Monday, August 15, 2011

ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡದ ಕಹಳೆ

ವಿಘ್ನೇಶ್ವರ, ಶಿವಮೊಗ್ಗ

ಸ್ವಾತಂತ್ರ್ಯ ಹೋರಾಟದಲ್ಲಿ ಇತರ ಎಲ್ಲಾ ಭಾಷೆಗಳಂತೆ ಕನ್ನಡದ ಪಾತ್ರವೂ ಅತ್ಯಂತ ಗಣನೀಯವಾದುದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಇಲ್ಲವೇ ದೇಶಭಕ್ತಿಪರ ಸಾಹಿತ್ಯ ರಚಿಸಿದ ಅನೇಕರು ಮುಂದೆ ಗಣ್ಯ ಸಾಹಿತಿಗಳೆನಿಕೊಂಡರು. ಆಲೂರು ವೆಂಕಟರಾಯರು, ದರಾ.ಬೇಂದ್ರೆ, ಎಸ್.ಕೆ.ಕರೀಂ ಖಾನ್, ಮುದವೀಡು ಕೃಷ್ಣರಾವ್, ಬಸವರಾಜ್ ಕಟ್ಟಿಮನಿ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಭಾರತೀಸುತ, ತರಾಸು, ಸಿದ್ಧವನಹಳ್ಳಿ ಕೃಷ್ಣಶರ್ಮ, ರಂಗನಾಥ ದಿವಾಕರ, ಜಯತೀರ್ಥ ರಾಜಪುರೋಹಿತ ಮುಂತಾದ ಕನ್ನಡದ ಮೇರು ಸಾಹಿತಿಗಲು ತಮ್ಮ ಸಾಹಿತ್ಯದ ಮೂಲಕ ಜನರಿಗೆ ಪ್ರೇರಣೆ ನೀಡಿದ್ದಲ್ಲದೆ, ಸ್ವತ: ಚಳುವಳಿಯಲ್ಲಿ ಭಾಗವಹಿಸಿ ಜೈಲು ಕಂಡರು. ಆಗ ಸರಕಾರಿ ಹುದ್ದೆಯಲ್ಲಿದ್ದ ಕನ್ನಡದ ವರಕವಿ ಬೇಂದ್ರೆಯವರು ತಮ್ಮ ನರಬಲಿ ಎಂಬ ರಾಷ್ಟ್ರ ಜಾಗೃತಿಯ ಕವನಕ್ಕಾಗಿ ಕೆಲಸ ಕಳೆದುಕೊಂಡಿದ್ದೇ ಅಲ್ಲದೆ ಜೈಲುವಾಸವನ್ನೂ ಅನುಭವಿಸಿದ್ದರು. ಮತ್ತೊಬ್ಬ ಮೇರುಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತರು ಗಾಂಧೀಜಿಯವರ ಅಸಹಕಾರ ಕರೆಯಂತೆ ಕಾಲೇಜು ತ್ಯಜಿಸಿ ಸೇವಾದಳದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಚಳುವಳಿಯ ಪ್ರಭಾವ ಕಾರಮ್ತರ ಮುಂದಿನ ಸಾಹಿತ್ಯ ಕೃತಿಗಳಲ್ಲಿ ದಟ್ಟವಾಗಿ ವ್ಯಾಪಿಸಿರುವುದನ್ನು ಕಾಣಬಹುದು. ಕಾರಂತರ ಔದಾರ್ಯದ ಉರುಳಲ್ಲಿ ಕಾದಂಬರಿಯು ದಕ್ಷಿಣ ಕನ್ನಡದ ಸ್ವಾತಂತ್ರ್ಯ ಯೋಧರೊಬ್ಬರ ಜೀವನದ ಛಾಯೆಯನ್ನು ಒಳಗೊಂಡಿದ್ದರೆ, ಅವರ ಚೋಮನ ದುಡಿ ಯ ಸೃಷ್ಟಿಯಲ್ಲೂ ಚಳುವಳಿಯ ಪ್ರಭಾವವಿದೆ. ಕುವೆಂಪು, ವಿ.ಕೃ.ಗೋಕಾಕ, ಜಿ.ಪಿ. ರಾಜರತ್ನಂ, ವಿ.ಸೀತಾರಮಯ್ಯ ಮುಂತಾದ ಹಿರಿಯರ ಬರಹಗಳು ಸ್ವಾತಂತ್ರ್ಯ ಯೋಧರಿಗೆ ನೀಡಿದ ಸ್ಫೂರ್ತಿ-ಪ್ರೇರಣೆ ಅನಿರ್ವಚನೀಯ. ಜಿ.ಪಿ. ರಾಜರತ್ನಂ ಅವರ ಗಂಡುಕೊಡಲಿ ನಾಟಕ, ತಿರುಮಲೆ ರಾಜಮ್ಮನವರ ಜೈ ಭಾರತಭುವಿಗೆ, ಮಾತೆಗೆ ಜೈ, ಸನ್ಮಂಗಳವಾಗಲಿ ಸತತಮ್ ಗೀತೆ, ಬಿ.ವೆಂಕಟಾಚಾರ್ಯರು ಬಂಗಾಳಿಯಿಂದ ಕನ್ನಡಕ್ಕೆ ಅನುವಾದ ಮಾಡಿದ ಬಂಕಿಮಚಂದ್ರರ ಆನಂದಮಠ ದೇವಿ ಚೌಧುರಾಣಿ ಕೃತಿಗಳು, ಶ್ರೀ ಗಳಗನಾಥರ ಕಾದಂಬರಿಗಳು ಜನಸಾಮಾನ್ಯರಲ್ಲಿ ಸ್ವಾತಂತ್ರ್ಯದ ಬಯಕೆಯನ್ನು ಬಡಿದೆಬ್ಬಿಸಿ ಹೋರಾಟಕ್ಕೆ ಎಳೆತಂದವು.
ಸ್ವಾತಂತ್ರ್ಯಾಂದೋಲನ ಕಾಲದಲ್ಲಿ ರಚಿತವಾದ ರಾಷ್ಟ್ರೀಯ ಸಾಹಿತ್ಯವನ್ನು ಅದರಲ್ಲೂ ವಿಶೇಷವಾಗಿ ಕಾವ್ಯವನ್ನು ನಾವು ಆರಾಧನಾ ಪ್ರಧಾನ ಮತ್ತು ಬೋಧನಾಪ್ರಧಾನವೆಂದು ವಿಂಗಡಿಸಬಹುದು. ಒಂದುಕಡೆ ದೇಶವನ್ನೇ ತಾಯಿಯೆಂದು, ದೇವರೆಂದು ಆರಾಧಿಸುವ ಸಾಹಿತ್ಯಗಳು ರಚನೆಯಾದರೆ, ಇನ್ನೊಂದೆಡೆ ಜನರಲ್ಲಿ ಬ್ರಿಟೀಷರ ವಿರುದ್ಧ ಆಕ್ರೋಶವನ್ನು ನಿರ್ಮಾಣ ಮಾಡುವ, ಜನರನ್ನು ದೀರ್ಘಕಾಲೀನ ನಿದ್ದೆಯಿಂದ ಬಡಿದೆಬ್ಬಿಸುವ ಸಾಹಿತ್ಯಗಳು ರಚನೆಗೊಂಡವು. ವಿಶೇಷವೆಂದರೆ ಈ ಎರಡೂ ಪ್ರಕಾರಗಳನ್ನು ಒಳಗೊಂಡ ಆನಂದಮಠ ದಂತಹ ಕಾದಂಬರಿಯೂ ಈ ಕಾಲದಲ್ಲಿ ರಚಿತವಾಯಿತು.
