Saturday, April 23, 2011

ಹೆಂಡತಿಗೆ ಸಹಾಯ ಮಾಡಲು ಹಿಂಜರಿಕೆ ಏಕೆ?

ಶರ್ವಾಣಿ ಭಟ್

ಉಜ್ಜ್ವಲಾ ತುಂಬ ಸುಸ್ತಾಗಿದ್ದಾಳೆ. ಏಳು ತಿಂಗಳ ಗರ್ಭಿಣಿ. ಆಫೀಸಿನಲ್ಲಿ ನಿಂತು ಮಾಡುವ ಕೆಲಸ. ಕಾಲು ಸೋತು ಹೋಗಿದೆ. ಹೇಗೋ ಮನೆ ಸೇರಿ ಧೊಪ್ಪೆಂದು ಸೋಫಾದ ಮೇಲೆ ಕುಳಿತು ಹಿಂದಕ್ಕೆ ತಲೆಬಾಗಿ ಕಾಲನ್ನು ಚಾಚಿ ಕಣ್ಮುಚ್ಚಿದಳು. ಯಾರೋ ತನ್ನ ಕಾಲನ್ನು ಸ್ಪರ್ಶಿಸಿದಂತಾದಾಗ ಕಣ್ಬಿಟ್ಟಳು. ಮತ್ತಾರೂ ಅಲ್ಲ ಅವಳ ಗಂಡ ಸತೀಶ್ ಅವಳ ಕಾಲನ್ನು ತನ್ನ ತೊಡೆಯಮೇಲಿರಿಸಿಕೊಂಡು ಮೃದುವಾಗಿ ಒತ್ತುತ್ತಿದ್ದಾನೆ. ಅವಳಿಗೆ ಅದು ಅನಿರೀಕ್ಷಿತವಾಗಿತ್ತು. ಬೇಡವೆನ್ನುವ ಮನಸ್ಸಿದ್ದರೂ ಅದು ಕೊಡುತ್ತಿರುವ ಹಿತಾನುಭವ ಅವಳನ್ನು ತಡೆದಿತ್ತು. ಮುಖದಲ್ಲಿ ಕೃತಜ್ಞತಾ ಭಾವ. ಪತ್ನಿಯ ಮೊಗವನ್ನೇ ವೀಕ್ಷಿಸುತ್ತಿದ್ದ ಸತೀಶನ ಮುಖದಲ್ಲೂ ಅದೇನೋ ಸಮಾಧಾನ.

ಸತೀಶನಿಗಿರುವ ಧೈರ್ಯ ಎಷ್ಟು ಜನ ಗಂಡಸರಿಗಿದೆ? ಅಷ್ಟೇ ಅಲ್ಲ ಇಬ್ಬರೇ ಇರುವಾಗ ಈ ಧೈರ್ಯವನ್ನು ತೋರಿದ ಸತೀಶ ತನ್ನ ತಂದೆ ತಾಯಿಯರು ಮನೆಯಲ್ಲಿಯೇ ಇದ್ದರೆ ಅದನ್ನು ತೋರುತ್ತಿದ್ದನೆ? ಹೀಗೆ ನೂರಾರು ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಬಹುದು. ಹೌದು. ಅನೇಕ ಗಂಡಸರಿಗೆ ಪತ್ನಿಯ ಕಷ್ಟವನ್ನು ಹಂಚಿಕೊಳ್ಳಬೇಕು, ಅವಳ ಕಷ್ಟದಲ್ಲಿ ತಾನು ಪಾಲುದಾರನಾಗಬೇಕು, ಅವಳಿಗೆ ತಾನು ಸಹಾಯ ಮಾಡಬೇಕು ಎಂಬ ಮನಸ್ಸಿರುತ್ತದೆ. ಅದರೆ ಹಲವು ಕಾರಣಗಳಿಂದಾಗಿ ಅದು ಹೊರಗೆ ಬರುವುದೇ ಇಲ್ಲ. ಬಂದರೂ ಬೆಡ್ ರೂಮಿನಿಂದಾಚೆಯಂತೂ ಬರುವುದು ತೀರ ಅಪರೂಪ.

