Thursday, August 29, 2013

ಶಿಲೆಯಲ್ಲಿ ಕಲೆಯನ್ನು ಅರಳಿಸಿದ..........



ಗುಜರಾತಿನ ಮುಳುಗಿರುವ ಶ್ರೀಕೃಷ್ಣನ ದ್ವಾರಕೆಯ ಸಮುದ್ರೀಯ ಪುರಾತತ್ವ ಸಂಶೋಧನಾ ತಂಡದಲ್ಲಿ ೧೫ ವರ್ಷಗಳ ಕಾಲ ಡಾ. ಎಸ್. ಆರ್. ರಾವ್ರವರು ನಡೆಸಿದ ರೋಚಕ ಕಡಲಾಳದ ಪುರಾತತ್ವ ಸಂಶೋಧನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ,  ದ್ವಾರಕೆಯಲ್ಲಿ ಮುಳುಗಿರುವ ಕೋಟೆ ಹಾಗು ಬೃಹತ್ ಗೋಡೆಗಳ ಅವಶೇಷಗಳು ಹಾಗೂ ನೂರಾರು ಕಲ್ಲಿನ ಲಂಗರುಗಳನ್ನು (ಯಾಂಕರ್ಸ್) ಪತ್ತೆಹಚ್ಚಿ ಅದರ ಮೇಲೆ ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಸಂಶೋಧನಾ ಗ್ರಂಥಗಳಲ್ಲಿ ಲೇಖನಗಳನ್ನು ಪ್ರಕಟಿಸಿದ ಅಪ್ರತಿಮ ಸಂಶೋಧಕ ಇವರು.
     ನಾನೂರೈವತ್ತು ವರ್ಷಗಳಕಾಲ ಪೋರ್ಚುಗೀಸರ ಕರಾಳ ಆಳ್ವಿಕೆಯಲ್ಲಿ ನಾಶವಾದ ಗೋವಾದಲ್ಲಿನ ಪ್ರಾಚೀನ ಕಲ್ಲಿನ ದೇಗುಲಗಳು ಸಂಪೂರ್ಣ ನಾಶವಾದವು. ಇಂತಹ ನಾಡಿನಲ್ಲಿ ಮತ್ತೆ ಸಂಪ್ರದಾಯಿಕ ಶಿಲ್ಪಕಲೆಯನ್ನು ಪುನರ್ಜೀವಗೊಳಿಸಿ ಅದರ ಬೆಳವಣಿಗೆಗೆ ಕಾರಣರಾದ ಅಪ್ರತಿಮ ಶಿಲ್ಪಕಾರ ಇವರು.
     ಇವರೇ ಗೋವಾ ಕನ್ನಡಿಗರೆಲ್ಲ ಹೆಮ್ಮೆಪಡಬೇಕಾದ ಪುಟ್ಟಸ್ವಾಮಿ ಗುಡಿಗಾರ. ಅವರ ಜೀವಮಾನದ ಅಪ್ರತಿಮ ಸಾಧನೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ, ಕನ್ನಡ ನಾಡು-ನುಡಿಗೆ ದುಡಿದ ಸಾಧಕರಿಗೆ ಮೀಸಲಾಗಿಟ್ಟಿರುವ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ೨೦೧೨ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ.
ಮನೆತನದ ಹಿನ್ನೆಲೆ:
    ಕಾಶ್ಯಪ ಗೋತ್ರಕ್ಕೆ ಸೇರಿದ ಪುಟ್ಟಸ್ವಾಮಿ, ನಗರದ ಮನೆತನಕ್ಕೆ ಸೇರಿದವರು. ಇವರ ಪೂರ್ವಜರು ಇಕ್ಕೇರಿ ಅರಸರ ಕೊನೆಯ ರಾಣಿ ವೀರಮ್ಮಾಜಿಯ ಆಸ್ಥಾನದಲ್ಲಿ ಗೋವಿಂದಪ್ಪ ಎಂಬುವವರು ಸೇನಾಪತಿಯಾಗಿದ್ದರು. ೧೭೬೩ ರಲ್ಲಿನಡೆದ ವೀರಮ್ಮಾಜಿ ಹಾಗು ಹೈದರಾಲಿಯ ನಡುವೆ ನಡೆದ ಯುದ್ಧದಲ್ಲಿ ನಗರ ಸಂಸ್ಥಾನ ಪತನವಾಗುತ್ತದೆ. ನಂತರ ಇವರ ವಂಶಸ್ಥರು ನಗರದಿಂದ ಸಾಗರಕ್ಕೆ ಬಂದು ನೆಲೆಸಿದ್ದಾರೆಂದು ತಿಳಿದುಬಂದಿದೆ.
     ಪುಟ್ಟಸ್ವಾಮಿಯ ಅಜ್ಜನ ಅಜ್ಜ ಗುಡಿಗಾರ ದ್ಯಾವಪ್ಪ, ಇವರು ಸಾಗರದ ಹತ್ತಿರ ಮಂಕೋಡಿನಲ್ಲಿ ನೆಲೆಸಿದ್ದರೆಂಬ ತಿಳಿದು ಬಂದಿದೆ . ಇವರಿಗೆ ನಾಲ್ಕು ಮಕ್ಕಳು ಮೊದಲನೆಯವರು ಶೇಷಪ್ಪ, ಎರಡನೆಯವರು ಶಾಂತಪ್ಪ ಮೂರನೆಯವರು ಶಿವಪ್ಪ ಹಾಗು ಕೊನೆಯವರು ಹಿರಿಯಣ್ಯಪ್ಪ. ಹಿರಿಯಣ್ಯಪ್ಪ ಪುಟ್ಟಸ್ವಾಮಿಯ ಮುತ್ತಜ್ಜ. ಹಿರಿಯಣ್ಯಪ್ಪ ನವರ ಹೆಂಡತಿ ಹೂವಮ್ಮ ಇವರು ಭಟ್ಕಳ ಕುಟುಂಬದಿಂದ ಬಂದವರು. ಸಾಗರದಲ್ಲಿ ತಿಲಕ ರಸ್ತೆಯಲ್ಲಿ ಇವರ ಮನೆಯಿತ್ತು. ಇವರು ಶ್ರೀಗಂಧದ ಕೆಲಸ, ಮಣ್ಣಿನ ಗಣಪತಿ, ಜಾನಪದ ಶಿಲ್ಪಗಳಾದ ಗ್ರಾಮದೇವತೆ ಮಾಡುತಿದ್ದರೆಂದು ತಿಳಿದುಬರುತ್ತದೆ. ಇವರಿಗೆ ಮೂರು ಮಕ್ಕಳು. ಮೊದಲನೆಯವರು ದೊಡ್ಡಪುಟ್ಟಪ್ಪ, ಎರಡನೆಯವರು ಸುಬ್ರಾಯಪ್ಪ, ಇವರು ಪುಟ್ಟಸ್ವಾಮಿಯ ಅಜ್ಜ. ಕೊನೆಯವಳು ಸುಬ್ಬಮ್ಮ. ಸುಬ್ಬಮ್ಮನನ್ನು ಜಡೆ ಮನೆತನದವರಿಗೆ ಮದುವೆ ಮಾಡಿಕೊಟ್ಟಿತ್ತು. ಇವರು ಶಿವಪ್ಪ ನಾಯಕ ನಗರದ ವೆಂಕಟೇಶ ಮಾಸ್ಟರ ಅಜ್ಜಿ.