ಒಂದು ವಿಶಾಲ ಜನಸಮುದಾಯದ ಮಧ್ಯೆ ಕ್ರಾಂತಿಯ ಹೋರಾಟದ ಭೂಮಿಕೆಯನ್ನು ಸಿದ್ಧಪಡಿಸಬೇಕಾದರೆ ಈ ಎರಡೂ ಪ್ರಕಾರಗಳು ಅತ್ಯಂತ ಮಹತ್ತ್ವದ ಪಾತ್ರವನ್ನು ವಹಿಸುತ್ತವೆ. ಯಾವುದೇ ದೇಶದ ಜನ ಆ ದೇಶವನ್ನು ರಕ್ಷಿಸಿಕೊಳ್ಳಬೇಕು ಎಂತಾದರೆ ಆ ಜನರಿಗೆ ದೇಶದ ಕುರಿತಾಗಿ ಭಾವನಾತ್ಮಕ ಸಂಬಂಧ ಇರಬೇಕು. ಆ ಸಂಬಂಧ ಬರುವುದು ಭಕ್ತಿಯಿಂದ ಇಲ್ಲವೇ ಪ್ರೀತಿಯಿಂದ. ಸಾವಿರಾರು ವರ್ಷಗಳ ಪರಕೀಯರ ಆಕ್ರಮಣ-ಆಡಳಿತದಿಂದಾಗಿ ಭಾರತೀಯರಲ್ಲಿ ಮಸುಕಾಗಿ ಹೋಗಿದ್ದ ದೇಶದ ಕುರಿತಾದ ಭಕ್ತಿ ಪ್ರೀತಿಗಳು ಮತ್ತೆ ಪ್ರಜ್ವಲಿಸುವಂತೆ ಮಾಡಿದ್ದು ಸಾಹಿತ್ಯಗಳೇ. ಬಂಕಿಮರ ವಂದೇ ಮಾತರಮ್ ಅಂತೂ ದೇಶವಾಸಿಗಳಿಗೆ ದಿವ್ಯಮಂತ್ರವೆನಿಸಿತು. ತಾಯಿ ಭಾರತಿಯಲ್ಲಿ ದುರ್ಗೆಯ ದರ್ಶನ ಮಾಡಿಸಿತು. ಭಾವನಾತ್ಮಕವಾಗಿ ಜನರನ್ನು ಮೇಲಕ್ಕೆತ್ತಿದರಷ್ಟೆ ಸಾಲದು ಅವರ ಭಾವನೆಗಳು ಕ್ರಿಯಾತ್ಮಕವಾಗಿ ಹರಿಯಬೇಕು.ಹಾಗಾಗಬೇಕಾದರೆ ಜನರಿಗೆ ಒಂದು ಸ್ಪಷ್ಟ ದೃಷ್ಟಿಕೋನ-ದಿಕ್ಕು ಬೇಕು. ಬೋಧನಾಪ್ರಧಾನ ಸಾಹಿತ್ಯ ಈ ಕೊರತೆಯನ್ನು ನೀಗಿಸಿತು. ತಿಲಕ, ಅರವಿಂದ, ರವೀಂದ್ರ, ಸಾವರ್ಕರರ ಬರಹಗಳು ಜನರನ್ನು ಹೋರಾಟದ ಹಾದಿಗೆ ಎಳೆದು ತಂದವು.
ಸ್ವಾತಂತ್ರ್ಯ ಹೋರಾಟವನ್ನು ವ್ಯಾಪಕಗೊಳಿಸುವ, ಜನರನ್ನು ಹೋರಾಟಕ್ಕೆ ಅಣಿಗೊಳಿಸುವ ಕಾರ್ಯದಲ್ಲಿ ಕನ್ನಡ ಸಾಹಿತಿಗಳೇನೂ ಹಿಂದೆ ಬಿದ್ದಿಲ್ಲ. ಕನ್ನಡದಲ್ಲಿಯೂ ಕೂಡ ಎರಡೂ ರೀತಿಯ ಸಾಹಿತ್ಯ ರಚನೆಯಾಯಿತು.
ಆವಿನದ ನೊರೆಹಾಲನೊಲ್ಲೆನು, ದೇವಲೋಕದ ಸುಧೆಯನೊಲ್ಲೆನು
ಪಾವನಳೆ ನಿನ್ನಂಘ್ರಿಕಮಲದ ಸೇವೆಯದು ದೊರೆತಿಹುದು ತಾಯೆ |
ಶ್ರೀವರನ ಕೃಪೆಯಿಂದ ಬೇರಿನ್ನೇನು ಬೇಡೆನಗೆ ||
ಎಂದು ಹಾಡಿದ ಸಾಲಿ ರಾಮಚಂದ್ರರಾಯರು ತಾಯಿ ಭಾರತಿಯ ಸೇವೆಯ ಅವಕಾಶ ದೊರೆಯುವುದಕ್ಕಿಂತ ಹೆಚ್ಚಿನ ಭಾಗ್ಯ ಬೇರೆ ಇಲ್ಲ ಎಂದರು. ಶಾಲಾ ಶಿಕ್ಷಕರಾಗಿದ್ದ ಅವರು ನೇರವಾಗಿ ಹೋರಾಟದ ಮಾತುಗಳನ್ನಾಡುವಂತಿರಲಿಲ್ಲ. ಅಂದಿನ ಸಮಯದಲ್ಲಿ ದೇಶಸೇವೆಯೆಂದರೆ ತಾಯಿಯ ದಾಸ್ಯಮುಕ್ತಿಗಾಗಿ ಪ್ರಯತ್ನ. ರಾಮಚಂದ್ರರಾಯರೂ ಪರೋಕ್ಷವಾಗಿ ದಾಸ್ಯರಕ್ಕಸನ ವಿರುದ್ಧದ ಹೋರಾಟವೇ ಭಾಗ್ಯವೆಂದರು. ಅದಕ್ಕಾಗಿ ಜನರನ್ನು ಹುರಿದುಂಬಿಸಿದರು.
