Saturday, April 23, 2011

ಹೆಣ್ಣು ಜಗದ ಕಣ್ಣು

ಶೈಲಜಾ ಕಣವಿ

ಅನಾದಿ ಕಾಲದಿಂದಲೂ ಹೆಣ್ಣು ಪೂಜಿಸಲ್ಪಡುತ್ತ ಬಂದಿದ್ದರೂ ನಿಂದನೆಗೂ ಗುರಿಯಾಗಿದ್ದಾಳೆ. ಹಿಂಸೆ ಸಹಿಸಿ ಬೆಂದಿದ್ದಾಳೆ. ಅತ್ಯಾಚಾರ,ಸತ್ವಪರೀಕ್ಷೆ, ಅಗ್ನಿಪರೀಕ್ಷೆಗಳಿಗೆ ಒಳಗಾಗಿದ್ದಾಳೆ.

ತ್ರೇತಾಯುಗದಲ್ಲಿ ಶ್ರೀರಾಮ ಸೀತಾದೇವಿಯನ್ನು ಅಗ್ನಿಪರೀಕ್ಷೆಗೆ ಗುರಿಮಾಡಿದ. ಅದರಲ್ಲಿ ಸಫಲಳಾಗಿ ಬಂದರೂ ಮುಂದೆ ಅಗಸನೊಬ್ಬನ ಮಾತನ್ನು ಕೇಳಿ ಕಳಂಕ ಹೊರಿಸಿ ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ. ಲವಕುಶರನ್ನು ರಾಮ ತನ್ನ ಮಕ್ಕಳೆಂದು ಒಪ್ಪಿದ ಮೇಲೂ ಅವಳು ಮನೆ ಸೇರಲಿಲ್ಲ. ಭೂಮಿತಾಯನ್ನು ಮರೆಹೊಕ್ಕಾಗ ಭೂಮಿ ಬಾಯ್ಬಿರಿದು ತನ್ನಲ್ಲಿ ತನ್ನ ಮಗಳನ್ನು ಅಡಗಿಸಿಕೊಂಡಿತು. ಆಗಿನ ಕಾಲದಲ್ಲಿ (ವಿಚ್ಛೇದನಾವಕಾಶ ಇರಲಿಲ್ಲ!)

ದ್ವಾಪರಯುಗದಲ್ಲಿ ಅರ್ಜುನ ದ್ರೌಪದಿಯನ್ನು ಗೆದ್ದು ತಂದು ತಾಯಿಯ ಮುಂದೆ ಭಿಕ್ಷೆ ತಂದಿದ್ದೇನೆ ಎಂದಾಗ ಐವರೂ ಸಮಪಾಲು ಮಾಡಿಕೊಳ್ಳಿ ಎಂಬ ಆದೇಶ ಬಂತು. ದ್ರೌಪದಿಯ ಆಶಯವನ್ನು ಕೇಳುವ ಔದಾರ್ಯವನ್ನು ಯಾರೂ ತೋರಲಿಲ್ಲ. ಐವರು ಬಲಶಾಲಿ ಪತಿಯರನ್ನು ಹೊಂದಿದ್ದರೂ ತುಂಬಿದ ಸಭೆಯಲ್ಲಿ ಮಾನಕಳೆದುಕೊಳ್ಳುವ ದುರ್ಭರ ಪ್ರಸಂಗ ಅವಳಿಗೆ ಒದಗಿ ಬಂತು.

ಸತ್ಯವ್ರತ ಪರಿಪಾಲನೆಗೆ ಹೆಸರಾದ ಸತ್ಯ ಹರಿಶ್ಚಂದ್ರ ತನ್ನ ಹೆಂಡತಿ ಮಕ್ಕಳನ್ನು ಮಾರಿದ.

ಮಹಿಳೆ, ಸ್ತ್ರೀ, ಹೆಣ್ಣು ಹೆಂಗಸು ಮುಂತಾದ ಅನೇಕ ಶಬ್ದಗಳಿಂದ ನಿರ್ದೇಶಿಸಲ್ಪಡುವ ಅವಳು ಜಗತ್ತಿಗೆಲ್ಲ ತಾಯಿ. ಮಮತೆಯ ಮೂರ್ತಿ. ಸಹನೆ, ತಾಳ್ಮೆ, ಹೊಂದಾಣಿಕೆ ಲಜ್ಜೆ, ನಾಚಿಕೆಯ ಜೊತೆಗೆ ಸ್ವಾಭಿಮಾನದ ಪ್ರತಿಬಿಂಬ.

ತನ್ನ ಮಗು ಹೆಣ್ಣಾಗಲಿ, ಗಂಡಾಗಲಿ ಸಮಭಾವದಿಂದ ಮುದ್ದಿನಿಂದ ಬೆಳೆಸುವಳು. ತನ್ನೆಲ್ಲ ಮಕ್ಕಳನ್ನೂ ಭೇದಭಾವತೋರಿಸದೆ ಪ್ರೀತಿಯಿಂದ ಕಾಣುವಳು. ಬಳ್ಳಿಯ ಕಾಯಿ ಬಳ್ಳಿಗೆ ಭಾರವೆ? ಎಷ್ಟು ಜನ ಮಕ್ಕಳಿದ್ದರೂ ಅವಳಿಗೆ ಬೇಸರವಿಲ್ಲ. ಅವರ ಲಾಲನೆ, ಪಾಲನೆ ಮಾಡಿ ಅನಾರೋಗ್ಯವಾದಾಗ ಆರೈಕೆ ಮಾಡಿ ಬೆಳೆಸುವಳು. ಬಡವಳಾಗಿದ್ದರೂ ಭಿಕ್ಷೆ ಬೇಡಿ ಸಾಕುವಳು. ತಾನು ರೋಗಿಯಾಗಿದ್ದರೂ, ಅಶಕ್ತಳಾಗಿದ್ದರೂ ಜೀವ ತೇದು ಮಕ್ಕಳನ್ನು ಪೋಷಿಸುವಳು. ವಿಧವೆ ಅಥವಾ ವಿಚ್ಛೇದಿತರ ಪಾಡಂತೂ ಹೇಳತೀರದು. ತಾನೇ ತಂದೆಯಾಗಿ ಮಕ್ಕಳ ಜೀವನ ಉಜ್ಜ್ವಲವಾಗಲು ಶ್ರಮಿಸುವಳು. ಇದಕ್ಕೆ ಅವಳು ಯಾವುದೇ ಫಲವನ್ನು ಬಯಸುವುದಿಲ್ಲ. ಬಯಸಿದರೂ ಸಿಗುತ್ತದೆಂದಿಲ್ಲ. ಹೆಣ್ಣು ಮಕ್ಕಳು ಅತ್ತೆಮನೆಯನ್ನು ಸೇರುತ್ತಾರೆ. ಗಂಡುಮಕ್ಕಳು ಮದುವೆಯಾಗಿ ಬೇರೆ ಮನೆ ಮಾಡುತ್ತಾರೆ. ಎಷ್ಟು ಜನ ಗಂಡುಮಕ್ಕಳಿದ್ದರೂ ಅವರಿಗೆ ತಾಯಿ ಒಂದು ಹೊರೆಯಾಗುತ್ತಾಳೆ. ಸರದಿ ಪ್ರಕಾರ ಕೆಲವು ತಿಂಗಳುಗಳ ಕಾಲ ಇಟ್ಟುಕೊಳ್ಳುವ ಏರ್ಪಾಡು ಮಾಡುತ್ತಾರೆ. ಒಬ್ಬನೇ ಮಗನಾದರೆ ಅನಾಥಾಶ್ರಮ ಸೇರಿಸುತ್ತಾನೆ.

ಹೆಣ್ಣು ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಬೆಳಕಾಗುವಳು. ಅವಳ ಒಳ್ಳೆಯ ನಡೆ ನುಡಿ ವರ್ತನೆಗಳಿಂದ, ಮುಗ್ಧತೆಯಿಂದ ಬೆಳಕು ಚೆಲ್ಲುವಳು. ತಂದೆಯಿಲ್ಲದ ಮಕ್ಕಳನ್ನು ಒಬ್ಬಳು ತಾಯಿ ಸಾಕಬಹುದು. ಆದರೆ ತಾಯಿಯಿಲ್ಲದ ಮಗುವನ್ನು ಸಲಹಲು ಇನ್ನೊಬ್ಬಳು ಹೆಣ್ಣು ಬೇಕು. ಮಲತಾಯಿಯೋ, ಅಜ್ಜಿಯೊ, ದಾದಿಯೊ, ಅಯಾಳೊ, ಚಿಕ್ಕಮ್ಮನೊ, ದೊಡ್ಡಮ್ಮನೊ, ಅತ್ತೆಯೊ ಹೀಗೆ ಯಾವ ಸ್ತ್ರೀರೂಪದಲ್ಲಾದರೂ ಅವಳು ಬೇಕು. ಅವಳು ಮಗುವಿನ ತೊದಲು ನುಡಿಗಳನ್ನು ಕೇಳುತ್ತ, ಕಲಿಸುತ್ತ, ಕಥೆ ಹೇಳುತ್ತ ಬೆಳೆಸುತ್ತಾಳೆ.

’ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು’. ಮನೆಯಿಂದ ಶಾಲೆಯನ್ನು ಸೇರಿದಾಗಲೂ ಮೊದಲ ಪಾಠ ಹೇಳಿಕೊಡುವ ಗುರು ಹೆಣ್ಣೇ. ಮಗುವಿನ ಮುಗ್ಧ ಮನಸ್ಸನ್ನು ಅರಿತುಕೊಂಡು ಕಲಿಯಲು ಸಹಕರಿಸುತ್ತಾರೆ.
ಆಸ್ಪತ್ರೆಗೆ ಹೋದರೆ ದಾದಿಯರು ಸೇವೆ ಮಾಡುತ್ತಾರೆ. ಅವರು ಹೆಣ್ಣು. ರೋಗಿ ಹೆಣ್ಣೊ ಗಂಡೊ ಎಂಬ ಭೇದ ಮಾಡದೆ ಶುಶ್ರೂಷೆ ಮಾಡುತ್ತಾರೆ.
ಹೆಣ್ಣು ಮಗಳಾಗಿ, ಅಕ್ಕ, ತಂಗಿ, ಅತ್ತಿಗೆ, ನಾದಿನಿ ಅತ್ತೆ, ಸೊಸೆ, ಅಜ್ಜಿ ಎಲ್ಲ ಹಂತಗಳನ್ನೂ ನಿಭಾಯಿಸುತ್ತಾಳೆ. ’ಗೃಹಿಣೀ ಗೃಹಮುಚ್ಯತೇ’ ಗೃಹಿಣಿಯಿಂದಲೇ ಮನೆ ಬೆಳಗುವುದು. ’ಒಲಿದರೆ ನಾರಿ ಸ್ವರ್ಗಕ್ಕೆ ದಾರಿ, ಮುನಿದರೆ ಮಾರಿ ನರಕಕ್ಕೆ ದಾರಿ’

ಹೆಣ್ಣು ಬಲು ಬೇಗ ಒಲಿದುಬಿಡುತ್ತಾಳೆ. ಜೊತೆಗೆ ಬೇಗನೆ ಮೋಸಹೋಗುತ್ತಾಳೆ. ಗಂಡಸು ತನ್ನ ಕಾರ್ಯಕ್ಕೆ ಹೆಣ್ಣನ್ನು ಬಳಸಿಕೊಳ್ಳುತ್ತಾನೆ.
ಹೆಣ್ಣಿನ ಕಾರಣದಿಂದಲೇ ಕೆಟ್ಟ ಪುರುಷರು ನಾಶವಾದದ್ದನ್ನು ಪುರಾಣಗಳಿಂದ ತಿಳಿದುಕೊಳ್ಳಬಹುದು. ಮಹೀಷಾಸುರನನ್ನು ಕೊಂದ ದುರ್ಗೆ, ರಾವಣನ ನಾಶಕ್ಕೆ ಕಾರಣಳಾದ ಸೀತೆ, ಕೀಚಕನನ್ನು ಕೊಲ್ಲಿಸಿದ ದ್ರೌಪದಿ, ವಿಶ್ವಾಮಿತ್ರನನ್ನು ಕೆಡಿಸಿದ ಮೇನಕೆ ಇವರೆಲ್ಲ ದುಷ್ಟ ಸಂಹಾರಕ್ಕೆ ಕಾರಣೀಕರ್ತರಾದವರು.

ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು. ಯಾವ ಮಹಾನ್ ಪುರುಷನೇ ಆಗಿರಲಿ ಅವನು ಒಬ್ಬ ತಾಯಿಯ ಮಗ. ರಾಮ, ಕೃಷ್ಣ, ಬುದ್ಧ, ಬಸವ, ಅಲ್ಲಮ, ಏಸುಕ್ರಿಸ್ತ, ಶಂಕರಾಚಾರ್ಯ, ಶಿವಾಜಿ ಹೀಗೆ ಅನೇಕರು ತಮ್ಮ ತಾಯಿಯ ಹೆಸರನ್ನು ಅಜರಾಮರ ವಾಗಿಸಿದ್ದಾರೆ.

ಸಮಾಜದಲ್ಲಿ ನಡೆಯುವ ಎಲ್ಲ ಒಳಿತು ಕೆಡುಕುಗಳಿಗೂ ಹೆಣ್ಣೇ ಕಾರಣ. ಇಂದಿನ ದಿನಗಳಲ್ಲಿ ಮಹಿಳೆ ತನ್ನ ಮಕ್ಕಳನ್ನೇ ತಿದ್ದಲಾಗದೆ ಅವರ ತಪ್ಪುಗಳನ್ನು ಅಲಕ್ಷಿಸಿ ಅವರ ಅವನತಿಗೆ ಕಾರಣಳಾಗುತ್ತಿದ್ದಾಳೆ. ಅತಿಯಾದ ಮುದ್ದಿನಿಂದ ಅವರ ಜೀವನಶೈಲಿಯನ್ನು ಅಲಕ್ಷಿಸಿ ದೊಡ್ಡ ತಪ್ಪನ್ನು ಮಾಡುತ್ತಿದಾಳೆ. ಇಂದಿನ ಮಹಿಳೆಗೆ ತನ್ನ ಸುಖ ಮುಖ್ಯವಾಗಿದೆ. ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅವರಿಗೀ ನಾಡಿನ, ಮನೆಯ ಸಂಸ್ಕೃತಿ, ವೇಷಭೂಷಣಗಳ ಬಗ್ಗೆ ತಿಳಿಸಿಕೊಡಬೇಕು. ಗಂಡು ಮಕ್ಕಳಿದ್ದರೆ ಅವರಿಗೆ ಸ್ತ್ರೀವರ್ಗದ ಬಗ್ಗೆ ಗೌರವಾದರಗಳು ಬರುವಂತೆ ಬೆಳೆಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಅತ್ಯಾಚಾರ ಕಡಿಮೆಯಾಗಬಹುದು.

No comments:

Post a Comment