Saturday, April 23, 2011

ಮನೋಗತ (ಸಂಪಾದಕೀಯ)

ಮಹಾಬಲ ಭಟ್
ಮತ್ತೆ ಬಂದು ಹೋಯಿತು ಮಾರ್ಚ್ ೮. ಹೆಮ್ಮಕ್ಕಳ ಎದೆಯಲ್ಲಿ ಏನೋ ಮಿಂಚು. ತಮಗಾಗಿಯೂ ಒಂದು ದಿನವಿದೆಯಲ್ಲ ಎಂಬ ಹೊಳಪು. ನಿಜ. ಇತ್ತೀಚೆಗೆ ಮಹಿಳಾ ದಿನಾಚರಣೆ ರಂಗೇರುತ್ತಿದೆ. ಈ ಸಂಭ್ರಮಾಚರಣೆಗೆ ಇದೀಗ ೧೦೦ ವರುಷ. ನೂರು ವರ್ಷಗಳಲ್ಲಿ ಮಹಿಳೆಯ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಯ ಕುರಿತು ಲೇಖನ, ಚರ್ಚೆಗಳು ನಡೆಯುತ್ತಿವೆ. ಕೆಲವರು ಆಧುನಿಕ ಮಹಿಳೆಯನ್ನು ಉತ್ಪ್ರೇಕ್ಷಿಸಿ ಬರೆದರೆ ಇನ್ನು ಕೆಲವರು ಇಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ ಎಂಬ ಋಣಾತ್ಮಕ ಚಿಂತನೆಯನ್ನೇ ತಮ್ಮ ವಿಚಾರದ ಉಸಿರನ್ನಾಗಿಸಿಕೊಳ್ಳುತ್ತಾರೆ. ಇನ್ನು ಭಾಷಣಗಳಲ್ಲಿ ಹೆಂಡತಿಯನ್ನು ಮಾರಿದ ಹರಿಶ್ಚಂದ್ರ, ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ ರಾಮ, ಪತ್ನಿಯನ್ನು ದ್ಯೂತದಲ್ಲಿ ಪಣವಾಗಿರಿಸಿದ ಯುಧಿಷ್ಠಿರ ಇವರೆಲ್ಲ ಟೀಕೆಗೆ ಪಾತ್ರರಾಗಿ ಇಂದಿನ ಪೀಳಿಗೆ ಅವರ ಸಂತತಿಯೇ ಎಂಬಂತೆ ಸಾರಲಾಗುತ್ತದೆ.