ಕನ್ನಡದ ಭಗವದ್ಗೀತೆ ಮಂಕುತಿಮ್ಮನ ಕಗ್ಗವನ್ನು ಬರೆದ ಡಿ.ವಿ.ಜಿ. ವಂದೇ ಮಾತರಂ ಅನ್ನು ಅನುಸರಿಸಿ ದೇಶವನ್ನು ವರ್ಣಿಸಿ ಕವನ ಬರೆದರು. ದೇಶಭಕ್ತಪ್ರತಿಜ್ಞೆ ಎಂಬ ಕವನದಲ್ಲಂತೂ
ಎನ್ನಯ ಮಾನಸಭವನದೊಳುನ್ನತ ವೇದಿಯಲಿ
ದೇಶಮಾತೆಯನಿರಿಸುತ್ತೆನ್ನಯ ಸರ್ವಸ್ತಮನಾ |
ಪುಣ್ಯೋರ್ವಿಯಂಘ್ರಿಗರ್ಪಿಸಿ ಮಣಿವೆಂ ||
ಎಂದು ತಾಯಿ ಭಾರತಿಗೆ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡರು. ದೇಶವೇ ತಾಯಿ, ತಾಯಿಗಾಗಿ ಎಲ್ಲವೂ ಎಂಬ ಮಾನಸಿಕತೆಯನ್ನು ತುಂಬಲು ಯತ್ನಿಸಿದರು.
ಸಾಲಿ ರಾಮಚಂದ್ರರಾಯರು ಮತ್ತು ಡಿ.ವಿ.ಜಿ.ಯವರದು ಆರಾಧನಾ ಮಾರ್ಗವಾದರೆ, ಕುವೆಂಪು ಅವರು ಆರಾಧನಾ ಮಾರ್ಗದ ಜೊತೆಗೆ ಬೋಧನಾ ಮಾರ್ಗದಲ್ಲೂ ನಡೆದರು. ಒಂದು ಕಡೆ ದೇಶದ ಬಗ್ಗೆ, ತಾಯಿ ಭಾರತಿಯ ಬಗ್ಗೆ ಭಕ್ತಿ, ಪ್ರೀತಿ, ಅಭಿಮಾನವನ್ನು ಮೂಡಿಸಿದುದರ ಜೊತೆ ಜೊತೆಯಲ್ಲೇ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದು ಬೆನ್ನು ತಟ್ಟಿದರು. ಸ್ವಾತಂತ್ರ್ಯ ಹೋರಾಟದ ರಣಾಂಗಣಕ್ಕೆ ಕಳಿಸಿದರು.
ಭರತಭೂಮಿ ನನ್ನ ತಾಯಿ
ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು
ಎಂದು ಹಾಡಿದ ಕುವೆಂಪು ದೇಶದ ನದಿ ಕಡಲುಗಳನ್ನು ತೀರ್ಥವೆಂದು ಕೊಂಡಾಡಿದರು.
ಸಾತಂತ್ರ್ಯದ ಸ್ವರ್ಗಕೇರೆ
ಪುಣ್ಯದೇಣಿ ಮೆಟ್ಟಿಲು
ಎಂದು ಹೇಳುತ್ತಾ ಸ್ವಾತಂತ್ರ್ಯವೆ ಸ್ವರ್ಗ ಎಂಬ ಕನಸನ್ನು ಮತ್ತು ಅದನ್ನು ನನಸಾಗಿಸುವ ಹಂಬಲವನ್ನು ವ್ಯಕ್ತಪಡಿಸಿದರು. ಇನ್ನೊಂದೆಡೆ
ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ ಎಂದು ಹೇಳುತ್ತಾ ಕುಂದುಕೊರತೆಗಳಿವೆಯೆಂಬ ಅಳಲನ್ನು ಪ್ರಗತಿಯ ಪಥದಲ್ಲಿ ಹಿಂದುಳಿದವಳೆಂಬ ನೋವನ್ನು ನಾ ಬಲ್ಲೆ ಆದರೂ
ಆದರೊಲಿಯೆನು ಅನ್ಯರ, ಚಿನ್ನ ಒಲಿದಿಹ ಧನ್ಯರ
ಕುಂದು ಕೊರತೆಗಳಿರಲಿ ಮಹಿಮಳು ನೀನೆ, ಅನ್ಯರನೊಲ್ಲೆನು.
