Saturday, January 16, 2010

ನಿಮಗೆಷ್ಟು ಗೊತ್ತು? ಕಸದ ಕಿಮ್ಮತ್ತು!

ನಿಮಗೆಷ್ಟು ಗೊತ್ತು? ಕಸದ ಕಿಮ್ಮತ್ತು!
ಲೇಖನ: ಅಂಕ್ನಳ್ಳಿ ಜಯರಾಂ
========================================================================
ಇತ್ತೀಚೆಗೆ ನಗರಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿದೆ. ಈ ಭೀಕರ ಸಮಸ್ಯೆ ನಿವಾರಣೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ನಿತ್ಯ ಉತ್ಪತ್ತಿಯಾಗುವ ಮನೆಯ ಸುತ್ತಲಿನ ಕಸ-ಕೊಳೆಗಳನ್ನು ಅಕ್ಕ-ಪಕ್ಕದವರ ಆಸ್ತಿ ಇಲ್ಲವೆ ಸಾರ್ವಜನಿಕ ಸ್ಥಳಗಳಲ್ಲಿ ಚೆಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣರಾಗುವ ಬದಲು ಕಸದಿಂದ ರಸಭರಿತ ಗೊಬ್ಬರ ತಯಾರಿಸಿ ಹಸಿರು ಅರಳಿಸಬಹುದು. ಈ ನಿಟ್ಟಿನಲ್ಲಿ ಪ್ರಯತ್ನಿಸಿ ಯಶಸ್ಸು ಸಾಧಿಸಿದವರ ಯಶೋಗಾಥೆ ಇಲ್ಲಿದೆ.
=========================================================================
ಕೇವಲ ಮೂರು ಮಂದಿ ಇರುವ ಮನೆಯಲ್ಲಿ ದೊರೆಯುವ ಎಲ್ಲ ಗೃಹ ತ್ಯಾಜ್ಯವೂ ಗೊಬ್ಬರವಾಗಿ ಪರಿವರ್ತನೆಯಾಗುತ್ತಿದೆ. ಇದರಿಂದ ಕೈತೋಟವೂ ಸೊಂಪಾಗಿ ಬೆಳೆದು ಪರಿಸರ ನಿರ್ಮಲವಾಗಿದೆ. ಅಷ್ಟೆ ಅಲ್ಲ, ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗುತ್ತಿರುವುದರಿಂದ ವಾಸನೆಯಿಲ್ಲ. ಹಾಗಾಗಿ ಇಲಿ ಕಾಟವೂ ಇಲ್ಲ. ಸೆಗಣಿ ಗೊಬ್ಬರ ಮತ್ತು ಜೈವಿಕ ದ್ರಾವಣ(ಎಫ಼ೆಕ್ಟೀವ್ ಮೈಕ್ರೊ ಆರ್ಗ್ಯಾನಿಸಮ್-ಇ.ಎಮ್)ವನ್ನು ಆಗಾಗ್ಗೆ ಖರೀದಿಸುವುದು ಬಿಟ್ಟರೆ ಬೇರೆ ಖರ್ಚಿಲ್ಲ ಎನ್ನುತ್ತಾರೆ, ಮಾಪುಸ ಸಮೀಪದ ಮೊಯಿರಾ ಗ್ರಾಮದ ಫೆಲಿಕ್ಸ್ ಡಿ.ಕುನ್ಹಾ. ಹತ್ತು ವರ್ಷಗಳ ಹಿಂದೆ ‘ಗೋವಾ ಪೌಂಡೇಷನ್’ ಸಹಕಾರದಿಂದ ನಾಲ್ಕು ಸಾವಿರ ವೆಚ್ಚದಲ್ಲಿ ನಿರ್ಮಿಸಿಕೊಂಡಿರುವ ಎರೆ ಘಟಕದಿಂದ ಇಷ್ಟೆಲ್ಲ ಅನುಕೂಲವಾಗಿದೆ. ಈ ಊರಲ್ಲಿ ಮೊಟ್ಟಮೊದಲು ಎರೆ ಘಟಕ ಸ್ಥಾಪಿಸಿದ ಹೆಗ್ಗಳಿಕೆಯೂ ಇವರದು!