ಕಾಲ ಬದಲಾಗಿದೆ, ವಿಚಾರ ಬದಲಾಗಿದೆ, ಮೌಲ್ಯಗಳು ಬದಲಾಗಿವೆ. ಪಾಶ್ಚಾತ್ಯರ ಚಿಂತನೆಯನ್ನೇ ಮೌಲಿಕವೆಂಬಂತೆ ಬಿಂಬಿಸಲಾಗುತ್ತ್ತಿದೆ. ಅದೆಲ್ಲ ಇರಲಿ, ಇಂದು ಮಹಿಳೆಗೆ ಮೇಲೇರಲು ಸಾಕಷ್ಟು ಅವಕಾಶಗಳಿರುವಾಗ ಮತ್ತೆ ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದ ಮನುವನ್ನು ಬೈಯುತ್ತ ಕುಳಿತುಕೊಳ್ಳುವುದು ಯಾಕೆ? ರಾಜಧರ್ಮಕ್ಕಿಂತ ಕುಟುಂಬ ಧರ್ಮವೇ ಮುಖ್ಯವಾಗಿರುವ ಈ ಪ್ರಜಾಪ್ರಭುತ್ವದಲ್ಲಿ ಮತ್ತೆ ರಾಮನಿಗೆ ಶಾಪ ಹಾಕುವುದ್ಯಾಕೆ? ಗಂಡನಿಗೆ ಬಡತನ ಬಂತೆಂದರೆ ವಿಚ್ಛೇದನ ಸ್ವೀಕರಿಸುವ ಸ್ವಾತಂತ್ರ್ಯ ಮಹಿಳೆಯರಿಗಿರುವಾಗ ಹರಿಶ್ಚಂದ್ರನನ್ನು ಬಯ್ಯುವುದು ಏಕೆ?
ನನಗೆ ಮಹಿಳಾದಿನ ಬಂತೆಂದರೆ ಗಾರ್ಗಿ, ಮೈತ್ರೇಯಿ, ನೆನಪಾಗುತ್ತಾರೆ. ಗಂಧರ್ವ ಕುಮಾರಿ ಮದಾಲಸಾ ಸ್ಮೃತಿಪಥದಲ್ಲಿ ಹಾದು ಹೋಗುತ್ತಾಳೆ. ದುಷ್ಯಂತ ತನ್ನನ್ನು ತಿರಸ್ಕರಿಸಿದಾಗ ಸೆಟೆದು ನಿಂತ ಶಕುಂತಲೆಯ ನೆನಪಾಗುತ್ತದೆ. ಸ್ತ್ರೀಯರಿಗೆ ಗೌರವ ಕೊಡಬೇಕೆಂಬ ವಿಚಾರವನ್ನು ನಾವು ಪಾಶ್ಚಾತ್ಯರಿಂದ ಕಲಿಯಬೇಕಾದ್ದಿಲ್ಲ. ನಮ್ಮ ಪುರಾತನ ಗ್ರಂಥಗಳಲ್ಲಿ, ವೈವಾಹಿಕ ವಿಧಾನದಲ್ಲಿ ಅವನ್ನೆಲ್ಲ ಹೇಳಲಾಗಿದೆ. ಹಾಗಾದರೆ ತಪ್ಪಿರುವುದು ನಮ್ಮ ಸಂಸ್ಕೃತಿಯಲ್ಲಲ್ಲ. ನಮ್ಮ ವಿಚಾರದಲ್ಲಲ್ಲ. ಆದರೆ ಆಚಾರದಲ್ಲಿ. ದೈಹಿಕ ಬಲವನ್ನು ಹೊಂದಿರುವ ಪುರುಷವರ್ಗ ಅದನ್ನೇ ಅಸ್ತ್ರವಾಗಿರಿಸಿಕೊಂಡು ಸ್ತ್ರೀ ಶೋಷಣೆಗೆ ಮುಂದುವರಿದಿರುವುದು ನಮ್ಮ ಆಚಾರದೋಷ.

ಕೆಲವು ದಿನಾಚರಣೆಗಳು ಅರ್ಥಹೀನ ನಿಜ. ಒಂದು ದಿನದ ಪರಿವರ್ತನೆ ಯಾವ ವ್ಯತ್ಯಾಸವನ್ನೂ ಮಾಡಲಾರದು ಎಂಬುದೂ ಸತ್ಯ. ಆದರೆ ಮಹಿಳಾ ದಿನಾಚರಣೆಯು ಇಂದು ಮಾಧ್ಯಮಗಳ ಕಾರಣದಿಂದ ಹೆಚ್ಚು ಅರ್ಥಪೂರ್ಣವಾಗುತ್ತಿದೆ ಎನ್ನಬಹುದು. ಇದು ನಿಜಕ್ಕೂ ಆವಶ್ಯಕವಾಗಿರುವ ದಿನ. ಈ ನೆಪದಿಂದ ಮಹಿಳೆಯರಲ್ಲಿ ಸ್ವಾಭಿಮಾನ ಮೂಡಿಸುವ ಪ್ರಯತ್ನ ನಡೆಯುತ್ತಿರುವುದು ಸ್ವಾಗತಾರ್ಹ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರೂ ಸಕ್ರಿಯ ಪಾತ್ರ ವಹಿಸಬಹುದು ಎಂಬ ಭಾವ ಪ್ರತಿಯೊಬ್ಬರಲ್ಲೂ ಮೂಡಿದರೆ ಅದು ನಿಜಕ್ಕೂ ಅದ್ಭುತ ಪರಿವರ್ತನೆಯನ್ನು ತರಬಹುದು.

No comments:

Post a Comment