ಎಂದು ತಾಯಿಯೆಡೆಗಿನ ಅನನ್ಯ ಭಕ್ತಿ, ಪ್ರೀತಿಯನ್ನು ಅಭಿವ್ಯಕ್ತಗೊಳಿಸಿದರು. ಅಂತಿಮವಾಗಿ, ನಿನ್ನ ಸೇವೆಯೊಳಳಿವ ಭಾಗ್ಯಕೆ ಸಕಲ ಭಾಗ್ಯವ ತೊರೆವೆನು ಎಂದು ತಾಯಿಗಾಗಿ, ತಾಯಿಯ ಸೇವೆ ಮಾಡುತ್ತಲೇ ಅಳಿಯುವುದಕ್ಕಿಂತ ಬೇರೆ ಭಾಗ್ಯವಿಲ್ಲವೆಂದು ಹಾಡಿದರು ಕುವೆಂಪು. ಭಾವನಾತ್ಮಕವಾಗಿ ಒಂದೆಡೆ ದೇಶಭಕ್ತಿಯನ್ನು ಜಾಗೃತಗೊಳಿಸಿದ ಕುವೆಂಪು ಅದೇ ಸಮಯದಲ್ಲೇ ಕೆಲ ಬೋಧಪ್ರದ ಕವನಗಳ ಮೂಲಕ ಹೋರಾಟದ ಕಿಚ್ಚು ಹಚ್ಚಿದರು. ರಕ್ತತರ್ಪಣ ಕವನದ ಮೂಲಕ,
ಏಳಿರೈ ಸೋದರರಿರಾ, ನಿಮಗಾಗಿ ಮಡಿದೆಮ್ಮ
ಮರೆಯದಿರಿ ನಿಮ್ಮಣ್ಣ ತಮ್ಮಂದಿರನು
----------------------
ಸ್ವಾತಂತ್ರ್ಯ ಸಾಧನೆಗೆ ಸಂಗ್ರಾಮದೇವತೆಗೆ
ರಕ್ತ ತರ್ಪಣವಿತ್ತು ಎದೆಯ ಹರಿದು
ಹೊರಳಿದೆವು ನೆಲಕೆ, ಓ ಉರುಳಿ ಬಿದ್ದೆವು ನೆಲಕೆ
ಕೈಯ ಕತ್ತಿಯನೆಸೆದು ನಿಮ್ಮ ಕೈಗೆ
ಮತ್ತೆ ಬಾವುಟವೆಸೆದು ನಿಮ್ಮ ರಕ್ಷೆಯ ವಶಕೆ
ಹಿಡಿದೆತ್ತಿ ಮುಂಬರುವಿರೆಂದು ನಂಬಿ!
ಎಂದು ಹೇಳುತ್ತಾ,
ಸತ್ತವರ ಆ ನಂಬುಗೆಗೆ ಎರಡನೆಣಿಸದಿರಿ
ಹಂದೆಯಾಗದೆ ಮುಂದೆ ನುಗ್ಗಿ ಹೋಗಿ
ಎಂದು ಪ್ರಚೋದಿಸಿದರು.
ಹಿಂದಿನವರು ಸತ್ತಿದ್ದು ನಮಗಾಗಿ. ಅವರು ಯಾವ ಗುರಿಯ ಸಾಧನೆಗಾಗಿ ಸತ್ತರೋ ಆಗುರಿ ನಮ್ಮದು. ನಾವದನ್ನು ಮುಟ್ಟಬೇಕು, ಆಗಲೇ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಇಲ್ಲದಿದ್ದರೆ
ನಿಮಗಾಗಿ ಸತ್ತೆಮಗೆ ಸೊಗವಿಲ್ಲ
ಬದುಕಿರುವ ನಿಮಗುಮಾ ಬದುಕೆ ಮಿತ್ತು
ಎಂದು ಹೇಳಿದ ಕವಿ,
ಇಂತು ಸತ್ತವರ ಕರೆ ಓ ಕೂಗುತಿದೆ ಕೇಳು
ಭೂತಕಾಲದ ಗರ್ಭಗೋರಿಯಿಂದ
ಆಲಿಸಿಯೂ ಅದನು ನೀ ಸುಮ್ಮನಿರುವೆಯ ಹೇಳು
ದೇಶಮಾತೆಯು ಹಡೆದ ವೀರಕಂದಾ ?
ಎಂದು ದೇಶವಾಸಿಗಳನ್ನು ಚುಚ್ಚಿದರು.