    ಪುಟ್ಟಸ್ವಾಮಿಯ ಅಜ್ಜ ಸುಬ್ರಾಯಪ್ಪ ಇವರ ಹೆಂಡತಿ ಗಂಗಮ್ಮ ಇವರು ಮೂಡುಗೋಡು ಹಿರಿಯಣ್ಯಪ್ಪ ನವರ ತಂಗಿ. ಸುಬ್ರಾಯಪ್ಪನವರು ಅರಳೆಕೊಪ್ಪದ ಪಟೇಲರಾಗಿದ್ದರು. ಸುಬ್ರಾಯಪ್ಪ ಹಾಗು ಗಂಗಮ್ಮ. ಸುಬ್ರಾಯಪ್ಪನವರು ಮರದ ಕೆಲಸ, ಬಾಸಿಂಗ ಹಾಗು ಮಣ್ಣಿನ ಗಣಪತಿ ಮುಂತಾದವುಗಳನ್ನು ಮಾಡುತ್ತಿದ್ದರು. ದಂಪತಿಗಳಿಗೆ ಆರು ಮಕ್ಕಳು ಮೊದಲನೆಯವಳು ಭಾಗೀರಥಿ (ಭಾಗಮ್ಮ) ಎರಡನೆಯವರು ಪುಟ್ಟಸ್ವಾಮಿಯವರ ತಂದೆ ಚಿಕ್ಕಣ್ಣ. ಮೂರನೆಯವಳು ಸರಸ್ವತಿ ಇವರು ಹೊನ್ನಾವರ ಯಶವಂತಪ್ಪನವರ ಮಡದಿ. ನಾಲ್ಕನೆಯವರು ರಾಮಪ್ಪ ಐದನೆಯವರು ನಾರಾಯಣಪ್ಪ ಹಾಗು ಕೊನೆಯವಳು ಕಮಲಮ್ಮ ಇವಳು ಬಿಳಗಿ ಪರಶುರಾಮಪ್ಪನವರ ಮಡದಿ.
     ಪುಟ್ಟಸ್ವಾಮಿಯ ತಂದೆ ಗುಡಿಗಾರ ಚಿಕ್ಕಣ್ಣ ಶಿಲ್ಪಕಲೆ, ಶ್ರೀಗಂಧದ ಕೆತ್ತನೆ, ಮರದ ಗ್ರಾಮದೇವತೆಗಳನ್ನು ಮಾಡುವುದರಲ್ಲಿ, ಬಾಸಿಂಗ, ಹಾನುವಾಳ ಮರದ ಗಾಳಿಮಾರಿ ಗುಡಿ ಹಾಗು ಬಣ್ಣದ ಕೆಲಸದಲ್ಲಿ ಇವರು ಹೆಸರುವಾಸಿ ಇದ್ದರು. ಇವರು ಸಾಗರದ ಗುಡಿಗಾರರಲ್ಲಿ ಮೊದಲ ಮುನಿಸಿಪಲ್ ಕೌನ್ಸಿಲರಾಗಿದ್ದರು. ಇವರ ಹೆಂಡತಿ ತಾಳಗುಪ್ಪದ ಮಂಜಪ್ಪನವರ ಪುತ್ರಿ ಅರುಂಧತಿ. ಇವರು ಬೆಂಡಿನ ಕೆಲಸ, ಗಂಧದ ಮಾಲೆ, ಬೆಂಡಿನ ಮಾಲೆ ಮಾಡಿ ಸಂಸಾರಕ್ಕೆ ನೆರವಾಗಿದ್ದಾರೆ. ದಂಪತಿಗಳಿಗೆ ಏಳು ಮಕ್ಕಳು ಹಿರಿಯವನು ಜಿ.ಸಿ ಮಹಾಬಲೇಶ್ವರ ಇವರು ಕಲಾವಿದರು ಸಾಗರದಲ್ಲಿ ನೆಲೆಸಿದ್ದಾರೆ. ಎರಡನೆಯರೇ ಪುಟ್ಟಸ್ವಾಮಿ.  ಮೂರನೆಯವಳು ಪ್ರಭಾವತಿ ಇವಳು ಕುಡಾಳನಲ್ಲಿ ನೆಲೆಸಿರುವ ಪರಶುರಾಮರವರ ಪತ್ನಿ. ನಾಲ್ಕನೆಯವನು ಎಸ್. ಬಿ. ಜಗನ್ನಾಥ ಇವರು ಎಸ್.ಬಂಗಾರಪ್ಪನವರ ದತ್ತು ಪುತ್ರ. ಐದನೆಯವನು ಸುರೇಶ ಗುಡಿಗಾರ ಇವನು ಶಿಲ್ಪದಲ್ಲಿ ಶ್ರೀಮತಿ ಕಮಲಾದೇವಿ ಚಟ್ಟೋಪಾದ್ಯಾಯ ವಿಶ್ವಕರ್ಮ ಪ್ರಶಸ್ತಿ ಹಾಗು ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ. ಇವರು ಬಿಡದಿಯಲ್ಲಿ ನೆಲೆಸಿದ್ದಾರೆ. ಐದನೆಯವನು ಅಶೋಕ್ ಗುಡಿಗಾರ ಇವರು  ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ವಿಶ್ವಕರ್ಮ ಪ್ರಶಸ್ತಿ. ಕರ್ನಾಟಕ ರಾಜ್ಯ ಪ್ರಶಸ್ತಿ, ರಾಷ್ಟ್ರಪಶಸ್ತಿ ಹಾಗು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರು. ಇವರು ಸಹಾ ಬಿಡದಿಯಲ್ಲಿ ನೆಲೆಸಿದ್ದಾರೆ. ಕೊನೆಯವರು ವಿಠ್ಠಲ ಗುಡಿಗಾರ ಇವರು ಕಲಾವಿದರು.
ಬಾಲ್ಯ:
     ಪುಟ್ಟಸ್ವಾಮಿ ಹುಟ್ಟಿದ್ದು ೦೪.೧೦.೧೯೫೧ ರಂದು ಸಾಗರದಲ್ಲಿ. ಪಿ.ಯೂ.ಸಿ ವರಗೆ ಓದಿದ್ದು  ಸಾಗರದ ಸರ್ಕಾರಿ ಕನ್ನಡ ಮಾಧ್ಯಮಿಕ ಶಾಲೆ ಹಾಗು ಮುನಿಸಿಪಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ. ಪುಟ್ಟಸ್ವಾಮಿ ಓದುವಾಗ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಾಗಿರಲಿಲ್ಲ. ಅವಿಭಕ್ತಕುಟುಂಬ, ಮೂರು ಕುಟುಂಬ ಒಟ್ಟಿಗೆ ಇದ್ದುದ್ದರಿಂದ ಮನೆತುಂಬಾ ಮಕ್ಕಳು ಹಾಗು ಮನೆಯಲ್ಲಿ ಓದುವ ವಾತಾವರಣ ಸಹಾ ಇರಲಿಲ್ಲ. ಸಾಕಷ್ಟು ನೆಂಟರಿಷ್ಟರು ಬರುತಿದ್ದರು. ಪುಟ್ಟಸ್ವಾಮಿ ತನ್ನ ಎಂಟನೇ ವಯಸ್ಸಿಗೆ ಮನೆಯಲ್ಲಿ ಮಣ್ಣಿನ ಗಣಪತಿ ಹಾಗು ಬಾಸಿಂಗದ ಕೆಲಸದಲ್ಲಿ ತೊಡಗಬೇಕಾಯಿತು. ಕ್ರಮೇಣ ತಂದೆಯವರ ಜೊತೆಯಲ್ಲಿ ಚಾಣವನ್ನು ಹಿಡಿಯಬೇಕಾಯಿತು. ಮೊದಲು ಪುಟ್ಟಸ್ವಾಮಿ ಗಂಧದ ಕೆಲಸ ಮಾಡಿದ್ದು ಪೇಪರ್ ಕಟರ್ ಮಾಡುವುದನ್ನು ಕಲಿತು ನಂತರ ಪುಟ್ಟಸ್ವಾಮಿ ಎಂಟನೆ ಕ್ಲಾಸಿಗೆ ಬಂದಾಗ ಚಿಕ್ಕಪ್ಪ ನವರ ಜೊತೆ ಕೂತು ಗಂಧದಲ್ಲಿ ಗಣಪತಿ ವಿಗ್ರಹ ಮಾಡುವುದನ್ನು ಕಲಿತು ಕೊಂಡ. ಆಗ ಪುಟ್ಟಸ್ವಾಮಿಯ ವಾರಿಗೆಯವರು ಗಂಧದ ಕೆತ್ತನೆ ಮಾಡಿ ಚೆನ್ನಾಗಿ ಹಣಗಳಿಸುತ್ತಿದ್ದರು. ಹಣ ಸಂಪಾದನೆಯ ರುಚಿ ಕಂಡ ಮೇಲೆ ಇವನ ವಾರಿಗೆಯವರು ಬಹಳಷ್ಟು ಹುಡುಗರು ಕುಲಕಸುಬಿನಲ್ಲೆ ಮುಂದುವರಿದರು.