ಇದಕ್ಕೆ ಮುಖ್ಯ ಕಾರಣ ನಮ್ಮ ಸಾಮಾಜಿಕ ವ್ಯವಸ್ಥೆ. ಪತಿ ಹೇಳಿದ್ದನ್ನು ಪಾಲಿಸುವ, ಪತಿಯ ಸೇವೆಯೇ ಪರಮ ಕರ್ತವ್ಯ ಎಂದು ಭಾವಿಸುವ ಹೆಣ್ಣನ್ನು ’ಪತಿವ್ರತೆ’ಯೆಂದು ಹೊಗಳಿದರೆ ಹೆಂಡತಿಯ ಮಾತನ್ನು ಕೇಳುವ, ಅವಳಿಗೆ ಕೆಲಸ ಮಾಡಿಕೊಡುವ ಗಂಡನನ್ನು ’ಅಮ್ಮಾವ್ರ ಗಂಡ’ ಎಂದು ಅಪಹಾಸ್ಯ ಮಾಡುತ್ತದೆ. ಗಂಡಸುತನವಿಲ್ಲದ ಪುಕ್ಕಲ ಎಂಬುದಾಗಿ ಅಂತಹ ಗಂಡನನ್ನು ನೋಡಿದರೆ, ಗಂಡನ ತಲೆಯ ಮೇಲೆ ಹತ್ತಿ ಕುಳಿತಿರುವ ಗಂಡುಬೀರಿಯೆಂಬಂತೆ ಹೆಂಡತಿಯನ್ನು ನೋಡುತ್ತಾರೆ. ನಮ್ಮ ಸಿನಿಮಾಗಳನ್ನೇ ನೋಡಿ ಗಂಡನಿಗೆ ವಿಧೇಯಳಾಗಿರುವ ಹೆಂಡತಿಯ ಸಿನಿಮಾ ಆದರೆ ಅದು ’ಭಕ್ತಿಪ್ರಧಾನ ಸಾಂಸಾರಿಕ ಚಿತ್ರ’. ಹೆಂಡತಿಗೆ ಹೆದರುವ ಗಂಡನ ಚಲನಚಿತ್ರಕ್ಕೆ ’ಹಾಸ್ಯ ಪ್ರಧಾನ’ ಎಂಬ ತಲೆಬರಹ ! ನಮ್ಮ ಪುರಾಣ ಕಥೆಗಳೆಲ್ಲ ಸೀತೆ, ಮಂಡೋದರಿ, ಅನಸೂಯಾ, ಸಾವಿತ್ರಿ ಇವರೆಲ್ಲ ಪತಿಸೇವೆಯಿಂದಲೇ ಸಾಯುಜ್ಯ ಹೊಂದಿದರು ಎಂಬುದಾಗಿ ಸಾರುತ್ತ ಪತಿಯಿಂದ ಸೇವೆ ಮಾಡಿಸಿಕೊಳ್ಳುವ ಸ್ತ್ರೀಯರು ನರಕಕ್ಕೆ ಹೋಗುವರು ಎಂಬುದಾಗಿ ಹೇಳುತ್ತವೆ. ಶೇಷಶಾಯಿ ನಾರಾಯಣನ ಕಾಲನ್ನು ಒತ್ತುತ್ತಿರುವ ಲಕ್ಷ್ಮೀದೇವಿಯ ಚಿತ್ರ ಆದರ್ಶರೂಪವಾಗಿ ನಮ್ಮ ಮನೆಯ ಗೋಡೆಯ ಮೇಲೆ ರಾರಾಜಿಸುತ್ತದೆ. ನಮ್ಮ ವಿವಾಹಪದ್ಧತಿ, ಕುಟುಂಬ ಪದ್ಧತಿಗಳೆಲ್ಲ ಇಂತಹ ಭಾವನೆಯ ಮೇಲೇ ಆಧಾರಿತವಾಗಿವೆ. ಹಾಗಾಗಿ ಸಮಾಜ ಹೆಂಡತಿಯ ’ಸೇವೆ’ ಮಾಡುವ ಗಂಡನನ್ನು ಒಪ್ಪಿಕೊಳ್ಳದು. ಇದು ಗಂಡಸರ ಹಿಂಜರಿಕೆಗೆ ಮೊದಲ ಕಾರಣ.

’ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ’ ಎನ್ನುವ ಗಾದೆ ಮಾತನ್ನು ಯಾರೋ ಮಾಡಿಟ್ಟುಬಿಟ್ಟಿದ್ದಾರೆ. ಅದು ಮನುವಿನ ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂಬ ಮಾತನ್ನೇ ಪುಷ್ಟಿಗೊಳಿಸುವಂಥದ್ದು. ಮನೆಯನ್ನು ಮುನ್ನಡೆಸುವ ಶಕ್ತಿ ಹೆಣ್ಣಿಗಿಲ್ಲ ಎಂಬುದಾಗಿ ಇಂದಿಗೂ ಅನೇಕರು ಭಾವಿಸುತ್ತಾರೆ. ಹೆಣ್ಣಿಗೆ ಅಧಿಕಾರ ಕೊಟ್ಟರೆ ಅದರ ದುರುಪಯೋಗವಾಗುತ್ತದೆ ಎಂಬುದಾಗಿ ನಂಬಿದವರಿದ್ದಾರೆ. ಗಂಡಿಗಾದರೆ ತಾನು ಹುಟ್ಟಿದ ಮನೆಯೇ ಕೊನೆತನಕ ಶಾಶ್ವತ. ಹೆಣ್ಣಿಗೆ ತನ್ನ ತವರು ಮನೆಯನ್ನು ತೊರೆದು ಗಂಡನ ಮನೆಯನ್ನು ತನ್ನ ಮನೆಯೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ. ಹೀಗಿರುವಾಗ ತಾನು ಹೆಂಡತಿಯ ಮಾತನ್ನು ಕೇಳಿದರೆ ಅವಳು ತನ್ನ ತವರುಮನೆಯ ಹಿತವನ್ನೇ ಸಾಧಿಸಬಹುದು ಎಂಬ ಅಳುಕು ಕೆಲವು ಗಂಡಸರಿಗಿರುತ್ತದೆ. ತಾನು ಮೃದುವಾದರೆ ಅವಳು ತನ್ನನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ತನ್ನ ತಂದೆ ತಾಯಿಯರಿಗೂ ಅಕ್ಕ ತಂಗಿಯರಿಗೂ ಅನ್ಯಾಯ ಮಾಡಬಹುದು ಎಂಬ ಸಣ್ಣ ಹೆದರಿಕೆ ಹೊಸದಾಗಿ ಮದುವೆಯಾದ ಎಲ್ಲ ಗಂಡಸರಲ್ಲೂ ಇರುತ್ತದೆ. ಅಂತಹ ಸಾಕಷ್ಟು ಘಟನೆಗಳು ನಡೆದೂ ಇವೆ. ’ಮದುವೆಯಾಗಿ ಒಂದು ವರುಷದಾಗ ನನ್ ಮಗಾ ಬೇರೆ ಆದ’ ಎಂಬ ಜಾನಪದ ಗೀತೆಯನ್ನು ನೀವು ಕೇಳಿರಬಹುದು. ಹೆಂಡತಿಯ ಮಾತು ಕೇಳಿ ತಂದೆ ತಾಯಿಯರನ್ನು ಕಡೆಗಣಿಸಿದ ಎಷ್ಟೋ ಮಕ್ಕಳು ಇದ್ದಾರೆ. ಇದಕ್ಕೆ ಅವನು ಹೆಂಡತಿಗೆ ಕೊಟ್ಟ ಸಲುಗೆಯೇ ಕಾರಣ ಎಂದು ಹೇಳುವವರಿದ್ದಾರೆ. ಇಂತಹ ಉದಾಹರಣೆಗಳನ್ನು ತೋರಿಸಿ ಹೆಂಡತಿಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು ಎಂದು ಉಪದೇಶಿಸುವವರಿದ್ದಾರೆ. ಇದು ಗಂಡಸರ ಹಿಂಜರಿಕೆಗೆ ಇನ್ನೊಂದು ಕಾರಣ.

