Monday, August 15, 2011

ಗಣೇಶ ಚತುರ್ಥಿ ಮತ್ತು ಪರಿಸರ ಪ್ರಜ್ಞೆ

ಮಹಾಬಲ ಭಟ್

ಭಾರತೀಯ ಸಂಸ್ಕೃತಿ ಮತ್ತು ಪ್ರಕೃತಿ ಪರಸ್ಪರ ಬೆಸೆದುಕೊಂಡಿವೆ. ನಮ್ಮ ಜೀವನ ಶೈಲಿ ಪ್ರಕೃತಿಗೆ ಅನುಕೂಲವಾಗಿರಬೇಕೆಂಬುದು ನಮ್ಮ ಪೂರ್ವಜರ ಕಲ್ಪನೆಯಾಗಿತ್ತು. ಅವರ ಜೀವನದ ಪ್ರತಿಯೊಂದು ಹೆಜ್ಜೆಯೂ ಪ್ರಕೃತಿಯ ಆರಾಧನೆಯ ಜೊತೆಗೂಡಿ ಇರುತ್ತಿತ್ತು. ಪ್ರಕೃತಿವಿರುದ್ಧವಾದ ಕೃತಿಯನ್ನೇ ಪಾಪವೆಂದು ಕರೆಯುತ್ತಿದ್ದರು. ಪ್ರಕೃತಿಯ ವಿಕೋಪಗಳಿಗೆ ಹೆದರಿ ಅವನ್ನು ದೇವರೆಂದು ಕರೆದು ಪೂಜಿಸುತ್ತಿದ್ದರು.

ವೈದಿಕ ಕಾಲದ ದೇವತೆಗಳೆಲ್ಲ ಪ್ರಕೃತಿದೇವತೆಗಳು. ಇಂದ್ರ ಮಳೆಯ ದೇವತೆ, ಪರ್ಜನ್ಯ ಮೋಡದ ದೇವತೆ, ವಾಯು ಗಾಳಿಯ ಒಡೆಯ, ಅಗ್ನಿ ಬೆಂಕಿಯ ಅಧಿದೇವತೆ ಹೀಗೆ ಪ್ರಕೃತಿಯ ಒಂದೊಂದು ಶಕ್ತಿಯನ್ನೂ ಒಂದೊಂದು ದೇವತೆಯಂತೆ ಕಂಡು ಸ್ತುತಿಸುವ ಪರಿಪಾಠ ಋಗ್ವೇದ ಕಾಲದಲ್ಲಿಯೇ ಆರಂಭವಾಯಿತು. ಬೆಳಿಗ್ಗೆ ಉಷೆಯ ಸ್ಮರಣೆಯೊಂದಿಗೆ ಆರಂಭವಾಗುತ್ತಿದ್ದ ದಿನಚರಿ ಸೂರ್ಯ, ಚಂದ್ರ, ಗ್ರಹಗಳು ಹೀಗೆ ಎಲ್ಲ ಪ್ರಕೃತಿಶಕ್ತಿಗಳನ್ನು ಆರಾಧಿಸಿ ರಾತ್ರಿಯ ಪೂಜೆಯೊಂದಿಗೆ ಮುಗಿಯುತ್ತಿತ್ತು. ಇದನ್ನೆಲ್ಲ ಕೇವಲ ಹೆದರಿಕೆಯಿಂದ ಮಾಡಿದ್ದಲ್ಲ. ಪ್ರಕೃತಿಯನ್ನು ಪ್ರೀತಿಸುತ್ತಿದ್ದ, ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಸಾಧಿಸಿದ್ದ ಸುಸಂಸ್ಕೃತ ಸಮಾಜದ ಜೀವನಕ್ರಮ ಇದಾಗಿತ್ತು.