ಈ ಕುನ್ಹಾ ಮನೆಯಿಂದ ಕಿಲೋ ಮೀಟರ್ ಅಂತರದಲ್ಲಿರುವ ನಿವೃತ್ತ ಶಿಕ್ಷಕಿ ಮಾರಿಯಾ ಕೊಹಿಲೋ ನಾಲ್ಕು ನಾಯಿ ಹಾಗೂ ಎರಡು ಬೆಕ್ಕುಗಳ ಒಡತಿ. ಈಕೆ ತನ್ನ ಮನೆಯ ಒದ್ದೆ ಕಸವನ್ನು ಎರೆ ಘಟಕಕ್ಕೆ ಮೂಲವಸ್ತುವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಮೋಯಿರಾ ಸೇತುವೆಯ ಬಳಿ ಚೆಲ್ಲಪಿಲ್ಲಿಯಾಗಿ ಬೀಳುವ ಕಸವನ್ನೂ ವಾರಕ್ಕೊಮ್ಮೆ ಒಟ್ಟುಗೂಡಿಸಿ ತಂದು ಸಸ್ಯ ರಸಪಾಕ (ಗೊಬ್ಬರ) ತಯಾರಿಸುವ ಇವರ ಜಾಣ್ಮೆಯನ್ನೆಲ್ಲರೂ ಮೆಚ್ಚಲೇಬೇಕು.

ಹಾಗೆಯೇ ಗ್ರಾಮದ ಜನರೊಡನೆ ಸ್ನೇಹದಿಂದ ವರ್ತಿಸಿ, ಅವರ ಮನಗೆದ್ದು ಕಸವನ್ನು ರಸವಾಗಿಸಲು ಪ್ರೇರೇಪಿಸುತ್ತಿರುವವರು ಅಸಗಾಂವ್ ನ ಜಾಯ್ಸಿ ಬ್ರಗಾಂಜ಼ಾ. ಇವರು ತಮ್ಮ ತೋಟದ ಗೇರು ಮರಗಳು ಮತ್ತು ಅಲಂಕಾರಿಕ ಸಸ್ಯಗಳಿಗೆ ಪೋಷಕಾಂಶಗಳನ್ನು ಮನೆಯಲ್ಲಿರುವ ಮೂರು ತೊಟ್ಟಿಯ ಎರೆ ಘಟಕ ಒದಗಿಸುತ್ತಿದೆ ಎಂದು ಸಂತಸಪಡುತ್ತಾರೆ. ಎಪ್ಪತ್ತೊಂಬತ್ತರ ಹರೆಯದ ಇವರು ಎರೆ ಘಟಕ ನಿರ್ವಹಣೆಯಲ್ಲಿ ಇಪ್ಪತ್ತೊಂಬತ್ತರ ಉತ್ಸಾಹ ತೋರುತ್ತಾರೆ.

ಮೋಹನ್ ತೆಂಡುಲ್ಕರ್ ಓರ್ವ ತೋಟಗಾರಿಕೆ ತಜ್ಞ. ಮೋಲ್ಕಾರ್ನೆಮ್ ನ ಇವರು ತಮ್ಮ ತೋಟದ ತೆಂಗು, ಕಂಗು, ಬಾಳೆ, ಗೋಡಂಬಿ ಗಿಡಗಳಿಗೆ ಸಾವಯವ ಗೊಬ್ಬರವನ್ನಷ್ಟೇ ಉಣಿಸುತ್ತಾರಂತೆ. ಎರೆಗೊಬ್ಬರ ತಯಾರಿಕೆಯಲ್ಲಿ ಬಹಳ ನಿಪುಣರಾಗಿರುವ ಇವರು ೨೭ ಚದರ ಮೀಟರ್ ವಿಸ್ತೀರ್ಣದ ಎರೆ ಘಟಕ ಹೊಂದಿದ್ದು ಪ್ರತಿ ವರ್ಷ ೨೦ ಟನ್ ಗಿಂತಲೂ ಹೆಚ್ಚು ಗೊಬ್ಬರ ತಯಾರಿಸುತ್ತಿರುವುದಾಗಿ ತಿಳಿಸುತ್ತಾರೆ.

ಆರಂಭದಲ್ಲಿ ಹಲವು ತೊಡಕುಗಳನ್ನು ಎದುರಿಸಿದ ತೆಂಡುಲ್ಕರ್ ಇಂದು ಒಬ್ಬ ಸಮರ್ಥ ರೈತ ತರಬೇತುದಾರರಾಗಿದ್ದಾರೆ. ಅಷ್ಟೆ ಅಲ್ಲ, ವಿವಿಧ ಘಟಕಗಳಿಗೆ ಎರೆ ಹುಳುಗಳನ್ನೂ ಪೂರೈಸುತ್ತಿದ್ದಾರೆ. ಮನೆಯ ಸುತ್ತಲಿನ ಕಸ ವಿಲೇವಾರಿಗೆ ಸುಲಭ ವಿಧಾನ ‘ಎರೆಘಟಕ’ ಎಂದು ಬಲವಾಗಿ ನಂಬಿರುವ ಇವರು ‘ಸಾಧಾರಣ ಗೊಬ್ಬರಕ್ಕಿಂತಲೂ ತೀವ್ರವಾಗಿ ಎರೆಗೊಬ್ಬರ ತಯಾರಾಗುತ್ತದೆ. ಜೊತೆಗೆ ಮಾರುಕಟ್ಟೆ ಬೇಡಿಕೆಯೂ ಚೆನ್ನಾಗಿದ್ದು ಕಿಲೋ ಒಂದಕ್ಕೆ ೨೦ ರೂ. ನಂತೆ ಮಾರಾಟವಾಗುತ್ತಿದೆ. ಇದನ್ನು ನಾವೇಕೆ ಅನುಸರಿಸಬಾರದು?’ ಎನ್ನುವ ಪ್ರಶ್ನೆಯನ್ನೂ ನಮ್ಮೆದುರಿಗಿಡುತ್ತಾರೆ.

ಇರಲಿ ಮನೆಗೊಂದು ಎರೆಘಟಕ: ‘ನಾವು ಕಸ ಕೊಳೆಗಳನ್ನು ಅಕ್ಕ-ಪಕ್ಕದವರ ಆಸ್ತಿಗೆ ಚೆಲ್ಲುವ ಬದಲು ಅದರಿಂದ ಸತ್ವಭರಿತ ಗೊಬ್ಬರ ತಯಾರಿಸಿ ಬಳಸಬಹುದು’ ಎಂಬುದನ್ನು ಮಾಡಿ ತೋರಿದವರು ಅಂಬೋಲಿಯ ಪಶುವೈದ್ಯ ಡಾ.ಮಹೇಂದ್ರ ಬಾಲೆ. ಇವರ ಪ್ರೇರಣೆಯಿಂದ ನೆರೆಹೊರೆಯಲ್ಲಿ ಏಳು ಎರೆಗುಂಡಿಗಳು ತಲೆ ಎತ್ತಿವೆ. ಜೊತೆಗೆ ‘ಕ್ಯೂಪೆಮ್’ ನ ಶಾಲೆಯಲ್ಲಿ ಮಕ್ಕಳು ಮಾಡಿ ಕಲಿಯಲು ಮುಂದಾಗಿದ್ದಾರೆ.

‘ಎರೆಘಟಕ ನಿರ್ಮಿಸಲು ಸ್ಥಳವಿರಲಿಲ್ಲ. ಹಾಗಾಗಿ ಸೆಪ್ಟಿಕ್ ಟ್ಯಾಂಕ್ ಮೇಲ್ಭಾಗದಲ್ಲೇ ಎರೆ ಘಟಕ ನಿರ್ಮಿಸಿದೆ. ಇದರಿಂದ ನನಗೆ ಯಾವುದೇ ತೊಂದರೆಯಾಗಿಲ್ಲ’ ಎನ್ನುವ ಬಾಲೆ ಎರೆ ಘಟಕವನ್ನು ಮನೆ ಮಂದಿಯೇ ನಿರ್ವಹಿಸುತ್ತಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವರು ಗೋವಾದ ಪ್ರತಿ ಮನೆಯಲ್ಲೂ ಇಂಥದ್ದೊಂದು ಎರೆ ಘಟಕ ಇರಬೇಕೆಂದು ಪ್ರತಿಪಾದಿಸುತ್ತಾರೆ.

ನಿಜ, ನಮ್ಮ ಸುತ್ತ-ಮುತ್ತ ನಾವೇ ತಿಪ್ಪೆ ಗುಂಡಿ ಸೃಷ್ಟಿಸಿಕೊಂಡು, ವಿಲೇವಾರಿಗೆ ಮಾತ್ರ ನಗರ ಪಾಲಿಕೆಯನ್ನು ದೂಷಿಸುವ ಬದಲು ಹಿತ್ತಲಲ್ಲೊಂದು ಎರೆ ಘಟಕ ನಿರ್ಮಿಸಿ ಕಸದಿಂದ ರಸಭರಿತ ಗೊಬ್ಬರ ತಯಾರಿಸಿ ಹಸಿರು ಅರಳಿಸಬಾರದೇಕೆ?! ಇತ್ತೀಚೆಗೆ ಫ್ಲಾಟ್‍ಗಳಲ್ಲಿ ಕಾಂಪೋಸ್ಟ್ ತಯಾರಿಸಲು ಕಂಬಗಳು ಬಂದಿವೆ. ಕಸ ವಿಲೇವಾರಿಗೆ ಹೇಳಿ ಮಾಡಿಸಿದಂತಿವೆ.
=========================================================================
ಬಾಕ್ಸ್ ಐಟಂ
ಅದ್ಭುತ ಕಸ
~~~~~~~~~
* ಕೃಷಿ, ಗೃಹ ತ್ಯಾಜ್ಯವನ್ನು ಎರೆಹುಳು ಬಳಸಿ ಸಮೃದ್ಧ ಗೊಬ್ಬರ ತಯಾರಿಸುವ ವಿಧಾನವೇ ಎರೆ ಘಟಕ.

* ಎರೆ ಗೊಬ್ಬರ ಸಂಪೂರ್ಣ ಸಾವಯವ, ಪರಿಸರ ಸ್ನೇಹಿ ಗೊಬ್ಬರ. ಇದು ತೇವಾಂಶ ಹಿಡಿದಿಟ್ಟು ಮಣ್ಣನ್ನು ಮೃದುಗೊಳಿಸಿ ಸೂಕ್ಷ್ಮ ಪೋಷಕಾಂಶಗಳನ್ನು ಬೆಳೆಗಳಿಗೆ ನೀಡುತ್ತದೆ.

* ಎರೆ ಘಟಕ(ಗುಂಡಿ)ಕ್ಕೆ ಸೂರ್ಯನ ಬೆಳಕು ನೇರವಾಗಿ ಬೀಳದಂತೆ ಸುಮಾರು ಎಂಟು ಅಡಿ ಎತ್ತರದ ಚಪ್ಪರ ನಿರ್ಮಿಸಿ ಗಾಳಿ ಬೆಳಕು ದೊರೆಯುವಂತೆ ಮಾಡಲು ಸುತ್ತಲೂ ತೆರೆದಿರಬೇಕು.

* ಸಾಮಾನ್ಯವಾಗಿ ೧೨/೧೨ ಅಡಿ ಸುತ್ತಳತೆಯ ಜಾಗದಲ್ಲಿ ೧೦/೦೩ ಅಡಿಯ ಮೂರು ಬೆಡ್ ತಯಾರಿಸಿಕೊಂಡರೆ ಸುಮಾರು ಹತ್ತು ಕ್ವಿಂಟಾಲ್ ತ್ಯಾಜ್ಯವನ್ನು ಗೊಬ್ಬರ ತಯಾರಿಕೆಗೆ ಬಳಸಬಹುದಾಗಿದೆ.

* ಬೆಡ್ ತಳಭಾಗದಲ್ಲಿ ಸ್ವಲ್ಪ ಮರಳನ್ನು ಹರಡಿ ಅದರ ಮೇಲೆ ತ್ಯಾಜ್ಯದ ಹಾಸಿಗೆ ನಿರ್ಮಿಸಿ ೪-೬ ಇಂಚಿನ ತ್ಯಾಜ್ಯದ ಪದರ, ನಂತರ ೧ ಇಂಚಿನ ಸೆಗಣಿ ಗೊಬ್ಬರ-ಹೀಗೆ ಪದರಗಳನ್ನು ನಿರ್ಮಿಸಿ ನೀರಿನಿಂದ ನೆನೆಸಬೇಕು. ಮೇಲ್ಭಾಗದಲ್ಲಿ ತ್ಯಾಜ್ಯದ ಪ್ರಮಾಣಕ್ಕನುಗುಣವಾಗಿ (ಕಿಲೋ ತ್ಯಾಜ್ಯಕ್ಕೆ ೧ರಂತೆ) ಎರೆಹುಳು ಬಿಟ್ಟು ಅದರ ಮೇಲೆ ಗೋಣಿ ಚೀಲವನ್ನು ಮುಚ್ಚಬೇಕು. ಪಕ್ಷಿ ಮತ್ತು ಕೀಟಗಳಿಂದ ಎರೆಹುಳು ರಕ್ಷಿಸಲು ಹಾಗೂ ತೇವಾಂಶ ಕಾಪಾಡಲು ಇದು ಅಗತ್ಯ. ಪ್ರತಿ ದಿನ ಇದರ ಮೇಲೆ ತೇವಾಂಶಕ್ಕೆ ಅಗತ್ಯವಿರುವಷ್ಟು ನೀರನ್ನು ತಪ್ಪದೆ ಹನಿಸಬೇಕು. ಜೊತೆಗೆ
ಹದಿನೈದು ದಿನಕ್ಕೊಮ್ಮೆ ತಳಭಾಗದ ಹಾಸಿಗೆಗೆ ತೊಂದರೆಯಾಗದಂತೆ ತ್ಯಾಜ್ಯವನ್ನು ಮೇಲಿನಿಂದ ಕೆಳಕ್ಕೆ ತಿರುಗಿಸುತ್ತಿರಬೇಕು. ಈ ರ‍ೀತಿ ಮಾಡುವುದರಿಂದ ಎರಡರಿಂದ ಎರಡೂವರೆ ತಿಂಗಳಲ್ಲಿ ಗೊಬ್ಬರ ಸಿದ್ಧವಾಗುತ್ತದೆ.

* ಎರೆಹುಳು ವೃದ್ಧಿ: ಸಮ ಪ್ರಮಾಣದ ಸೆಗಣಿ ಗೊಬ್ಬರ ಮತ್ತು ತ್ಯಾಜ್ಯ ಮಿಶ್ರಣಕ್ಕೆ ಪ್ರತಿ ೫ ಕಿಲೋ ಗೆ ೫೦ ರಂತೆ ಎರೆಹುಳು ಸೇರಿಸಿ ನೆರಳಿನಲ್ಲಿಟ್ಟು ಆಗಾಗ್ಗೆ ನೀರನ್ನು ಹನಿಸಿ ತೇವಾಂಶ ಕಾಪಾಡುತ್ತಿದ್ದರೆ ಎರಡು ತಿಂಗಳಲ್ಲಿ ಒಂದಕ್ಕೆ ಮುನ್ನೂರರಷ್ಟು ಹುಳು ತಯಾರಾಗುತ್ತವೆ. ಆನಂತರ ಇವನ್ನು ಗೊಬ್ಬರ ತಯಾರಿಕೆಗೆ ಬಳಸಬಹುದು.

* ಎರೆಹುಳುಗಳನ್ನು ಇರುವೆ, ಇಲಿ ಹಾಗೂ ಪಕ್ಷಿಗಳಿಂದ ರಕ್ಷಿಸುವುದು ತುಂಬಾ ಮುಖ್ಯ.
=========================================================================
ಅಂಕ್ನಳ್ಳಿ ಜಯರಾಂ
ಗೋವಾ ವಿಜ್ಞಾನ ಕೇಂದ್ರ
ಮರೀನ್ ಹೈವೇ, ಮೀರಾಮಾರ್,
ಪಣಜಿ, ಗೋವಾ-೪೦೩೦೦೧
ಮೊ.ನಂ.೦೯೪೨೦೬೮೫೪೯೫

No comments:

Post a Comment