      ಪುಟ್ಟಸ್ವಾಮಿಯು ಇವನ ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲೆಯ ಓದಿನಲ್ಲಿ ತುಂಬಾ ನಿಶ್ಯಕ್ತರಾಗಿದ್ದರು. ಒಂಬತ್ತನೆಯ ತರಗತಿಯ ನಂತರ ಇವನ ಓದು ಸುಧಾರಿಸಿತು. ೧೯೬೯ ರಲ್ಲಿ ಪುಟ್ಟಸ್ವಾಮಿ ಎಸ್.ಎಸ್.ಎಲ್.ಸಿ ಯನ್ನು ಮೊದಲ ಪ್ರಯತ್ನದಲ್ಲೇ ಪಾಸಾದರು. ಆಗ ಸಾಗರದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪಿ.ಯೂ.ಸಿ ಯನ್ನು ಹೊಸದಾಗಿ ಶುರುಮಾಡಿದರು (ಒಂದು ವರ್ಷದ ಕೋರ್ಸ್) ಅದನ್ನು ಪುಟ್ಟಸ್ವಾಮಿ ಸಾಗರದಲ್ಲೇ ಮುಗಿಸಿದನು.
      ಪುಟ್ಟಸ್ವಾಮಿಗೆ ಕಾಲೇಜನ್ನು ಮೈಸೂರಿನಲ್ಲಿ ಓದುವ ಆಸೆಯಿತ್ತು. ಆಗ ಸಾಗರದಲ್ಲಿ ಕಾಲೇಜು ಇದ್ದರೂ ಧೈರ್ಯಮಾಡಿ ಚಾಣದ ಗಂಟು ಹಾಗು ಕೆಲವು ಗಂಧದ ಪೀಸುಗಳನ್ನು ಹಿಡಿದುಕೊಂಡು ಪುಟ್ಟಸ್ವಾಮಿ ೧೯೭೨ ರಲ್ಲಿ ಮೈಸೂರಿಗೆ ಪ್ರಯಾಣ ಬೆಳಸಿದರು. ಆಗ ಪುಟ್ಟಸ್ವಾಮಿಯ ದೊಡ್ಡಮ್ಮನ ಮಗ ಜಿ.ಎಂ. ಗುರುನಾಥಪ್ಪ ನವರ ಸಂಸಾರ ಮೈಸೂರಿನಲ್ಲಿ ನೆಲಸಿತ್ತು. ಶುರುವಿನಲ್ಲಿ ಕೆಲವು ದಿನಗಳನ್ನು ಇವರ ಮನೆಯಲ್ಲಿ ಕಳೆದು, ನಂತರ ಅಲ್ಲೆ ಹತ್ತಿರದಲ್ಲಿ ರೂಮು ಮಾಡಿಕೊಂಡು ರಾತ್ರಿ ಗಂಧದ ವಿಗ್ರಹ ಮಾಡಿಕೊಂಡು ಅದನ್ನು ಮಾರಿ ಓದಬೇಕಾಗಿತ್ತು. ಮನೆಯಿಂದ ಯಾವ ಹಣಕಾಸಿನ ನೆರವಿರಲಿಲ್ಲ. ಗುರುನಾಥಪ್ಪ ನವರು ಮಹಾರಾಜಾ ಕಾಲೇಜಿಗೆ ಸೇರಲು ನೆರವಾದರು. ವಾಣಿವಿಲಾಸ ಪುರಂನಿಂದ ಮಹಾರಾಜ ಕಾಲೇಜಿಗೆ ದಿನಾ ನಡೆದುಕೊಂಡು ಹೋಗಬೇಕಾಗಿತ್ತು. ಒಮ್ಮೊಮ್ಮೆ ಒಂದು ಹೊತ್ತಿನ ಊಟಕ್ಕ್ಕೂ ತೊಂದರೆಯಾಗತ್ತಿತ್ತು. ಎರಡನೆ ಬಿ.. ಓದುವಾಗ ಪುಟ್ಟಸ್ವಾಮಿಗೆ ಸ್ಕಾಲರಶಿಪ್ ಸಿಕ್ಕಿದ್ದರಿಂದ ಓದುವುದಕ್ಕೆ ಸ್ವಲ್ಪ ಅನುಕೂಲವಾಯಿತು. ಇವನ ರೂಮಿನ ಪಕ್ಕದಲ್ಲಿ ಒಂದು ಸಂಕೇತಿ ಬ್ರಾಹ್ಮಣರ ಕುಟುಂಬವಿತ್ತಂತೆ ಅವರ ಮಕ್ಕಳು ಇವನ ವಾರಿಗೆಯವರಿದ್ದರಂತೆ. ಪುಟ್ಟಸ್ವಾಮಿಯನ್ನು ಅವರುಶ್ರೀನಿವಾಸ ಎಂದು ಕರೆಯುತ್ತಿದ್ದರಂತೆ ಒಮ್ಮೊಮ್ಮೆ ಅವರ ಮಕ್ಕಳಿಗೆ ಕೈತುತ್ತು ಕೊಡುವಾಗ ಪುಟ್ಟಸ್ವಾಮಿಗೂ  ಕೈತುತ್ತು ಕೊಡುತ್ತಿದ್ದರಂತೆ. ಈಗಲೂ ಕೈತುತ್ತಿನ ರುಚಿಯನ್ನು ನೆನೆಯುತ್ತಾರೆ ಹಾಗು ಕೈತುತ್ತಿನ ಬೆಲೆ ಕಟ್ಟುವುದಕ್ಕೆ ಆಗುವುದಿಲ್ಲ ಅನ್ನುತ್ತಾರೆ ಪುಟ್ಟಸ್ವಾಮಿ. 
     ಪುಟ್ಟಸ್ವಾಮಿಗೆ ಕವನ ಬರೆಯುವ ಹವ್ಯಾಸವಿತ್ತು, ಇವರು ಎರಡನೆ ಬಿ. ಓದುವಾಗ   ಮಹಾರಾಜಾ ಕಾಲೇಜಿನ ಆಶ್ರಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮಟ್ಟದ ಕುವೆಂಪು ಗೌರವ ವಿದ್ಯಾರ್ಥಿ ಕವಿ ಸಮ್ಮೇಳನ ನಡೆಯಿತು. ಆಗ ಇವರು ಬರೆದ ಕಪ್ಪು ಮಣ್ಣಲ್ಲಿ ಕೆಂಪು ಹೂವು ಎಂಬ ಕವನಕ್ಕೆ ಎರಡನೆ ಬಹುಮಾನ ದೊರೆಯಿತು. ಪುಟ್ಟಸ್ವಾಮಿ ಹಸಿವಿನ ಕಾಲದಲ್ಲಿ ಬಂದ ಬಹುಮಾನದ ಖುಷಿಯನ್ನು  ಇನ್ನೂ ನೆನೆಯುತ್ತಾರೆ! ೧೯೭೫ ಇವರು ಮಹಾರಾಜಾ ಕಾಲೇಜಿನಲ್ಲಿ ಬಿ. ಮುಗಿಸಿದರು.
     ನಂತರ ಇವರು ಸ್ನಾತಕೋತ್ತರ ಪದವಿಯನ್ನು ಪ್ರಾಚೀನ ಇತಿಹಾಸ ಹಾಗು ಪುರಾತತ್ವ ಶಾಸ್ತ್ರದಲ್ಲಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ೧೯೭೭ ರಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯ ನಂತರ ಇವರ ಮೈಸೂರು ಆಕಾಶವಾಣಿಯ ಇವರ ಸ್ನೇಹಿತರೊಬ್ಬರು ಇವರವಿದ್ಯಾರ್ಥಿ ಹೋರಾಟದ ಬದುಕು  ಎಂಬ ಒಂದು ಆಕಾಶವಾಣಿ ಕಾರ್ಯಕ್ರಮವನ್ನು ಪ್ರಸಾರ ಮಾಡಿಸಿದರು.
      ಇವರಿಗೆ ನೌಕರಿಗೆ ಸೇರುವ ಹಂಬಲ ಮೊದಲು ಇರಲಿಲ್ಲ. ತಮ್ಮ ಕಲಾವೃತ್ತಿಯನ್ನು ಕೆಲವು ವರ್ಷ ಮುಂದುವರೆಸಿದರು. ೧೯೭೮ ರಲ್ಲಿ ಇವರು ಸಾಗರದಲ್ಲಿ ಇರುವಾಗ ಕರ್ನಾಟಕದ ರಾಜ್ಯಪಾಲರದ ಶ್ರೀ ಗೋವಿಂದ ನಾರಾಯಣ ರವರು ಇವರ ಹತ್ತಿರ ಎರಡು ಮುರಳೀಧರ ಕೃಷ್ಣ ಹಾಗು ಸರಸ್ವತಿಯ ವಿಗ್ರಹ ಮಾಡಿಸಿದರು. ಅದನ್ನು ಅವರು ಮೆಚ್ಚಿ ಪುಟ್ಟಸ್ವಾಮಿಯವರಿಗೆ  ಒಂದು ಪ್ರಶಂಸಾ ಪತ್ರ ಬರೆದಿದ್ದಾರೆ. ೧೯೭೯ ರಲ್ಲಿ ಇವರ ಮೇಲೆ ಉದಯವಾಣಿ ಪತ್ರಿಕೆಯಲ್ಲಿಯುವ ಕಲಾವಿದ ಪುಟ್ಟಸ್ವಾಮಿ ಗುಡಿಗಾರ ಎಂಬ ಲೇಖನವನ್ನು ಬಿ. ಪ್ರಕಾಶ್ ರಾವ್ ಎಂಬುವವರು ಬರೆದಿದ್ದಾರೆ.
              ೧೯೭೯ ಜೂನ್ ನಲ್ಲಿ ಪುಟ್ಟಸ್ವಾಮಿಯವರ ಮದುವೆ ಮುಂಬೈನ ಹೆಚ್. ಆರ್ ಶ್ರೀಪಾದ ಶೆಟ್ಟಿ ಹಾಗು ಕಮಲಾ ಶೆಟ್ಟಿಯವರ ಮೊದಲ ಪುತ್ರಿ ಶೀಲಾ ರೊಂದಿಗೆ ಸಿರ್ಸಿಯಲ್ಲಿ ನಡೆಯಿತು. ೧೯೮೦ ಮಾರ್ಚನಲ್ಲಿ ಇವರ ಮೊದಲ ಮಗಳು ಶಿಲ್ಪನ ಮುಂಬೈನಲ್ಲಿ  ಹುಟ್ಟಿದಳು. ೧೯೮೦ ರಲ್ಲಿ ಪುಟ್ಟಸ್ವಾಮಿ ತನ್ನ ಕಿರಿಯ ತಮ್ಮ ಅಶೋಕನನ್ನು ಕರೆದು ಕೊಂಡು ಬೆಂಗಳೂರಿಗೆ ವಲಸೆ ಬಂದರು. ಅಶೋಕನಿಗೆ ಆಗ ೧೪ ವರ್ಷ ವಯಸ್ಸು. ಮೊದಲು ಇವರು ಬಿ.ವಿ.ಕೆ ಐಯಂಗಾರ್ ರಸ್ತೆಯಲ್ಲಿ ಒರಿಯಂಟಲ್ ಆರ್ಟ್ಸ್ ಎಂಬ ಕರಕುಶಲ ಚಿಕ್ಕ ಮಳಿಗೆಯನ್ನು ಸೋಹನ್ ಲಾಲ್ ಸಿಸೋದಿಯಾ ಜೊತೆಯಲ್ಲಿ ಸುರುಮಾಡಿದರು. ಆಗ ಇವರಿಗೆ ರಾಷ್ಟ್ರಪ್ರಶಸ್ತಿ ವಿಜೇತ ಡಿ. ವಾದಿರಾಜರ ಪರಿಚಯವಾಯಿತು. ಸೋಹನ್ ಲಾಲ್ ಜೊತೆ ಅನೇಕ ಸಮಸ್ಯೆಗಳಿಂದ ವ್ಯಾಪಾರದ ಮಳಿಗೆ ನಿಲ್ಲಿಸಬೇಕಾಯಿತು. ಪುಟ್ಟಸ್ವಾಮಿ ಸಂಕಷ್ಟಕ್ಕೆ ಸಿಲುಕಿಕೊಂಡರು.
    ೧೯೮೧ ರಲ್ಲಿ ಡಾ. ಎಸ್.ಆರ್. ರಾವ್ ರವರು ಗೋವಾದ ರಾಷ್ಟ್ರೀಯ ಸಮುದ್ರ ವಿಜ್ಞಾನ ಸಂಸ್ಥೆಯಲ್ಲಿ ಹೊಸದಾಗಿ ಸಮುದ್ರೀಯ ಪುರಾತತ್ವ ಸಂಶೋಧನೆಯ, ಒಂದು ಭಾರತೀಯ ವಿಜ್ಞಾನ ಅಕಾದಮಿಯ ಪ್ರಾಜೆಕ್ಟನ್ನು ಶುರುಮಾಡಿದ್ದರು. ಅದಕ್ಕೆ ಎರಡು ಕಿರಿಯ ಸಮುದ್ರೀಯ ಪುರಾತತ್ವ ಸಂಶೋಧಕರ ಅವಶ್ಯಕತೆಯಿತ್ತು. ಅದರಲ್ಲಿ ಪುಟ್ಟಸ್ವಾಮಿಯು ಆಯ್ಕೆಯಾದರು. ಪುಟ್ಟ್ಟಸ್ವಾಮಿ ಗೋವಾಕ್ಕೆ ಬಂದರು. 
        ಗೋವಾದ ದೋನಾಪೌಲದಲ್ಲಿರುವ ಸಮುದ್ರೀಯ ವಿಜ್ಞಾನ ಸಂಸ್ಥೆ ಸಿ.ಎಸ್..ಆರ್. ಒಂದು ಅಂಗ ಸಂಸ್ಥೆ. ಇಲ್ಲಿ ಸಮುದ್ರ ವಿಜ್ಞಾನಕ್ಕೆ ಸಂಬಂಧಪಟ್ಟ ಅನೇಕ ವಿಭಾಗಗಳಿವೆ. ಅದರಲ್ಲಿ ಸಮುದ್ರೀಯ ಪುರಾತತ್ವವೂ ಒಂದು. ಸಮುದ್ರೀಯ ಪುರಾತತ್ವ ವನ್ನು ಡಾ.ರಾವ್ ರವರು ಭಾರತದಲ್ಲಿ ಪ್ರಥಮ ಭಾರಿಗೆ ಶುರುಮಾಡಿದರು.
ದ್ವಾರಕಾ ಸಂಶೋಧನೆ:
      ಗುಜರಾತಿನ ಸೌರಾಷ್ಟ್ರದ ಜಾಮನಗರ ಜಿಲ್ಲೆಯಲ್ಲಿ ಬರುವ ದಾರಕಾ ಪಟ್ಟಣ ಪಶ್ಚಿಮ ಕರಾವಳಿಗೆ ಅಂಟಿಕೊಂಡು ಗೋಮತಿ ನದಿ ದಂಡೆಯ ಮೇಲಿದೆ. 
     ಪುಟ್ಟಸ್ವಾಮಿಯವರು ೧೯೮೨ ರಿಂದ ಡಾ. ರಾವರವರ ಜೊತೆಯಲ್ಲಿ ಗುಜರಾತಿನ ಸೌರಾಷ್ಟ್ರದ ಜಾಮನಗರ ಜಿಲ್ಲೆಯಲ್ಲಿ ಬರುವ ದ್ವಾರಕ ಹಾಗು ಬೇಟ್ ದ್ವಾರಕಾದಲ್ಲಿ ಪುರಾತತ್ವ ಸಂಶೋಧನೆಯನ್ನು ಶುರುಮಾಡಿದರು. ೧೯೮೩ ರಲ್ಲಿ ಬೇಟ್ ದ್ವಾರಕಾದಲ್ಲಿ ಮೊದಲ ಸಮುದ್ರೀಯ ಪುರಾತತ್ವ ಸಂಶೋಧನೆ ಶುರುವಾಯಿತು. ಬೇಟ್ ದ್ವಾರಕ ತುಂಬ ಕುತೂಹಲಕಾರಿಯಾದ ಚಿಕ್ಕದ್ವೀಪ ಸುಮಾರು ಕಿ.ಮಿ ಉದ್ದ ಹಾಗು . ಕಿ.ಮಿ. ಅಗವಿದೆ. ಇದು ಹರಪ್ಪನರ ಕಾಲದಿಂದಲೂ ಈಗಿನ ವರೆಗೂ ಜನರು ವಾಸಿಸಿದ್ದ ಸ್ಥಳ. ದ್ವೀಪ ಹರಪ್ಪನರ ಕಾಲದಿಂದ ಒಂದು ಸುರಕ್ಷಿತ ಬಂದರು. ದ್ವೀಪದಲ್ಲಿ ಕೈಹಾಕಿದರೆ ಅಲ್ಲಿ ಹರಪ್ಪನ್ನರ ಕಾಲದಿಂದ ಹಿಡಿದು ಎಲ್ಲಾ ಕಾಲದ ಮಡಿಕೆಯ ಹಾಗು ಇತರೆ ಅವಶೇಷಗಳು ಸಿಗುತ್ತವೆ. ಪುಟ್ಟಸ್ವಾಮಿ ಗುಡಿಗಾರ ಹಾಗು ಇವರ ತಂಡ ನಡೆಸಿದ ಸುಮಾರು ೧೮ ವರ್ಷಗಳ ಪುರಾತತ್ವ ಸಂಶೋಧನೆಯಲ್ಲಿ ಹರಪ್ಪನರ ಕಾಲದ ಒಂದು ಮುದ್ರೆ (ಸೀಲ್) ದೊರಕಿದೆ. ಇದು ಸಮುದ್ರ ತಳದಲ್ಲಿ ಉತ್ಖನನ ಮಾಡುವಾಗ ಸಿಕ್ಕಿದ್ದು. ಹಾಗು ಮಡಿಕೆಯ ಚೂರಿನಮೇಲೆ ಹರಪ್ಪನ ಸಂಸ್ಕೃತಿಯ ಕಾಲದ ಲಿಪಿಗಳು ಸಿಕ್ಕಿವೆ. ನಂತರ ಬಂದ ಇತರೆ ಪ್ರಾಚೀನ ಹಾಗು ಐತಿಹಾಸಿಕ ಕಾಲದ ಅವಶೇಷಗಳಾದ ಪ್ರಾಚೀನ ಕಲ್ಲಿನ ಲಂಗರುಗಳು, ಮಡಿಕೆಯ ಅವಶೇಷಗಳು ಬೇಟ್ ದ್ವಾರಕಾ ದ್ವೀಪದಲ್ಲಿ ಸಿಕ್ಕಿವೆ.
    ದ್ವಾರಕಾ ಪಟ್ಟಣದಲ್ಲಿ ದ್ವಾರಕಾಧೀಶ ದೇವಸ್ಥಾನ ಸಮುದ್ರಕ್ಕೆ ಸುಮಾರು ಅಧ ಕಿಲೋಮೀಟರ ದೂರವಿದ್ದರೆ ಸಮುದ್ರ ನಾರಾಯಣ ದೇವಸ್ಥಾನ ಸಮುದ್ರಕ್ಕೆ ಅಂಟಿಕೊಂಡಿದೆ. ಇದು ಸಹಾ ಸುಮಾರು ೧೦ ನೆ ಶತಮಾನದಲ್ಲಿ ಕಟ್ಟಿದ ದೇವಸ್ಥಾನ. ಇದರ ಮುಂಭಾಗದಲ್ಲಿ ಸುಮಾರು ಹತ್ತು ಕಿ.ಮೀ. ಚೌಕಾಕಾರದ ಸಮುದ್ರ ಪ್ರದೇಶದಲ್ಲಿ ಡಾ. ಎಸ್.ಆರ್.ರಾವರವರ ನೇತೃತ್ವದಲ್ಲಿ ಪುಟ್ಟಸ್ವಾಮಿ ಗುಡಿಗಾರ ಹಾಗು ಅವರ ತಂಡ ಸತತವಾಗಿ ೧೫ ವರ್ಷಗಳ ಕಾಲ ಸಮುದ್ರದ ತಳದಲ್ಲಿ ಸಮುದ್ರೀಯ ಪುರಾತತ್ವ ಸಂಶೋಧನೆಯನ್ನು ನಡೆಸಿದೆ.
    ದ್ವಾರಕಾ ಸಮುದ್ರೀಯ ಪುರಾತತ್ವ ಸಂಶೋಧನೆಗೆ ಮುಖ್ಯವಾಗಿ ಡೈವಿಂಗ್ ಉಪಕರಣಗಳು, ಕಂಪ್ರೆಸ್ಸರ್ (ಇದು ರಬ್ಬರ್ ಪೈಪ್ ಮೂಲಕ ಡೈವ್ ಮಾಡುವುದಕ್ಕೆ ಹಾಗು ಸಮುದ್ರದ ತಳದಲ್ಲಿ ಉತ್ಖನನ ಮಾಡುವುದಕ್ಕೆ) ಅಂಡರ್-ವಾಟರ್ ಸ್ಕೂಟರ್, ಇದು ಸಮುದ್ರದ ತಳದಲ್ಲಿ ಸರ್ವೆ ಮಾಡುವುದಕ್ಕೆ ಹಾಗೂ ಅಂಡರ್ ವಾಟರ್ ಕ್ಯಾಮರ, ವೀಡಿಯೊ ಕ್ಯಾಮರಾ, ಉತ್ಖನನದ (ಎಕ್ಸಕವೇಷನ್) ಉಪಕರಣಗಳು ಹಾಗು ಅನೇಕ ಸಲಕರಣೆಗಳಿಂದ ಸಂಶೋಧನಾ ಬೋಟು ಸಜ್ಜಾಗಿರುತ್ತದೆ. ಸಂಶೋಧನಾ ತಂಡದಲ್ಲಿ ಒಬ್ಬ ಅಂಡರ್ ವಾಟರ್ ಕ್ಯಾಮರಾಮನ್ ಇರುತ್ತಾನೆ. ಇವನು ಸ್ಟಿಲ್ ಫೊಟೊ ಸಹಾ ತೆಗೆಯುತ್ತಾನೆ. . ಮೊದಲು ಆರ್ಕಿಯಾಲಜಿಸ್ಟಗಳಿಗೆ ಕಮರ್ಷಿಯಲ್ ಡೈವರ್ಸಗಳಿಂದ ಡೈವಿಂಗ ತರಬೇತಿ ಕೊಡುತ್ತಾರೆ ನಂತರ ಅವರನ್ನ ಡೈವಿಂಗಗೆ ಬಳಸುತಾರೆ. ಡೈವಿಂಗ್ ಟೀಮಿನಲ್ಲಿ ಕಮರ್ಷಿಯಲ್ ಡೈವರ್ಸ್ಗಳು ಸಹಾಯಕ್ಕೆ ಇರುತ್ತಾರೆ. ಪುಟ್ಟಸ್ವಾಮಿಯವರು ಅಂಡರ್ ವಾಟರ್ ಡೈವಿಂಗನಲ್ಲಿ ತುಂಬಾ ಅನುಭವ ಪಡೆದಿದ್ದರು. ಬೋಟಿನಲ್ಲಿಯೆ ಊಟದ ವ್ಯವಸ್ಥೆ ಕೂಡ ಇರುತ್ತದೆ. ದೊಡ್ಡ ಬೋಟಿನ ಜೊತೆಗೆ ಒಂದು ಸ್ಪೀಡ್ ಮೊಟಾರ್ ಅಳವಡಿಸಿದ ಚಿಕ್ಕ ರಬ್ಬರ್ ಬೋಟ್ ಸಹಾಯಕ್ಕೆ ಇರುತ್ತದೆ.
    ಪುಟ್ಟಸ್ವಾಮಿ ಗುಡಿಗಾರ ಹಾಗು ಇವರ ತಂಡ ಡಾ. ಎಸ್.ಆರ್. ರಾವ್ ನೇತೃತ್ವದಲ್ಲಿ ದ್ವಾರಕಾದ ಸಮುದ್ರದ ತಳದಲ್ಲಿ ಕೆಲವು ಮುಳುಗಿರುವ ಗೋಡೆಗಳ ಅವಶೇಷಗಳನ್ನು, ಕಲ್ಲಿನ ಕಂಬಗಳನ್ನು, ಚಂದ್ರಾಕೃತಿಯ ಪ್ರಾಚೀನ ಕೋಟೆ ಗೋಡೆಯ ಅವಶೇಷಗಳನ್ನು ಪತ್ತೆ ಹಚ್ಚಿ ಅದರ ಕೂಲಂಕುಶ ಪರಿಶೀಲನೆ ಮಾಡಿದ್ದಾರೆ. ದ್ವಾರಕ ಒಂದು ಪ್ರಾಚೀನಕಾಲದಿಂದಲೂ ಬಂದರಾಗಿದ್ದರಿಂದ ನೂರಾರು ಕಲ್ಲಿನ ಲಂಗರುಗಳು(ಂಟಿಛಿhoಡಿ)  ಸಿಕ್ಕಿವೆ. ಸಮುದ್ರದ ತಳದಿಂದ ಪತ್ತೆಹಚ್ಚಿದ ಕೆಲವು  ಲಂಗರುಗಳನ್ನು ಎನ್... ದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ದ್ವಾರಕಾ ಸಮುದ್ರೀಯ ಪುರಾತತ್ವ ಸಂಶೋಧನೆಯನ್ನು ಒಮ್ಮೆ ಡಾ..ಪಿ.ಮಿತ್ರಾರವರು (ಎಕ್ಸ್.ಡಿ.ಜಿ. ಸಿ.ಎಸ್..ಆರ್) ೨೦ನೆ ಶತಮಾನದ ಒಂದು ರೋಚಕ ಸಂಶೋಧನೆ ಎಂದು ವರ್ಣಿಸಿದ್ದರು.
     ಪುಟ್ಟಸ್ವಾಮಿ ಗುಡಿಗಾರರು ಹಾಗು ಇವರ ತಂಡ ಲಕ್ಷದ್ವೀಪದ ಹಲವಾರು ದ್ವೀಪಗಳಾದ ಕವರತ್ತಿ, ಅನುರೋಧ್, ಅಗತಿ, ಬೈರಾಮಗೋರ್ ಹಾಗು ಮಿನಿಕಾಯ್ ದ್ವೀಪಗಲ್ಲಿ ಸಂಶೋಧನೆ ನಡೆಸಿ ಕೆಲವು ಮುಳುಗಿರುವ ಹಡಗುಗಳನ್ನು ಪತ್ತೆಹಚ್ಚಿದ್ದಾರೆ. ತಮಿಳುನಾಡಿನ ಪ್ರಾಚೀನ ಬಂದರುಗಳಾದ ಕಾವೇರಿ ಪೂಂಪಟ್ಟಿನಂ, ಮಹಾಬಲಿಪುರಂ, ಪಾಂಡಿಚರಿ, ತರಂಗಂಬಾಡಿ ಹಾಗು ನಾಗಪಟ್ಟಿನಂ ಮುಂತಾದ ಕಡೆ ಸಮುದ್ರೀಯ ಪುರಾತತ್ವ ಸಂಶೋಧನೆ ನಡೆಸಿ ಮುಳುಗಿರುವ ಪಟ್ಟಣದ ಅವಶೇಷಗಳನ್ನು, ಬ್ರಿಟಿಷರ ಹಾಗು ಡಚ್ಚರ ಕಾಲದ ಕೆಲವು ಮುಳುಗಿರುವ ಹಡಗುಗಳನ್ನು ಪತ್ತೆಹಚ್ಚಿದ್ದಾರೆ.
   ಪುಟ್ಟಸ್ವಾಮಿಯವರು ಹಾಗು ಇವರ ತಂಡ ಗೋವ, ಮಹಾರಾಷ್ಟದ ಕರಾವಳಿಯಲ್ಲಿರುವ ಮಾಲ್ವಣ್. ಸೌರಾಷ್ಟ್ರ ಕರಾವಳಿಯಲ್ಲಿ ಇರುವ ಸೋಮನಾಥ, ಪಿಂಡಾರ,  ಮುಂತಾದ ಕಡೆಯಲ್ಲೂ ಸಮುದ್ರೀಯ ಪುರಾತತ್ವ ಸಂಶೋಧನೆ ನಡೆಸಿದ್ದಾರೆ.
     ಪುಟ್ಟಸ್ವಾಮಿಯವರು ೧೨೦೦ ಹಳೆಯಕಾಲದ ಹಡಗು ಮುಳುಗಿರುವ ಮಾಹಿತಿಯನ್ನು ಭಾರತದ ಮುಖ್ಯ ದಫ್ತರುಗಳಾದ ( ಅರ್ಕೈವ್ಸ್) ಮುಂಬೈ, ಚನ್ನೈ, ಬರೋಡ, ಭುವನೇಶ್ವರ, ಕಲ್ಕತ್ತಾ ಹಾಗು ದೆಹಲಿ ಮುಂತಾದ ಕಡೆಗಳಲ್ಲಿ  ೨೦ ತಿಂಗಳಿಗೂ ಹೆಚ್ಚು ಕಾಲ ಅಲ್ಲಿ ಇದ್ದು ಅದರ ಮಾಹಿತಿಯಿಂದ ಒಂದು  ನಾಷನಲ್ ರೆಜಿಸ್ಟರ್ ಆಫ್ ಎನ್ಸಿಯೆಂಟ್ ಶಿಪ್ರೆಕ್ಸ್ ಇನ್ ಇಂಡಿಯನ್ ವಾಟರ್ಸ್ ಎಂಬ ಕಾನ್ಫಿಡೆನ್ಸಿಯಲ್ ಮಾಹಿತಿ ಪುಸ್ತಕವನ್ನು ಮಾಡಿ ರಾಷ್ಟ್ರೀಯ ಸಮುದ್ರ ವಿಜ್ಞಾನಕ್ಕೆ ಒಪ್ಪಿಸಿದ್ದಾರೆ. ಪುಸ್ತಕ ಮುಂದಿನ ಸಮುದ್ರೀಯ ಪುರಾತತ್ವ ಸಂಶೋಧನೆಗೆ ಅತ್ಯಮೂಲ್ಯವಾದದ್ದು.
    ಪುಟ್ಟಸ್ವಾಮಿ ಗುಡಿಗಾರರ ೨೦ ಕ್ಕೂ ಹಚ್ಚು ಸಮುದ್ರೀಯ ಪುರಾತತ್ವ ಸಂಶೋಧನ ಲೇಖನಗಳು ಲಂಡನ್ನಿನಲ್ಲಿ ಪ್ರಕಟವಾಗುವನಾಟಿಕಲ್ ಆರ್ಕಿಯಾಲಜಿಹಾಗು ಭಾರತದಲ್ಲಿ ಪ್ರಕಟವಾಗುವಜರ್ನಲ್ ಆಫ್ ಮರೀನ ಅರ್ಕಿಯಾಲಜಿ ಯಲ್ಲಿ ಪ್ರಕಟವಾಗಿದೆ.
      ಪುಟ್ಟಸ್ವಾಮಿಯವರಿಗೆ ಅವರ ಐವತ್ತನೆ ವಯಸ್ಸಿಗೆ ಕುಲಕಸುಬಾದ ಶಿಲ್ಪದಲ್ಲಿ ಏನಾದರೂ ಸಾಧಿಸಬೇಕು ಎಂಬ ಹುಚ್ಚು ಛಲ ಮನಸ್ಸಿನಲ್ಲಿ ಹುಟ್ಟಿಕೊಂಡಿತು!  ಆಗ ಕೇಂದ್ರ ಸರ್ಕಾರದ ಕೆಲಸ, ಸುಲಭವಾಗಿ ಜೀವನ ಸಾಗಿಸುತ್ತಿದ್ದ ಕಾಲ. ಕೈತುಂಬಾ ಸಂಬಳ ಬರುವ ಕೆಲಸ ಬಿಡುವುದು ಹೇಗೆ ಎಂಬ ಚಿಂತೆಯೂ ಅವರನ್ನು ಕಾಡುತ್ತಿತ್ತು. ಅಗ ಅವರ ಇಬ್ಬರು ಹೆಣ್ಣು ಮಕ್ಕಳ ಮದುವೆಯೂ ಆಗಿರಲ್ಲಿಲ್ಲ. ಆದರೂ ದೃಢ ನಿರ್ಧಾರ ಮಾಡಿ ೨೦೦೨ ಎಪ್ರಿಲ್ ನಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಂಡೇ ಬಿಟ್ಟರು.