ಬೀಳಲಿ ಮೈ ನೆತ್ತರು ಕಾರಿ
ಹೋದರೆ ಹೋಗಲಿ ತಲೆಹಾರಿ
ತಾಯ್ನಾಡಿನ ಮೇಲ್ಮೈಗೆ ಹೋರಿ
ಸ್ವಾತಂತ್ರ್ಯದ ಸ್ವರ್ಗಕೆ ಏರಿ!
ಸೋದರ-ಸೋದರಿಯರೆ, ಮೇಲೇಳಿ
ಕರೆಯುತ್ತಿಹಳದೋ ರಣಕಾಳಿ
ದೇಶಪ್ರೇಮಾವೇಶವ ತಾಳಿ
ಖಳವೈರಿಯ ಸೀಳಿ!
ಎಂದು ಯುದ್ಧೋತ್ಸಾಹಿಯಾದ ಕುವೆಂಪು ಕೊನೆಗೆ,
ತ್ಯಾಗದ ಯಾನಕೆ ನುಗ್ಗಿರಿ ಮುಂದೆ
ಭೋಗದ ರೋಗವ ಬಿಡಿ ಹಿಂದೆ
ತಡಮಾಡಿದರಮ್ಮನ ನೀಂ ಕೊಂದೆ!
ಸುಮುಹೂರ್ತವೋ ಇಂದೆ!
ಎಂದು ದೇಶಮುಕ್ತಿಗಾಗಿ ಆತುರಗೊಂಡರು, ದೇಶವಾಸಿಗಳಲ್ಲೂ ಸ್ವಾತಂತ್ರ್ಯಕಾಗಿ ಕಾತರತೆಯನ್ನುಂಟುಮಾಡಿದರು.
ವರಕವಿ ಬೇಂದ್ರೆಯವರು ಕೂಡಾ ತಮ್ಮ ಮಕ್ಕಳಿವರೇನಮ್ಮ ೩೩ ಕೋಟಿ ಕವನದ ಮೂಲಕ ದೇಶಾವಾಸಿಗಳನ್ನು ಹಂಗಿಸಿದರು, ಇಂಥವರನ್ನು ತಾಯಿ ಮಕ್ಕಳನ್ನಾಗಿ ಪಡೆದುದಕ್ಕೆ ವಿಷಾದಿಸಿದರು, ಎಚ್ಚರಿಸಿದರು. ಕೊನೆಗೆ ತಾಯಿಯ ಕರೆಗೆ ಓಗೊಟ್ಟು ಬನ್ನಿ ಎಂದು ಕರೆದರು.
ಇವರೇ ಏನು ೩೩ ಕೋಟಿ ಮಕ್ಕಳು ಎಂದು ತಾಯಿಯಿಂದಲೇ ಕೇಳಿಸಿದ ಬೇಂದ್ರೆ,
ಹಲಕೆಲವು ಹುಳುಗಳೆನ್ನಿ! ಹಲಕೆಲವು ಕುರುಡುಕುನ್ನಿ!
---------------------------------
ಗಂಡಸುತನಕೇನೋ ಸೊನ್ನಿ !
ಲೆಕ್ಕಕ್ಕೆ ಮೂವತ್ತು ಮೂರು ಕೋಟಿ!!
ಎಂದು ಛೇಡಿಸಿದರು.
ಹಂಗಿನರಮನೆಯ ನರಕಾ- ತಂಗುವಿರಿ ಇಹುದೆ ಮರುಕಾ?
ಹಿಡಿಬೆರಳ ಹಿಡಿಯಲ್ಲಿ ಅಡಿಯೆರಡರಡಿಯಲ್ಲಿ ಹೊರಳಿ ಒರಲುವಿರಿ
ಅಕಟಾ! ಅಕಟಕಟಾ
ಎಂದು ಕೋಪಿಸಿಕೊಂಡರು.
ಹಡೆದೊಡಲು ಬಂಜೆಯಾಯ್ತೆ? ಬಾಳ್ಮೊದಲೆ ಸಂಜೆಯಾಯ್ತೆ?
ಎಂದು ಮರುಗಿದರು
ನನ್ನೆದೆಯ ಹಾಲನೆರಸಿ ನನ್ನೊಳಿಹ ಬೆಳಕ ಬೆರೆಸಿ
ವಜ್ರದೇಹಿಗಳೆಂದೆ ಗೊನೆಮಿಂಚೊ ಎನೆಕಂಡೆ
ನನ್ನಳಲು ಕೇಳದೇನೋ?
ಎಂದು ಪ್ರ್ರಲಾಪಿಸುತ್ತಲೇ
ಡಿಂಭಗಳನೊಡೆದು ಬನ್ನಿ! ಕಂಬಗಳನೊಡೆದು ಬನ್ನಿ!