ನಮ್ಮ ಹಬ್ಬಗಳೂ ಅಷ್ಟೇ. ಪ್ರಕೃತಿಯೊಡನೆಯ ನಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತಿದ್ದವು. ಸೂರ್ಯನ ಗತಿ ಬದಲಾದರೆ ಸಂಕ್ರಾಂತಿ ಹಬ್ಬ, ವಸಂತನ ಆಗಮನದಿಂದ ಚಿಗುರೆಲೆಗಳೊಡೆದರೆ ಯುಗಾದಿ ಹಬ್ಬ, ಹಾವನ್ನು ಪೂಜಿಸುವ ನಾಗಪಂಚಮಿ, ಮಣ್ಣಿನ ಆನೆಯ ಮೂರ್ತಿಯನ್ನು ಪೂಜಿಸುವ ಗಣೇಶ ಚತುರ್ಥಿ, ತುಲಸಿಯ ಪೂಜೆಗೆ ತುಲಸಿ ವಿವಾಹ, ಅಭ್ಯಂಗಸ್ನಾನಕ್ಕಾಗಿ ನರಕ ಚತುರ್ದಶಿ, ಗೋವುಗಳನ್ನು ಪೂಜಿಸುವ ಗೋಪೂಜೆ... ಒಂದೇ ಎರಡೇ.. ಯಾವ ಹಬ್ಬದಲ್ಲಿಯೂ ಪ್ರಕೃತಿಯ ಪೂಜೆ ಇಲ್ಲವೆಂದಿಲ್ಲ.

ಗಣೇಶ ಚತುರ್ಥಿ ಹತ್ತಿರ ಬರುತ್ತಿದೆ. ನಾವು ಎಂದಾದರೂ ಯೋಚಿಸಿದ್ದೇವಾ ಗಣೇಶ ಚತುರ್ಥಿಯ ಆಚರಣೆ ಹೇಗೆ ಯಾಕೆ ಎಂದು ?

ಗಣಪತಿ ಪ್ರಥ್ವಿಯ ಸೃಷ್ಟಿಗಿಂತ ಮೊದಲೇ ಇದ್ದ ಪರಬ್ರಹ್ಮತತ್ತ್ವ. ಆನೆಯ ಘೀಳಿಡುವಿಕೆಯಂತಹ ಓಂಕಾರ ನಾದ ಹೊರಹೊಮ್ಮುತ್ತಿರುವುದರಿಂದ ಆ ತತ್ತ್ವಕ್ಕೆ ಆನೆಯ ಮುಖದ ಸಾಕಾರರೂಪವನ್ನು ಕೊಡಲಾಯಿತು. ಉಪನಿಷತ್ತಿನಲ್ಲಿ ಗಣಪತಿಯನ್ನು ತ್ವಂ ಭೂಮಿ: ಆಪೋ ಅನಲೋ ಅನಿಲೋ ನಭ: ಎಂದು ಸ್ತುತಿಸಿದ್ದಾರೆ. ಅಂದರೆ ಈ ಪ್ರಪಂಚಕ್ಕೆ ಆಧಾರಭೂತವಾಗಿರುವ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಗಳೆಂಬ ಪಂಚಭೂತಗಳೇ ನೀನು. ಅಂತಹ ವಿನಾಯಕನ ಪೂಜೆಗೆ ಪಂಚಭೂತ ವಿಶಿಷ್ಟವಾದ ವಸ್ತುಗಳೇ ಇರಬೇಕು. ಈ ಜಗತ್ತಿನ ಪ್ರತಿಯೊಂದು ಜೀವಿಯ ಶರೀರವೂ ಪಂಚಭೂತಗಳಿಂದಲೇ ಆಗಿವೆಯಾದರೂ ದೇಹಕ್ಕೆ ಸಾಕಾರ ರೂಪವನ್ನು ಕೊಡುವುದು ಪೃಥ್ವಿ ಅಂದರೆ ಭೂಮಿತತ್ತ್ವ. ಅದು ಜೀವಿ ಸತ್ತ ಮೇಲೂ ಪಾರ್ಥಿವ ಶರೀರದ ರೂಪದಲ್ಲಿ ಉಳಿದುಕೊಂಡಿರುತ್ತದೆ. ಹೀಗೆ ಎಲ್ಲ ಜೀವಿಗಳ ಶರೀರವೂ ಮಣ್ಣಿನ ಅಂಶದಿಂದಲೇ ಆಗಿರುವುದರಿಂದ ನಾವು ಪುಜಿಸುವ ದೇವರ ಮೂರ್ತಿಯನ್ನೂ ಮಣ್ಣಿನಿಂದಲೇ ಮಾಡುವುದು ಸೂಕ್ತ. ಮಳೆಗಾಲದಲ್ಲಿ ಮಣ್ಣಿನ ಜೊತೆ ನೀರು ಸೇರಿಕೊಂಡು ಮಣ್ಣಿಗೆ ವಿಶೇಷ ಶಕ್ತಿ ಬಂದಿರುತ್ತದೆ. ಮಳೆ ನೀರಿನಲ್ಲಿ ಅಡಕವಾಗಿರುವ ಆಕಾಶ, ಗಾಳಿ ಹಾಗೂ ತೇಜಸ್ಸಿನ ಅಂಶಗಳು ಮಣ್ಣಿನಲ್ಲಿ ಪಂಚಭೂತಗಳ ಸಾನ್ನಿಧ್ಯವನ್ನು ಉಂಟುಮಾಡುತ್ತವೆ. ಇಂತಹ ಮಣ್ಣಿನಿಂದ ಮಾಡಿದ ಮೂರ್ತಿಗೆ ವಿಶೇಷಶಕ್ತಿ ಇರದೇ ಇದ್ದೀತೆ? ಬರಿ ಮಣ್ಣನ್ನು ಪೂಜಿಸಿಯೆಂದರೆ ಯಾರೂ ಪೂಜಿಸುತ್ತಿರಲಿಲ್ಲ. ಹಾಗಾಗಿ ಅದನ್ನು ಮೂರ್ತಿಯ ರೂಪದಲ್ಲಿ ಪೂಜಿಸುವ ಸಂಪ್ರದಾಯವನ್ನು ಆರಂಭಿಸಲಾಯಿತು.

