ್ಯಾನರ್ಸ್’ ಮಾತ್ರ ಸಂಸ್ಕೃತಿಯಲ್ಲ. ನನ್ನ ದೃಷ್ಟಿಯಲ್ಲಿ ಯಾವ ಸಂಸ್ಕೃತಿಯೂ ಕೆಟ್ಟದಲ್ಲ. ವಿದೇಶಿ ಸಂಸ್ಕೃತಿಯಲ್ಲೂ ಒಳ್ಳೆಯ ಅಂಶಗಳಿವೆ. ನಮ್ಮ ಸಂಸ್ಕೃತಿಯಲ್ಲೂ ಕೆಟ್ಟ ಅಂಶಗಳಿವೆ. ಆದರೆ ನಾವು ವಿದೇಶಿ ಸಂಸ್ಕೃತಿಯಲ್ಲಿರುವ ಒಳ್ಳೆಯ ಅಂಶಗಳನ್ನು ಅವರ ಮುಖಮುಸ್ತುತಿ ಮಾಡುವುದಕ್ಕೆ ಮಾತ್ರ ಹಾಗೂ ಕೆಟ್ಟ ಅಂಶಗಳನ್ನು ಅನುಸರಿಸಲು ಮಾತ್ರ ಉಪಯೋಗಿಸುವುದರಿಂದ ನಮ್ಮ ಸಂಸ್ಕೃತಿಯ ಒಳ್ಳೆಯ ಅಂಶಗಳೂ ಮರೆಯಾಗುತ್ತಿವೆ. ಆಂಗ್ಲ ಸಂಸ್ಕೃತಿ ಅದು ಹುಟ್ಟಿ ಬೆಳೆದ ದೇಶಕ್ಕೆ ಸರಿಯಾದುದೇ ಇರಬಹುದು. ಅದು ಕೆಟ್ಟದೆನ್ನಲು ನಮಗೆ ಅಧಿಕಾರವಿಲ್ಲ. ಆದರೆ ಅದನ್ನು ಅಂಧಾನುಕರಣೆ ಮಾಡಿ ’ಸ್ಕರ್ಟ್-ಕೋಟ್’ ಧರಿಸುವುದು ಒಳ್ಳೆಯದು ’ಸಲ್ವಾರ್’ ಧರಿಸುವುದು ಕೆಲಸದವರು ಮಾತ್ರ ಎಂಬ ಭಾವನೆ ತಳೆದರೆ ಅದರಿಂದ ತುಂಬ ಅಪಾಯವಿದೆ.
ಆಂಗ್ಲಭಾಷೆಯ ಮೂಲಕವೂ ಭಾರತೀಯ ಸಂಸ್ಕೃತಿಯನ್ನು ಕಲಿಸಬಹುದು ಎಂಬುದು ಮರೀಚಿಕೆಯೇ ಸರಿ. ಆಂಗ್ಲ ಮಾಧ್ಯಮ ಪೂರ್ವಪ್ರಾಥಮಿಕ ಶಾಲೆಯೊಂದನ್ನು ಹೊಕ್ಕು ನೋಡಿ. ಅಲ್ಲಿನ ಗೋಡೆಯ ಮೇಲೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಒಂದು ಚಿತ್ರವಾದರೂ ಇದ್ದರೆ ಹೇಳಿ. ಅಲ್ಲಿ ಸಿಂಡ್ರೆಲಾ ಇರುತ್ತಾಳೆ, ಝಾನ್ಸಿ ರಾಣಿಯ ಸುದ್ದಿಯಿಲ್ಲ, ಮಿಕ್ಕಿ ಮೌಸ್ ಇರುತ್ತದೆ, ಭಾರತೀಯ ಇಲಿ ಇಲ್ಲ, ಚಾರ್ಲಿ ಚಾಪ್ಲಿನ್ ಮುಂತಾದವರು ಇರುತ್ತಾರೆ ಶಿವಾಜಿ, ಸಂಭಾಜಿಗಳ ಸುಳಿವಿಲ್ಲ. ಭಾರತೀಯ ಸಂಸ್ಕೃತಿಯನ್ನು ಆಧರಿಸಿದ, ಭಾರತದ ಪರಿಸರವನ್ನು ಪ್ರತಿಬಿಂಬಿಸುವ ಒಂದೇ ಒಂದು ನರ್ಸರಿ ’ರೈಮ್’ ಇದ್ದರೆ ಹೇಳಿ. ನಮ್ಮ ದೇಶದ ರಾಜ ಮಹಾರಾಜರ ಪರಿಚಯವಿಲ್ಲದ ಮುಗ್ಧ ಮನಸ್ಸಿನಲ್ಲಿ ಇಂಗ್ಲೆಂಡ್ ರಾಣಿಯನ್ನು ತಂದು ಕೂಡ್ರಿಸುತ್ತೇವೆ. ಅದೇ ಹಳೆ ’ಪುಸಿ ಕ್ಯಾಟ್’ ಇಂಗ್ಲೆಂಡ್‌ಗೆ ಇಲಿಯನ್ನು ಹುಡುಕಿಕೊಂಡು ಹೋಗಿ ರಾಣಿಯ ಕುರ್ಚಿಯ ಕೆಳಗಿರುವ ಇಲಿಯನ್ನು ಹೆದರಿಸುತ್ತದೆ. ಬ್ರಿಟಿಷರು ನಮ್ಮನ್ನು ಬಿಟ್ಟು ಹೋಗಿ ೬೪ ವರ್ಷಗಳಾದರೂ ನಾವಿನ್ನೂ ಅದೇ ದಾಸ್ಯದ ಹಾಡನ್ನು ನಮ್ಮ ಮಕ್ಕಳಿಗೆ ಕಲಿಸುತ್ತೇವೆ. ಇಂಗ್ಲೀಷ್ ಪಾಠಗಳಲ್ಲಿ ಜಾನ್, ಪೀಟರ್ ಬರುತ್ತಾರೆ, ರಾಮ ಲಕ್ಷ್ಮಣರಿಗೆ ಅಲ್ಲಿ ಅವಕಾಶ ಇಲ್ಲ. ಇಂಗ್ಲೀಷ್ ಹಾಡನ್ನು ಹಿಂದೂಸ್ತಾನಿ ಪದ್ಧತಿಯಲ್ಲೋ ಕರ್ನಾಟಕಿ ಶೈಲಿಯಲ್ಲೋ ಹಾಡಲು ಸಾಧ್ಯವೆ? ಹೀಗಿರುವಾಗ ಇಂಗ್ಲೀಷ್ ಮಾಧ್ಯಮದಿಂದ ಭಾರತೀಯ ಸಂಸ್ಕೃತಿಗೆ ಯಾವುದೇ ಹಾನಿಯಿಲ್ಲ ಎನ್ನುವುದು ಹೇಗೆ?
ಸಂಸ್ಕೃತಿಯ ವಿಚಾರ ಬರುವುದು ಹೊಟ್ಟೆ ತುಂಬಿದ ಮೇಲೆ. ಸಂಸ್ಕೃತಿಯ ಬಗ್ಗೆ ಚಿಂತಿಸುತ್ತಿದ್ದರೆ ಹೊಟ್ಟೆ ತುಂಬುವುದಿಲ್ಲ. ಇಂಗ್ಲೀಷ್ ಮಾಧ್ಯಮ ಉದ್ಯೋಗ ಸಿಗಲು ಸಹಾಯ ಮಾಡುತ್ತದೆ ಎಂಬುದು ಇನ್ನೊಂದು ವಾದ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತವರು ಮಾತ್ರ ನೌಕರಿ ಗಿಟ್ಟಿಸುತ್ತಾರೆ ಎಂಬುದು ವ್ಯರ್ಥ ವಾದವೆಂದು ಅನಿಸುತ್ತದೆ. ಹಳ್ಳಿಯ ಶಾಲೆಗಳಲ್ಲಿ ಮಾತೃಭಾಷಾ ಮಾಧ್ಯಮದಲ್ಲಿ ಓದಿದ ಎಷ್ಟೋ ಮಂದಿ ಇಂದು ನಮ್ಮ ದೇಶದಲ್ಲೂ ಪರದೇಶದಲ್ಲೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂಬುದು ಅಪ್ಪಟ ಸತ್ಯ. ತಮ್ಮ ಮಾತೃಭಾಷೆಯಲ್ಲೇ ಅಧ್ಯಯನ ಮಾಡಿದ ಕನ್ನಡಿಗರು, ತಮಿಳರು ಉನ್ನತ ಹುದ್ದೆಗಳನ್ನು ಗಿಟ್ಟಿಸುತ್ತಾರೆ. ಡಾ. ಅಬ್ದುಲ್ ಕಲಾಮ್, ಡಾ. ರಘುನಾಥ ಮಾಶೆಲ್ಕರ್ ಇವರೆಲ್ಲ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣಪಡೆದವರು. ಹಾಗಾಗಿ ಅವರಿಗೆ ವಿದೇಶಕ್ಕೆ ಹೋಗುವುದಕ್ಕಿಂತ ದೇಶದ ಅಭಿವೃದ್ಧಿಯೇ ಮುಖ್ಯವಾಗಿತ್ತು.
ಇಂದು ಇಂಗ್ಲೀಷಿನ ಜ್ಞಾನವಿಲ್ಲದೆ ನೌಕರಿ ಸಾಧ್ಯವಿಲ್ಲ ಅಂದರೆ ಅದಕ್ಕೆ ನಾವೇ ಹೊಣೆ. ಸ್ವಾಭಿಮಾನದ ಅಭಾವದಿಂದಾಗಿ ಅಂತಹ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಇನ್ನು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವುದು ಹಾಗು ವಿದೇಶದಲ್ಲಿ ಉದ್ಯೋಗ ಗಿಟ್ಟಿಸುವುದೇ ಜೀವನದ ಪರಮ ಸಾರ್ಥಕತೆ ಎಂದು ತಿಳಿದವರಿಗೆ ಆಂಗ್ಲ ವ್ಯಾಮೋಹ ಇರುವುದು ಸಹಜ.
ಮುಕ್ತಿಸಂಗ್ರಾಮದ ಸುವರ್ಣಮಹೋತ್ಸವ ವರ್ಷದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿರುವುದು ನಾಚಿಕೆಯ ಸಂಗತಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳನ್ನು ಅವಮಾನಿಸುತ್ತಿರುವುದು ಇನ್ನೂ ನಾಚಿಕೆಗೇಡು.

No comments:

Post a Comment