ಮೈಯಲ್ಲಿ ಮಡಗದಿರಿ! ಮನದಲ್ಲಿ ಅಡಗದಿರಿ!
ತಾಯಿ ಇದೋ ಬಂದೆವೆನ್ನಿ!
ಎಂದು ಆಹ್ವಾನಿಸಿದರು.
ಹೇಡಿಯೊಬ್ಬನನ್ನು ಬಡಿದೆಬ್ಬಿಸಿ ಅವನಲ್ಲಿ ಆಕ್ರೋಶವನ್ನುಂಟುಮಾಡಿ ಅನಂತರ ಅವನನ್ನು ಕಾರ್ಯಸಾಧನೆಗೆ ಅಣಿಗೊಳಿಸುವ ಶೈಲಿ ಬೇಂದ್ರೆಯವರದು!
ಕನ್ನಡದ ಮತ್ತೊಬ್ಬ ಶ್ರೇಷ್ಠ ಕವಿ ಗೋಪಾಲಕೃಷ್ಣ ಅಡಿಗರ ನೆನೆನೆನೆ ಆ ದಿನವ, ಓ ಭಾರತಬಾಂಧವ! ನೆನೆನೆನೆ ಆದಿನವ ಎಂಬ ಗೀತೆ ಸುಪ್ರಸಿದ್ಧ. ಅವರ ಇನ್ನೊಂದು ಕವನವೂ ಅರ್ಥಪೂರ್ಣ.
ಎಂಥ ಯುದ್ಧವೊ ಗೆಳೆಯ ಭಾಟರ ಕೈ ಬರಿದು
ಮನದಲ್ಲಿ ಹಗೆತನದ ನಂಜಿಲ್ಲ ನಸುವೂ
ಮೊಗದ ನಸುನಗೆಯೊಂದೆ, ಮನದ ನಿಶ್ಚಯವೊಂದೆ,
ಆತ್ಮಾರ್ಪಣದ ಕಣವೆ ಕಣ್ಣ ಮುಂದೆ!
ಹಾಗೆಯೇ ಕೆಲವು ಪ್ರಸಿದ್ಧರಲ್ಲದ ಸಾಹಿತಿಗಳು ಬರೆದ ಕೃತಿಗಳು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಜಾಗೃತಿಯ ಅಲೆಯನೆಬ್ಬಿಸಿದವು. ಅಂತಹವರಲ್ಲೊಬ್ಬರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ದಿ|| ತಿಪ್ಪಯ್ಯ ಮಾಸ್ತರರು. ಕಡುಬಡತನದ ನಡುವೆಯೂ ಸ್ವಾತಂತ್ರ್ಯ ದೇವಿಗೆ ತಮ್ಮನ್ನು ಅರ್ಪಿಸಿಕೊಂಡವರು. ಅವರ ಜಪಿಸಿರಿ ಸ್ವರಾಜ್ಯ ಮಂತ್ರವನು, ಧರಿಸಿರಿ ಸ್ವದೇಶಿ ವಸ್ತ್ರವನು ಎಂಬ ಹಾಡು ಅಂದು ಜನಪ್ರಿಯವಾಗಿದ್ದ ಗೀತೆ. ೧೯೩೦ರಲ್ಲಿ ಪ್ರಕಟಗೊಂಡ ಅವರ ರಾಷ್ಟ್ರೀಯ ಪದ್ಯಗಳು ಎಂಬ ಕಿರು ಪುಸ್ತಕ ಜನಜಾಗೃತಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿತು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಒಂದು ಲಾವಣಿ ದೇಶಿ ಧುಮಧುಮ್ಮೆ. ಅದನ್ನು ಬರೆದವರು ಬೇಂದ್ರೆಯವರ ಮಿತ್ರರಾಗಿದ್ದ ಶ್ರೀಧರ ಖಾನೋಳ್ಕರ. ಸರಕಾರಿ ನೌಕರನಾಗಿದ್ದೂ ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಂಡಿದ್ದವರು. ಇವರು ಬರೆದ ಈ ದೀರ್ಘ ಲಾವಣಿಯನ್ನು ಸೀತಾತನಯ ಎಂಬ ಅವರ ಕಾವ್ಯನಾಮದಿಂದ ಪ್ರಕಟಿಸಿದ್ದು, ಅದನ್ನು ಮುದ್ರಿಸಿದ ನೆಪದಿಂದ ೧೯೨೩ರಲ್ಲಿ ಸಾಹಿತಿ ರಂಗನಾಥ ದಿವಾಕರ ಅವರಿಗೆ ರಾಜದ್ರೋಹದ ಆಪಾದನೆ ಮೇಲೆ ಜೈಲುಶಿಕ್ಷೆಯಾಯಿತು. ಏಳಿರಿ ಬಿಸಿಬಿಸಿ ರಕ್ತದ ತರುಣರೆ ಇಳಿಯಿರಿ ಸ್ವಾತಂತ್ರ್ಯ ರಣದೊಳಗೆ ಎಂಬ ದಿಟ್ಟ ಕರೆ ನೀಡಿ ಜಾಗೃತಿಯ ಅಲೆಯನ್ನೆಬ್ಬಿಸಿದ ಲಾವಣಿ ಅದು. ಬೆಂಗಳೂರಿನ ಶ್ರೀ ಬಿ. ನೀಲಕಂಠಯ್ಯನವರ ರಾಷ್ಟ್ರ ಚಿಂತನೆಯ ಲಾವಣಿಗಳು ಅಂದು ಕನ್ನಡಿಗರ ಮನೆಮಾತು.
