Saturday, January 16, 2010

ಜೀವನದ ಸಾರ

ಗುರುಹಿರಿಯರಿಗೆ ಎಂದಿಗೂ ಇದಿರಾಡಬೇಡ
ತಾಯಿ ತಂದೆಯರ ಸೇವೆ ನೀ ಮರೆಯಬೇಡ
ಆಸ್ತಿಗಾಗಿ ಸೋದರರೊಡನೆ ನೀ ಕಾದಬೇಡ
ಸತಿಸುತರ ಹೊಣೆ ಪರರಿಗೆ ಕೊಡಬೇಡ

ಮನೆಗೆ ಬಂದ ಅತಿಥಿಗಳ ನೀ ಬೈಯಬೇಡ
ಕೆಳಗೆ ಬಿದ್ದವರ ಕಂಡು ಎಂದೂ ನಗಬೇಡ
ದುರ್ಜನರ ಜೊತೆ ನೀನೆಂದೂ ಕೂಡಬೇಡ
ಸಜ್ಜನರ ಸಂಗವನು ನೀನೆಂದೂ ಬಿಡಬೇಡ

ಮರೆಯದಿರು ಎಂದೂ ಉಪಕಾರ ಮಾಡಿದವರನ್ನು
ಎಂದೆಂದೂ ಮಾಡದಿರು ನೀನ್ಯಾರಿಗೂ ಅಪಕಾರವನ್ನು
ಮಾಡಬೇಡ ಪರರ ಅಂಗನೆಯ ಸಹವಾಸವನ್ನು
ಕರುಬಬೇಡ ಕಂಡು ಇನ್ನೊಬ್ಬರ ಸಂಪತ್ತನ್ನು

ಮಾಡದಿರು ಚುಕ್ಕಾಣಿ ಇಲ್ಲದ ಹಡಗಿನ ಪಯಣವನ್ನು
ನಡೆಸದಿರು ಗುರಿಯಿಲ್ಲದ ನೀರಸ ಜೀವನವನ್ನು
ಫಲದಲ್ಲಿ ನಮಗಿಲ್ಲ ಅಧಿಕಾರ, ಮಾಡಬೇಕು ಕರ್ಮವನ್ನು
ಮಾಡಿಕೊಳ್ಳಬೇಕು ಆತ್ಮೋದ್ಧಾರ ಅರಿತು ಈ ಸತ್ಯವನ್ನು

ಜೀವನದಲಿ ನಾನು ನನ್ನದೆಂಬುವದೆಲ್ಲ ಅಹಂಕಾರ
ನಾನೇ ಎಲ್ಲಗಿಂತ ಮಿಗಿಲು ಎಂಬುದು ದುರಹಂಕಾರ
ದೂಷಿಸಿ ಮಾಡದಿರು ನೀನೆಂದೂ ಯಾರ ತಿರಸ್ಕಾರ
ಅರಿತುಕೊ ನಾವೆಲ್ಲ ಆ ದೇವನ ದೊಡ್ಡ ಅವಿಷ್ಕಾರ

ತಿಳಿದುಕೊ, ಎರಡು ದಿನಗಳ ಸಂತೆ ಈ ನಮ್ಮ ಸಂಸಾರ
ಬಿಟ್ಟುಬಿಡು ಹುಸಿಯ ಜಂಬ ತೊರೆದು ಮಮಕಾರ
ಅರಿತು ಆತ್ಮವನು ಮಾಡಿಕೊ ದೇವರ ಸಾಕ್ಷಾತ್ಕಾರ
ಮರೆಯುದಿರು ಮನುಜ, ಇದುವೆ ಜೀವನದ ಸಾರ


ಸಪ್ಟೆಂಬರ್ ೧೪, ೨೦೦೯ ನಾ ಹರಿಶ್ಚಂದ್ರ

No comments:

Post a Comment