ಇಂದು ಸಣ್ಣ ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುವುದನ್ನು ನೋಡಬಹುದು. ಇದು ಪಟ್ಟಣಕ್ಕೆ ಮಾತ್ರ ಸೀಮಿತವಲ್ಲ. ಹಳ್ಳಿಯಲ್ಲಿ ಬಡ ಕೂಲಿಕಾರರ ವರ್ಗದಲ್ಲಿಯೂ ಇದು ಸಾಮಾನ್ಯ. ಗಂಡನ ಕರ್ತವ್ಯವಾದ ಕುಟುಂಬ ಪೋಷಣೆ ಎಂಬ ಜವಾಬ್ದಾರಿಯನ್ನು ಮಹಿಳೆ ಹಂಚಿಕೊಳ್ಳುತ್ತಿದ್ದಾಳೆ. ಆದರೆ ಮಹಿಳೆಯ ಜವಾಬ್ದಾರಿಯಾದ ಅಡುಗೆಮನೆ ನಿರ್ವಹಣೆ, ಕಸಮುಸುರೆಗಳನ್ನು ಹಂಚಿಕೊಳ್ಳಲು ಗಂಡಸರ ಸ್ವಾಭಿಮಾನ ಅಡ್ಡಬರುತ್ತದೆ. ಅದು ತನಗೆ ಸಂಬಂಧಿಸಿದ್ದೇ ಅಲ್ಲ ಎಂಬ ಧೋರಣೆ. ಗಂಡ ತನ್ನ ಕಾಲೊತ್ತಿ ಸೇವೆ ಮಾಡಲಿ ಎಂದು ಯಾವ ಹೆಂಡತಿಯೂ ಬಯಸುವುದಿಲ್ಲ. (ಗಂಡನ ಮೇಲೆ ಅಂತಹ ಅಧಿಕಾರ ಚಲಾಯಿಸುವ ಪತ್ನಿಯರು ಇದ್ದರೂ ಅದು ಬೆರಳೆಣಿಕೆಯಷ್ಟು ಮಾತ್ರ). ಆದರೆ ತಾನು ಬಟ್ಟೆ ತೊಳೆಯುವಾಗ ತನ್ನ ಗಂಡ ಅದನ್ನು ಹರವಲು ಬಂದರೆ, ಪಾತ್ರೆ ತೊಳೆಯುವಾಗ ಅದನ್ನು ಜೋಡಿಸಿಟ್ಟರೆ, ಅಡುಗೆ ಮಾಡುವಾಗ ತರಕಾರಿ ಹೆಚ್ಚಿಕೊಟ್ಟರೆ, ಕಸಗುಡಿಸುವಾಗ ಹರಡಿ ಬಿದ್ದಿರುವ ಸಾಮಾನುಗಳನ್ನೆಲ್ಲ ಸರಿಯಾಗಿ ಜೋಡಿಸಿಕೊಟ್ಟರೆ ಪತ್ನಿಗಾಗುವ ಆನಂದ ಕಡಿಮೆಯಾದದ್ದೆ? ಇಲ್ಲಿ ಗಂಡ ಸಹಾಯಮಾಡುತ್ತಾನೆ ಎನ್ನುವುದರ ಜೊತೆಗೆ ಮನೆಗೆಲಸದಲ್ಲಿ ಅವನು ನೀಡುತ್ತಿರುವ ಸಾಂಗತ್ಯ ಖುಷಿ ನೀಡುತ್ತದೆ. ಅವಳ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ. ಆಫೀಸಿನಿಂದ ಬಳಲಿ ಬಂದಾಗ ಅವನೇನಾದರೂ ಒಂದು ಕಪ್ ಕಾಫಿ ಮಾಡಿಕೊಟ್ಟರೆ ಅದು ಹೇಳತೀರದ ಸಂತೋಷವನ್ನು ನೀಡುತ್ತದೆ. ತನ್ನ ಬಗ್ಗೆ ಅವನು ತೋರುತ್ತಿರುವ ಕಾಳಜಿಯನ್ನು ಗಮನಿಸಿ ಅವಳ ಪ್ರೀತಿ ಹೆಚ್ಚುತ್ತದೆ.

ಹೆಂಡತಿ ಅನಾರೋಗ್ಯದಿಂದ ಬಳಲುತ್ತಿರುವಾಗ ಗಂಡ ಅವಳ ಆರೈಕೆ ಮಾಡಿದರೆ ಅದಕ್ಕೆ ’ಸೇವೆ’ ಎಂಬ ಹೆಸರನ್ನು ಕೊಡಬೇಕಾಗಿಲ್ಲ. ಆ ಹೆಸರು ಅವರಿಗೆ ಮುಜುಗರವನ್ನುಂಟು ಮಾಡೀತು. ಆರೈಕೆ ಮಾಡಲು ಇನ್ನಾರೂ ಇರದಿರುವಾಗ ಅದು ಅವನ ಕರ್ತವ್ಯವಾಗುತ್ತದೆ. ಹೆಂಡತಿಗೆ ತಲೆನೋವು ಬಂದಾಗ ಝಂಡುಬಾಮ್ ಹಚ್ಚಿಕೊಡಲು, ಬೆನ್ನು ನೋವು ಬಂದರೆ ನೋವು ನಿವಾರಕ ಕ್ರೀಮ್ ಹಚ್ಚಿಕೊಡಲು, ಕಾಲು ನೋಯುತ್ತಿದ್ದರೆ ಮಸಾಜ್ ಮಾಡಲು ಗಂಡಸರಿಗೆ ಪೂರ್ವಾಗ್ರಹ ಯಾಕೆ? ಹಿಂಜರಿಕೆ ಯಾಕೆ? ಪ್ರೀತಿ ಇಬ್ಬರನ್ನೂ ಒಂದಾಗಿ ಬೆಸೆದಿರುವಾಗ, ಪ್ರೇಮ ಉಚ್ಚ ನೀಚ ಭಾವವನ್ನು ಮೀರಿ ನಿಂತಾಗ, ಪರಸ್ಪರ ಸರಿಯಾಗಿ ಅರ್ಥಮಾಡಿಕೊಂಡಿರುವಾಗ ಒಬ್ಬರ ಸೇವೆಯನ್ನು ಇನ್ನೊಬ್ಬರು ಮಾಡಿದರೆ ತಪ್ಪೇನು? ಅದು ಮಾನವೀಯ ಧರ್ಮಕ್ಕೆ ವಿರುದ್ಧವಾದದ್ದಂತೂ ಅಲ್ಲ.

No comments:

Post a Comment