೧೨ ನೇ ಪುಟದಿಂದ......

ನವಯುಗಪದ್ಧತಿ ನವ ಸ್ತ್ರೀ ಪುರುಷರ ನವರಂಗಾಟಗಳ್ಹೆಚ್ಚಾಯ್ತು
ಕನ್ನಡ ನಾಡಿನ ಕನ್ನಡ ಜನರಿಗೆ ಕನ್ನಡ ಭಾಷೆಯೆ ಮರೆತೋಯ್ತು |
ಕನ್ನಡ ಇಂಗ್ಲೀಷ ಬೆರೆತೋಯ್ತು, ಹೊನ್ನಿನ ದೇಶವು ಮಣ್ಣಾಯ್ತು
ತಿನ್ನಲು ಮನೆಯಲಿ ಸೊನ್ನೆಗಳಾದರು, ಉನ್ನತಷೋಕಿಯು ಬಲವಾಯ್ತು ||
ಎಂಬ ಬ್ರಿಟೀಷ ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮವನ್ನು ಹೀಗಳೆಯುವ ಲಾವಣಿ ಮುಂದುವರಿದು ಬ್ರಿಟೀಷ್ ಕುರಿಗಳನೊದ್ದೋಡಿಸಿ ದೇಶದ ಮಾನವ ರಕ್ಷಿಸಿ ಎಂಬ ಸಂದೇಶ ನೀಡಿ ಜನರನ್ನು ಹೋರಾ
ಟದ ಹಾದಿಗೆ ಎಳೆದು ತಂದಿತು.
ಹೀಗೆ ಸ್ವಾತಂತ್ರ್ಯದ ಹೋರಾಟದಲ್ಲಿ ಕನ್ನಡ ಸಾಹಿತಿಗಳೂ ಕೂಡ ಮಹತ್ತ್ವದ ಪಾತ್ರವನ್ನು ವಹಿಸಿದರು. ದೇಶದ ಬಗೆಗೆ ಭಕ್ತಿ-ಪ್ರೀತಿಯನ್ನು ಬೆಳೆಸಿದರು. ರಣರಂಗದಲ್ಲಿ ಸೈನ್ಯ ನಡೆಸುವ ಸೇನಾಪತಿಯಂತೆ ಹೋರಾಟಗಾರರಿಗೆ ಹುರುಪು ತುಂಬಿದರು. ಹೋರಾಟದ ಕಿಚ್ಚು ಮೂಡಿಸಿದರು. ಇದೆಲ್ಲದರ ಫಲವಾಗಿ ಬ್ರಿಟೀಷರ ಎಲ್ಲ ತಂತ್ರ-ಕುತಂತ್ರಗಳ ನಡುವೆಯೂ ಭಾರತೀಯರಲ್ಲಿ ೯೦ ವರ್ಷಗಳಷ್ಟು ಕಾಲ ನಿರಂತರವಾಗಿ ಸ್ವಾತಂತ್ರ್ಯ ದಾಹ ಉಳಿಯಿತು-ಬೆಳೆಯಿತು. ಅಂತಿಮವಾಗಿ ಗುರಿ ತಲುಪಿ, ದೇಶ ಸ್ವತಂತ್ರವಾಗುವ ಮೂಲಕವೇ ತಣ್ಣಗಾಯಿತು.

ಕೃಪೆ: ಚೈತ್ರರಶ್ಮಿ

2 comments:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete
  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete