Saturday, January 16, 2010

ಗಡ್ಡ ಮೀಸೆ


ನಮಗೆಲ್ಲ ತಿಳಿದಿರುವಂತೆ ಗಡ್ಡ ಮೀಸೆಗಳು ಬೆಳೆಯುವದು ಗಂಡಸರಿಗೆ ಮಾತ್ರ.ಆದರೆ ಕ್ವಚಿತ್ತಾಗಿ ಸಣ್ಣ ಗಡ್ಡ ಮೀಸೆಗಳಿರುವ ಸ್ತ್ರೀಯರನ್ನು ನೋಡಬಹುದು. ಇದು ಬಹುಶಃ ಪ್ರಕ್ರತಿಯ ವೈಚಿತ್ರ್ಯವೆಂದು ತಿಳಿಯಬೇಕಾದೀತು. ಆದರೆ ವೈದ್ಯರು ಈ ಬಗ್ಗೆ ಬೇರೆಬೇರೆ ಕಾರಣಗಳನ್ನು ಕೊಡಬಹುದು. ಆದು ಏನೇ ಇದ್ದರೂ ಸಹ ಗಡ್ಡ ಮೀಸೆಗಳು ಕೇವಲ ಪುರುಷರ ಆಸ್ತಿ ಎಂಬುದು ನಿರ್ವಿವಾದ. ಸ್ತ್ರೀ ಸ್ವಾತಂತ್ರ್ಯ ಮತ್ತು ಸ್ತ್ರೀ ಸಶಸ್ತ್ರೀಕರಣದ ಈ ದಿನಗಳಲ್ಲಿ ಗಡ್ಡ ಮೀಸೆಗಳ ಮೇಲೆ ಮಾತ್ರ ಸ್ತ್ರೀಯರು ತಮಗೂ ಏನು ಕಡಿಮೆ ಇಲ್ಲವೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ.

ಈ ಬಹುಮೂಲ್ಯ ಆಸ್ತಿಯಾದ ಗಡ್ಡ ಮೀಸೆಗಳು ಪುರುಷರಿಗೆ ಅವರ ಪೌರುಷದ ಮೂಲ ಮತ್ತು ಮೆರೆಯುವ ಸಾಧನಗಳೂ ಆಗಿವೆ. ಭಾರಿ ಮೀಸೆ ಬೆಳೆಸಿ ಅದನ್ನು ಆಗಿಂದಾಗ ಕೈಯಾಡಿಸುತ್ತ ತಿರುಪುವವನು ತಾನು ಜಗತ್ತನ್ನೇ ಎದುರಿಸಬಲ್ಲೆನೆಂದುಕೊಳ್ಳುತ್ತಾನೆ. ಮೀಸೆಯಿಂದ ಭಾರದ ವಸ್ತುಗಳನ್ನು ಎಳೆದು ಎತ್ತಿ ಮಾಡುವವರೂ ಇರುತ್ತಾರೆ. ಮೀಸೆ ಮಣ್ಣಾಗುವದು, ಮೀಸೆ ಬೋಳಿಸುವದು ಮುಂತಾದ ಪದಪುಂಜಗಳು ಮೀಸೆ ಪುರುಷರಿಗೆ ಎಷ್ಟು ಮಹತ್ತ್ವದ್ದು ಎಂಬ ಸಂಗತಿಯನ್ನು ತೋರಿಸಿ ಕೊಡುತ್ತವೆ. ಮೀಸೆಯನ್ನು ಕತ್ತರಿಸಿ ತರತರದ ಆಕ್ರತಿಗಳನ್ನು ಮಾಡಿಕೊಳ್ಳುತ್ತಾರೆ. ಹಿಟ್ಲರನ ಮೂಗಿನ ಕೆಳಗಿನ ಪುಟ್ಟ ನೊಣ ಮೀಸೆ ಸಾಕಷ್ಟು ಪ್ರಚಾರದಲ್ಲಿದೆ. ಒಬ್ಬನು ತನ್ನ ಮೀಸೆಯ ಮೇಲೆ ಕೈ ಹಾಕಿದರೆ ವಿರೋಧಿಗಳು ಅದನ್ನು ಜಗಳಕ್ಕೆ ಆಹ್ವಾನವೆಂದು ತಿಳಿಯಬಹುದು. ಸೈನ್ಯದಲ್ಲಿಯ ಅಧಿಕಾರಿಗಳಿಗೂ ದೊಡ್ಡ ಮೀಸೆಗೂ ಪುರಾತನ ಕಾಲದಿಂದಲೂ ಅತಿಶಯ ಮೈತ್ರಿ ಇದೆ. ಮೀಸೆಯನ್ನು ಕತ್ತರಿಸದೆ ಹಾಗೆಯೇ ಬೆಳೆಯಲು ಬಿಡುವವರೂ ಇದ್ದಾರೆ. ಇಂಥ ಮೀಸೆಯು ಅವರ ಬಾಯಿಯಲ್ಲೂ ಪ್ರವೇಶಿಸುತ್ತದೆ. ಈ ಮೀಸೆಯ ಒಡೆಯನು ತಿಂದು ಕುಡಿದು ಮಾಡಿದ ಪದಾರ್ಥಗಳೆಲ್ಲವೂ ಮೀಸೆಗೂ ಸಹ ಸಿಗುತ್ತವೆ. ಇಂಥ ಮೀಸೆಯನ್ನು ಬೆಳೆಸಿದವರು ತಮ್ಮ ಮೀಸೆಯನ್ನೇ ಕಡಿಯುತ್ತಿರುತ್ತಾರೆ.

ಗಡ್ಡವು ಮೀಸೆಗಿಂತ ಸ್ವಲ್ಪ ಹೆಚ್ಚು ಗಂಭೀರ. ಗಡ್ಡ ಬೆಳೆಸಿದ ಮನುಷ್ಯನನ್ನು ಸಾರ್ವಜನಿಕರು ಬೇರೆ ಬೇರೆ ರೀತಿಯಲ್ಲಿ ಕಾಣುತ್ತಾರೆ. ಗಡ್ಡದ ಬೆಳೆಯನ್ನು ವಿವಿಧ ರೂಪಗಳಲ್ಲಿ ಬೆಳೆಸಿ ಕತ್ತರಸಿ ಇಟ್ಟುಕೊಳ್ಳುತ್ತಾರೆ.ಇದರ ಫ಼್ಯಾಶನ್ನು ಸಹ ಇತರ ಫ಼್ಯಾಶನ್ನುಗಳಂತೆ ಬದಲಾಗುತ್ತಿರುತ್ತದೆ.ಗದ್ದದ ತುದಿಯಲ್ಲಿ ಒಂದು ಸಣ್ಣ ಕೇಶಪುಂಜವನ್ನಿಟ್ಟು ಉಳಿದ ಭಾಗವನ್ನೆಲ್ಲ ತೆಗೆದರೆ ಅದು ಬುಲ್ಗಾನಿನ್ ಗಡ್ಡವೆನ್ನಿಸಿಕೊಳ್ಳುತ್ತದೆ. ಇನ್ನು ಕೆಲವರು ಕಿವಿಯಿಂದ ಬಾಯಿಯವರೆಗೂ ಎರಡೂ ಕಡೆ ಕಾಯ್ದಿರಿಸಿರುತ್ತಾರೆ.ಇತ್ತೇಚೆಗೆ ನಾಲ್ಕಾರು ದಿನಗಳ ಬೆಳವಣಿಗೆಯ ಕುರುಚಲ ಗಡ್ಡವು ಹೆಚ್ಚು ಜನಪ್ರಿಯವಾಗುವಂತಿದೆ. ಕ್ರಿಕೆಟಿಗ ಸಚಿನ ಟೆಂಡುಲ್ಕರನಿಂದ ಈ ಮಾದರಿಯು ಪುರಸ್ಕ್ರತವಾಗುತ್ತಿದೆ.ಅವನ ಅಭಿಮಾನಿಗಳು ಅವನಂತೆ ಆಟವು ಸಾಧ್ಯವಿಲ್ಲವಾದರೆ ಗಡ್ಡವನ್ನಾದರೂ ಬೆಳೆಸಿ ತ್ರ್ರ‍ಪ್ತಿಪಟ್ಟುಕೊಳ್ಳುತ್ತಾರೆ.ಸಂಪೂರ್ಣ ಗಡ್ಡವನ್ನು ಬೆಳೆಸುವ ಕ್ರಮ ಹೆಚ್ಚಾಗಿ ಹಿರಿಯ ನಾಗರಿಕರ ಹಕ್ಕು. ಸನ್ಯಾಸಿಗಳಿಗೂ,ಆಚಾರ್ಯರಿಗೂ, ಗುರುಗಳಿಗೂ ಇದೊಂದು ಗುರುತಿನ ಚಿನ್ಹೆ ಎನ್ನುವಷ್ಟು ಸಾಮಾನ್ಯ.ಸಿಖ್ಖರು ಮಾತ್ರ ಗಡ್ಡ ಮೀಸೆಗಳನ್ನು ತೆಗೆಯುವಂತಿಲ್ಲ. ಮುಲ್ಲಾ, ಮೌಲ್ವಿಗಳಿಗೆ ಅದು ಅವರ ಧಾರ್ಮಿಕ ಸಂಕೇತ ಎನ್ನುವಷ್ಟು ಸಾಮಾನ್ಯ.ಉದ್ದವಾದ ಹೊಟ್ಟೆಯವರೆಗೂ ಬೆಳೆದ ಬಿಳಿಯ ಗಡ್ಡದ ಶೋಭೆಯೇ ಬೇರೆ.

ಗಡ್ಡ ಬೆಳೆಸುವದು ಅತಿ ಸುಲಭ.ಅದಕ್ಕೆ ದುಡ್ಡೂ ಬೇಡ, ಧೂಪವೂ ಬೇಡ. ತನ್ನಷ್ಟಕ್ಕೆ ತಾನೇ ಬೆಳೆಯುತ್ತಿರುತ್ತದೆ.ಆದರೆ ಅದನ್ನು ವ್ಯವಸ್ಥಿತ ರೀತಿಯಿಂದ ನೋಡಿಕೊಳ್ಳದಿದ್ದರೆ ತೊಂದರೆಗಳು ತಪ್ಪಿದ್ದಲ್ಲ. ಗಡ್ಡವನ್ನು ಪ್ರತಿದಿನ ಚೆನ್ನಾಗಿ ಶಾಂಪೂ ಹಚ್ಚಿ ತೊಳೆಯಬೇಕು.ಆ ಮೇಲೆ ಅದನ್ನು ಒಣಗಿಸಬೇಕು. ನಂತರ ಬಾಚಿ ಇಟ್ಟುಕೊಳ್ಳಬೇಕು.ಇದನ್ನೆಲ್ಲ ಮಾಡದಿದ್ದರೆ ಗಂಟು ಗಂಟಾಗಬಹುದು.ಹೇನು,ಕೂರೆ, ಉಣುಗುಗಳೂ ಆಗಬಹುದು. ಗಡ್ಡ ಮೀಸೆಗಳನ್ನು ಪೂರ್ಣವಾಗಿ ಬೆಳೆಸಿದವರು ತಮ್ಮ ಸಂಪತ್ತಿಗೆ ಅದೇ ಸ್ನಾನ ಮಾಡಿಸಿದಾಗ ಸಣ್ಣ ಮಕ್ಕಳು ಅವರನ್ನು ನೋಡಿ ಕಿರುಚಿಕೊಳ್ಳದಿದ್ದರೇ ಆಶ್ಚರ್ಯ. ಅದೇನೇ ಇದ್ದರೂ ಸೊಂಪಾಗಿ ಬೆಳೆದ ಉದ್ದವಾದ ಬಿಳಿಯ ಗಡ್ಡದ ಮೇಲೆ ಕೈ ಆಡಿಸುವಾಗ ಆಗುವ ಹಿತವಾದ ಅನುಭವ ಬಹುಶ: ಗಡ್ಡವನ್ನು ಕಾಪಾಡುವ ಎಲ್ಲ ತೊಂದರೆಗಳನ್ನೂ ಮರೆಯುವಂತೆ ಮಾಡುತ್ತಿರಬಹುದು. ವಿವಿಧ ರೂಪಗಳಲ್ಲಿ ಗಡ್ಡವನ್ನು ಬೆಳೆಸಿದರೆ,ಆಗಲೂ ಅದರ ಯೋಗಕ್ಷೇಮ ನೋಡಿಕೊಳ್ಳಲೇ ಬೇಕು.ಬಾಚುವದು, ಕಟ್ಟುವದು, ಅಲ್ಲದೆ ಪ್ರತಿ ವಾರಕ್ಕೋ,ಹದಿನೈದು ದಿವಸಕ್ಕೋ ಕೇಶ ಸಂಪತ್ತನ್ನು ಸರಿಯಾಗಿ ಕತ್ತರಿಸಬೇಕು.ಇದಲ್ಲದೆ, ತೊಳೆಯುವದು ವಗೈರೆ ಮಾಡಲೇಬೇಕು.