ಗಣಪತಿಗೆ ನಾವು ಅರ್ಪಿಸುವುದೇನು? ಗರಿಕೆಯ ಹುಲ್ಲು. ಮಳೆಗಾಲದಲ್ಲಿ ಸೊಂಪಾಗಿ ಬೆಳೆಯುವ ಈ ಹುಲ್ಲು ಔಷಧಿ ಸಸ್ಯವೂ ಹೌದು. ಗೋವಾದಲ್ಲಿ ಮಾಠೊಳ್ಳಿ ಎಂದು ಕರೆಯಲ್ಪಡುವ ಫಲಾವಳಿಯನ್ನು ನಾವು ಗಣಪತಿಯ ಮಂಟಪದಲ್ಲಿ ಕಟ್ಟುತ್ತೇವೆ. ಅಲ್ಲಿ ನಾವು ಕಟ್ಟುವುದು ಎಲ್ಲ ನಿಸರ್ಗದಿಂದ ಆಯ್ದ ವಸ್ತುಗಳೇ. ಈ ಕಾಲದಲ್ಲಿ ಸಿಗುವ ಎಲ್ಲ ಹಣ್ಣು,ಹಂಪಲ, ತರಕಾರಿ, ಬೆಳೆಗಳನ್ನು ಈ ಮಂಟಪದಲ್ಲಿ ಕಟ್ಟುತ್ತೇವೆ. ವಾತಾವರಣವನ್ನು ಶುದ್ಧಗೊಳಿಸುವ ತಳಿರಿನ ತೋರಣ ಕಟ್ಟುತ್ತೇವೆ. ಒಟ್ಟಿನಲ್ಲಿ ಸಂಪೂರ್ಣ ನಿಸರ್ಗವನ್ನೇ ಗಣಪತಿಯ ಸುತ್ತಲೂ ನಿರ್ಮಿಸುತ್ತೇವೆ.

ಗಣೇಶ ಚತುರ್ಥಿಯ ಆಚರಣೆಯನ್ನು ನಾವು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಮಾಡುತ್ತಿದ್ದೇವೆ. ಆದರೆ ಆಚರಿಸುವ ವಿಧಾನ ಮಾತ್ರ ಸಂಪೂರ್ಣ ಬದಲಾಗಿದೆ. ತಳಿರು ತೋರಣದ ಜಾಗದಲ್ಲಿ ಪ್ಲಾಸ್ಟಿಕ್ ತೋರಣಗಳು ಬಂದಿವೆ (ಅವು ಒಂದೇ ವರ್ಷಕ್ಕೆ ಹಾಳಾಗುವುದಿಲ್ಲವಲ್ಲ, ಮುಂದಿನವರ್ಷವೂ ಉಪಯೋಗಕ್ಕೆ ಬರುತ್ತವೆ!). ಹಣ್ಣು ತರಕಾರಿಗಳನ್ನೆಲ್ಲ ತರುವ ಕಷ್ಟ ಯಾರಿಗೆ ಬೇಕು ಹೇಳಿ? ಪ್ಲಾಸ್ಟಿಕ್‌ನಲ್ಲಿ ಏನು ಬೇಕಾದರೂ ಸಿಗುತ್ತದೆ ಈಗ. ಸುಂದರವಾಗಿಯೂ ಕಾಣಿಸುತ್ತದೆ, ಬೆಲೆಯೂ ಕಡಿಮೆ. ಥರ್ಮೋಕಾಲನಿಂದ ಸುಂದರವಾದ ಮಂಟಪವನ್ನು ನಿರ್ಮಿಸಬಹುದು, ಝಗಮಗಿಸುವ ವಿದ್ಯುತ್ ದೀಪಗಳನ್ನು ಹಾಕಿದರೆ ಆಹಾ! ಆ ವೈಭವವನ್ನು ವರ್ಣಿಸಲಾಗದು(?!)

ಇಂತಹ ಕೃತ್ರಿಮತೆಯ ಮಧ್ಯೆ ಕುಳಿತುಕೊಳ್ಳುವ ಗಣಪತಿಯಾದರೂ ಶುದ್ಧನೆ? ಈಗ ಮೊದಲಿನಂತೆ ಮಣ್ಣಿನಿಂದ ಗಣಪತಿಯನ್ನು ತಯಾರಿಸುವ ಕುಶಲ ಕರ್ಮಿಗಳಿಲ್ಲ. ಒಂದೇ ಅಚ್ಚಿನಿಂದ ತಯಾರಿಸಿದ ಸಾವಿರಾರು ಮೂರ್ತಿಗಳು ಮಾರುಕಟ್ಟೆಯಲ್ಲಿ ಸುಲಭ ಬೆಲೆಯಲ್ಲಿ ಲಭ್ಯ. ಅವೆಲ್ಲ ಪ್ಲಾಸ್ಟರ್ ಒಫ್ ಪ್ಯಾರಿಸ್ ಎಂಬ ಮಣ್ಣಿನ ವೈರಿಯಿಂದ ತಯಾರಿಸಿದ್ದು. ಮಣ್ಣಿನ ಗಣಪತಿಯನ್ನು ತಯಾರಿಸುತ್ತಿದ್ದಾಗ ಅದಕ್ಕಾಗಿ ಬೇಕಾಗಿದ್ದ ಬಣ್ಣವನ್ನೂ ಮಣ್ಣಿನಿಂದಲೋ ಇಲ್ಲ ಸಸ್ಯಗಳಿಂದಲೋ ತಯಾರಿಸುತ್ತಿದ್ದರು. ಈಗ ಬಳುಸುವ ರಾಸಾಯನಿಕವರ್ಣಗಳು ನೀರಿನಲ್ಲಿ ಕರಗುವುದಿಲ್ಲ, ಮಣ್ಣಿನಲ್ಲಿ ಒಂದಾಗುವುದಿಲ್ಲ. ಅದೆಲ್ಲ ನಮಗೇಕೆ? ನಾವು ಗಣಪತಿ ಪೂಜೆಯ ಸಂಪ್ರದಾಯವನ್ನು ಮುಂದುವರಿಸುತ್ತಿದ್ದೇವೋ ಇಲ್ಲವೋ? ದೊಡ್ಡ ಹೊಟ್ಟೆಯ ಗಣಪನಿಗೆ ವಿವಿಧ ಭಕ್ಷ್ಯಗಳನ್ನು ಅರ್ಪಿಸುತ್ತೇವೋ ಇಲ್ಲವೋ?! ಪುಣ್ಯಕ್ಕೆ ನೈವೇದ್ಯಕ್ಕೆ ಪ್ಲಾಸ್ಟಿಕ್ ಹಣ್ಣುಗಳನ್ನೂ ಲಡ್ಡುಗಳನ್ನೂ ತರುತ್ತಿಲ್ಲ; ಯಾಕೆಂದರೆ ಅವನ್ನು ನಾವು ಪ್ರಸಾದ ಎಂದು ಮುಕ್ಕಲು ಬರುವುದಿಲ್ಲವಲ್ಲ! ಆದರೆ ಬೇಕರಿ ಸಾಮಾನುಗಳು ಈಗಾಗಲೇ ಪುಜಾಗೃಹವನ್ನೂ ಅಡುಗೆ ಮನೆಯನ್ನೂ ಸೇರುತ್ತಿವೆ!

ಹೀಗೆ ಸಂಪೂರ್ಣ ನೈಸರ್ಗಿಕವಾಗಿದ್ದ ಪೂಜೆಯನ್ನು ಪ್ರಕೃತಿವಿರುದ್ಧವಾಗಿಯೇ ಮಾಡಿದರೆ ಏನು ಪ್ರಯೋಜನ? ರಾಸಾಯನಿಕಯುಕ್ತ ಗಣಪತಿ ಮೂರ್ತಿಗಳು ಭೂಮಿ-ನೀರುಗಳನ್ನು ಕೆಡಿಸುತ್ತಿದ್ದರೆ ವಿದ್ಯುತ್ ದೀಪಗಳು ಅಗ್ನಿತತ್ತ್ವವನ್ನು ಕೆಡಿಸುತ್ತಿವೆ. ಪಟಾಕಿಗಳು ಗಾಳಿಯನ್ನೂ ಧ್ವನಿವರ್ಧಕಗಳಿಂದಾಗುತ್ತಿರುವ ಶಬ್ದಮಾಲಿನ್ಯ ಆಕಾಶತತ್ತ್ವವನ್ನೂ ಕೆಡಿಸುತ್ತಿವೆ. ಪಂಚಭೂತಾತ್ಮಕವಾದ ಗಣಪತಿಯ ಪೂಜೆಯನ್ನು ಪಂಚಭೂತಗಳನ್ನು ಕೆಡಿಸುವ ಮೂಲಕ ಮಾಡುತ್ತಿದ್ದೇವೆ. ಇದು ಯಾವ ಪುರುಷಾರ್ಥಕ್ಕೆ?

ಇಂದು ಸಾರ್ವಜನಿಕ ಗಣೇಶೋತ್ಸವ ತುಂಬಾ ಜನಪ್ರಿಯವಾಗುತ್ತಿದೆ. ಅಲ್ಲಿಯೂ ಶೋಕಿಗೇ ಹೆಚ್ಚು ಪ್ರಾಧಾನ್ಯತೆ. ಸ್ವಾತಂತ್ರ್ಯಾಂದೋಲನಕಾಲದಲ್ಲಿ ಜನರ ಸಂಘಟನೆಗಾಗಿ ಲೋಕಮಾನ್ಯ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ತನ್ನತನವನ್ನು ಕಳೆದುಕೊಳ್ಳುತ್ತಿದೆ ಎಂದೆನಿಸುತ್ತದೆ. ಆದರೂ ಕೆಲವೆಡೆ ಈ ಉತ್ಸವ ಸಾಂಸ್ಕೃತಿಕ ವೈಭವವನ್ನು ಮೆರೆಯುವ ಕಾರ್ಯಕ್ರಮವಾಗಿ ಹೊರಹೊಮ್ಮುತ್ತಿರುವುದು ಸಮಾಧಾನದ ಸಂಗತಿ. ಗೋವಾದಲ್ಲಿಯೂ ಗಣೇಶೋತ್ಸವ ಸಮಿತಿಗಳು ಭಜನಾ ಸ್ಪರ್ಧೆ, ನಾಟಕ ಸ್ಪರ್ಧೆ ಮುಂತಾದ ಸಂಸ್ಕೃತಿಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತವೆ. ಇದು ಸ್ತುತ್ಯರ್ಹ.

ನಾವು ಯಾವುದೇ ಹಬ್ಬ ಹರಿದಿನಗಳನ್ನು ಅವುಗಳ ಅರ್ಥವನ್ನು ತಿಳಿದು ಮಾಡೋಣ. ನಮ್ಮ ಮೋಜಿಗಾಗಿ ಪ್ರಕೃತಿವಿರುದ್ಧವಾದ ಉತ್ಸವಗಳನ್ನು ಆಚರಿಸದಿರೋಣ. ಇದರಿಂದ ದೇವರೂ ಸಂಪ್ರೀತನಾಗುತ್ತಾನೆ, ಪ್ರಕೃತಿದೇವಿಯೂ ಮುನಿಸಿಕೊಳ್ಳುವುದಿಲ್ಲ. ಶ್ರೀ ಗಣೇಶನು ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ.

No comments:

Post a Comment