      ೨೦೦೨ ಅಕ್ಟೋಬರ್ ನಲ್ಲಿ ಗೋವಾದ ರಾಜ್ಯಪಾಲರಾದ ಶ್ರೀ ಕೇದಾರನಾಥ ಸಹಾನಿಯವರು ಪುಟ್ಟಸ್ವಾಮಿಯವರನ್ನು ರಾಜಭವನಕ್ಕೆ ಕರೆಸಿ ಅಡಿ ಎತ್ತರದ ಕಂಚಿನ ನಟರಾಜ ಆಗಬೇಕು ಅದು ಕೇವಲ ಮೂರುವರೆ ತಿಂಗಳಲ್ಲಿ ಆಗಬೇಕು ಎಂದಾಗ ಪುಟ್ಟಸ್ವಾಮಿಗೆ ದೊಡ್ಡ ಸವಾಲೇ ಎದುರು ನಿಂತಿತು. ಅವಕಾಶ ಬಿಟ್ಟರೆ ಸಿಗುವುದಿಲ್ಲ! ಆದರೆ ಮಾಡುವುದಕ್ಕೆ ಸಮಯ ಸಾಕಾಗುವುದಿಲ್ಲ, ಆದರೂ ಗಟ್ಟಿಮನಸ್ಸು ಮಾಡಿ ಕೆಲಸವನ್ನು ಹಿಡಿದುಕೊಂಡು. ಪುಟ್ಟಸ್ವಾಮಿ ಹಾಗು ಇವರ ತಮ್ಮಂದಿರಾದ ಅಶೋಕ ಹಾಗು ಸುರೇಶ ಸೇರಿಕೊಂಡು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದರು. ಈಗ ನಟರಾಜ ಗೋವಾದ ರಾಜಭವನದಲ್ಲಿ ರಾರಜಿಸುತ್ತಿದೆ. ನಟರಾಜನನ್ನು ನೋಡಿ ಡಾ. ಕರಣ್ ಸಿಂಗ್ ರಂಥವರು ಪ್ರಶಂಸೆ ಮಾಡಿದ್ದಾರೆ.
     ೨೦೦೪ ರಲ್ಲಿ ಪುಟ್ಟಸ್ವಾಮಿಯವರು ಗೋವಾದ ವೆರ್ಣಾ ಕೈಗಾರಿಕಾ ವಲಯದಲ್ಲಿ ಕೈಗಾರಿಕಾ ಸ್ಥಳವನ್ನು ತಗೆದು ಇವರ ಕನಸಿನ ಕೂಸಾಗಿದ್ದಶಿಲ್ಪಲೋಕ ವನ್ನು ಕಟ್ಟಿದರು. ಇವರು ಮೂಲತಃ ಆರ್ಕಿಯಾಲಜಿಸ್ಟ್ ಆದದ್ದರಿಂದ ಹಾಗು ಶಿಲ್ಪದ ಕುಟುಂಬದಿಂದ ಬಂದದ್ದರಿಂದ ಗೋವಾದಲ್ಲಿ ಶಿಲ್ಪವನ್ನು ಬೆಳೆಸಲು ಪೂರಕವಾಯಿತು. ಶಿಲ್ಪಲೋಕದ ಮೂಲ ಉದ್ದೇಶ, ಶಿಲ್ಪವನ್ನು ಸಂಶೋಧನೆಂii  ದೃಷ್ಟಿಕೋನದಲ್ಲಿ ಶಿಲ್ಪವನ್ನು ನಿರ್ಮಿಸುವುದು ಹಾಗು ತರಬೇತಿ ಕೊಡುವುದು. ಶಿಲ್ಪವನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ಶಿಲ್ಪ ಪರಂಪರೆಯನ್ನು ಬೆಳೆಸುವುದಾಗಿತ್ತು.
     ಭಿತ್ತಿಶಿಲ್ಪಗಳನ್ನು ಗೋವಾದಲ್ಲಿ ಪುಟ್ಟಸ್ವಾಮಿ ಗುಡಿಗಾರರು ಪ್ರಚಲಿತಗೊಳಿಸಿದರು. ಇವರ ಮೊದಲ ಭಿತ್ತಿ ಶಿಲ್ಪವನ್ನು ಪೋಂಡಾ ಹತ್ತಿರವಿರುವ ಧವಳಿಯಲ್ಲಿ ನಿರ್ಮಿಸಿದರು. ಇದರ ನಂತರ ಇವರು ಜಂಬಾವಳಿಯಲ್ಲಿ ದಶಾವತಾರವನ್ನು, ಜಯ-ವಿಜಯರು ಹಾಗು ಗಜಲಕ್ಷ್ಮೀ ಶಿಲ್ಪಗಳನ್ನು ಹಾಗು ಹೊಯ್ಸಳ ಶೈಲಿಯ ಬಾಗಿಲು ಚೌಕಟ್ಟನ್ನು ಅಳವಡಿಸಿ ಭಿತ್ತಿಶಿಲ್ಪವನ್ನು ನಿರ್ಮಿಸಿದ್ದಾರೆ. ಕೊನೆಯದಾಗಿ ಕಾಣಕೋಣದ ಮಲ್ಲಿಕಾರ್ಜುನ ದೇವಸ್ಥಾನ. ಇದು ಒಂದು ಶಿವಾಲಯ. ಇದರಲ್ಲಿ ಪುಟ್ಟಸ್ವಾಮಿಯವರಿಗೆ ಪ್ರತಿಭೆ ತೋರಿಸುವುದಕ್ಕೆ ಒಳ್ಳೆಯ ಅವಕಾಶ ಸಿಕ್ಕಿತು. ಬನವಾಸಿಯಲ್ಲಿರುವ ಆನೆಗಳ ಪ್ರತಿಕೃತಿಯನ್ನು ಇಲ್ಲಿಯೂ ಮಾಡಿದ್ದಾರೆ. ಇದಲ್ಲದೆ ಭಿತ್ತಿಶಿಲ್ಪದಲ್ಲಿ ಕಾಲಭೈರವ, ವೀರಭದ್ರ, ಹೋಯ್ಸಳ ಶೈಲಿಯ ಯುದ್ಧದ ಪ್ಯಾನಲ್ಲಗಳು, ಚಾಮರಧಾರಿಣಿ ಹಾಗು ಹೋಯ್ಸಳ ಬಾಗಿಲು, ಚೌಕಟ್ಟಿನ ಮೇಲೆ ನಟೇಶ ಇವೆಲ್ಲವನ್ನೂ ಭಿತ್ತಿಶಿಲ್ಪದಲ್ಲಿ ಕೆತ್ತಿದ್ದಾರೆ. ಮಲ್ಲಿಕಾರ್ಜುನ ದೇವಾಲಯದ ಕಲ್ಲಿನ ಪ್ರಧಾನ ಬಾಗಿಲಿನ ಹೊಯ್ಸಳ ಶೈಲಿಯ ಬಾಗಿಲು ಚೌಕಟ್ಟಿಗೆ ಶೈವ ದ್ವಾರಪಾಲಕರ ಶಿಲ್ಪವನ್ನು ಕೆತ್ತಿದ್ದಾರೆ. ದೇವಾಲಯಕ್ಕೆ ೭೮ ಮರದ ಶಿಲ್ಪಗಳನ್ನು ಪುಟ್ಟಸ್ವಾಮಿ ಗುಡಿಗಾರರ ಮಾರ್ಗದರ್ಶನದಲ್ಲಿ ಇವರ ತಮ್ಮ ಸುರೇಶ್ ಗುಡಿಗಾರ ನಿರ್ಮಿಸಿದ್ದಾರೆ.
ಕದಂಬ ಶಿಲ್ಪಶಿಬಿರ:
       ಕರ್ನಾಟಕ ಶಿಲ್ಪಕಲಾ ಅಕಾದಮಿ, ಹಾಗು ಗೋವಾ ಸರ್ಕಾರದ ಸಹಯೋಗದೊಂದಿಗೆ ಪುಟ್ಟಸ್ವಾಮಿ ಗುಡಿಗಾರರು ಅವರ ಶಿಲ್ಪಲೋಕದಲ್ಲಿ ೨೦೦೭ ನವೆಂಬರನಲ್ಲಿ ಕದಂಬರ ಶಿಲ್ಪಗಳ ಮೇಲೆ ಒಂದು ಶಿಬಿರವನ್ನು ಆಯೋಜಿಸಿದರು. ೧೫ ದಿನದ ಶಿಭಿರದಲ್ಲಿ ೧೪ ಶಿಲ್ಪಕಲಾವಿದರು ಭಾಗವಹಿಸಿ ೧೪ ಕದಂಬ ಕಾಲೀನ ಶಿಲ್ಪಗಳನ್ನು ಮಾಡಿದರು. ಶಿಲ್ಪಶಿಬಿರದ ಉದ್ಘಾಟನೆಯನ್ನು ಗೋವಾದ ಮಾಜಿ ಮುಖ್ಯಮಂತ್ರಿ ಶ್ರೀ ಪ್ರತಾಪ್ ಸಿಂಗ್ ರಾಣೆಯವರು ನಡೆಸಿಕೊಟ್ಟರು. ಶಿಬಿರದ ಮುಕ್ತಾಯ ಸಮಾರಂಭಕ್ಕೆ ಕೇಂದ್ರದ ಕಾನೂನು ಮಂತ್ರಿ ಶ್ರೀ ರಮಾಕಂತ ಖಲಪ್, ಹಾಗು ಗೋವಾ ವಿಶ್ವವಿದ್ಯಾಲಯದ ಕುಲಪತಿ ಡಾ. ದೇವಭಾಗಕರ್ ಆಗಮಿಸಿದ್ದರು. ಸಮಯದಲ್ಲಿ ಪುಟ್ಟಸ್ವಾಮಿ ಗುಡಿಗಾರರು ಬರೆದಕದಂಬ ಶಿಲ್ಪ ಎಂಬ ಕದಂಬ ಶಿಲ್ಪದ ಮೇಲಿನ ಒಂದು ಸಂಶೊಧನಾ ಪುಸ್ತಕವವನ್ನು ಪ್ರತಾಪ ಸಿಂಗ್ ರಾಣೆ  ಬಿಡುಗಡೆ ಮಾಡಿದರು. ಕಾರ್ಯಕ್ರಮವನ್ನು ಪಣಜಿಯ ಕಲಾ ಅಕಾದೆಮಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.  

ಪರಿಸರ ಮಾಲಿನ್ಯ ರಹಿತ ಮಣ್ಣಿನ ಗಣಪತಿ ಶಿಲ್ಪಶಿಬಿರ:
ಪುಟ್ಟಸ್ವಾಮಿ ಗುಡಿಗಾರರು ೨೦೦೯ ರಲ್ಲಿ ಗೋವಾ ಸರ್ಕಾಕರದ ನೆರವಿನಿಂದ ಪರಿಸರ ಮಾಲಿನ್ಯ ರಹಿತ ಮಣ್ಣಿನ ಗಣಪತಿ ಶಿಲ್ಪಶಿಬಿರದ ಕಾರ್ಯಕ್ರಮವನ್ನು ಶಿಲ್ಪಲೋಕದಲ್ಲಿ ಹಮ್ಮಿಕೊಂಡರು. ಇದರ ಉದ್ಘಾಟನೆಯನ್ನು ಆಗಿನ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ದಿಗಂಬರ ಕಾಮತ್ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ೨೫ ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಯಿತು. ಇದರ ಮುಕ್ತಾಯ ಸಮಾರಂಭವ ವನ್ನು ಸಾರಿಗೆ ಮಂತ್ರಿ ಶ್ರೀ ಸುದಿನ ಧವಳಿಕರ ರವರು ನೆರವೇರಿಸಿ ಅಭ್ಯರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಿದರು. 
    ಪುಟ್ಟಸ್ವಾಮಿಯವರು ಗೋವಾದಲ್ಲಿ ೧೦೦ಕ್ಕೂ ಹಚ್ಚು ದೇವಾಲಯಗಳಿಗೆ ಮೂರ್ತಿ ಶಿಲ್ಪಗಳನ್ನು ಮಾಡಿ ಕೊಟ್ಟಿದ್ದಾರೆ. ಗೋವ ಕನ್ನಡ ಸಮಾಜ ಇವರನ್ನು ೨೦೦೬ ರಲ್ಲಿ ಸನ್ಮಾನಿಸಿದೆ. ಗೋವಾದ ಅನೇಕ ಪತ್ರಿಕೆಗಳಲ್ಲಿ ಇವರ ಮೇಲೆ ಲೇಖನಗಳು ಪ್ರಕಟವಾಗಿದೆ.
ಕುಟುಂಬ:
   ಪುಟ್ಟಸ್ವಾಮಿ ಗುಡಿಗಾರರದ್ದು ಚಿಕ್ಕ ಸಂಸಾರ. ಪಣಜಿಯ ಪಕ್ಕದಲ್ಲಿ ಇರುವ ತಾಲೈಗಾಂ ನಲ್ಲಿ ಇವರ ಮನೆ ಇದೆ ೧೯೮೫ ರಲ್ಲಿ ಇವರು ಮನೆಯನ್ನು ಕೊಂಡು ಕೊಂಡರು ಇವರ ಹೆಂಡತಿ ಶೀಲ ಸಹಾ ಅಚ್ಚಿನಲ್ಲಿ ವಿಗ್ರಹಗಳನ್ನು ಮಾಡುವ ಚಿಕ್ಕ ಉದ್ಯಮೆ ಮಾಡಿಕೊಂಡು ಬಂದಿದ್ದಾರೆ. ದಂಪತಿಗಳಿಗೆ ಎರಡು ಹೆಣ್ಣುಮಕ್ಕಳು ಮೊದಲನೆಯವಳು ಶಿಲ್ಪನಾ. ಇವಳು ಬಿ.ಕಾಂ ವರೆಗೆ ಓದಿ ೨೦೦೨ ರಲ್ಲಿ ಇವಳ ವಿವಾಹ ಸಾಗರದ ವಿಜಯಾನಂದ ಗುಡಿಗಾರರ ಜೊತೆಯಲ್ಲಿ ಆಗಿ ಈಗ ಹೈದರಾಬಾದಿನಲ್ಲಿ ನೆಲೆಸಿದ್ದಾರೆ. ಇವಳಿಗೆ ವರ್ಷ್ ಎಂಬ ವರ್ಷದ ಮಗನಿದ್ದಾನೆ. ಎರಡನೆಯವಳು ಚಂದನ ಇವಳು ಗೋವಾದಲ್ಲಿ ಬಿ.ಎಫ಼್. ಮಾಡಿದ್ದಾಳೆ. ೨೦೧೦ ರಲ್ಲಿ ಇವಳ ಮದುವೆ ವಿಶಾಲ್ ವೀಣೆಕರ್ ಜೊತೆ ಆಗಿ ಇವಳು ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಇವಳು .ಎಸ್.ಪಿ.ಎನ್ ನಲ್ಲಿ ವೆಬ್ ಡಿಸೈನರ್ ಆಗಿ ಕೆಲಸ ಮಾಡುತಿದ್ದಾಳೆ.

1 comment:

  1. ಶ್ರೀ ಪುಟ್ಟಸ್ವಾಮಿ ಗುಡಿಗಾರರ ಪ್ರತಿಭೆ ಹಾಗು ಕಾರ್ಯಗಳ ಬಗೆಗೆ ಓದಿ ಅಭಿಮಾನವೆನಿಸಿತು. ಅವರು ನೂರ್ಕಾಲ ಬಾಳಿ ಹೆಚ್ಚಿನದನ್ನು ಸಾಧಿಸಲಿ ಎಂದು ಹಾರೈಸುತ್ತೇನೆ. ಅವರ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು.

    ReplyDelete