ಒಬ್ಬನ ಮುಖದ ಮತ್ತು ತಲೆಯ ಎಲ್ಲ ಕೂದಲುಗಳೂ ಹಣ್ಣಾಗಿದ್ದವು. ಕಿವಿ ಮುಚ್ಚುವಂತೆ ರುಮಾಲವನ್ನು ಸುತ್ತುತ್ತಿದ್ದ. ಗಡ್ಡ ಮೀಸೆಗಳಿಗೆ ಮಾತ್ರ ಕಪ್ಪು ಬಣ್ಣ ಹಚ್ಚುತ್ತಿದ್ದ. ಒಮ್ಮೆ ಒಂದು ಸಾರ್ವಜನಿಕ ಸ್ಥಳದಲ್ಲಿ ಹೇಗೋ ಅವನ ರುಮಾಲ ಬಿಚ್ಚಿ ಹೋಯಿತು. ಆಗ ತಲೆಯ ಬಿಳಿ ಕೂದಲುಗಳನ್ನು ನೋಡಿದವನೊಬ್ಬ ಕೇಳಿದ. ಏನ್ರೀ ನಿಮ್ಮ ತಲೆಯ ಕೂದಲು ಮಾತ್ರ ಬೆಳ್ಳಗಾಗಿದೆ ? ತಟ್ಟನೆ ಉತ್ತರ ಬಂದಿತು,ತಲೆಯ ಕೂದಲಿಗೆ ೧೫- ೧೬ ವರ್ಷ ವಯಸ್ಸು ಹೆಚ್ಚಿಗೆ ಆಗಿದೆಯಲ್ಲ ಅದಕ್ಕೇ. ಮೂರು ದಿನಗಳ ಗಡ್ಡವಿದ್ದರೆ ಆಲಸಿ ಎನ್ನುತ್ತಾರೆ, ಮೂರು ತಿಂಗಳ ಗಡ್ಡವಿದ್ದರೆ ಹುಚ್ಚನೆನ್ನುತ್ತಾರೆ, ನೀವು ಮೂರು ವರ್ಷ ಗಡ್ಡ ಬೆಳೆಸಿದರೆ ಗುರು ಎಂದು ಜನರು ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ.

ರಾಮಚಂದ್ರ ದೇವ
ಮೀರಾಮಾರ್ ಪಣಜಿ

No comments:

Post a Comment